ಆರೆಸ್ಸೆಸ್ ಮತ್ತು ಸ್ವವಿಮರ್ಶೆ

ದೇಶದ ಜನ ಇತರ ಪಕ್ಷಗಳು ಎಸಗುತ್ತ ಬಂದ ಪ್ರಮಾದಗಳನ್ನು ನೋಡಿ, ಬೇಸತ್ತು, ಆರೆಸ್ಸೆಸ್ಭಾಜಪದ ತಪ್ಪುಗಳ ಕುರಿತು ಉಪೇಕ್ಷೆ ತಾಳಿದ್ದರೆ ಅಚ್ಚರಿಯಿಲ್ಲ. ಕೆಲವು ವಿಷಯಗಳಲ್ಲಾದರೂ ಭಾಜಪ ಜನರಲ್ಲಿ ವಿಶ್ವಾಸ ಮೂಡಿಸಿದ್ದು ನಿಜ. ಆದ್ದರಿಂದ ಆತ್ಮಾವಲೋಕನದ ತುರ್ತು ಅವಶ್ಯಕತೆ ಇರುವುದು ಆರೆಸ್ಸೆಸ್ಭಾಜಪದ ವಿರೋಧಿಗಳಿಗೆ!

-ವೆಂಕಟೇಶ ಮಾಚಕನೂರ

ಆರೆಸ್ಸೆಸ್ ಕುರಿತು ದಿಟ್ಟ ಲೇಖನಗಳನ್ನು ಪ್ರಕಟಿಸುವ ಸಾಹಸಕ್ಕೆ ಕೈಹಾಕಿ ಸಮಾಜಮುಖಿ ಸ್ತುತ್ಯ ಕಾರ್ಯವನ್ನೇ ಮಾಡಿದೆ. ಈ ಕುರಿತು ಚರ್ಚೆಗೆ ವಿದ್ವತ್ಪೂರ್ಣ ಲೇಖನಗಳೂ ಬಂದದ್ದು, ಆ ಲೇಖನಗಳನ್ನು ಆಧರಿಸಿ ತನ್ನ ತಪ್ಪುತಡೆ, ಓರೆಕೋರೆಗಳನ್ನು ತಿದ್ದಿಕೊಳ್ಳುವುದು, ಸ್ವವಿಮರ್ಶೆ ಮಾಡಿಕೊಳ್ಳುವುದು ಬಿಡುವುದು ಸಂಘಕ್ಕೆ ಬಿಟ್ಟ ವಿಚಾರ.

ತಿದ್ದಿಕೊಳ್ಳದಿದ್ದರೆ ಅಥವಾ ಅದು ಒಂದು ದೃಢ ಉದಾತ್ತ ಸಿದ್ಧಾಂತವನ್ನು ಅನುಸರಿಸದೇ, ಅಧಿಕಾರ ಲಾಲಸೆಯಿಂದ ಈಗ ಮಾಡುತ್ತಿರುವಂತೆ ಭಾಜಪ ಮೂಲಕ ಎಲ್ಲ ಅನೈತಿಕ ಮಾರ್ಗಗಳನ್ನು ಅನುಸರಿಸಿ ಅಧಿಕಾರ ಹಿಡಿಯಲು ಹವಣಿಸುತ್ತ ಹೋದದ್ದೇ ಆದರೆ, ಅದು ಅಥವಾ ಅದರ ರಾಜಕೀಯ ಮುಖವಾದ ಬಿಜೆಪಿ ಕೂಡ ಹತ್ತರೊಡನೆ ಹನ್ನೊಂದು ಆಗಿ, ಕ್ರಮೇಣ ನೇಪಥ್ಯಕ್ಕೆ ಸರಿಯುವ ದಿನಗಳು ದೂರವಿಲ್ಲ! ದೇಶದ ರಾಜಕೀಯವನ್ನು ಮತ್ತೆ ಮೌಲ್ಯಾಧಾರಿತ ಬಹುತ್ವ ತತ್ವಗಳ ಮೂಲಕ ಹಳಿಯ ಮೇಲೆ ತರುವುದು ಇಂದಿನ ಅವಶ್ಯಕತೆಯಾಗಿದೆ. ಹಾಗಾಗದಿದ್ದಲ್ಲಿ ಭಾಜಪದ ಹಿಂದಿನ ಸೂತ್ರಧಾರ ಶಕ್ತಿ ಸಂಘ ಪರಿವಾರವೇ ಆಗಿರುವುದರಿಂದ, ಈಗ ಅದರ ವಿರುದ್ಧ ಇರುವ ಎಲ್ಲ ಆಪಾದನೆಗಳೊಂದಿಗೆ, ಅನೈತಿಕ ರಾಜಕೀಯ ಬೆಳವಣಿಗೆಗಳ ಹೊಣೆಯನ್ನೂ ಅದೇ ಹೊರಬೇಕಾಗುತ್ತದೆ.

ಆರೆಸ್ಸೆಸ್ ಸಂಸ್ಥೆಯ ಹುಟ್ಟು, ಬೆಳವಣಿಗೆ, ಅದರ ಸೈದ್ಧಾಂತಿಕ ಆಚಾರವಿಚಾರಗಳು, ಅದು ಕಾಲಕಾಲಕ್ಕೆ ತಳೆದ ಸ್ವರೂಪವಿರೂಪಗಳ ಕುರಿತು, ಅದರ ಪ್ರತಿಗಾಮಿ ವಿಚಾರಧಾರೆ, ಧೋರಣೆಗಳ ಕುರಿತು ಮೊದಲಿನಿಂದಲೂ ಕಟುವಾದ ಟೀಕೆ ಟಿಪ್ಪಣಿಗಳು ಇದ್ದೇ ಇವೆ. ಅದರಲ್ಲೂ ಎಡಪಂಥಿಯರು, ಪ್ರಗತಿಪರರು, ಕಾಂಗ್ರೆಸ್ಸಿಗರು ಅದರ ಕಡು ವೈರಿಗಳೇ ಆಗಿದ್ದಾರೆ. ಅದೇ ಕಾಲಕ್ಕೆ ಆರೆಸ್ಸೆಸ್ ಕಾರ್ಯ ಚಟುವಟಿಕೆಗಳು, ಅದರ ಸೇವೆ, ತ್ಯಾಗ ಕುರಿತು ಪ್ರಶಂಸಾರ್ಹ ಅಭಿಪ್ರಾಯವುಳ್ಳ ಎಲ್ಲ ಸ್ತರದ ಜನರೂ ಉಂಟು. ಸಂಘ ಮಾಡುತ್ತಿರುವ ತಪ್ಪುಗಳತ್ತ ಬೆರಳು ತೋರಿಸಿ ಅದಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ಹೇಳುವುದು ಒಂದು ಕಡೆಯಾದರೆ, ಸಂಘ ಕುರಿತು ಸದಭಿಪ್ರಾಯ ಇರದವರು, ಅದರ ಚಟುವಟಿಕೆಗಳ ಕುರಿತು ಅಸಹನೆ ಇರುವವರೂ ಕೂಡ ಸಂಘ ಕುರಿತಂತೆ ತಾವು ಮಾಡುತ್ತಿರುವ ತಪ್ಪುಗಳ ಕುರಿತು ಕೂಡ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಅನಿಸುತ್ತದೆ. ಇದು ಸಂಘದ ಪರ ಅಥವಾ ವಿರೋಧದ ನಿಲುವು ಅನ್ನುವುದಕ್ಕಿಂತ, ವಾಸ್ತವಿಕ ನೆಲೆಗಟ್ಟಿನಲ್ಲಿ ವಸ್ತುನಿಷ್ಟವಾಗಿ ನಡೆಯಬೇಕಾದ ಪ್ರಕ್ರಿಯೆ ಎಂದು ನನ್ನ ಭಾವನೆ.

ಆರೆಸ್ಸೆಸ್ ಜನ್ಮ ತಳೆದ ಸಮಯ ಸಂದರ್ಭ, ಅದರ ಧ್ಯೇಯ ಧೋರಣೆಗಳ ಕುರಿತು ಪುನರಾವರ್ತನೆ ಮಾಡಲಾರೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಮತ್ತು ಆನಂತರ ದೇಶ ವಿಭಜನೆ ಕಾಲದಲ್ಲಿ ನಡೆದ ತೀರ ಹಿಂಸಕ ಕೋಮು ಗಲಭೆಗಳು, ಜನರ ಮಾರಣಹೋಮ, ಸ್ಥಳಾಂತರ, ದೇಶದ, ಅದರಲ್ಲೂ ಅದು ಉತ್ತರ ಭಾರತದಲ್ಲಿ ಉಂಟು ಮಾಡಿದ ಗಾಯ ತುಂಬಾ ಆಳವಾದದ್ದು. ದೇಶ ವಿಭಜನೆ, ಆರೆಸ್ಸೆಸ್‍ನ ಅಖಂಡ ಭಾರತದ ಕಲ್ಪನೆಗೆ ವಿರುದ್ಧವಾಗಿ ನಡೆದ ಘಟನೆ.

ಸ್ವಾತಂತ್ರ್ಯದ ನಂತರ ದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಅನುಸರಿಸಿದ ಮುಸ್ಲಿಂ ಓಲೈಕೆಯ ರೀತಿ ನೀತಿಗಳು, ಮತ ರಾಜಕಾರಣ, ಭ್ರಷ್ಟಾಚಾರದ ಅನೇಕ ಹಗರಣಗಳು, ತುರ್ತು ಪರಿಸ್ಥಿತಿಯ ಅತಿರೇಕಗಳು ದೇಶದ ಜನರಿಗೆ ಪರ್ಯಾಯ ಸರಕಾರ ಕುರಿತು ಚಿಂತಿಸುವಂತೆ ಮಾಡಿತು. ಆಗ ಅಸ್ತಿತ್ವಕ್ಕೆ ಬಂದದ್ದೇ ಜನತಾ ಪಕ್ಷದ ಸರ್ಕಾರ. ಭಾಜಪ ಅದರ ಭಾಗವಾಗಿತ್ತು. ನಂತರ ಜನ ಕಾಂಗ್ರೆಸ್ ಗೆ ಮತ್ತೆ ಅವಕಾಶ ನೀಡಿದರೂ ಅದರ ಮುಸ್ಲಿಂ ತುಷ್ಟೀಕರಣ ನೀತಿ ಮುಂದುವರೆಯಿತು. ಅದರೊಂದಿಗೆ ಭೃಷ್ಟಾಚಾರದ ಹಗರಣಗಳೂ ಕೂಡ. ಈ ಮಧ್ಯೆ ಜಮ್ಮುಕಾಶ್ಮೀರದಲ್ಲಿ ಯುಪಿಎ ಸರಕಾರದ ಮೂಗಿನಡಿ ನಡೆದ ಹಿಂದೂಗಳ ಉಚ್ಚಾಟನೆ, ಅಲ್ಲಿ ಅವ್ಯಾಹತವಾಗಿ ನಡೆಯುತ್ತ ಬಂದ ಹತ್ಯೆ, ಹಿಂಸಾಚಾರ, ಪ್ರತ್ಯೇಕತೆಯ ಕೂಗು, ಆನಂತರ ದೇಶದ ಇತರೆಡೆ ನಡೆದ ಕೋಮು ಗಲಭೆಗಳು, ಐಸಿಸ್, ತಾಲಿಬಾನ್, ಲಷ್ಕರದಂತಹ ಮೂಲಭೂತವಾದಿ ಸಂಘಟನೆಗಳ ಉದಯ, ಅವುಗಳ ಕುರಿತು ದೇಶದ ಉಗ್ರವಾದಿ ಮುಸ್ಲಿಂ ಯುವಕರ ಒಲವು, ಅದರೊಂದಿಗೆ ಯುಪಿಯೆ ಸರ್ಕಾರದ ವಿಫಲತೆ, ದುರ್ಬಲತೆಯನ್ನು ಭಾವನಾತ್ಮಕವಾಗಿ ಉದ್ದೀಪಿಸಿ, ಅದನ್ನು ರಾಜಕೀಯವಾಗಿ ಬಳಸಿಕೊಂಡು ಆರೆಸ್ಸಸ್ ಭಾಜಪವನ್ನು ಕೇಂದ್ರ ಸ್ಥಾನಕ್ಕೆ ತಂದು ನಿಲ್ಲಿಸಿತು.

ಈಗ ಅದು ತನ್ನ ಮೂಲ ಆಶಯವಾದ ಹಿಂದುರಾಷ್ಟ್ರದ ಪರಿಕಲ್ಪನೆಯ ಹತ್ತಿರ ಬಂದು ನಿಂತು ತನ್ನ ಒಂದೊಂದೇ ಅಜೆಂಡಾವನ್ನು ಕಾರ್ಯಗತಗೊಳಿಸುವತ್ತ ದಾಪುಗಾಲು ಹಾಕುತ್ತಿದೆ. ಅದಕ್ಕಾಗಿ ಅದು ವಾಮಮಾರ್ಗಗಳನ್ನು ಅನುಸರಿಸಲೂ ಹಿಂಜರಿಯುತ್ತಿಲ್ಲ. ಇತ್ತೀಚೆಗಂತೂ ಅದು ಸಾಮಾಜಿಕ ಜಾಲತಾಣಗಳನ್ನು ಎಗ್ಗಿಲ್ಲದೇ ಬಳಸಿಕೊಂಡು ತನ್ನ ಸ್ಥಾಪಿತ ಗುರಿಗಳತ್ತ ದೃಢ ಹೆಜ್ಜೆಗಳನ್ನೇ ಇಡುತ್ತಿದೆ. ಈಗ ಹೇಳಿ- ಆರೆಸ್ಸೆಸ್, ಆ ಮೂಲಕ ಭಾಜಪ ಬೆಳೆಯಲು ಕಾರಣವಾದ ರಾಜಕೀಯ ಪಕ್ಷಗಳು, ಅದರಲ್ಲೂ ಕಾಂಗ್ರೆಸ್ ತನ್ನ ತಪ್ಪುಗಳ ಕುರಿತು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೆ? ಕಾಂಗ್ರೆಸ್ ತನ್ನ ಮೂಲ ಧ್ಯೇಯಗಳಿಗೂ ಬದ್ಧವಾಗದೇ, ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವವನ್ನು ಕಾಯ್ದುಕೊಳ್ಳದೇ, ಬಲಹೀನ ಕೌಟುಂಬಿಕ ನೇತೃತ್ವವನ್ನೇ ನಂಬಿ ಮುನ್ನಡೆದಿದೆ.

ಇತರ ರಾಜಕೀಯ ಪಕ್ಷಗಳು ಕೂಡ ತಮ್ಮ ನಡೆನುಡಿಗಳನ್ನು, ತಮ್ಮ ರಾಜಕೀಯ ವರಸೆಗಳನ್ನು, ಪ್ರಾಮಾಣಿಕ ಆಡಳಿತ ಒದಗಿಸುವ ಕುರಿತು ತಮ್ಮ ಬದ್ಧತೆಯನ್ನು ಜನರಿಗೆ ಖಾತ್ರಿಪಡಿಸುವುದರತ್ತ ಗಮನ ನೀಡಬೇಕಲ್ಲದೇ, ಆರೆಸ್ಸೆಸ್ ಅಥವಾ ಭಾಜಪವನ್ನು ದೂಷಿಸುತ್ತ ಕೂಡ್ರುವುದರಲ್ಲಿ ಅರ್ಥವಿಲ್ಲ. ದೇಶದ ಜನ ಇತರ ಪಕ್ಷಗಳು ಎಸಗುತ್ತ ಬಂದ ಪ್ರಮಾದಗಳನ್ನು ನೋಡಿ, ಬೇಸತ್ತು, ಆರೆಸ್ಸೆಸ್, ಭಾಜಪದ ತಪ್ಪುಗಳ ಕುರಿತು ಉಪೇಕ್ಷ ಮನೋಭಾವ ತಾಳಿದ್ದರೆ ಅಚ್ಚರಿಯಿಲ್ಲ. ಕೆಲವು ವಿಷಯಗಳಲ್ಲಾದರೂ ಭಾಜಪ ಜನರಲ್ಲಿ ವಿಶ್ವಾಸ ಮೂಡಿಸಿದ್ದಂತೂ ನಿಜ. ಆದ್ದರಿಂದ ಆತ್ಮಾವಲೋಕನದ ತುರ್ತು ಅವಶ್ಯಕತೆ ಇರುವುದು ಆರೆಸ್ಸೆಸ್, ಭಾಜಪದ ವಿರೋಧಿಗಳಿಗೆ ಮತ್ತು ವಿರೋಧ ಪಕ್ಷಗಳಿಗೆ ಎಂದು ನನ್ನ ಅಭಿಪ್ರಾಯ.

ಎರಡನೆಯದಾಗಿ ಆರೆಸ್ಸೆಸ್ ಕುರಿತು ಮರು ಅವಲೋಕನೆ ಮಾಡಿಕೊಳ್ಳಬೇಕಾಗಿರುವವರು ನಮ್ಮ ದೇಶದ ಬುದ್ಧಿಜೀವಿಗಳು ಮತ್ತು ಪ್ರಗತಿಪರರು. ಇವರು ಯಾವತ್ತೂ ಸಂಘವನ್ನು, ಭಾಜಪವನ್ನು ಜರೆಯುತ್ತ ಬಂದವರು. ಅವುಗಳನ್ನು ತೆಗಳಿ ತೆಗಳಿ ಅಧಿಕಾರದ ಗದ್ದುಗೆಯಲ್ಲಿ ಕೂಡ್ರುವಂತೆ ಮಾಡಿದವರು. ಸಂಘ ಪರಿವಾರವನ್ನು ವೈಚಾರಿಕ ನೆಲೆಯಲ್ಲಿ ಟೀಕಿಸುತ್ತ, ಅದರ ಪ್ರತಿಗಾಮಿ ವಿಚಾರಧಾರೆಗಳನ್ನು ಖಂಡಿಸುತ್ತ ಬಂದಿರುವ ಇವರಿಗೆ ಸಂಘ ಅಥವಾ ಭಾಜಪದಲ್ಲಿ ಸಕಾರಾತ್ಮಕವಾದದ್ದು ಏನೂ ಕಂಡು ಬರಲೇ ಇಲ್ಲ. ಸಾಮಾನ್ಯ ಭಾರತೀಯರು ಏಕೆ ಅವುಗಳನ್ನು ಬೆಂಬಲಿಸತೊಡಗಿದ್ದಾರೆ ಎಂಬುದನ್ನು ವಿಶ್ಲೇಷಿಸಿ ನೋಡಲಾರದಷ್ಟು ಇವರು ಕುರುಡರಾಗಿ ಹೋದರು.

ಜನಸಾಮಾನ್ಯ ಭಾರತೀಯರು ಇವರಷ್ಟು ವಿಚಾರವಂತರಲ್ಲ. ಅವರು ಹೆಚ್ಚು ಭಾವನಾಜೀವಿಗಳು. ತಮ್ಮ ಮತ, ಧರ್ಮ, ದೇಶಕ್ಕೆ ಯಾವುದು ಹಿತ, ತಮ್ಮ ಅಸ್ಮಿತೆಗೆ ಧಕ್ಕೆ ತರುವ ಸರಕಾರದ ನಡೆಗಳು ಯಾವವು, ಯಾರು ಭ್ರಷ್ಟರು ಎಂಬುದನ್ನು ಅರಿಯುವಷ್ಟು ರಾಜಕೀಯ ತಿಳಿವಳಿಕೆ ಅವರಿಗೆ ಬಂದಿದೆ. ಇತರ ಧರ್ಮೀಯರಷ್ಟೇ ಅವರಿಗೂ ಅವರ ಧರ್ಮ, ದೇವರು ಬಹಳ ಭಾವನಾತ್ಮಕ ವಿಷಯಗಳು. ಹಿಂದೂ ಧರ್ಮ, ದೇವರು, ಮೌಢ್ಯ, ಆಚಾರ ವಿಚಾರಗಳನ್ನು, ಆ ಕುರಿತು ಸಂಘದ ನಡೆನುಡಿಗಳನ್ನು ಯಾವ ಮುಲಾಜು ಇಲ್ಲದೆ ಖಂಡಿಸುವ, ಪ್ರತಿಯೊಂದಕ್ಕೂ ಪ್ರತಿಕ್ರಿಯಿಸುವ ಬುದ್ಧಿಜೀವಿಗಳಿಗೆ ಇತರ, ಅದರಲ್ಲೂ ಮುಸ್ಲಿಂ ಧರ್ಮದ ವಿಷಯಕ್ಕೆ ಬಂದರೆ ಅವರ ಯಾವುದೇ ಮತಾಂಧತೆ, ಧಾರ್ಮಿಕ ಕಂದಾಚಾರಗಳು, ಆಕ್ರಮಣಕಾರಿ ನಡೆನುಡಿಗಳ ಬಗ್ಗೆ, ಸ್ತ್ರೀ ಶೋಷಣೆ, ಉಗ್ರವಾದ ಕುರಿತು ಯಾವದೂ ಕಾಣುವೂದಿಲ್ಲ. ಇವರ ವೈಚಾರಿಕತೆ ಏನಿದ್ದರೂ ಹಿಂದೂ ಧರ್ಮದ ಆಚಾರವಿಚಾರಗಳು, ಸಂಘ ಕುರಿತು ಮಾತ್ರ.

ಇವರ ಬ್ರಾಹ್ಮಣ್ಯ ವಿರೋಧಿ ನಿಲುವು ಹಿಂದೂ ಧರ್ಮವಿರೋಧಿ ನಿಲುವಾಗಿ ಜನಸಾಮಾನ್ಯರಿಗೆ ಕಾಣುತ್ತದೆ. ಇನ್ನು ಮುಸ್ಲಿಂ ಬುದ್ಧಿಜೀವಿ ವರ್ಗವಂತೂ ಸ್ವಧರ್ಮೀಯರ ಯಾವುದೇ ದುರಾಚಾರಗಳ ಕುರಿತು ಬಾಯಿ ತೆರೆಯುವುದೇ ಇಲ್ಲ. ಸ್ವಧರ್ಮದ ಕಂದಾಚಾರಗಳು, ತೀವ್ರಗಾಮಿ ಧಾರ್ಮಿಕ ಆಚಾರಣೆಗಳು, ಏನೇ ದುರಾಚಾರಣೆಗಳು ನಡೆದರೂ ಕೂಡ ಅವರು ತುಟಿ ಬಿಚ್ಚುವುದಿಲ್ಲ. ಹೀಗಾಗಿ ಮಸೀದಿ, ಮೌಲ್ವಿ, ಮದರಸಾಗಳು, ಸಮಾಜದ ರಾಜಕೀಯ ನೇತಾರರು, ಸಾಮಾನ್ಯ ಮುಸ್ಲಿಂರ ಬ್ರೇನ್ ವಾಶ್ ಮಾಡುತ್ತ,  ಧರ್ಮದ ಹೆಸರಿನಲ್ಲಿ ಹಿಂದೂಗಳ ವಿರುದ್ಧ ಜನಸಾಮಾನ್ಯ ಮುಸ್ಲಿಂ ಸಮುದಾಯವನ್ನು ಎತ್ತಿ ಕಟ್ಟುವಲ್ಲಿ ಹಾಗೂ ಮುಸ್ಲಿಂ ಸಮುದಾಯವನ್ನು ನಡುಗಡ್ಡೆಯಾಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಹಿಂದೂ ಸಮಾಜದ ಬೇರೆಬೇರೆ ಜಾತಿ ಪಂಗಡಗಳೇ ತಮ್ಮ ತಮ್ಮ ಲಾಂಛನಗಳಡಿ ಒಂದಾಗಲು, ಮೀಸಲಾತಿ ಮತ್ತಿತರ ಲಾಭ ಪಡೆಯಲು ಯತ್ನಿಸುತ್ತಿರುವಾಗ ಮುಸ್ಲಿಂ ಸಮಾಜವನ್ನು ಈ ಬಗ್ಗೆ ಹೆಚ್ಚು ದೂಷಿಸುವುದರಲ್ಲಿ ಅರ್ಥವಿಲ್ಲ. ಈ ಎಲ್ಲ ಬೆಳವಣಿಗೆಗಳ ಕುರಿತು ಕೂಡ ಬುದ್ಧಿಜೀವಿ ವರ್ಗ ಮೌನಕ್ಕೆ ಶರಣಾಗಿದೆ. 

ಆದ್ದರಿಂದ ಬುದ್ಧಿಜೀವಿಗಳ, ಪ್ರಗತಿಪರರೆನಿಸಿಕೊಳ್ಳುವವರ ಪಕ್ಷಪಾತ ಧೋರಣೆಯನ್ನು ಆರೆಸ್ಸೆಸ್ ಬಂಡವಾಳವನ್ನಾಗಿಸಿಕೊಳ್ಳುತ್ತಿದೆ. ಈ ಬಗ್ಗೆ, ಜನಸಾಮಾನ್ಯ ಹಿಂದೂಗಳನ್ನು ಎತ್ತಿಕಟ್ಟುವಲ್ಲಿ ಸಂಘಪರಿವಾರ ಯಶಸ್ವಿಯಾಗಿದೆ. ಬುದ್ಧಿಜೀವಿಗಳನ್ನು ಲದ್ದೀಜೀವಿಗಳೆಂದು, ಅರ್ಬನ್ ನಕ್ಷಲರೆಂದು ಹೀಯಾಳಿಸುತ್ತ, ಅವರ ವಿರುದ್ಧ ದೇಶದ್ರೋಹದಂತಹ ಆರೋಪಗಳನ್ನು ಕೂಡ ಹೊರಿಸಲು ಹಿಂಜರಿಯುತ್ತಿಲ್ಲ. ಸಮಾಜದ ಯಾವುದೇ ಸಮೂಹದಿಂದ ಅತಿರೇಕಗಳು, ಅನ್ಯಾಯ, ಅಸಹಜ ನಡವಳಿಕೆಗಳು, ಉಚಿತವಲ್ಲದ ಸಮಾಜವಿರೋಧಿ ಕೃತ್ಯಗಳು ನಡೆದದ್ದು ಕಂಡುಬಂದಲ್ಲಿ ಪ್ರಗತಿಪರರೆನಿಸಿಕೊಳ್ಳುವವರು, ಸಾಹಿತಿಗಳು, ಬುದ್ಧಿಜೀವಿಗಳು ಯಾವುದೇ ಮುಲಾಜಿಲ್ಲದೇ ಒಂದೇ ದ್ವನಿಯಲ್ಲಿ ಅಂಥದ್ದನ್ನು ಖಂಡಿಸಬೇಕು. ಇದ್ದದ್ದನ್ನು ಇದ್ದಂತೆ ಹೇಳಬೇಕು.

ಕೆಲವಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುತ್ತ, ಇನ್ನೂ ಕೆಲವಕ್ಕೆ ಜಾಣ ಕುರುಡು ಕಿವುಡುತನವನ್ನು ಪ್ರದರ್ಶಿಸುತ್ತ, ವಸ್ತುನಿಷ್ಟವಾಗಿ ಗ್ರಹಿಸುವ, ಅವಲೋಕಿಸುವ ದೃಷ್ಟಿಕೋನವನ್ನು ಸಾಹಿತಿಗಳು, ಬುದ್ಧಿಜೀವಿಗಳೆನಿಸಿಕೊಂಡವರು ಕಳೆದುಕೊಂಡರೆ ಅದರ ಪರಿಣಾಮ ಬಹಳ ಕೆಟ್ಟದ್ದಾಗಿರುತ್ತದೆ. ರಾಜಕೀಯ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ಪ್ರತಿಯೊಂದಕ್ಕೆ ಪ್ರತಿಕ್ರಿಯಿಸುತ್ತವೆ. ಆದರೆ ಚಿಂತಕರಿಗೆ ಸಮದೃಷ್ಟಿ, ಸಮಷ್ಟಿ ಹಿತ ಗಮನದಲ್ಲಿರಬೇಕಲ್ಲವೆ? ಬಲಪಂಥ, ಎಡಪಂಥ ಎಂಬ ಎಡಬಿಡಂಗಿತನದಲ್ಲಿ ವಸ್ತುನಿಷ್ಟ ಚಿಂತನೆ, ಸಮಗ್ರ ದೃಷ್ಟಿಕೋನವನ್ನೇ ಮರೆತರೆ ಇವರು, ಇವರ ವಿಚಾರಗಳು ಹೇಗೆ ಗೌರವಾರ್ಹ ಆಗುತ್ತವೆ. ಆದ್ದರಿಂದ ಸ್ವವಿಮರ್ಶೆ ಈಗ ಅಗತ್ಯವಾಗಿ ಬೇಕಾಗಿರುವುದು ಬುದ್ಧಿಜೀವಿಗಳು ಎಂದು ಕರೆಯಿಸಿಕೊಳ್ಳುವ ವರ್ಗಕ್ಕೆ.

ಇನ್ನು ಆರೆಸ್ಸೆಸ್, ಮುಸ್ಲಿಂರನ್ನು ಹಿಂದುಗಳ ವಿರುದ್ಧ ಒಗ್ಗೂಡಿಸಿ ಅವರು ಇನ್ನೊಂದು ರೀತಿಯ ಅತಿರೇಕಗಳನ್ನು ಎಸಗಲು ಪ್ರೇರೆಪಿಸುತ್ತದೆ ಎಂಬ ಮಾತಿದೆ. ಇದಕ್ಕೆ ಪಿಎಫ್‍ಐ, ಎಸ್‍ಡಿಪಿಐ, ಐಸಿಸ್‍ದಂತಹ ತೀವ್ರವಾದಿ, ಉಗ್ರವಾದಿ ಸಂಘಟನೆಗಳನ್ನು ಉದಾಹರಣೆಯಾಗಿ ನೀಡಲಾಗುತ್ತದೆ. ಇತ್ತೀಚಿನ ಮಂಗಳೂರು, ಬೆಂಗಳೂರು, ದಿಲ್ಲಿ ಕೋಮು ಗಲಭೆಗಳಲ್ಲಿ, ಹಾಗೂ ಅನೇಕ ಆರೆಸ್ಸಸ್ ಕಾರ್ಯಕರ್ತರ ಕೊಲೆಗಳಲ್ಲಿ ಈ ಸಂಸ್ಥೆಗಳ ಪಾತ್ರವನ್ನು ಗುರುತಿಸಲಾಗುತ್ತದೆ. ಅದೇ ರೀತಿ ಆರೆಸ್ಸೆಸ್ ಪಾತ್ರವನ್ನೂ ಹಲವು ಗಲಭೆಗಳಲ್ಲಿ ಗುರುತಿಸಲಾಗುತ್ತದೆ.

ನಮ್ಮ ದೇಶದ ವಿವಿಧ ಸಮಾಜಗಳ ಮಧ್ಯೆ ಪರಸ್ಪರ ಮತೀಯ ಸಾಮರಸ್ಯ, ವಿಶ್ವಾಸ ಇರದಿರುವಾಗ ಇವರ ವಿರುದ್ಧ ಅವರು, ಅವರ ವಿರುದ್ಧ ಇವರು ಒಟ್ಟಾಗುವದು, ಸಂಘಟನೆಗೊಳ್ಳುವುದು, ಆಪಾದಿಸುವುದು ಮೊದಲಿನಿಂದಲೂ ನಡೆಯುತ್ತಲೇ ಬಂದಿದೆ. ನಮ್ಮ ದೇಶದ ಮೇಲೆ ಮತೀಯ ಇತಿಹಾಸದ ಭಾರ ಬಹಳ ಇದೆ. ಕೋಮು ಗಲಭೆಗಳ ದೊಡ್ಡ ಪರಂಪರೆಯೇ ಇದೆ. ಕೋಮು ಗಲಭೆಗಳಲ್ಲಿ ಜೀವ ತೆತ್ತವರಿಗೆ ಲೆಕ್ಕವೇ ಇಲ್ಲ. ಕೋಮು ಇತಿಹಾಸದ ಭಾರವನ್ನು ಪ್ರಜ್ಞಾಪೂರ್ವಕವಾಗಿ ನಮ್ಮ ದೇಶದ ಎಲ್ಲ ಸಮುದಾಯಗಳು ಕೊಡವಿಕೊಳ್ಳದ ಹೊರತು ನಮಗೆ ಮತೀಯ ಗಲಭೆಗಳಿಂದ ಮುಕ್ತಿಯಿಲ್ಲ.

ಹಿಂದೂ ಧರ್ಮ ನಿರೀಶ್ವರವಾದ ಸಹಿತ ಎಲ್ಲ ಧರ್ಮದ ವಿಚಾರ ಧಾರೆಗಳನ್ನು ಮೈಗೂಡಿಸಿಕೊಂಡು ವಿಶಾಲ ತಳಹದಿಯನ್ನು ಹೊಂದಿದೆ. ಇಸ್ಲಾಂ ಧರ್ಮ ಒಂದೇ ದೇವರು, ಒಬ್ಬನೇ ಪ್ರವಾದಿ, ಒಂದೇ ಧರ್ಮ ಗ್ರಂಥ ಎಂಬ ಏಕಮುಖ ಚಿಂತನೆಯನ್ನು ಹೊಂದಿದೆ. ಇಸ್ಲಾಂ ಧರ್ಮ ಕುರಿತು ಒಂದಿಷ್ಟೂ ಟೀಕೆ ಟಿಪ್ಪಣಿಯನ್ನು, ವಿಮರ್ಶೆಯನ್ನು ಅದು ಸಹಿಸದು. ಅಲ್ಲಿ ಸೂಫಿಗಳಂಥ ಉದಾರವಾದಿಗಳಿಗೆ ನೆಲೆ ಇಲ್ಲ. ಯಾವುದೇ ಧರ್ಮ, ಧರ್ಮದ ಗ್ರಂಥಗಳು ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ರಚನೆಗೊಂಡವುಗಳು, ಬೋಧಿಸಲ್ಪಟ್ಟವು. ಅವು ಪ್ರಶ್ನಾತೀತ, ಕಾಲಾತೀತವಾದವುಗಳಲ್ಲ. ಆಧುನಿಕ ಕಾಲದ ಅಗತ್ಯಕ್ಕೆ ತಕ್ಕಂತೆ ಅವುಗಳ ಮರು ವ್ಯಾಖ್ಯಾನ, ವಿಮರ್ಶೆ ಆಗಬೇಕು. ಅವು ನಮಗೆ ಆಲದ ಮರಗಳಾಗಬೇಕಿಲ್ಲ.

ಬದಲಾಗದ ಧಾರ್ಮಿಕ ವಿಚಾರಗಳಿಂದ ತೀವ್ರಗಾಮಿಗಳು ಉದ್ಭವಿಸುತ್ತಿದ್ದಾರೆ. ಅವರು ಜಗತ್ತಿನ ಶಾಂತಿಯನ್ನೇ ಕದಡುತ್ತಿದ್ದಾರೆ. ಇಂಡೋನೇಶಿಯಾದಂತಹ ಮುಸ್ಲಿಂ ದೇಶ ತನ್ನ ಇತಿಹಾಸದ ಭಾಗವಾದ ಹಿಂದೂ ಪರಂಪರೆಯನ್ನು ಮೈಗೂಡಿಸಿಕೊಂಡ ಉದಾರವಾದಿ ದೇಶವಾಗಿದೆ. ಆದೇ ರೀತಿ ಹಿಂದೂ ಮೂಲವನ್ನು, ವಂಶವಾಹಿನಿಯನ್ನು ಹೊಂದಿರುವ ಭಾರತದ ಮುಸ್ಲಿಂ ಸಮೂಹ ಅದೇ ಬಗೆಯ ಉದಾರವಾದಿ ನಿಲುವು, ವಿಧಾನವನ್ನು ಹೊಂದಿರುವುದು ಹೆಚ್ಚು ಸಮಂಜಸವಾದುದು. ಸಮುದಾಯದ ಬಹಳಷ್ಟು ಜನ ಹಾಗೆ ಇದ್ದಾರೆ ಕೂಡ. ದೇವರು, ಧರ್ಮ, ಇತಿಹಾಸದ ತಲೆಭಾರ ಕಡಿಮೆ ಮಾಡಿಕೊಂಡು ಅವರು ಸ್ವಲ್ಪ ಉದಾರಭಾವದಿಂದ ವರ್ತಿಸಿದರೆ ಆರೆಸ್ಸೆಸ್‍ನಿಂದ ಯಾವುದೇ ಪ್ರಚೋದನೆಗೆ ಅವಕಾಶವೇ ಇರದು. ಆಗ ಅವರಿಗೆ ಕ್ಯಾರೇ ಅನ್ನುವವರೂ ಇರುವುದಿಲ್ಲ. ಅದು ಒಟ್ಟಾರೆ ಸಮಾಜದ ಸಾಮರಸ್ಯದ ದೃಷ್ಟಿಯಿಂದ ಹಿತಕರವಾದ ನಡೆ ಕೂಡ ಆಗಬಹುದು.

ಯಾವುದೇ ಧರ್ಮ, ದೇವರು ನಮ್ಮ ಹೊಟ್ಟೆ ತುಂಬಿಸುವದಿಲ್ಲ. ನಾವು ಶ್ರಮ ಪಟ್ಟಾಗಲೇ ನಮ್ಮ ಬದುಕು. ಕಾಣದ ದೇವರ ಕುರಿತು ಕೋಲಾಹಲವೇಕೆ? ಎಷ್ಟು ಪ್ರಾರ್ಥಿಸಿದರೂ ಇತ್ತೀಚೆಗೆ ದೇವರು ಯಾರ ಕಣ್ಣಿಗೂ ಬಿದ್ದಿಲ್ಲ. ದೈನಂದಿನ ಬದುಕಿನ ಬವಣೆಗಳನ್ನು ನೀಗಲು ಬೇರೆಬೇರೆ ಸಮೂಹಗಳ ನಡುವೆ ಸಹಕಾರ ಬೇಕಲ್ಲವೆ? ಅಂಥ ಸಹಕಾರ ಈಗ ಹಲವು ಸ್ತರದಲ್ಲಿ ಇದೆ. ಅದರೊಂದಿಗೆ ಪರಸ್ಪರ ಅಪನಂಬಿಕೆಯೂ ಇದೆ. ಬೇರೆಬೇರೆ ಮತ ಪಂಥ, ನಂಬಿಕೆಯವರು ಕೂಡಿ ಸಾಮರಸ್ಯದಿಂದ, ಆತ್ಮೀಯತೆಯಿಂದ ಬಾಳುವುದೇ ನಿಜವಾದ ಮಾನವಧರ್ಮ. ಈ ಕುರಿತು ಮುಸ್ಲಿಂ ಸಮಾಜ ವೈಚಾರಿಕ ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಂಡರೆ, ಮುಸ್ಲಿಂ ಕೋಮುವಾದದ ಗುಮ್ಮನನ್ನು ಬಂಡವಾಳ ಮಾಡಿಕೊಂಡಿರುವ ಹಿಂದೂ ತೀವ್ರವಾದಿಗಳಿಗೆ, ಅಥವಾ ಹಿಂದೂ ತೀವ್ರವಾದವನ್ನು ಬಂಡವಾಳ ಮಾಡಿಕೊಂಡಿರುವ ಮುಸ್ಲಿಂ ಕೋಮುವಾದಿಗಳಿಗೆ ಕೆಲಸವೇ ಇರುವುದಿಲ್ಲ. ಆಗ ದೇಶಕ್ಕೆ ನಿಜವಾದ ಒಳ್ಳೆಯ ದಿನಗಳು ಬರಬಹುದು.

Leave a Reply

Your email address will not be published.