ಆಸ್ಕರ್: ಅತ್ಯುನ್ನತ ಸಿನಿಮಾ ಸಮ್ಮಾನ

– ಪ್ರೇಮಕುಮಾರ್ ಹರಿಯಬ್ಬೆ

ಸಿನಿಮಾಗಳ ಕಲಾತ್ಮಕತೆ ಹಾಗೂ ತಾಂತ್ರಿಕತೆಯನ್ನು ಪರಿಗಣಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯೇ ಆಸ್ಕರ್. ಇದು ಜಗತ್ತಿನ ಅತ್ಯಂತ ಹಳೆಯ ಸಿನಿಮಾ ಪ್ರಶಸ್ತಿ. ಆಸ್ಕರ್‍ಗಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ ಎಂಬ ಭಾವನೆ ಅನೇಕರಲ್ಲಿದೆ.

ಧರ್ಮಯುದ್ಧದಲ್ಲಿ ಬಳಸುವ ಖಡ್ಗವನ್ನು ಕೆಳಮುಖವಾಗಿ ಹಿಡಿದು ಸಾವಧಾನ್‍ಭಂಗಿಯಲ್ಲಿ ನಿಂತ ಯೋಧನ 34.3 ಸೆ.ಮೀ. ಎತ್ತರ, 3.8 ಕಿಲೋಗ್ರಾಂ ತೂಕದ ಚಿನ್ನ ಲೇಪಿತ, ಮಿಶ್ರಲೋಹದ ಪುತ್ಥಳಿಯೇ ಈ ಆಸ್ಕರ್ ಟ್ರೋಫಿ.

ಈ ಪುತ್ಥಳಿ ಸಿನಿಮಾಕ್ಕಾಗಿ ದುಡಿಯುವ ನಟರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಲೇಖಕರನ್ನು ಪ್ರತಿನಿಧಿಸುತ್ತದೆ ಎಂಬ ಅಭಿಪ್ರಾಯವಿದೆ. ಜೀವಮಾನದಲ್ಲಿ ಒಮ್ಮೆಯಾದರೂ ಆಸ್ಕರ್ ಪಡೆಯುವ ಕನಸು ಹೊತ್ತ ನೂರಾರು ನಟ ನಟಿಯರು, ತಂತ್ರಜ್ಞರು, ಲೇಖಕರು ಹಲವು ದೇಶಗಳಲ್ಲಿ ಇದ್ದಾರೆ. ಪ್ರಶಸ್ತಿ ದಕ್ಕಿಸಿಕೊಳ್ಳುವ ಕನಸು ಕಂಡು ಅದಕ್ಕಾಗಿ ನಿರಂತರ ಪ್ರಯತ್ನಿಸುತ್ತಿರುವವರು ನಮ್ಮ ದೇಶದಲ್ಲೂ ಇದ್ದಾರೆ.

ಅಮೆರಿಕದ ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ ನಗರಗಳಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಿನಿಮಾ ಜಗತ್ತು ಕಾದು ಕುಳಿತಿರುತ್ತದೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಲಾಸ್ ಏಂಜಲೀಸ್‍ನಲ್ಲಿ ನಡೆಯಿತು. ಕೋಟ್ಯಂತರ ಜನರು ಈ ಸಮಾರಂಭದ ಝಲಕ್‍ಗಳನ್ನು ಕಣ್ತುಂಬಿಕೊಂಡರು. ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಉನ್ಮಾದಕ್ಕೆ ಒಳಗಾದವರಂತೆ ಸಿನಿಮಾ ಪ್ರೇಮಿಗಳು ಹರ್ಷ ವ್ಯಕ್ತಪಡಿಸುತ್ತಾರೆ. ಕೆಲವರಂತೂ ಕುಣಿದು ಕುಪ್ಪಳಿಸುತ್ತಾರೆ. ಪ್ರಶಸ್ತಿ ಪಡೆದ ನಟನಟಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಹಾಗೂ ಲೇಖಕರು ಆಸ್ಕರ್ ಟ್ರೋಫಿಯನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುವ ಪರಿ ನಿಜಕ್ಕೂ ರೋಚಕ. ಪ್ರಶಸ್ತಿ ಪಡೆಯುವ ನಿರೀಕ್ಷೆಯಲ್ಲಿದ್ದೂ, ನಿರಾಶರಾದವರಿಗೆ ಆ ಕ್ಷಣಗಳಲ್ಲಿ ಅತೃಪ್ತಿ, ಜುಗುಪ್ಸೆ ಹುಟ್ಟುತ್ತದೆ. ಸ್ವಲ್ಪ ಸಮಯದ ಬಳಿಕ ಮುಂದೊಮ್ಮೆ ಪ್ರಶಸ್ತಿ ಪಡೆಯುವ ಆಸೆಯೂ ಜಾಗೃತವಾಗುತ್ತದೆ.

1929ರಲ್ಲಿ ಅಮೆರಿಕಾದ ಅಕಾಡೆಮಿ ಆಫ್ ಆರ್ಟ್ ಮತ್ತು ಸೈನ್ಸಸ್ ಹೆಸರಿನ ಸಂಘಟನೆ ಆಸ್ಕರ್ ಪ್ರಶಸ್ತಿಗಳನ್ನು ಹುಟ್ಟು ಹಾಕಿತು. ಕಳೆದ 91 ವರ್ಷಗಳಿಂದ ಅಕಾಡೆಮಿ ಪ್ರಶಸ್ತಿಗಳನ್ನು ನೀಡುತ್ತ ಬಂದಿದೆ. ಅಕಾಡೆಮಿಯ ಆರಂಭದ ದಿನಗಳಲ್ಲಿ ಈ ಮಟ್ಟದ ಯಶಸ್ಸನ್ನು ನಿರೀಕ್ಷಿಸಿತ್ತೊ ಇಲ್ಲವೊ, ಈಗಂತೂ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಪ್ರಶಸ್ತಿಗಾಗಿ ಪೈಪೋಟಿ ಹೆಚ್ಚಾಗುತ್ತಲೇ ಇದೆ.

ಆಸ್ಕರ್ ಪ್ರಶಸ್ತಿಗಳ ಕುರಿತು ಟೀಕೆ, ಪ್ರಶಂಸೆಗಳೇನೆ ಇದ್ದರೂ ಸಿನಿಮಾಗಳಲ್ಲಿ ಕಲಾತ್ಮಕತೆ, ತಾಂತ್ರಿಕ ಪರಿಣತಿ ಸಾಧಿಸುವ ಹಂಬಲ ಹೊತ್ತವರ ಪಾಲಿಗೆ ಪ್ರಶಸ್ತಿ ದೊಡ್ಡ ಉತ್ತೇಜನ. ಪ್ರಶಸ್ತಿ ವಿಜೇತ ಸಿನಿಮಾಗಳಲ್ಲಿನ ತಾಂತ್ರಿಕತೆ, ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಜಗತ್ತಿನ ಅನೇಕ ದೇಶಗಳ ಸಿನಿಮಾಗಳಲ್ಲಿ ನಡೆಯುತ್ತದೆ. ಇದರಿಂದಾಗಿ ಸಿನಿಮಾಗಳ ಗುಣಮಟ್ಟ ಹೆಚ್ಚುತ್ತಿದೆ.

ಆಸ್ಕರ್, ಬಿಳಿಯರು ತಯಾರಿಸುವ ಸಿನಿಮಾಗಳನ್ನು ಪ್ರೋತ್ಸಾಹಿಸಲು ಆರಂಭವಾದ ಪ್ರಶಸ್ತಿ; ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಟೀಕಿಸುವವರೂ ಇದ್ದಾರೆ. ಪ್ರಶಸ್ತಿ ಪಡೆಯಲು ವಿಫಲರಾದ ಅನೇಕ ಕಲಾವಿದರು, ತಂತ್ರಜ್ಞರು ಅಕಾಡೆಮಿಯ ಮಾನದಂಡಗಳನ್ನು ಪ್ರಶ್ನಿಸಿ, ಕಟು ಮಾತುಗಳಿಂದ ಟೀಕಿಸುತ್ತಾರೆ. ಕೆಲದಿನಗಳ ನಂತರ ತಮ್ಮ ಟೀಕೆಗಳಿಗೆ ವಿಷಾದ ವ್ಯಕ್ತಪಡಿಸಿ ಪ್ರಶಸ್ತಿಯನ್ನು ಗೆಲ್ಲುವ ಛಲ ಬೆಳೆಸಿಕೊಳ್ಳುತ್ತಾರೆ. ಅದೇನೇ ಇರಲಿ ಈ ಟೀಕೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗದು. ಏಕೆಂದರೆ ಆಸ್ಕರ್ ಪಡೆದವರ ಪಟ್ಟಿಯಲ್ಲಿ ಅಮೆರಿಕ ದೇಶದವರದ್ದೇ ಸಿಂಹಪಾಲು!

ಪ್ರಶಸ್ತಿಗಾಗಿ ನಡೆಯುವ ಆಯ್ಕೆ ಪ್ರಕ್ರಿಯೆ ಕಾಲಕಾಲಕ್ಕೆ ಬದಲಾಗುತ್ತ ಬಂದಿದೆ. ಅಕಾಡೆಮಿ ಕಠಿಣ ನಿಮಯಗಳನ್ನು ರೂಪಿಸಿದೆ. ಮೊದಲ ಹಂತದಲ್ಲಿ ಸಿನಿಮಾಗಳ ಆಯ್ಕೆಯಿಂದ ಹಿಡಿದು ಅಂತಿಮ ಸುತ್ತಿಗೆ ನಾಮಕರಣವಾಗುವವರೆಗೆ ಸುಮಾರು ಏಳೆಂಟು ನೂರು ಜನ ಸಿನಿಮಾಗಳ ಬಗ್ಗೆ ಪರಿಣತಿ ಇರುವ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವೋಟಿಂಗ್ ಮೂಲಕ ವ್ಯಕ್ತಪಡಿಸುವ ವ್ಯವಸ್ಥೆ ಇದೆ. ಈ ಪ್ರಕ್ರಿಯೆಯ ಬಗೆಗೂ ಟೀಕೆಗಳಿವೆ. ಈ ಪರಿಣತ ಸದಸ್ಯರಲ್ಲಿ ಬಹುತೇಕರು ಪೂರ್ವಗ್ರಹ ಪೀಡಿತರು. ಅನೇಕರು ಮೊದಲ ವೀಕ್ಷಣೆ ಹಂತದಲ್ಲೇ ಕೆಲ ದೇಶಗಳ ಸಿನಿಮಾಗಳ ಬಗ್ಗೆ ಅಸಡ್ಡೆಯ ಮನೋಭಾವ ತಾಳುತ್ತಾರೆ. ಅವರಲ್ಲಿ ಅನೇಕರಿಗೆ ವಿವಿಧ ದೇಶಗಳ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಹಿನ್ನೆಲೆಯೇ ಗೊತ್ತಿರುವುದಿಲ್ಲ. ಗೊತ್ತಾಗದ ಸಂಗತಿಗಳನ್ನು ಸಾರಾಸಗಟಾಗಿ ಉಪೇಕ್ಷಿಸಿಬಿಡುತ್ತಾರೆ. ಹೀಗಾಗಿಯೇ ಮೂರನೇ ಜಗತ್ತಿನ ದೇಶಗಳ ಸಿನಿಮಾಗಳು ಅಂತಿಮ ಸುತ್ತಿನವರೆಗೆ ಬರುವುದೇ ಇಲ್ಲ ಎಂಬ ಟೀಕೆಗಳು ಆಗಾಗ ಕೇಳಿ ಬರುತ್ತವೆ.

ಸಿನಿಮಾವೊಂದರ ಯಶಸ್ಸು ಅದನ್ನು ಎಷ್ಟು ಜನರು ವೀಕ್ಷಿಸಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ. ಜನರ ಮೆಚ್ಚುಗೆಯೇ ನಿಜವಾದ ಪ್ರಶಸ್ತಿ ಎಂಬ ಮಾತಿದೆ. ಆದರೂ ತಮ್ಮ ಸಿನಿಮಾಗಳಿಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮನ್ನಣೆ ಪಡೆಯುವ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತವೆ.

ಆಸ್ಕರ್ ಪ್ರಶಸ್ತಿಗಳಿಗೆ ಪ್ರಾಥಮಿಕ ಸುತ್ತಿಗೆ ಪ್ರವೇಶ ಪಡೆಯುವ ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು ಅದನ್ನೇ ದೊಡ್ಡದಾಗಿ ಬಿಂಬಿಸಿ ಜನರ ಗಮನ ಸೆಳೆಯುತ್ತಾರೆ. ಅದರಿಂದಾಗಿ ಮಾರುಕಟ್ಟೆ ಅವಕಾಶಗಳು ಹೆಚ್ಚುತ್ತವೆ. ಜಗತ್ತಿನಾದ್ಯಂತ ನಡೆಯುವ ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನವಾಗುವ ಕೆಲ ಸಿನಿಮಾಗಳು ಆಸ್ಕರ್ ಪ್ರಶಸ್ತಿ ರೇಸ್‍ನಲ್ಲಿವೆ ಎಂಬ ಕಾರಣಕ್ಕೆ ಹೆಚ್ಚಿನ ನಿರೀಕ್ಷೆ ಹುಟ್ಟಿಸುತ್ತವೆ, ಮಾಧ್ಯಮಗಳ ಗಮನ ಸೆಳೆಯುತ್ತವೆ, ಸಿನಿಮಾ ವಲಯಗಳಲ್ಲಿ ಆ ಕುರಿತು ಚರ್ಚೆ ಆಗುತ್ತದೆ.

ಮೊದಲ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದದ್ದು 1929ರ ಮೇ 16ರಂದು. ಹಾಲಿವುಡ್‍ನ ರೂಸ್‍ವೆಲ್ಟ್ ಹೊಟೇಲ್‍ನ ಭೋಜನ ಸಭಾಂಗಣದಲ್ಲಿ. ಅದರಲ್ಲಿ ಭಾಗವಹಿಸಿದವರ ಸಂಖ್ಯೆ 270. ಮೊದಲ ಆಸ್ಕರ್ ಪಡೆದವರು ಜರ್ಮನಿಯ ನಟ ಎಮಿಲ್ ಜಾನ್ನಿಂಗ್ಸ್. ಅಕಾಡೆಮಿ ಇದುವರೆಗೆ 3100ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿ ನೀಡಿದೆ.           

ಯಾರು ಈ ಆಸ್ಕರ್?

ಆರಂಭದ ವರ್ಷಗಳಲ್ಲಿ ಅಕಾಡೆಮಿ ಕಂಚಿನ ಪುತ್ಥಳಿಯನ್ನು ಪ್ರಶಸ್ತಿ ಪುರಸ್ಕೃತರಿಗೆ ನೀಡುತ್ತಿತ್ತು. 1931ರಲ್ಲಿ ಸಿನಿಮಾ ನಟ, ನಿರ್ದೇಶಕ ಸೆಡ್ರಿಕ್ ಗಿಬ್ಸನ್ ಈ ಪುತ್ಥಳಿಗೆ ಚಿನ್ನದ ಲೇಪನ ಕೊಟ್ಟು ಇನ್ನಷ್ಟು ಆಕರ್ಷಕ ಗೊಳಿಸಿದರು. ಈ ಪುತ್ಥಳಿಯನ್ನು ಮೊದಲ ಸಲ ವೀಕ್ಷಿಸಿದ ಆಗಿನ ಅಕಾಡೆಮಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಮಾರ್ಗರೆಟ್ ಹೆರಿಕ್ ಅವರಿಗೆ ಅವರ ಅಂಕಲ್ ಆಸ್ಕರ್ ನೆನಪಾದರಂತೆ! ಹೀಗಾಗಿ ಪುತ್ಥಳಿಗೆ ಆಸ್ಕರ್ ಎಂಬ ಹೆಸರು ಬಂತು ಎಂಬ ಮಾತಿದೆ. ಈಗ ಕಂಚಿನ ಬದಲು ಬ್ರಿಟ್ಟಾನಿಯಂ, ಟಿನ್‍ಮತ್ತಿತರ ಲೋಹಗಳನ್ನು ಬಳಸಿ ಆಸ್ಕರ್ ಪುತ್ಥಳಿ ರೂಪಿಸಲಾಗುತ್ತಿದೆ.

ಆಸ್ಕರ್ ಪ್ರಶಸ್ತಿ ಪುರಸ್ಕೃತರಿಗೆ ಟ್ರೋಫಿಯ ಜತೆಗೆ  ದೊಡ್ಡ ಮೊತ್ತದ ನಗದು ಬಹುಮಾನ ಸಿಗುತ್ತದೆ. ಅತಿ ಹೆಚ್ಚಿನ ನಗದು ಮೊತ್ತ 220,000 ಅಮೆರಿಕನ್ ಡಾಲರ್. ನಗದು ಮೊತ್ತ ಏಕರೂಪವಾಗಿಲ್ಲ. ಪ್ರಶಸ್ತಿ ಪುರಸ್ಕೃತರಿಗೆ 10 ದಿನಗಳ ಇಸ್ರೇಲ್ ಪ್ರವಾಸದ ಉಚಿತ ಸೌಲಭ್ಯ ಸಿಗುತ್ತದೆ. ಪ್ರವಾಸಕ್ಕೆ ಇಸ್ರೇಲ್ ಆಯ್ಕೆಗೆ ಕಾರಣವೇನು ಎಂಬುದು ಗೊತ್ತಿಲ್ಲ.

ಆಸ್ಕರ್ ದಾಖಲೆ ವೀರರು

ಅಕಾಡೆಮಿಯ 91 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡ ದಾಖಲೆ ಅಮೆರಿಕಾದ ವಾಲ್‍ಡಿಸ್ನೆ ಅವರದ್ದು. ಸಿನಿಮಾ ಉದ್ಯಮಕ್ಕೆ ತಮ್ಮ ಬದುಕನ್ನು ಅರ್ಪಿಸಿಕೊಂಡಿದ್ದ ಡಿಸ್ನೆ ತಮ್ಮ ಜೀವಿತಾವಧಿಯಲ್ಲಿ ಮುಖ್ಯವಾಹಿನಿಯ ಸಿನಿಮಾಗಳಲ್ಲದೆ ಅನಿಮೇಟೆಡ್ ಹಾಗೂ ಕಾರ್ಟೂನ್ ಸಿನಿಮಾಗಳಿಗಾಗಿ ಒಟ್ಟು 22 ಆಸ್ಕರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಪಡೆದದ್ದು ಒಟ್ಟು 26 ಪ್ರಶಸ್ತಿಗಳು ಎಂಬ ಮಾಹಿತಿಯೂ ಇದೆ. ಪ್ರಶಸ್ತಿಗಾಗಿ 59 ಸಲ ಅವರ ಹೆಸರು ನಾಮಕರಣವಾಗಿತ್ತು.

  

 

 

 

 

ಇನ್ನು, ಮೂರು ಸಿನಿಮಾಗಳು ಅತಿ ಹೆಚ್ಚು ಅಂದರೆ ವರ್ಷವೊಂದರಲ್ಲಿ ಎಲ್ಲಾ 11 ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಅವೆಂದರೆ 1959 ರಲ್ಲಿ ತೆರೆಕಂಡ ‘ಬೆನ್‍ಹರ್’, 1997ರಲ್ಲಿ ತೆರೆಗೆ ಬಂದ ‘ಟೈಟಾನಿಕ್’ ಮತ್ತು 2003ರಲ್ಲಿ ತೆರೆಕಂಡ ‘ದ ರಿಟರ್ನ್ ಆಫ್ ದ ಕಿಂಗ್’. ಈ ಸಿನಿಮಾಗಳು ಜಗತ್ತಿನಾದ್ಯಂತ ತೆರೆಕಂಡು ಅಪಾರ ಹಣ ಗಳಿಸಿವೆ.

ವೈಯಕ್ತಿಕವಾಗಿ ಹೆಚ್ಚು ಪ್ರಶಸ್ತಿ ಪಡೆದವರು ಸೆಡ್ರಿಕ್ ಗಿಬ್ಸನ್; ನಿರ್ದೇಶನ ಮತ್ತು ನಿರ್ಮಾಣ ಸಂಯೋಜನೆಗಾಗಿ. ಅಲ್ಫ್ರೆಡ್ ನ್ಯೂಮನ್ ಸಂಗೀತ ಸಂಯೋಜನೆಗಾಗಿ 9, ಸಂಗೀತ ಮತ್ತು ವಿಶೇಷ ಎಫೆಕ್ಟ್‍ಗಾಗಿ ಡೆನಿಸ್ ಮ್ಯೂರೆನ್ 9 ಆಸ್ಕರ್‍ಗಳನ್ನು ಪಡೆದಿದ್ದಾರೆ.

ವಸ್ತ್ರ ವಿನ್ಯಾಸ ವಿಭಾಗದಲ್ಲಿ ಎಡಿತ್ ಹೆಡ್ 8 ಸಲ ಪ್ರಶಸ್ತಿ ಪಡೆದರೆ, ಮೇಕಪ್ ಮತ್ತು ಸ್ಪೆಷಲ್ ಎಫೆಕ್ಟ್‍ಗಾಗಿ ರಿಕ್‍ಬೇಕರ್ 7 ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅಮೆರಿಕಾದ ನಟಿ ಕ್ಯಾಥರಿನ್ ಹೆಪ್ಬರ್ನ್ 4 ಸಲ ಉತ್ತಮ ನಟನೆಗಾಗಿ ಪ್ರಶಸ್ತಿ ಪಡೆದಿದ್ದಾರೆ. 42 ಮಂದಿ ನಟರು ಉತ್ತಮ ನಟನೆಗಾಗಿ ಮೂರು ಆಸ್ಕರ್‍ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಿರ್ದೇಶನಕ್ಕಾಗಿ 4 ಪ್ರಶಸ್ತಿಗಳನ್ನು ಪಡೆದ ದಾಖಲೆ 140 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ ಜಾನ್‍ಫೋರ್ಡ್ ಅವರ ಹೆಸರಿನಲ್ಲಿದೆ.

1992ರಲ್ಲಿ ಬೆಂಗಾಳಿ ಚಿತ್ರ ನಿರ್ದೇಶಕ  ಸತ್ಯಜಿತ್ ರಾಯ್ (ಆಸ್ಕರ್ ಗೌರವ ಪ್ರಶಸ್ತಿ), 2009ರಲ್ಲಿ ‘ಸ್ಲಂ ಡಾಗ್ ಮಿಲೆನಿಯರ್’ ಚಿತ್ರಕ್ಕಾಗಿ ರಸೂಲ್ ಪೂಕುಟ್ಟಿ (ಧ್ವನಿ ಸಂಯೋಜನೆ), ಗುಲ್ಜಾರ್ (ಗೀತೆ ರಚನೆ) ಹಾಗೂ ಎ.ಆರ್‍ರೆಹಮಾನ್ (ಹಾಡಿನ ಸಂಗೀತ ಸಂಯೋಜನೆ) ಅವರು ಆಸ್ಕರ್‍ಪ್ರಶಸ್ತಿ ಪಡೆದು ಭಾರತಕ್ಕೆ ಗೌರವ ತಂದಿದ್ದಾರೆ.

ಪ್ಯಾರಸೈಟ್: ಪರಾವಲಂಬಿ ಬದುಕಿನ ಕಟು ವಾಸ್ತವ

ಅಕಾಡೆಮಿಯ 91 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಈ ವರ್ಷ (2020) ವಿದೇಶಿ ಸಿನಿಮಾ ವಿಭಾಗಕ್ಕೆ ನಾಮಕರಣಗೊಂಡಿದ್ದ ದಕ್ಷಿಣ ಕೊರಿಯಾದ ಪ್ಯಾರಸೈಟ್‍ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದಕ್ಕಿದೆ!

ಬೂನ್ ಜೂನ್ ಹೊ ಈ ಚಿತ್ರದ ನಿರ್ದೇಶಕರು. ಅತ್ಯುತ್ತಮ ಚಿತ್ರ ಪ್ರಶಸ್ತಿಯಲ್ಲದೆ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ವಿದೇಶಿ ಸಿನಿಮಾ ಹಾಗೂ ಅತ್ಯುತ್ತಮ ಕಥಾಚಿತ್ರ (ಒರಿಜಿನಲ್ ಸ್ಕ್ರೀನ್‍ಪ್ಲೇ) ಪ್ರಶಸ್ತಿ -ಹೀಗೆ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಪ್ಯಾರಾಸೈಟ್ ಬೂನ್ ಅವರಿಗೆ ತಂದುಕೊಟ್ಟಿದೆ. ನಾಲ್ಕು ಆಸ್ಕರ್ ಪುತ್ಥಳಿಗಳನ್ನು ಒಟ್ಟಿಗೆ ಬಾಚಿಕೊಂಡು ಬೂನ್ ಸಿನಿಮಾ ಜಗತ್ತಿನ ಗಮನ ಸೆಳೆದಿದ್ದಾರೆ.

ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಜೋಕರ್, ಐರಿಶ್‍ಮನ್, ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್ ಚಿತ್ರಗಳ ಜತೆ ಪ್ಯಾರಾಸೈಟ್ ಪೈಪೋಟಿ ನಡೆಸಿ ಯಶಸ್ವಿಯಾಗಿದೆ. ವಿದೇಶಿ ಸಿನಿಮಾಗಳ ವಿಭಾಗದಲ್ಲೂ ಅದು ಪೋಲಂಡ್, ಉತ್ತರ ಮೆಸಿಡೋನಿಯಾ, ಫ್ರಾನ್ಸ್ ಮತ್ತು ಸ್ಪೇನ್ ದೇಶಗಳ ಚಿತ್ರಗಳ ಜತೆಗೆ ಪೈಪೋಟಿ ಎದುರಿಸಿ ಗೆದ್ದು ಬೀಗಿದೆ. ಇದು ಅಮೆರಿಕೇತರ ದೇಶಗಳ ಸಿನಿಮಾ ನಿರ್ಮಾಪಕರಲ್ಲಿ ಹೊಸ ಭರವಸೆಗಳನ್ನು ಹುಟ್ಟುಹಾಕಿದೆ.

ಅತ್ಯುತ್ತಮ ನಟನೆಗಾಗಿ ನೀಡುವ ಪ್ರಶಸ್ತಿ ಅಮೆರಿಕಾದ ಜೋಕರ್ ಚಿತ್ರದ ನಾಯಕನಟ ಜೋಕ್ವಿನ್‍ರ ಫಾಯಲ್ ಫೀನಿಕ್ಸ್ ಅವರಿಗೆ ದಕ್ಕಿದೆ. ಜೋಕರ್, ಅತ್ಯುತ್ತಮ ಸಿನಿಮಾ ಮತ್ತು ನಿರ್ದೇಶನಕ್ಕೆ ನೀಡುವ ಪ್ರಶಸ್ತಿಗಳೆರನ್ನೂ ಪಡೆಯಲಿದೆ ಎಂಬ ಕೋಟ್ಯಂತರ ಸಿನಿಮಾಸಕ್ತರ ನಿರೀಕ್ಷೆ ಹುಸಿಯಾಯಿತು. ಡಾಟ್ ಫಿಲಿಫ್ಸ್, ಜೋಕರ್ ಚಿತ್ರದ ನಿರ್ದೇಶಕರು. ಈ ಚಿತ್ರದ ಒರಿಜಿನಲ್ ಸಂಗೀತಕ್ಕಾಗಿ ಹಿಲ್ಡರ್ ಗೋನ್ ಡೊಟಿರ್ ಅವರಿಗೆ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ನಟಿ ಪ್ರಶಸ್ತಿ ಜೂಡಿ ಚಿತ್ರದ ನಾಯಕಿ ರೀನಿ ಝೆನ್‍ನೆಗರ್ ಪಾಲಾಯಿತು.

ಪ್ಯಾರಸೈಟ್, ಕೊಳೆಗೇರಿಯಂತಹ ಪರಿಸರದಲ್ಲಿ ಬದುಕುತ್ತಿರುವ ಬಡ ಕುಟುಂಬವೊಂದು ಐಷಾರಾಮಿ ಜೀವನದ ಸೆಳೆತಕ್ಕೆ ಸಿಕ್ಕಿ ಪರಾವಲಂಬಿ ಜೀವನ ನಡೆಸುವ ಯತ್ನದಲ್ಲಿ ಎಡವಿ, ಹಲವು ಪಡಿಪಾಟಲುಗಳಿಗೆ ತುತ್ತಾಗುವುದನ್ನು ಕಟ್ಟಿಕೊಡುವ ಕಾಮಿಡಿ ಥ್ರಿಲ್ಲರ್. ದಕ್ಷಿಣ ಕೊರಿಯಾದ ಬಡತನ ಹಾಗೂ ಶ್ರೀಮಂತಿಕೆಗಳ ನಡುವಿನ ಅಂತರವನ್ನು ಹೇಳುತ್ತಲೇ ಕಟು ವಾಸ್ತವ ಸಂಗತಿಗಳ ಮೇಲೆ ನಿರ್ದೇಶಕ ಬೂನ್ ಜೂನ್ ಬೆಳಕು ಚೆಲ್ಲಿದ್ದಾರೆ.

ಕಿಮ್ ಬಡ ಮಧ್ಯವಯಸ್ಕ. ಅವನಿಗೆ ನಿರ್ದಿಷ್ಟ ಆದಾಯವಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತ, ಹೆಂಡತಿ, ಇಬ್ಬರು ಮಕ್ಕಳನ್ನು ಪೋಷಿಸುವ ಹೊಣೆ ಅವನ ಮೇಲಿದೆ. ಕಿಮ್ ಮಗನಿಗೆ ಶ್ರೀಮಂತ ಉದ್ಯಮಿಯ ಮಗಳಿಗೆ ಇಂಗ್ಲಿಶ್ ಕಲಿಸುವ ಟ್ಯೂಟರ್ ಕೆಲಸ ಅಚಾನಕ್ಕಾಗಿ ಸಿಕ್ಕಿಬಿಡುತ್ತದೆ. ಅವನೂ ಅರೆಬರೆ ಶಿಕ್ಷಣ ಪಡೆದವ. ಶ್ರೀಮಂತನ ಮಗಳಿಗೆ ಇಂಗ್ಲಿಷ್ ಕಲಿಸುತ್ತ ಅವನ ಕುಟುಂಬಕ್ಕೆ ಮನೆ ಕೆಲಸದವರ ಅಗತ್ಯ ಇರುವುದನ್ನು ಗಮನಿಸುತ್ತಾನೆ. ಉತ್ತಮ ಕೆಲಸಗಾರನನ್ನು ಹುಡುಕಿಕೊಡುವ ಸೋಗು ಹಾಕಿ, ತನ್ನ ತಂದೆ, ತಾಯಿ ಹಾಗೂ ತಂಗಿಯರನ್ನು ಆ ಮನೆಯೊಳಕ್ಕೆ ಸೇರಿಸುತ್ತಾನೆ. ಅವರೆಲ್ಲ ಪರಸ್ಪರ ಅಪರಿಚಿತರೆಂಬಂತೆ ನಟಿಸುತ್ತಾರೆ. ಶ್ರೀಮಂತನ ಕುಟುಂಬ ಮನೆಯಿಂದ ಹೊರ ಹೋದಾಗಲೆಲ್ಲ ಕಿಮ್ ಕುಟುಂಬದ ಸದಸ್ಯರು ಮನೆಯಲ್ಲಿ ಐಷಾರಾಮಿ ಸೌಲಭ್ಯಗಳನ್ನು ಅನುಭವಿಸುತ್ತಾರೆ. ಕೊನೆಗೆ ಅವರ ಮುಖವಾಡ ಕಳಚಿ ಬೀಳುತ್ತದೆ. ಅದರ ಬೆನ್ನಲ್ಲೇ ದುರಂತವೊಂದು ಸಂಭವಿಸುತ್ತದೆ.

ಕಿಮ್ ಕುಟುಂಬ ಉದ್ಯಮಿಯ ಮನೆಯಿಂದ ಹೊರ ಬರಬೇಕಾಗುತ್ತದೆ. ಅವರೆಲ್ಲ ತಮ್ಮ ಸ್ವಂತ ಮನೆಗೆ ಹಿಂದಿರುಗುವ ವೇಳೆಗೆ ಭಾರೀ ಮಳೆ ಸುರಿದು, ಮನೆಯ ವಸ್ತುಗಳೆಲ್ಲ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತವೆ. ಐಷಾರಾಮಿ ಜೀವನದ ಕ್ಷಣಿಕ ಸುಖ ಬಯಸಿದ ಕುಟುಂಬ ನೆಲೆ ಕಳೆದುಕೊಂಡು ಬೀದಿಗೆ ಬರುವ ದುರಂತ ಕತೆಯನ್ನು ಬೂನ್ ತೆರೆಯ ಮೇಲೆ ತೋರಿಸುತ್ತಲೇ ದಕ್ಷಿಣ ಕೊರಿಯಾದ ಬಡವರ ಬವಣೆಗಳನ್ನು, ಉತ್ತಮ ಬದುಕಿನ ಕನಸುಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಟಾಡ್ ಫಿಲಿಫ್ಸ್ ನಿರ್ದೇಶನದ ಜೋಕರ್ 1980ರ ದಶಕದಲ್ಲಿ ನ್ಯೂಯಾರ್ಕ್ ಜನರನ್ನು ಕಾಡುತ್ತಿದ್ದ ಭ್ರಷ್ಟಾಚಾರ, ಮುಷ್ಕರ, ಅಶಿಸ್ತು, ಕೊಳಕು ಇತ್ಯಾದಿ ಕಟು ವಾಸ್ತವ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾ.  ನ್ಯೂರ್ಯಾಕ್ ಜನರನ್ನು ನಗಿಸುವುದು ಜೋಕರ್ (ಜೋಕ್ವಿನ್)ನ ಕೆಲಸ. ಜನ ತಮ್ಮ ಸುತ್ತಲಿನ ಸಮಸ್ಯೆಗಳು, ನಗರದ ದಾರುಣ ಸ್ಥಿತಿಯನ್ನು ಗಮನಿಸದೆ ಹಾಸ್ಯ, ಅಪಹಾಸ್ಯಗಳ ಭ್ರಮೆಯಲ್ಲಿ ತೇಲುತ್ತಿದ್ದಾರೆ ಎಂಬುದನ್ನು ಜೋಕರ್ ಮನಗಾಣುತ್ತಾನೆ. ಜನರ ಸ್ಥಿತಿ ಅವನನ್ನು ಕಾಡಲು ಶುರುವಾಗುತ್ತದೆ. ಜನರಂತೆ ನಾನೂ ಮುಖವಾಡ ಧರಿಸಿ ಬದುಕುತ್ತಿದ್ದೇನೆ ಅನ್ನಿಸುತ್ತದೆ. ಆ ಭಾವ ತೀವ್ರಗೊಂಡು ಕೌರ್ಯವಾಗಿ ಪರಿವರ್ತನೆಯಾಗುತ್ತದೆ. ಅವನ ವರ್ತನೆ ಅತಿರೇಕಕ್ಕೆ ಹೋಗುತ್ತದೆ. ಒಮ್ಮೆ ಟಿವಿಯಲ್ಲಿ ಅವನದೇ ಲೈವ್‍ಶೋ ನಡೆಸುತ್ತಿದ್ದ ಆ್ಯಂಕರ್‍ನನ್ನು ಗುಂಡಿಕ್ಕಿ ಕೊಂದು ಗಹಗಹಿಸಿ ನಗುವ ಮಟ್ಟಿಗೆ ಅವನ ಅತೃಪ್ತಿ ಹೊರಹೊಮ್ಮುತ್ತದೆ. ಅದರ ಬೆನ್ನಲ್ಲೇ ಹಿಂಸೆ ಹೆಚ್ಚಾಗಿ ಇಡೀ ನ್ಯೂಯಾರ್ಕ್ ಅಗ್ನಿಕುಂಡದಂತಾಗುತ್ತದೆ.

ಎಲ್ಲರನ್ನೂ ನಗಿಸುವ ಜೋಕರ್‍ಗಳ ವಾಸ್ತವದ ಬದುಕು ಎಷ್ಟು ದಾರುಣವಾಗಿರುತ್ತದೆ ಎಂಬುದನ್ನು ಕಟ್ಟಿಕೊಡುವ ಸಿನಿಮಾಗಳು ವಿಶ್ವದ ಅನೇಕ ಭಾಷೆಗಳಲ್ಲಿ ಬಂದು ಹೋಗಿವೆ. ಜೋಕ್ವಿನ್ ನಟನೆಯ ಜೋಕರ್ ಇತ್ತೀಚಿನದು ಮತ್ತು ಅದು ಹೊಸ ಆಯಾಮಗಳಲ್ಲಿ ತೆರೆದುಕೊಳ್ಳುತ್ತದೆ. ಜೋಕರ್ ಆಗಿ ಜೋಕ್ವಿನ್‍ರ ಫಾಯಿಲ್ ತೆರೆಯ ಮೇಲೆ ಗಹಗಹಿಸಿ ನಗುತ್ತ ವಿಜೃಂಭಿಸಿದ್ದಾರೆ. ಚಿತ್ರಕ್ಕಾಗಿ ನಿರ್ದೇಶಕ ಟಾಡ್ 1980ರ ದಶಕದ ನ್ಯೂಯಾರ್ಕ್ ನಗರವನ್ನು ಮರುಸೃಷ್ಟಿ ಮಾಡಿ ಅಲ್ಲೇ ಚಿತ್ರೀಕರಣ ಮಾಡಿದ್ದಾರೆ.

ಜೋಕ್ವಿನ್ ನಟನೆಗೆ ಅಕಾಡೆಮಿ ಪ್ರಶಸ್ತಿ ಸಿಗುವ ಭರವಸೆ ಅನೇಕರಿಗೆ ಇತ್ತು. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಜೋಕರ್ ದೊಡ್ಡ ನಿರೀಕ್ಷೆ ಹುಟ್ಟಿಸಿತ್ತು. 2000, 2012ರಲ್ಲಿ ಜೋಕ್ವಿನ್ ಆಸ್ಕರ್ ನಿರೀಕ್ಷಿಸಿದ್ದರು. ಒಂದು ಹಂತದಲ್ಲಿ ನಿರಾಶರಾಗಿ ಅಕಾಡೆಮಿಯ ಆಯ್ಕೆ ಪ್ರಕ್ರಿಯೆಯನ್ನು ಟೀಕಿಸಿದ್ದರು. ಕೊನೆಗೂ ಜೋಕ್ವಿನ್ ಪ್ರಶಸ್ತಿ ಪಡೆದು ಬೀಗಿದ್ದಾರೆ.

Leave a Reply

Your email address will not be published.