ಇಂಡಿಕಾ ಎ. ಡೀಪ್ ನ್ಯಾಚರಲ್ ಹಿಸ್ಟರಿ ಆಫ್ ದಿ ಇಂಡಿಯನ್ ಸಬ್ ಕಾಂಟಿನೆಂಟ್

ಭೂಮಿಯ ಪ್ರಾಕೃತಿಕ ಇತಿಹಾಸ ಹೇಳುವಲ್ಲಿ ಪ್ರಣಯ್ ಲಾಲ್ ಕೇವಲ ಭಾರತ ಉಪಖಂಡದ ಉದಾಹರಣೆಗಳನ್ನು ಹೇಳುತ್ತಾ ಭಾರತೀಯ ಓದುಗರಿಗೆ ಹೆಚ್ಚು ಪ್ರಸ್ತುತರಾಗುತ್ತಾರೆ. ಪ್ರಾಕೃತಿಕ ಉದಾಹಣೆಗಳಲ್ಲಿ ಬಹಳಷ್ಟು ಕರ್ನಾಟಕದ ಕಲ್ಲು, ಮಣ್ಣು, ಖನಿಜ, ಬೆಟ್ಟ, ಜೀವ, ಜಂತುಗಳ ಪ್ರಸ್ತಾಪ ಬರುತ್ತದೆ. ಧಾರವಾಡದ ಕಲ್ಲು ಪದರ, ನಂದಿಬೆಟ್ಟ ಶ್ರೇಣಿ, ಲಾಲ್ಬಾಗ್ ಕಲ್ಲುಗುಡ್ಡ, ಚಿತ್ರದುರ್ಗದ ಕಲ್ಲುಗಳ ನಿಕ್ಷೇಪ, ಮೈಸೂರಿನ ಇಪ್ಪತ್ತು ಸೆಂಟಿಮೀಟರ್ ಉದ್ದದ ಎರೆಹುಳು ಸೇರಿದಂತೆ ಹಲವಾರು ಕನ್ನಡಿಗ ವಿಷಯವಸ್ತುಗಳ ಸಚಿತ್ರ ವಿವರಗಳಿವೆ. ಭಾರತದ ಹಲವೆಡೆ ಸರೀಸೃಪಗಳ ಪಳೆಯುಳಿಕೆ ಹಾಗೂ ಉಪಖಂಡದೆಲ್ಲೆಡೆಯ ಕಲ್ಲುಮಣ್ಣುಗಳ ದೀರ್ಘ ಇತಿಹಾಸವಿದೆ. ಇದುವರೆಗೆ ಬರೆಯಲಾಗಿರುವ ಬೇರಾವುದೇ ಪುಸ್ತಕದಲ್ಲಿ ದಾಖಲೆಯಾಗದ ಭಾರತೀಯ ಪ್ರಾಕೃತಿಕ ಇತಿಹಾಸವಿದೆ. ಪುಸ್ತಕ ಓದಿದ ಮೇಲೆ ನಿಮ್ಮ ಊರಿನ ಯಾವುದೇ ಕಲ್ಲನ್ನೂ ನೀವೊಮ್ಮೆ ತಿರುಗಿಸಿ ಮುರುಗಿಸಿ ನೋಡಿ ಅದರ ಇತಿಹಾಸದ ಬಗ್ಗೆ ಒಮ್ಮೆ ಆಲೋಚನೆ ಮಾಡುವಂತಾಗುತ್ತದೆ.

ಪುಸ್ತಕದಿಂದ ಆಯ್ದಮೂವಿಂಗ್ ಹೆವನ್ ಅಂಡ್ ಅರ್ಥ್ಅಧ್ಯಾಯದ ಸಂಗ್ರಹಾನುವಾದ ಇಲ್ಲಿದೆ.

ಲೇಖಕ ಪ್ರಣಯ್ ಲಾಲ್ ಅವರದು ಬಹುಮುಖ ಪ್ರತಿಭೆ; ಓದಿದ್ದು ಜೀವರಸಾಯನಶಾಸ್ತ್ರ, ಸಾರ್ವಜನಿಕ ಆರೋಗ್ಯ ಕ್ಷೇತ್ರದ ಲಾಭರಹಿತ ಸಂಸ್ಥೆಯೊಂದರಲ್ಲಿ ನೌಕರಿ, ಪತ್ರಿಕೆಗಳಿಗೆ ವ್ಯಂಗ್ಯಚಿತ್ರ ರಚಿಸುತ್ತಾರೆ, ಜಾಹೀರಾತು ಸಂಸ್ಥೆಗೆ ಅನಿಮೇಶನ್ ಒದಗಿಸುತ್ತಾರೆ, ಜೊತೆಗೆ ಪರಿಸರ ಪ್ರಚಾರಕ. ಅವರ ಮೊದಲ ಪುಸ್ತಕಇಂಡಿಕಾ: ಡೀಪ್ ನ್ಯಾಚುರಲ್ ಹಿಸ್ಟರಿ ಆಫ್ ಇಂಡಿಯನ್ ಸಬ್ ಕಾಂಟಿನೆಂಟ್ಪ್ರಕಟವಾಗಿದ್ದು 2016 ಡಿಸೆಂಬರಿನಲ್ಲಿ.

 

ಜಂಬೂದ್ವೀಪದ ಕಥೆ

ಸುಮಾರು 12 ಕೋಟಿ ವರ್ಷಗಳ ಹಿಂದೆ ಭಾರತ ಉಪಖಂಡವು ಹಿಂದೂ ಮಹಾಸಾಗರದ ದಕ್ಷಿಣದಲ್ಲಿ ಅಂಟಾರ್ಕ್ಟಿಕಾ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಅಮೆರಿಕ ಖಂಡಗಳೊಡನೆ ಅಂಟಿಕೊಡಂತಿತ್ತು. ಭೂಮಿಯೊಳಗಣ ಜ್ವಾಲಾಮುಖಿಗಳು ಮತ್ತಿತರ ಪ್ರಾಕೃತಿಕ ಕಾರಣಗಳಿಂದ ಭಾರತ ಉಪಖಂಡವು ಮೊದಲು ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ ಹಾಗೂ ದಕ್ಷಿಣ ಅಮೆರಿಕ ಖಂಡಗಳಿಂದ ಬೇರ್ಪಟ್ಟು ಉತ್ತರಾಭಿಮುಖಿಯಾಗಿ ತನ್ನ ಪ್ರಯಾಣವನ್ನು ಪ್ರಾರಂಭ ಮಾಡಿತ್ತು.

ಈ ಸಮಯದ ಮೊದಲ ಒಂದು ಕೋಟಿ ವರ್ಷಗಳವರೆಗೆ ಮಡಗಾಸ್ಕರ್ ದ್ವೀಪ ಕೂಡಾ ಭಾರತ ದ್ವೀಪಕ್ಕೆ ಅಂಟಿಕೊಂಡಿತ್ತು. ಮುಂದಿನ ಸರಿಸುಮಾರು ಐದು ಕೋಟಿ ವರ್ಷಗಳವರೆಗೆ ಭಾರತ ಖಂಡ ಅಥವಾ ‘ಜಂಬೂದ್ವೀಪ’ ಹಿಂದೂ ಮಹಾಸಾಗರದಲ್ಲಿ ಉತ್ತರ ದಿಕ್ಕಿನಲ್ಲಿ ಪ್ರಯಾಣ ಮಾಡುತ್ತಿದ್ದ ದ್ವೀಪವೇ ಆಗಿತ್ತು. ವರ್ಷಕ್ಕೆ ಸುಮಾರು ಇಪ್ಪತ್ತು ಸೆಂಟಿಮೀಟರ್‌ಗಳವರೆಗೆ ಉತ್ತರಕ್ಕೆ ಚಲಿಸುತ್ತಿದ್ದ ಈ ಜಂಬೂದ್ವೀಪ ಸುಮಾರು ಏಳು ಕೋಟಿ ವರ್ಷಗಳ ಹಿಂದೆ ಏಷ್ಯಾ ಖಂಡಕ್ಕೆ ಅಕ್ಷರಶಃ ‘ಡಿಕ್ಕಿ’ ಹೊಡೆದಿತ್ತು. ಜಂಬೂದ್ವೀಪದ ಈ ನಿಧಾನಡಿಕ್ಕಿಗೆ ಏಷ್ಯಾ ಖಂಡದ ಬಹುಭಾಗ ಮೇಲೆದ್ದು ಟಿಬೆಟನ್ ಪ್ರಸ್ತಭೂಮಿಯಾದರೆ ಅದರ ಕೆಳಭಾಗ ಇನ್ನೂ ಮೇಲೆದ್ದು ಹಿಮಾಲಯ ಪರ್ವತಶ್ರೇಣಿಯಾಯಿತು.

ಎಂದೋ ಓದಿದ ಈ ಕಿರುಬರಹದ ವೈಜ್ಞಾನಿಕ ಸತ್ಯವನ್ನು ಅದರ ಸುಂದರ ಆಯಾಮಗಳೊಡನೆ ಓದಬೇಕೆಂದರೆ ನೀವು ‘ಪ್ರಣಯ್ ಲಾಲ್’ ಅವರ ‘ಇಂಡಿಕಾ’ ಪುಸ್ತಕ ಕೈಗೆತ್ತಿಕೊಳ್ಳಲೇಬೇಕು. ಅತ್ಯಂತ ಸುಂದರ ಚಿತ್ರಗಳು, ಓದಿಸಿಕೊಳ್ಳುವ ಭಾಷೆ ಹಾಗೂ ರೋಮಾಂಚನಗೊಳಿಸುವ ವಿವರಗಳೊಂದಿಗೆ ಪ್ರಕಟವಾಗಿರುವ ಈ ಹೊತ್ತಿಗೆ ತನ್ನ ಬರಹದ ಗುಣಮಟ್ಟಕ್ಕೆ 2017ರ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಭಾರತ ಉಪಖಂಡದ ಪ್ರಾಕೃತಿಕ ಇತಿಹಾಸದ ಬಗ್ಗೆ ಆಸಕ್ತರಾಗಿರುವ ಎಲ್ಲರೂ ಓದಲೇಬೇಕಿರುವ ಪುಸ್ತಕವೆಂಬ ಹೆಗ್ಗಳಿಕೆ ಪಡೆದಿದೆ.

ಪೃಥ್ವಿಯ 3.6 ಬಿಲಿಯನ್ ವರ್ಷಗಳ ಪ್ರಾಕೃತಿಕ ಇತಿಹಾಸವನ್ನು ಹೇಳುವ ಬಹಳಷ್ಟು ಪುಸ್ತಕಗಳು ಈಗಾಗಲೇ ಅಮೆರಿಕದ ಹಾಗೂ ಐರೋಪ್ಯ ವಿಜ್ಞಾನಿಗಳಿಂದ ಹೊರಬಂದಿವೆ. ಆದರೆ ಈ ವಿಜ್ಞಾನ ಲೇಖಕರು ಸಂಪೂರ್ಣವಾಗಿ ಅಮೆರಿಕ ಹಾಗೂ ಯುರೋಪಿನ ಪ್ರಾಕೃತಿಕ ಇತಿಹಾಸವನ್ನೇ ಕೇಂದ್ರವಾಗಿಸಿಕೊಂಡು ಬರೆದಿದ್ದಾರೆ.

ಉದಾಹರಣೆಗೆ ಹೇಳುವುದಾದರೆ ‘ಡೈನಾಸಾರ್’ಗಳ ಬಗ್ಗೆ ಹೇಳುವಾಗಲೂ ಅಮೆರಿಕಾ ಹಾಗೂ ಯೂರೋಪಿನಲ್ಲಿ ಇದ್ದ ಸರೀಸೃಪಗಳ ಬಗ್ಗೆಯೇ ಬರೆಯುತ್ತಾರೆ. ಭಾರತ ಉಪಖಂಡದಲ್ಲಿದ್ದ ‘ರಾಜಸಾರಸ್’ ಅಮೆರಿಕದ ‘ಟಿ-ರೆಕ್ಸ್’ ಸರೀಸೃಪಕ್ಕಿಂತ ಹೆಚ್ಚು ಆಕ್ರಮಣಕಾರಿ ಸರೀಸೃಪವಾಗಿತ್ತೆಂದು ನಿಮಗೆ ಯಾರೂ ಹೇಳಿರಲಿಕ್ಕಿಲ್ಲ. ಈ ಸರೀಸೃಪ ಯುಗದಲ್ಲಿ ಭೂಮಿಯ ಮೇಲೆ ಆಮ್ಲಜನಕ ಈಗಿಗಿಂತ ಶೇಕಡಾ 50 ರಷ್ಟು ಹೆಚ್ಚಿತ್ತೆಂದು ಕೂಡಾ ನಿಮಗೆ ಯಾರೂ ಹೇಳಿರಲಾರರು. ಇಂತಹ ಹಲವಾರು ವಿವರಗಳೊಂದಿಗೆ ಭಾರತ ಉಪಖಂಡದಲ್ಲಿ ಹಿಂದೆ ಯಾರೂ ದಾಖಲಿಸದೇ ಇದ್ದ ಹತ್ತಾರು ಹೊಸಬಗೆಯ ಸರೀಸೃಪಗಳು ಇದ್ದವೆಂದು ಪುರಾವೆ ಸಹಿತ ಲೇಖಕ ಪ್ರಣಯ್‌ಲಾಲ್ ದಾಖಲೆ ಮಾಡುತ್ತಾರೆ.

ಪಂಡಿತ ಹಾಗೂ ಪಾಮರರಿಬ್ಬರಿಗೂ ಸಲ್ಲುವ ಪುಸ್ತಕವಿದಾಗಿದೆ. ಗಂಭೀರ ಸಂಶೋಧಕರಿಗೆ ಬೇಕಿರುವ ಉಲ್ಲೇಖಗಳು ಹಾಗೂ ವೈಜ್ಞಾನಿಕ ವಿವರಗಳಿವೆ. ಆದರೆ ಸಾಮಾನ್ಯ ಕುತೂಹಲದ ಯಾವುದೇ ಓದುಗನಿಂದ ಓದಿಸಿಕೊಳ್ಳುವ ಬರಹವಿದೆ. ಓದುವುದೇ ಬೇಡವೆಂದು ಪುಸ್ತಕ ತಿರುವಿ ಹಾಕುವ ಜಾಯಮಾನದವರಿಗೂ ಇಷ್ಟವಾಗುವಂತಹ ಚಿತ್ರಗಳನ್ನು ನೀಡಲಾಗಿದೆ. ಈ ಚಿತ್ರಗಳ ಮುಖಾಂತರವೇ ಪ್ರಾಕೃತಿಕ ಇತಿಹಾಸ ಹೇಳುವ ಯಶಸ್ವಿ ಪ್ರಯತ್ನವೂ ಇದಾಗಿದೆ. ಹೇಗೆ ವಿಜ್ಞಾನವನ್ನು ಸಾಮಾನ್ಯ ಓದುಗರಿಗೆ ತಲುಪಿಸುವಂತೆ ಕುತೂಹಲಕಾರಿಯಾಗಿ ಬರೆಯಬೇಕು ಎಂಬುದಕ್ಕೆ ಸಹ ಈ ಪುಸ್ತಕ ಮಾದರಿಯಾಗಿದೆ.

ಮೋಹನದಾಸ್


ಭೂಮಿ ಆಕಾಶ ಬಗೆದು ನೋಡಿದಾಗ

ಭಾರತವನ್ನು ನಿರೂಪಿಸುವ ಯಾವುದಾದರೂ ಒಂದು ಭೌಗೋಳಿಕ ರಚನೆಯನ್ನು ಹೆಸರಿಸಿ ಎಂದು ಕೇಳಿದರೆ ಬಹಳಷ್ಟು ಜನ ಹಿಮಾಲಯವನ್ನೇ ಹೆಸರಿಸುತ್ತಾರೆ. ಭಾರತ ಉಪಖಂಡದ ಉತ್ತರದ ಸೀಮಾರೇಖೆಯನ್ನು ಗುರುತಿಸುವುದು ಈ ಬೃಹತ್ ಪರ್ವತಗಳ ಶ್ರೇಣಿ. ಅದೇ ಭಾರತದ ಅತ್ಯಂತ ಹಳೆಯ ನದಿಯಾದ ಸಿಂಧೂಗೆ (ಇಂಡಸ್) ಜನ್ಮ ಕೊಟ್ಟಿರುವುದು. ಇಂಡಿಯಾ ಎಂಬ ಹೆಸರು ಸಹ ಇಂಡಸ್‌ನಿಂದಲೇ ಬಂದದ್ದು. ಇಷ್ಟಾಗಿ ಐವತ್ತು ಮಿಲಿಯನ್ ವರ್ಷಗಳ ಹಿಂದೆ ಹಿಮಾಲಯ ಪರ್ವತ ಎಂಬುದು ಇರಲೇ ಇಲ್ಲ. ಆಗ ವಾಯುವ್ಯ ದಿಕ್ಕಿನಲ್ಲಿ ಒಂದಿಷ್ಟು ಅಗ್ನಿಪರ್ವತವಿದ್ದ ದ್ವೀಪಗಳಿದ್ದವು. ನಮ್ಮ ಭೂಮಿ ತಾಯಿಯನ್ನು ನಾವು ಒಬ್ಬ ನಲವತ್ತಾರು ವರ್ಷದಾಕೆ ಎಂದು ಭಾವಿಸಿದರೆ, ಕೇವಲ ಅರ್ಧ ವರ್ಷದ ಹಿಂದೆ ಆಕೆಯ ಮೇಲ್ಮೈನಲ್ಲಿ, ಅರಾವಳಿ ಪರ್ವತದಿಂದ ಸೈಬೀರಿಯಾದವರೆಗೂ ದೊಡ್ಡ ಪರ್ವತಗಳೇ ಇರಲಿಲ್ಲ. ಆದರೂ ಹಿಮಾಲಯವೇ ಭಾರತದ ಅತ್ಯಂತ ಪ್ರಮುಖ ಭೌಗೋಳಿಕ ರಚನೆ ಎಂದರೆ ತಪ್ಪಾಗುವುದಿಲ್ಲ, ಏಕೆಂದರೆ ಭೌಗೋಳಿಕ ಲೆಕ್ಕಾಚಾರದಲ್ಲಿ ಅದರ ಹುಟ್ಟು ಇತ್ತೀಚಿನದದ್ದಾದರೂ, ಭಾರತದ ಮೇಲ್ಮೈ, ಹವಾಮಾನ, ಅರಣ್ಯಗಳು ಇವೆಲ್ಲವನ್ನೂ ರೂಪಿಸುವಲ್ಲಿ ಈ ಬೃಹತ್ ಪರ್ವತದ ಪಾತ್ರ ಬಹಳ ಮುಖ್ಯವಾದದ್ದು.

ಸುಮಾರು 88 ಮಿಲಿಯನ್ ವರ್ಷಗಳ ಹಿಂದೆ ವಿಶಾಲ ಭಾರತವು ಇಂದಿನ ಮಡಗಾಸ್ಕರ್ ದ್ವೀಪದಿಂದ ಬೇರ್ಪಟ್ಟು ಸಾಗರದ ಅಡಿಯಲ್ಲಿನ ತೀವ್ರವಾದ ಅಗ್ನಿಪರ್ವತ ಚಟುವಟಿಕೆಗಳಿಂದ ಉತ್ತರದತ್ತ ಚಲಿಸಿತು. ಆಗ ಯುರೋಪ್ ಮತ್ತು ಏಷಿಯಾ ಎಂಬ ಯಾವುದೇ ಭಿನ್ನತೆಯಿಲ್ಲದ ಏಕೀಕೃತವಾದ ಯುರೇಶಿಯಾ ಎಂಬ ಬೃಹತ್ ಭಾಗಕ್ಕೆ, ಒಂದು ಮಿಲಿಯನ್ ವರ್ಷಕ್ಕೆ 30 ಕಿಲೋಮೀಟರ್ ವೇಗದಲ್ಲಿ ಎಂದರೆ ವರ್ಷಕ್ಕೆ ಒಂದು ಅಡಿಗಿಂತ ಕೊಂಚ ಹೆಚ್ಚಾದ ವೇಗದಲ್ಲಿ ಡಿಕ್ಕಿ ಹೊಡೆಯಿತು. ನಾವು ಚಲಿಸುವ ಕಾರ್‌ಗಳ ವೇಗಕ್ಕೆ ಹೋಲಿಸಿಕೊಂಡು ಇದೇನು ಮಹಾ ವೇಗ ಎಂದುಕೊಳ್ಳಬಹುದು. ಆದರೆ ಈ ವೇಗವನ್ನು ಇದುವರೆಗೂ ಯಾವ ಚಲಿಸುವ ಭೂಭಾಗವೂ ಪಡೆದುಕೊಂಡಿಲ್ಲ. ಹೋಲಿಕೆಯಲ್ಲಿ ಹೇಳಬೇಕೆಂದರೆ ಇಂದೂ ಚಲಿಸುತ್ತಿರುವ ಭಾರತ ಉಪಖಂಡದ ವೇಗವು ಕೇವಲ ವರ್ಷಕ್ಕೆ ಐದು ಸೆಂಟಿಮೀಟರ್ ಅಷ್ಟೇ.

ವಿಶಾಲ ಭಾರತವು ಮೇಲಕ್ಕೆ ಚಲಿಸಿದಂತೆ ಅದು ಅರೆಚಂದ್ರಾಕೃತಿಯಲ್ಲಿ ಅಲ್ಲಲ್ಲಿ ಹರಡಿಕೊಂಡಿದ್ದ ಜಪಾನಿನಷ್ಟು ವಿಸ್ತೀರ್ಣವನ್ನು ಹೊಂದಿದ್ದು ಅನೇಕ ಸಕ್ರಿಯ ಜ್ವಾಲಾಮುಖಿಗಳಿದ್ದಂಥ ದ್ವೀಪಗಳ ಸಮೂಹಕ್ಕೆ ಅಪ್ಪಳಿಸಿತು. ಅದರ ಏಟು ಎಷ್ಟು ಜೋರಾಗಿತ್ತೆಂದರೆ ಆ ದ್ವೀಪಗಳು ಮಡಿಚಿಕೊಂಡು ಗುಡ್ಡೆಯಾಗಿ ಇಂದಿನ ಭಾರತದ ವಾಯುವ್ಯ ದಿಕ್ಕಿನಲ್ಲಿ ಪೇರಿಸಲ್ಪಟ್ಟವು. ಇವು ಇಂದಿನ ಪಾಕಿಸ್ತಾನದ ಕೊಹಿಸ್ತಾನದಿಂದ ಶುರುವಾಗಿ ಲಡಾಖ್ ಮೂಲಕ ಹಾದು ನೈನಿತಾಲ್‌ನವರೆಗೂ ಅಷ್ಟೇನೂ ಎತ್ತರವಿಲ್ಲದ ಸುಮಾರು 800 ಕಿಲೋಮೀಟರ್ ಉದ್ದದ ಪರ್ವತ ಶ್ರೇಣಿಯಾದವು. ನದಿ ಮತ್ತು ಸಮುದ್ರದ ಪದಾರ್ಥಗಳ ಶೇಖರಣೆಯಿಂದಾದ ಕಂದು ಸಂಚಿತ ಶಿಲೆಗಳ ನಡುವೆ ಕರಿಬೂದು ಬಣ್ಣದ ಬಸಾಲ್ಟ್ ಹುದುಗಿದ್ದು, ಸಾಕಷ್ಟು ಸಸ್ಯರಾಶಿಗೆ ಆಶ್ರಯ ನೀಡಿರುವ ಈ ಬೆಟ್ಟಗಳನ್ನು ಸುಲಭವಾಗಿ ಗುರುತಿಸಬಹುದು. ಸಮುದ್ರ ಸಂಚಿತ ಶಿಲೆಗಳಿಂದಾಗಿ ಇವು ಒಂದು ಕಾಲದಲ್ಲಿ ಆಳವಾದ ಸಾಗರಗರ್ಭದಲ್ಲಿ ಇದ್ದವೆಂಬುದು ಸ್ಪಷ್ಟ. ಲಡಾಖ್‌ನಿಂದ ಪಶ್ಚಿಮಕ್ಕಿರುವ, ಹಿಂದೊಮ್ಮೆ ಅಗ್ನಿಪರ್ವತವಾಗಿದ್ದ ಒಂದು ಚಿಕ್ಕ ಬೂದುಬಣ್ಣದ ಬೆಟ್ಟದಲ್ಲಿ ಚಿಪ್ಪಿರುವ ಸಮುದ್ರ ಜೀವಿಗಳ ಪಳೆಯುಳಿಕೆಗಳು ದೊರೆತಿವೆ. ಒಂದು ಕಾಲದಲ್ಲಿ ಸಕ್ರಿಯವಾಗಿದ್ದ ಇಂಥ ಅನೇಕ ಅಗ್ನಿಪರ್ವತಗಳನ್ನು, ಚಲಿಸುತ್ತಾ ಬಂದ ಭಾರತದ ಖಂಡಫಲಕವು ಚಾಕುವಿನಂತೆ ಕತ್ತರಿಸಿ ಕೆಳಗಿನಿಂದ ಉಕ್ಕುತ್ತಿದ್ದ ಶಿಲಾಪಾಕ (ಮ್ಯಾಗ್ಮಾ )ದ ಹರಿವನ್ನು ನಿಲ್ಲಿಸಿಬಿಟ್ಟಿತು.

ಅಂಡಮಾನ್ ಹುಟ್ಟು

ವಿಶಾಲ ಭಾರತವು ಉತ್ತರದತ್ತ ಚಲಿಸುತ್ತಲೇ ಹೋಯಿತು. 48 ಮಿಲಿಯನ್ ವರ್ಷಗಳ ಹಿಂದೆ ಇನ್ನೊಂದು ಅಗ್ನಿಪರ್ವತ ಚಟುವಟಿಕೆಯ ಪ್ರಕರಣ ಕಾಣಿಸಿಕೊಂಡಿತು. ಹಿಂದೂ ಮಹಾಸಾಗರದ ಪೂರ್ವಭಾಗದಲ್ಲಿ ಬರ್ಮಾದ ಭೂ ಖಂಡ ಫಲಕ ಮತ್ತು ಭಾರತದ ಭೂ ಖಂಡದ ಫಲಕಗಳು ಘರ್ಷಣೆಗೆ ಬಂದವು. ಭೀಕರ ಭೂಕಂಪಗಳಿಂದ ಬರ್ಮಾದ ಪರ್ವತಗಳ ಭಾಗಗಳು ಕುಸಿದು, ಕುದಿಯುತ್ತಾ ಹೊರಬಂದ ಲಾವಾರಸದೊಂದಿಗೆ ಸೇರಿ, ಸಾಗರ ತಳದ ಬಂಡೆಗಳನ್ನೂ ಸೇರಿಸಿಕೊಂಡು ಅಂಡಮಾನ್ ದ್ವೀಪಗಳು ಉದ್ಭವಿಸಿದವು. ಮಲಯ್ ಭಾಷೆಯಲ್ಲಿ ಹನುಮಾನ್‌ಗೆ ಅಂದಮಾನ್ ಎನ್ನುತ್ತಾರೆ. ಚೆನ್ನೈ ಮತ್ತು ಕಲ್ಕತ್ತಾಗಳಿಂದ ಸಮದೂರದಲ್ಲಿರುವ ಅಂಡಮಾನ್‌ನಲ್ಲಿ ಶಂಖಾಕೃತಿಯ ಅಗ್ನಿಪರ್ವತದ ಸರಣಿಯೇ ಇದೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಎರಡು ಅಗ್ನಿಪರ್ವತಗಳನ್ನು ಹೊರತುಪಡಿಸಿ ಉಳಿದ ಎಲ್ಲವೂ ಒಣಗಿಹೋಗಿವೆ. ಬ್ಯಾರೆನ್ ಐಲೆಂಡ್ ಮತ್ತು ನಾರ್ಕೊಂಡಮ್ (ತಮಿಳು ಮೂಲದಲ್ಲಿ ನರಕ ಕುಂಡಮ್)ಗಳಲ್ಲಿ ಮಾತ್ರ ಅಗ್ನಿಪರ್ವತದ ಚಟುಚಟಿಕೆಯನ್ನು ಕಾಣಬಹುದು. ಆದರೆ ನಾರ್ಕೊಂಡಮ್ ಸ್ಫೋಟವಾಗಿ ಬಹಳ ಕಾಲವಾದ್ದರಿಂದ ಇಡಿಯ ಭಾರತದ ಭೂ ಭಾಗದಲ್ಲಿ ಸಕ್ರಿಯ ಅಗ್ನಿಪರ್ವತ ಎಂದರೆ ಬ್ಯಾರೆನ್ ಐಲೆಂಡ್ ಮಾತ್ರ ಎಂದು ತೀರ್ಮಾನಿಸಬಹುದು. ಬ್ಯಾರೆನ್ ಐಲೆಂಡಿನ ತುಂಬಾ ಕಾಡುಗಳೂ, ಬುಡದಲ್ಲಿ ಸಿಹಿನೀರು ಬುಗ್ಗೆಗಳೂ ಇವೆ. 2004 ರಿಂದ ಬ್ಯಾರೆನ್ ಐಲೆಂಡ್ ಹೆಚ್ಚು ಹೆಚ್ಚು ಬೂದಿಯನ್ನೂ ಉಗುಳುತ್ತಿದೆ. ಅಂಡಮಾನ್‌ನ ಮಧ್ಯದಲ್ಲಿರುವ ಬಾರಾ ಟಂಗ್‌ನಲ್ಲಿ ಒಂದಿಷ್ಟು ಕೆಸರನ್ನು ಉಗುಳುವ ಪರ್ವತಗಳೂ ಇವೆ. ನಿಕೊಬಾರ್ ದ್ವೀಪಗಳು ಪಶ್ಚಿಮ ಇಂಡೋನೇಷ್ಯಾದ ಅಡಿಯಲ್ಲಿನ ಫಲಕಗಳ ಉಜ್ಜುವಿಕೆಯಿಂದ ಉಂಟಾಗಿದ್ದು, ಅಂಡಮಾನ್‌ಗಿಂತ ಚಿಕ್ಕದಾಗಿದ್ದು ಅದಕ್ಕೆ 150 ಕಿ.ಮೀ ದಕ್ಷಿಣದಲ್ಲಿವೆ.

ಎದ್ದ ಟಿಬೆಟ್ಬತ್ತಿದ ಸಾಗರ

ವಿಶಾಲ ಭಾರತ ಭೂ ಭಾಗವು ಯುರೇಶಿಯಾವನ್ನು ಇಂಚಿಂಚಾಗಿ ಸಮೀಪಿಸಿದಂತೆ, ಭಾರತದ ಉತ್ತರದಲ್ಲೂ, ಯುರೇಶಿಯಾದ ದಕ್ಷಿಣದಲ್ಲೂ ವಿಪರೀತ ಒತ್ತಡ ಸೃಷ್ಟಿಯಾಯಿತು. ಎರಡರಲ್ಲಿ ಒಂದು ಶರಣಾಗಬೇಕಿತ್ತು ! ಸರಿ ಬೃಹತ್ತಾದ ಯುರೇಶಿಯಾದ ಎದುರು, ಹಗುರವೂ, ಕಡಿಮೆ ಸಾಂದ್ರವೂ ಆಗಿದ್ದ ಭಾರತವು ತಲೆಬಾಗಿ ಕೆಳಗೆ ಜಾರಿತು. ಇದರಿಂದಾಗಿ ಯುರೇಶಿಯಾದ ದಕ್ಷಿಣದಲ್ಲಿನ ಸಮುದ್ರ ತಳದಿಂದ 300-400 ಮೀಟರ್ ಮೇಲೆದ್ದ ಭಾಗವು, ಇನ್ನೂ ಮೇಲಕ್ಕೆದ್ದು ಟಿಬೆಟ್ ಪ್ರಸ್ಥಭೂಮಿ ಸೃಷ್ಟಿಯಾಯಿತು. ಮುಂದಿನ ಹತ್ತು ಲಕ್ಷ ವರ್ಷಗಳಲ್ಲಿ ಅದು 200-300 ಮೀಟರ್ ಮೇಲೇರುತ್ತಲೇ ಹೋಯಿತು. ವಿಶಾಲ ಭಾರತವು ಮೇಲು ಮೇಲಕ್ಕೆ ಬಲವಾಗಿ ಒತ್ತುತ್ತಲೇ ಹೋದದ್ದರಿಂದ ಮ್ಯಾನ್ಮಾರ್, ಅರೇಬಿಯಾಗಳ ಅಂಚಿನಲ್ಲಿ ಪರ್ವತಗಳು, ಪ್ರಸ್ಥಭೂಮಿಗಳು ಸೃಷ್ಟಿಯಾದುದಷ್ಟೇ ಅಲ್ಲದೆ ಇನ್ನೊಂದು ಮಹತ್ತರ ಪ್ರಘಟನೆ ಸಹ ಜರುಗಿತ್ತು. ಅದೆಂದರೆ ಒಂದು ಸಮುದ್ರವೇ ಕಾಣದಾಯಿತು !

ಮಾಯವಾದ ಸಮುದ್ರ

ಐದು ಕೋಟಿ ವರ್ಷಗಳ ಹಿಂದಿನ ಜಗತ್ತಿನ ಭೂಪಟವನ್ನು ನೋಡಿದರೆ ಸ್ಪೇನ್ ದೇಶದ ದಕ್ಷಿಣದಲ್ಲಿರುವ ಜಿಬ್ರಾಲ್ಟರ್‌ನಿಂದ ಹಿಡಿದು ಇಂಡೋನೇಷ್ಯಾದವರೆಗೂ ಒಂದೇ ಒಂದು ವಿಶಾಲ ಸಮುದ್ರವಿದ್ದದ್ದು ಗೋಚರವಾಗುತ್ತದೆ. ಆಗ ಅದಕ್ಕೆ ಯಾವ ಹೆಸರಿರುವುದೂ ಸಾಧ್ಯವಿರಲಿಲ್ಲ ಬಿಡಿ ! ಆದರೆ ಭೂಗರ್ಭಶಾಸ್ತ್ರಜ್ಞರು ಅದಕ್ಕೆ ಈಗ ಟೆತಿಸ್ ಸಮುದ್ರ ಎಂದು ನಾಮಕರಣ ಮಾಡಿದ್ದಾರೆ. ಭಾರತ ಮತ್ತು ಯುರೇಶಿಯಾ ಬೆಸೆದುಕೊಂಡಂತೆ, ಪೂರ್ವದಿಂದ ಶಿಲ್ಲಾಂಗ್ ಪ್ರಸ್ಥಭೂಮಿಯು ಒತ್ತುತ್ತಾ ಬಂದಂತೆ ಟೆತಿಸ್ ಸಮುದ್ರವು ಪಶ್ಚಿಮಕ್ಕೆ ಸರಿಯಬೇಕಾಯಿತು. ಆಗ್ನೇಯ ಏಷ್ಯಾ, ಭಾರತ, ಅರೇಬಿಯಾ, ಆಫ್ರಿಕಾಗಳು ನಿರ್ದಯವಾಗಿ ಯುರೇಶಿಯಾವನ್ನು ಅಪ್ಪಳಿಸುತ್ತಾ ಹೋದಂತೆ ಟೆತಿಸ್ ಸಮುದ್ರವು ತುಂಡರಿಸಲ್ಪಟ್ಟು ಉಪ್ಪು ನೀರಿನ ಸರೋವರಗಳ ಒಂದು ಉದ್ದನೆಯ ಸಾಲು ಸೃಷ್ಟಿಯಾಯಿತು. ಈ ಸರೋವರಗಳು ಅನೇಕಾನೇಕ ಆಧುನಿಕ ಸಸ್ತನಿ ಪ್ರಾಣಿಗಳ ಪೂರ್ವಿಕರಿಗೆ ಮತ್ತು ಮೊಸಳೆಗಳ, ಹಾವುಗಳ, ಆಮೆಗಳ, ಹೆಬ್ಬಾವಿನಂಥ ಸರ್ಪಗಳ ಮತ್ತು ತಿಮಿಂಗಲಗಳ ಪೂರ್ವಿಕರಿಗೂ ಜೀವವಿಕಾಸದ ಕಾವು ಬುಟ್ಟಿಗಳಾದವು.

ಅಂಥದೊಂದು ಬೃಹತ್ತಾದ ಸರೋವರದ ಅವಶೇಷವನ್ನು ರಾಜಸ್ಥಾನದ ಬಾರ್‌ಮೆರ್ ಬಳಿ ಕಾಣಬಹುದು. ಇಲ್ಲಿ ಸುಣ್ಣ ತುಂಬಿದ ಜೇಡಿಮಣ್ಣಿನ ಗಣಿ ಸಿಗುತ್ತದೆ. ಭೂಮಿಯಿಂದ ಸುಮಾರು 30 ಮೀಟರ್ ಕೆಳಗೆ ದೂರಕುವ ‘ಮುಲ್ತಾನಿ ಮಿಟ್ಟಿ’ (ಮುಲ್ತಾನ್ ಪ್ರದೇಶದ ಮಣ್ಣು ಎಂದರ್ಥ. ಇದು ಪಾಕಿಸ್ತಾನದ ಮುಲ್ತಾನ್‌ನಲ್ಲಿ ಹೇರಳವಾಗಿ ಸಿಗುತ್ತದೆಯಾದ್ದರಿಂದ ಈ ಹೆಸರು) ಎಂದೇ ಜನಪ್ರಿಯವಾಗಿರುವ ಈ ಬಿಳಿಮಣ್ಣು ಹಿಂದಿನ ಟೆತಿಸ್ ಸಮುದ್ರದಲ್ಲಿನ ಸುಣ್ಣದ ಸಂಚಯದಿAದ ಆದಂತಹುದು. ಉಪಖಂಡದ ಹೆಣ್ಣುಮಕ್ಕಳು ಇದನ್ನು ಚರ್ಮದ ಮೇಲ್ಪದರಗಳನ್ನೂ ತೆಗೆಯುವ ಶೃಂಗಾರ ಸಾಧನವಾಗಿ ಬಳಸುತ್ತಾರೆ. ಅದೇನೇ ಇರಲಿ ಇದು ಪ್ರಾಗ್ಜೀವಶಾಸ್ತçಜ್ಞರ ದೃಷ್ಟಿಯಿಂದ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಏಕೆಂದರೆ ಇದರಲ್ಲಿ ಅನೇಕ ಸಸ್ಯ-ಪ್ರಾಣಿಗಳ ಪಳೆಯುಳಿಕೆಗಳು ಚೆನ್ನಾಗಿ ರಕ್ಷಿಸಲ್ಪಟ್ಟಿವೆ. ಮುಲ್ತಾನಿ ಮಿಟ್ಟಿಯಲ್ಲಿ ಆಮ್ಲಜನಕ ತೀರಾ ಕಡಿಮೆ ಇರುವುದರಿಂದ ಅದರಲ್ಲಿ ಜೀವಂತ ವಸ್ತುಗಳ ಕೊಳೆಯುವುದು ತೀರಾ ನಿಧಾನ ಮತ್ತು ಅವುಗಳಲ್ಲಿ ಜೀವ ಸ್ವರೂಪಗಳು ಚೆನ್ನಾಗಿ ರಕ್ಷಿಸಲ್ಪಟ್ಟಿವೆ. ಆದ್ದರಿಂದ ತೆಂಗಿನಕಾಯಿ, ಹೂವು, ಹಣ್ಣು, ಮೀನು, ಹಾವು ಇವುಗಳ ಪಳೆಯುಳಿಕೆಗಳು ಅಲ್ಲಿ ದೊರಕಿದ್ದು, ಟೆತಿಸ್ ಸಮುದ್ರ ಮುಳುಗುವಾಗ ಅಲ್ಲಿದ್ದ ಸಸ್ಯ-ಪ್ರಾಣಿಗಳು ಹೇಗಿದ್ದವು ಎಂಬ ಬಗ್ಗೆ ಅವು ನಮಗೊಂದು ಚಿತ್ರಣವನ್ನು ಕಟ್ಟಿಕೊಡುತ್ತವೆ. ಅಲ್ಲೊಂದು ಸೀತಾಫಲದ ಪಳೆಯುಳಿಕೆ ಕೂಡಾ ಸಿಕ್ಕಿದೆ. ಸುಮಾರು ಹದಿನಾರನೆಯ ಶತಮಾನದಲ್ಲಿ ದಕ್ಷಿಣ ಅಮೆರಿಕಾದಿಂದ ಸೀತಾಫಲವು ನಮ್ಮ ಉಪಖಂಡಕ್ಕೆ ಮೊದಲು ಬಂತೆಂದು ಇದುವರೆಗೂ ನಂಬಲಾಗಿತ್ತು. ಆದರೆ ಈ ಪುರಾವೆಯ ಪ್ರಕಾರ ಸೀತಾಫಲವು 46 ಮಿಲಿಯನ್ ವರ್ಷದ ಹಿಂದೆಯೇ ಇಲ್ಲಿ ಅಸ್ತಿತ್ವದಲ್ಲಿದ್ದು ಮುಂದೆಂದೋ ಹವಾಮಾನ ವೈಪರೀತ್ಯದಿಂದ ಕಾಣೆಯಾಗಿರಬೇಕು.

 

ನೆಗೆದು ನಿಂತನಗಾಧಿರಾಜ

ಭಾರತವು, ಯುರೇಶಿಯಾವನ್ನು ಒತ್ತಿಕೊಳ್ಳುವ ಪ್ರಕ್ರಿಯೆ ಒಂದು ಹಂತಕ್ಕೆ ಮುಗಿದಿದ್ದರೂ, ಸಾಗರ ತಳದ ನೆಲವು ವಿಸ್ತರಿಸಿ ಮುಂದೊತ್ತುವುದು ನಡೆದೇ ಇತ್ತು. ಭಾರತ ಭೂಭಾಗದ ತಳಭಾಗವು ಯುರೇಶಿಯಾದ ಬುಡದಲ್ಲಿ ಕೆಳಕ್ಕೆ ಕೆಳಕ್ಕೆ ಸರಿಯುತ್ತಾ ಸುಡುವ ದ್ರವರೂಪದ ಶಿಲಾಪಾಕಕ್ಕೆ  ಎದುರಾಯಿತು. ಈಗಾಗಲೇ 300 ಮಿಟರ್ ಎತ್ತರಕ್ಕೆ ರಚಿತವಾಗಿದ್ದ ಟಿಬೆಟ್‌ನ ಪ್ರಸ್ಥಭೂಮಿಗೂ ಈ ಆಘಾತವನ್ನು ತಡೆದುಕೊಳ್ಳುವುದು ಸಾಧ್ಯವಾಗಲಿಲ್ಲ. ಅಲ್ಲಿನ ಕಲ್ಲುಬಂಡೆಗಳೆಲ್ಲಾ ಮುರಿದು ಭಾರತದ ಅಂಚಿನಲ್ಲಿ ಮಡಿಸಿಕೊಳ್ಳಲಾರಂಭಿಸಿದವು. ಹೀಗೆ ವಾಸ್ತವದಲ್ಲಿ ಎರಡೂ ಕಡೆಗಳಲ್ಲಿ ಸೃಷ್ಟಿಯಾಗುತ್ತಾ ಹೋದ ಬೆಟ್ಟದ ಸಾಲುಗಳ ನಡುವೆ ಮೇ¯ಕ್ಕೆ ಚಿಮ್ಮಿದ ಬಂಡೆಗಳೇ ಜಗತ್ತಿನ ಅತಿದೊಡ್ಡ ಪರ್ವತಶ್ರೇಣಿ, ಪರ್ವತಗಳ ರಾಜ(ನಗಾಧಿರಾಜ) ಅದ್ಭುತ ಹಿಮಾಲಯ ಆದದ್ದು.

ಇಂಡಿಯ ಹಿಮಾಲಯ ಒಂದೇ ಬಾರಿಗೆ ಸೃಷ್ಟಿಯಾಗಲಿಲ್ಲ ಎಂಬುದನ್ನು ನಾವು ಗ್ರಹಿಸಬೇಕು. ಮೂರು ಪ್ರಮುಖ ಉತ್ಕ್ರಾಂತಿಗಳ ಮೂಲಕ ಹಿಮಾಲಯದ ನಿರ್ಮಾಣವಾಯಿತು. ಮೊದಲ ಪರ್ವತ ನಿರ್ಮಾಣವಾದದ್ದು ಸುಮಾರು 41-32 ಮಿಲಿಯನ್ ವರ್ಷಗಳ ಹಿಂದೆ. ಎರಡನೆಯದು 13-9 ಮಿಲಿಯನ್ ವರ್ಷಗಳ ಹಿಂದೆ ಮತ್ತು ಕಡೆಯದು, ನಾಲ್ಕು ಮಿಲಿಯನ್ ವರ್ಷಗಳ ಹಿಂದೆ ಆರಂಭವಾಗಿ, ಮೂರು ಲಕ್ಷ ವರ್ಷಗಳ ಹಿಂದಿನವರೆಗೂ ಮುಂದುವರೆಯಿತು. ಈ ಮೂರು ಉತ್ಕ್ರಾಂತಿಗಳು ಇಂದು ಲಭ್ಯವಿರುವ ಹಿಮಾಲಯಕ್ಕೆ ಆಕಾರ ನೀಡಿದ್ದಲ್ಲದೆ ಅನೇಕಾನೇಕ ಹವಾಮಾನ ಮಾರ್ಪಾಟಿನ ಭೌತಿಕ ಪರಿಸರದ ಬದಲಾವಣೆಯಲ್ಲಿ ಮತ್ತು ಸಸ್ತನಿಗಳ ಬದುಕಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದವು.

ಪಲ್ಲಟದ ಪದರಗಳು

ಹಿಮಾಲಯದ ಯಾವುದಾದರೂ ಉತ್ತಮವಾದ ಭೌತಿಕ ಭೂಪಟವನ್ನು ನೋಡಿದರೆ ಅಥವಾ ಗೂಗಲ್ ಮಾಡಿದರೆ ನಿಮಗೆ ಹಿಮಾಲಯದಲ್ಲಿ ಮೂರು ಸ್ಪಷ್ಟವಾಗಿ ಭಿನ್ನವಾಗಿರುವ ಶ್ರೇಣಿಗಳು ಕಾಣುತ್ತವೆ. ಒಂದು 4300 ಮೀಟರ್ ಎತ್ತರವಾದ ಮಂಜು ಹಿಮಗಟ್ಟುತ್ತಿರುವ ಕಡುಕಂದು ಬಣ್ಣದ ಶ್ರೇಣಿ. ಇದು ಉತ್ತರದ ಅಂಚು. ಇದನ್ನು ಹಿಮಾಲಯಕ್ಕೆ ಸೇರಿಸುವುದಿಲ್ಲ. ಇದರ ದಕ್ಷಿಣದಲ್ಲಿ ನಿರಂತರವಾದ ಬೂದಿಮಿಶ್ರಿತ ನೀಲಿಯಾದ ಸದಾಕಾಲವೂ ಹಿಮಾಚ್ಛಾದಿತವಾದ ಪರ್ವತಗಳ ಶ್ರೇಣಿ ಕಾಣುತ್ತದೆ. ಇದರೊಳಗೆ ಹೆಚ್ಚು ಉತ್ತರಕ್ಕಿರುವುದು, 5000 ಮೀಟರ್‌ಗೂ ಎತ್ತರ ಇರುವ ಉನ್ನತ ಶಿಖರಗಳನ್ನು ಹೊಂದಿದ್ದು ಇದನ್ನು ಗ್ರೇಟರ್ (ಮಹಾನ್) ಹಿಮಾಲಯ ಎನ್ನುತ್ತಾರೆ. ಇದರ ಅಗಲ ಇನ್ನೂರು ಕಿಲೋಮೀಟರ್ ಮತ್ತು ಅದಕ್ಕಿಂತ ಇನ್ನಷ್ಟು ಹೆಚ್ಚು. ಇದಾದ ನಂತರ ಮಧ್ಯದ ಹಿಮಾಲಯಗಳು. ಇದರ ಅಗಲ 90 ಕಿ.ಮೀಗಳು ಮತ್ತು ಇದರಲ್ಲಿ 3600-4600 ಮೀಟರ್ ಎತ್ತರದ ಶ್ರೇಣಿಗಳಿವೆ. ಇದರಲ್ಲಿ ಚಳಿಗಾಲದಲ್ಲಿ ಮಾತ್ರ ಹಿಮವು ಗಡ್ಡೆ ಕಟ್ಟುತ್ತದೆ. ಇದರ ನಂತರ 900-2800 ಮೀಟರ್ ಎತ್ತರದ ಪರ್ವತಗಳಿದ್ದು ಇದನ್ನು ಕೆಳಗಿನ ಅಥವಾ ಹೊರಗಿನ ಹಿಮಾಲಯ ಎನ್ನುತ್ತಾರೆ. 10 ರಿಂದ 45 ಕಿ.ಮೀ ಅಗಲವಿರುವ ಇದು ತೀರಾ ಈಚಿನದ್ದು, ಎಂದರೆ 70 ಲಕ್ಷದಿಂದ ಹಿಡಿದು 3 ಲಕ್ಷ ವರ್ಷಗಳ ಹಿಂದೆ ರಚಿತವಾದದ್ದು.

ಹಿಮಾಲಯವು ಕೆಳಗಿನಿಂದ ಮೇಲಕ್ಕೆ ಎದ್ದು ಬಂದಂತಹುದು. ಭಾರಿ ಭೂ ಫಲಕಗಳು ಒಂದಕ್ಕೊಂದು ಉಜ್ಜತ್ತಾ, ಬಂಡೆಗಳು ನುಚ್ಚು ನೂರಾಗುತ್ತಾ, ಭೂಮಿಯೇ ಮಡಿಸಿಕೊಳ್ಳುತ್ತಾ, ವಿಪರೀತ ಶಾಖ ಮತ್ತು ಶಿಲಾಪಾಕ ಉತ್ಪಾದನೆಯಾಗಿ ಹೊರಸೂಸುತ್ತಾ ಆದ ಪ್ರಘಟನೆ ಇದು. ಈ ಗತಿಯಲ್ಲಿ ಬೆಣಚುಕಲ್ಲು (ಗ್ರಾನೈಟ್) ಕರಗಿ ಮೇಲುಕ್ಕಿ ಬಂತು. ಮೇಲಿನ ಪದರದ ಬೆಣಚುಕಲ್ಲು ತಣ್ಣಗಾದಂತೆ ಕೆಳಗಿನಿಂದ ಹೊಸ ಹೊಸ ಪದರಗಳು ಮೇಲಕ್ಕೆ ಉಕ್ಕಿಬಂದು ಗ್ರಾನೈಟ್ ಬಂಡೆಗಳು ಮೇಲಕ್ಕೆದ್ದವು. ಕ್ರಮೇಣ ಒಂದು ಪರ್ವತ ಪೀಠವೇ ಸೃಷ್ಟಿಯಾಯಿತು. ಗ್ರಾನೈಟ್ ಬೇಯುತ್ತಾ ಹೋದ ಪ್ರಕ್ರಿಯೆ ವಿಭಿನ್ನವಾಗಿದ್ದು ವಿವಿಧ ಸಾಂದ್ರತೆಯ ಕಲ್ಲುಗಳು ಸೃಷ್ಟಿಯಾದವು. ಅನೇಕ ಕಡೆ ಭೂಮಿಯ ಹೊರ ಪದರ ಸೀಳಿಕೊಂಡು ಬಾಯಿಬಿಟ್ಟು ಈ ಪ್ರಕ್ರಿಯೆ ತೀರಾ ನಿಧಾನಗತಿಯಲ್ಲಾದರೂ ಇಂದಿಗೂ ಮುಂದುವರೆದಿದೆ.

ರಚನೆಯನ್ನು ಅರಿಯುವ ಬಗೆ

ಹಿಮಾಲಯದ ನಿರ್ಮಾಣ ಘಟ್ಟಗಳನ್ನು ಕಂಡುಕೊಳ್ಳುವ ಎರಡು ಮಾರ್ಗಗಳಿವೆ. ಮೊದಲನೆಯ ಮಾರ್ಗವೆಂದರೆ ಅಡಿಯಿಂದ ಮುಡಿಯವರೆಗೂ ಪರ್ವತವನ್ನು ನೋಡಲು ಸಾಧ್ಯವಾಗುವಂತಹ ವೀಕ್ಷಣಾ ಬಿಂದುವೊAದಕ್ಕೆ ತಲುಪುವುದು. ಸಿಕ್ಕಿಂನ ಪಶ್ಚಿಮ ಭಾಗದಲ್ಲಿರುವ ಪೆಲ್ಲಿಂಗ್‌ನಿAದ ಕಾಂಚನಗಂಗಾದ ಪೂರ್ವ ಭಾಗವನ್ನು ನೋಡುವುದು ಒಂದು ಸುಲಭವಾದ ಪರ್ಯಾಯ. ಏಕೆಂದರೆ ಅದು ತಲುಪಲಿಕ್ಕೆ ಸುಲಭವಾದ ಸ್ಥಳ. ಒಂದು ಶುಭ್ರವಾದ ಆಗಸ ಇರುವ ದಿನ ನೀವು ಈ ಅಮೋಘ ಪರ್ವತ ದೃಶ್ಯವನ್ನು ಕಣ್ಣಿನಲ್ಲಿ ತುಂಬಿಕೊಂಡು ಆದ ಮೇಲೆ, ಪರ್ವತವು ಮೂರು ಪದರಗಳ ಕೇಕ್‌ನಂತೆ ಕಾಣುವುದನ್ನು ಗಮನಿಸುತ್ತೀರಿ.

ಮೊದಲಿಗೆ ಬುಡದಿಂದ ಒಂದು ಅಗಲವಾದ ಬೂದು ಬಣ್ಣದ ಪದರವಿದ್ದು, ಬೆಣಚು ಕಲ್ಲಿನ ಅದರ ಎತ್ತರ 6700 ಮೀಟರ್‌ಗಳು, ನಂತರ 1220 ಮೀಟರ್ ಎತ್ತರದ ಸುಣ್ಣದ ಕಲ್ಲು ಹಾಗೂ ಅಮೃತಶಿಲೆಯಿಂದಾದ ತಿಳಿಹಳದಿ ಬಣ್ಣದ ಪದರವಿದೆ. ಇದು ಟೆತಿಸ್ ಸಮುದ್ರದಲ್ಲಿ 250 ಮಿಲಿಯನ್ ವರ್ಷದ ಹಿಂದೆ ರಚಿತವಾದ ಸುಣ್ಣದ ಕಲ್ಲಾಗಿದ್ದು ಪರ್ವತ ರಚನೆಯ ಸಮಯದಲ್ಲಿ ಮೇಲಕ್ಕೆ ಎತ್ತಲ್ಪಟ್ಟಿದೆ. ಕುದಿಯುತ್ತಿದ್ದ ಗ್ರಾನೈಟ್, ಸುಣ್ಣದ ಕಲ್ಲನ್ನು ಅಮೃತಶಿಲೆಯಾಗಿ ಪರಿವರ್ತಿಸಿದೆ. ಮೇಲ್‌ತುದಿಯಲ್ಲಿ ಕಪ್ಪು ಬೂದು ಬಣ್ಣದ ಸುಣ್ಣದ ಕಲ್ಲು ಸುಮಾರು 400 ಮೀಟರ್ ಎತ್ತರವಿದೆ. ಇದೇ ಕಾಂಚನಗಂಗಾದ ಶಿಖರ. ಇಲ್ಲಿ ಸಮುದ್ರದ ಸುಣ್ಣದ ಕಲ್ಲು ಹೆಚ್ಚಾಗಿದ್ದು, ಅದರೊಳಗೆ ಮೃದು ಶರೀರದ ಮತ್ತು ಚಿಪ್ಪಿನೊಳಗಿರುವ ಜೀವಿಗಳ ಪಳೆಯುಳಿಕೆಗಳು ಹೇರಳವಾಗಿವೆ.

ಹೀಗೆ ಮೇಲೆ ಹತ್ತಿ ಹೋಗುವುದನ್ನು ಬಿಟ್ಟು ಹಿಮಾಲಯದ ರಚನೆ ಹೇಗಿದೆ ಎಂಬುದನ್ನು ಅರಿಯಲು ಇನ್ನೊಂದು ಸರಳವಾದ ವಿಧಾನವೂ ಇದೆ. ಅದಕ್ಕಾಗಿ ನೀವು ಕಾರ್ಬೆಟ್ ನ್ಯಾಷನಲ್ ಪಾರ್ಕ್ ನ ಬಳಿ ಇರುವ ರಾಮಗಂಗಾ ಅಂತಹ ಯಾವುದಾದರೂ ವೇಗವಾಗಿ ಹರಿಯುವ ನದಿಯ ಬಳಿಗೆ ಹೋಗಬೇಕು. ನದಿಯ ಪಾತ್ರದಲ್ಲಿ ನೀವು ಅನೇಕ ದುಂಡನೆಯ ಕಲ್ಲುಗಳನ್ನು ಕಾಣುತ್ತೀರಿ. ಇವೆಲ್ಲಾ ಹಿಮಾಲಯದಲ್ಲಿ ಒಡೆದ ಬಂಡೆಗಲ್ಲುಗಳಾಗಿದ್ದು ನದಿಯ ನೀರಿನಲ್ಲಿ ಉರುಳಿಕೊಂಡು ಬರುತ್ತಾ ಬೇರೆ ಕಲ್ಲುಗಳೊಂದಿಗೆ ಉಜ್ಜಿಕೊಂಡು ದುಂಡಗೆ ನುಣುಪಾಗಿ ಗುಂಡುಕಲ್ಲುಗಳಾಗಿವೆ. ಕೆಲವು ದೊಡ್ಡ ಬಂಡೆಯ ಚೂರುಗಳೂ ಅಲ್ಲಿ ಬಿದ್ದಿರುತ್ತವೆ. ನೀವು ಅದರ ಬಳಿ ಹೋಗಿ ನೋಡಿದರೆ ಅದರಲ್ಲಿ ಹೊಳೆಯುವ ಗಾಜಿನಂತಹ ಕೆಲವೊಂದು ರತ್ನದ ಕಲ್ಲುಗಳು ಹುದುಗಿರುವುದು ಕಾಣುತ್ತದೆ. ಅದರಲ್ಲಿ ನೀಲಿ ಅಥವಾ ಕೆಂಬಣ್ಣದ ಗಾಜಿನಂಥ ಪದಾರ್ಥವಿದ್ದರೆ ಅದು ಕ್ಯಾನೈಟ್ ಮತ್ತು ಹಸಿರಾಗಿದ್ದರೆ ಅದು ಗಾರ್ನೆಟ್. ಇವು ಭೂಮಿಯಲ್ಲಿ 40 ಕಿ.ಮೀ ಕೆಳಗೆ ಒತ್ತಡದಲ್ಲಿ ಬೆಂದಿರುವಂಥವು. ಕೆಲವಡೆ ಬೂದುಬಣ್ಣದ ಕಲ್ಲಿನಲ್ಲಿ ಬಿಳಿಯ ಪಟ್ಟೆಗಳಿದ್ದು, ಅವು ಗ್ರಾನೈಟ್. ಇದು ದ್ರವರೂಪದ ಮ್ಯಾಗ್ಮಾದಲ್ಲಿ ಬೆಂದು ಹೊರಹಾಕಲ್ಪಟ್ಟು ಪರ್ವತದ ಅಡಿಪಾಯವನ್ನು ನಿರ್ಮಿಸಿರುತ್ತದೆ. ಇದೇ ರೀತಿ ಬೂದು ಬಣ್ಣದ ಸುಣ್ಣದ ಕಲ್ಲಿನ ಬಂಡೆಚೂರುಗಳೂ ಸಿಗುತ್ತವೆ. ಅದರಲ್ಲೂ ರತ್ನದ ಕಲ್ಲುಗಳಿರುವುದಿಲ್ಲ. ನದಿಯಲ್ಲಿ ಸಿಗುವ ಈ ಎಲ್ಲ ಬಗೆಯ ಕಲ್ಲುಗಳೂ ಹಿಮಾಲಯದ ರಚನೆಯ ಕತೆಯನ್ನು ಹೇಳುತ್ತವೆ.

ಪ್ರಾಗ್ಜೀವಶಾಸ್ತ್ರಜ್ಞರ ಅಧ್ಯಯನ

ಪ್ರಾಗ್ಜೀವಶಾಸ್ತ್ರಜ್ಞರು ಹಿಮಾಲಯವನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುತ್ತಾರೆ. ಅವರು ಅದರಲ್ಲಿ ಜೀವದ ಆವಶೇಷಗಳನ್ನು ಹುಡುಕುತ್ತಾರೆ. ಹಿಮಾಲಯದ ಬಹುತೇಕ ಶಿಖರಗಳಲ್ಲಿ ಅರ್ಧದಷ್ಟು ಎತ್ತರದವರೆಗೂ ಗ್ರಾನೈಟ್ ಇರುತ್ತದೆ. ಚೆನ್ನಾಗಿ ಕುದ್ದು ಆಗಿರುವ ಈ ಅಗ್ನಿಶಿಲೆಯಲ್ಲಿ ಯಾವ ಜೀವದ ಕುರುಹೂ ಸಹ ಉಳಿದಿರುವುದು ಸಾಧ್ಯವಿಲ್ಲ. ಉದಾಹರಣೆಗೆ ಮೌಂಟ್ ಎವರೆಸ್ಟ್ ಅನ್ನೇ ತೆಗೆದುಕೊಳ್ಳಿ. 8848 ಮೀಟರ್ ಇರುವ ಈ ಶಿಖರದಲ್ಲಿ ಮೊದಲ 4270 ಮೀಟರ್‌ಗಳು ಬೆಣಚುಕಲ್ಲಿನ ಪೀಠವಾಗಿದ್ದು ಅಲ್ಲಿ ಯಾವ ಪ್ರಾಚೀನ ಜೀವದ ಪಳೆಯುಳಿಕೆಯೂ ಸಿಗುವುದಿಲ್ಲ. ಇದರ ಮೇಲಿನ 3100 ಮೀಟರ್‌ಗಳು ಮಣ್ಣಿನ ಕಲ್ಲು (ಮಡ್‌ಸ್ಟೋನ್). ಈ ಮಣ್ಣಿನ ಕಲ್ಲಿನ ಮೇಲೆ ತೆಳುವಾದ 366 ಮೀಟರ್ ಎತ್ತರದ ಮರಳು ಕಲ್ಲಿದೆ. ಈ ಮರಳುಗಲ್ಲಿನಲ್ಲಿರುವುದು ಆಳವಿಲ್ಲದ ಸಮುದ್ರದ ಗಟ್ಟಿಯಾದ ಕೆಸರು ಮತ್ತು  ಅದರಲ್ಲಿ ಮೃದು ಶರೀರದ ಸಮುದ್ರ ಜೀವಿಗಳ ಪಳೆಯುಳಿಕೆಗಳು. ಇದಕ್ಕೂ ಮೇಲೆ 640 ಮೀಟರ್‌ಗಳಷ್ಟು ಉದ್ದದ ಬೂದು-ಕಂದು ಮರಳುಗಲ್ಲಿದ್ದು, ಅದರಲ್ಲಿ ಸುಮಾರು 250 ಮಿಲಿಯನ್ ವರ್ಷಗಳ ಹಿಂದಿನ ಗ್ಲೊಸೊಪ್ಟೆರಿಸ್ (ಒಂದು ರೀತಿಯ ಫರ್ನ್ ಗಿಡಗಳು. ಅನೇಕ ಖಂಡಗಳು ಸೇರಿ ಆಗಿದ್ದ ಸೂಪರ್ ಕಾಂಟೆನೆಂಟ್ ಗೊಂಡ್ವಾನಾದ ದಕ್ಷಿಣ ಭಾಗದಲ್ಲಿದ್ದ ಸಸ್ಯ. ಅಲ್ಲಿಂದ ಭಾರತ ಭೂಭಾಗವು ಪ್ರತ್ಯೇಕಗೊಂಡು ಚಲಿಸಿತು ಎಂದು ಭೂಗರ್ಭಶಾಸ್ತ್ರ ಹೇಳುತ್ತದೆ. ಇದು ಭೂಖಂಡ ಸರಿತದ ವಿದ್ಯಮಾನಕ್ಕೆ ಪುರಾವೆ ನೀಡುವಂಥದ್ದು-ಅ). ಈ ಪದರದ ಮೇಲೆ 300 ಮೀ ಕಡುಬೂದು ಬಣ್ಣದ ಮರಳುಗಲ್ಲಿದ್ದು ಅದರಲ್ಲಿ ಬ್ರಾಕಿಪಾಡ್ಸ್ ಎಂಬ ಚಿಪ್ಪಿನೊಳಗೆ ಜೀವಿಸುವ ಮೃದ್ವಂಗಿಗಳ ಪಳೆಯುಳಿಕೆಗಳಿವೆ. ಇನ್ನೂ 460 ಮೀಟರ್ ಏರಿದರೆ ಅದರಲ್ಲಿ ಬಹಳಷ್ಟು ಸುಣ್ಣದ ಕಲ್ಲೊಳಗಿನ ಸಮುದ್ರದ ಸಣ್ಣಪುಟ್ಟ ಜೀವಿಗಳ ಹಾಗೂ ಅಮೊನೈಟ್ (ಈಗ ಅಸ್ತಿತ್ವದಲ್ಲಿಲ್ಲದ ಬಸವನಹುಳುವಿನ ಚಿಪ್ಪನ್ನು ಹೋಲುವ ಚಿಪ್ಪಿನ ಮೃದ್ವಂಗಿ ಜೀವಿಗಳು-ಅ) ಪಳೆಯಳಿಕೆಗಳು ಸಿಗುತ್ತವೆ. ಒಟ್ಟಿನಲ್ಲಿ ಇವೆಲ್ಲವೂ ಹೇಗೆ ಹಿಮಾಲಯವು ಸಮುದ್ರದ ಪದಾರ್ಥಗಳನ್ನೂ ಸೇರಿಸಿಕೊಂಡು ಮೇಲೆದ್ದ ಪರ್ವತ ಎಂಬುದಕ್ಕೆ ಮತ್ತು ಖಂಡಗಳ ಸರಿತದಿಂದ ಉದ್ಭವಿಸಿದ್ದುದು ಎಂಬುದಕ್ಕೆ ಅಲ್ಲಗೆಳೆಯಲಾಗದ ಸಮೃದ್ಧ ಸಾಕ್ಷಿ-ಪುರಾವೆಗಳನ್ನು ಒದಗಿಸುತ್ತವೆ.

ಈ ಪಳೆಯುಳಿಕೆಗಳನ್ನು ಹುಡುಕಲು ನಿಮಗೆ ಶಿಖರವನ್ನು ಏರಲು ಸಾಧ್ಯವಾಗದಿದ್ದರೆ, ನೀವು ಸ್ಪಿತಿ, ಲಡಾಖ್, ಗಂಡಕಿ ಮುಂತಾದ ಬಹುತೇಕ ನೇಪಾಳದಲ್ಲಿ ಹರಿಯುವ ನದಿಯ ಪಾತ್ರಗಳಲ್ಲಿ ಅವುಗಳನ್ನು ಹುಡುಕಬಹುದು. ನಿಮಗೆ ಅಮೊನೈಟ್ ಬೇಕೆಂದರೆ ನೀವು ಮುಷ್ಠಿಗಾತ್ರದ ಗುಂಡನೆಯ, ನುಣುಪಾದ ಕಲ್ಲಿಗೆ ಹುಡುಕಿ. ಕಠಮಂಡುವಿನಲ್ಲAತೂ ಇವು ಬೀದಿಬದಿಯ ಸ್ಮಾರಕವಸ್ತುಗಳ ಅಂಗಡಿಗಳಲ್ಲಿ ಅಗ್ಗವಾಗೇ ಸಿಗುತ್ತವೆ. ನೀವು ಅದನ್ನು ಒಂದು ಸುತ್ತಿಗೆಯಿಂದ ಒಡೆದರೆ ಒಳಗೆ ಅಮೊನೈಟ್ ಪಳೆಯುಳಿಕೆ ಕಾಣುತ್ತದೆ. (ಕೆಲವು ಹಿಂದೂ ಪಂಗಡಗಳು ವಿಷ್ಣುವಿನ ಚಿಹ್ನೆ ಎಂದು ಪೂಜಿಸುವ ಸಾಲಿಗ್ರಾಮದ ಕಲ್ಲುಗಳು ಎಂದರೆ ಇವೇನೆ-ಅ). ಜಗತ್ತಿನ ಮೇಲೆ ಅನೇಕ ಬಾರಿ ಎಲ್ಲಾ ಜೀವಿಗಳೂ ಸಾಯುವಂಥ ಉತ್ಪಾತಗಳು ನಡೆದಿವೆ. ಆದರೆ ಅವುಗಳಲ್ಲೆಲ್ಲಾ ಬದುಕುಳಿದದ್ದು ಅಮೊನೈಟ್‌ಗಳು. ಇಂಥ ಪ್ರಳಯ ಸಹಿಷ್ಣುವಾದ ಅಮೊನೈಟ್, ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ ಡೈನೊಸಾರ್‌ಗಳೊಂದಿಗೆ ನಾಶವಾದದ್ದು ಏಕೆ ಎಂಬುದು ಮಾತ್ರ ಪ್ರಾಗ್ಜೀವ ವಿಜ್ಞಾನಿಗಳನ್ನು ಕಾಡುತ್ತಿರುವ ವಿಷಯ !

ಹಿಮಾಲಯದ ಆಚಿನ ಪರಿಣಾಮಗಳು

ವಿಶಾಲ ಭಾರತದ ಖಂಡ ಫಲಕ ಮತ್ತು ಯುರೇಶಿಯಾ ಡಿಕ್ಕಿ ಹೊಡೆದಾಗ ಆದ ಪರಿಣಾಮಗಳು ಕೇವಲ ಹಿಮಾಲಯಕ್ಕೆ ಸೀಮಿತವಲ್ಲ. ಕಾಶ್ಮೀರದ ವಾಯುವ್ಯಕ್ಕೆ ಪಾಮಿರ್ ನಾಟ್ ಎಂಬ ಸ್ಥಳವಿದೆ. ಪರ್ಶಿಯನ್ ಭಾಷೆಯಲ್ಲಿ ಪಾಮಿರ್ ಎಂದರೆ ಮಹಾತ್ಮನ ಕಾಲು ಎಂದರ್ಥ. ನಾಟ್ ಎಂದರೆ (knot) ಗಂಟು ಎಂದರ್ಥ. ಕಾಲಿನಿಂದ ಬೆರಳುಗಳು ಹೊರಟ ಹಾಗೆ ಈ ಕೇಂದ್ರ ಸ್ಥಳದಿಂದ ಏಳು ಪರ್ವತ ಶ್ರೇಣಿಗಳು – ಹಿಮಾಲಯ, ಹಿಂದುಕುಶ್, ಹಿಂದುರಾಜ್, ಕಾರಾಕೊರಮ್, ಕುನ್‌ಲುನ್ ಮುಂತಾದವು – ಹೊರಟಂತೆ ಭಾಸವಾಗುತ್ತದೆ. ಅಂತರಿಕ್ಷದಿAದ ನೋಡಿದರೆ ಎಂಟು ಹೆಡೆಯ ಹೈಡ್ರಾ ಪ್ರಾಣಿಯಂತೆ ಇದು ಕಾಣುತ್ತದೆ.

ಪಾಮಿರ್‌ನಾಟ್‌ನಿಂದ 200 ಕಿ.ಮೀ ದಕ್ಷಿಣದಲ್ಲಿ ಇರಾನ್‌ನಲ್ಲಿ ಜಾ಼ಗ್ರೋನ್ ಎಂಬ ಪರ್ವತಗಳ ಅಲೆ ಸೃಷ್ಟಿಯಾಗಿದೆ. ದೂರ ಪ್ರಾಚ್ಯದಲ್ಲಿ ಹಿಮಾಲಯ ಕ್ಷೀಣವಾಗುತ್ತಾ ಹೋಗುತ್ತದೆ. ಅಲ್ಲಿ ಖಂಡ ಫಲಕಗಳು ಇಂದಿನ ಆಗ್ನೇಯ ಏಷ್ಯಾದ ಮೆಕಾಂಗ್ ಪ್ರದೇಶದ ಕೆಳಗೆ ವಿಪರೀತ ಆಳದಲ್ಲಿ ಡಿಕ್ಕಿ ಹೊಡೆದವು. ಇದರಿಂದ ಅರಾಕಾನ್, ಪೆಗು ಯೊಮ ಎಂಬ ಹಿಮಾಲಯಕ್ಕೆ ಸಮಾನಾಂತರವಾದ ಪರ್ವತಗಳ ಶ್ರೇಣಿಗಳು ಸೃಷ್ಟಿಯಾದವು. ಅಲ್ಲಿಂದ ಸಲ್ಪೀನ್, ಮೆಕಾಂಗ್ ಮತ್ತು ಇರಾವತಿಯಂಥ ಬಹಳ ಮುಖ್ಯವಾದ ನದಿಗಳು ಹೊರಟು ಹಿಂದೂ ಮಹಾಸಾಗರವನ್ನು ತಲುಪುತ್ತವೆ.

ಭೂ ಪಟದಲ್ಲಿ ನೀವು ಇಡಿಯ ಸಿಂಧೂನದಿಯ ಮೇಲೆ ಬೆರಳಿಟ್ಟು ಸರಿಸುತ್ತಾ ಕೈಲಾಸ ಶಿಖರಕ್ಕೆ ತಲುಪಿ, ಅಲ್ಲಿಂದ ಸಾಂಗ್‌ಪೊ ನದಿಯಗುಂಟ ಮುಂದುವರೆದು ಸಾಲ್ಪೀನ್ ಮತ್ತು ಇರಾವತಿ ನದಿಗಳ ನಡುವೆ ಕೆಂಪು ನದಿಯನ್ನು ಮುಟ್ಟಿದರೆ ಅದೇ ವಿಶಾಲ ಭಾರತದ ನಕಾಶೆ. ಖಂಡಗಳು ಡಿಕ್ಕಿ ಹೊಡೆದಾಗ ಈ ಸೀಮಾರೇಖೆಯ ಆಚೆಗಿನ ಎಲ್ಲ ಭಾರತ ಫಲಕದ ನೆಲವೂ ಟಿಬೆಟಿನ ಕೆಳಗೆ ಹೋಗಿದೆ. ಕೆಲವು ಭೂಗರ್ಭ ಶಾಸ್ತಜ್ಞರ ಪ್ರಕಾರ ಭಾರತ ಫಲಕದ ಶೇಕಡಾ 40ರಷ್ಟು ಭೂಭಾಗವು ಹೀಗೆ ಕೆಳಗೆ ಸಿಕ್ಕಿಕೊಂಡಿತು.

ನದಿಗಳ ತಂದೆ ಹಿಮಾಲಯ

ಹಿಮಾಲಯದ ಕತೆಯಿಂದ ನದಿಗಳನ್ನು ಬೇರ್ಪಡಿಸಲಾಗದು. ಹಿಮಾಲಯ ಮೇಲಕ್ಕೆ ಏರುವ ಹೊತ್ತಿಗೆ ಸಿಂಧೂ ಮತ್ತು ಬ್ರಹ್ಮಪುತ್ರಗಳು ಸೃಷ್ಟಿಯಾಗಿಬಿಟ್ಟಿದ್ದವು. ದೈತ್ಯ ಖಂಡ ಸರಿತದ ಶಕ್ತಿಗಳು ಹಿಮಾಲಯದ ಎತ್ತರವನ್ನು ಗುರುತಿಸಿರಬಹುದು. ಆದರೆ ಈ ಮಹಾ ಪರ್ವತದ ಸೀಮೆಯನ್ನು ಗುರುತಿಸುವುದು ನದಿಗಳೇ. ಮೇಲಿನಿಂದ ಇಳಿದು ಬರುವ ನೀರಿನಿಂದ ಹಿಮಾಲಯದ ಮೇಲೆ ಏನೂ ಪರಿಣಾಮವಾಗದು ಎಂದು ಮೇಲ್ನೋಟಕ್ಕೆ ಅನ್ನಿಸಬಹುದು. ಆದರೆ ದೀರ್ಘಕಾಲ ನಿರಂತರವಾಗಿ ಹರಿಯುತ್ತಿರುವ ನದಿಗಳಿಗೆ ಅಪಾರ ಶಕ್ತಿಯಿದ್ದು ಅವು ಪರ್ವತದ ಮೇಲೆ ಪರಿಣಾಮ ಉಂಟು ಮಾಡಿವೆ. ಟೆತಿಸ್ ಸಾಗರವು ಮುಚ್ಚುತ್ತಾ ಹೋದಂತೆ ಅನೇಕ ಸರೋವರಗಳನ್ನೂ, ನದಿಗಳನ್ನು ಸೃಷ್ಟಿಸಿತು. ಅದರಲ್ಲಿ ಟೆತಿಸ್‌ನ ನೀರು ನುಗ್ಗಿತ್ತು. ಟಿಬೆಟ್ ಪ್ರಸ್ಥಭೂಮಿ ಮೇಲಕ್ಕೆ ಎದ್ದಂತೆ ಹಳೆಯ ನದಿಗಳು ದಕ್ಷಿಣಕ್ಕೆ ಮತ್ತು ಆಗ್ನೇಯ ದಿಕ್ಕಿಗೆ ಹರಿಯಲಾರಂಭಿಸಿದವು. ಪರ್ವತ ಮೇಲೆದ್ದು ನದಿಗಳಿಗೆ ಬಂಡೆಗಳು ಅಡ್ಡಬಂದರೂ, ನದಿಗಳು ಅವುಗಳನ್ನೇ ಕೊರೆದು ಮುಂದೆ ಸಾಗಿದವು. ಪರ್ವತಗಳು ಸಿಂಧೂ, ಬ್ರಹ್ಮಪುತ್ರದ ಸುತ್ತಲೇ ಬೆಳೆಯುತ್ತಾ ಹೋದವು. ಅನೇಕ ಕಡೆ ಈ ಕಣಿವೆಗಳು 4570 ಮೀಟರ್‌ಗಳಷ್ಟು ಆಳವಾಗಿವೆ.

ಸಿಂಧೂ, ಗಂಗಾ, ಬ್ರಹ್ಮಪುತ್ರ ನದಿಗಳು

ಹಿಮಾಲಯದ ನದಿಗಳಲ್ಲೆಲ್ಲಾ ಅತ್ಯಂತ ಪುರಾತನವಾದದ್ದು ಸಿಂಧೂ. ಟೆತಿಸ್ ಸಮುದ್ರವು ಮುಚ್ಚಿಹೋದ ಮೇಲೆ ಅದರ ಮೃದುವಾದ ಸಮುದ್ರ ಕೆಸರಿನ ಮೇಲೆ ನದಿಯ ಪಾತ್ರವು ಕೊರೆಯಲ್ಪಟ್ಟಿತು. ಸಿಂಧೂ ನದಿಯು ಹರಿಯಲು ಪ್ರಾರಂಭವಾದ ಐದರಿಂದ ಏಳು ಮಿಲಿಯನ್ ವರ್ಷಗಳ ನಂತರ, ಬ್ರಹ್ಮಪುತ್ರ ನದಿಯು ಪೂರ್ವಕ್ಕೆ ಹರಿಯಲಾರಂಭಿಸಿತು. ಹಿಮಾಲಯದಲ್ಲೇ ಅತ್ಯಂತ ಹಳೆಯದಾದ ಕೈಲಾಸ ಪರ್ವತದ ಬಳಿ ತೀರಾ ಹತ್ತಿರದಲ್ಲೇ ಈ ನದಿಗಳ ಉಗಮ ಸ್ಥಾನಗಳಾದ ಎರಡು ಬುಗ್ಗೆಗಳು ಪ್ರತ್ಯೇಕವಾಗಿವೆ. ಕಳೆದ ಹದಿನೆಂಟು ಮಿಲಿಯನ್ ವರ್ಷಗಳಿಂದಲೂ ಸಿಂಧೂ ನದಿಯು ತನ್ನ ಪಾತ್ರಕ್ಕೆ ನಿಷ್ಠವಾಗಿದೆ. ಕೊಂಚವೂ ಹಾದಿಯನ್ನು ಬದಲಿಸಿಲ್ಲ. ಕೈಲಾಸದಿಂದ ಹೊರಟ ಸಿಂಧೂ, ಪಶ್ಚಿಮಾಭಿಮುಖವಾಗಿ ಹರಿಯುತ್ತಾ, ಅಗ್ನಿಪರ್ವತ ನಿರ್ಮಿತ ಪ್ರದೇಶದಲ್ಲಿ ಹಾದು ಮನೋಹರವಾದ ಕಾರಾಕೊರಮ್ ಶ್ರೇಣಿಗಳನ್ನು ದಾಟಿ ಪಶ್ಚಿಮ ಪಂಜಾಬಿನ ಇಳಿಜಾರುಗಳಲ್ಲಿ ನಡೆಯುತ್ತದೆ. ಅಲ್ಲಿಂದ ದಕ್ಷಿಣಾಭಿಮುಖವಾಗಿ ಸಾಗಿ ಅರಬ್ಬಿ ಸಮುದ್ರಕ್ಕೆ ಸೇರುತ್ತದೆ. ಹುಟ್ಟುವಾಗ ಕೆಲವೇ ನೂರು ಕಿ.ಮೀ ದೂರದಲ್ಲಿ ಶುರುವಾಗುವ ಸಿಂಧೂ ಮತ್ತು ಬ್ರಹ್ಮಪುತ್ರ ನದಿಗಳು ವಿರುದ್ಧ ದಿಕ್ಕಿನಲ್ಲಿ ಹರಿಯುತ್ತವೆ. ಎರಡರ ಉದ್ದವೂ ಸುಮಾರು 2900 ಕಿಲೋಮೀಟರ್‌ಗಳೇ. ಪೂರ್ವಕ್ಕೆ ಮತ್ತು ಪಶ್ಚಿಮಕ್ಕೆ 1000 ಕಿಲೋಮೀಟರ್ ಹರಿದು ಹಿಮಾಲಯವನ್ನು ಬಳಸಿ ನಂತರ ದಕ್ಷಿಣಾಭಿಮುಖವಾಗಿ ತಿರುಗಿ ಹಿಂದು ಮಹಾಸಾಗರಕ್ಕೆ ಬೀಳುತ್ತವೆ.

ಸುಮಾರು 13 ರಿಂದ 9 ಮಿಲಿಯನ್ ವರ್ಷಗಳ ಹಿಂದೆ ಎರಡನೆಯ ಭೌಗೋಳಿಕ ಉತ್ಕಾçಂತಿ ನಡೆದಾಗ ಟಿಬೆಟ್‌ನ ಪ್ರಸ್ಥಭೂಮಿ ಇನ್ನಷ್ಟು ಮೇಲಕ್ಕೆದ್ದಿತು. ಇದರಿಂದಾಗಿ ಸಿಂಧೂ ನದಿಗೆ ಸೇರುತ್ತಿದ್ದ ಅನೇಕ ನದಿ-ತೊರೆಗಳಿಗೆ ಅಡ್ಡಿಯುಂಟಾಯಿತು. ಆ ಸಮಯಕ್ಕೆ ಮಾನ್‌ಸೂನ್‌ಗಳು ಸಹ ತೀವ್ರವಾದವು. ಇದರಿಂದಾಗಿ ನದಿಯಲ್ಲಿನ ನೀರಿನ ಗಾತ್ರ ವಿಪರೀತ ಹೆಚ್ಚಾಯಿತು. ಈ ಪ್ರವಾಹವು ಬಂಡೆಗಲ್ಲುಗಳನ್ನು ಕೊರೆದುಕೊಂಡು ಮುನ್ನುಗ್ಗಿತು. ಇವು ಸಿಂಧೂ ನದಿಯ ಉಪನದಿಗಳಾದವು. ಅತ್ಯಂತ ದೊಡ್ಡ ಉಪನದಿಯಾದ ಸತ್ಲೆಜ್, ರಾವಿ, ಚೀನಾಬ್, ಝೀಲಮ್, ಬಿಯಾಸ್ ಇವೇ ಆ ಉಪನದಿಗಳು. ಈ ಐದೂ ನದಿಗಳು ಪಂಜಾಬ್‌ನಲ್ಲಿ ಹರಿಯತ್ತಾ ಅಲ್ಲಿ ಫಲವತ್ತಾದ ಮೆಕ್ಕಲು ಮಣ್ಣನ್ನು ಹರಡಿ ಪಾಕಿಸ್ತಾನದಲ್ಲಿ ಸಿಂಧೂ ನದಿಯಲ್ಲಿ ಮಿಲನವಾಗುತ್ತವೆ.

ಒಂದು ಕಾಲದವರೆಗೂ ಯಮುನಾ, ಸಿಂಧೂ ನದಿಯ ಉಪನದಿಯಾಗಿತ್ತು. ಹೊಸ ಬದಲಾವಣೆಗಳ ನಂತರ ಅದು ಪೂರ್ವಕ್ಕೆ ತಿರುಗಿದಾಗ, ಗಂಗೆ ಇವಳನ್ನು ಸೆಳೆದುಕೊಂಡುಬಿಟ್ಟಳು. ಗಂಗಾನದಿಯ ಮುಖ್ಯ ಮೂಲವಾದ ಭಾಗೀರಥಿಯಿಂದ ಕೇವಲ 150 ಕಿಲೋಮೀಟರ್ ದೂರದಲ್ಲಿ ಉಗಮಿಸುವ ಯಮುನಾ ನದಿಯು ಗಂಗೆಗೆ ಸಮಾನಾಂತರವಾಗಿ ದಕ್ಷಿಣಾಭಿಮುಖವಾಗಿ ಹರಿಯುತ್ತಾ ಕಡೆಗೆ ಪವಿತ್ರ ಯಾತ್ರಾಸ್ಥಳವಾದ ಅಲಹಾಬಾದ್‌ನಲ್ಲಿ ಗಂಗೆಯನ್ನು ಸೇರುತ್ತದೆ. ಯಮುನಾ ನದಿಯು ಗಂಗೆಯ ಅತ್ಯಂತ ಉದ್ದವಾದ ಮತ್ತು ಪ್ರಸಿದ್ಧವಾದ ಉಪನದಿ. ಆದರೆ ಅತಿಹೆಚ್ಚು ನೀರನ್ನು ಒದಗಿಸುವ ದೊಡ್ಡನದಿ ಎಂಬ ಹೆಗ್ಗಳಿಕೆ ಮಾತ್ರ ಘಾಘ್ರಾ ನದಿಗೆ ಸೇರಿದು. ಅದು ಕರಗಿದ ಮಂಜುಗಡ್ಡೆಯನ್ನೂ, ದೊಡ್ಡ ಬಂಡೆಗಲ್ಲುಗಳನ್ನೂ ಹೊತ್ತು ತರುತ್ತಾ ಪಟ್ನಾ ನಗರದ ಬಳಿ ಗಂಗೆಯನ್ನು ಸೇರುತ್ತದೆ. ಒಂದು ಕಾಲದಲ್ಲಿ ಟೆತಿಸ್ ಸಮುದ್ರಕ್ಕೆ ಹೋಗಿ ಸೇರುತ್ತಿದ್ದ ವಿಂಧ್ಯ- ಸಾತ್ಪೂರ ಪರ್ವತಗಳಲ್ಲಿ ಜನಿಸಿದ ಚಂಬಲ್, ಬೇತ್ವಾ ಮತ್ತು ಸೊನೆ ನದಿಗಳು ನಂತರ ಗಂಗಾ ನದಿಗೆ ಬಂದು ಸೇರಿ ಅದನ್ನು ಉಪಖಂಡದ ಅತಿದೊಡ್ಡ ನದಿಯಾಗಿ ರೂಪಿಸಿದವು. ಅನೇಕ ನದಿಗಳು ಸೇರಿ ಗಂಗೆಯ ಸೃಷ್ಟಿಯಾದದ್ದು ಸುಮಾರು 16 ರಿಂದ 11 ಮಿಲಿಯನ್ ವರ್ಷಗಳ ಹಿಂದೆ.

ಒಂದು ಕಾಲದಲ್ಲಿ ಬ್ರಹ್ಮಪುತ್ರ ನದಿಯು ಈಗಿರುವುದಕ್ಕಿಂತ ಸುಮಾರು 350 ಕಿಲೋ ಮೀಟರ್‌ಗಳಷ್ಟು ದೂರ ಪೂರ್ವಕ್ಕೆ ಸಾಗಿ ಬರ್ಮಾದ ಇರಾವತಿ ಮೊದಲಾದ ಇಂದಿನ ಕೆಂಪು ನದಿಗಳ ಜಾಡಿನಲ್ಲೇ ಹರಿದು ಅಂಡಮಾನ್ ಸಮುದ್ರವನ್ನು ಸೇರುತ್ತಿತ್ತು. ಆದರೆ ಹದಿನೆಂಟು ಮಿಲಿಯನ್ ವರ್ಷಗಳ ಹಿಂದೆ ಇದು ತನ್ನ ಜಾಡನ್ನು ಬದಲಿಸಿತು. ನಾಮ್‌ಚೆ ಬರ್ವಾ ಎಂಬ ಭವ್ಯವಾದ ಪರ್ವತದ ಬುಡದಲ್ಲಿ ಅದು ಹೇರ್‌ಪಿನ್ ತಿರುವಿನ ಮಾದರಿಯಲ್ಲಿ ಪೂರ್ತಿ ಹಿಂದೆ ತಿರುಗಿ ಭಾರತದ ಕಡೆಗೆ ಹೊರಳಿತು. ಮುಂದೆ ಷಿಲ್ಲಾಂಗ್ ಪ್ರಸ್ಥಭೂಮಿಯು ಮೇಲಕ್ಕೆದ್ದು, ಇಂಡಿಯಾ-ಬರ್ಮಾ ಗಡಿಯಲ್ಲಿನ ಪರ್ವತಗಳು ಮಡಿಸಿಕೊಂಡಂತೆ, ಬ್ರಹ್ಮಪುತ್ರ ಇನ್ನಷ್ಟು ಪಶ್ಚಿಮದತ್ತ ತಿರುವಿಕೊಳ್ಳುತ್ತಲೇ ಹೋಯಿತು. ಅರುಣಾಚಲ ಪ್ರದೇಶ, ಅಸ್ಸಾಂಗಳಲ್ಲಿ ಬ್ರಹ್ಮಪುತ್ರ ನದಿಯನ್ನು ಬುಡಕಟ್ಟು ಜನರು ವಿಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಅಸ್ಸಾಂನ ಬೆಟ್ಟಗಳನ್ನು ಪ್ರವೇಶಿಸಿದನಂತರ ಅದು ದಕ್ಷಿಣಾಭಿಮುಖವಾಗಿ 600 ಕಿಲೋಮೀಟರ್ ಚಲಿಸಿ ಬಾಂಗ್ಲಾ ದೇಶದಲ್ಲಿ ಗಂಗೆಯನ್ನು ಸೇರುತ್ತದೆ. ಪಶ್ಚಿಮದಲ್ಲಿ ಸಿಂಧೂನದಿ ಮತ್ತು ಪೂರ್ವದಲ್ಲಿ ಬ್ರಹ್ಮಪುತ್ರ ನದಿಗಳು ಹಿಮಾಲಯದ ಪಶ್ಚಿಮ ಹಾಗೂ ಪೂರ್ವದ ತುತ್ತತುದಿಗಳನ್ನು ಗುರುತಿಸುತ್ತವೆ.

ಪ್ರಭಾವಶಾಲಿ ಸಣ್ಣ ನದಿಗಳು

ಸಣ್ಣ ನದಿಗಳು, ದೊಡ್ಡ ನದಿಗಳ ಹಣೆಬರಹವನ್ನೇ ನಿರ್ಧರಿಸುವಷ್ಟು ಮುಖ್ಯ ಪಾತ್ರವನ್ನೇ ನಿರ್ವಹಿಸಿವೆ. ಇನ್ನು ಮುಂದೆಯೂ ನಿರ್ವಹಿಸಲಿವೆ. ಅರುಣಾ ನದಿಯು ಮೌಂಟ್ ಎವರೆಸ್ಟ್ ಶಿಖರದಿಂದ 150 ಕಿಲೋಮೀಟರ್ ಉತ್ತರದಲ್ಲಿ ಜನಿಸಿ ಎವರೆಸ್ಟ್ ಮತ್ತು ಕಾಂಚನಗಂಗಾ ಶಿಖರಗಳಿರುವ ಪರ್ವತಗಳ ನಡುವೆ ಹರಿಯುತ್ತಾ ಧಾವಿಸಿ ಬರುತ್ತದೆ. ಅದು ಕೆಲವೊಮ್ಮೆ ಬ್ರಹ್ಮಪುತ್ರ ನದಿಯಿಂದ ಐದೇ ಕಿಲೋಮೀಟರ್ ದೂರದಲ್ಲಿದ್ದರೂ ಅವೆರಡೂ ಸಂಧಿüಸುವುದಿಲ್ಲ. ಬದಲಿಗೆ ಅರುಣ ನದಿಯು ಬಿಹಾರದ ಕಾಟಿಹಾರ್ ಜಿಲ್ಲೆಯಲ್ಲಿ ಗಂಗಾನದಿಯನ್ನು ಸಂಧಿಸುತ್ತದೆ. ಎತ್ತರದಿಂದ ಧುಮುಕುತ್ತಾ ಬರುವ ಅರುಣ ಒಂದು ಭಯಾನಕ ನದಿ. ಆದ್ದರಿಂದ ಅದು ತನಗೂ ಬ್ರಹ್ಮಪುತ್ರ ನದಿಗೂ ನಡುವೆ ಇರುವ ಬಂಡೆಯನ್ನು ಕೊರೆಯುತ್ತಲೇ ಇದೆ. ಹಾಗೇನಾದರೂ ಅದು ಬ್ರಹ್ಮಪುತ್ರ ನದಿಯನ್ನು ತಾಕಿದರೆ, ಅದು ಆ ನದಿಯ ನೀರನ್ನು ತನ್ನೆಡೆಗೆ ಸೆಳೆದುಕೊಂಡು ಬಿಟ್ಟು, ಬ್ರಹ್ಮಪುತ್ರದಲ್ಲಿ ಕೇವಲ ನೀರು ತೊಟ್ಟಿಡುವಂತೆ ಮಾಡುತ್ತದೆ. ಹಾಗಾದಲ್ಲಿ ಅದು ಬ್ರಹ್ಮಪುತ್ರ ನೀರನ್ನು ಗಂಗೆಗೆ ಹೊತ್ತು ತಂದರೆ ಬಿಹಾರ ಧ್ವಂಸವಾಗಿ ಬಿಡುತ್ತದೆ.

ಪರ್ವತಗಳು ಬೆಳೆದಂತೆ ನದಿಗಳ ಪಾತ್ರಗಳು ಬದಲಾಗಿವೆ. ನದಿಗಳು ಸರೋವರಗಳಾಗಿರುವುದೂ ಉಂಟು. ಬಹಳಕಾಲ ಬಾಂಗ್ಲಾದೇಶದಲ್ಲಿ ಗಂಗೆ ಮತ್ತು ಬ್ರಹ್ಮಪುತ್ರಗಳ ನಡುವೆ ಇನ್ನೂರು ಕಿಲೋಮೀಟರ್ ಅಂತರ ಉಳಿದಿದ್ದು ಎರಡೂ ಪ್ರತ್ಯೇಕವಾಗಿ ಹರಿಯುತ್ತಿದ್ದವು. ನಂತರ ಬ್ರಹ್ಮಪುತ್ರ ಢಾಕಾಗೆ ಪೂರ್ವದಲ್ಲಿ ಮೇಘನಾ (ಗಂಗಾ) ಅನ್ನು ಸೇರಿ, ಅಲ್ಲಿಯವರೆಗೂ ಸ್ವತಂತ್ರವಾಗಿದ್ದ ತೀಸ್ತಾ ನದಿಯನ್ನು ನುಂಗಿಬಿಟ್ಟಿತು.

ಅನೇಕ ಬಾರಿ ನದಿಗಳು ಪರ್ವತಗಳಿಂದ ಬಯಲಿಗೆ ಎಂಥ ರಭಸದಿಂದ ಬರುತ್ತವೆ ಎಂದರೆ ಅವು ತಮ್ಮ ಹಳೆಯ ಪಾತ್ರಗಳನ್ನು ಬದಲಿಸಿ ಹೊಸ ಪಾತ್ರಗಳನ್ನು ಸೃಷ್ಟಿಸಿಕೊಳ್ಳುತ್ತವೆ. ನೇಪಾಳದಿಂದ ಬಿಹಾರಕ್ಕೆ ನುಗ್ಗಿ ಬರುವ ಗಂಗಾನದಿಯ ಉಪನದಿಯಾದ ಕೋಸಿ ನದಿಯು, 2008ರ ಆಗಸ್ಟ್ 18ರಂದು ತನ್ನ ಪಾತ್ರವನ್ನು ಸುಮಾರು 120 ಕಿಲೋಮೀಟರ್‌ವರೆಗೂ ಬದಲಿಸಿತು. ಅದರ ಫಲಿತಾಂಶವೆಂದರೆ ಸುಮಾರು 50 ಲಕ್ಷ ಜನರನ್ನು ಅದು ಸ್ಥಳಾಂತರಿಸಿತು. ಅಸಂಖ್ಯಾತ ಜನ ಸತ್ತುಹೋದರು. ಕೋಸಿ ನದಿಯ ಘಟನೆ ಎರಡು ಅಂಶಗಳಿಗಾಗಿ ವಿಶೇಷವೆನಿಸಿತು. ಒಂದು, ಕಳೆದ 200 ವರ್ಷಗಳಲ್ಲಿ ಯಾವ ಉಪನದಿಯೂ ಪೂರ್ವಕ್ಕೆ ಸರಿದಿರಲಿಲ್ಲ ಮತ್ತು ಇಡಿಯ ಜಗತ್ತಿನಲ್ಲೇ ಯಾವ ನದಿಯೂ ತನ್ನ ಪಾತ್ರವನ್ನು ಇಷ್ಟು ದೂರಕ್ಕೆ ಬದಲಿಸಿಲ್ಲ.

ಭೂಕಂಪನಗಳು, ಪ್ರವಾಹಗಳು

ಆದರೆ ಚಲಿಸುತ್ತಿರುವುದು ಚಂಚಲವಾದ ನದಿಗಳು ಮಾತ್ರವಲ್ಲ. ಖಂಡ ಫಲಕಗಳೂ ಚಲಿಸುತ್ತಿವೆ. ಫಲಕಗಳು ಅಲುಗಾಡುತ್ತಾ ಮರು ಹೊಂದಾಣಿಕೆಗೆ ಪ್ರಯತ್ನಿಸಿದಾಗೆಲ್ಲಾ ಸಣ್ಣ ಮತ್ತು ದೊಡ್ಡ ಭೂಕಂಪಗಳು ಘಟಿಸುತ್ತವೆ. 1950ರ ಆಗಸ್ಟ್ 15ರಂದು ಸಂಜೆ ಏಳೂ ನಲವತ್ತಕ್ಕೆ ಜನರೆಲ್ಲಾ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಲಹರಿಯಲ್ಲಿದ್ದಾಗ ಅರುಣಾಚಲ ಪ್ರದೇಶದ ಪಾಸಿ ಘಾಟ್‌ನಲ್ಲಿ ಭಯಂಕರ ಭೂಕಂಪವಾಗಿ ಅರ್ಧ ಪಟ್ಟಣವನ್ನೇ ಅದು ಗುಡಿಸಿಹಾಕಿತು. ಕಲ್ಕತ್ತೆಯಿಂದ ಹಿಡಿದು ಪಟ್ನಾ, ತಿಂಪು, ಢಾಕಾ, ಯಾಂಗನ್ ನಗರಗಳವರೆಗೂ ಕಂಪನಗಳು ಹರಡಿದ್ದವು. ಜನಸಾಂದ್ರತೆ ತೀರಾ ವಿರಳವಾಗಿದ್ದ ಕಡೆಯಲ್ಲೇ 1,500 ಜನ ಸತ್ತಿದ್ದರು. ಇಪ್ಪತ್ತನೇ ಶತಮಾನದ ಆರನೇ ಅತಿದೊಡ್ಡ ಭೂಕಂಪ ಅದು. ಪರ್ವತಗಳು ಕಣಿವೆಗಳು ತಲೆಕೆಳಕಾಗಿ ನದಿಗಳ ಪಾತ್ರಗಳೇ ಬದಲಾಗಿದ್ದವು. ಭೂಕಂಪವಾದ ನಂತರ ವಾರಗಟ್ಟಲೆ ಭೂಕುಸಿತ, ಪ್ರವಾಹ ಸಾಮಾನ್ಯವಾಗಿತ್ತು.

ಬರಬರುತ್ತಾ ನದಿಗಳ ವರ್ತನೆ ಇನ್ನಷ್ಟು ರ‍್ರಾಬರ‍್ರಿಯಾಗುತ್ತಿದೆ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು, ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ. ಇದರಿಂದಾಗಿ ಬೃಹತ್ ನೀರ್ಗಲ್ಲುಗಳು ಕರಗುತ್ತಿವೆ. ಮಾನ್ಸೂನ್‌ಗಳೂ ಅಡ್ಡಾದಿಡ್ಡಿಯಾಗಿವೆ. ಹೀಗಾಗಿ ನದಿಗಳ ವರ್ತನೆಯನ್ನು ಊಹಿಸುವುದೇ ಕಷ್ಟ. ಇದಲ್ಲದೆ ಅಣೆಕಟ್ಟು, ರಸ್ತೆ, ಪಟ್ಟಣಗಳ ನಿರ್ಮಾಣಗಳನ್ನು ಕೈಗೊಳ್ಳುವಾಗ ಒಂದು ಪ್ರದೇಶದ ಮೇಲ್ಮೈಲಕ್ಷಣ, ಭೂಗರ್ಭ ಶಾಸ್ತçವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದರಿಂದ ನೀರಿನ ಹರಿವು ಯದ್ವಾತದ್ವಾ ಬದಲಾಗುತ್ತಿದೆ.

ಆಧುನಿಕ ಕಾಲದ ಅತ್ಯಂತ ವಿನಾಶಕಾರಿ ಪ್ರಕರಣವು 2013ರಲ್ಲಿ ಉತ್ತರಾಖಂಡದ ಬೆಟ್ಟಗಳಲ್ಲಿ ಜರುಗಿತು. ಬೇಸಿಗೆಯಿಂದಾಗಿ ಒಂದು ಕಡೆ ವಿಪರೀತ ನೀರ್ಗಲ್ಲುಗಳು ಕರಗಿ ನದಿಗಳಿಗೆ ನೀರು ನುಗ್ಗಿತ್ತು. ಜೊತೆಗೆ ಆ ವರ್ಷ ಮಾನ್ಸೂನ್ ಪ್ರಬಲವಾಗಿದ್ದು ಬೇಗನೆ ಬಂದಿತ್ತು. ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದವು. ಜೂನ್ 15ರ ರಾತ್ರಿ ಮಳೆ ತುಂಬಾ ಹೆಚ್ಚಾಯಿತು. ಮಾರನೆಯ ದಿನ ಚಾರ್‌ಬಾರಿ ನೀರ್ಗಲ್ಲು ನೀರಿನ ಒತ್ತಡದಲ್ಲಿ ಕುಸಿಯಿತು. ಕೆಲವೇ ಕ್ಷಣಗಳಲ್ಲಿ ಮಂದಾಕಿನಿ ನದಿಯು ಎಲ್ಲ ಎಲ್ಲೆಗಳನ್ನೂ ಮೀರಿ ರಭಸದಿಂದ ನುಗ್ಗುತ್ತಾ ನೀರು ಮತ್ತು ಮಂಜಿನಗಡ್ಡೆ ತುಂಬಿದ್ದ ಪ್ರವಾಹವನ್ನು ಒಟ್ಟುಗೂಡಿಸಿ ತನ್ನ ಎಡದಂಡೆಯ ಮೇಲಿದ್ದ ಪುಣ್ಯಕ್ಷೇತ್ರ ಕೇದಾರನಾಥಕ್ಕೆ ನುಗ್ಗಿತು. ನೂರಾರು ಹಳ್ಳಿಗಳು ನಾಶವಾದವು. ದಡದಲ್ಲಿದ್ದ ಶಾಲೆಗಳು, ಹೋಟೆಲ್‌ಗಳು, ಮನೆಗಳು, ಬಜಾರ್‌ಗಳು ಪ್ರವಾಹದಲ್ಲಿ ಪೂರ್ತಿಯಾಗಿ ಕೊಚ್ಚಿಹೋದವು. ಮಾಧ್ಯಮದವರು ಇದನ್ನು ‘ಹಿಮಾಲಯದ ಸುನಾಮಿ’ ಎಂದು ಕರೆದರು.

ಮಾನ್ಸೂನ್ ಮಹಾವೈಭವ

ಹಿಮಾಲಯವು ಮೇಲಕ್ಕೆ ಎದ್ದದ್ದರಿಂದ ಇನ್ನೊಂದು ಮಹತ್ತರ ಪರಿಣಾಮ ಉಂಟಾಯಿತು. ಗಾಳಿ ಮತ್ತು ಮೋಡಗಳ ಚಲನೆಗೆ ಹಿಮಾಲಯದ ಉನ್ನತ ಪರ್ವತಗಳು ತಡೆಗೋಡೆಯಂತಾದ್ದರಿAದ ‘ಏಷಿಯಾ ಮಾನ್ಸೂನ್’ ಎಂಬ ವಿದ್ಯಮಾನದ ಸೃಷ್ಟಿಯಾಯಿತು. ಉರ್ದು ಅಥವಾ ಪರ್ಷಿಯನ್ ಭಾಷೆಯಲ್ಲಿ ಇರುವ ಹವಾಮಾನ ಅಥವಾ ಋತು ಎಂಬ ಅರ್ಥದ ಮೌಸಮ್ ಪದವು ಮಾನ್ಸೂನ್ ಆಗಿದೆ. ಸುಮಾರು 13 ಮಿಲಿಯನ್ ವರ್ಷಗಳ ಹಿಂದೆ ಅಲ್ಲಿಷ್ಟು ಇಲ್ಲಿಷ್ಟು ಮಳೆ ತರುತ್ತಿದ್ದ ಮಾನ್ಸೂನ್ 8 ಮಿಲಿಯನ್ ವರ್ಷಗಳ ಹಿಂದೆ ಹಿಮಾಲಯವು ಸ್ಪಷ್ಟವಾಗಿ ತಡೆಗೋಡೆಯಾದ ಮೇಲೆ ಅಪಾರ ಶಕ್ತಿ ಹಾಗೂ ತೀವ್ರತೆಯನ್ನು ಪಡೆದುಕೊಂಡಿತು.

ಹಿಮಾಲಯವು ಅಷ್ಟು ಎತ್ತರದ ತಡೆಗೋಡೆಯಾಗುವ ಮೊದಲು ಸಹ ಭಾರತ ಮತ್ತು ಟಿಬೆಟ್‌ಗಳಲ್ಲಿ ಉಷ್ಣತೆ ಹೆಚ್ಚಿತ್ತು. ಹಿಮಾಲಯದ ಗೋಡೆ ಎದ್ದು ನಿಂತ ಮೇಲೆ ಉತ್ತರದಿಂದ ಬರುತ್ತಿದ್ದ ಹಿಮಮಾರುತಕ್ಕೆ ಅಡ್ಡಿಯಾಯಿತು. ಇದರಿಂದ ಭಾರತದ ಶಾಖ ಹೆಚ್ಚಾಗಿ ಇಲ್ಲಿ ವಾಯುಭಾರ ಕುಸಿತ ತೀವ್ರಗೊಂಡಿತು. ಮಳೆಯೇ ಮಾನ್ಸೂನ್ ಅಲ್ಲ, ಮಳೆಯನ್ನು ಹೊತ್ತು ತರುವ ಗಾಳಿಗಳು ಮಾನ್ಸೂನ್. ಹಿಂದೂ ಮಹಾಸಾಗರದಲ್ಲಿ ಹುಟ್ಟುವ ಈ ಮಾರುತಗಳು, 4000 ಕಿ.ಮೀ ದೂರಕ್ಕೆ ಮೋಡವನ್ನು ಹೊತ್ತು ತರುತ್ತವೆ. ದಕ್ಷಿಣ ಭಾರತ, ಪಶ್ಚಿಮ ಘಟ್ಟಗಳಲ್ಲಿ ಮಳೆ ಸುರಿಸಿ ಮೋಡಗಳು ಹಿಮಾಲಯವನ್ನು ತಲುಪುತ್ತವೆ. ಇದರಿಂದಾಗಿ ಜುಲೈ ಮಧ್ಯದ ವೇಳೆಗೆ ಉತ್ತರದ ಬಯಲು ಪ್ರದೇಶಗಳಲ್ಲಿ ಶಾಖ ಮತ್ತು ತೇವಾಂಶ ಹೆಚ್ಚುತ್ತವೆ. ಇದಕ್ಕಿಂತಲೂ ಮುಂಚೆಯೇ ದಕ್ಷಿಣ ಮತ್ತು ಈಶಾನ್ಯ ಭಾರತಗಳಿಗೆ ಮಾನ್ಸೂನ್ ಬಂದಿರುತ್ತದೆ. ಪ್ರತಿವರ್ಷವೂ ಪುನರಾವರ್ತಿಸುವ ಈ ಪ್ರಕ್ರಿಯೆಯಲ್ಲಿ ಮೇ ತಿಂಗಳ ಕೊನೆಯಿಂದ ಅಕ್ಟೋಬರ್ ಕೊನೆಯವರೆಗೂ ಮಳೆ ಸುರಿಯುತ್ತದೆ. ಉಷ್ಣಾಂಶ, ಗಾಳಿಯ ವೇಗಗಳಲ್ಲಿ ತುಸುವೇ ಬದಲಾವಣೆಯಾದರೂ ಒಂದೋ ಅತಿವೃಷ್ಟಿ ಅಥವಾ ಅನಾವೃಷ್ಟಿ ಖಂಡಿತ. ಇದರಿಂದಾಗಿ ಇಡೀ ಉಪಖಂಡದ ಕೃಷಿ, 250 ಕೋಟಿ ಜನತೆಯ ಬದುಕು ಏರುಪೇರಾಗಬಹುದು.

ಮನೋಹರ ಘಟನೆ

ಮಾನ್ಸೂನ್‌ನ ಆಗಮನವು ನಿಜಕ್ಕೂ ನಯನ ಮನೋಹರವಾದದ್ದು. 1848ರಲ್ಲಿ ಸಿಕ್ಕಿಂನ ಹಿಮಾಲಯ ಪ್ರದೇಶದಲ್ಲಿ ನಿಂತು ಮೋಡಗಳ ಮೆರವಣಿಗೆಯನ್ನು ಕಂಡ ಬ್ರಿಟನ್ನಿನ ಸಸ್ಯಶಾಸ್ತ್ರಜ್ಞ ಜೊಸೆಫ್ ಡಾಲ್ಟನ್ ಹೂಕರ್ ಹೀಗೆನ್ನುತ್ತಾನೆ, “ಎಂಥ ದೈತ್ಯ ಪ್ರಮಾಣದ ಕಾರ್ಯಾಚರಣೆಯಲ್ಲಿ ಪ್ರಕೃತಿ ಇಲ್ಲಿ ತೊಡಗಿಕೊಂಡಿದೆ. ಆರುನೂರಕ್ಕೂ ಹೆಚ್ಚು ಕಿಲೋಮೀಟರ್ ದೂರದಲ್ಲಿನ ಸಮುದ್ರವೇ ಇಲ್ಲಿಗೆ ಹತ್ತಿರವಿರುವ ಸಾಗರ ತೀರವಾದರೂ, ಅಲ್ಲಿಂದ ಇಲ್ಲಿಯವರೆಗೂ ಒಂದು ತೊಟ್ಟು ನೀರನ್ನೂ ಸುರಿಸದೆ, ಇಲ್ಲಿನ ಸಸ್ಯರಾಶಿಗೆ ನೀರು ಸರಬರಾಜು ಮಾಡುತ್ತದೆಯಲ್ಲ! ಈ ಮಹತ್ಕಾರ್ಯವನ್ನು ಪೂರೈಸಿದ ಮೇಲೆ ಎಲ್ಲ ಹೆಚ್ಚುವರಿ ನೀರೂ ಮತ್ತೆ ನದಿಗಳ ಮೂಲಕ ಸಾಗರವನ್ನು ಸೇರುತ್ತವೆ. ಮತ್ತೆ ಅಲ್ಲಿಂದ ಆವಿಯಾಗಿ, ಸಂಗ್ರಹಿಸಲ್ಪಟ್ಟು, ಸಾಗಾಣಿಕೆಯಾಗಿ ಆ ನೀರು ಇಲ್ಲಿಗೆ ವಾಪಸ್ ಬರುತ್ತದೆ!” ಈಗ ನಮಗೆ ಮಾನ್ಸೂನ್ ಬಗ್ಗೆ ಹೂಕರ್‌ಗಿಂತ ಹೆಚ್ಚಿನ ತಿಳಿವಳಿಕೆ ಇರುವುದರಿಂದ ಮಾನ್ಸೂನ್ ದಾರಿಯುದ್ದಕ್ಕೂ ನೀರನ್ನು ಸುರಿಸಿರುತ್ತದೆ ಎಂಬುದನ್ನು ಬಲ್ಲೆವು. ಆದರೆ ಈ ಋತುವೈಭವದ ಬಗ್ಗೆ, ಅದರ ಅಗಾಧ ಔದಾರ್ಯದ ಬಗ್ಗೆ ಆತನಿಗಿದ್ದ ಅಪಾರ ಮೆಚ್ಚುಗೆಗಿಂತ ನಮ್ಮ ಪ್ರತಿಕ್ರಿಯೆ ಕಡಿಮೆಯೇನೂ ಇಲ್ಲ.

ಅಂಟಾರ್ಟಿಕಾ ಮತ್ತು ಮಾನ್ಸೂನ್

ಮಾನ್ಸೂನ್‌ನ ತೀವ್ರತೆಯ ಮೇಲೆ ಪರಿಣಾಮ ಬೀರುವ ಇನ್ನೊಂದು ದೂರದ ಆದರೆ ಸಮರ್ಥವಾದ ಶಕ್ತಿ ಎಂದರೆ ಅದು ಅಂಟಾರ್ಟಿಕಾ ಖಂಡ ಅಥವಾ ದಕ್ಷಿಣ ಧ್ರುವ ಪ್ರದೇಶ. ಇದು ವಿಶ್ವದಲ್ಲಿನ ಕಟ್ಟಕಡೆಯ ನಿರ್ಜನ ಪ್ರದೇಶ. ದಕ್ಷಿಣ ಧ್ರುವದಲ್ಲಿ ಇಡಿಯ ವರ್ಷ ಹಿಮವು ಹೆಪ್ಪುಗಟ್ಟಿರುತ್ತದೆ. ಆದರೆ ಮಾರ್ಚ್ನಿಂದ ಸೆಪ್ಟೆಂಬರ್‌ವರೆಗೆ ಹರಡಿಕೊಂಡ ಅಲ್ಲಿನ ಚಳಿಗಾಲದಲ್ಲಿ ಮಂಜು ಶೇಕಡಾ ಮೂವತ್ತರಷ್ಟು ಹೆಚ್ಚುತ್ತದೆ. ವಿಪರೀತ ಥಂಡಿ, ಭಯಂಕರ ಹಿಮಮಾರುತಗಳಿಂದಾಗಿ ಅಲ್ಲಿಗೆ ತಲುಪುವುದು ಅಸಾಧ್ಯದ ಮಾತು. ಆರು ತಿಂಗಳ ಕಾಲ ಅಲ್ಲಿಗೆ ಸೂರ್ಯರಶ್ಮಿಯೇ ಸೋಕದೆ ಅದು ಸಂಪೂರ್ಣ ಗಾಡಾಂಧಕಾರದಲ್ಲಿ ಮುಳುಗಿರುತ್ತದೆ. ಇಂಥ ನಿರ್ಜಿವ, ಮಂಕಾದ, ಕೊರೆಯುವ ನಿರ್ಜನ ಪ್ರದೇಶವು ಭೂಮಿಯ ಮೇಲಿನ ಶಕ್ತಿ ಸಮತೋಲನವನ್ನು ಕಾಪಾಡುತ್ತಾ, ಜಗತ್ತಿನ ಎಲ್ಲ ಭೂ ಮತ್ತು ಜಲ ಜೀವರಾಶಿಗಳ ಬದುಕನ್ನು ರೂಪಿಸುವಲ್ಲಿ ಗಮನಾರ್ಹ ಪಾತ್ರವನ್ನು ನಿರ್ವಹಿಸುತ್ತಿದೆ ಎಂಬುದು ದೊಡ್ಡ ವಿಪರ್ಯಾಸವೇ ಸರಿ !

ಎರಡೂ ಧ್ರುವ ಪ್ರದೇಶಗಳಲ್ಲೂ ವಿಪರೀತ ಥಂಡಿಯಿದೆ, ಸೂರ್ಯಶಕ್ತಿ ತಲುಪುವುದಿಲ್ಲ, ತಲುಪಿದರೂ ಹಿಮಗಡ್ಡೆಯ ಬಿಳಿಯ ಬಣ್ಣದಿಂದಾಗಿ ಕಿರಣಗಳು ವಾಪಸ್ ಪ್ರತಿಫಲನವಾಗುತ್ತವೆ ಎಂಬುದು ನಿಜವಾದರೂ ಅಂಟಾರ್ಟಿಕಾ ಖಂಡವು ಆರ್ಕ್ಟಿಕ್‌ಗಿಂತ ಸುಮಾರು 60 ಸೆ ಹೆಚ್ಚಿಗೆ ತಣ್ಣಗಿದೆ. ಆರ್ಕ್ಟಿಕ್, ಎಂದರೆ ಉತ್ತರ ಧ್ರುವದಲ್ಲಿ ಬೇಸಿಗೆಯ ವೇಳೆಗೆ ಅಂಚಿನ ಪ್ರದೇಶಗಳು ಕರಗಲಾರಂಭಿಸುತ್ತವೆ. ಇದರಿಂದಾಗಿ ಅಲ್ಲಿ ಅಚ್ಚರಿ ಎನಿಸುವಂಥ ಜೈವಿಕ ಚಟುವಟಿಕೆ ಕಂಡುಬರುತ್ತದೆ. ಕೀಟಗಳು, ತೋಳಗಳು, ತಿಮಿಂಗಲಗಳು ಎಲ್ಲವೂ ಲವಲವಿಕೆಯ ಬದುಕನ್ನು ಆರಂಭಿಸಿಕೊಳ್ಳುತ್ತವೆ. ಆದರೆ ಅಂಟಾರ್ಟಿಕಾ ಹಾಗಲ್ಲ. ಅದು ಎಂದಿಗೂ ಸಂಪೂರ್ಣ ಥಂಡಿಯಲ್ಲಿ ಯಾರೂ ಪ್ರವೇಶಿಸಲಾಗದಂತೆ ಸ್ತಬ್ಧವಾಗಿರುತ್ತದೆ. ಅಂಟಾರ್ಟಿಕಾ ಅಷ್ಟೊಂದು ಶೀತದಲ್ಲಿ ಮುಳುಗಿರುವುದಕ್ಕೆ ಒಂದು ವಿವರಣೆ ಎಂದರೆ ಅದಕ್ಕೆ ಬೇರೆ ಯಾವ ಭೂಭಾಗವೂ ಹತ್ತಿರ ಇಲ್ಲದಿರುವುದು ಮತ್ತು ಅದರ ಸುತ್ತಲಿನ ಸಾಗರ ತೀರಾ ಆಳವಾಗಿರುವುದು. ಆದರೆ ಉತ್ತರ ಧ್ರುವ ಹಾಗಲ್ಲ. ಅದು ಗ್ರೀನ್‌ಲೆಂಡ್, ಕೆನಡಾ, ರಷ್ಯಾ ಮತ್ತು ಅನೇಕ ದ್ವೀಪಗಳೊಂದಿಗೆ ಸಂಬAಧ ಹೊಂದಿದೆ. ಮತ್ತು ಅದರ ಸುತ್ತಲಿನ ಕಡಲಿನ ಆಳವು ಕಡಿಮೆ. ದಕ್ಷಿಣ ಧ್ರುವವು ಸುಮಾರು 25 ಮಿಲಿಯನ್ ವರ್ಷಗಳ ಹಿಂದೆ ಈಗಿರುವ ಸ್ಥಳಕ್ಕೆ ಬಂದು ತಲುಪಿತು. ಮತ್ತು ಸುಮಾರು 23 ಮಿಲಿಯನ್ ವರ್ಷಗಳ ಹಿಂದೆ ಅದು ದಕ್ಷಿಣ ಅಮೆರಿಕಾ ಖಂಡದ ದಕ್ಷಿಣ ತುತ್ತತುದಿಯಿಂದ ಬೇರ್ಪಟ್ಟು, ಅಟ್ಲಾಂಟಿಕ್ ಮತ್ತು ಶಾಂತ ಸಾಗರಗಳ ನಡುವಿನ ಡ್ರೇಕ್ ಜಲಮಾರ್ಗವು ನಿರ್ಮಾಣವಾಯಿತು.

ಸಾಗರ ಪ್ರವಾಹಗಳು

ಅಂಟಾರ್ಟಿಕಾ ಖಂಡವು ಯಾವ ರೀತಿಯಲ್ಲಿ ನಮ್ಮ ಮಾನ್ಸೂನಿನ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ಗ್ರಹಿಸಲು ನಾವು ಸ್ವಲ್ಪ ಮಟ್ಟಿಗೆ ಸಾಗರದಲ್ಲಿನ ಪ್ರವಾಹ ಪರಿಚಲನೆಯ ಬಗ್ಗೆ ಅರಿಯಬೇಕು. ಸಾಗರದಲ್ಲಿ ನೀರು, ಮಂಜುಗಡ್ಡೆ ಆಗುವಾಗ, ಗಡ್ಡೆಯಿಂದ ಉಪ್ಪು ಬೇರ್ಪಡುತ್ತದೆ. ಭಾರವಾದ ಉಪ್ಪು ನೀರು ಸಾಗರದಾಳಕ್ಕೆ ಇಳಿಯುತ್ತಾ ಅಲ್ಲಿನ ಆಳದಾಳದ ಕಣಿವೆಗಳಲ್ಲಿ ಸಂಚರಿಸುತ್ತದೆ. ಉಪ್ಪೆಲ್ಲಾ ಕೆಳಗಿಳಿಯುವ ಪ್ರಕ್ರಿಯೆಯಿಂದ ಅಂಟಾರ್ಟಿಕಾದ ಸಮುದ್ರ ನೀರಿನಲ್ಲಿ ಲವಣಾಂಶ ವಿಪರೀತ ಹೆಚ್ಚು. ಇಂತಹ ಆಳದಲ್ಲಿನ ಉಪ್ಪುನೀರು ಒಂದು ಸಾಂದ್ರವಾದ ಪಾಕದಂತಿದ್ದು, ಅದು ಹೊಸ ನೀರನ್ನು ಹುಡುಕುತ್ತಾ ಉಷ್ಣತೆಯೂ, ಹಗುರವಾದ ನೀರೂ ದೊರಕುವಂಥ ಸಮಭಾಜಕ ವೃತ್ತದತ್ತ ವೇಗವಾಗಿ ಧಾವಿಸುತ್ತದೆ. ಮತ್ತು ಸಮಭಾಜಕ ವೃತ್ತದಲ್ಲಿರುವ ಬಿಸಿಯಾದ, ಹಗುರವಾದ ನೀರು ಧ್ರುವ ಪ್ರದೇಶದ ಸಾಗರದ ಮೇಲ್ಭಾಗಕ್ಕೆ ನುಗ್ಗುತ್ತದೆ. ಹೀಗೆ ವೃತ್ತಾಕಾರವಾಗಿ ಗಾಳಿಯೂ ನೀರೂ ಸುತ್ತುವ ಒಂದು ನಿಸರ್ಗ ನಿರ್ಮಿತ ರವಾನೆ ಪಟ್ಟಿ ಕೆಲಸ ಮಾಡುತ್ತದೆ. ಇದರಿಂದಾಗಿ ಭಯಂಕರ ಚಂಡಮಾರುತಗಳು ಸೃಷ್ಟಿಯಾಗುತ್ತವೆ. ಇವುಗಳನ್ನು ಇಂಗ್ಲಿಷಿನಲ್ಲಿ ‘ಸ್ಕ್ರೀಮಿಂಗ್ ಸಿಕ್ಸ್ಟೀಸ್’ ಎಂದು ಕರೆಯುತ್ತಾರೆ. (ರೇಖಾಂಶ 600-700 ಮಧ್ಯೆ ಇರುವ ಭಯಾನಕ ಸೈಕ್ಲೋನ್ ಗಾಳಿಗಳು- ಅ).

ಕೇವಲ ಭಾರತ ಮತ್ತು ಟೆಬೆಟ್ಟಿನಲ್ಲಿ ಬೇಸಿಗೆಯಲ್ಲಿ ಕಂಡುಬರುವ ಉಷ್ಣತೆಯ ಮೇಲೆ ಅಥವಾ ದಕ್ಷಿಣ ಭಾರತದ ಕಡು ಬೇಸಿಗೆಯ ಮೇಲೆ ಮಾನ್ಸೂನ್‌ನ ತೀವ್ರತೆ ಅವಲಂಬಿತವಾಗಿಲ್ಲ. ಬದಲಿಗೆ ಅದು ಅಂಟಾರ್ಟಿಕಾದ ಚಳಿಗಾಲದ ತೀವ್ರತೆಯ ಮೇಲೂ ಅವಲಂಬಿತವಾಗಿದೆ. ಹೇಗೆಂದರೆ ಅಂಟಾರ್ಟಿಕಾದಲ್ಲಿ ಚಳಿ ಹೆಚ್ಚಾದರೆ ನಮ್ಮ ಮಾನ್ಸೂನ್ ದುರ್ಬಲವಾಗುತ್ತದೆ ಮತ್ತು ಅಲ್ಲಿನ ಚಳಿ ಕಡಿಮೆಯಾದರೆ ಇಲ್ಲಿ ಮಳೆ ಹೆಚ್ಚುತ್ತದೆ. ಅಂಟಾರ್ಟಿಕಾದಲ್ಲಿ ಹಿಮಗಡ್ಡೆ ತೆಳುವಾಗಿ ನೀರು ಕಾದು ಹೆಚ್ಚು ಆವಿಯಾಗಿ ಮೋಡಗಳು ದಟ್ಟವಾಗುತ್ತವೆ. ಆಗ ಆರ್ದ್ರವಾದ ಮೋಡಗಳು ಸಮಭಾಜಕ ವೃತ್ತವನ್ನು ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತವನ್ನು ದಾಟಿ ಭಾರತದ ಉತ್ತರದತ್ತ ಹೆಚ್ಚು ಹೆಚ್ಚಾಗಿ ಧಾವಿಸುತ್ತವೆ. ಮತ್ತು ಹಿಮಗಡ್ಡೆಗಳು ಹೆಚ್ಚಾಗಿ ಕರಗಿದಂತೆಲ್ಲಾ, ಸಮುದ್ರದ ನೀರು ತೆಳುವಾಗಿ ವೇಗವಾಗಿ ಕಾದು ಆವಿಯಾಗುತ್ತವೆ. ಈ ಎರಡೂ ಅನುಕೂಲಕರ ಅಂಶಗಳಿಂದ ಮಾನ್ಸೂನ್ ಬಲಗೊಳ್ಳುತ್ತದೆ. ಈ ಎಲ್ಲ ಅಂಶಗಳು ಚೆನ್ನಾಗಿದ್ದಾಗ ಭಾರತದ ಮೇಲೆ ಸರಾಸರಿ ವರ್ಷವೊಂದರಲ್ಲಿ ಒಂದು ಟ್ರಿಲಿಯನ್ ಟನ್‌ಗಳಷ್ಟು ಮಳೆ ನೀರು ಸುರಿಯುತ್ತದೆ.

ಹಿಮಾಲಯ ಮತ್ತು ಜಾಗತಿಕ ತಾಪಮಾನ

ನಮ್ಮ ಬದುಕಿನ ಮೇಲೆ ಮಾನ್ಸೂನ್ ಬೀರುವಂಥ ಸ್ಪಷ್ಟವಾಗಿ ಗೋಚರವಾಗುವ ಪರಿಣಾಮಕ್ಕೆ ಸಮವಲ್ಲದಿದ್ದರೂ ಅಷ್ಟೇ ಗಮನಾರ್ಹವಾದ ಹಿಮಾಲಯದ ಪರಿಣಾಮ ಇನ್ನೊಂದಿದೆ. ಭೂಮಿಯ ರಚನೆಯ ಚರಿತ್ರೆಯಲ್ಲಿ ವಾತಾವರಣದ ಸ್ಥಿರತೆಯನ್ನು ಏರ್ಪಡಿಸುವಲ್ಲಿ ಇಂಗಾಲ ಮತ್ತು ಆಮ್ಲಜನಕಗಳು ನಿರ್ವಹಿಸಿದ ಪಾತ್ರದ ಬಗ್ಗೆ ನಮಗೆ ತಿಳಿದಿದೆ. ಅವೆರಡೂ ಭೂಮಿಯ ಉಷ್ಣತೆಯ ಮೇಲೆ ಗಾಢವಾದ ಪ್ರಭಾವವನ್ನೇ ಉಂಟುಮಾಡಿದವು. 1980ರಲ್ಲಿ ಹವಾಮಾನ ವಿಜ್ಞಾನಿಗಳು ಗ್ರೀನ್ ಹೌಸ್ ಎಫೆ಼ಕ್ಟ್ (ಹಸಿರು ಮನೆ ಪರಿಣಾಮ) ಎಂಬ ಪದವನ್ನು ಟಂಕಿಸಿದರು. ಹವಾಮಾನ ವೈಪರೀತ್ಯದ ಚರ್ಚೆಯಲ್ಲಿ ಇದೊಂದು ನೇತ್ಯಾತ್ಮಕ ಅರ್ಥವಿರುವ ಕೆಟ್ಟ ಪದ. ಗ್ರೀನ್ ಹೌಸ್ ಪರಿಣಾಮ ಹೇಗೆ ಕೆಲಸ ಮಾಡುತ್ತದೆ ನೋಡೋಣ.

ಹಸಿರುಮನೆ ಅನಿಲಗಳು ಎಂದರೆ ಮುಖ್ಯವಾಗಿ ಇಂಗಾಲದ ಡೈ ಆಕ್ಸೆöÊಡ್ ಮತ್ತು ಮೀಥೇನ್‌ಗಳು. ಇವು ಸೂರ್ಯನ ಕಿರಣಗಳನ್ನು ಹಿಡಿದಿಟ್ಟು ಭೂ ಗ್ರಹದ ತಾಪಮಾನವನ್ನು ಹೆಚ್ಚಿಸುತ್ತವೆ. ಹಿಮಾಲಯ ಮತ್ತು ಅದರ ನದಿಗಳು ಇವುಗಳನ್ನು ನಿಯಂತ್ರಿಸುವುದರಲ್ಲಿ ಗಮನಾರ್ಹ ಪಾತ್ರವನ್ನು ನಿರ್ವಹಿಸಬಲ್ಲವು ಎಂಬುದನ್ನು ವಿಜ್ಞಾನಿಗಳು 1990ರ ದಶಕದಲ್ಲಿ ಕಂಡುಕೊಂಡರು. ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಿದಂತೆ, ಉಷ್ಣತೆ ಹೆಚ್ಚಾಗುತ್ತದೆ ಮತ್ತು ಹೆಚ್ಚು ಮೋಡ ಮತ್ತು ಮಳೆ ಉಂಟಾಗುತ್ತವೆ. ಮಳೆ ಸುರಿಯುವಾಗ ಅದು ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ನೊಂದಿಗೆ ಪ್ರತಿಕ್ರಿಯಿಸಿ ದುರ್ಬಲವಾದ ಕಾರ್ಬಾನಿಕ್ ಆಮ್ಲ ಉತ್ಪಾದನೆಯಾಗುತ್ತದೆ. ಈ ಆಸಿಡ್ ಸೇರಿದ ಮಳೆ ಭೂಮಿಯ ಮೇಲೆ ಸುರಿದಾಗ ಅಲ್ಲಿನ ಅನೇಕ ಸಿಲಿಕೇಟ್ ಕಲ್ಲುಗಳು ಕರಗುತ್ತವೆ, ಸವೆಯುತ್ತವೆ ಮತ್ತು ತನ್ಮೂಲಕ ಕಾರ್ಬನ್ ಡೈ ಆಕ್ಸೈಡ್ ಅನ್ನು ನುಂಗುತ್ತವೆ. ಒಟ್ಟಿನಲ್ಲಿ ಈ ಇಂಗಾಲದ ಡೈ ಆಕ್ಸೈಡ್ ಅನ್ನು ವಾತಾವರಣದಿಂದ ಆಚೆಗೆ ತೆಗೆದಂತಾಗುತ್ತದೆ. ಈ ಇಂಗಾಲ ಭರಿತ ಕಲ್ಲಿನ ಚೂರುಗಳು ನದಿಯ ನೀರಿನ ಜೊತೆ ಕೊಚ್ಚಿಕೊಂಡು ಬಂದು ಸಮುದ್ರ ಸೇರುತ್ತವೆ. ಇವುಗಳನ್ನು ಸೇವಿಸಿ ಸಮುದ್ರದಲ್ಲಿನ ಶಂಖ, ಕಪ್ಪೆಚಿಪ್ಪು ಮುಂತಾದ ಚಿಪ್ಪಿನ ಪ್ರಾಣಿಗಳು ಅದನ್ನು ತಮ್ಮ ಹೊರ ಕವಚದ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳುತ್ತವೆ. ಅವು ಸತ್ತಾಗ ಆ ಚಿಪ್ಪುಗಳು ಸಮುದ್ರದ ತಳ ಸೇರುತ್ತವೆ. ಇದನ್ನು ವಿಜ್ಞಾನಿಗಳು ಕಾರ್ಬನ್ ಬರಿಯಲ್ ಅಥವಾ ಇಂಗಾಲದ ಗೋರಿ ಎಂದು ಕರೆಯುತ್ತಾರೆ. ಆದ್ದರಿಂದ ಸಮುದ್ರದ ತೀರದಲ್ಲಿ ನೀವು ಸುಂದರ ಚಿಪ್ಪುಗಳನ್ನು ಕಂಡಾಗ ಇದೆಲ್ಲಾ ಹಿಮಾಲಯದಿಂದ ಇಳಿದು ಬಂದಿವೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು ! ವಾತಾವರಣದಲ್ಲಿರುವ ಇಂಗಾಲಕ್ಕೆ ಅತಿದೊಡ್ಡ ಕೊಡುಗೆ ನೀಡುವುದು ಅಗ್ನಿಪರ್ವತಗಳು ಮತ್ತು ಸಮುದ್ರ ತಳ ಸರಿತದಿಂದ ಬಿಡುಗಡೆಯಾಗುವ ಇಂಗಾಲದ ಅನಿಲಗಳು ಎಂಬುದು ನಿಜವಾದರೂ, ಮನುಷ್ಯನು ಇಂಗಾಲ ಇಂಧನವನ್ನು ಉರಿಸುವುದರಿಂದ, ಅರಣ್ಯ ನಾಶ ಮಾಡುವುದರಿಂದ, ಕಳೆದ 150 ವರ್ಷಗಳಲ್ಲಿ ಹೆಚ್ಚಿರುವ ಇಂಗಾಲದ ಪ್ರಮಾಣಕ್ಕೆ ಶೇಕಡಾ 30ರಷ್ಟು ಕೊಡುಗೆ ನೀಡಿದ್ದಾನೆ. ಆದ್ದರಿಂದ ಹಿಂದೂ ಮಹಾಸಾಗರದಲ್ಲಿ ಇಂಗಾಲದ ಗೋರಿ ನಿರ್ಮಾಣವಾಗುವ ಪ್ರಘಟನೆಯು ಹವಾಮಾನ ಸಮತೋಲನ ಕಾಯ್ದುಕೊಳ್ಳುವ ಪ್ರಕ್ರಿಯೆಗೆ ಮಹತ್ವಪೂರ್ಣವಾಗಿದೆ.

ಬಂಗಾಳದ ಬೀಸಣಿಗೆಗಳು

ಭೂಮಿಯ ಇತಿಹಾಸದಲ್ಲಿ ಹಿಮಾಲಯದಲ್ಲಿ ಪಾತ್ರ ಬಹಳ ದೊಡ್ಡದು. ಭೂಮಿಯು ತಣ್ಣಗಾಗುವ ಪ್ರಕ್ರಿಯೆಗೆ ಹಿಮಾಲಯ ಮತ್ತು ಅದರ ನದಿಗಳು ಅಪಾರ ಕಾಣಿಕೆ ನೀಡಿದವು. ಅವು ಇಂಗಾಲವನ್ನು ಹಿಡಿದು ಹಾಕಿದ್ದರಿಂದ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಕಡಿಮೆಯಾಯಿತು.

ಹಿಮಾಲಯದ ನದಿಗಳು ಸಾಗರವನ್ನು ಸೇರಿ ಪರ್ವತಗಳಿಂದ ತಂದ ಕಲ್ಲು ಮಿಶ್ರಿತ ಕೆಸರನ್ನು ಸಮುದ್ರ ತಳದಲ್ಲಿ ಹರಡುತ್ತವೆ. ನದಿಯು ಸಮುದ್ರವನ್ನು ಸೇರುವ ಮುಖಜ ಭೂಮಿಯಲ್ಲಿ ಇಂತಹ ಕೆಸರು ಚೀನಾದ ಕೈ ಬೀಸಣಿಗೆಯ ಆಕಾರದಲ್ಲಿ ನೂರಾರು ಕಿಲೋಮೀಟರ್‌ಗಳಷ್ಟು ಹರಡಿಕೊಳ್ಳುತ್ತದೆ. ಸಿಂಧೂ ನದಿಯು 10 ಕಿ.ಮೀ. ದಪ್ಪದ, 1600 ಕಿ.ಮೀ ಉದ್ದದ (ಕೇರಳದವರೆಗೂ) ಬೀಸಣಿಗೆಗಳನ್ನು ಸೃಷ್ಟಿಸಿದೆ. ಆದರೆ ಇದರ ಮೂರರಷ್ಟು ಕೆಸರನ್ನು ಗಂಗಾ-ಬ್ರಹ್ಮಪುತ್ರ ನದಿಗಳು ಸಮುದ್ರಕ್ಕೆ ಸುರಿದು ಅವು ಅನೇಕಾನೇಕ ಬೀಸಣಿಗೆಗಳನ್ನು ಸೃಷ್ಟಿಸಿವೆ. ಇವೇ ವಿಖ್ಯಾತ ‘ಬಂಗಾಳದ ಬೀಸಣಿಗೆಗಳು’. ಈ ಮೂರೂ ನದಿಗಳು ಸೇರಿ, ಸಾಗರಕ್ಕೆ ವಿಶ್ವದ ಎಲ್ಲ ನದಿಗಳಿಗಿಂತ ಹೆಚ್ಚಿನ ಕೆಸರನ್ನು ತಂದು ಸುರಿದಿವೆ ಎಂಬುದು ಒಂದು ಅದ್ಭುತ ವಿಸ್ಮಯ. ಸಾಗರದಲ್ಲಿ ಹರಡಿರುವ ಈ ಬೀಸಣಿಗೆಯ ವಿಸ್ತೀರ್ಣ ಹೆಚ್ಚು ಕಮ್ಮಿ ಉತ್ತರಪ್ರದೇಶ ರಾಜ್ಯದಷ್ಟು ವಿಶಾಲವಾದದ್ದು.

ಗಂಗ-ಬ್ರಹ್ಮಪುತ್ರ ಮುಖಜ ಭೂಮಿಯಲ್ಲಿ ಕೆಸರು ದಪ್ಪನಾಗಿ ಪೇರಿಸಲ್ಪಟ್ಟು ಸಣ್ಣಪುಟ್ಟ ನಡುಗಡ್ಡೆ, ದ್ವೀಪಗಳಾಗಿ ಇವುಗಳಲ್ಲಿ ಮ್ಯಾನ್‌ಗ್ರೋವ್ ಅರಣ್ಯಗಳು ಹುಟ್ಟಿಕೊಂಡವು. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾ ದೇಶಗಳಲ್ಲಿ ಹತ್ತು ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣದ ಸುಂದರಬನ ಕಾಡುಗಳು ಹುಟ್ಟಿಕೊಂಡದ್ದು ಹೀಗೆ. ಅವು ಉದುರಿಸುವ ಎಲೆ ಕಾಂಡಗಳಿAದ ಇನ್ನಷ್ಟು ಇಂಗಾಲವು ಸಾಗರ ತಳವನ್ನು ಸೇರುತ್ತಿದೆ.

ಮೂರನೆಯ ಧ್ರುವ

ಕಳೆದು ಐವತ್ತು ಮಿಲಿಯನ್ ವರ್ಷಗಳಿಂದಲೂ ಬೆಳೆಯುತ್ತಿರುವ ಹಿಮಾಲಯ ಪರ್ವತದಲ್ಲಿ ವಿಶ್ವದ ಅತಿ ಎತ್ತರವಾದ ಹದಿನಾಲ್ಕು ಶಿಖರಗಳಿವೆ. ಇದರಲ್ಲಿ 8848 ಮೀಟರ್ ಎತ್ತರವಿರುವ ಎವರೆಸ್ಟ್ ಶಿಖರವು ಕಳಶಪ್ರಾಯವಾದುದು. ಹಿಮಾಲಯವು ಜಗತ್ತಿನಲ್ಲಿಯೇ ಅತ್ಯಂತ ಚಿಕ್ಕ ವಯಸ್ಸಿನ ಹಾಗೂ ವೇಗವಾಗಿ ಬೆಳೆಯುತ್ತಿರುವ ಪರ್ವತ ಶ್ರೇಣಿ. ನಂಗಾ ಪರ್‌ಬತ್ ಎಂಬಲ್ಲಿ ಅದು ವರ್ಷಕ್ಕೆ 10 ಮಿ.ಮಿ ವೇಗದಲ್ಲಿ ಬೆಳೆಯುತ್ತಿದೆ. ಪರ್ವತವೂ ವೇಗವಾಗಿ ಸವಕಳಿಗೊಳಪಟ್ಟಿದೆ ಎಂಬುದು ನಿಜವಾದರೂ ಅದು ಬೆಳೆಯುತ್ತಲೇ ಇರುತ್ತದೆ. ಸುತ್ತಲಿನ ಎಲ್ಲ ಜೀವನದಿಗಳಿಗೆ ಒದಗಿಸಲು ಇನ್ನಷ್ಟು ಮಂಜುಗಡ್ಡೆಯನ್ನು ಶೇಖರಿಸುತ್ತಲೂ ಇರುತ್ತದೆ. ಜಗತ್ತಿನ ಹವಾಮಾನದ ಮೇಲೆ ತನ್ನ ಅದ್ಭುತ ಪರಿಣಾಮವನ್ನು ಬೀರುತ್ತಲೂ ಇರುತ್ತದೆ. ಆದ್ದರಿಂದ ವಿಜ್ಞಾನಿಗಳು ಹಿಮಾಲಯ ಮತ್ತು ಟಿಬೆಟ್ ಪ್ರಸ್ಥಭೂಮಿಯನ್ನು ‘ಮೂರನೆಯ ಧ್ರುವ’ ಎಂದು ಕರೆದಿದ್ದಾರೆ.

ಜೀವವಿಕಾಸ ಮತ್ತು ಹಿಮಾಲಯ

ಟೆತಿಸ್ ಸಮುದ್ರವು ಒಣಗಿದನಂತರ ಹಿಮಾಲಯ ಮತ್ತು ಅದರ ನದಿಗಳು, ಆ ಸಮುದ್ರ ತೀರದಲ್ಲಿನ ಎಲ್ಲ ಸಸ್ಯ ಮತ್ತು ಪ್ರಾಣಿಗಳ ವಿಕಸನದ ಮೇಲೆ ಪರಿಣಾಮ ಬೀರಿದವು. ವಿಶಾಲ ಭಾರತದ ಭೂಭಾಗ ಮತ್ತು ಯುರೇಶಿಯಾ ಡಿಕ್ಕಿ ಹೊಡೆದಾಗ ಆದ ಹವಾಮಾನ ಬದಲಾವಣೆಯು ದಕ್ಷಿಣ ಏಷ್ಯಾದಲ್ಲಿ ಸಸ್ತನಿಗಳ (ತನ್ನ ಮರಿಗಳಿಗೆ ಎದೆಹಾಲೂಡಿಸುವ, ಮುಂದುವರೆದ ಪ್ರಾಣಿಗಳು) ವಿಕಸನಕ್ಕೆ, ಅಭಿವೃದ್ಧಿಗೆ ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸಿತು. ಇದರಿಂದಾಗಿ ಯುರೇಶಿಯಾದಿಂದ ಭಾರತಕ್ಕೆ ಸಸ್ತನಿಗಳ ಮೆರವಣಿಗೆಯೇ ಹೊರಟು ಬಂದಿತು. ಸಣ್ಣ ಆಕಾರದ ಪ್ರಾಣಿಗಳು ದೊಡ್ಡ ಪ್ರಾಣಿಗಳಾಗುತ್ತಾ ನಡೆದವು. ಬೃಹತ್ ಗಾತ್ರದ ಸಸ್ಯಾಹಾರಿಗಳೂ ಕಾಣಿಸಿಕೊಂಡವು. ಆದರೆ ಅವು ತಮ್ಮ ಮುಂಚಿನ ಡೈನೊಸಾರ್‌ಗಳಂತೆ ಅಳಿಯದೆ, ವಾತಾವರಣಕ್ಕೆ ಹೊಂದಿಕೊಂಡು ಬಾಳಿದವು.

ಟೆತಿಸ್ ಸಮುದ್ರ ಒಣಗಿದಾಗಿ ಮನುಷ್ಯನ ದೃಷ್ಟಿಯಿಂದ ಮುಖ್ಯವಾದ ಇನ್ನೊಂದೆರಡು ಗಮನಾರ್ಹ ಬದಲಾವಣೆಗಳೂ ಘಟಿಸಿದವು. ಪಾಂಗೇ ಮತ್ತು ಗೊಂಡ್ವಾನಾ ಎಂಬ ಬೃಹತ್ ಖಂಡಗಳು ನಮಗೆ ಕಲ್ಲಿದ್ದಲನ್ನು ನೀಡಿವೆ ನಿಜ, ಆದರೆ ನಮಗೆ ಪೆಟ್ರೋಲಿಯಂ ಅನ್ನು ಒದಗಿಸಿದ್ದು ಮಾತ್ರ ಈ ಒಣಗಿದ ಟೆತಿಸ್ ಸಮುದ್ರವೇ. ಇದಲ್ಲದೆ ಟೆತಿಸ್, ಕಛ್ ಮುಂತಾದ ಪ್ರದೇಶಗಳಲ್ಲಿ ಪೊಟಾಶಿಯಮ್ ನೈಟ್ರೇಟ್, ಗಂಧಕ ಮುಂತಾದವಿರುವ ಸಾಲ್ಟ್ ಪೀಟರ್ ಮುಂತಾದ ಅನೇಕ ಉಪಯುಕ್ತ ಲವಣದ ಗಣಿಗಳನ್ನೂ ಸೃಷ್ಟಿಸಿತು. ಸಾಲ್ಟ್ ಪೀಟರ್‌ನಿಂದ ಬಂದೂಕಿನ ಮದ್ದಿನ ಪುಡಿ ಸೃಷ್ಟಿಸುವ ಪ್ರಯತ್ನ ನಡೆದು ಅದರ ಮೂಲಕ ಆಧುನಿಕ ರಸಾಯನಿಕ ಶಾಸ್ತ್ರದ ಬೆಳವಣಿಗೆಗೆ ಉತ್ತೇಜನ ದೊರೆಯಿತು.

ಮಾನವ ನಾಗರಿಕತೆಯ ಮೇಲೆ ದೈತ್ಯ ಹಿಮಾಲಯ ಪರ್ವತದ ಪ್ರಭಾವವು ಆ ಪರ್ವತದಷ್ಟೇ ಅಗಾಧವಾಗಿದೆ.

ಸಂಗ್ರಹಾನುವಾದ: ಡಾ.ಬಿ.ಆರ್.ಮಂಜುನಾಥ್

 

 

 

 

 

 

 

 

Leave a Reply

Your email address will not be published.