ಆರ್ ಎಸ್ ಎಸ್ ಎಂಬ ಸಂಸ್ಥೆ ಅಸ್ತಿತ್ವದಲ್ಲಿ ಇರುವುದೇ ತಪ್ಪು!

ಅಸಮಾನತೆಯ, ಶ್ರೇಣೀಕರಣದ ಪ್ರಣಾಳಿಕೆಯ ಪ್ರತಿನಿಧಿಯಾಗಿ ಆರ್ ಎಸ್ ಎಸ್ ಸಂಸ್ಥೆಯ ಇರುವಿಕೆಯೇ ತಪ್ಪು. ಈ ವ್ಯವಸ್ಥೆಯ ಅಮಾನವೀಯ, ರೂಕ್ಷತನವನ್ನು ಪ್ರತಿನಿಧಿಸುವ ಸಂಸ್ಥೆಯನ್ನು ‘ಸಂಸ್ಥೆ ಸರಿಯಿದೆ, ಆದರೆ ಅದರ ಕಾರ್ಯಾಚರಣೆ ತಪ್ಪಾಗಿದೆ’ ಎಂದು ಹೇಳುವುದು ಹೇಗೆ?

-ಡಾ.ಟಿ.ಆರ್.ಚಂದ್ರಶೇಖರ

ಆರ್ ಎಸ್ ಎಸ್ ಮಾಡಿರುವ ತಪ್ಪುಗಳೇನು ಎಂಬ ವಿಷಯವನ್ನು ಚರ್ಚೆಗೆ ಇಟ್ಟಿದ್ದೀರಿ. ನಿಮ್ಮ ಪ್ರಶ್ನೆಯನ್ನು ಸೂಕ್ಷ್ಮವಾಗಿ ಕೆದಕಿದರೆ ‘ಆರ್‍ಎಸ್‍ಎಸ್ ಸರಿ, ಆದರೆ ಅದರ ಕಾರ್ಯಸೂಚಿ ಮತ್ತು ಕಾರ್ಯಾಚರಣೆ ತಪ್ಪು’ ಎಂಬ ಅದರ ಒಳಾರ್ಥ ತಿಳಿಯುತ್ತದೆ. ಆರ್ ಎಸ್ ಎಸ್ ಎಂಬ ಸಂಸ್ಥೆಯೇ ತಪ್ಪು ಏಕೆ ಎಂಬುದಕ್ಕೆ ಉತ್ತರವನ್ನು ಬೇರೆಲ್ಲೋ ಹುಡುಕಬೇಕಾಗಿಲ್ಲ. ಸಮಾಜಮುಖಿ ಪತ್ರಿಕೆಯ ಫೆಬ್ರವರಿ 2021ರ ಸಂಚಿಕೆಯಲ್ಲಿನ ‘ಜಾತೀಯತೆ (ಜಾತಿ ಪ್ರಣಾಳಿಕೆ)-ಜಾತ್ಯತಿತತೆ’’ (ಧಾರ್ಮಿಕ ಪ್ರಣಾಳಿಕೆ) ನಡುವಿನ ಸೂಕ್ಷ್ಮ ಭಿನ್ನತೆಯೇ ತಿಳಿಯದೆ ವಿಷಪೂರಿತ ಹಿಂದುತ್ವದ ಬಗ್ಗೆ ಸಾಹಿತ್ಯ ಸಂಸ್ಥೆಯೊಂದರ ಮುಖಂಡರು ಬಿಟ್ಟಿರುವ ಭೀಷಣ ಭಾಷಣ ಪ್ರವಚನ ರೀತಿಯ ಲೇಖನವನ್ನು ನೋಡಿದರೆ ಸಾಕು ಇದು ಅರ್ಥವಾಗುತ್ತದೆ.

ಹಿಂದುತ್ವ ಬೇರೆ-ಹಿಂದೂಧರ್ಮ ಬೇರೆ ಎನ್ನುವವರೂ ಇದ್ದಾರೆ. ಇಲ್ಲಿರುವ ಸತ್ಯವೆಂದರೆ ಅದು ಹಿಂದುತ್ವವಾಗಲಿ ಹಿಂದೂಧರ್ಮವಾಗಲಿ ಅದೊಂದು ಅಸಮಾನತೆಯ-ಶ್ರೇಣೀಕರಣ ಕೂಪ. ಮೂಲದಲ್ಲಿಯೇ ಇದು ಸೈದ್ಧಾಂತಿಕವಾಗಿಯೇ ಅಪದ್ಧ. ಶೂದ್ರರಿಗೆ ಮತ್ತು ಮಹಿಳೆಯರಿಗೆ ಸಮಾನ ಅಧಿಕಾರದ ಹಕ್ಕಿಲ್ಲ ಎಂದು ವೇದಾಗಮಶಾಸ್ತ್ರಪುರಾಣಗಳು, ಸ್ಮೃತಿ-ಶ್ರುತಿಗಳು ಎರಡು ಸಾವಿರ ವರ್ಷಗಳಿಂದ ಡಣಾಡಂಗುರ ಮಾಡುತ್ತಾ ಬಂದಿವೆ. ದಲಿತರು ಮತ್ತು ಆದಿವಾಸಿ ಸಮುದಾಯಗಳಿಗೆ ವರ್ಣ ವ್ಯವಸ್ಥೆಯೊಳಗೆ ಇವು ಜಾಗವನ್ನೇ ನೀಡಲಿಲ್ಲ. ಈ ಅಸಮಾನತೆಯ, ಶ್ರೇಣೀಕರಣದ ಪ್ರಣಾಳಿಕೆಯ ಪ್ರತಿನಿಧಿಯಾಗಿ ಆರ್‍ಎಸ್‍ಎಸ್ ಸಂಸ್ಥೆಯ ಇರುವಿಕೆಯೇ ತಪ್ಪು. ಈ ವ್ಯವಸ್ಥೆಯ ಅಮಾನವೀಯ, ರೂಕ್ಷತನವನ್ನು ಪ್ರತಿನಿಧಿಸುವ ಸಂಸ್ಥೆಯನ್ನು ‘ಸಂಸ್ಥೆ ಸರಿಯಿದೆ, ಆದರೆ ಅದರ ಕಾರ್ಯಾಚರಣೆ ತಪ್ಪಾಗಿದೆ’ ಎಂದು ಹೇಳುವುದು ಹೇಗೆ?

 • ಈ ಸಂಸ್ಥೆಯು ರಾಜಶಾಹಿ ಮೌಲ್ಯಗಳನ್ನು ಅತ್ಯಂತ ಗೌರವದಿಂದ ಆದರಿಸುತ್ತದೆ ಮತ್ತು ಅದನ್ನು ಒಪ್ಪಿಕೊಳ್ಳುತ್ತದೆ. ಉದಾ: ಸತಿಸಹಗಮನ ಪದ್ಧತಿಗೆ ಬೆಂಬಲ, ಮಹಿಳೆಯರಿಗೆ ದೇವಾಲಯ ಪ್ರವೇಶ ನಿಷೇಧಕ್ಕೆ ಬೆಂಬಲ. ವಿವಾಹದೊಳಗಿನ ಸಂಬಂಧದಲ್ಲಿನ ಅತ್ಯಾಚಾರವನ್ನು ಅತ್ಯಾಚಾರವೆಂದು ಪರಿಗಣಿಸುವುದಕ್ಕೆ ವಿರೋಧ, ಮಹಿಳೆಯರ ಕಾರ್ಯಕ್ಷೇತ್ರವೇನಿದ್ದರೂ ಮನೆ, ಕುಟುಂಬ, ಗಂಡ, ಮಕ್ಕಳು ಎನ್ನುವ ಪ್ರಣಾಳಿಕೆಗೆ ಬೆಂಬಲ, ಪ್ರಾಚೀನ ಸನಾತನ ವ್ಯವಸ್ಥೆಯನ್ನು ಪ್ರತಿಪಾದಿಸುವ ಅದರ ಚಿಂತನಾ ಪ್ರಣಾಳಿಕೆ, ಏಕನಾಯಕತ್ವದ ಪ್ರತಿಪಾದನೆ -ಒಂದೇ ಎರಡೇ… ಯಾವುದು ಪ್ರಾಚೀನವೋ, ಯಾವುದು ಸನಾತನವೋ- ಅವು ಎಷ್ಟೇ ಜನವಿರೋಧಿಯಾಗಿರಲಿ, ಅಮಾನವೀಯವಾಗಿರಲಿ ಅವೆಲ್ಲವೂ ಪವಿತ್ರ, ರಾಷ್ಟ್ರೀಯ. ಈ ನಂಬಿಕೆಯ ಭಾಗವಾಗೇ ಇದರ ರಾಜಶಾಹಿಯ ಮಾನ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು.
 • ವೇದಾಗಮಶಾಸ್ತ್ರಪುರಾಣ, ಸ್ಮೃತಿ-ಶೃತಿಗಳ ಬೋಧನೆಯಂತೆ ಈ ಸಂಸ್ಥೆಯಲ್ಲಿ ಮಹಿಳೆಯರಿಗೆ ಜಾಗವಿಲ್ಲ. ಇದಕ್ಕೆ ಅವರು ‘ಅದಕ್ಕಾಗಿ ಬೇರೆ ಸಂಸ್ಥೆಯಿದೆ’ ಎನ್ನುವ ಉತ್ತರ ನೀಡಬಹುದು. ಆದರೆ ಇದು ಮಹಿಳಾ ವಿರೋಧಿ ಪ್ರಣಾಳಿಕೆಯಾಗಿದೆ. ಈ ಸಂಸ್ಥೆಯ ಮಹಿಳಾ ಪರಿವಾರದ ಒಬ್ಬ ಮುಖ್ಯಸ್ಥೆಯ ಪ್ರಕಾರ ಕುಟುಂಬದ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಕೇಳುವುದು-ಪಡೆಯುವುದು ವಿಚ್ಛಿದ್ರಕಾರಿ, ಕುಟುಂಬ ಒಡೆಯುವ ಕ್ರಮ.
 • ಗುಡಿ ಸಂಸ್ಕತಿಯ ಮಹಾ ಪೋಷಕ ಸಂಸ್ಥೆಯಿದು (ಸಾವಿರಾರು ಕೋಟಿ ರೂಪಾಯಿಗಳಲ್ಲಿ ಅಯೋಧ್ಯ ಶ್ರೀರಾಮ ಗುಡಿ). ಅಂದಮೇಲೆ ಗುಡಿ ಸಂಸ್ಕತಿಯು ಪಾಲಿಸುವ ಅಸ್ಪೃಶ್ಯತೆಯನ್ನು ಇದು ಅಪ್ರತ್ಯಕ್ಷವಾಗಿ ಒಪ್ಪಿಕೊಳ್ಳುತ್ತದೆ (ಶಬರಿಮಲೆ ಅಯ್ಯಪ್ಪಸ್ವಾಮಿ ಗುಡಿಗೆ ಮಹಿಳೆ ಪ್ರವೇಶದ ಬಗೆಗಿನ ವಿವಾವಾದದಲ್ಲಿ ಇದು ಯಾರ ಪರವಾಗಿತ್ತು ಎಂಬುದನ್ನು ಪ್ರಾಸಂಗಿಕವಾಗಿ ಇಲ್ಲಿ ನೆನಪಿಸಿಕೊಳ್ಳಬಹುದು). ಗುಡಿಯ ವಾಸ್ತುವೇ ಶ್ರೇಣೀಕರಣದಿಂದ ಕೂಡಿದೆ. ಗರ್ಭಗೃಹ, ನಂತರ ಮಂಟಪ, ನಂತರ ಅರ್ಧಮಂಟಪ ಇತ್ಯಾದಿ. ವಿವಿಧ ವರ್ಣಗಳಿಗೆ ವಿವಿಧ ಹಂತದವರೆಗೆ ಇಲ್ಲಿ ಪ್ರವೇಶದ ನಿರ್ಬಂಧಗಳಿವೆ.
 • ಅನೇಕ ದಶಕಗಳ ಕಾಲ ಈ ಸಂಸ್ಥೆಯು ನಮ್ಮ ರಾಷ್ಟ್ರಧ್ವಜವನ್ನು ಒಪ್ಪಿಕೊಂಡಿರಲಿಲ್ಲ. ರಾಜಕೀಯ ಕಾರಣಕ್ಕಾಗಿ ಇಂದು ಅದು ಒಪ್ಪಿಕೊಂಡಂತೆ ಕಪಟತನವನ್ನು ಪ್ರದರ್ಶಿಸುತ್ತಿದೆ. ಈ ಸಂಸ್ಥೆಯ ಪ್ರಕಾರ ‘ಮೂರು’ ಎನ್ನುವುದು ಅಪವಿತ್ರ. ಇಂತಹ ಅನೇಕ ಮೌಢ್ಯವನ್ನು ಇದು ಪ್ರತಿಪಾದಿಸುತ್ತದೆ.
 • ನಮ್ಮ ಸಮಾಜದಲ್ಲಿ ಶೇ. 99ರಷ್ಟು ಜನರು ದೇಶ ಭಾಷೆಯವರಾಗಿದ್ದರೂ, ಈ ಸಂಸ್ಥೆ ಮತ್ತು ಈ ಸಂಸ್ಥೆಯ ಅಂಗೋಪಾಂಗಗಳೆಲ್ಲ ಶೇ. 1ಕ್ಕಿಂತ ಕಡಿಮೆ ಜನರು ನಂಬಿರುವ ಸಂಸ್ಕೃತವನ್ನು ಒಂದು ಭಾಷೆಯಾಗಿ ಪ್ರಚುರಪಡಿಸುತ್ತಿವೆ. ಸಂಸ್ಕೃತದಲ್ಲಿನ ಸಾಹಿತ್ಯದ ಅಧ್ಯಯನ ಬೇರೆ, ಸಂಸ್ಕತವನ್ನು ಒಂದು ಭಾಷೆಯಾಗಿ ಜನರ ಮೇಲೆ ಹೇರುವುದು ಬೇರೆ ಎಂಬ ಸರಳ ಸತ್ಯ ಇದಕ್ಕೆ ಅರ್ಥವಾಗಿಲ್ಲ. ಅಖಿಲ ಭಾರತಮಟ್ಟದಲ್ಲಿ ಜನಗಣತಿ 2011ರ ಪ್ರಕಾರ ಸಂಸ್ಕೃತವನ್ನು ತಾಯಿಭಾಷೆಯೆಂದು ವರದಿ ಮಾಡಿಕೊಂಡಿರುವವರ ಸಂಖ್ಯೆಯು 30000 ಮೀರಿಲ್ಲ.
 • ಈ ಸಂಸ್ಥೆಗೆ ಜನತಂತ್ರ ತತ್ವದಲ್ಲಿ ನಂಬಿಕೆಯಿಲ್ಲ ಮತ್ತು ಅದರ ತತ್ವಗಳನ್ನು ಇದು ಪಾಲಿಸುತ್ತಿಲ್ಲ. ಈ ಸಂಸ್ಥೆಯಲ್ಲಿ ಅಧಿಕೃತ ಸದಸ್ಯತ್ವ ಎಂಬುದಿಲ್ಲ. ನಾನು 1969 ರಿಂದ 1972ರವರೆಗೆ ಬಿ.ಎ. ಓದುತ್ತಿರುವಾಗ ಆರ್‍ಎಸ್‍ಎಸ್‍ನಲ್ಲಿ ಪ್ರಸಿದ್ಧರಾಗಿದ್ದ ಸು.ರಾಮಣ್ಣ ಅವರು ತುಮಕೂರು ವಿಭಾಗದ ಪ್ರಚಾರಕರಾಗಿದ್ದರು. ನಾನು ತಿಪಟೂರಿನ ಒಂದು ಅರ್‍ಎಸ್‍ಎಸ್ ಶಾಖೆಯ ಶಿಕ್ಷಕನಾಗಿದ್ದೆ. ನಂತರ 1972ರಿಂದ 1974ರವರೆಗೆ ಸು.ರಾಮಣ್ಣ ಅವರು ಮೈಸೂರು ವಿಭಾಗದ ಪ್ರಚಾರಕರಾಗಿದ್ದಾಗ ನಾನು ಎಂ.ಎ. ವಿದ್ಯಾರ್ಥಿಯಾಗಿ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿನ ಒಂದು ಶಾಖೆಯಲ್ಲಿ ಶಿಕ್ಷಕನಾಗಿದ್ದೆ. ಆದರೆ ಇದಾವುದು ಆರ್ಎಸ್‍ಎಸ್ ಕಡತಗಳಲ್ಲಿ ದಾಖಲೆಯಾಗಿರುವುದಿಲ್ಲ. ಎಲ್ಲವೂ ಮೌಖಿಕ ಸಾಹಿತ್ಯವೇ ಇಲ್ಲಿನ ದಾಖಲೆ.

ರಾಜ್ಯಮಟ್ಟದಲ್ಲಿ, ಜಿಲ್ಲಾಮಟ್ಟದಲ್ಲಿ ನಾಗರಿಕರನ್ನು ಆರ್ ಎಸ್ ಎಸ್ ನ ಪ್ರಮುಖರನ್ನಾಗಿ ನೇಮಕ ಮಾಡಲಾಗುತ್ತದೆ ವಿನಾ ಇಲ್ಲಿ ಯಾವುದೇ ಪ್ರಜಾತಂತ್ರದ ನಿಯಮಗಳಾಗಲಿ-ಜಾತಿ ಸಮೀಕರಣವಾಗಲಿ ಪಾಲನೆಯಾಗುವುದಿಲ್ಲ. ಅತ್ಯಂತ ರಹಸ್ಯಮಯವಾದ ಸಂಸ್ಥೆ ಇದು. ಈ ಸಂಸ್ಥೆಯು ನಾನೊಂದು ‘ತೆರೆದ ಪುಸ್ತಕದಂತ ಸಂಸ್ಥೆ’ ಎಂದು ಹೇಳಿಕೊಳ್ಳುತ್ತದೆ. ಈ ಸಂಸ್ಥೆಯಲ್ಲಿನ ಆಚರಣೆಗಳೆಲ್ಲವೂ ವೈದಿಕಮಯವಾಗಿವೆ.

 • ಈ ಸಂಸ್ಥೆಯ ಸರ್ವಾಧಿಕಾರಿ ಪ್ರಣಾಳಿಕೆಗೆ ಒಂದು ಒಳ್ಳೆಯ ನಿದರ್ಶನವೆಂದರೆ ನಮ್ಮ ಸಂವಿಧಾನಬದ್ಧ ಒಕ್ಕೂಟ ವ್ಯವಸ್ಥೆ ಬಗೆಗಿನ ಇದರ ಧೋರಣೆ. ಈ ಸಂಸ್ಥೆಯು ‘ಅಖಂಡತೆ’ ಬಗ್ಗೆ ಮಾತನಾಡುತ್ತದೆಯೇ ವಿನಾ ರಾಜ್ಯಗಳ, ದೇಶ ಭಾಷೆಗಳ, ತಳವರ್ಗದ ಬದುಕು-ಬವಣೆ ಬಗ್ಗೆ ರವಷ್ಟೂ ಕಾಳಜಿ ತೋರಿಸುವುದಿಲ್ಲ. ನಮ್ಮದು ಮೂಲಭೂತವಾಗಿ ಅಸಮಾನತೆಯ, ಶ್ರೇಣೀಕರಣದ, ಮಹಿಳಾ ವಿರೋಧಿ ಸಮಾಜ ಎನ್ನುವುದನ್ನು ಈ ಸಂಸ್ಥೆಯು ಒಪ್ಪಿಕೊಳ್ಳುವುದಿಲ್ಲ. ನಮ್ಮ ಸಂವಿಧಾನಬದ್ಧ ಒಕ್ಕೂಟ ವ್ಯವಸ್ಥೆ ಬಗ್ಗೆ ಇದರ ಧೋರಣೆ ಏನು ಎಂಬುದಕ್ಕೆ ಇಲ್ಲಿದೆ ಸಾಕ್ಷಿ:

        ‘Today federal form of government not only given birth
but also nourishes the feeling of separatism, in a way it refuses
to recognise the fact of one nation, and destroys it. It must
be completely uprooted, Constitution purified and unitary
form of government be established’ (ಈ ಸಂಸ್ಥೆಯ ಎರಡನೆಯ ಮುಖ್ಯಸ್ಥರಾಗಿದ್ದ ಗೋಳ್ವಾಲ್ಕರ್ ಗುರೂಜಿ ಅವರು  1961ರಲ್ಲಿ ರಾಷ್ಟ್ರೀಯ ಭಾವೈಕ್ಯತಾ ಮಂಡಳಿಗೆ ಬರೆದ ಪತ್ರದ ಒಕ್ಕಣೆ). ಈ ಪ್ರಣಾಳಿಕೆಯು one Country, one State, one Legislature, one Executive, one Language ನಿಯಮವನ್ನು ಪ್ರತಿಪಾದಿಸುತ್ತದೆ.

ಮುಂದುವರಿದು ಅವರು ಒಕ್ಕೂಟ ವ್ಯವಸ್ಥೆಯನ್ನು ಪ್ರಮುಖ ಸಂಗತಿಯನ್ನಾಗಿ ಒಳಗೊಂಡಿರುವ ಸಂವಿಧಾನದ ಬಗ್ಗೆ ನೀಡುವ ಕರೆ ಇದು: ‘The most important and effective step will be to bury deep for good all talks of federal structure of our Constitution…’ (ಬಂಚ್ ಆಫ್ ಥಾಟ್ಸ್, ಸಾಹಿತ್ಯ ಸಿಂಧು, ಬೆಂಗಳೂರು, 1966 ಮುದ್ರಣ, ಪು: 227).

‘ಸಂವಿಧಾನವನ್ನು ಬದಲಾಯಿಸಲೆಂದೇ ನಾವು ಬಂದಿರುವುದು’ ಎಂಬ ನಮ್ಮ ಸಂಸದರೊಬ್ಬರ ಮಾತಿಗೂ ‘ಆಳವಾದ ಕಮರಿಯಲ್ಲಿ ಒಕ್ಕ್ಕೂಟ ವ್ಯವಸ್ಥೆಯನ್ನು ಒಳಗೊಂಡಿರುವ ಸಂವಿಧಾನವನ್ನು ಹೂಳಬೇಕು’ ಎಂಬ ಒಕ್ಕಣೆಗೂ ನಡುವೆ ಸಂಬಂಧವಿದೆ ಎಂಬುದನ್ನು ಅರಿಯದಷ್ಟು ಮುಗ್ಧರು ನಾವಲ್ಲ. ಇದನ್ನು ಇಂದು ಸಮರ್ಥಿಸುವವರಿಗೆ ನಮ್ಮ ದೇಶದ ಕಳೆದ ಸ್ವಾತಂತ್ರ್ಯೋತ್ತರ 74 ವರ್ಷಗಳ ಒಕ್ಕೂಟ ರಾಜಕೀಯ ವ್ಯವಸ್ಥೆಯ ಚರಿತ್ರೆಯ ಅರಿವಿಲ್ಲವೆಂದು ಹೇಳಬೇಕಾಗಿದೆ. ಗುರೂಜಿ ಅವರು ಹೇಳಿದಂತೆ ಒಕ್ಕೂಟ ವ್ಯವಸ್ಥೆಯು ಪ್ರತ್ಯೇಕತಾವಾದಕ್ಕೆ ಇಂಬು ಕೊಟ್ಟಿಲ್ಲ. ನಮ್ಮ ಪವಿತ್ರ ಸಂವಿಧಾನದನ್ನು ಇವರು ಆಳವಾದ ಕಮರಿಯಲ್ಲಿ ಹೂಳುವ ಮಾತನಾಡುತ್ತಿದ್ದಾರೆ. ಇದಾವ ಭಾಷೆ, ಸ್ವಾಮಿ!

 • ಡಾ.ಬಿ.ಆರ್.ಅಂಬೇಡ್ಕರ್ ಪ್ರಣೀತ ಭಾರತೀಯ ಸಂವಿಧಾನವನ್ನು ಈ ಸಂಸ್ಥೆ ಮತ್ತು ಇದರ ಅನುಯಾಯಿಗಳು ಇನ್ನಿಲ್ಲದಂತೆ ಅವಹೇಳನ ಮಾಡುತ್ತಿದ್ದಾರೆ. ಭಾರತ ಸರ್ಕಾರದ ಓರ್ವ ಮಂತ್ರಿಯು 2019ರ ಸಂವಿಧಾನ ದಿವಸ್ ಸಂದರ್ಭದಲ್ಲಿ ಆಡಿರುವ ಮಾತುಗಳು ಇವು:

          ‘The ancient republics or janapadas such as Vaishali,
Kapilavastu, Maithili and their constitution dates back to
600 BC. These forms the foundation for the Constitutional
democracy that India is today…’ (ರವಿ ಶಂಕರ್ ಪ್ರಸಾದ್, ಕೇಂದ್ರ ಸಚಿವ, ‘ಇಂಫಾರ್‍ಟೆನ್ಸ್ ಆಫ್ ಸಿಟಿಜನ್ಸ್ ಡ್ಯೂಟೀಸ್’ ದಿ ಇಂಡಿಯನ್ ಎಕ್ಸ್‍ಪ್ರೆಸ್. 26.11.2019). ಇದು ಯಾವ ರೀತಿಯ ಸಂಶೋಧನೆಯೋ ಅರ್ಥವಾಗುವುದಿಲ್ಲ. ನಮ್ಮ ಸಂವಿಧಾನಕ್ಕೆ ಆಧಾರ ಯಾವುದು ಎಂಬುದ ಬಗ್ಗೆ ನಮ್ಮ ಆರ್‍ಎಸ್‍ಎಸ್ ಅನುಯಾಯಿ ಶಾಸನಕರ್ತರ ತಿಳಿವಳಿಕೆ ಇದು.

 • ಈ ಸಂಸ್ಥೆಯ ಪ್ರಚಂಡ ಅನುಯಾಯಿ ನ್ಯಾಯಮೂರ್ತಿ ಡಾ.ಎಂ.ರಾಮ ಜೋಯಿಸ್ ಅವರು ಮಾನವ ಹಕ್ಕುಗಳು ನಮ್ಮ ಭಾರತೀಯ ಪರಂಪರೆಯಲ್ಲ ಎಂದು ಹೇಳಿ ‘ಸೇವೆ ಮಾಡುವುದು ಮಾತ್ರ ಜನರ ಹಕ್ಕು’ ಚಾತುರ್ವರ್ಣ ಸಿದ್ಧಾಂತವನ್ನು ಯಾವ ಬಿಡೆಯಿಲ್ಲದೆ ಪ್ರತಿಪಾದಿಸುತ್ತಾರೆ. ಇವರ ಮಾತುಗಳು:

          ‘Therefore, instead of making rights as foundation of
social life and establishing a right based society, the ancient
philosophers of this land preferred to establish a duty-based
society where right given to an individual is a right to perform
duty’. (ದುರ್ಗಾದಾಸ್ ಬಸು ಸ್ಮಾರಕ ಉಪನ್ಯಾಸ, 11 ಫೆಬ್ರವರಿ 2017). ಈ ಮಾತಿನ ಒಳಾರ್ಥವೆಂದರೆ ಭಗವದ್ಗೀತೆ ಹೇಳುವ ‘ತ್ರೈವರ್ಣೀಕರ ‘ಸೇವೆ’ ಮಾಡಿಕೊಂಡಿರುವುದು ಶೂದ್ರರ ಕರ್ತವ್ಯ’ ಮತ್ತು ಅವರಿಗೆ ‘ಹಕ್ಕನ್ನು ಒತ್ತಾಯ ಮಾಡುವ ಅಧಿಕಾರವಿಲ್ಲ’ ಎಂಬುದಾಗಿದೆ. ಇವರ ‘ಏನ್ಸಿಯಂಟ್ ಫಿಲಾಸಫರ್ಸ್ ಆಪ್ ದಿಸ್ ಲ್ಯಾಂಡ್’ ಎಂದರೆ ಏನು, ಯಾರು? ಮನುಸ್ಮೃತಿಯ ಕರ್ತೃ, ಭಗವದ್ಗೀತೆಯ ಕರ್ತೃ, ಚಾಣಕ್ಯ ಇತ್ಯಾದಿ ತಾನೆ!

 • ಒಕ್ಕೂಟ ವ್ಯವಸ್ಥೆಗೆ, ಬಹುವಚನ ಭಾರತಕ್ಕೆ ಆಧಾರವಾಗಿರುವ ಭಾಷಾವಾರು ಪ್ರಾಂತ ರಚನೆಯ ಬಗ್ಗೆ ಈ ಸಂಸ್ಥೆಯ ವಿರೋಧವಿದೆ. ದೇಶ ಭಾಷೆಗಳ ಬಗ್ಗೆ ಇದಕ್ಕೆ ಒಪ್ಪಿಗೆಯಿಲ್ಲ. ಒಂದು ದೇಶ-ಒಂದು ಭಾಷೆಯ ಬಗ್ಗೆ ಇದು ಮಾತನಾಡುತ್ತದೆ. ನಮ್ಮ ದೇಶದ 2000 ವರ್ಷಗಳಿಗೂ ಮೀರಿದ ಚರಿತ್ರೆಯಲ್ಲಿ ಯಾವಾಗ ಇಲ್ಲಿ ಒಂದು ದೇಶ-ಒಂದು ಭಾಷೆಯಿತ್ತು ಎನ್ನುವುದರ ದಾಖಲೆ ನೀಡುವುದಿಲ್ಲ.

ಆರ್‍ಎಸ್‍ಎಸ್ ಪ್ರಕಾರ ಪ್ರಜಾಪ್ರಭುತ್ವ ಸಿದ್ಧಾಂತವು ಪಶ್ಚಿಮದಿಂದ ಆಮದಾಗಿರುವ ಸಂಗತಿಯಾಗಿದೆ. ಸಮಾನತೆ ಬಗ್ಗೆ ಇದಕ್ಕೆ ನಂಬಿಕೆಯಿಲ್ಲದಿರುವುದಿರಂದ ಅದನ್ನು ‘ಪಶ್ಚಿಮದಿಮದ ಆಮದಾದ ಮೌಲ್ಯ’ ಎನ್ನುತ್ತದೆ. ಇದು ನಮ್ಮದಲ್ಲ. ನಮ್ಮ ಸಂವಿಧಾನದಲ್ಲಿ ನಮ್ಮದು ಎನ್ನುವ ಪ್ರಾಚೀನ ಸ್ಮತಿ-ಶೃತಿ-ವೇದ-ಶಾಸ್ತ್ರ-ಪುರಾಣ-ಆಗಮ ಪ್ರಣೀತದ ಲವಶೇಷವೂ ಇಲ್ಲ ಎನ್ನುತ್ತಾರೆ ಗುರೂಜಿ. ಅವರ ಮಾತುಗಳು: ‘…in our Constitution there is no mention of the unique constitutional
development in ancient Bharat…’ (ಬಂಚ್ ಆಫ್ ಥಾಟ್ಸ್, 1966ರ ಆವೃತ್ತಿ, ಪು: 238). ಪ್ರಾಚೀನ ಭಾರತÀ ಎಂಬುದು ಇವರ ಮಾತಿನ ಪ್ರಕಾರ ಇವರ ಮನುಸ್ಮೃತಿಯು ನಮ್ಮ ಸಂವಿಧಾನವಾಗಬೇಕಾಗಿತ್ತು. ಈ ಕೃತಿಯಲ್ಲಿನ ಶೂದ್ರರಿಗೆ, ದಲಿತರಿಗೆ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಸೂತ್ರಗಳನ್ನು ಓದುವುದೇ ಅಸಹ್ಯಕರ. ಅಂತಹದ್ದು ನಮ್ಮ ಸಂವಿಧಾನವಾಗಬೇಕು ಎಂಬುದು ಈ ಪ್ರಭೃತಿಗಳ ವಿಚಾರ ಪ್ರಣಾಳಿಕೆಯಾಗಿದೆ.

 • ಇಂದು ನಮ್ಮ ಸಮಾಜವು ವಿಚ್ಛಿದ್ರಶಕ್ತಿಗಳ ವಿಜೃಂಭಣೆ, ಹಿಂಸೆ, ಅಸಹಿಷ್ಣುತೆ, ಸಾಮಾಜಿಕ ಅನ್ಯಾಯ, ಅಸಮಾನತೆ, ತಳವರ್ಗಗಳ ದಮನ, ಅಲ್ಪಸಂಖ್ಯಾತರ ಮೇಲಿನ ಅಸಹನೆ-ದುರಾಕ್ರಮಣಗಳನ್ನು, ಲಿಂಚಿಂಗ್ ಎದುರಿಸುತ್ತಿದ್ದರೆ ಇದರ ಮೂಲಕಾರಣ ಚಾತುರ್ವರ್ಣ ಪ್ರಣೀತ ವೈದಿಕಶಾಹಿ ಪ್ರಣಾಳಿಕೆಯಲ್ಲಿದೆ ಮತ್ತು ಇದನ್ನು ಉಗ್ರವಾಗಿ ಪ್ರತಿಪಾದಿಸುವ ಆರ್‍ಎಸ್‍ಎಸ್ ಕಾರ್ಯಾಚರಣೆಯಲ್ಲಿದೆ.
 • ನಮ್ಮ ಸಮಾಜದ ನೆಲಮೂಲ ಜನಪದ ಸಾಹಿತ್ಯ, ತಳವರ್ಗದವರ ಸಂಸ್ಕøತಿ, ಶೂದ್ರ-ದಲಿತ ವರ್ಗಗಳ ಬಗ್ಗೆ ಅಪ್ಪಿತಪ್ಪಿಯೂ ಈ ಸಂಸ್ಥೆಯು ಮಾತನಾಡುವುದಿಲ್ಲ. ದಲಿತ ಎಂಬ ನುಡಿಯನ್ನು ಬಳಸಲೂ ಇದಕ್ಕೆ ಮುಜುಗರ. ಇದಕ್ಕೆ ಭಗವದ್ಗೀತೆ, ಋಗ್ವೇದ, ವಾಲ್ಮೀಕಿ ರಾಮಾಯಣ, ವ್ಯಾಸ ಮಹಾಭಾರತ (ಉಳಿದ ಭಾಷೆಗಳಲ್ಲಿನ ನೂರಾರು ರಾಮಾಯಣ-ಮಹಾಭಾರತ ಮಹಾಕಾವ್ಯಗಳನ್ನು ಇದು ಒಪ್ಪುವುದಿಲ್ಲ), ಮನುಸ್ಮೃತಿ ಇತ್ಯಾದಿ ಮಾತ್ರ ಈ ದೇಶದ ಪವಿತ್ರ ಸಾಹಿತ್ಯ-ಧಾರ್ಮಿಕ ಕೃತಿಗಳು. ‘ನೂರಾರು’ ಎನ್ನುವುದು ಆರ್‍ಎಸ್‍ಎಸ್‍ನ ಶಬ್ದಕೋಶದಲ್ಲಿಲ್ಲ. ಅಖಂಡ-ಒಂದು ಎಂಬುದು ಮಾತ್ರ ಇದಕ್ಕೆ ಸ್ವೀಕೃತ.
 • ಬೌದ್ಧ, ಜೈನ, ಲಿಂಗಾಯತ, ಸಿಖ್ ಮುಂತಾದ ಭಾರತದ್ದೇ ಆದ ಧರ್ಮಗಳನ್ನು ಇದು ಹಿಂದೂಧರ್ಮದ ಪುರವಣಿಗಳು ಎಂದು ಪರಿಗಣಿಸುತ್ತದೆ ವಿನಾ ಅವುಗಳನ್ನು ಸರ್ವತಂತ್ರಸ್ವತಂತ್ರ ಧರ್ಮಗಳು ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ.

ಹೀಗೆ ಇದರ ಸಹಸ್ರಾರು ತಪ್ಪುಗಳ ಬಗ್ಗೆ ಬರೆಯುತ್ತಾ ಹೋಗಬಹುದು. ಒಟ್ಟಾರೆ ಆರ್‍ಎಸ್‍ಎಸ್ ಇರುವೇ ತಪ್ಪು ಎಂಬುದು ನಾನು ಅನುಭವದಿಂದ ಕಲಿತ ಪಾಠ.

Leave a Reply

Your email address will not be published.