ಆರೋಗ್ಯ ಮಂತ್ರಿ ಕೆ.ಕೆ.ಶೈಲಜಾ ಕೇರಳದ ಕೊರೊನಾ ಸಂಹಾರಿ!

35 ದಶಲಕ್ಷ ಜನಸಂಖ್ಯೆಯನ್ನು ಹೊಂದಿದ ಒಂದು ರಾಜ್ಯ ಕೊರೊನಾ ವೈರಾಣುವಿಗೆ ಕೇವಲ ನಾಲ್ಕು ಜೀವಗಳನ್ನು ಕಳೆದುಕೊಂಡಿದೆ. ಈ ಪವಾಡಕ್ಕೆ ಕಾರಣೀಭೂತರೆಂದೇ ಕೆ.ಕೆ.ಶೈಲಜಾ ಅವರು ಪ್ರಶಂಸೆಗೊಳಪಟ್ಟಿದ್ದಾರೆ. ಈ ಮೊದಲು ಶಿಕ್ಷಕಿಯಾಗಿ ಕೆಲಸ ಮಾಡಿದ ಶೈಲಜಾ, ಒಬ್ಬ ಮಂತ್ರಿಯಾಗಿ ಇದನ್ನು ಹೇಗೆ ಸಾಧಿಸಿದರೆನ್ನುವ ಕತೆ ಇಲ್ಲಿದೆ.

ಜನವರಿ 20ರಂದು ವೈದ್ಯಕೀಯ ತರಬೇತಿ ಹೊಂದಿದ ತಮ್ಮ ಸಹಾಯಕ ಅಧಿಕಾರಿಗಳಲ್ಲೊಬ್ಬರಿಗೆ ಕೆ.ಕೆ.ಶೈಲಜಾ ಅವರು ದೂರವಾಣಿ ಕರೆ ಮಾಡಿದರು. ಅಪಾಯಕಾರಿ ಹೊಸ ವೈರಾಣುವೊಂದು ಚೀನಾ ದೇಶದಲ್ಲಿ ಹರಡುತ್ತಿರುವ ಬಗ್ಗೆ ಆನ್‌ಲೈನ್‌ನಲ್ಲಿ ಓದಿ ಅವರು ತಿಳಿದುಕೊಂಡಿದ್ದರು. “ಇದು ನಮ್ಮಲ್ಲಿಯೂ ಬರಬಹುದಾ” ಎಂದು ಕೇಳಿದರು. “ಖಂಡಿತ, ಮೇಡಮ್” ಎಂದು ಆ ಅಧಿಕಾರಿ ಉತ್ತರಿಸಿದರು. ಈ ರೀತಿ ಕೇರಳ ರಾಜ್ಯದ ಆರೋಗ್ಯ ಮಂತ್ರಿ ಕೂಡಲೇ ತಮ್ಮ ತಯಾರಿಯನ್ನು ಪ್ರಾರಂಭಿಸಿದರು.

ಶೈಲಜಾ ಅವರು ಹೇಳುವ ಪ್ರಕಾರ ‘ನಾಲ್ಕು ತಿಂಗಳ ನಂತರ ಕೇರಳದಲ್ಲಿ ಕೇವಲ 524 ಕೋವಿಡ್-19 ಕೇಸುಗಳು, ನಾಲ್ಕು ಸಾವುಗಳು ಮತ್ತು ಸಮುದಾಯ ಹರಡುವಿಕೆ (ಕಮ್ಯುನಿಟಿ ಟ್ರಾನ್ಸ್ಮಿಶನ್) ಇಲ್ಲದಿರುವುದು ವರದಿಯಾಯಿತಂತೆ. ಈ ರಾಜ್ಯದ ಜನಸಂಖ್ಯೆ ಸುಮಾರು 35 ದಶಲಕ್ಷ. ಇದರ ಜಿಡಿಪಿ ಪರ್ ಕ್ಯಾಪ್ಟಾ ಕೇವಲ 2,200 ಡಾಲರ್. ಇದಕ್ಕೆ ಹೋಲಿಸಿದರೆ ಯುನೈಟೆಡ್ ಕಿಂಗ್‌ಡಮ್ (ಎರಡು ಪಟ್ಟು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿ, ಜಿಡಿಪಿ ಪರ್ ಕ್ಯಾಪ್ಟಾ 33,200 ಡಾಲರ್)ನಲ್ಲಿ 40,000ಕ್ಕೂ ಹೆಚ್ಚು ಸಾವು ಸಂಭವಿಸಿದ್ದು ವರದಿಯಾದರೆ, ಅಮೇರಿಕಾ (ಹತ್ತು ಪಟ್ಟು ಹೆಚ್ಚಿನ ಜನಸಂಖ್ಯೆ ಹೊಂದಿ, ಜಿಡಿಪಿ ಪರ್ ಕ್ಯಾಪ್ಟಾ 51,000 ಡಾಲರ್)ದಲ್ಲಿ 82,0000ಕ್ಕಿಂತಲೂ ಹೆಚ್ಚಿನ ಸಾವುಗಳು ಸಂಭವಿಸಿದ್ದು ವರದಿಯಾಗಿದೆ; ಈ ಎರಡು ದೇಶಗಳಲ್ಲಿ ಅತಿಯಾದ ‘ಸಮುದಾಯ ಹರಡುವಿಕೆ’ಯೂ ಉಂಟಾಗಿದೆ.

‘ಶೈಲಜಾ ಟೀಚರ್’ ಎಂದೇ ಮನೆಮಾತಾಗಿರುವ 63 ವರ್ಷದ ಈ ಮಂತ್ರಿಯನ್ನು ‘ಕೊರೊನಾ ಸಂಹಾರಿ’ ಮತ್ತು ‘ರಾಕ್ ಸ್ಟಾರ್ ಹೆಲ್ತ್ ಮಿನಿಸ್ಟರ್’ ಎಂದು ಜನರು ಗುರುತಿಸುತ್ತಿದ್ದಾರೆ. ಚಾಳಿಸನ್ನು ಹಾಕಿಕೊಂಡು ವಿಜ್ಞಾನ ಕಲಿಸುವ ಈ ಉತ್ಸಾಹಭರಿತ ಶಿಕ್ಷಕಿಗೆ ಇಂತಹ ನಾಮಧೇಯಗಳು ವಿಚಿತ್ರವಾಗಿ ಕಾಣಬಹುದು. ಆದರೆ ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಅದರಲ್ಲೂ ಸ್ವಲ್ಪ ಬಡವಾಗಿರುವ ವ್ಯವಸ್ಥೆಯಲ್ಲಿ ಬಹಳ ಪರಿಣಾಮಕಾರಿಯಾಗಿ ರೋಗವನ್ನು ನಿಯಂತ್ರಿಸಬಹುದೆಂದು ತೋರಿಸಿಕೊಟ್ಟ ಹೆಗ್ಗಳಿಕೆಯನ್ನು ಈ ನಾಮಧೇಯಗಳು ವಿವರಿಸುತ್ತವೆ.

ಅವರು ಇದನ್ನು ಹೇಗೆ ಸಾಧಿಸಿದರು? ಚೀನಾದಲ್ಲಿ ಹರಡುತ್ತಿರುವ ಹೊಸ ವೈರಾಣುವಿನ ಬಗ್ಗೆ ಓದಿದ ಮೂರು ದಿನಗಳ ನಂತರ ಮತ್ತು ಕೇರಳಾದಲ್ಲಿ ಕೋವಿಡ್-19ನ ಮೊತ್ತಮೊದಲ ಕೇಸ್ ದಾಖಲಾಗುವ  ಮುನ್ನವೇ ‘ತುರ್ತಾಗಿ ಪ್ರತಿಕ್ರಿಯಿಸುವ ತಂಡ’ದ ರ‍್ಯಾಪಿಡ್ ರೆಸ್ಪಾನ್ಸ್ ಟೀಮ್) ಸಭೆಯನ್ನು ಶೈಲಜಾ ಅವರು ಕರೆದರು. ಮರುದಿನ, ಜನವರಿ 24 ರಂದು ಈ ತಂಡ ಒಂದು ನಿಯಂತ್ರಣ ಕೊಠಡಿಯನ್ನು ತೆರೆಯಿತು. ಹಾಗೆಯೇ ಕೇರಳಾದ 14 ಜಿಲ್ಲೆಗಳಲ್ಲಿ ಇಂತಹ ಕೊಠಡಿಗಳನ್ನು ತೆರೆಯಲು ಎಲ್ಲಾ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಈ ತಂಡ ಸೂಚನೆ ಕೊಟ್ಟಿತು. ಚೀನಾದ ವುಹಾನ್‌ನಿಂದ ವಿಮಾನ ಮೂಲಕ ಬಂದಿಳಿದ ಮೊತ್ತಮೊದಲ ಕೊರೊನಾ ಕೇಸ್ ಜನವರಿ 27 ರಂದು ದಾಖಲಾಗುವ ಮೊದಲೇ, ಈ ರಾಜ್ಯವು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.ಓ) ಶಿಷ್ಟಾಚಾರಗಳಾದ ‘ಪರೀಕ್ಷೆ’ (ಟೆಸ್ಟ್), ‘ಗುರುತಿಸುವಿಕೆ’ (ಟ್ರೇಸ್), ‘ಪ್ರತ್ಯೇಕಿಸುವಿಕೆ’ (ಐಸೊಲೇಟ್) ಹಾಗೂ ‘ಬೆಂಬಲ’ (ಸಪೋರ್ಟ್) ಗಳನ್ನು  ಜಾರಿಗೊಳಿಸಿತ್ತು.

ಪ್ರಯಾಣಿಕರು ಚೀನಾದಿಂದ ಬಂದ ವಿಮಾನ ಇಳಿಯುತ್ತಿದ್ದಂತೆ, ಅವರ ದೇಹದ ತಾಪಮಾನವನ್ನು ಪರೀಕ್ಷಿಸಲಾಯಿತು. ಹೀಗೆ ಜ್ವರದ ತಾಪಮಾನವಿದ್ದ ಮೂವರನ್ನು ಹತ್ತಿರದ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಯಿತು. ಉಳಿದ ಪ್ರಯಾಣಿಕರನ್ನು ಮನೆಯಲ್ಲಿಯೇ ಕ್ವಾರಂಟೀನ್ ಮಾಡಲಾಯಿತು. ಕೋವಿಡ್-19 ಬಗೆಗಿನ ಮಾಹಿತಿಯನ್ನೊಳಗೊಂಡ, ಈ ಮೊದಲೇ ಮಲಯಾಳಂ ಭಾಷೆಯಲ್ಲಿ ತಯಾರಿಸಲ್ಪಟ್ಟ ಕರಪತ್ರಗಳನ್ನು ಅವರಿಗೆ ಕೊಟ್ಟುಕಳಿಸಲಾಗಿತ್ತು. ಹೀಗೆ ಆಸ್ಪತ್ರೆಯಲ್ಲಿದ್ದವರಿಗೆ ಕೊರೊನಾ ವೈರಸ್ ತಗುಲಿದ್ದರೂ, ಅವರಿಂದ ಮುಂದೆ ವೈರಾಣು ಹರಡುವುದನ್ನು ತಡೆಗಟ್ಟಲಾಯಿತು. “ಈ ರೀತಿ ನಾವು ಮೊದಲಾರ್ಧದಲ್ಲಿಯೇ ಜಯವನ್ನು ಸಾಧಿಸಿದ್ದೆವು. ಆದರೆ ಈ ವೈರಣು ಚೈನಾದಿಂದ ಆಚೆಗೆ ಹರಡಿ, ಅತಿ ಶೀಘ್ರದಲ್ಲಿ ಎಲ್ಲ ಕಡೆ ಕಾಣಿಸಿಕೊಂಡಿತು” ಎಂದು ಶೈಲಜಾ ಅವರು ಹೇಳುತ್ತಾರೆ.

ಫೆಬ್ರವರಿಯ ಉತ್ತರಾರ್ಧದಲ್ಲಿ, ವೆನಿಸ್‌ನಿಂದ ಬಂದಿಳಿದ ಕುಟುಂಬವೊಂದು ನಿಗಾವಹಿಸುವ ಶೈಲಜಾ ಅವರ ತಂಡದ ಕಣ್ಣು ತಪ್ಪಿಸಿ, ತನ್ನ ಪ್ರವಾಸದ ಇತಿಹಾಸವನ್ನು (ಟ್ರಾವೆಲ್ ಹಿಸ್ಟರಿ) ಮರೆಮಾಚಿತ್ತು. ಈ ಹೊತ್ತಿಗಾಗಲೇ ಸಿದ್ಧಪಡಿಸಿದ ವೈರಾಣು ನಿಯಂತ್ರಣದ ಪ್ರಮಾಣಿತಗಳಿಗೆ ಒಳಪಡದೆ ಈ ಕುಟುಂಬ ಮನೆಯನ್ನು ಸೇರಿಕೊಂಡಿತ್ತು. ವೈದ್ಯಕೀಯ ಸಿಬ್ಬಂದಿಯು ಒಂದು ಕೋವಿಡ್-19 ಕೇಸ್‌ನ್ನು ಪತ್ತೆಹಚ್ಚಿ, ಅದು ಈ ಕುಟುಂಬದ ಸಂಪರ್ಕದಿಂದ ತಗುಲಿದ್ದು ಎಂದು ತಿಳಿವುದರಷ್ಟರಲ್ಲಿ, ಈ ಕುಟುಂಬ ನೂರು ಜನರ ಸಂಪರ್ಕವನ್ನು ಹೊಂದಿತ್ತು. ಸಂಪರ್ಕಗಳ ಜಾಲವನ್ನು ಕಂಡುಹಿಡಿಯುವ ತಂಡ ಜಾಹೀರಾತು ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಈ ಎಲ್ಲರನ್ನು ಕಲೆ ಹಾಕಿ, ಅವರೆಲ್ಲರನ್ನು ಕ್ವಾರಂಟೀನ್‌ನಲ್ಲಿ ಇಡಲಾಯಿತು. ಇವರಲ್ಲಿ 06 ಜನರು ಕೋವಿಡ್-19ನ್ನು ತಗುಲಿಸಿಕೊಂಡಿದ್ದರು. 

ಇದೆ ರೀತಿ ಮತ್ತೊಂದು ಗುಂಪಿಗೆ ದಿಗ್ಬಂಧನೆ ಮಾಡಲಾಯಿತು. ಆದರೆ ಈಗಾಗಲೆ ವೈರಾಣು ಹರಡಿದ ಗಲ್ಫ್ ರಾಷ್ಟ್ರಗಳಿಂದ ಮರಳಿ ಕೇರಳಾಕ್ಕೆ ಜನರು ಬರಲಾರಂಭಿಸಿದ್ದರು. ಅವರಲ್ಲಿ ಕೆಲವರು ವೈರಾಣುವಿನ ಜೊತೆ ಪ್ರಯಾಣ ಮಾಡಿದ್ದರು. ಮಾರ್ಚ್ 23ರಂದು ಕೇರಳ ರಾಜ್ಯದ ನಾಲ್ಕೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಯಿತು. ಎರಡು ದಿನಗಳ ನಂತರ ಇಡಿ ಭಾರತದೇಶ ಲಾಕ್‌ಡೌನ್‌ನ್ನು ಕಂಡಿತು. 

ಕೇರಳದಲ್ಲಿ ಕೊರೊನಾ ತಾಂಡವವಾಡುತ್ತಿದ್ದಾಗ, 1,70,0000 ಜನರನ್ನು ಕ್ವಾರಂಟೀನ್ ಮಾಡಲಾಗಿ, ಅವರೆಲ್ಲರನ್ನು ಆರೋಗ್ಯ ಕಾರ್ಯಕರ್ತರ ನಿಗಾದಲ್ಲಿ ಇರಿಸಲಾಯಿತು. ಒಳಗಡೆ ಶೌಚಾಲಯದ ವ್ಯವಸ್ಥೆ ಇಲ್ಲದವರಿಗೆ, ಸುಧಾರಿತ ಪ್ರತೇಕ ಘಟಕಗಳನ್ನು ಸರಕಾರಿ ವೆಚ್ಚದಲ್ಲಿ ತಯಾರಿಸಿ, ಅವರನ್ನು ಅಲ್ಲಿ ಇಡಲಾಯಿತು. ಈ ಸಂಖ್ಯೆ 21,000ಕ್ಕೆ ಇಳಿಯಿತು. “ಲಾಕ್‌ಡೌನ್‌ನಲ್ಲಿ ಸಿಕ್ಕಿಹಾಕಿಕೊಂಡ, 1,50,000 ಅಕ್ಕ ಪಕ್ಕದ ರಾಜ್ಯಗಳಿಂದ ಬಂದ ವಲಸೆ ಕೆಲಸಗಾರರಿಗೆ ನಾವು ಆಶ್ರಯ ನೀಡಿ, ಅವರ ಊಟೊಪಚಾರವನ್ನು ನೋಡಿಕೊಂಡೆವು. ಆರು ವಾರಗಳವರೆಗೆ ಅವರಿಗೆ ಮೂರು ಹೊತ್ತು ಊಟ-ತಿಂಡಿಕೊಟ್ಟು ನೋಡಿಕೊಂಡಿದ್ದೇವೆ” ಎಂದು ಶೈಲಜಾ ಹೇಳುತ್ತಾರೆ. ನಿಗದಿಪಡಿಸಿದ ರೈಲುಗಳಲ್ಲಿ ಈ ಕೆಲಸಗಾರರನ್ನು ಅವರ ಮನೆಗೆ ಕಳಿಸಿಕೊಡಲಾಗುತ್ತಿದೆ.

ಕೋವಿಡ್-19ರ ಮೊದಲೆ ಶೈಲಜಾ ಅವರು ಸೆಲೆಬ್ರಿಟಿಯಂತೆ ಪ್ರಸಿದ್ಧಿ ಪಡೆದಿದ್ದರು. ಕಳೆದ ವರ್ಷ ‘ವೈರಸ್’ ಎನ್ನುವ ಚಲನಚಿತ್ರ ಬಿಡುಗಡೆಯಾಗಿತ್ತು. ಕೊರೊನಾಗಿಂತಲೂ ಪ್ರಾಣಘಾತಕವಾದ ನಿಫಾ ಎನ್ನುವ ವೈರಸ್‌ನ್ನು 2018ರಲ್ಲಿ ಶೈಲಜಾ ಅವರು ನಿಭಾಯಿಸಿದ್ದು ಈ ಚಲನಚಿತ್ರಕ್ಕೆ ಸ್ಫೂರ್ತಿಯಾಗಿತ್ತು. (ಶೈಲಜಾ ಅವರ ಪಾತ್ರ ಕೊಂಚ ಚಿಂತಾಕ್ರಾಂತಳಾಗಿರುವಂತೆ ಮೂಡಿಬಂದಿದ್ದನ್ನು ಅವರು ಚಿತ್ರದಲ್ಲಿ ಗಮನಿಸಿದ್ದರು. ಆದರೆ ವಾಸ್ತವದಲ್ಲಿ ಶೈಲಜಾ ತಮ್ಮ ದುಗುಡವನ್ನು ತೋರಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಅದಾಗಿತ್ತು ಎಂದು ಅವರು ಹೇಳುತ್ತಾರೆ). ಶೈಲಜಾ ಅವರು ಮುಂದಾಲೋಚನೆಯಿಂದ ಕಾರ್ಯೊನ್ಮುಖರಾಗಿದ್ದು ಅಷ್ಟೇ ಅಲ್ಲದೆ, ವೈರಾಣು ಹರಡಿದ ಹಳ್ಳಿಗಳಿಗೆ ಸ್ವತಃ ತಾವೇ ಭೇಟಿ ನೀಡಿದ್ದು ಅವರನ್ನು ಪ್ರಶಂಸಿಸುವಂತೆ ಮಾಡಿತ್ತು.

ಈ ವೈರಾಣು ಹೇಗೆ ಹರುಡುತ್ತಿದೆ ಎನ್ನುವುದರ ಸರಿಯಾದ ತಿಳಿವಳಿಕೆ ಇಲ್ಲದ ಹಳ್ಳಿಯ ಜನರು ಭಯಭೀತರಾಗಿ, ಊರು ಬಿಟ್ಟು ಹೋಗಲು ತಯಾರಾಗಿದ್ದರು. “ನಮ್ಮ ಡಾಕ್ಟರ್‌ಗಳ ಜೊತೆ ನಾನು ಕೂಡಲೆ ಅಲ್ಲಿಗೆ ತೆರಳಿ, ಪಂಚಾಯಿತಿ ಕಛೇರಿಯಲ್ಲಿ ಸಭೆಯನ್ನು ಮಾಡಿ, ನೀವು ಊರು ಬಿಡುವ ಯಾವ ಅಗತ್ಯವು ಇಲ್ಲ, ಈ ವೈರಾಣು ಕೇವಲ ಮನುಷ್ಯರ ನೇರ ಸಂಪರ್ಕದಿಂದ ಹರಡುತ್ತದೆ ಎಂದು ನಾನು ಅವರಿಗೆ ವಿವರಿಸಿದೆ.” ಮತ್ತು “ಕೆಮ್ಮುತ್ತಿರುವ ವ್ಯಕ್ತಿಯಿಂದ ನೀವು ಒಂದು ಮೀಟರ್‌ನಷ್ಟು ಅಂತರ ಕಾಯ್ದುಕೊಂಡರೆ, ಇದು ಹರಡುವುದಿಲ್ಲ ಎಂದು ನಾವು ವಿವರಿಸಿದಾಗ ಜನರು ಶಾಂತವಾಗಿ, ಅಲ್ಲೇ ಉಳಿದರು” ಎಂದು ಶೈಲಜಾ ಹೇಳುತ್ತಾರೆ.

ಶೈಲಜಾ ಅವರೇ ಹೇಳುವಂತೆ ನಿಫಾ ವೈರಾಣುವನ್ನು ನಿಭಾಯಿಸಿದ ಅವರ ಅನುಭವ ಕೋವಿಡ್-19ನ್ನು ತಡೆಗಟ್ಟಲು ಅವರನ್ನು ಅಣಿಗೊಳಿಸಿತ್ತು.  ಯಾವ ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ಇಲ್ಲವೊ ಅಥವಾ ಲಸಿಕೆ ಇಲ್ಲವೊ, ಅಂತಹ ರೋಗವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆನ್ನುವ ಪಾಠವನ್ನು ನಿಫಾ ಅವರಿಗೆ ಕಲಿಸಿತ್ತು. ಒಂದರ್ಥದಲ್ಲಿ ಈ ಎರಡೂ ವೈರಾಣುಗಳ ವಿರುದ್ಧ ಹೋರಾಡಲೆಂದೆ ತಮ್ಮ ಇಡಿ ಜೀವನದುದ್ದಕ್ಕೂ ಅವರು ತಯಾರಿ ನಡೆಸಿದಂತಿದೆ.

ಶೈಲಜಾ ಅವರು ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ’ (ಮಾರ್ಕ್ಸಿಸ್ಟ್) ಸದಸ್ಯರು. ಅವರು ಹುಟ್ಟಿದ ವರ್ಷ 1957ರಿಂದಲೇ ಈ ಪಕ್ಷ ಕೇರಳ ಸರಕಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ (1964ರಲ್ಲಿ ಮುರಿಯುವುದಕ್ಕೂ ಮುನ್ನ ಇದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಭಾಗವಾಗಿತ್ತು). ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರು ಶೈಲಜಾ. ಅವರ ಅಜ್ಜಿ ಅಸ್ಪೃಶ್ಯತೆಯ ವಿರುದ್ಧ ದನಿ ಎತ್ತಿದವರು. ಇಂತಹ ಹಿನ್ನೆಲೆಯಿಂದ ಬಂದ ಇವರು ‘ಕೇರಳಾ ಮಾದರಿ’ ಎಂಬ ವಿದ್ಯಮಾನವು ತಳದಿಂದ ರೂಪುಗೊಳ್ಳುತ್ತ ಬಂದಿರುವುದನ್ನು ನೋಡಿದ್ದಾರೆ. ನಾವು ಅವರನ್ನು ಮಾತನಾಡಿಸಿದಾಗ, ಈ ಕುರಿತು ಮಾತನಾಡಲು ಅವರು ಬಯಸುತ್ತಾರೆ.

ಕೇರಳಾ ಮಾದರಿಯ ತಳಪಾಯಗಳೆಂದರೆ ಭೂಸುಧಾರಣೆ -ಶಾಸನದ ಮೂಲಕ ಒಂದು ಕುಟುಂಬ ಎಷ್ಟು ಜಮೀನನ್ನು ಹೊಂದಬೇಕೆಂಬ ಮಿತಿಯನ್ನಿಟ್ಟು ಹಾಗೂ ಉಳುವವನಿಗೆ ಜಮೀನನ್ನು ಹೆಚ್ಚಿಸಿದ್ದು, ವಿಕೇಂದ್ರಿಕೃತ ಆರೋಗ್ಯ ವ್ಯವಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆ. ಪ್ರತಿ ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಹಾಗೂ ಆಡಳಿತದ ಪ್ರತಿ ಹಂತಗಳಲ್ಲಿ ಆಸ್ಪತ್ರೆಗಳ ಜೊತೆ 10 ವೈದ್ಯಕೀಯ ಕಾಲೇಜುಗಳಿವೆ.

ಮಹಾರಾಷ್ಟ್ರದ ಪುಣೆಯಲ್ಲಿರುವ ಎಂ.ಪಿ.ಕಾರಿಯಪ್ಪ ಅವರು ಸಾರ್ವಜನಿಕ ಆರೋಗ್ಯದ ತಜ್ಞರು. ಅವರ ಪ್ರಕಾರ ಆರೋಗ್ಯ ವ್ಯವಸ್ಥೆಯನ್ನು ಇನ್ನುಳಿದ ರಾಜ್ಯಗಳಲ್ಲಿಯೂ ಕಾಣಬಹುದು. ಆದರೆ ಇಲ್ಲಿಯ ಜನರು ಪ್ರಾಥಮಿಕ ಆರೋಗ್ಯ ವ್ಯವಸ್ಥೆಯಲ್ಲಿ ತೊಡಗಿಕೊಂಡಷ್ಟು ಇನ್ನಾವ ಪ್ರದೇಶದಲ್ಲಿ ತೊಡಗಿಕೊಂಡಿದ್ದು ಕಂಡುಬರುವುದಿಲ್ಲ. ಭಾರತದ ಉಳಿದ ರಾಜ್ಯಗಳಿಗೆ ಹೋಲಿಸಿದರೆ, ಈ ರಾಜ್ಯದಲ್ಲಿ ಸರಾಸರಿ ಮನುಷ್ಯರ ಆಯುಷ್ಯ ಹೆಚ್ಚಿನದು ಹಾಗೂ ಇಲ್ಲಿ ಶಿಶು ಮರಣದ ಪ್ರಮಾಣವೂ ಕಡಿಮೆ ಕಂಡುಬರುತ್ತದೆ; ಮತ್ತೆ ಸಾಕ್ಷರತೆ ಹೆಚ್ಚಿರುವ ರಾಜ್ಯವಿದು. “ಈ ರಾಜ್ಯದಲ್ಲಿ ಶಿಕ್ಷಣವು ವ್ಯಾಪಕವಾಗಿ ಲಭ್ಯವಾಗುತ್ತಿರುವುದರಿಂದ, ಮನುಷ್ಯರ ಉತ್ತಮ ಬದುಕಿಗೆ ಆರೋಗ್ಯವು ಬಹಳ ಮುಖ್ಯ ಎನ್ನುವುದು ಇಲ್ಲಿಯ ಜನರಿಗೆ ಸ್ಪಷ್ಟವಾಗಿ ತಿಳಿದಿದೆ” ಎಂದು ಕಾರಿಯಪ್ಪ ಹೇಳುತ್ತಾರೆ.

“ಕೃಷಿ ಹೊರಾಟ ಹಾಗೂ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ನಾನು ನನ್ನ ಅಜ್ಜಿಯಿಂದ ಕೇಳಿದ್ದೇನೆ. ಅವಳು ಒಬ್ಬ ಒಳ್ಳೆ ಕತೆಗಾರ್ತಿ” ಎಂದು ಶೈಲಜಾ ಹೇಳುತ್ತಾರೆ. ಲಾಕ್‌ಡೌನ್ ಅಂತಹ ತುರ್ತುಕ್ರಮಗಳನ್ನು, ಕೇಂದ್ರ ಸರಕಾರ ಸಂರಕ್ಷಣೆಯ ಉಪಕ್ರಮಗಳಾಗಿ ಕೈಗೊಂಡಿದ್ದಾಗಿಯೂ, ಪ್ರತಿ ರಾಜ್ಯವು ತನ್ನದೇ ಆದ ಆರೋಗ್ಯ ನೀತಿಯನ್ನು ರೂಪಿಸಿದೆ. ಕೇರಳಾ ಮಾದರಿ ಎನ್ನುವುದೊಂದು ಇಲ್ಲದಿದ್ದರೆ, ಕೇರಳ ಸರಕಾರ ಕೋವಿಡ್-19ಗೆ ಈ ರೀತಿ ಸ್ಪಂದಿಸಿಲು ಸಾಧ್ಯವಾಗುತ್ತಿರಲಿಲ್ಲ ಎಂದು ಶೈಲಜಾ ಅಭಿಪ್ರಾಯ ಪಡುತ್ತಾರೆ.

ಇದಾದ ನಂತರ, ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ದಿನಗಳೆದಂತೆ ಸವಕಳಿಯಾಗುತ್ತಿರುವ ಗುಣಲಕ್ಷಣ ತೋರಲಾರಂಭಿಸಿದವು. 2016ರಲ್ಲಿ ಶೈಲಜಾ ಅವರ ಪಕ್ಷ ಅಧಿಕಾರಕ್ಕೆ ಬಂದಾಗ, ಅವುಗಳನ್ನು ಆಧುನೀಕರಿಸಿ ಜೀರ್ಣೋದ್ಧಾರ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕೊರೊನಾಪೂರ್ವ ಕಾಲದಲ್ಲಿಯೇ ಭಾರತದಲ್ಲಿ ದೊಡ್ಡ ಸಮಸ್ಯೆಯಾದ ಉಸಿರಾಟಕ್ಕೆ ಸಂಬಂಧಿಸಿದ ರೋಗಗಳ ಸಲುವಾಗಿ ದವಾಖಾನೆಗಳನ್ನು ತೆರೆದು, ರೋಗಿಗಳನ್ನು ನೋಂದಾಯಿಸುವ ಪದ್ಧತಿ ಜಾರಿಗೊಳಿಸಲಾಯಿತು. “ಕೋವಿಡ್-19ಗೆ ತುತ್ತಾಗುವುದನ್ನು ನಾವು ಗುರುತಿಸಿ, ಸಮುದಾಯದ ಹರಡುವಿಕೆಯನ್ನು ಗಮನಿಸುವಂತಾಯಿತು. ಇದು ನಮಗೆ ಬಹಳ ಸಹಕಾರಿಯಾಯಿತು” ಎಂದು ಶೈಲಜಾ ಹೇಳುತ್ತಾರೆ.

ಕೊರೊನಾ ಪ್ರಾರಂಭವಾದಾಗ ಪ್ರತೀ ಜಿಲ್ಲೆ ತನ್ನ ಎರಡು ಆಸ್ಪತ್ರೆಗಳನ್ನು, ಹಾಗೆಯೇ ಪ್ರತಿಯೊಂದು ವೈದ್ಯಕೀಯ ಕಾಲೇಜು 500 ಹಾಸಿಗೆಗಳನ್ನು ಕೋವಿಡ್-19ಗಾಗಿಯೆ ಮೀಸಲಿಡಲು ಕೇಳಿಕೊಳ್ಳಲಾಯಿತು. ಪ್ರತ್ಯೇಕವಾಗಿ ಆಗಮಿಸುವ, ನಿರ್ಗಮಿಸುವ ದ್ವಾರಗಳನ್ನು ನಿರ್ಮಿಸಲಾಯಿತು. ರೋಗಲಕ್ಷಣ ಕಂಡುಹಿಡಿಯುವ ಪರೀಕ್ಷೆಗಳ ಪೂರೈಕೆಯು ಕಡಿಮೆಯಾಗಿತ್ತು, ವಿಶೇಷವಾಗಿ ರೋಗವು ಬಲಿಷ್ಟ ರಾಷ್ಟ್ರಗಳನ್ನು ಬೆನ್ನುಹತ್ತಿದಾಗ. ಆದ ಕಾರಣ ಇಂತಹ ಪರೀಕ್ಷೆಗಳನ್ನು ರೋಗಲಕ್ಷಣ ಹೊಂದಿದವರಿಗೆ, ಅವರ ಸಂಪರ್ಕದಲ್ಲಿರುವವರಿಗೆ, ರೋಗಲಕ್ಷಣವಿರದ ಆಯ್ದ ಕೆಲವರಿಗೆ, ಆರೋಗ್ಯ ಸೇವಕರು, ಕಾರ್ಯಕರ್ತರು ಹಾಗೂ ಪೊಲೀಸ್ ಅಂತಹ ಸೇವೆಯೆಲ್ಲಿರುವವರಿಗೆ ಮೀಸಲಿಡಲಾಯಿತು.

ಕೇರಳದಲ್ಲಿ ರೋಗ ಪರೀಕ್ಷೆಯ ಫಲಿತಾಂಶವನ್ನು ಕೇವಲ 48ಗಂಟೆಗಳಲ್ಲಿ ಪಡೆಯಬಹುದೆಂದು ಶೈಲಜಾ ಅವರು ಹೇಳುತ್ತಾರೆ. ತಾಂತ್ರಿಕವಾಗಿ ಸದೃಢವಾದ ರಾಷ್ಟ್ರಗಳಾದ ಗಲ್ಫ್ ರಾಷ್ಟ್ರ, ಅಮೆರಿಕಾ ಹಾಗೂ ಇಂಗ್ಲೆಂಡ್‌ಗಳಲ್ಲಿ ಫಲಿತಾಂಶಗಳಿಗೆ ಏಳು ದಿವಸ ಕಾಯಬೇಕು ಎಂದು ಅವರು ಹೇಳುತ್ತಾರೆ. ಅಲ್ಲಿಯ ಆಗು-ಹೋಗುಗಳ ಬಗ್ಗೆ ತಿರ್ಮಾನ ಕೊಡಲು ನಾನು ಇಚ್ಚಿಸುವುದಿಲ್ಲವೆಂದು ಹೇಳುವ ಶೈಲಜಾ ಆ ರಾಷ್ಟ್ರಗಳಲ್ಲಾಗುತ್ತಿರುವ ಸಾವಿನ ಸಂಖ್ಯೆಯಿಂದ ದಿಗ್ಭçಮೆಗೊಂಡಿದ್ದಾರೆ. ಪರೀಕ್ಷೆಗೊಳಪಡಿಸುವುದು, ಕ್ವಾರಂಟೀನ್ ಮಾಡುವುದು ಹಾಗೂ ಆಸ್ಪತ್ರೆಗಳ ಮೇಲೆ ನಿಗಾ ಇಡುವುದು ಬಹಳ ಮುಖ್ಯವೆಂದು ಅಭಿಪ್ರಾಯ ಪಡುತ್ತ, ಈ ದೇಶಗಳಲ್ಲಿರುವ ಮಲಯಾಳಿಗಳು ಇವರಿಗೆ ದೂರವಾಣಿ ಮುಖಾಂತರ ತಿಳಿಸಿದ ಹಾಗೆ ಈ ರಾಷ್ಟ್ರಗಳಲ್ಲಿ ಜನರಿಗೆ ಇವು ದೊರಕುತ್ತಿಲ್ಲವೆಂದು ಶೈಲಜ ಹೇಳುತ್ತಾರೆ.

ಲಾಕ್‌ಡೌನ್ ನಿಯಮಾನುಸಾರ ಪೂಜೆ, ಪ್ರಾರ್ಥನೆ ಸಲ್ಲಿಸುವ ಜಾಗಗಳನ್ನು ಮುಚ್ಚಲಾಯಿತು. ಭಾರತದ ಕೆಲವು ರಾಜ್ಯಗಳಲ್ಲಿ ಇದನ್ನು ಪ್ರತಿಭಟಿಸಿದರೆ, ಕೇರಳದಲ್ಲಿ ಇಂತಹ ಪ್ರತಿಭಟನೆ ಕಾಣಲಿಲ್ಲ. ಬಹುಶಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಥಳೀಯ ಧರ್ಮಗುರುಗಳ ಜೊತೆ ಈ ಕುರಿತು ಸಮಾಲೋಚನೆ ನಡೆಸಿದ್ದು ಇದಕ್ಕೆ ಒಂದು ಕಾರಣವಿರಬಹುದು. ಶೈಲಜಾ ಅವರು ಹೇಳುವಂತೆ ಇಲ್ಲಿಯ ಹೆಚ್ಚಿನ ಸಾಕ್ಷರತೆ ಪ್ರಮಾಣ ಇನ್ನೊಂದು ಕಾರಣ: “ತಾವು ಮನೆಯಲ್ಲಿಯೇ ಏಕೆ ಇರಬೇಕು ಎನ್ನುವುದನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ. ನೀವು ಅವರಿಗೆ ವಿವರಿಸಿ ತಿಳಿಹೇಳಬಹುದು.”

ಮೇ 17ರಂದು ಲಾಕ್‌ಡೌನ್‌ನ್ನು ತೆರವುಗೊಳಿಸುವುದಾಗಿ ಭಾರತ ಸರಕಾರ ಯೋಜಿಸಿತ್ತು (ಈ ದಿನಾಂಕ ಎರಡು ಬಾರಿ ಮುಂದೂಡಲ್ಪಟ್ಟಿದೆ). ಶೈಲಜಾ ಅವರು ಊಹಿಸುವಂತೆ ಲಾಕ್‌ಡೌನ್ ತೆರವುಗೊಳಿಸಿದ ನಂತರ ವೈರಾಣುವಿಗೆ ತುತ್ತಾದ ಗಲ್ಫ್ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಮಲಯಾಳಿಗಳು ಕೇರಳಕ್ಕೆ ಮರಳಿ ಬರಲಿದ್ದಾರೆ. “ಇದೊಂದು ದೊಡ್ಡ ಸವಾಲು. ಆದರೆ ಅದಕ್ಕೆ ನಾವು ಸನ್ನದ್ಧರಾಗುತ್ತಿದ್ದೇವೆ” ಎಂದು ಶೈಲಜಾ ಹೇಳುತ್ತಾರೆ.

ಪ್ಲಾನ್ ‘ಎ’, ‘ಬಿ’ ಹಾಗೂ ‘ಸಿ’ ಎಂಬ ಯೋಜನೆ ಇದೆ. ಅತಿ ತುರ್ತು, ಕಟ್ಟಕಡೆಯ ‘ಸಿ’ ಪ್ಲಾನ್ ಪ್ರಕಾರ ಹೊಟೆಲ್, ವಸತಿ ನಿಲಯ ಹಾಗೂ ಕಾನ್ಫರನ್ಸ್ ಕೊಠಡಿಗಳಲ್ಲಿ 165,000 ಹಾಸಿಗೆಗಳಿಗೆ ವಿನಂತಿ ಮಾಡಿಕೊಳ್ಳಲಾಗಿದೆ. 5000ಕ್ಕಿಂತಲೂ ಹೆಚ್ಚಿನ ವೆಂಟಿಲೇರ‍್ಸ್ ಬೇಕಾದರೆ ಸ್ವಲ್ಪ ಪ್ರಯಾಸ ಪಡಬೇಕಾಗಬಹುದು. ಏನೇ ಆಗಲಿ ಹೆಚ್ಚಿನ ವೆಂಟಿಲೆಟರ್‌ಗಳ ಪೂರೈಕೆಗೆ ಬೇಡಿಕೆ ಇಟ್ಟಿದೆ. ಆದರೆ ನಿಜವಾಗಿಯೂ ನಮಗೆ ಮಿತಿಯಾಗುವ ಅಂಶವೆಂದರೆ ಮನುಷ್ಯರ ಶಕ್ತಿ (ಮ್ಯಾನ್ ಪವರ್). ವಿಶೇಷವಾಗಿ ಸಂಪರ್ಕಗಳನ್ನು ಗುರುತಿಸುವಿಕೆಯಲ್ಲಿ ಈ ತೊಂದರೆ ಉಂಟಾಗಬಹುದು. “ನಾವು ಶಾಲಾ ಶಿಕ್ಷಕರಿಗೆ ಈ ನಿಟ್ಟಿನಲ್ಲಿ ತರಬೇತಿ ಕೊಡುತ್ತಿದ್ದೇವೆ” ಎಂದು ಶೈಲಜಾ ಹೇಳುತ್ತಾರೆ.

ಕೊರೊನಾದ ಎರಡನೆ ಅಲೆ ಎನ್ನುವುದೇನಾದರು ಇದ್ದು, ಅದು ಮುಕ್ತಾಯಗೊಂಡರೆ ಈ ಶಿಕ್ಷಕರು ತಮ್ಮ ಶಾಲೆಗೆ ಮರಳುತ್ತಾರೆ. ಶೈಲಜಾ ಅವರು ಕೂಡಾ ಮರಳಲು ಇಚ್ಚಿಸುತ್ತಾರೆ. ಏಕೆಂದರೆ ಅವರ ಮಂತ್ರಿಸ್ಥಾನದ ಅವಧಿ ಇನ್ನು ಒಂದು ವರ್ಷದಲ್ಲಿ ಮುಗಿದು, ರಾಜ್ಯ ಸರಕಾರ ಚುನಾವಣೆಗೆ ಹೋಗುತ್ತದೆ. ಶೈಲಜಾ ಅವರ ಅಭಿಪ್ರಾಯದಂತೆ ಕೋವಿಡ್-19 ಇಷ್ಟು ಬೇಗ ಕಡಿಮೆ ಆಗುವ ಯಾವ ಲಕ್ಷಣಗಳು ಕಾಣುವುದಿಲ್ಲ. ಈ ಕುರಿತು ತಮ್ಮ ನಂತರ ಬರುವ ಉತ್ತರಾಧಿಕಾರಿಗೆ ತಮ್ಮ ವೃತ್ತಿಯ ರಹಸ್ಯವನ್ನು ಹಂಚಿಕೊಳ್ಳುವ ಬಗ್ಗೆ ಕೇಳಿದಾಗ, ಅವರು ನಗುತ್ತಿದ್ದರು, ಮತ್ತೊಬ್ಬರಿಗೆ ಹರಡುವಂತಹ ನಗು ಅದು. ಏಕೆಂದರೆ ಈ ರೀತಿಯ ರಹಸ್ಯ ರಹಸ್ಯವೇ ಅಲ್ಲ: “ಸಮರ್ಪಕವಾದ ಯೋಜನೆ ಇರಬೇಕು”. 

ಮೂಲ: ದ ಗಾರ್ಡಿಯನ್

Leave a Reply

Your email address will not be published.