ಆರ್ಥಿಕ ಹೊರೆ ಇಲ್ಲದ ರಫಿ

ಮಹಮದ್ ರಫಿ ಯಾವುದೇ ಬ್ಯಾಕಿನಿಂದ ಸಾಲ ಅಥವಾ ಕೈಸಾಲ, ಮೀಟರ್ ಬಡ್ಡಿ ಸಾಲದ ಸಹವಾಸವಿಲ್ಲದೆ ವ್ಯವಹರಿಸುತ್ತಿದ್ದಾರೆ.

ಹುಣಸೂರು ಪಟ್ಟಣದ ಹಣ್ಣಿನ ವ್ಯಾಪಾರಿ ಮಹಮದ್ ರಫಿ (38) ಕಳೆದ 20 ವರ್ಷದಿಂದಲೂ ಫುಟ್ ಪಾತಿನಲ್ಲಿ ಹಣ್ಣು ವ್ಯಾಪಾರ ಕಾಯಕದಲ್ಲಿ ಸಂಪಾದಿಸಿ ಬದುಕು ಕಟ್ಟಿಕೊಳ್ಳುವ ದಿಕ್ಕಿನಲ್ಲಿ ಸಾಗುತ್ತಿರುವ ಮಧ್ಯ ವಯಸ್ಸಿಗ. ಈತ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾನೆ. 7ನೇ ತರಗತಿಗೆ ವ್ಯಾಸಂಗ ಮೊಟಕುಗೊಳಿಸಿಕೊಂಡ ರಫಿ, ತನ್ನ ಮಕ್ಕಳನ್ನು ಓದಿಸಬೇಕು ಎಂಬ ಹಂಬಲದಲ್ಲಿದ್ದಾನೆ. ಪುತ್ರ ಮಹಮದ್ ತೋಫಿಕರ್ ಸರ್ಕಾರಿ ಆದರ್ಶ ಕೇಂದ್ರಿಯ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪುತ್ರಿ ಜವೇರಿಯಾ ಬಾನು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಮಹಮದ್ ರಫಿ 4 ಸದಸ್ಯರ ಚಿಕ್ಕ ಕುಟುಂಬದಲ್ಲಿ ಸುಖ ಜೀವನ ನಡೆಸುತ್ತಿದ್ದು, ಈತನ ಕಾಯಕದಲ್ಲಿ ಮಾಸಿಕ ಆದಾಯ ರೂ.10 ರಿಂದ 12 ಸಾವಿರವಿದ್ದು, ವಾರ್ಷಿಕ ರೂ 1.20 ರಿಂದ 1.50 ಲಕ್ಷ ಸಿಗಲಿದೆ.

ರಫಿ, ತನ್ನ ಹಣ್ಣಿನ ವ್ಯಾಪಾರದಿಂದ ಗಳಿಸಿದ ಲಾಭದಲ್ಲಿ ಸೂರು ಕಟ್ಟಿಕೊಳ್ಳಬೇಕು ಎಂಬ ಕನಸು ಕಂಡಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವ ವಸತಿ ಯೋಜನೆಯಲ್ಲಿ ರೂ.70 ಸಾವಿರ ಸಾಲ ಮಂಜೂರಾಗಿದೆ. ತನಗೆ ಕುಟುಂಬದಿಂದ ಬಂದ ನಿವೇಶನದಲ್ಲಿ ಸೂರು ಕಟ್ಟಿಕೊಳ್ಳಲು ಆರಂಭಿಸಿದ್ದಾನೆ. ಈತನಿಗೆ ಓಡಾಡಲು ಯಾವುದೇ ವಾಹನ ಇಲ್ಲದಿದ್ದರೂ ನಿತ್ಯ ಪತ್ರಿಕೆ ಓದುವುದು ಮತ್ತು ದೂರದರ್ಶನದಲ್ಲಿ ವಾರ್ತೆ ಆಲಿಸುವ ಹವ್ಯಾಸ ಬೆಳೆಸಿಕೊಂಡು ಸಾಮಾನ್ಯ ಜ್ಞಾನ ಹೊಂದಿದ್ದಾರೆ.

ಸಾಲಮುಕ್ತ ವಹಿವಾಟು ನಡೆಸುವವರ ಸಂಖ್ಯೆ ವಿರಳವಾಗಿದ್ದು, ಮಹಮದ್ ರಫಿ ಯಾವುದೇ ಬ್ಯಾಕಿನಿಂದ ಸಾಲ ಅಥವಾ ಕೈಸಾಲ, ಮೀಟರ್‍ಬಡ್ಡಿ ಸಾಲದ ಸಹವಾಸವಿಲ್ಲದೆ ವ್ಯವಹರಿಸುತ್ತಿದ್ದಾರೆ. ತಾನು ಗಳಿಸುವ ಲಾಭವನ್ನೇ ಬಂಡವಾಳವಾಗಿ ಬಳಸಿ ವ್ಯವಹರಿಸುತ್ತಿದ್ದೇನೆ ಎನ್ನುತ್ತಾರೆ.

ಕೌಟುಂಬಿಕ ಆರೋಗ್ಯ ವಿಮೆ ಹೊಂದದ ಈತ ತನ್ನ ಕುಟುಂಬದ ಆರೋಗ್ಯ ಸುಧಾರಣೆಗೆ ಮಾಸಿಕ ರೂ.1500 ಕಾದಿಡುವ ವಾಡಿಕೆ ಹೊಂದಿದ್ದಾರೆ. ಮಾಂಸಾಹಾರಿಯಾಗಿದ್ದರೂ ಹೇರಳವಾಗಿ ಹಣ್ಣು ಸೇವಿಸುವ ಪದ್ಧತಿ ಇಟ್ಟುಕೊಂಡಿದ್ದಾನೆ. ಮನೆ ನಿರ್ವಹಣೆಗೆ ಮಾಸಿಕ ರೂ.7 ರಿಂದ 7.5 ಸಾವಿರ ಖರ್ಚಾಗುತ್ತದೆ..

ಮೊಹಮದ್ ರಫಿ ಮಾಸಿಕ ಆದಾಯದಲ್ಲಿ ಮಗಳ ಭವಿಷ್ಯಕ್ಕೆ ಅಂಚೆ ಕಚೇರಿಯಲ್ಲಿ ರೂ. 1000 ಠೇವಣಿ ಮಾಡಿ ಭವಿಷ್ಯ ನಿಧಿಯನ್ನಾಗಿ ಸಂಗ್ರಹಿಸುತ್ತಿದ್ದಾರೆ. ಸಣ್ಣ ವ್ಯವಹಾರದಲ್ಲಿ ಸಮಗ್ರವಾಗಿ ತನ್ನ ಕುಟುಂಬ ನಿರ್ವಹಣೆ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ನಿಭಾಯಿಸುವಲ್ಲಿ ಸಫಲವಾಗಿ ಆರ್ಥಿಕ ಹೊರೆ ಇಲ್ಲದೆ ಹಾಸಿಗೆ ಇದ್ದಷ್ಟು ಕಾಲುಚಾಚುತ್ತಾನೆ.

Leave a Reply

Your email address will not be published.