ಸರ್ಕಾರಿ ಆಸ್ಪತ್ರೆ ಹರಾಜು ಹಾಕಿ

ಸರ್ಕಾರಿ ಆಸ್ಪತ್ರೆಗಳನ್ನು ನಡೆಸುವ ಹಕ್ಕನ್ನು ಪ್ರತಿ ವರ್ಷ ಹರಾಜು ಹಾಕಿ ಸರ್ಕಾರಿ-ಖಾಸಗಿ ವೈದ್ಯರಿಗೆ ನಡೆಸಲು ಬಿಡಬಾರದೇಕೆ?

ಸರ್ಕಾರಿ ಆಸ್ಪತ್ರೆ ಹರಾಜು ಹಾಕಿ

ಪ್ರತಿ ವರ್ಷ ಕರ್ನಾಟಕದ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ನಡೆಸಲು ರೂ.10,000 ಕೋಟಿಗೂ ಮಿಗಿಲಾಗಿ ನಾವು ಖರ್ಚು ಮಾಡುತ್ತೇವೆ. ಆದರೂ ಈ ಸರ್ಕಾರಿ ಆಸ್ಪತ್ರೆಗಳಿಂದ ಹಾಗೂ ಆರೋಗ್ಯ ಕೇಂದ್ರಗಳಿಂದ ಜನರಿಗೆ ಸಿಗುತ್ತಿರುವ ಸೌಲಭ್ಯಗಳು ಅಷ್ಟರಲ್ಲಿಯೇ ಇವೆ. ಜನಸಾಮಾನ್ಯರು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳ ವೈದ್ಯರನ್ನೇ ಬಹುತೇಕ ನೆಚ್ಚಿಕೊಂಡಿದ್ದಾರೆ. ಔಷಧಿಗಂತೂ ಬಹುತೇಕ ಖಾಸಗಿ ಪೂರೈಕೆಯ ಅಂಗಡಿಗಳನ್ನೇ ನಮ್ಮವರು ನಂಬಿದ್ದಾರೆ. ಹಾಗಾದರೆ, ನಾವು ಖರ್ಚು ಮಾಡುತ್ತಿರುವ 10,000 ಕೋಟಿ ರೂ. ಎಲ್ಲಿಗೆ ಹೋಗುತ್ತಿದೆ? ಯಾರ ಜೇಬಿಗೆ ಹೋಗುತ್ತಿದೆ? ಯಾರ ತೆವಲಿಗೆ ನಾವು ಈ ಪಾಟಿ ಖರ್ಚು ಮಾಡುತ್ತಿದ್ದೇವೆ?

  • ರಾಜ್ಯದ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಘಟಕಗಳಲ್ಲಿ ಎಂಬಿಬಿಎಸ್ ವೈದ್ಯರಿಲ್ಲ. ವೈದ್ಯರಿಲ್ಲದೆಡೆ ಪೂರಕ ಸಿಬ್ಬಂದಿಯಿದ್ದರೆ, ವೈದ್ಯರಿರುವಲ್ಲಿ ಸಿಬ್ಬಂದಿ ಇರುವುದಿಲ್ಲ. ಹಾಗಾಗಿ ಸಾಮಾನ್ಯ ಖಾಯಿಲೆಗಳಿಗೂ ಜನ ಖಾಸಗಿ ವೈದ್ಯರ ಬಳಿ ಹೋಗುವುದು ತಪ್ಪಿಲ್ಲ. ಆದರೂ ಸರ್ಕಾರ ಈ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಘಟಕಗಳ ಮೇಲೆ ಮಾಡುತ್ತಿರುವ ಖರ್ಚು ತಪ್ಪಿಲ್ಲ.
  • ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಬೇಕಿರುವ ಸ್ಪೆಷಲಿಸ್ಟ್ ವೈದ್ಯರಿಲ್ಲ. ವೈದ್ಯರಿದ್ದರೂ ಬೇಕಿರುವ ಮೂಲಭೂತ ಸೌಕರ್ಯವೆಲ್ಲವೂ ಇಲ್ಲ. ಡಯಾಗ್ನೋಸ್ಟಿಕ್ ಕೇಂದ್ರವಂತೂ ಕೆಲಸ ಮಾಡಿದ್ದೇ ಇಲ್ಲ. ಈ ಕೇಂದ್ರಗಳ ವರದಿ ಆಧರಿಸಿ ಯಾವುದೇ ರೋಗಿಯ ರೋಗ ಪತ್ತೆಹಚ್ಚುವುದು ಖಾತ್ರಿಯಿಲ್ಲ.
  • ತಿಂಗಳಿಗೊಮ್ಮೆ ಸಂಬಳ ಪಡೆಯುವ ವೈದ್ಯ ಮತ್ತು ಅರೆವೈದ್ಯ ಸಿಬ್ಬಂದಿ ಕ್ಷಮತೆಯಿಂದ ಕೆಲಸ ಮಾಡುತ್ತಿಲ್ಲ. ಸ್ಥಳೀಯ ಎಂಎಲ್‍ಎ ಏನಾದರೂ ಆಸ್ಥೆ ವಹಿಸಿ ಕೆಲಸ ಮಾಡಿಸಿದರೇ ಉಂಟು. ಇಲ್ಲದೆ ಹೋದರೆ ಈ ವೈದ್ಯರನ್ನು ಕೇಳುವವರೇ ಇಲ್ಲ. ಬಂದರೆ ಉಂಟು, ಇಲ್ಲದೇ ಇದ್ದರೆ ಇಲ್ಲ. ಅರೆವೈದ್ಯ ಪೂರಕ ಸಿಬ್ಬಂದಿಯನ್ನಂತೂ ಕೇಳುವವರೇ ಇಲ್ಲ.
  • ಈ ಆಸ್ಪತ್ರೆ ಹಾಗೂ ಆರೋಗ್ಯಕೇಂದ್ರಗಳ ಮೇಲೆ ಯಾರ ನಿಯಂತ್ರಣ ಎಂಬುದು ಸ್ಪಷ್ಟವಿಲ್ಲ. ಪ್ರಜಾಪ್ರತಿನಿಧಿಗಳು ನಿಯಂತ್ರಣ ಹೇರಬೇಕೇ ಅಥವಾ ಉನ್ನತ ಅಧಿಕಾರಿಗಳು ನಿಯಂತ್ರಣ ಮಾಡಬೇಕೇ ಎಂಬ ಸಂದಿಗ್ಧವಿದೆ. ವೈದ್ಯರು ಹಣ ಕೇಳದಿದ್ದರೂ, ಹಣ ನೀಡದೆ ಕೆಲಸಗಳು ಆಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.
  • ಸರ್ಕಾರಿ ವೈದ್ಯ ವ್ಯವಸ್ಥೆಯ ಮೇಲೆ ಸಾಮಾನ್ಯರಿಗೆ ನಂಬಿಕೆಯೇ ಹೊರಟುಹೋಗಿದೆ. ದಶಕಗಳ ಕಾಲದ ನಿಸ್ತೇಜ ವ್ಯವಸ್ಥೆಯಿಂದ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆಯೇ ಇಲ್ಲವಾದಂತಾಗಿದೆ.

ಕರ್ನಾಟಕ ಸರ್ಕಾರ ಸಾಮಾನ್ಯರಿಗೆ ಯಾವ ವೈದ್ಯಕೀಯ ಸೌಲಭ್ಯ ನೀಡಬೇಕೆನ್ನುವ ವಿಷಯದಲ್ಲಿ ಕೂಡ ಗೊಂದಲದಲ್ಲಿದೆ. ಎಸ್.ಎಂ.ಕೃಷ್ಣ ರವರು ಪ್ರಾರಂಭಿಸಿದ್ದ ‘ಯಶಸ್ವಿನಿ’ ಯೋಜನೆಯನ್ನು ಕುಮಾರಸ್ವಾಮಿ ಸರ್ಕಾರ ಕೈಬಿಟ್ಟಿದೆ. ಆದರೆ, ನರೇಂದ್ರ ಮೋದಿಯವರಆಯುಷ್ಮಾನ್ ಭಾರತ್’ ಯೋಜನೆಯನ್ನು ರಾಜಕೀಯ ಕಾರಣಗಳಿಗಾಗಿ ಪ್ರಾರಂಭ ಮಾಡಿಲ್ಲ. ಈ ಗೊಂದಲದಲ್ಲಿ ಬಡರೋಗಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ನಮ್ಮ ವೈದ್ಯಕೀಯ ವ್ಯವಸ್ಥೆಯ ರೋಗಗಳಿಗೆ ಮದ್ದಿಲ್ಲದಂತಾಗಿದೆ. ಇದನ್ನು ಹೀಗೆಯೇ ಬಿಟ್ಟರೆ ವ್ಯವಸ್ಥೆ ಇನ್ನಷ್ಟು ಜಡ್ಡುಗಟ್ಟಿ ಹೋಗಿ ಗುಣಪಡಿಸಲೇ ಆಗದಂತಾಗಬಹುದು. ವರ್ಷದಿಂದ ವರ್ಷಕ್ಕೆ ಕರ್ನಾಟಕದ 10,000 ಕೋಟಿ ರೂ. ಪೋಲಾಗುವುದು ಮುಂದುವರೆಯಬಹುದು. ಇದಕ್ಕೆ ಪರ್ಯಾಯವಾಗಿ ಈ ಸರ್ಕಾರಿ ಆಸ್ಪತ್ರೆಗಳನ್ನು ನಡೆಸುವ ಹಕ್ಕನ್ನು ಪ್ರತಿ ವರ್ಷ ಹರಾಜು ಹಾಕಿ ಖಾಸಗಿ-ಸರ್ಕಾರಿ ವೈದ್ಯರಿಗೆ ಬಿಡಬಾರದೇಕೆ? ಇದರಿಂದ ಸರ್ಕಾರಕ್ಕೆ ಸಂಬಳ-ಔಷಧಿಯ ಖರ್ಚು ಉಳಿಯುತ್ತದೆ ಹಾಗೂ ಈ ಆಸ್ಪತ್ರೆಗಳನ್ನು ನಡೆಸುವ ಹರಾಜಿನಿಂದ ಆದಾಯವೂ ಬರುತ್ತದೆ.

ಬಡವರಿಗೆ ಹೊರೆಯಾಗದಂತೆ ಪ್ರತಿ ಬಿಪಿಎಲ್ ಕಾರ್ಡುದಾರರಿಗೆ ವರ್ಷಕ್ಕೆ ರೂ.1,000 ಆರೋಗ್ಯಭತ್ಯೆ ನೀಡಿದರಾಯಿತು. ಇದರಿಂದ ಅವರು ಜ್ವರ, ಕೆಮ್ಮು, ನೆಗಡಿಯಂತಹ ಸಾಮಾನ್ಯ ಖಾಯಿಲೆಗಳಿಗೆÀ ಹಣ ತೆತ್ತು ಗುಣಪಡಿಸಿಕೊಳ್ಳುತ್ತಾರೆ. ಸರ್ಜರಿ ಬೇಕಾದ ಅಥವಾ ಬೇರಾವುದೇ ದೊಡ್ಡ ಖಾಯಿಲೆಗೆ ಹೇಗಿದ್ದರೂ ಯಶಸ್ವಿನಿ ಅಥವಾ ಆಯುಷ್ಮಾನ್ ಭಾರತ್ ಯೋಜನೆಯ ರಕ್ಷಣೆ ಇದ್ದೇ ಇದೆ. ಆಲೋಚನೆ ಮಾಡಿ.

Leave a Reply

Your email address will not be published.