ಆಸವ

-ಚನ್ನಪ್ಪ ಅಂಗಡಿ

ಅಂಗಳದಲಿ ಆಡುವ ಮಗುವಿಗೆ ಮಣ್ಣು ಕಂಡು ಹಿಗ್ಗು

ತೋರಬಹುದು ತೂರಬಹುದು ಬೆರಳಿನಿಂದ ಗೀರಬಹುದು

ಉರುಳಿ ಬಿದ್ದರೆ ನೆಲದ ಮಣ್ಣು

ಅರಳಿ ನಿಂತರೆ ಮಣ್ಣಿನ ಕಣ್ಣು

ಬೆರಳು ಗೀಚಿದಂತೆ ಗೆರೆ ನಾಲಿಗೆ ಉಲಿದಂತೆ ಕರೆ

ತಿರುಗಿ ಜರುಗಿ ಮನುಷ್ಯಾಕೃತಿ

ತಪ್ಪೆಜ್ಜೆಯಲೂ ಒಪ್ಪಗೆರೆ ಗೀಚಲು ಬದ್ಧ

ಸಡಿಲ ಗೆರೆಯ ನಗುವ ಮೊಗದ ಚಿತ್ರ ಸಿದ್ಧ – ಆತ ಬುದ್ಧ

 

ತಣ್ಣಗಿನ ದಿಟ್ಟಿಗೆ ಕಮಟು ಹತ್ತಿದ ಯಜ್ಞಜ್ವಾಲೆ ನಂದಿಸಿ

ನಗುವ ಮುತ್ತಹನಿ ಸುರಿದು ಬೆಂಕಿ ಝಳವ ಕುಂದಿಸಿ

ಇವರ ಬಿಟ್ಟು ಇವರ ಬಿಟ್ಟು ಇರ‍್ಯಾರು?

ಇವರೆ-ಅವರೆ, ಬಿಡಿಸುತಲೆ ಫಲಿತ ಕಾಯಗುಚ್ಛ

ಬಿಸಿನೀರು ಹಳ್ಳುಪ್ಪು ಕುಚ್ಚಿ ನೋಡು ಕಂಪು

ಕೂಡಿಯಾಡಿ ಹಾಡಿನಲಿದ ಜಾನಪದ-ಧಮ್ಮಪದ

ಎದೆಯಿಂದೆದೆಗೆ ತಿಳಿನೀರು ಹರಿದು ನದಿಯೊಡಲ ಜ್ಞಾನಪದ

 

ಎಲ್ಲವೂ ಇತ್ತು

ತಂಪು ಸೊಂಪು, ಬೆಳೆಸು ಹುಲುಸು, ರಾಜಕಳೆ ತುಂಬಿದಿಳೆ

ಉಂಡುಟ್ಟು ಉರುಳಾಡಿದರೂ ಖಂಡುಗದುOಬಿದ ಭಂಡಾರ

ಆದರೂ ಕಣ್ಣು ಹುಡುಕುತ್ತಿತ್ತು ನೆಲಹಾಸ ಅಮೃತಶಿಲೆಯಾಳದಗ್ನಿ

ಮಹಲಿನ ಮೂಲೆಮೂಲೆಯಲಿ ಮಡುವುಗಟ್ಟಿದ ಜಗದಾಟ

 

ಸಂದಿಗೊOದಿಗಳ ಬಿರುಕಿನಲಿ ಕೀರಲುಗುಟ್ಟುವ ಕ್ಷದ್ರಕೀಟ

ದ್ವಾರಬಾಗಿಲ ಮರಡ ತೊಡೆಯಲಿ ಜುಂ ಎನ್ನುವ ಮೊರೆತ

ದ್ವಾರಪಾಲಕನ ಅಂಗಾಲ ಸೀಳಿನಲಿ ಬೆವರ ಭೋರ್ಗರೆತ

ಕೋಲಕಾರನ ಕೈಯಗೆರೆಯಲಿ ಹುಡಿಧೂಳಕೆ ಹಿಂಸ್ರನವೆ

ಗತ್ತಿನವರು ತೊತ್ತಿನವರು, ಎತ್ತುಕತ್ತೆಯೆಂತೆ ಡುಬ್ಬ ಕೆತ್ತಿಕೊಂಡವರು

ಟAಕಸಾಲೆಯಿOದ ಪಾಕಸಾಲೆಯವರೆಗೆ

ಮೂಕರೋಧನವೆ ಶೋಕಗೀತೆಯಾಗಿ ಗೊತ್ತುಗೂಡಿಸಿದ ಕಾಲ.

 

ಒಬ್ಬ ರೋಗಿ ಒಬ್ಬ ಮುದುಕ ಒಂದೇ ಒಂದು ಹೆಣ

ಬಂದಿದ್ದೆಲ್ಲರೂ ಒಬ್ಬೊಬ್ಬರು, ಹೋಗುವುದಾಗಿದೆ ಒಬ್ಬೊಬ್ಬರು

ನಿಂತು ನೋಡಿದವರು ಒಬ್ಬಿಬ್ಬರು

ಅವರಲ್ಲೊಬ್ಬನಿದ್ದ, ಆತ ನಿಂತೇ ಇದ್ದ;

ಸಿದ್ದಾರ್ಥನೆಂಬುವನಾಗಿದ್ದ ಸಿಕ್ಕು ಕಳಚಿಕೊಂಡ ಬುದ್ಧ

 

ಅರಿವಾಗುವುದಷ್ಟು ಸರಳವೆ? ಆಗುವುದಷ್ಟು ವಿರಳವೆ?

ಜಗದಗಲ ಮುಗಿಲಗಲ ಒಬ್ಬನೆ? ಮಿಗೆಯಗಲ ಅವನೊಬ್ಬನೇ ಏಕೆ?

ಮತ್ತೊಬ್ಬನೇಕೆ? ಜಗಕೆ ಬುದ್ಧನೊಬ್ಬ ಸಾಕೆ?

 

ತಿಳಿನೀರ ಎಳೆಮೀನು ಗಕ್ಕನೆ ರೆಕ್ಕೆಯಗಲಿಸಿ

ತಿರುಗಿದಾಗ ಮಿಸುಕುವ ನುಣುಪುಸುಕು

ಮೀನಕಣ್ಣಿಗೆ ಬೀಳದಾಗ ಚಲನೆ ನಿಂತ ಮೀನು

ಕಣ್ಣುಜ್ಜಿ ನೋಡಿದಾಗ ತೆರೆದ ಕಣ್ಣು ಮರೆದ ಮರೆವು

ಜನ್ಮಜಾತ ಅನಿಮಿಷ ಕಣ್ಣಿಗೆ ಕಾಣದ ರೆಕ್ಕೆ

ಹುರುಪೆಯಡಿಯ ಹರುಷ ಅಂತರOಗಕೆ ಸಾಗಿಬಂದ ನೇರ ಬೆಳಕು ಅದೇ ಆತ್ಮೋನ್ನತಿ

ಅನ್ನ ಮಾತನು ಧಾರಣ ಮಾಡಿ ಇನ್ನು ತಿರುಗಿ ನೋಡದ ಧರ್ಮೋನ್ನತಿ.

 

ಗುಡಿಯ ಧರ್ಮ ಗಡಿಯ ಮೀರಿ ಭುಜದ ಬಲ ಆತ್ಮಸೇರಿ

ಹೃದಯದುಂಬಿದ ಹಸಿರು ಕಳೆ, ಕತ್ತಲಲ್ಲಿ ಬೆಳಕ ಮಳೆ

ಸಕಲವೂ ಶೂನ್ಯವೆಂದಾದ ಮೇಲೆ ಇಹದ ಬದುಕಿಗೆಲ್ಲಿ ಬೆಲೆ?

ಬೆರಳೊಂದು ಕೊರತೆಯಾಗಿ ಉರುಳಿಗೆ ಬಂದ ಸಾವಲೀಲೆ

ಸಾವಿರ ಬೆರಳ ಸಾಧಿಸಿ ನಡೆಯುವ ಗುರಿಗೆ

ಅಮರವಾಯಿತು ಭಾವಲೀಲೆ

ಬೆರಳ ಬೇಟೆಯ ಅಂಗುಲಿಮಾಲನ ಗೋಳು

ಕಿಸಾಗೌತಮಿಯ ಪುತ್ರಶೋಕದ ಅಳು

ಪೊಟ್ಟ ಪಾದನ ಒಣ ಮಾತಿನ ಗೀಳು

ಕಲ್ಲುಕಲ್ಲಿಗೂ ಸೊಲ್ಲಿನ ತೆವಲು ದಶದಿಕ್ಕು ನಿರ್ವಾಣದೆಡೆಗೆ

ತಿರುಗುತಿರಲು ಕರಗಿಹೋದವು ಹಾದಿಬೀದಿಯ ಆಸವಗಳು

ಲೋಕಕಲ್ಯಾಣದ ಮಹಾದಾಸೆಯ ಇಟ್ಟುಕೊಂಡಿದ್ದ

ದು:ಖಮೂಲದ ಬೀಜಮಾತನು ತಾನೇ ಮರೆತ ಬುದ್ಧ.

Leave a Reply

Your email address will not be published.