ಆರ್.ಎಸ್.ಎಸ್. ಹುಟ್ಟು ಮತ್ತು ಬೆಳವಣಿಗೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕೇಶವ್ ಬಲಿರಾಂ ಹೆಡ್ಗೆವಾರ್ ಎಂಬ ನಾಗಪುರದ ವೈದ್ಯರು ಬ್ರಿಟಿಷ್ ಆಳ್ವಿಕೆಗೊಳಪಟ್ಟಿದ್ದ ಅಂದಿನ ಭಾರತದಲ್ಲಿ ಸ್ಥಾಪಿಸಿದರು. ವೈದ್ಯಕೀಯ ಶಿಕ್ಷಣ ಪಡೆಯಲು ಕೊಲ್ಕತ್ತಕ್ಕೆ ಹೋಗಿದ್ದ ಹೆಡ್ಗೆವಾರ್ ಅನುಶೀಲನ ಸಮಿತಿ ಎಂಬ ಬ್ರಿಟಿಷ್ ವಿರೋಧಿ ಗುಂಪಿನ ಸದಸ್ಯರಾಗಿ ಗುರುತಿಸಿಕೊಡಿದ್ದರು. ನಾಗಪುರಕ್ಕೆ ಹಿಂದಿರುಗಿದ ಬಳಿಕ 1923ರಲ್ಲಿ ಪ್ರಕಟಗೊಂಡ ಸಾವರ್ಕರ್‍ರವರ “ಹಿಂದುತ್ವ” ಎಂಬ ಪುಸ್ತಕದಿಂದ ಹೆಡ್ಗೆವಾರ್ ಪ್ರಭಾವಿತರಾಗಿದ್ದು, 1925 ರಲ್ಲಿ ರತ್ನಗಿರಿ ಸೆರೆಮನೆಯಲ್ಲಿ ಅವರನ್ನು ಭೇಟಿ ಮಾಡಿದ್ದರು. ಹಿಂದೂ ಸಮಾಜವನ್ನು ಬಲಪಡಿಸುವ ಉದ್ದೇಶದಿಂದ ಹೆಡ್ಗೆವಾರ್‍ರವರು, ಆರ್. ಎಸ್. ಎಸ್ ಅನ್ನು ಸ್ಥಾಪಿಸಿದರು. ಕೆಲವೇ ಮಂದಿ ಬ್ರಿಟಿಷರು ವಿಶಾಲ ಭಾರತವನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳಲು ಹಿಂದೂಗಳ ದೌರ್ಬಲ್ಯ ಮತ್ತು ಅನೈಕ್ಯತೆಯೇ ಕಾರಣವೆಂದು ಹೆಡ್ಗೆವಾರ್ ಭಾವಿಸಿದ್ದರು.

ಹೆಡ್ಗೆವಾರ್ ಹಿಂದೂ ಯುವಕರನ್ನು ಸಂಘಟಿಸಿ ಅವರಿಗೆ ಬ್ರಿಟಿಷ್ ಪೊಲೀಸರಿಗೆ ಇದ್ದಂತಹ ಸಮವಸ್ತ್ರಗಳನ್ನು ನಿಗದಿಪಡಿಸಿದರು. ಅಲ್ಲದೆ ಅವರಿಗೆ ಪ್ಯಾರಾ ಮಿಲಿಟರಿ ಯುದ್ಧ ತಂತ್ರಗಳ ತರಬೇತಿಯನ್ನು ನೀಡುತ್ತಿದ್ದರು. ಹಿಂದೂ ಧಾರ್ಮಿಕ ವಿಧಿಗಳ ಮೂಲಕ ಭಾರತದ ಭವ್ಯ ಇತಿಹಾಸದ ಅರಿವನ್ನು ಎತ್ತಿಹಿಡಿಯುವುದು ಹೆಡ್ಗೆವಾರ್‍ರ ಉದ್ದೇಶವಾಗಿತ್ತು. ವೀರಯೋಧನಾಗಿದ್ದ ಶಿವಾಜಿ ಮುಂತಾದ ಧೀರರ ಬಗ್ಗೆ ಪರಿಚಯಿಸುತ್ತಾ ಬೌದ್ಧಿಕ ತರಗತಿಗಳನ್ನು ನಡೆಸುವುದರಲ್ಲಿ ಹೆಡ್ಗೆವಾರ್‍ಗೆ ವಿಶೇಷವಾದ ಆಸಕ್ತಿಯಿತ್ತು. ಶಿವಾಜಿಯ ಕೇಸರಿ ಭಗವಾಧ್ವಜ ಆರ್.ಎಸ್.ಎಸ್‍ನ ಲಾಂಛನವಾಯಿತು. ಹಿಂದೂ ಮೆರವಣಿಗೆಗಳನ್ನು ಪ್ರತಿರೋಧಿಸುತ್ತಿದ್ದ ಮುಸ್ಲಿಮರನ್ನು ಎದುರಿಸುವುದು ಸಂಘಟನೆಯ ಸಾರ್ವಜನಿಕ ಕಾರ್ಯಗಳಲ್ಲೊಂದಾಗಿತ್ತು. ಎರಡು ವರ್ಷಗಳ ಸಂಘಟನಾತ್ಮಕ ಕಾರ್ಯದ ನಂತರ ಹೆಡ್ಗೆವಾರ್ 1927ರಲ್ಲಿ ಸಂಘದ “ಅಧಿಕಾರಿಗಳ ಶಿಬಿರ” ವನ್ನು ಸಂಘಟಿಸಿ ಪ್ರಮುಖ ಕಾರ್ಯಕರ್ತರ ತಂಡವೊಂದನ್ನು ರಚಿಸಿದರು. ಅಂತಹ ಜನರನ್ನು ಹೆಡ್ಗೆವಾರ್ ಪ್ರಚಾರಕರೆಂದು ಕರೆದರು. ಪ್ರಚಾರಕರು ತಮ್ಮ ವೃತ್ತಿ ಹಾಗೂ ಕೌಟುಂಬಿಕ ಜೀವನವನ್ನು ತ್ಯಜಿಸಿ ಶಾಖೆಯ ಜಾಲವನ್ನು ಹರಡುವ ಸಲುವಾಗಿ ಪ್ರಚಾರಕರನ್ನು ವಿವಿಧ ಸ್ಥಳಗಳಿಗೆ ಹೋಗಬೇಕಿತ್ತು. 

ಹೆಡ್ಗೆವಾರ್ ಅವರಿಗಿದ್ದ ಉದ್ದೇಶಗಳ ಬಗ್ಗೆ ವಿವಿಧ ವಿದ್ವಾಂಸರುಗಳು ವಿಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬಹು ಸಂಖ್ಯಾತ ಸಮುದಾಯಕ್ಕೆ ‘ಹೊಸ ಶಾರೀರಿಕ ಶಕ್ತಿಯನ್ನು’ ನೀಡುವ ಉದ್ದೇಶದಿಂದ ಹಾಗೂ ಹಿಂದುತ್ವ ಸಿದ್ಧಾಂತವನ್ನು ಪ್ರಚಾರ ಮಾಡಲು ಆರ್. ಎಸ್. ಎಸ್ ಸ್ಥಾಪಿತವಾಯಿತೆಂದು ಜಾ¥sóÉ್ರಲಾಟ್ ಹೇಳಿದ್ದಾರೆ. ಅದಕ್ಕೆ ಪರ್ಯಾಯವಾದ ವ್ಯಾಖ್ಯಾನಗಳು ಇವೆ.  1920ರ ದಶಕದಲ್ಲಿ ಹಿಂದೂ ಮುಸ್ಲಿಂ ಸಂಬಂಧದಲ್ಲಿ ತೀವ್ರವಾದ ನೇತ್ಯಾತ್ಮಕ ಬೆಳವಣಿಗೆಗಳಾದವು. ಖಿಲಾಫತ್ ಚಳುವಳಿ, ಮಲಬಾರ್‍ನ ಮೊಪ್ಲಾ ದಂಗೆ ಹಾಗೂ ನಾಗಪುರದ ಕೋಮು ಗಲಭೆಗಳಲ್ಲಿ ಹಿಂದೂಗಳಿಗೆ ಅನ್ಯಾಯವಾಯಿತೆಂದು ಭಾವಿಸಲಾಯಿತು. ಬ್ರಿಟಿಷರು, ಮುಸಲ್ಮಾನ ಹಾಗೂ ಕ್ರಿಶ್ಚಿಯನ್ನರು ಬೇರೆ ದೇಶದ ಹೊರಗಿನ ಶಕ್ತಿಗಳಾದುದರಿಂದ ಹಿಂದೂಗಳ ಅನೈಕ್ಯತೆಯನ್ನು ಅವರು ದುರುಪಯೋಗಪಡಿಸಿಕೊಂಡಿದ್ದಾರೆ. ಆದ್ದರಿಂದ ಹಿಂದುತ್ವ ಮತ್ತು ಭಾರತೀಯತೆಯನ್ನು, ಹೊರಗಿನ ಶಕ್ತಿಗಳ ಕೆಲವೊಂದು ಸಂಘಟನಾ ತಂತ್ರಗಳ ಜೊತೆಯಲ್ಲಿ ಅನನ್ಯ ರೀತಿಯಲ್ಲಿ ಸಂಯೋಜಿಸಿ ಅದರ ಆಧಾರದ ಮೇಲೆ ಹೋರಾಡಬೇಕೆಂಬುದು ಆರ್. ಎಸ್. ಎಸ್‍ನ ವಿಚಾರಸರಣಿಯಾಗಿತ್ತೆಂದು ಕ್ರಿಸ್ಟೋಫೆ ಜಾಫ್ರೆಲಟ್ ಹೇಳಿದ್ದಾರೆ.

ಪ್ರಾರಂಭದಲ್ಲಿ ಕಾಂಗ್ರೆಸ್‍ನೊಳಗಿನ ಒಂದು ವಿಶೇಷ ಗುಂಪಾಗಿದ್ದ ಹಿಂದೂ ಮಹಾಸಭಾದ ಪ್ರಭಾವ ಆರ್. ಎಸ್. ಎಸ್‍ನ ಮೇಲೆ ತೀವ್ರವಾಗಿತ್ತು. ಪ್ರಮುಖ ಹಿಂದೂ ನಾಯಕರಾಗಿದ್ದ ಮದನ ಮೋಹನ ಮಾಳವೀಯ ಮುಂತಾದವರು ಈ ವೇದಿಕೆಯಲ್ಲಿ ಒಂದಾಗಿ ಸೇರುತ್ತಿದ್ದರು. ಕೆಳ ವರ್ಗಕ್ಕೆ ಸೇರಿದವರನ್ನು ಹಿಂದೂಗಳೆಂದು ಒಪ್ಪಿಕೊಂಡು ಅವರಿಗೆ ದೇವಾಲಯದ ಪ್ರವೇಶ, ಬಾವಿಗಳ ಬಳಕೆ ಮತ್ತು ಶಿಕ್ಷಣ ಮುಂತಾದ ಹಕ್ಕುಗಳನ್ನು ನೀಡಬೇಕು ಮತ್ತು ಮುಸ್ಲಿಮರಲ್ಲಿರುವ ಪುಂಡರಿಗೆ ಭಯವಾಗುವಂತೆ ಹಿಂದೂಗಳನ್ನು ಸಶಕ್ತಗೊಳಿಸಬೇಕು ಎಂಬುದು ಮಾಳವೀಯ ಅವರ ಅಭಿಪ್ರಾಯವಾಗಿತ್ತು. ನಂತರದಲ್ಲಿ ಹಿಂದೂ ಮಹಾಸಭಾದ ನಾಯಕರಾಗಿದ್ದ ವಿ.ಡಿ. ಸಾವರ್ಕರ್‍ರವರ “ಹಿಂದುತ್ವ” ವೈಚಾರಿಕತೆಯು ಹೆಡ್ಗೆವಾರ್ ಮೇಲೆ ತೀವ್ರ ಪ್ರಭಾವವನ್ನು ಬೀರಿತ್ತು. 1925ರಲ್ಲಿ ವಿಜಯ ದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ವಿಧ್ಯುಕ್ತವಾಗಿ ರಚಿಸಲಾಯಿತು. ಅಂದಿನ ಪ್ರಾರಂಭದ ಸಭೆಯಲ್ಲಿ ಹೆಡ್ಗೆವಾರ್‍ರವರೊಂದಿಗೆ ಹಿಂದೂ ಮಹಾಸಭಾದ ನಾಲ್ವರು ನಾಯಕರಿದ್ದರು. ಅವರೆಂದರೆ ಬಿ. ಎಸ್. ಮೂಂಜೆ, ಎಲ್. ವಿ ಪರಾಂಜಪೆ, ಸಾವರ್ಕರ್ ಮತ್ತು ಬಿ.ಬಿ. ತೋಲ್‍ಕರ್.ಇವರೆಲ್ಲರೂ ಆರ್. ಎಸ್ ಎಸ್ ಗಾಗಿ ತಮ್ಮ ಜೀವನವಿಡೀ ಕಾರ್ಯ ನಿರ್ವಹಿಸಿದರು.

ಆರ್ ಎಸ್ ಎಸ್ ರಚನೆಯಾದ ನಂತರ ಆ ಸಂಘಟನೆಯು, ಬ್ರಿಟಿಷರನ್ನು ವಿರೋಧಿಸುವ ಯಾವುದೇ ರಾಜಕೀಯ ಸಂಘಟನೆಗಳಿಂದ ದೂರವಿದ್ದಿತು. ಮುಸಲ್ಮಾನರೊಂದಿಗೆ ಸಹಕರಿಸುವ ಗಾಂಧೀಜಿಯವರ ನಿಲುವನ್ನು ಅದು ತಿರಸ್ಕರಿಸಿತು. ಯಾವುದೇ ರೀತಿಯ ಬ್ರಿಟಿಷ್-ವಿರೋಧಿ ರಾಜಕೀಯ ಚಟುವಟಿಕೆಗಳಲ್ಲಿ ಆರ್ ಎಸ್ ಎಸ್ ಭಾಗವಹಿಸುತ್ತಿರಲಿಲ್ಲ. ಗಾಂಧೀಜಿಯವರ 1930ರ ಏಪ್ರಿಲ್ ಸತ್ಯಾಗ್ರಹದಲ್ಲಿ ಹೆಡ್ಗೆವಾರ್ ವೈಯಕ್ತಿಕವಾಗಿ ಭಾಗವಹಿಸಿದರೂ ಸಂಘವು ಅದರಲ್ಲಿ ಭಾಗವಹಿಸಿರಲಿಲ್ಲ. ಕಾಂಗ್ರೆಸ್ 1934ರಲ್ಲಿ ತನ್ನ ಸದಸ್ಯರು ಆರ್ ಎಸ್ ಎಸ್, ಹಿಂದೂ ಮಹಾಸಭಾ ಹಾಗೂ ಮುಸ್ಲಿಂ ಲೀಗ್‍ನ ಸದಸ್ಯರಾಗುವುದನ್ನು ನಿಷೇಧಿಸಿತು.

1940ರಲ್ಲಿ ಸಂಘದ ಮುಖ್ಯಸ್ಥರಾದ ಎಂ ಎಸ್ ಗೋಲ್ವಾಲ್ಕರ್, ಸ್ವಾತಂತ್ರ್ಯ ಚಳವಳಿಯಿಂದ ಸಂಘವು ದೂರವಾಗುವುದನ್ನು ಮತ್ತಷ್ಟು ಬಲಪಡಿಸಿದರು. ಧರ್ಮ ಹಾಗೂ ಸಂಸ್ಕøತಿಯನ್ನು ರಕ್ಷಿಸುವ ಮೂಲಕ ಸ್ವಾತಂತ್ರ್ಯವನ್ನು ಗಳಿಸಬೇಕೆಂಬುದು ಗೋಲ್ವಾಲ್ಕರ್‍ರ ನಿಲುವಾಗಿತ್ತು. ಬ್ರಿಟಿಷ್-ವಿರೋಧಿ ರಾಷ್ಟ್ರೀಯತಾವಾದವು ಪ್ರತಿಗಾಮಿ ನಿಲುವೆಂದು ಗೋಲ್ವಾಲ್ಕರ್ ಕರೆದರು. ಅದರಿಂದಾಗಿ ಸಂಘವು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲ. ಬ್ರಿಟಿಷ್ ಭಾರತದಲ್ಲಿನ ಕಾನೂನು ವ್ಯವಸ್ಥೆಗೆ ಸಂಘದಿಂದ ಯಾವುದೇ ಪ್ರತಿರೋಧವಿಲ್ಲವೆಂಬುದನ್ನು ಬ್ರಿಟಿಷ್ ಸರ್ಕಾರ ಗಣನೆಗೆ ತೆಗೆದುಕೊಂಡಿತ್ತು. ಬಾಂಬೆ ಸರ್ಕಾರವು ಸಂಘವನ್ನು ಮುಕ್ತವಾಗಿ ಪ್ರಶಂಸಿಸಿತ್ತು. ಸರ್ಕಾರದ ಯಾವುದೇ ಆದೇಶಗಳನ್ನು ಉಲ್ಲಂಘಿಸುವುದಿಲ್ಲವೆಂದು ಸಂಘವು ಬ್ರಿಟಿಷ್ ಅಧಿಕಾರಿಗಳಿಗೆ ಭರವಸೆ ನೀಡಿತ್ತು. ಸಂಘವು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲಿಲ್ಲವೆಂಬುದನ್ನು ನಂತರದಲ್ಲಿ ಗೋಲ್ವಾಲ್ಕರ್ ಒಪ್ಪಿಕೊಂಡಿದ್ದಾರೆ.

ಮುಸಲ್ಮಾನರ ಕುರಿತಾದÀ ಕಾಂಗ್ರೆಸ್‍ನ ಮೃದು ಧೋರಣೆಯು ದೇಶದ ವಿಭಜನೆಗೆ ಕಾರಣವೆಂಬುದು ಸಂಘದ ನಿಲುವಾಗಿತ್ತು. ವಿಭಜನೆಯಿಂದುಂಟಾದ ಗಲಭೆಯು ಮಿಲಿಯಾಂತರ ಜನರ ವಲಸೆಗೆ ಕಾರಣವಾಗಿತ್ತು.  ನಾಯಕತ್ವದ ಅಧಿಕೃತ ಆದೇಶವಿರದಿದ್ದರೂ ಸಹ ಉತ್ತರ ಭಾರತದಲ್ಲಿ ಸಂಘದ ಕಾರ್ಯಕರ್ತರು ಕೋಮು ಗಲಭೆಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ದೇಶ ವಿಭಜನೆಗೆ ಗಾಂಧಿ, ನೆಹರೂ ಮತ್ತು ಪಟೇಲ್‍ರವರು ಕಾರಣವೆಂದು ಸಂಘವು ದೂರಿತು.

1947ರಲ್ಲಿ ಭಾರತೀಯ ಸಂವಿಧಾನ ರಚನಾ ಸಭೆಯು ರಾಷ್ಟ್ರಧ್ವಜವನ್ನು ಅಂಗೀಕರಿಸಿದ ಸಂದರ್ಭದಲ್ಲಿ ಸಂಘವು ತ್ರಿವರ್ಣ ಧ್ವಜವನ್ನು ಮಾನ್ಯ ಮಾಡಲಿಲ್ಲ. ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ಸಂಘದ ಮುಖಪತ್ರಿಕೆಯಾಗಿದ್ದ “ಆರ್ಗನೈಸರ್”ನಲ್ಲಿ ಈ ಕೆಳಗಿನಂತೆ ಹೇಳಲಾಗಿತ್ತು. “ವಿಧಿಯಾಟದಿಂದ ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದಿರುವವರು ನಮ್ಮ ಕೈಗೆ ಈ ತ್ರಿವರ್ಣ ಧ್ವಜವನ್ನು ಕೊಟ್ಟಿದ್ದಾರೆ”. “ಮೂರು” ಎಂಬ ಪದವೇ ಅಶುಭದ ಚಿಹ್ನೆಯಾಗಿದ್ದು… ಅದು ನಿಶ್ಚಿತವಾಗಿ ದೇಶಕ್ಕೆ ಮಾರಕವಾದುದು”.

ಗೋಲ್ವಾಲ್ಕರ್‍ರವರು ತಮ್ಮ ‘ಬಂಚ್ ಆ¥sóï ಥಾಟ್ಸ್’ ಎಂಬ ಪುಸ್ತಕದಲ್ಲಿ ಸಂವಿಧಾನದ ಬಗ್ಗೆ ಹೀಗೆ ಹೇಳಿದ್ದಾರೆ: ನಮ್ಮ ಸಂವಿಧಾನದಲ್ಲಿ ನಮ್ಮದೆನ್ನುವುದು ಏನೇನೂ ಇಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳ ವಿವಿಧ ಸಂವಿಧಾನಗಳ ಹಲವಾರು ತುಂಡುಗಳನ್ನು ಅಲ್ಲಲ್ಲಿ ಅಸಮರ್ಪಕವಾಗಿ ಜೋಡಿಸಲಾಗಿದೆ. ಅದರ ಮಾರ್ಗದರ್ಶಿ ಸೂತ್ರಗಳಲ್ಲಿ ನಮ್ಮ ರಾಷ್ಟ್ರೀಯ ಧ್ಯೇಯಕ್ಕೆ ಸಂಬಂಧಿಸಿದ ಏನನ್ನೂ ಹೇಳಿಲ್ಲ.

1948ರ ಜನವರಿಯಲ್ಲಿ ಸಂಘದ ಕಾರ್ಯಗಳಿಂದ ಪ್ರಭಾವಿತನಾಗಿದ್ದ ನಾಥೂರಾಂ ಗೋಡ್ಸೆ ಮಹಾತ್ಮ ಗಾಂಧಿಯವರನ್ನು ಗುಂಡಿಟ್ಟು ಕೊಂದನು. ನ್ಯಾಯಾಲಯದ ವಿಚಾರಣೆಯಲ್ಲಿ ಆತನು 1946ರಲ್ಲಿಯೇ ಆರ್ ಎಸ್ ಎಸ್ ಅನ್ನು ತೊರೆದನೆಂದು ಹೇಳಿಕೊಂಡನು. ಹತ್ಯೆಯ ನಂತರ ಸಂಘದ ಹಲವಾರು ಪ್ರಮುಖ ನಾಯಕರನ್ನು ಬಂಧಿಸಲಾಯಿತು. ಸರ್ವೋಚ್ಛ ನ್ಯಾಯಾಲಯವು ಹತ್ಯೆಯ ಸಂಚಿನಲ್ಲಿ ಆರ್ ಎಸ್ ಎಸ್ ನಾಯಕತ್ವವು ಭಾಗಿಯಲ್ಲ ಎಂದಿತು. ಆ ಸಂದರ್ಭದಲ್ಲೂ ಸಹ ಸಂಘವು ಒಂದೂವರೆ ವರ್ಷಗಳ ಕಾಲ ನಿಷೇಧಕ್ಕೊಳಗಾಗಿತ್ತು. ಬಂಧನದಿಂದ ಬಿಡುಗಡೆಯಾದ ನಂತರ ಗೋಲ್ವಾಲ್ಕರ್‍ರವರು ಪ್ರಧಾನ ಮಂತ್ರಿಯಾಗಿದ್ದ ನೆಹರೂರವರನ್ನು ಸಂಘದ ಮೇಲಿನ ನಿಷೇಧವನ್ನು ತೆಗೆಯುವಂತೆ ಕೇಳಿಕೊಂಡರು. ಆ ಸಮಯದಲ್ಲಿ ನೆಹರುರವರು ಆ ವಿಷಯಕ್ಕೆ ಸಂಬಂಧಿಸಿದಂತೆ ಗೃಹಸಚಿವರಾಗಿದ್ದ ವಲ್ಲಭಭಾಯಿ ಪಟೇಲ್‍ರನ್ನು ಭೇಟಿಯಾಗುವಂತೆ ಸೂಚಿಸಿದರು. ಪಟೇಲ್ ನಿಷೇಧವನ್ನು ತೆಗೆಯಲು ಭಾರತ ಸಂವಿಧಾನವನ್ನು ಮತ್ತು ತ್ರಿವರ್ಣಧ್ವಜವನ್ನು ಒಪ್ಪಿಕೊಳ್ಳಬೇಕು ಮತ್ತು ಹಿಂಸೆ ವರ್ಜಿಸಿ ಸಂಘವನ್ನು ಜನತಾಂತ್ರಿಕಗೊಳಿಸಬೇಕು ಇತ್ಯಾದಿ ಪೂರ್ವ ನಿಬಂಧನೆಗಳನ್ನು ವಿಧಿಸಿದರು. ಇದಾದ ನಂತರ ಸಂಘವು ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಂಡ ಬಳಿಕ 1949ರ ಜುಲೈನಲ್ಲಿ ನಿಷೇಧವನ್ನು ತೆಗೆಯಲಾಯಿತು.

1962ರಲ್ಲಿ ನಡೆದ ಚೀನಾದೊಂದಿಗಿನ ಯುದ್ಧದ ಸಂದರ್ಭದಲ್ಲಿ ಆರ್ ಎಸ್ ಎಸ್, ಆಡಳಿತ ವ್ಯವಸ್ಥೆಗೆ ಸಕ್ರಿಯವಾದ ರೀತಿಯಲ್ಲಿ ಸಹಾಯ ಮಾಡಿತು. ಇದರಿಂದ ಸಂತೋಷ ಹೊಂದಿದ್ದ ನೆಹರೂರವರು 1963ರ ಗಣರಾಜ್ಯೋತ್ಸವದ ಪರೇಡ್‍ನಲ್ಲಿ 100 ಜನ ಸ್ವಯಂಸೇವಕರು ಭಾಗವಹಿಸಲು ಅವಕಾಶ ನೀಡಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಗಳಾಗಿದ್ದಾಗ 1965ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ನಡೆದ ಸಂದರ್ಭದಲ್ಲಿ ಸಂಘದ ಸರಸಂಘಚಾಲಕರಾಗಿದ್ದ ಮಾಧವ ಸದಾಶಿವ ಗೋಲ್ವಾಲ್ಕರ್‍ರನ್ನು ಸರ್ವ ಪಕ್ಷಗಳ ಸಭೆಗೆ ಆಮಂತ್ರಿಸಿದ್ದರು. ಇಂದಿರಾಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ನಡೆದ ಬಾಂಗ್ಲಾ ಸ್ವಾತಂತ್ರ್ಯ ಸಂಗ್ರಾಮದ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಸಂಘವು ಸರ್ಕಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿತ್ತು.

ಇಂದಿರಾಗಾಂಧಿಯವರು 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ ನಾಗರಿಕ ಹಕ್ಕುಗಳನ್ನು ನಿಷೇಧಿಸಿದಾಗ, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳ ನಾಯಕರುಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆಯೆಂಬ ಕಾರಣಕ್ಕಾಗಿ ಆರ್ ಎಸ್ ಎಸ್ ಮೇಲೆ ಸಹ ನಿಷೇಧವಿತ್ತು. ಆ ನಿಷೇಧವನ್ನು ತೆಗೆಸಲು ಅಂದು ಸಂಘದ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಇಂದಿರಾ ಗಾಂಧಿಯವರಿಗೆ ಹಲವಾರು ಪತ್ರಗಳನ್ನು ಬರೆದಿದ್ದರು. ಸಂಘವು ಬಿಹಾರ ಅಥವಾ ಗುಜರಾತ್ ಚಳವಳಿಗಳೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲವೆಂದು ಅವರು ಆ ಪತ್ರಗಳಲ್ಲಿ ತಿಳಿಸಿದ್ದರು. ಇಂದಿರಾಗಾಂಧಿಯವರ ಪುತ್ರರಾದ ಸಂಜಯ್‍ಗಾಂಧಿಯವರನ್ನು ಸಂಪರ್ಕಿಸಲು ಸಂಘವು ಪ್ರಯತ್ನಿಸಿತ್ತು. ಅದು ಸಫಲವಾಗಲಿಲ್ಲ. ಯಾವುದೇ ಪ್ರತಿಕ್ರಿಯೆಯೂ ಸರ್ಕಾರದಿಂದ ಬರದಿದ್ದಾಗ ಸಂಘವು ಭೂಗತ ಚಟುವಟಿಕೆಗಳನ್ನು ಸಂಘಟಿಸುತ್ತಿತ್ತು. ಪುನಃ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದು ತನ್ನ ಉದ್ದೇಶವೆಂದು ಸಂಘವು ಹೇಳುತ್ತಿತ್ತು. 1977ರಲ್ಲಿ ತುರ್ತು ಪರಿಸ್ಥಿತಿಯು ಮುಗಿದನಂತರ ಸಂಘದ ಮೇಲಿನ ನಿಷೇಧವು ಅಮಾನ್ಯವಾಯಿತು. ತುರ್ತು ಪರಿಸ್ಥಿತಿಯು, ಭಾರತದ ರಾಜಕೀಯದಲ್ಲಿ ಸಂಘದ ಪಾತ್ರವನ್ನು ನ್ಯಾಯಯುತಗೊಳಿಸಿತೆಂದು ಹೇಳಲಾಗಿದೆ.

ಪ್ರಧಾನಮಂತ್ರಿ ನೆಹರೂರವರು ತಾವು ಅಧಿಕಾರವಹಿಸಿಕೊಂಡ ಪ್ರಾರಂಭದಿಂದಲೂ ಸಂಘದ ವಿಷಯದಲ್ಲಿ ಎಚ್ಚರ ವಹಿಸಿದ್ದರು. “ಸಂಘದ ಚಟುವಟಿಕೆಗಳು ರಾಷ್ಟ್ರ-ವಿರೋಧಿ ಎಂಬುದಕ್ಕೆ ಸರ್ಕಾರದ ಬಳಿ ಸಾಕ್ಷಿಗಳಿವೆ” ಎಂದವರು ಗಾಂಧೀಜಿಯವರ ಹತ್ಯೆಯ ನಂತರ ನುಡಿದಿದ್ದರು. ಪ್ರಾಂತೀಯ ಸರ್ಕಾರಗಳಿಗೆ 1947ರಲ್ಲಿ ಬರೆದಿದ್ದ ಪತ್ರದಲ್ಲಿ ನೆಹರೂ ಹೀಗೆ ಹೇಳಿದ್ದಾರೆ: ‘ಒಂದು ಖಾಸಗಿ ಸೈನ್ಯದಂತಿರುವ ಆರ್ ಎಸ್ ಎಸ್ ಸಂಘಟನೆಯು ನಾಜಿûಗಳ ವಿಧಾನಗಳನ್ನು ಅನುಸರಿಸುತ್ತಿದೆ. ಸಂಘಟನೆಯನ್ನು ನಾಜಿûೀ ತಂತ್ರಗಳ ಆಧಾರದ ಮೇಲೆ ರಚಿಸಲಾಗಿದೆ’.

ಭಾರತದ ಮೊದಲನೆಯ ಉಪಪ್ರಧಾನಿಗಳೂ, ಗೃಹಮಂತ್ರಿಗಳೂ ಆದ ಸರ್ದಾರ್ ವಲ್ಲಭಭಾಯಿ ಪಟೇಲ್‍ರ ಅಭಿಪ್ರಾಯಗಳನ್ನೂ ಗಮನಿಸಬಹುದು. ಪಟೇಲ್‍ರವರು ಆರ್ ಎಸ್ ಎಸ್ ಕಾರ್ಯಕರ್ತರು ದೇಶ ಭಕ್ತರೆಂದು 1948ರ ಪ್ರಾರಂಭದಲ್ಲಿ ಹೇಳಿದ್ದರು. ಕಾಂಗ್ರೆಸ್ಸಿಗರು ಅವರನ್ನು ತಮ್ಮ ಕಡೆಗೆ ಒಲಿಸಿಕೊಳ್ಳಬೇಕೆಂದು ಸಹ ಅವರು ನುಡಿದಿದ್ದರು. ಆರ್ ಎಸ್ ಎಸ್ ನವರು ಕಾಂಗ್ರೆಸ್ ಸೇರುವಂತೆ ಅವರು ಮನವಿ ಮಾಡಿಕೊಂಡಿದ್ದರು. ಆದರೆ 1948 ಜನವರಿ 30 ರಂದು ಗಾಂಧೀಜಿಯವರ ಹತ್ಯೆಯಾದ ನಂತರದಲ್ಲಿ ಅವರ ನಿಲುವು ಬದಲಾಯಿತು. 1948ರಲ್ಲಿ ಗೋಲ್ವಾಲ್ಕರ್‍ಗೆ ಬರೆದ ಪತ್ರದ ಕೆಲವೊಂದು ಅಂಶಗಳನ್ನು ಮಾತ್ರ ಇಲ್ಲಿ ಹೇಳಬಹುದು: ಆರ್ ಎಸ್ ಎಸ್ ಹಿಂದೂ ಸಮಾಜಕ್ಕೆ ಕೆಲವೊಂದು ಸಹಾಯಗಳನ್ನು ಮಾಡಿರಬಹುದು. ಆದರೆ ವಿಭಜನೆಯ ನಂತರ ನಡೆದ ಹಲವಾರು ಕೋಮುಗಲಭೆಗಳಲ್ಲಿ ಆರ್ ಎಸ್ ಎಸ್ ಸಕ್ರಿಯವಾಗಿ ಭಾಗವಹಿಸಿ ಅಮಾಯಕ ಮುಸ್ಲಿಂ ಮಹಿಳೆಯರು ಹಾಗೂ ಮಕ್ಕಳ ಮೇಲೆ ಆಕ್ರಮಣ ಮಾಡಿದೆ. ಆರ್ ಎಸ್ ಎಸ್‍ನ ಭಾಷಣಗಳು ಕೋಮು ವಿಷದಿಂದ ಕೂಡಿದ್ದು, ಈ ವಿಷದ ಫಲಿತಾಂಶವಾಗಿ ಭಾರತವು ಗಾಂಧೀಜಿಯವರನ್ನು ಕಳೆದುಕೊಳ್ಳಬೇಕಾಯಿತು. ಆರ್ ಎಸ್ ಎಸ್ ನವರು ತಾವು ಹಿಂದುತ್ವದ ಸಂರಕ್ಷಕರೆಂದು ಹೇಳಿಕೊಳ್ಳುತ್ತಾರೆ. ಆದರೆ ರೌಡಿತನದಿಂದ ಹಿಂದುತ್ವವನ್ನು ರಕ್ಷಿಸಿಕೊಳ್ಳಲಾಗುವುದಿಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು, ಆರ್ ಎಸ್ ಎಸ್ ಸ್ವಯಂ ಸೇವಕರಿಗೆ ತಮ್ಮ ಭಾಷಣದಲ್ಲಿ, ಆರ್ ಎಸ್ ಎಸ್ ನ ಕೆಲಸ ನನ್ನ ಹೃದಯಕ್ಕೆ ಸಂಬಂಧಿಸಿದ ಕೆಲಸ. ನನ್ನ ಪ್ರೀತಿಯ ಯುವ ಮಿತ್ರರೇ, ತಮ್ಮದೇ ಹಿತಾಸಕ್ತಿಗಳಿರುವ ವ್ಯಕ್ತಿಗಳ ಟೀಕೆಗಳನ್ನು ಪರಿಗಣಿಸದೆ ಭವಿಷ್ಯದ ಕಡೆಗೆ ನೋಡಿರಿ. ದೇಶಕ್ಕೆ ನಿಮ್ಮ ಸೇವೆಯ ಅಗತ್ಯತೆಯಿದೆ ಎಂದು ಹೇಳಿದ್ದರು. ಭಾರತದ ಮಾಜಿ ರಾಷ್ಟ್ರಪತಿ ಜಾಕೀರ್ ಹುಸೇನ್, ಆರ್ ಎಸ್ ಎಸ್ ಮೇಲಿನ ಹಿಂಸೆ ಮತ್ತು ಮುಸ್ಲಿಂ ವಿರೋಧಿ ಆಪಾದನೆಯನ್ನು ಸಂಪೂರ್ಣ ಸುಳ್ಳೆಂದು ಹೇಳಿದ್ದಾರೆ. ಮುಸಲ್ಮಾನರು ಪರಸ್ಪರ ಪ್ರೇಮ, ಸಹಕಾರ ಮತ್ತು ಸಂಘಟನೆಯನ್ನು ಆರ್ ಎಸ್ ಎಸ್ ನಿಂದ ಕಲಿಯಬೇಕೆಂದು ಹೇಳಿದ್ದರು. ಹಿಂದೊಮ್ಮೆ ಆರ್ ಎಸ್ ಎಸ್ ಅನ್ನು ವಿರೋಧಿಸುತ್ತಿದ್ದ ಜಯಪ್ರಕಾಶ್ ನಾರಾಯಣರವರು 1977 ರಲ್ಲಿ ಅದನ್ನೊಂದು ಕ್ರಾಂತಿಕಾರಿ ಸಂಘಟನೆಯೆಂದು ಕರೆದಿದ್ದಾರೆ. ದೇಶದಲ್ಲಿರುವ ಯಾವ ಸಂಘಟನೆಯೂ ಅದಕ್ಕೆ ಸಮನಲ್ಲವೆಂದು ಹೇಳಿದ್ದಾರೆ. ಸಮಾಜವನ್ನು ಪರಿವರ್ತಿಸಿ, ಜಾತೀಯತೆಯನ್ನು ಕೊನೆಗಾಣಿಸಿ, ಬಡವರ ಕಣ್ಣೀರನ್ನೊರೆಸುವ ಶಕ್ತಿ ಆರ್ ಎಸ್ ಎಸ್‍ಗೆ ಇದೆ ಎಂದು ಹೇಳಿದ್ದಾರೆ.

ಆರ್ ಎಸ್ ಎಸ್‍ಗೆ ಯಾವುದೇ ವಿಧ್ಯುಕ್ತವಾದ ಸದಸ್ಯತ್ವವಿಲ್ಲ. ಅಧಿಕೃತ ವೆಬ್‍ಸೈಟ್ ಪ್ರಕಾರ ಗಂಡಸರು ಮತ್ತು ಹುಡುಗರು ಸಮೀಪದ ಶಾಖೆಯನ್ನು ಸೇರುವ ಮೂಲಕ ಅದರ ಸದಸ್ಯರಾಗಬಹುದು. ಸಂಘವು ಸದಸ್ಯರ ದಾಖಲೆಗಳನ್ನಿಡುವುದಿಲ್ಲವೆಂದು ಹೇಳಿದರೂ ಸಹ, ಅದರ ಸದಸ್ಯರ ಸಂಖ್ಯೆಯು 2001 ರ ಒಂದು ಅಂದಾಜಿನ ಪ್ರಕಾರ ಎರಡೂವರೆ ದಶಲಕ್ಷದಿಂದ ಆರು ದಶಲಕ್ಷಗಳವರೆಗಿರಬಹುದು. ಆರ್ ಎಸ್ ಎಸ್ ನ ಬಹುತೇಕ ಕಾರ್ಯಗಳು ಶಾಖೆಗಳ ಮೂಲಕ ನಡೆಯುತ್ತದೆ. ಈ ಶಾಖೆಗಳ ಸಂಖ್ಯೆ 1975 ರಲ್ಲಿ 8500 ಆಗಿದ್ದು, ಸ್ವಲ್ಪ ಏರುಪೇರುಗಳ ಬಳಿಕ 2015 ರಲ್ಲಿ 51 ಸಾವಿರವನ್ನು ದಾಟಿತ್ತು. ಆರ್ ಎಸ್ ಎಸ್ ನ ವಾರ್ಷಿಕ ವರದಿಯ ಪ್ರಕಾರ 2019ರಲ್ಲಿ ಶಾಖೆಗಳ ಸಂಖ್ಯೆ 84 ಸಾವಿರವನ್ನು ಮುಟ್ಟಿತ್ತು. ಶಾಖೆಗಳಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ದೇಶ ಭಕ್ತಿ, ಸಾಮುದಾಯಿಕ ಜೀವನ, ಸಾಮಾಜಿಕ ಸೇವೆ, ಕ್ರೀಡೆ ಇವುಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಪ್ರಥಮ ಚಿಕಿತ್ಸೆ, ಅವಘಡಗಳಿಂದ ರಕ್ಷಿಸುವುದು ಮುಂತಾದವುಗಳ ತರಬೇತಿ ನೀಡಲಾಗುತ್ತದೆ.

ಸರಸಂಘಚಾಲಕರು ಸಂಘಟನೆಯ ಮುಖ್ಯಸ್ಥರಾಗಿರುತ್ತಾರೆ. ಹಿಂದಿನ ಸರಸಂಘಚಾಲಕರು ಒಂದು ಹೆಸರನ್ನು ಸೂಚಿಸುವ ಮೂಲಕ ಅವರ ನಂತರ ಯಾರಾಗಬೇಕೆಂದು ತೀರ್ಮಾನವಾಗುತ್ತದೆ. ಸರಕಾರ್ಯವಾಹ ಪ್ರಧಾನ ಕಾರ್ಯದರ್ಶಿಗೆ ಸಮಾನವಾದಂತಹ ಸ್ಥಾನ. ಪ್ರಚಾರಕ್‍ಡ ಆರ್ ಎಸ್ ಎಸ್‍ನ ವಿಚಾರಗಳನ್ನು ಹರಡುವ ಪೂರ್ಣಾವಧಿ ಕಾರ್ಯಕರ್ತರು. ಅವರಲ್ಲಿ ಅನೇಕರು ಬ್ರಹ್ಮಚಾರಿಗಳು, ಇವರು ಸಂಘದ ಜೀವನಾಡಿ. ಇವರ ಸಂಖ್ಯೆ 2500 ಇರಬಹುದು.

Leave a Reply

Your email address will not be published.