ಆರ್ ಬಿಐ ‘ಅನ್-ರಿಸರ್ವಡ್’ ಆಗಬೇಕು

– ಪುರುಷೋತ್ತಮ

ಸದ್ಯಕ್ಕೆ ಆರ್ಬಿಐ ಕೇಂದ್ರ ಸರ್ಕಾರಕ್ಕೆ ಮಣಿದಂತೆ ಕಾಣುತ್ತಿದೆಯಾದರೂ ಮುಂದಿನ ದಿನಗಳಲ್ಲಿ ಆರ್ಬಿಐ ತೆಗೆದುಕೊಳ್ಳುವ ನಿರ್ಧಾರಗಳಿಂದ ಈ ಸಮಸ್ಯೆ ಬಗೆಹರಿದಿದೆಯೋ ಇಲ್ಲವೋ ಎಂದು ತಿಳಿಯಬೇಕಿದೆ.

ಕೇಂದ್ರ ಸರ್ಕಾರಕ್ಕೆ ಎಲ್ಲ ಸ್ವಾಯತ್ತ ಸಂಸ್ಥೆಗಳೊಡನೆ ಒಂದಲ್ಲಾ ಒಂದು ತೊಂದರೆಯಿರುವಂತಿದೆ. ತೊಂದರೆಯಿರುವುದು ತನ್ನಿಂದ ತಾನೇ ಒಳ್ಳೆಯದೂ ಅಲ್ಲ ಕೆಟ್ಟದೂ ಅಲ್ಲ. ಕೆಲವೊಮ್ಮೆ ಯಾವುದು ಸರಿಯೋ ಅದಕ್ಕೆ ಪಟ್ಟುಹಿಡಿದು ಕುಳಿತು ಅಥವಾ ಕಾಲುಕೆರೆದು ಜಗಳ ಮಾಡಬೇಕಾಗುತ್ತದೆ. ಇಂತಹ ಸನ್ನವೇಶದಲ್ಲಿಯೇ ಯಾವುದು ಸರಿ, ಯಾವುದು ಸತ್ಯ ಹಾಗೂ ಯಾವುದು ಸೂಕ್ತ ಎಂದು ನಿರ್ಧಾರವಾಗುತ್ತದೆ. ಕೇಂದ್ರ ಸರ್ಕಾರದ ವಿತ್ತ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನಡುವಿನ ಮುಸುಕಿನ ಗುದ್ದಾಟವೂ ಇದೇ ದಿಕ್ಕಿನಲ್ಲಿದೆ ಎಂದರೆ ತಪ್ಪಾಗಲಾರದು.

ರಘುರಾಮ್ ರಾಜನ್ ನಿರ್ಗಮನದ ನಂತರ ಆರ್ಬಿಐನ ಗವರ್ನರ್ ಆಗಿ ಉರ್ಜಿತ್ ಪಟೇಲ್‍ರವರು ನಿಯುಕ್ತರಾದಾಗ ವಿತ್ತ ಮಂತ್ರಾಲಯ ಹಾಗೂ ದೇಶದ ಫೆಡರಲ್ ಬ್ಯಾಂಕಿನ ನಡುವೆ ಸಮನ್ವಯವನ್ನು ಎಲ್ಲರೂ ಅಪೇಕ್ಷಿಸಿದ್ದರು. ನಗದು ಅಮಾನ್ಯೀಕರಣದ ನಂತರದ ದಿನಗಳಲ್ಲಿ ಉರ್ಜಿತ್ ಪಟೇಲ್‍ರವರು ಹಲವಾರು ಸಂಸದೀಯ ಸಮಿತಿಗಳ ಮುಂದೆ ಹಾಜರಾಗಿ ಬ್ಯಾಂಕಿನ ಕ್ರಮವನ್ನು ಸಮರ್ಥಿಸಿಕೊಳ್ಳಬೇಕಾಗಿತ್ತು. ಹೆಚ್ಚೇನೂ ಆಕ್ಷೇಪಣೆ

ಮಾಡದೆ ಪಟೇಲ್‍ರವರು ಈ ಕಷ್ಟಸಾಧ್ಯ ಕೆಲಸವನ್ನು ಮಾಡಿ ಮುಗಿಸಿದ್ದರು. 14.5 ಲಕ್ಷ ಕೋಟಿ ರೂಗಳ ನೋಟು ಅಮಾನ್ಯೀಕರಣವಾದಾಗ ಕೇವಲ ರೂ.16,000 ಕೋಟಿ ನಗದು ಮಾತ್ರ ಮತ್ತೆ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರದೇ ಇದ್ದುದು ಕೇಂದ್ರ ಸರ್ಕಾರ ಮತ್ತು ಆರ್ಬಿಐಗಳೆರಡರಲ್ಲೂ ನಿರಾಸೆ ಮೂಡಿಸಿತ್ತು. ಆದರೆ ಕಳೆದೆರಡು ವರ್ಷಗಳಿಂದ ಹಿಗ್ಗಿದ ತೆರಿಗೆ ಸಂಗ್ರಹದಿಂದ ಕೇಂದ್ರ ಸರ್ಕಾರ ಕಪ್ಪುಹಣದ ಮೇಲಿನ ತನ್ನ ಸರ್ಜಿಕಲ್ ಸ್ಟ್ರೈಕ್ ಪರಿಣಾಮಕಾರಿಯಾಗಿದೆ ಎಂದು ತನಗೆ ತಾನೇ ಬೆನ್ನು ತಟ್ಟಿಕೊಂಡಿತ್ತು. ಅಮಾನ್ಯೀಕರಣದ ಪೀಡೆ ತೊಲಗಿತು, ಇನ್ನು ಬೇರೆ ಕೆಲಸ ನೋಡೋಣ ಎನ್ನುವಷ್ಟರಲ್ಲಿ ಇನ್ನೂ ಕೆಲವು ಸಮಸ್ಯೆಗಳು ಮುಂದೆ ಎದುರಾದವು.

 

  1.  ರಘುರಾಮ್ ರಾಜನ್‍ರವರ ಕಾಲದಿಂದಲೂ ಆರ್ಬಿಐ ಆರ್ಥಿಕ ವ್ಯವಸ್ಥೆಯಲ್ಲಿನ ಹಣದ ಪೂರೈಕೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಹಣದುಬ್ಬರದವನ್ನು ಶೇಕಡಾ ಐದರ ಒಳಗೆ ಇಳಿಸುವುದು ತನ್ನ ಮೂಲಭೂತ ಕರ್ತವ್ಯಗಳಲ್ಲಿ ಒಂದೆಂದು ಆರ್‍ಬಿಐ ನಂಬಿತ್ತು. ಇದನ್ನು ಸಾಧಿಸಲು ಹಣದ ಪೂರೈಕೆಯ ಮೇಲೆಯೇ ಕಡಿವಾಣ ಹಾಕಲಾಗಿತ್ತು. ಇದರಿಂದ ದೇಶೀಯ ಹಣಮಾರುಕಟ್ಟೆಯಲ್ಲಿ ಸಾಲ ಹಾಗೂ ಹೂಡಿಕೆಗೆ ಹಣವೇ ಸಿಗದಂತಹ ಪರಿಸ್ಥಿತಿ ಉಂಟಾಗಿತ್ತು.
  2.  ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಎನ್‍ಪಿಐ(ಅನುತ್ಪಾದಕ ಕೆಟ್ಟಸಾಲ)ದ ಮೇಲೆಯೂ ಆರ್ಬಿಐ ಹೆಚ್ಚಿನ ನಿಯಂತ್ರಣ ಹೇರಿತ್ತು. ಯಾವ ಸಾಲಗಳನ್ನು ಅನುತ್ಪಾದಕ ಎಂದು ಪರಿಗಣಿಸುವ ಮಾನದಂಡವನ್ನೂ ಕಠಿಣಗೊಳಿಸಿತ್ತು. ಇದರಿಂದ ಮತ್ತೆ ಸಾಲ ನೀಡಬಲ್ಲ ಮೊತ್ತವೂ ಕೂಡಾ ಬ್ಯಾಂಕುಗಳ ಬಳಿ ಕ್ರಮೇಣ ಕಡಿಮೆಯಾಗಿತ್ತು.
  3.  ದೇಶದ ನಿರ್ಮಾಣ ಹಾಗೂ ವಸತಿ ವಲಯವು ಕಳೆದ ಕೆಲವಾರು ವರ್ಷಗಳಲ್ಲಿ ನಷ್ಟ ಅನುಭವಿಸಿತ್ತು. ನೋಟು ಅಮಾನ್ಯೀಕರಣ, ರೇರಾ ಮತ್ತು ಜಿಎಸ್‍ಟಿ ಕಾರಣದಿಂದ ಈ ರಿಯಾಲ್ಟಿ ವಲಯ ಮತ್ತಷ್ಟು ಕುಸಿದಿತ್ತು. ಈ ವಲಯಕ್ಕೆ ನೀಡಬಹುದಾದ ಸಾಲದ ಪರಿಮಿತಿಯನ್ನು ಬ್ಯಾಂಕುಗಳು ಮೀರಿದ್ದ ಕಾರಣದಿಂದ ಈ ವಸತಿ ಹೂಡಿಕೆ ಮತ್ತು ನಿರ್ಮಾಣದ ಕಂಪನಿಗಳು ಬಾಣಲಿಯಿಂದ ಬೆಂಕಿಗೆ ಬೀಳುವ ಸ್ಥಿತಿಯಲ್ಲಿದ್ದವು.
  4.  ಕೇಂದ್ರ ಸ್ವಾಮ್ಯದ ಐಎಲ್‍ಎಫ್‍ಎಸ್ ಸಂಸ್ಥೆಯು ಕೆಟ್ಟಅನುತ್ಪಾದಕ ಸಾಲ, ಕೆಟ್ಟ ಆಡಳಿತ ಮತ್ತು ಹಣದ ಮುಗ್ಗಟ್ಟಿನ ಕಾರಣದಿಂದ ಉಸಿರುಗಟ್ಟಿ ಕಾಲೊಗೆದಿತ್ತು. ರಿಯಾಲ್ಟಿ ವಲಯಕ್ಕೆ ಹೆಚ್ಚಿನ ಸಾಲ ನೀಡಿದ್ದ ಈ ಪ್ರಮುಖ ಬ್ಯಾಂಕೇತರ ಹಣಕಾಸು ಸಂಸ್ಥೆ ದಿವಾಳಿಯಾದ್ದು ದೇಶದ ಉಳಿದ ಹಣಕಾಸು ಸಂಸ್ಥೆಗಳ ನಿದ್ದೆಗೆಡಿಸಿತ್ತು. ಇವುಗಳಲ್ಲಿ ಹೂಡಿಕೆಯಾಗಿದ್ದ ಸಾರ್ವಜನಿಕರ ಹಣ ಕೂಡಾ ಹಿಂದೆಗೆದುಕೊಳ್ಳುವ ಹರಿಬಿರಿಯಲ್ಲಿ ಒಟ್ಟಾರೆ ಎನ್‍ಬಿಎಫ್‍ಸಿ ವಲಯವೇ ಕುಸಿದುಬೀಳುವುದೇನೋ ಎಂಬ ಹೆದರಿಕೆಯನ್ನೂ ಮೂಡಿಸಿತ್ತು.
  5.  ಬಹಳ ಮುಖ್ಯವಾಗಿ ಆರ್ಬಿಐ ತನ್ನ ಹಣಕಾಸು ನೀತಿಯನ್ನು ಸಡಿಲಸದೆ ಬ್ಯಾಂಕುಗಳು ತನ್ನ ಬಳಿ ಇಡಬೇಕಾದ ಕ್ಯಾಷ್ ರಿಸರ್ವ್ ರೇಷಿಯೋ, ಬ್ಯಾಂಕುಗಳಿಗೆ ಸಾಲ ನೀಡುವ ಮೇಲಿನ ಬಡ್ಡಿದರದ ರಿಪೋ ರೇಟ್, ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಲ್ಲಿ ಹಣ ಇಟ್ಟಾಗ ನೀಡುವ ಬಡ್ಡಿಯ ರಿವರ್ಸ್ ರಿಪೋ ರೇಟ್‍ಗಳಲ್ಲಿ ಅತ್ಯಂತ ಮಡಿವಂತಿಕೆ ತೋರಿತ್ತು. ಇದರಿಂದ ದೇಶದ ಬ್ಯಾಂಕುಗಳ ಬಳಿ ಸಾಲ ನೀಡಲು ಹಣವೇ ಇಲ್ಲದಂತಹ ಪರಿಸ್ಥಿತಿಯೂ ಮೂಡಿತ್ತು. ರಿಯಾಲ್ಟಿ ವಲಯ ಮತ್ತು ಎನ್‍ಬಿಎಫ್‍ಸಿ ವಲಯಗಳಿಗೆ ಸಾಲ ನೀಡಿಕೆಯ ಶೇಕಡಾವಾರು ಪ್ರಮಾಣ ಮೀರಿದ್ದರಿಂದ ಈ ವಲಯಗಳು ಹೆದರಿ ನಿಂತಿದ್ದವು. ಉದ್ಯೋಗ ಸೃಷ್ಟಿಗೆ ಅಗತ್ಯವಾದ ಸಣ್ಣ ಮತ್ತು ಮಧ್ಯಮ ಉದ್ದಿಮೆ ಕ್ಷೇತ್ರ ಕೂಡಾ ಸಾಲದ ಕೊರತೆಯನ್ನೇ ತನ್ನ ಅತಿ ಪ್ರಮುಖ ತೊಂದರೆಯಾಗಿ ಬಿಂಬಿಸಿತ್ತು.

ಸಿಕ್ಕಸಿಕ್ಕ ವೇದಿಕೆಯಲ್ಲೆಲ್ಲಾ ಪ್ರಧಾನಿ ಮೋದಿ ಹಾಗೂ ವಿತ್ತಸಚಿವ ಜೇಟ್ಲಿಯವರು ಎರಡಂಕಿಯ ಪ್ರಗತಿ (ವಾರ್ಷಿಕ ಶೇಕಡಾ 10ಕ್ಕಿಂತ ಹೆಚ್ಚಿನ) ಬಯಸಿ ಹೇಳಿಕೆ ನೀಡುತ್ತಿದ್ದರು. ಆದರೆ ಆರ್ಬಿಐ ಮಡಿವಂತಿಕೆ ಒಳಗೊಂಡಂತೆ ಹಲವಾರು ಕಾರಣಗಳಿಂದ ದೇಶದ ಆರ್ಥಿಕ ಪ್ರಗತಿ ಶೇಕಡಾ 6 ರಿಂದ 7ರ ಮಧ್ಯದಲ್ಲಿಯೇ ಉಳಿದುಬಿಟ್ಟಿತ್ತು. ಇದನ್ನು ಹೇಗಾದರೂ ಹತ್ತರ ಗಡಿದಾಟಿಸುವ ಉಮೇದಿನಲ್ಲಿ ವಿತ್ತ ಇಲಾಖೆಯು ಆರ್ಬಿಐ ಮೇಲೆ ಚಾಟಿ ಬೀಸಿತ್ತು. ಹಣದುಬ್ಬರದ ನಿಯಂತ್ರಣವನ್ನೇ ತನ್ನ ಏಕಮೇವಾದ್ವಿತೀಯ ಅಜೆಂಡಾವನ್ನಾಗಿ ಪರಿಗಣಿಸಿದ್ದ ಆರ್ಬಿಐ ವಿತ್ತ ಸಚಿವಾಲಯಕ್ಕೆ ಮಣಿಯದೆ ಸೆಡ್ಡು ಹೊಡೆದಿತ್ತು. ಕೇಂದ್ರ ಸರ್ಕಾರ ಅಗತ್ಯ ವಲಯಗಳಿಗೆ ಸಾಲದ ಮಿತಿ ಹೆಚ್ಚಳ ಹಾಗೂ ಎಲ್ಲಾ ಸಾಲಗಳ ಮೇಲೆ ಬಡ್ಡಿಯ ಇಳಿಕೆ ಬಯಸಿತ್ತು. ಇದಕ್ಕೆ ಸುಲಭವಾಗಿ ಒಪ್ಪದ ಆರ್‍ಬಿಐನೊಡನೆ ಸಂಘರ್ಷಕ್ಕೂ ಇಳಿದಿತ್ತು. ಇದುವರೆಗೆ ಎಂದೂ ಉಪಯೋಗಿಸದೆ ಕೇವಲ ಆರ್ಬಿಐ ಕಾನೂನಿನಲ್ಲಿ ಮಾತ್ರ ಅಡಕವಾಗಿದ್ದ ಸೆಕ್ಷನ್ 7 ಅನ್ನು ಪ್ರಯೋಗಿಸುವುದಾಗಿಯೂ ಎಚ್ಚರ ನೀಡಿತ್ತು.

ಏನಿದು ಸೆಕ್ಷನ್ 7 ? ಕೇಂದ್ರ ಸರ್ಕಾರವು ಬಯಸಿದ ಹಣಕಾಸು ನೀತಿಯನ್ನು ಆರ್ಬಿಐ ಪಾಲಿಸದೇ ಇದ್ದ ಅಂತಿಮ ಸಂದರ್ಭದಲ್ಲಿ, ಆರ್ಬಿಐಗೆ ಕೇಂದ್ರವು ಪಾಲಸಲೇಬೇಕಾದ ಸೂಚನೆ ನೀಡುವ ಅಧಿಕಾರವನ್ನು ಈ ಆರ್ಟಿಕಲ್ 7 ಒಳಗೊಂಡಿದೆ. ಈ ಎಚ್ಚರಿಕೆಯ ನಂತರ ನವೆಂಬರ್ 19ರಂದು ಸಭೆ ಸೇರಿದ್ದ ಆರ್ಬಿಐ ಪೂರ್ಣ ನಿರ್ದೇಶಕ ಮಂಡಳಿ ವಿತ್ತ ಇಲಾಖೆಯ ಸಲಹೆಯನ್ನು ಮನ್ನಿಸುವುದಾಗಿ ಹೇಳಿಕೊಂಡಿದೆ. ಇದರಂತೆ ಸಣ್ಣ ಹಾಗೂ ಲಘು ಉದ್ಯಮಗಳಿಗೆ ಸದ್ಯಕ್ಕೆ 20,000 ಕೋಟಿ ರೂ.ಗಳ ಹೆಚ್ಚುವರಿ ಸಾಲ ನೀಡಿಕೆ ಹಾಗೂ ಕ್ರಮೇಣ ಬಡ್ಡಿ ನೀತಿಯಲ್ಲಿನ ಇಳಿಕೆಯ ಆಶ್ವಾಸನೆಯೂ ಸೇರಿದೆ. ಇದರಿಂದ ಹಣದುಬ್ಬರ ನಿಯಂತ್ರಣದ ತನ್ನ ಏಕೈಕ ಗುರಿಯಿಂದ ಕಣ್ಣು ತೆಗೆದು ಆರ್ಬಿಐ ದೇಶದ ಒಟ್ಟು ಆರ್ಥಿಕತೆಯ ಹಾಗೂ ಪ್ರಗತಿ ಉತ್ತೇಜನದ ಕಡೆಗೆ ಗಮನ ಹರಿಸುವುದೆಂಬ ಆಶಯ ಮೂಡಿದೆ. ಸದ್ಯಕ್ಕೆ ಆರ್ಬಿಐ ಕೇಂದ್ರ ಸರ್ಕಾರಕ್ಕೆ ಮಣಿದಂತೆ ಕಾಣುತ್ತಿದೆಯಾದರೂ ಮುಂದಿನ ದಿನಗಳಲ್ಲಿಆರ್ಬಿಐ ತೆಗೆದುಕೊಳ್ಳುವ ನಿರ್ಧಾರಗಳಿಂದ ಈ ಸಮಸ್ಯೆ ಬಗೆಹರಿದಿದೆಯೋ ಇಲ್ಲವೋ ಎಂದು ತಿಳಿಯಬೇಕಿದೆ.

Leave a Reply

Your email address will not be published.