ಆರ್ಬಿಐ ಮಾಜಿ ಗವರ್ನರ್ ವೈ.ವಿ.ರೆಡ್ಡಿಯವರ ಸಲಹೆ ಮತ್ತು ಭಿನ್ನಮತ

ಆರ್ಥಿಕ ವಿಷಯಗಳ ಬಗ್ಗೆ ಕನ್ನಡದಲ್ಲಿ ಪ್ರಕಟವಾಗಿರುವ ಅತ್ಯಂತ ಮಹತ್ವದ ಪುಸ್ತಕಗಳಲ್ಲಿ ಇದು ಕೂಡಾ ಒಂದಾಗಿದೆ. ಕನ್ನಡದ ಓದುಗರಿಗೆ ವಿತ್ತ ಮಂತ್ರಾಲಯ, ಯೋಜನಾ ಆಯೋಗ, ಆರ್‍ಬಿಐ ಹಾಗೂ ಹಣಕಾಸು ಇಲಾಖೆಗಳಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನೇರ ಮತ್ತು ಖಾಸಾ ಪರಿಚಯ ಪಡೆಯಲು ಪುಸ್ತಕ ಸಹಕಾರಿ.

ಮೋಹನದಾಸ್

ಭಿನ್ನ ಅಭಿಪ್ರಾಯ

ವೈ.ವಿ.ರೆಡ್ಡಿ

ಕನ್ನಡಕ್ಕೆ ಭಾಷಾಂತರ

ಮತ್ತು ಸಂಗ್ರಹ: ಎಂ.ಎಸ್.ಶ್ರೀರಾಮ್

ಪ್ರಕಟಣೆ: ಅಕ್ಷರ ಪ್ರಕಾಶನ, ಹೆಗ್ಗೋಡು

ಪುಟಗಳು: 288 ಬೆಲೆ: ರೂ. 270

ಅರ್ಥಶಾಸ್ತ್ರದ ಬಗ್ಗೆ ಹಾಗೂ ದೇಶದ ಆರ್ಥಿಕತೆಯ ಬಗ್ಗೆ ಕನ್ನಡದಲ್ಲಿ ಬಂದಿರುವ ಪುಸ್ತಕಗಳು ಬಹಳ ವಿರಳ. ಕೆಲವಾರು ಪ್ರಾಧ್ಯಾಪಕರ ಪಠ್ಯಪುಸ್ತಕಗಳ ಹೊರತಾಗಿ ಕನ್ನಡದ ಓದುಗರು ವೃತ್ತಪತ್ರಿಕೆಗಳು ಹಾಗೂ ನಿಯತಕಾಲಿಕಗಳನ್ನು ಮಾತ್ರ ಓದಬೇಕು. ಪ್ರಚಲಿತ ಎಲ್ಲ ಆರ್ಥಿಕ ವಿಷಯಗಳು ಕರ್ನಾಟಕ ಹಾಗೂ ಕನ್ನಡಿಗರನ್ನು ಆಮೂಲಾಗ್ರವಾಗಿ ಬಾಧಿಸುವುದಾದರೂ ಕನ್ನಡದಲ್ಲಿ ಈ ವಿಷಯದ ಬಗ್ಗೆ ಕೂಲಂಕುಶವಾಗಿ ಆದ ಚರ್ಚೆಗಳೂ ವಿರಳ. ಕಳೆದ ಮೂರೂವರೆ ವರ್ಷಗಳಲ್ಲಿ ಚಿಂತನಶೀಲ ಸಮಾಜಮುಖಿಯಲ್ಲಿ ಪ್ರಕಟವಾಗಿರುವ ಅಗಣಿತ ಲೇಖನಗಳ ಹೊರತಾಗಿ ಕನ್ನಡದ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಬರಹಗಳೂ ಕೂಡಾ ಕಡಿಮೆಯೇ.

ಇದಕ್ಕೆ ಅಪವಾದವೆಂಬಂತೆ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಪ್ರಾಧ್ಯಾಪಕ ಎಂ. ಎಸ್. ಶ್ರೀರಾಮ್ ಅವರು ಆರ್‍ಬಿಐ ಮಾಜಿ ಗವರ್ನರ್ ವೈ. ವಿ. ರೆಡ್ಡಿಯವರ ತೆಲುಗು ಆತ್ಮಕಥೆ ‘ನಾ ಜ್ಞಾಪಕಾಲು’ ಹಾಗೂ ಇಂಗ್ಲಿಷ್ ಅವತರಣಿಕೆ ‘ಅಡ್ವೈಸ್ ಅಂಡ್ ಡಿಸ್ಸೆಂಟ್’ ಪುಸ್ತಕಗಳನ್ನು ಒಂದುಗೂಡಿಸಿ ಕನ್ನಡಕ್ಕೆ ಸಂಗ್ರಹಾನುವಾದ ಮಾಡಿದ್ದಾರೆ. ‘ಭಿನ್ನ ಅಭಿಪ್ರಾಯ’ ಎಂಬ ಶೀರ್ಷಿಕೆಯಡಿಯಲ್ಲಿ ವೈ. ವಿ. ರೆಡ್ಡಿಯವರ ಅಧಿಕಾರಿ ಜೀವನ ಹಾಗೂ ಆರ್‍ಬಿಐನಲ್ಲಿನ ಡೆಪ್ಯುಟಿ ಗವರ್ನರ್ ಮತ್ತು ಗವರ್ನರ್ ಹುದ್ದೆಗಳ ಅಪಾರ ಅನುಭವವನ್ನು ಭಟ್ಟಿಯಿಳಿಸಿದ್ದಾರೆ. ರೆಡ್ಡಿಯವರ ತೆಲುಗು ಮತ್ತು ಇಂಗ್ಲಿಷ್ ಪುಸ್ತಕಗಳಲ್ಲಿನ ಅನಗತ್ಯ ವಿವರಗಳು ಮತ್ತು ಘಟನೆಗಳ ವಿವರಣೆಗಳನ್ನು ಬದಿಗಿಟ್ಟು ರೆಡ್ಡಿಯವರ ಸಮಯದ ಸಾಂಸ್ಥಿಕ ಅನುಭವವನ್ನು ಅತ್ಯಂತ ಗಹನ ಮತ್ತು ಸಾಂದ್ರವಾಗಿ ಸಾರಾಂಶ ಮಾಡಿ ಹೇಳಿದ್ದಾರೆ.

ಆರ್ಥಿಕ ವಿಷಯಗಳ ಬಗ್ಗೆ ಕನ್ನಡದಲ್ಲಿ ಪ್ರಕಟವಾಗಿರುವ ಅತ್ಯಂತ ಮಹತ್ವದ ಪುಸ್ತಕಗಳಲ್ಲಿ ಇದು ಕೂಡಾ ಒಂದಾಗಿದೆ. ಕನ್ನಡದ ಓದುಗರಿಗೆ ವಿತ್ತ ಮಂತ್ರಾಲಯ, ಯೋಜನಾ ಆಯೋಗ, ಆರ್‍ಬಿಐ ಹಾಗೂ ಹಣಕಾಸು ಇಲಾಖೆಗಳಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ನೇರ ಮತ್ತು ಖಾಸಾ ಪರಿಚಯ ಪಡೆಯಲು ಈ ಪುಸ್ತಕ ಸಹಕಾರಿಯಾಗಿದೆ. ಈ ಸಂಸ್ಥೆಗಳಲ್ಲಿನ ಬೆಳವಣಿಗೆಗಳು ಹಾಗೂ ನಿರ್ಧಾರಗಳು ಕೂಡಾ ಹೇಗೆ ವ್ಯಕ್ತಿಯೊಬ್ಬರ ಖಾಸಗಿ ಎನ್ನಿಸುವಷ್ಟು ಮಟ್ಟದ ವೈಯಕ್ತಿಕ ನಿರ್ಣಯಗಳು ಎಂಬುದು ಇಲ್ಲಿ ಮನದಟ್ಟಾಗುತ್ತದೆ. ಅನುಭವಿ ನಾಯಕನೊಬ್ಬನ ಓದು, ಅನುಭವ, ತಿಳಿವಳಿಕೆ ಹಾಗೂ ಬದ್ಧತೆಗಳು ಹೇಗೆ ಸಂಸ್ಥೆಯೊಂದನ್ನು ನಿರ್ಮಾಣ ಮಾಡಲು ಸಹಕಾರಿಯಾಗಬಲ್ಲುದು ಎಂಬುದು ಕೂಡಾ ಸ್ಪಷ್ಟವಾಗುತ್ತದೆ. ದೇಶದ ನೀತಿ ನಿರೂಪಣೆ ಹಾಗೂ ಆರ್ಥಿಕ ಸಂಸ್ಥೆಗಳಲ್ಲಿ ತಮ್ಮ ಛಾಪು ಮೂಡಿಸಬಯಸುವ ಆರ್ಥಿಕ ತಜ್ಞರಿಗೆ ಮತ್ತು ಅಧಿಕಾರಿಗಳಿಗೆ ಈ ಪುಸ್ತಕ ಮಾರ್ಗದರ್ಶಿಯಾಗಲಿದೆ.

ವೈ. ವಿ. ರೆಡ್ಡಿಯವರು ಅವಿಭಜಿತ ಆಂಧ್ರಪ್ರದೇಶ ಕ್ಯಾಡರಿನ ಐಎಎಸ್ ಅಧಿಕಾರಿಯಾಗಿದ್ದರು. ತಮ್ಮ ಸೇವೆಯ ಮೊದಲ ದಶಕದಿಂದಲೇ ರಾಜ್ಯದ ವಿತ್ತೀಯ ಇಲಾಖೆ ಹಾಗೂ ನೀತಿ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದರು. ಅರ್ಥಶಾಸ್ತ್ರದಲ್ಲಿ ಪಿಹೆಚ್‍ಡಿ ಪದವಿ ಪಡೆದು ದೇಶದ ವಿತ್ತೀಯ ಆಡಳಿತಕ್ಕೆ ತಮ್ಮನ್ನು ತಾವು ಮುಡುಪಾಗಿಸಿಕೊಂಡಿದ್ದರು. ಈ ಎಲ್ಲಾ ವಿಷಯಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ಹೇಳಿರುವ ಈ ಪುಸ್ತಕದಲ್ಲಿ ಅನಗತ್ಯ ಮತ್ತು ಅಪ್ರಸ್ತುತ ಖಾಸಗಿ ವಿಷಯಗಳನ್ನು ತೆಗೆದು ಪುಸ್ತಕವನ್ನು ರೆಡ್ಡಿಯವರ ಸಾರ್ವಜನಿಕ ಜೀವನದ ವಿವರಗಳಿಗಷ್ಟೇ ಮೀಸಲಾಗಿಡಲಾಗಿದೆ. ದೇಶದ ಹಣಕಾಸು ಇಲಾಖೆಗೆ ಸಂಬಂಧಿತ ವಿಷಯಗಳಲ್ಲಿಯೇ ಕಾರ್ಯ ನಿರ್ವಹಿಸಬೇಕೆಂಬ ರೆಡ್ಡಿಯವರ ಏಕಾಗ್ರ ಬದ್ಧತೆಯು ಈ ಪುಸ್ತಕದಲ್ಲಿ ಹೊರಬರುತ್ತದೆ. ಐಎಮ್‍ಎಫ್‍ನಲ್ಲಿ ಪಡೆದ ಅನುಭವ ಹಾಗೂ ಕೇಂದ್ರ ಹಣಕಾಸು ಇಲಾಖೆಯಲ್ಲಿ ಪಡೆದ ಅನುಭವಗಳನ್ನು ಸಹಾ ರೆಡ್ಡಿಯವರು ತಮ್ಮ ಯಶಸ್ಸಿನ ಸೋಪಾನಗಳೆಂದೇ ಬಣ್ಣಿಸುತ್ತಾರೆ. ಮುಂದಿನ ದಿನಗಳಲ್ಲಿ ಆರ್‍ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಎದುರಿಸಿದ ಸವಾಲುಗಳನ್ನು ಕೂಡ ರೆಡ್ಡಿಯವರು ಅತ್ಯಂತ ವಿಷದವಾಗಿ ವಿವರಿಸಿದ್ದಾರೆ. ಈ ತೆರನಾಗಿ ಈ ಪುಸ್ತಕವು ವಿತ್ತೀಯ ವಿಷಯಗಳಲ್ಲಿ ಮತ್ತು ದೇಶದ ಆಗುಹೋಗುಗಳಲ್ಲಿ ಆಸಕ್ತರೆಲ್ಲರಿಗೂ ಅತ್ಯಂತ ಉಪಯುಕ್ತ ಮತ್ತು ಅತ್ಯಗತ್ಯ ಓದಾಗಿದೆ. ಕನ್ನಡದಲ್ಲಿ ಈ ಮಟ್ಟದ ಆರ್ಥಿಕ ವಿಶ್ಲೇಷಣೆ ಹಾಗೂ ಗಹನ ಓದು ನಮ್ಮನ್ನು ಪುಲಕಿತಗೊಳಿಸುತ್ತದೆ.

ಹತ್ತು ಹಲವು ಗುಣಾತ್ಮಕ ವಿಷಯಗಳಿಗೆ ಹೆಸರಾಗಿರುವ ಈ ಹೊತ್ತಿಗೆಯ ಮತ್ತು ರೆಡ್ಡಿಯವರ ಸೇವಾವಧಿಯ ಕಾಲದ ಕೆಲವು ನ್ಯೂನತೆಗಳನ್ನು ಇಲ್ಲಿ ಹೇಳದಿದ್ದರೆ ಕೇವಲ ಪ್ರಶಂಸೆ ಮಾಡಿದಂತೆ ಆಗುತ್ತದೆ. ಈ ಕೆಳಕಂಡ ರಚನಾತ್ಮಕ ವಿಮರ್ಶೆಯಲ್ಲಿಯೂ ಕೂಡಾ ಪುಸ್ತಕದ ಒಳನೋಟವನ್ನು ಇನ್ನಷ್ಟು ಹೆಚ್ಚಿಸುವ ಇರಾದೆಯೇ ಇದೆ.

  1. ತಮ್ಮ ಆತ್ಮಚರಿತ್ರೆಯಲ್ಲಿ ರೆಡ್ಡಿಯವರು ತಾವು 2008 ರ ಜಾಗತಿಕ ಆರ್ಥಿಕ ಕುಸಿತವನ್ನು ಮೊದಲೇ ನಿರೀಕ್ಷಿಸಿದ್ದಾಗಿ ಹೇಳಿಕೊಳ್ಳುತ್ತಾರೆ. ಆದರೆ ಇದಕ್ಕೆ ಪೂರಕ ಸಾರ್ವಜನಿಕವಾಗಿ ಲಭ್ಯ ಸಾಕ್ಷಿ-ಆಧಾರಗಳನ್ನೇನೂ ಅವರು ನೀಡುವುದಿಲ್ಲ. ಇದು ನಂಬಲರ್ಹ ದಾವೆಯಲ್ಲ. ಅತಿಯಾಗಿ ಕಾವೇರಿದ ಯಾವುದೇ ಶೇರು ಮಾರುಕಟ್ಟೆ ಮುಂದಿನ ದಿನಗಳಲ್ಲಿ ಕುಸಿಯಬಹುದೆಂದು ಯಾರಾದರೂ ಹೇಳುತ್ತಾರೆ. ಆದರೆ ಈ ಕುಸಿತ ಹೇಗೆ, ಎಂದು ಮತ್ತು ಯಾವ ಕಾರಣಗಳಿಗಾಗಿ ಎಂದು ಹೇಳಿದಾಗಲೇ ಆ ಭವಿಷ್ಯವಾಣಿಗೆ ಬೆಲೆ ಬರುವುದು ಸಾಧ್ಯ. ‘ನಾನು ಹೇಳಿದ್ದೆ ನೋಡಿ’ ಎಂಬಂತಹಾ ಹೇಳಿಕೆಗಳು ರೆಡ್ಡಿಯವರ ಘನತೆಗೆ ಗೌರವ ತರುವಂತಹದ್ದಲ್ಲ.
  2. ರೆಡ್ಡಿಯವರು ಆರ್‍ಬಿಐ ಗವರ್ನರ್ ಆಗಿದ್ದ ಕಾಲದಲ್ಲಿ ಭಾರತೀಯ ಬ್ಯಾಂಕುಗಳು ನೀಡಿದ ಸಾಲದ ಪರಿಣಾಮವಾಗಿ ಮುಂದೆ ಕೆಟ್ಟ ಸಾಲಗಳ ‘ಎನ್‍ಪಿಎ’ ಅನುಭವಿಸಬೇಕಾಗಿ ಬಂದಿತ್ತು. ಸರ್ಕಾರಿ ಬ್ಯಾಂಕುಗಳಲ್ಲಿನ ಸಾಲ ವಿತರಣೆಯಲ್ಲಿ ಎಗ್ಗಿಲ್ಲದ ಭ್ರಷ್ಟಾಚಾರದ ಆರೋಪವೂ ಬಂದಿತ್ತು. ಆದರೆ ರೆಡ್ಡಿಯವರು ಈ ವಿಷಯದಲ್ಲಿ ಯಾವುದೇ ಟಿಪ್ಪಣಿ ಮಾಡದೆ ಮೌನಕ್ಕೆ ಶರಣಾಗುತ್ತಾರೆ. ಇದೂ ಕೂಡ ಅನಪೇಕ್ಷಣೀಯ. ಈಗಲೂ ಸತ್ಯ ಹೇಳದೆ ಹೋದರೆ ಇನ್ನು ಯಾವಾಗ ಎಂದು ನಾವು ಕೇಳಲೇ ಬೇಕಾಗುತ್ತದೆ.
  3. ಇದೇ ಸರ್ಕಾರಿ ಬ್ಯಾಂಕುಗಳ ಸಾಲ-ಮರುಪಾವತಿ ವಿಶ್ಲೇಷಣೆಯ ‘ಅಪ್ರೈಸಲ್’ ವ್ಯವಸ್ಥೆಯ ಹುಳುಕುಗಳನ್ನು ಕೂಡಾ ರೆಡ್ಡಿಯವರು ಉಲ್ಲೇಖ ಮಾಡುವುದಿಲ್ಲ. ಈ ಭಾರತೀಯ ಬ್ಯಾಂಕುಗಳನ್ನು ಕಾಡುತ್ತಿರುವ ಕಳಪೆ ವಿಶ್ಲೇಷಕ ಸಾಮಥ್ರ್ಯದ ಬಗ್ಗೆ ಹಾಗೂ ಇದನ್ನು ಸುಧಾರಿಸುವ ಕ್ರಮಗಳ ಬಗ್ಗೆ ಕೂಡಾ ರೆಡ್ಡಿಯವರು ಗಮನ ಹರಿಸಿರಲಿಲ್ಲ.
  4. ರೆಡ್ಡಿಯವರು ಅರ್ಥಶಾಸ್ತ್ರದ ಗಂಧಗಾಳಿಯನ್ನೇ ಅರಿಯದ ಅಂದಿನ ವಿತ್ತಮಂತ್ರಿ ಜಸ್ವಂತ್ ಸಿಂಗ್‍ರವರನ್ನು ಹಾಡಿ ಹೊಗಳಿದ್ದಾರೆ. ಅದೇ ರೀತಿಯಲ್ಲಿ ಯಶವಂತ್ ಸಿನ್ಹಾರವರನ್ನೂ ಸಹಾ ತಮ್ಮ ಪುಸ್ತಕದಲ್ಲಿ ಹೊಗಳಿದ್ದಾರೆ. ಪ್ರಣಬ್ ಮುಖರ್ಜಿಯವರನ್ನೇನೂ ಹೊಗಳುವುದಿಲ್ಲವಾದರೂ ಮುಂದೆ ಅವರು ರಾಷ್ಟ್ರಪತಿಯಾದ ಸಂದರ್ಭದಲ್ಲಿ ಆಡಿದ ಮಾತನ್ನು ರೆಡ್ಡಿಯವರು ಗೇಲಿ ಮಾಡುತ್ತಾರೆ. ಆದರೆ ಆಶ್ಚರ್ಯದ ಸಂಗತಿಯೆಂದರೆ ರೆಡ್ಡಿಯವರ ಎಲ್ಲಾ ಟೀಕೆಗಳು ದೇಶ ಕಂಡ ಅತ್ಯುತ್ತಮ ವಿತ್ತಮಂತ್ರಿ ಪಿ. ಚಿದಂಬರಮ್ ಅವರಿಗೆ ಮೀಸಲಾಗಿರುವುದು. ಪುಸ್ತಕದ ಹಲವೆಡೆ ಚಿದಂಬರಂ ಜೊತೆ ತಮ್ಮ ಮನಸ್ತಾಪವನ್ನು ಬಿಚ್ಚಿ ಹೇಳಿದ ರೆಡ್ಡಿಯವರು ಹೇಗೆ ಚಿದಂಬರಂ ತಪ್ಪು ಮಾಡಿದರು ಮತ್ತು ಹೇಗೆ ಟೀಕಾರ್ಹರು ಎಂದು ಮಾತ್ರ ವಿವರಿಸುವುದಿಲ್ಲ. ಇದು ಆಶ್ಚರ್ಯಕರ.
  5. ತಮ್ಮ ಸೇವಾವಧಿಯುದ್ದಕ್ಕೂ ರೆಡ್ಡಿಯವರು ‘ಸಮಜಾಯಿಷಿ’ ಮಾರ್ಗದಲ್ಲಿಯೇ ನಡೆದುಬಂದ ಅಧಿಕಾರಿಯಾಗಿ ನಮಗೆ ಕಾಣಿಸುತ್ತಾರೆ. ರಾಜಕೀಯ ಪ್ರಜಾಪ್ರಭುತ್ವಕ್ಕೆ ಇದು ಸರಿಹೋಗುವುದಾದರೂ ಸ್ವಾಯತ್ತ ಸಂಸ್ಥೆಯ ಚುಕ್ಕಾಣಿ ಹಿಡಿದಾಗ ದೇಶ ರೆಡ್ಡಿಯವರಿಂದ ಹಲವು ಧೈರ್ಯದ ನಿರ್ಧಾರಗಳನ್ನು ಅಪೇಕ್ಷಿಸಿತ್ತು. ತಮ್ಮ ಸೇವಾವಧಿಯಲ್ಲಿ ಉಂಟುಮಾಡಿದ ನಿರಾಸೆಯನ್ನು ಈ ಪುಸ್ತಕದಲ್ಲಿಯೂ ಮುಂದುವರೆಸಿದ್ದಾರೆ. ನಿವೃತ್ತರಾದ ಮೇಲಾದರೂ ಗಟ್ಟಿದನಿಯಲ್ಲಿ ಸತ್ಯ ಹೇಳುವ ಧೈರ್ಯ ತೋರದೆ ದೇಶದ ಮತ್ತೊಬ್ಬ ಅಧಿಕಾರಿಯಂತೆಯೇ ನಮಗೆ ಕಾಣಸಿಗುತ್ತಾರೆ.

ಇಷ್ಟಾದರೂ ಎಂ. ಎಸ್. ಶ್ರೀರಾಮ್‍ರವರ ಈ ಪುಸ್ತಕ ಕನ್ನಡ ಓದುಗರಿಗೆ ಅನನ್ಯ ಅನುಭವ ನೀಡುತ್ತದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೇ ಬರಬಹುದಾದ ಪಾಂಡಿತ್ಯಪೂರ್ಣ ಪುಸ್ತಕಗಳಿಗೆ ಭಾಷ್ಯ ನುಡಿಯುತ್ತಿದೆ. ಶ್ರೀರಾಮ್‍ರವರ ಮತ್ತು ಅಕ್ಷರ ಪ್ರಕಾಶನದ ಈ ಬದ್ಧತೆ ಮೆಚ್ಚುವಂತಹದ್ದು ಮತ್ತು ಅನುಕರಣೀಯವಾದದ್ದು. ಶ್ರೀರಾಮ್‍ರವರು ಪುಸ್ತಕದ ಕೊನೆಯಲ್ಲಿ ಕ್ಲಿಷ್ಟ ಆರ್ಥಿಕ ಶಬ್ದಗಳ ಕನ್ನಡ-ಇಂಗ್ಲಿಷ್ ಸಮಾನಾಂತರ ಪಟ್ಟಿಯೊಂದನ್ನು ಕೊಟ್ಟಿದ್ದರೆ ಈ ಪುಸ್ತಕ ಇನ್ನಷ್ಟು ಜನರಿಗೆ ತಲುಪಲು ಸಹಕಾರಿಯಾಗುತ್ತಿತ್ತು.

ಹೊಸ ಪುಸ್ತಕ

ಕನ್ನಡ ಕಾಲಜ್ಞಾನ ಸಾಹಿತ್ಯ

(ಸಮಗ್ರ ಸಂಪಾದನೆ)

ಸಂಪಾದಕ: ಡಾ.ಜಗದೀಶ ಕೆರೆನಳ್ಳಿ

ಪುಟ: 796  ಬೆಲೆ: ರೂ.750

ಪ್ರಥಮ ಮುದ್ರಣ: 2020

ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.

ಸಂಪರ್ಕ: 9916197291, 9480336536

ಕನ್ನಡದಲ್ಲಿ ವಚನಸಾಹಿತ್ಯ, ದಾಸಸಾಹಿತ್ಯ, ತತ್ವಪದ ಸಾಹಿತ್ಯ, ಜನಪದ ಸಾಹಿತ್ಯದಂತೆ ಒಂದು ವೈಚಾರಿಕ ಸಾಹಿತ್ಯ ಪ್ರಕಾರ ಕನ್ನಡ ‘ಕಾಲಜ್ಞಾನ ಸಾಹಿತ್ಯ’. ಅದರ ಹಿರಿಮೆ ಗರಿಮೆಯನ್ನು ಆ ಸಾಹಿತ್ಯದ ಕವಿಗಳ ಸಂಖ್ಯೆಯೇ ಹೇಳುತ್ತದೆ. ಕನ್ನಡ ಸಾಹಿತ್ಯದಲ್ಲಿ ಇಷ್ಟೊಂದು ವಿಸ್ತೃತವಾದ “ಕನ್ನಡ ಕಾಲಜ್ಞಾನ ಸಾಹಿತ್ಯ” ಸಂಪಾದನೆ ಬಂದಿಲ್ಲ. ಇದು ಮೊದಲ ಪ್ರಯತ್ನ. 796 ಪುಟಗಳ ಈ ಬೃಹತ್ ಗ್ರಂಥದಲ್ಲಿ, 52 ವಿವಿಧ ಕಾಲಜ್ಞಾನಿಗಳ ಸಾಹಿತ್ಯವನ್ನು ಸಂಗ್ರಹಿಸಲಾಗಿದೆ. 72 ಪುಟಗಳ ಸುದೀರ್ಘ ಸಂಶೋಧನಾತ್ಮಕ ಮೌಲಿಕ ಪ್ರಸ್ತಾವನೆ ಈ ಕೃತಿಯ ಹೆಚ್ಚುಗಾರಿಕೆ. 

ಬಹುಮುಖಿ

(ವಿಮರ್ಶಾ ಸಂಕಲನ)

ಡಾ. ಜಗದೀಶ ಕೆರೆನಳ್ಳಿ

ಪುಟ: 196    ಬೆಲೆ: 180

ಪ್ರಥಮ ಮುದ್ರಣ: 2020

ಪೃಥ್ವಿ ಪ್ರಕಾಶನ, ಮೈಸೂರು

ಸಂಪರ್ಕ: 8970414165, 9480336536

ಪ್ರಸ್ತುತ ವಿಮರ್ಶಾ ಸಂಕಲನದಲ್ಲಿ ವಿವಿಧ ಸಂದರ್ಭಗಳಲ್ಲಿ ಬರೆದ ಹದಿನೈದು ಬಹುಮುಖಿ ಲೇಖನಗಳಿವೆ. ಹಳೆಗನ್ನಡ ಕಾವ್ಯ, ಮಹಿಳಾ ಕಾವ್ಯ, ಕಾದಂಬರಿ, ನಾಟಕ, ಸಿನಿಮಾ, ದಾಸ ಸಾಹಿತ್ಯ, ತತ್ವಪದ ಸಾಹಿತ್ಯ, ಕಾಲಜ್ಞಾನ ಸಾಹಿತ್ಯ, ಶಾಸನ, ಕೆರೆಗಳ ಸಂಸ್ಕೃತಿ ಕುರಿತ ವೈವಿಧ್ಯಮಯ ವಸ್ತುವನ್ನು ಒಳಗೊಂಡ ಲೇಖನಗಳಿವೆ. ಪ್ರಸ್ತುತ ಕೃತಿ ಸಂಶೋಧನೆ ಮತ್ತು ವಿಶ್ಲೇಷಣಾತ್ಮಕ ಬರಹಗಳ ಮೂಲಕ ಗಮನ ಸೆಳೆಯುತ್ತದೆ. ಹೊಸ ತಲೆಮಾರಿನ ಚಿಂತನೆಗಳನ್ನು ಪ್ರಸ್ತುತಪಡಿಸುತ್ತದೆ.

ಜಾನಪದ ಸಂವೇದನೆ

ಡಾ. ಕುರುವ ಬಸವರಾಜ್

ಪುಟ: 264  ಬೆಲೆ: ರೂ.250

ಪ್ರಥಮ ಮುದ್ರಣ: 2020

ಗೀತಾಂಜಲಿ ಪಬ್ಲಿಕೇಷನ್ಸ್

ಸಂಪರ್ಕ: 9740066842

ಜನಪದ ಸಂಗೀತ, ಜನಪದ ಕಾವ್ಯ, ಪ್ರದರ್ಶನ ಕಲೆಗಳು, ತಂತ್ರ ಮಂತ್ರ ಆಚರಣೆ, ಮಾತು-ಸ್ಥಳನಾಮ, ಸಂಕೀರ್ಣ ವಿಭಾಗದಲ್ಲಿ ಒಟ್ಟು 25 ಲೇಖನಗಳನ್ನು ಈ ಕೃತಿಯಲ್ಲಿಡಲಾಗಿದೆ. ಕೆಲವು ಜನಪದ ವಾದ್ಯಗಳ ಸಂರಚನಾ ವೈಶಿಷ್ಟ್ಯಗಳು, ಚರ್ಮ ವಾದ್ಯಗಳು ಮತ್ತು ಸಂಗೀತದ ಶ್ರೇಣೀಕರಣ, `ತ್ರಿಪದಿ’ ಅಲ್ಲ ‘ಚೌಪದಿ’, ಜನಪದ ಕುಣಿತಗಳಲ್ಲಿ ಮುಖವಾಡಗಳು, ಪ್ರಾಣಿ ಬಲಿ: ಒಂದು ಅಧ್ಯಯನ, ನಾಲಿಗೆ ತೊಡರುಗಳು, ಬೆಂಗಳೂರಿನ ಜಾತ್ರೆ-ಉತ್ಸವಗಳು, ಇತರ ಲೇಖನಗಳು ಈ ಕೃತಿಯಲ್ಲಿವೆ.

ಹೈದ್ರಾಬಾದ್ ಕರ್ನಾಟಕದ ಆಧುನಿಕ ಸಾಹಿತ್ಯಮೀಮಾಂಸೆ

ಡಾ. ಬಸವರಾಜ ಸಬರದ

ಪುಟ: 210  ಬೆಲೆ: ರೂ. 180

ಪ್ರಥಮ ಮುದ್ರಣ: 2020

ಪಲ್ಲವಿ ಪ್ರಕಾಶನ

ಸಂಪರ್ಕ: 9886619220

ಹೈದರಾಬಾದ್ ಕರ್ನಾಟಕ ಪ್ರದೇಶದ ಆಧುನಿಕ ಕಾವ್ಯಮೀಮಾಂಸೆ, ವಚನಮೀಮಾಂಸೆ, ಕಥನಸಾಹಿತ್ಯ ಮೀಮಾಂಸೆ, ಕಾದಂಬರಿ, ನಾಟಕಗಳ ಮೀಮಾಂಸೆ ಕುರಿತು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಪ್ರಾದೇಶಿಕ ಸಾಹಿತ್ಯ ಮೀಮಾಂಸೆ ಕುರಿತ ಮೊದಲ ಪುಸ್ತಕವಿದು.

ಬಸವಣ್ಣ

ಆನು ಒಲಿದಂತೆ ಹಾಡುವೆ

ಸಂಪಾದಕರು: ಡಾ. ಅಮರೇಶ ನುಗಡೋಣಿ

ಡಾ. ನಂದೀಶ್ವರ ದಂಡೆ

ಪ್ರಥಮ ಮುದ್ರಣ: 2021

ಪುಟ: 192 ಬೆಲೆ: ರೂ. 180

ವಿಜಯ ಕಲ್ಯಾಣ ಪ್ರಕಾಶನ

ಸಂಪರ್ಕ: 9880746551

ಬಸವಣ್ಣನವರ ಆಶಯಗಳು, ಬಸವ ತತ್ವ ಪ್ರಣಾಳಿಕೆ ಇಂದಿಗೆ ಎಷ್ಟು ಪ್ರಸ್ತುತ, ಬಸವಣ್ಣನವರ ಸಂಘಟನಾ ಸಾಮಥ್ರ್ಯ, ಮಹಾಮನೆಯ ಪರಿಕಲ್ಪನೆ, ಬಸವಣ್ಣನವರನ್ನು ಹೇಗೆ ಅರ್ಥ ಮಾಡಿಕೊಳ್ಳುವುದು, ಕಲ್ಯಾಣ ಸಮಾಜದ ಕನಸು ಸೇರಿದಂತೆ 23 ಬರಹಗಳ ಕೃತಿ ಇದು. ಡಾ.ಎನ್.ಜಿ.ಮಹಾದೇವಪ್ಪ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಸಿ.ವೀರಣ್ಣ, ಡಾ.ವೀರಣ್ಣ ದಂಡೆ, ಪ್ರೊ.ಎಚ್.ಎಸ್.ಶಿವಪ್ರಕಾಶ್ ಸೇರಿದಂತೆ ಪ್ರಮುಖ ಬರಹಗಾರರ ಲೇಖನಗಳಿವೆ.

ಹೆಜ್ಜೆ

ಕವನ ಸಂಕಲನ

ಸರಸ್ವತಿ ಆರ್. ಭೋಸಲೆ

ಪುಟ: 104 ಬೆಲೆ: ರೂ. 80

ಪ್ರಥಮ ಮುದ್ರಣ: 2021

ಭವಾನಿ ಪ್ರಕಾಶನ

ಸಂಪರ್ಕ: ಭವಾನಿ ಪ್ರಕಾಶನ, ಧಾರವಾಡ

ಲೇಖಕಿಯ ಮೊದಲ ಕವನಸಂಕಲನವಿದು. ಮೊದಲ ನೆನದೇನ, ಬೋಳುಮರ, ಅವಳು, ಬೆಳಗೋಣ ಬನ್ನಿ, ರಾಧೆ ಕೃಷ್ಣ, ಭಾವಬಂಧನ, ಕನಸ ಕಂಡೆ, ತವರಿನ ಸಿರಿ ಸೇರಿದಂತೆ 60 ಕವನಗಳು ಕೃತಿಯಲ್ಲಿವೆ.

ಕನ್ನಡ ಸಾಹಿತ್ಯ ಪರಿಷತ್ತಿನ

ಕನ್ನಡ ನಿಘಂಟು

ಒಂದು ಅಧ್ಯಯನ

ಡಾ. ತಿಪ್ಪೇರುದ್ರ ಸಂಡೂರು

ಪುಟ: 260  ಬೆಲೆ: ರೂ. 200

ಪ್ರಥಮ ಮುದ್ರಣ: 2020

ಬಸವ ಪಬ್ಲಿಕೇಷನ್ಸ್

ಸಂಪರ್ಕ: 9448855457

ಕನ್ನಡ ನಿಘಂಟಿನ ಅರ್ಥ ಮತ್ತು ವ್ಯಾಖ್ಯೆಗಳು, ಕಸಾಪ ಪ್ರಕಟಿಸಿದ ನಿಘಂಟುಗಳ ಪರಿಚಯ, ಬೆಳವಣಿಗೆಯ ಹಂತಗಳು, ನಿಘಂಟಿನ ಸ್ವರೂಪ, ವ್ಯಾಪ್ತಿ, ಆಕರಗಳು, ಶಬ್ದ ಸಂಗ್ರಹ, ನಿಷ್ಪತ್ತಿ ವಿಧಾನ, ಉಲ್ಲೇಖಗಳು, ದೇಶ್ಯ ಪದಗಳು, ಸಂಸ್ಕøತ ಪದಗಳು, ಅನ್ಯ ದೇಶ್ಯ ಪದಗಳು, ತದ್ಭವಗಳು, ಜ್ಞಾತಿ ಪದಗಳು, ನುಡಿಗಟ್ಟುಗಳು, ಗಾದೆಗಳು, ಇತರ ವಿಷಯಗಳ ಕುರಿತ ಬರಹಗಳು ಇಲ್ಲಿವೆ.

ಒಂದು ವಿಳಾಸದ ಹಿಂದೆ

ಲಲಿತ ಪ್ರಬಂಧಗಳು

ಸ್ಮಿತಾ ಅಮೃತರಾಜ್, ಸಂಪಾಜೆ

ಪುಟ: 196 ಬೆಲೆ: ರೂ. 200

ಪ್ರಥಮ ಮುದ್ರಣ: 2020

ಭಾವ ಸಿಂಚನಾ ಪ್ರಕಾಶನ

ಸಂಪರ್ಕ: 9036402083

ಅಮ್ಮನೆಂಬ ಮಿಡಿಯುವ ಅಂತಃಕರಣ, ಇದು ಕಲಿಗಾಲವಲ್ಲ ಇಲಿಗಾಲ, ಬೆಳಕಿನ ಲಹರಿ, ಕನಸಿನ ಜಾಡು ಹಿಡಿದು, ಸೆಖೆಯ ಪ್ರವರಗಳು, ಒಲೆಯ ಉರಿಯ ಮುಂದೆ, ಜ್ವರದ ಹಳಹಳಿಕೆಗಳು, ಕಾಡುವ ಕಾಡಿಗೆಯೊಂದಿಗೆ, ಕವಿತೆಯಾಗು ಮನವೇ, ಮೂಗುತಿ ಮುಂಭಾರ ಸೇರಿದಂತೆ ವೈವಿಧ್ಯಮಯ ವಿಷಯದ ಲಲಿತಪ್ರಬಂಧಗಳು ಈ ಪುಸ್ತಕದಲ್ಲಿವೆ.

ಸಂತನಾಗದ ವಸಂತ

ಕಾವ್ಯ ನಾಟಕ

ಸತ್ಯನಾರಾಯಣ ರಾವ್ ಅಣತಿ

ಪುಟ: 124 ಬೆಲೆ: ರೂ.100

ಪ್ರಥಮ ಮುದ್ರಣ: 2020

ದೀಪಾಂಜಲಿ ಪುಸ್ತಕ ಪ್ರಕಾಶನ

ಸಂಪರ್ಕ: 9449886390

ಮಹಾಭಾರತದ ಮಾದ್ರಿ ಬದುಕಿನ ಪ್ರಸಂಗದ ಕಾವ್ಯ ನಾಟಕವಿದು. ನಾಟಕದ ಕುರಿತು ಸ್ಪಂದನದಲ್ಲಿ ವಿಜಯಾ ಹೇಳಿರುವ ಸಾಲುಗಳಿವು: “ಕೃತಿಯ ಉದ್ದಕ್ಕೂ ಪ್ರತಿಯೊಂದೂ ಪಾತ್ರವೂ ಅದರದೇ ಆದ ತಿಳಿವಿನ, ನಂಬಿಕೆಯ ಮಿತಿಯಲ್ಲಿ ಮಾದ್ರಿ ಎತ್ತಿದ್ದ ಪ್ರಶ್ನೆಗಳನ್ನೇ ಚರ್ಚಿಸುತ್ತವೆ…’’. ಈ ಕಾವ್ಯ ನಾಟಕದಲ್ಲಿ ರಮ್ಯತೆಯ ನಡುವೆ ಈ ಭಾವಸ್ಫುರಣ ಕಾಣಬಹುದು.

ನಾರೀ ನೋಟ

ವಿಮರ್ಶಾ ಸಂಕಲನ

ಪ್ರೊ. ಸಬಿಹಾ ಭೂಮಿಗೌಡ

ಪುಟ: 184 ಬೆಲೆ: ರೂ. 160

ಪ್ರಥಮ ಮುದ್ರಣ: 2020   

ಕವಿ ಪ್ರಕಾಶನ

ಸಂಪರ್ಕ: 9480211320

ಲೇಖಕಿಯ ಐದನೆಯ ವಿಮರ್ಶಾ ಸಂಕಲನವಿದು. ಇದರಲ್ಲಿ 11 ಲೇಖನಗಳಿದ್ದು, ಕಳೆದ ಆರು ವರ್ಷಗಳಿಂದ ವಿವಿಧ ವಿಚಾರಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳು, ವಿಚಾರಗಳು ಇಲ್ಲಿವೆ. ಎಚ್.ವಿ.ಸಾವಿತ್ರಮ್ಮ ಚಿತ್ರಿಸಿರುವ ಕುಟುಂಬ ಮತ್ತು ಸಮಾಜ, ಶತಮಾನದ ಲೇಖಕಿಯರು: ಇಂದಿರಾ ವಾಣಿ, ಎಚ್.ಎಸ್.ಪಾರ್ವತಿ ಅವರ ಕಥಾ ಸಾಹಿತ್ಯ, ಹಳಗನ್ನಡ ಸಾಹಿತ್ಯದಲ್ಲಿ ಮಹಿಳೆ, ಮಹಿಳಾ ಶೋಷಣೆಯ ಛದ್ಮವೇಷಗಳು, ಇತರ ಲೇಖನಗಳು ಇಲ್ಲಿವೆ.

ನುಡಿಗೆ ಕೇಡಿಲ್ಲವಾಗಿ

ಮುನ್ನುಡಿಗಳು

ಡಾ. ಜಾಜಿ ದೇವೇಂದ್ರಪ್ಪ

ಪುಟ: 156 ಬೆಲೆ: ರೂ. 160

ಪ್ರಥಮ ಮುದ್ರಣ: 2020

ಶ್ರೀ ಮರಡಿಲಿಂಗೇಶ್ವರ ಪ್ರಕಾಶನ

ಸಂಪರ್ಕ: 9481662735

ನಾನಾ ಲೇಖಕರ ಕೃತಿಗಳಿಗೆ ಡಾ.ದೇವೇಂದ್ರಪ್ಪನವರು ಬರೆದುಕೊಟ್ಟ 32 ಮುನ್ನುಡಿಗಳು ಇಲ್ಲಿವೆ. ಮೌನೇಶ್ ಬಡಿಗೇರರ ಕಾವ್ಯ ಬಿಸಿಲು ಬೆಳದಿಂಗಳು, ಡಾ.ಮೈತ್ರೇಯಣಿಯವರ ಮನಕರಗದವರಲ್ಲಿ ಕೃತಿ ಪರಿಶೀಲನೆ, ಡಾ.ಎ.ಎಂ.ಸಿದ್ದೇಶ್ವರಿಯವರ ಬಳ್ಳಾರಿ ಜಿಲ್ಲೆಯ ಜನಪದ ಆಚರಣೆಗಳು, ಇತರ ಮುನ್ನುಡಿಗಳು ಇಲ್ಲಿವೆ.

ನಿಗೂಢ ನಾಣ್ಯ

ಕಾದಂಬರಿ

ವಿಠಲ್ ಶೆಣೈ

ಪುಟ: 160 ಬೆಲೆ: ರೂ. 200

ಪ್ರಥಮ ಮುದ್ರಣ: 2020

ಮೈ ಲ್ಯಾಂಗ್ ಬುಕ್ಸ್ ಪ್ರಕಾಶನ

ಸಂಪರ್ಕ: 9845904451

ಕಾದಂಬರಿಯ ಆರಂಭದಲ್ಲಿರುವ ಪದಗಳಿವು: “ಇದೊಂದು ಕಾಲ್ಪನಿಕ ಕಥೆ. ಬ್ಲಾಕ್ ಚೈನ್, ಬಿಟ್ ಕಾಯಿನ್ ತಂತ್ರಜ್ಞಾನದ ತಿರುಳನ್ನು ಕಥೆಮ ಮೂಲಕ ವಿವರಿಸುವ ಒಂದು ಪ್ರಯತ್ನ. ಯಾವುದೇ ಪಾತ್ರಗಳು ಅಥವಾ ಸನ್ನಿವೇಶಗಳು, ನಿಜ ಜೀವನದಲ್ಲಿ ಸಾಮ್ಯತೆಯನ್ನು ಹೊಂದಿದ್ದರೆ, ಅದು ಕೇವಲ ಆಕಸ್ಮಿಕ.’’

ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್

ಪ್ರೊ. ಎಂ.ಜಿ. ರಂಗಸ್ವಾಮಿ

ಪುಟ: 152 ಬೆಲೆ: ರೂ.150

ಪ್ರಥಮ ಮುದ್ರಣ: 2020

ಸಿವಿಜಿ ಪಬ್ಲಿಕೇಶನ್ಸ್

ಸಂಪರ್ಕ: 9448948667

ಜಿಲ್ಲೆಯ ಪ್ರವೇಶ, ಹಿರಿಯೂರಿನಲ್ಲಿ 14 ದಿನಗಳು, ಗಣಿಗಾರಿಕೆ, ಬುಕಾನನ್ ಕಂಡ ಚಿತ್ರದುರ್ಗ ಜಿಲ್ಲೆ, ಹಿರಿಯೂರಿನಲ್ಲಿ ಬುಕಾನನ್, ತೂಕ ಮತ್ತು ಅಳತೆ ಪದ್ಧತಿಗಳ ವಿವರ ಲೇಖನಗಳು ಕೃತಿಯಲ್ಲಿವೆ. ಬ್ರಿಟಿಷ್ ಸರ್ಕಾರದ ಬಂಗಾಳ ಪ್ರಾಂತ್ಯದಲ್ಲಿ ವೈದ್ಯ ಸೇವೆಯಲ್ಲಿದ್ದ ಫ್ರಾನ್ಸಿಸ್ ಬುಕಾನನ್ (1762-1829) ಭಾರತಾದ್ಯಂತ ಸುತ್ತಿ ತಾವು ಕಂಡದ್ದನ್ನು ದಾಖಲಿಸಿದವರು.  

ಫ್ರೆಡೆರಿಕ್ ಏಂಗೆಲ್ಸ್

ಡಾ. ಜಿ. ರಾಮಕೃಷ್ಣ

ಪುಟ: 144 ಬೆಲೆ: ರೂ. 150

ದ್ವಿತೀಯ ಮುದ್ರಣ: 2021

ನವಕರ್ನಾಟಕ ಪಬ್ಲಿಕೇಷನ್ಸ್

ಸಂಪರ್ಕ: 080-22161900

ಜರ್ಮನ್ ತತ್ವಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಶಾಸ್ತ್ರಜ್ಞ, ಪತ್ರಕರ್ತ, ಕ್ರಾಂತಿಕಾರಿ ಸಮಾಜವಾದಿಯಾಗಿದ್ದ ಫ್ರೆಡೆರಿಕ್ ಏಂಗೆಲ್ಸ್‍ರ (1820-1878) ಜನ್ಮ ದ್ವಿಶತಮಾನೋತ್ಸವ ವರ್ಷವಿದು. ಈ ಸಂದರ್ಭದಲ್ಲಿ ಹೊರತಂದ ಕೃತಿ ಇದು. ಏಂಗೆಲ್ಸ್‍ರನ್ನು ಜಗತ್ತಿನ ಮೊದಲ ಮಾಕ್ರ್ಸ್‍ವಾದಿ ಎಂದೂ ಕರೆಯುತ್ತಾರೆ.

ಬಿಸಿಲ್ಗುದುರೆಯ ನೋವು

ಕವಿತೆಗಳು

ಸುನೈಫ್

ಪುಟ: 116 ಬೆಲೆ: ರೂ.100

ಪ್ರಥಮ ಮುದ್ರಣ: 2020

ನಿರಂತರ ಪ್ರಕಾಶನ

ಸಂಪರ್ಕ: 9606276591

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮೂಲದವರಾದ ಸುನೈಫ್‍ರ 58 ಕವನಗಳು, 15 ಗಝಲ್‍ಗಳು ಕೃತಿಯಲ್ಲಿವೆ. ಅಜ್ಜಿಯ ಗಣಿತಶಾಸ್ತ್ರ, ಇದಿ ಮತ್ತು ಈದಿ, ನಮ್ಮೂರ ಫಕೀರ, ಯಾರವಳು, ಪ್ರೇಮದಲ್ಲಿ, ಉರುಮಾ ಫಲ, ಕೂಡು ರಸ್ತೆ, ಸಂಗೀತ ಮತ್ತು ಇತರ ಕವನಗಳಿವೆ. ಬಲ್ಲವರು ಹೇಳುವರು, ನೆನಪಿನ ಹಕ್ಕಿ ಇತರ ಗಝಲ್‍ಗಳಿವೆ. 

ಸುವರ್ಣಮುಖಿ

ಸಿದ್ಧರಬೆಟ್ಟದ ಆಸುಪಾಸಿನ ಅಧ್ಯಯನ

ಡಾ. ಸಿದ್ಧಲಿಂಗಯ್ಯ ಹೊಲತಾಳು

ಪುಟ: 464 ಬೆಲೆ: ರೂ. 400

ಪ್ರಥಮ ಮುದ್ರಣ: 2020

ಪ್ರಕಾಶನ: ಸ್ಟೂಡೆಂಟ್ ಬುಕ್ ಕಂಪನಿ

ಸಂಪರ್ಕ: 9731290920

ಸಿದ್ಧರಿಗೆ, ಸಾವಿರಾರು ಔಷಧೀಯ ಗಿಡಮೂಲಿಕೆಗಳಿಗೆ ಆವಾಸಸ್ಥಾನವಾಗಿದ್ದ ಸಿದ್ಧರಬೆಟ್ಟವು ಅಧ್ಯಯನ ಕ್ಷೇತ್ರ. ಸಿದ್ಧರಬೆಟ್ಟದ ಸುತ್ತಲಿನ ಹಳ್ಳಿಗಳು, ಪರಿಸರಗಳನ್ನೆಲ್ಲ ಸಂದರ್ಶಿಸಿ ಬರೆದ ಬರಹಗಳಿವು. ಅಟ್ಟುಂಡ ಬಂಡೆಯ ಮೇಲೆ ಹಿಟ್ಟುಂಡ ಪ್ರಸಂಗ, ಹಳ್ಳಿಗಳ ನಂಬಿಕೆಯ ಕತೆ ದೇವಕನ್ನಿಕೆಯರ ಪ್ರಸಂಗಗಳು ಮರೆಯಲಾಗದ ಅನುಭವ ನೀಡುತ್ತವೆ. ಚನ್ನರಾಯನದುರ್ಗ, ಬೂದಗವಿ, ತೋವಿನಕೆರೆ, ಬೆಂಡೋಣೆ, ಬರಕ, ಜೋನಿಗರಹಳ್ಳಿಯಂತಹ ಹಲವು ಹಳ್ಳಿಗಳು ಹೇಗೆ ನಿಷ್ಪತ್ತಿ ಪಡೆದಿವೆ ಎಂಬುದು ತಿಳಿಯುತ್ತದೆ.

Leave a Reply

Your email address will not be published.