ಇಂದಿಗೂ ಕನ್ನಡವಾಗಿದ್ದೇವೆ!

-ಡಾ.ಉಮಾ ವೆಂಕಟೇಶ್

ಒಳನಾಡ ಕನ್ನಡಿಗರಲ್ಲಿ ಉದ್ಯಮಶೀಲತೆ ಬೆಳೆಸಲು, ಹೊರನಾಡ ಕನ್ನಡಿಗರ ಆರ್ಥಿಕ ಸಂಪನ್ನತೆ ಮತ್ತು ಸೃಜನಶೀಲತೆಗಳ ಸದುಪಯೋಗ ಪಡೆದುಕೊಳ್ಳುವ ಮಾರ್ಗಗಳನ್ನು ಸರ್ಕಾರ ಹುಡುಕಬೇಕು. ನಮ್ಮ ಸರ್ಕಾರಿ ಅಧಿಕಾರಿಗಳು, ಹೊರನಾಡ ಕನ್ನಡ ಸಂಘಗಳ ಸಮಾರಂಭಗಳು ಕೇವಲ ತಮ್ಮ ಐಷಾರಾಮಿ ವಿದೇಶಿ ಯಾತ್ರೆಗೆ ಒಂದು ಅವಕಾಶವೆಂದು ಬಗೆಯಬಾರದು; ಇಂತಹ ಸಮ್ಮೇಳನಗಳು ಒಳನಾಡಿನ ಕನ್ನಡಿಗರ ಹಿತಾಸಕ್ತಿಗಳನ್ನು, ಅನಿವಾಸಿ ಕನ್ನಡಿಗರೊಂದಿಗೆ ಬೆಸೆಯುವ ಸುವರ್ಣಾವಕಾಶಗಳೆಂದು ಭಾವಿಸಬೇಕು.

ಉತ್ತಮ ಭವಿಷ್ಯವನ್ನರಸುತ್ತಾ ತಾಯ್ನಾಡನ್ನು ತೊರೆದು ವಲಸೆ ಹೋಗುವ ಪ್ರವೃತ್ತಿ 6-7 ದಶಕಗಳಿಂದ ನಡೆಯುತ್ತಲೇ ಇದೆ. 60-70ರ ದಶಕದಲ್ಲಿ ಅಮೆರಿಕ, ಮಧ್ಯಪ್ರಾಚ್ಯ ದೇಶಗಳು, 80-90ರ ದಶಕದಲ್ಲಿ ಯು.ಕೆ., 2000ರ ನಂತರ ಮಾಹಿತಿ ತಂತ್ರಜ್ಞಾನದ ವೃತ್ತಿಯನ್ನರಸಿ ಅಮೆರಿಕೆ, ಆಸ್ಟ್ರೇಲಿಯಾ ದೇಶಗಳಿಗೆ ಧಾವಿಸಿರುವ ಭಾರತೀಯರ ಸಂಖ್ಯೆ ಗಣನೀಯವಾಗಿದೆ. ಈ ವಲಸಿಗ ಸಮುದಾಯದಲ್ಲಿ ಕನ್ನಡಿಗರೂ ಇದ್ದಾರೆ. ತಮ್ಮ ಜೀವನದಲ್ಲಿ ಹೆಚ್ಚಿನದನ್ನು ಸಾಧಿಸುವ, ಉತ್ತಮ ಗುಣಮಟ್ಟದ ಜೀವನ ನಡೆಸುವ ಹಕ್ಕು ಎಲ್ಲರಿಗೂ ಇದೆ. ಅದಕ್ಕಾಗಿ ತಮ್ಮ ಜನ್ಮಭೂಮಿಯನ್ನು ಬಿಟ್ಟು, ಕರ್ಮಭೂಮಿಯತ್ತ ನಡೆಯುವ ಪರಿಪಾಠ ಹೊಸದೇನಲ್ಲ. ಇಂದು ಪ್ರಪಂಚದಾದ್ಯಂತ ವಿವಿಧ ವೃತ್ತಿಗಳಲ್ಲಿ ನಿರತರಾದ ಕನ್ನಡಿಗರ ಸಂಖ್ಯೆ ಬಹುಶಃ 4 ಲಕ್ಷಕ್ಕೂ ಮೀರಿ ಇರಬಹುದು.

ಈಗ 22 ವರ್ಷಗಳಿಂದ ಯು.ಕೆ. ಮತ್ತು ಸದ್ಯ ಅಮೆರಿಕೆಯಲ್ಲಿ ವಾಸಿಸುತ್ತಿರುವ ಕನ್ನಡಿಗರಲ್ಲಿ ನನ್ನ ಕುಟುಂಬವೂ ಒಂದು. ವಿಜ್ಞಾನದಲ್ಲಿ ಉತ್ತಮ ಸಾಧನೆಗೈಯ್ಯುವ ಉದ್ದೇಶದಿಂದ, 90ರ ದಶಕದಲ್ಲಿ ಯುಕೆ ದ್ವೀಪಕ್ಕೆ ವಲಸೆ ಬಂದ ನಾವು, ಇಲ್ಲಿಯೆ ನಮ್ಮ ನೆಲೆ ಕಂಡುಕೊಡಿದ್ದೇವೆ. ನಮ್ಮ ಮಕ್ಕಳು ಇಲ್ಲಿನ ವಾತಾವರಣದಲ್ಲಿ ಬೆಳೆದು, ಇಲ್ಲಿನ ಶಾಲೆ-ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿ, ಈಗ ವಿಜ್ಞಾನದಲ್ಲೇ ತಮ್ಮ ಭವಿಷ್ಯವನ್ನು ಕಂಡುಕೊಳ್ಳುವಲ್ಲಿ ಮಗ್ನರಾಗಿದ್ದಾರೆ. ನಮ್ಮ ತಾಯ್ನಾಡನ್ನು ಬಿಟ್ಟು, ಇಲ್ಲಿ ನೆಲೆ ಕಂಡುಕೊಂಡ ನಮಗೆ, ನಮ್ಮ ಗುರಿ ತಲುಪಿದ ತೃಪ್ತಿಯಂತೂ ಇದೆ. ಈ ಎರಡು ದಶಕಗಳಲ್ಲಿ ನಮ್ಮ ಜೀವನಶೈಲಿಯಲ್ಲಿ ಕನ್ನಡತನದ ಪ್ರಭಾವ ಯಾವ ರೀತಿಯಲ್ಲೂ ಕಡಿಮೆಯಾಗಿಲ್ಲ.

ನಮ್ಮ ಸಂಸ್ಕೃತಿಯ ಮುಖ್ಯ ಅಂಗವಾದ ನಮ್ಮ ಸಿರಿಗನ್ನಡ ಭಾಷೆಯನ್ನು ನಾವು, ನನ್ನ ಮಕ್ಕಳು ದಿನನಿತ್ಯ ನುಡಿಯುತ್ತಿದ್ದೇವೆ. ಕನ್ನಡ ಪುಸ್ತಕಗಳನ್ನು ಓದಿ, ಕನ್ನಡದಲ್ಲಿ ಲೇಖನಗಳನ್ನು ಬರೆಯುವ ಪರಿಪಾಠವನ್ನು ನಡೆಸಿಕೊಂಡು ಬರುತ್ತಿದ್ದೇನೆ. ನಮ್ಮ ಕನ್ನಡ ಸಂಘಗಳ ಸಾಂಸ್ಕೃತಿಕ ಸಭೆಗಳಲ್ಲಿ, ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದು ನಮ್ಮ ಕನ್ನಡತನವನ್ನು ಬಿಡದೆ ನಡೆಸಿಕೊಂದು ಹೋಗುವ ಪ್ರಯತ್ನ ನಿರಂತರವಾಗಿ ನಡೆಸಿದ್ದೇವೆ. ಇದು ಕೇವಲ ನನ್ನ ಕುಟುಂಬವಷ್ಟೇ ಅಲ್ಲಾ, ನನಗೆ ತಿಳಿದ ಅನೇಕ ಕನ್ನಡಿಗರ ಜೀವನಶೈಲಿಯೂ ಹೌದು. ಈಗಂತೂ ಯು.ಕೆ., ಅಮೆರಿಕ ಮತ್ತು ಗಲ್ಫ್ ದೇಶಗಳಲ್ಲಿ ಕನ್ನಡ ಕಲಿ ಕಾರ್ಯಕ್ರಮವನ್ನು ನಮ್ಮ ಸರ್ಕಾರದ ಬೆಂಬಲದಿಂದ ಯಶಸ್ವಿಯಾಗಿ ನಡೆಸುತ್ತಿರುವ ಕನ್ನಡ ಸಂಘಗಳು, ತಮ್ಮ ಕೈಲಾದಷ್ಟೂ ನಮ್ಮತನವನ್ನು ಮುಂದಿನ ಪೀಳಿಗೆಯಲ್ಲಿ ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಕನ್ನಡ ಸಿನಿಮಾಗಳ ಪ್ರದರ್ಶನಗಳನ್ನೂ ಆಗಾಗ್ಗೆ ಕಾಣಬಹುದಾಗಿದೆ.

ಒಂದು ಸಂಸ್ಕೃತಿಗೆ ಕೇವಲ ಭಾಷೆಯಲ್ಲದೇ, ಸಂಗೀತ, ನಾಟಕ, ಸಿನಿಮಾ, ತಿಂಡಿ-ತಿನಿಸು, ವೇಷ-ಭೂಷಣಗಳು ಹೀಗೆ ಹಲವಾರು ಮುಖಗಳಿವೆ. ಇವೆಲ್ಲವನ್ನೂ ಒಟ್ಟಿಗೆ ಬೆಸೆಯುವ ಒಂದು ಕೊಂಡಿಯೆಂದರೆ ಭಾಷೆ ಎನ್ನುವ ಮಾತು ಸತ್ಯವಾದ ಸಂಗತಿ. ಅದರಲ್ಲೇ ಸರ್ವಸ್ವವೂ ಅಡಗಿದೆ ಎನ್ನುವುದು ನನ್ನ ಭಾವನೆ. ಭಾಷೆ ನಾಶವಾದರೆ, ಒಂದು ಸಂಸ್ಕೃತಿಯೇ ನಾಶವಾಗುತ್ತದೆ. ನಮ್ಮ ಭಾಷೆಯನ್ನು ಜೀವಂತವಾಗಿಡುವ ಜವಾಬ್ದಾರಿ, ನಮ್ಮ ಕುಟುಂಬಗಳಲ್ಲಿ ತಂದೆ-ತಾಯಿಯರದು. ಬಿಡದೆ ಮಕ್ಕಳ ಕೈಯಲ್ಲಿ ನಮ್ಮ ಭಾಷೆಯಲ್ಲೇ ಮಾತನಾಡುತ್ತಿದ್ದರೆ, ಎಳೆ ವಯಸ್ಸಿನಲ್ಲಿ ಸುಮಾರು 4-5 ಭಾಷೆಗಳನ್ನು ಸಲೀಸಾಗಿ ಕಲಿಯುವ ಸಾಮಥ್ರ್ಯವಿರುವ ಮಕ್ಕಳು, ಖಂಡಿತಾ ಕನ್ನಡವನ್ನೂ ಕಲಿಯಬಲ್ಲರು ಎಂದು ವಿಶ್ವಾಸದಿಂದ ಹೇಳಬಲ್ಲೆ.

ಆದರೆ ಇಲ್ಲಿ ಒಂದು ವಿಷಯವನ್ನು ಒತ್ತಿ ಹೇಳಬೇಕಾಗಿದೆ. ನಮ್ಮ ಕನ್ನಡದ ಕುಟುಂಬಗಳಲ್ಲಿ, ಬಿಡದೆ ಕನ್ನಡ ಭಾಷೆಯಲ್ಲೇ ತಮ್ಮ ಮಕ್ಕಳೊಂದಿಗೆ ವ್ಯವಹರಿಸುವ ತಂದೆತಾಯಿಯರು ಬಹಳಷ್ಟು ಮಂದಿ ಇದ್ದಾರೆ ನಿಜ. ಆದರೆ ಬಹಳಷ್ಟು ಕನ್ನಡ ಕುಟುಂಬಗಳಲ್ಲಿ, ಒಂದು ರೀತಿಯ ಪೂರ್ವಗ್ರಹ ಪೀಡಿತರಾಗಿರುವ ಅಪ್ಪ-ಅಮ್ಮಂದಿರು, ಇಂಗ್ಲಿಷ್ ಜೊತೆಗೆ ಕನ್ನಡವನ್ನು ಕಲಿಸಿದರೆ ತಮ್ಮ ಮಕ್ಕಳಿಗೆ ಬಹಳ ಕನ್ಫ್ಯೂಸ್ ಆಗುತ್ತದೆ ಎನ್ನುವ ಅಸಂಬದ್ಧ ವಿವರಣೆ ನೀಡಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದನ್ನು ಕಾಣಬಹುದು. ಆದರೆ ಇದೇ ಮಾತಾ-ಪಿತೃಗಳು, ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಇತರ ಯೂರೋಪ್ ದೇಶದ ಭಾಷೆಗಳಾದ  ಪ್ರೆಂಚ್ , ಜರ್ಮನ್ ಮತ್ತು ಸ್ಪಾನಿಷ್ ಕಲಿಯಲು ಬಹಳಷ್ಟು ಪ್ರೋತ್ಸಾಹವನ್ನೂ ನೀಡುತ್ತಿದ್ದಾರೆ! ಅಂದರೆ ಅವರ ಮಟ್ಟಿಗೆ ಕೇವಲ ಕನ್ನಡ ಕಲಿತರೆ ಮಾತ್ರ ಕನ್ಫ್ಯೂಶನ್, ಇತರ ಯೂರೋಪ್ ಭಾಷೆಗಳನ್ನು ಕಲಿತರೆ ಆ ಸಮಸ್ಯೆಯಿಲ್ಲ. ಇದು ತೀರಾ ಅವೈಜ್ಞಾನಿಕ ವಿವರಣೆ. ಆದರೆ ಈ ತಂದೆ-ತಾಯಿಯರು, ಕನ್ನಡ ಸಂಘಗಳು ಈ ಕಾರ್ಯವನ್ನು ನಿಭಾಯಿಸಬೇಕು ಎನ್ನುವ ನಿರೀಕ್ಷಣೆ ಇಟ್ಟುಕೊಂಡು, ಸುಲಭವಾಗಿ ಮತ್ತೊಮ್ಮೆ ತಮ್ಮ ಜವಾಬ್ದಾರಿಯನ್ನು ಸಂಘಗಳ ಮೇಲೆ ಹೊರಿ ಸುವ ಪ್ರಯತ್ನ ನಡೆಸಿದ್ದಾರೆ.

ಏನೇ ಆಗಲಿ, ಇಲ್ಲಿ ನಮ್ಮತನವನ್ನು ಬಿಡದೆ ನಡೆಸಿಕೊಂಡು ಹೋಗುವ ಛಲ ಇದೆ. ಹಾಗಾಗಿ 2 ವರ್ಷಗಳಿಗೊಮ್ಮೆ ಅಮೆ ರಿಕೆಯಲ್ಲಿ ನಡೆಯುವ ಅಕ್ಕ ಮತ್ತು ನಾವಿಕ ಸಮ್ಮೇಳನಗಳು ನನ್ನ ಮಟ್ಟಿಗೆ ಒಂದು ರೀತಿಯಲ್ಲಿ ಬಹಳ ಮಹತ್ವಪೂರ್ಣ ಸಮಾರಂಭಗಳು. ಇಂತಹ ಸಮ್ಮೇಳನಗಳಲ್ಲಿ ಕೇವಲ ಜಾತ್ರೆಯಂತೆ ನೆರೆಯುವ ಕನ್ನಡಿಗರು, ಕನ್ನಡದ ಭಾಷೆಯ ಬಗ್ಗೆ ಎಷ್ಟರ ಮಟ್ಟಿಗೆ ಚರ್ಚೆ ನಡೆಸುತ್ತಾರೆ; ಅದರಿಂದ ನಮ್ಮ ಭಾಷೆಯ ಭವಿಷ್ಯಕ್ಕೆ ಪ್ರಯೋಜನವಿದೆಯೇ; ಈ ಸಮ್ಮೇಳನಗಳು ಕೇವಲ ಹೊರನಾಡ ಕನ್ನಡಿಗರು ತಮ್ಮ ಆರ್ಥಿಕ ಸಂಪನ್ನತೆಯನ್ನು ಮೆರೆಯುತ್ತಾ, ಹರಟೆ ಹೊಡೆಯುವ ವೇದಿಕೆಗಳೇ; ಇದರಿಂದ ಕನ್ನಡ ನಾಡಿನ ಜನಸಮುದಾಯಕ್ಕೆ ಯಾವ ಪ್ರಯೋಜನ; ಈ ಸಮ್ಮೇಳನಗಳಲ್ಲಿ ಭಾಗವಹಿಸಲು ನಾಮುಂದು ತಾಮುಂದು ಎನ್ನುವ ನಮ್ಮ ರಾಜಕಾರಣಿಗಳು, ಕಲಾವಿದರು ನಮ್ಮ ಸರ್ಕಾರದ ಹಣವನ್ನು ಪೋಲುಮಾಡುತ್ತಿರುವರೇ; ಹೀಗೆ ಹಲವು ಹತ್ತು ಪ್ರಶ್ನೆಗಳು ಕಳಕಳಿಯ ಕನ್ನಡಿಗರಲ್ಲಿ ಏಳುವುದು ಸಹಜವೇ.

ಈ ಸಮ್ಮೇಳನಗಳಲ್ಲಿ ಹತ್ತಾರು ಪರ್ಯಾಯ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಜನ ತಮ್ಮತಮ್ಮ ಅಭಿರುಚಿಗೆ ತಕ್ಕಂತಹ ಸಭೆಗಳಲ್ಲಿ ಕುಳಿತು ಆನಂದಿಸುತ್ತಾರೆ. ಇಂತಹ ಸಭೆಗಳಲ್ಲಿ ಗಂಭೀರವಾದ ಸಾಹಿತ್ಯ, ಭಾಷೆಯ ಭವಿಷ್ಯದ ಬಗ್ಗೆ ಚರ್ಚೆಗಳು ನಡೆದರೂ, ಅದರಲ್ಲಿ ಅಲ್ಲಿ ನೆರೆಯುವ ಎಲ್ಲಾ ಕನ್ನಡಿಗರೂ ಭಾಗವಹಿಸುವುದಿಲ್ಲ. ಅಷ್ಟೇ ಏನು, ನಮ್ಮ ಕನ್ನಡ ನಾಡಿನಿಂದ ಬಂದ ಪ್ರಮುಖರೂ ಎಷ್ಟೋ ಬಾರಿ ಆ ಸಭೆಗಳಲ್ಲಿ ಕಾಣಸಿಗುವುದಿಲ್ಲ! ಆದರೂ, ಈ ಸಮ್ಮೇಳನಗಳು ಸಾವಿರಾರು ಕನ್ನಡಿಗರನ್ನು ಒಂದೇ ಸ್ಥಳದಲ್ಲಿ ಒಗ್ಗೂಡಿಸುವ ಸುವರ್ಣ ಅವಕಾಶಗಳು ಎನ್ನುವುದು ನನ್ನ ಅಭಿಪ್ರಾಯ. ಕಲೆ-ಸಂಸ್ಕೃತಿಗಳ ಜೊತೆಗೆ, ಈ ಸಮ್ಮೇಳನಗಳಲ್ಲಿ, ಅನಿವಾಸಿ-ಕನ್ನಡ ಸಮುದಾಯದ ಹಿರಿಯ ಯಶಸ್ವಿ ಉದ್ಯಮಿಗಳು ಮತ್ತಿತರ ವೃತ್ತಿಪರರು ಒಟ್ಟುಗೂಡಿ ವಿಚಾರವಿನಿಮಯ ಮಾಡಿಕೊಳ್ಳುತ್ತಾರೆÉ. ಅಷ್ಟೇ ಅಲ್ಲ, ಹೊರನಾಡ ಕನ್ನಡ ಸಮುದಾಯದ ಲೇಖಕ-ಲೇಖಕಿಯರು ಬಹಳ ಹುರುಪಿನಿಂದ ತಾವು ಬರೆದ ಪುಸ್ತಕಗಳನ್ನು ಪ್ರಕಟಿಸಿ ಅದನ್ನು ಈ ಸಮಾರಂಭಗಳಲ್ಲಿ, ನಮ್ಮ ನಾಡಿನ ಆಹ್ವಾನಿತ ಸಾಹಿತಿಗಳ ಕೈಯ್ಯಲ್ಲಿ ಬಿಡುಗಡೆಯನ್ನೂ ಮಾಡಿಸುತ್ತಾರೆ. ಇದು ನಮ್ಮ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಇನ್ನೂ ಇಲ್ಲಿಯ ಕನ್ನಡಿಗರಲ್ಲಿ ತುಂಬಿರುವ ಅಭಿಮಾನ ಮತ್ತು ಹೆಮ್ಮೆಯ ಪ್ರತೀಕವಲ್ಲವೇ? ಜೊತೆಗೆ ಈ ಸಾಹಿತಿಗಳು ರಚಿಸುತ್ತಿರುವ ಸಾಹಿತ್ಯದ ಮಟ್ಟವೂ ಉತ್ತಮವಾದದ್ದು ಎನ್ನುವುದಕ್ಕೆ ಅನೇಕ ನಿದರ್ಶನಗಳಿವೆ.

ರಸ-ಭಾವಗಳಿಲ್ಲದ ನೃತ್ಯ ಪ್ರದರ್ಶನ !

ಇಲ್ಲಿನ ಕೆಲವು ಕುಟುಂಬಗಳ ತಾಯಿಯರು ಮನೆಯಲ್ಲಿ ಮಕ್ಕಳೊಂದಿಗೆ ಟಸ್-ಪುಸ್ ಇಂಗ್ಲಿಷ್ ಮಾತನಾಡಿ, ಮಕ್ಕಳು ತಾವೇ ಹೊರಗೆ ಹೋಗಿ ಕನ್ನಡ ಸಂಘದಲ್ಲಿ ಕನ್ನಡ ಕಲಿಯಬೇಕು ಎನ್ನುವ ನಿರೀಕ್ಷಣೆ ಇಟ್ಟುಕೊಳ್ಳುತ್ತಾರೆ. ಇದು ಹೇಗೆ ಸಾಧ್ಯ? ಈ ಮಕ್ಕಳನ್ನು ಕರ್ನಾಟಕ ಸಂಗೀತ, ಭರತನಾಟ್ಯಗಳಂತಹ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೇರಿಸಿಬಿಡುತ್ತಾರೆ. ಈ ಮಕ್ಕಳು ಈ ಕಲೆಗಳಲ್ಲಿ ನುರಿತು, ಆದಷ್ಟು ಬೇಗ ರಂಗಪ್ರವೇಶ ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆ ಬೇರೆ. ಈ ಕಲೆಗಳನ್ನು ಕಲಿಸುವ ಈ ಮಕ್ಕಳ ಉಪಾಧ್ಯಾಯರಿಗೂ ಕನ್ನಡ ಮತ್ತು ಇತರ ದಕ್ಷಿಣಾದಿ ಭಾಷೆಗಳಲ್ಲಿರುವ ಪರಿಣತಿ ಇದ್ದರೂ ಕೂಡಾ, ಈ ನೃತ್ಯ-ಸಂಗೀತ ಶಾಲೆಗಳಲ್ಲಿ ಮಾತನಾಡುವ ಭಾಷೆ ಇಂಗ್ಲಿಷ್! ನಮ್ಮ ಸಂಗೀತ ನೃತ್ಯಗಳಲ್ಲಿ ಬರುವ ಪ್ರತಿಯೊಂದು ಕೀರ್ತನೆ, ದಾಸಪದಗಳು ನಮ್ಮ ಭಾಷೆಯಲ್ಲಿವೆ. ಆದರೆ ಆ ಸಾಹಿತ್ಯವನ್ನು ಈ ಶಿಕ್ಷಕ-ಶಿಕ್ಷಕಿಯರು, ಮಕ್ಕಳಿಗೆ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿ ವಿವರಿಸುತ್ತಾರೆ. ನಮ್ಮ ಭಾಷೆ-ಸಾಹಿತ್ಯದ ಗಂಧವೇ ಇಲ್ಲದ ಈ ಮಕ್ಕಳು, ತಮ್ಮ ಅಭಿನಯದಲ್ಲಿ ಇಂಗ್ಲಿಷ್ ಭಾಷೆಯ ಮೂಲಕ ಕಲಿತ ಭಾವವನ್ನು ಪರಿಪೂರ್ಣವಾಗಿ ಪ್ರದರ್ಶಿಸಬೇಕು ಎನ್ನುವ ನಿರೀಕ್ಷಣೆ ಬೇರೆ.

ಈ ಮಕ್ಕಳು ಮಾಡುವ ನೃತ್ಯ ಪ್ರದರ್ಶನಗಳಲ್ಲಿ, ನಮ್ಮ ಕೀರ್ತನೆ ಮತ್ತು ದಾಸ ಸಾಹಿತ್ಯದಲ್ಲಿರುವ ಯಾವ ನವರಸ-ಭಾವನೆಗಳೂ ಕಾಣಸಿಗುವುದಿಲ್ಲ. ನಮ್ಮ ಸಾಹಿತ್ಯದದಲ್ಲಿರುವ ಪದಗಳ ಅರ್ಥ ಮತ್ತು ಸೊಗಡನ್ನು ಅನುಭವಿಸದೆ, ನಿರ್ವಿಕಾರವಾಗಿ ನರ್ತಿಸಲು ಪ್ರಯತ್ನಿಸುವ ಈ ಮಕ್ಕಳನ್ನು ನೋಡಿದಾಗ ಸ್ವಲ್ಪ ಕನಿಕರದ ಭಾವನೆ ಉಂಟಾಗುತ್ತದೆ. ಅಲ್ಲದೇ ಈ ಮಕ್ಕಳ ತಂದೆ-ತಾಯಿಯರ ಮೇಲೆ ಸಿಟ್ಟು ಕೂಡಾ ಬರುತ್ತದೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿರುವ ಈ ಕೃತಿಗಳ ಸಾಹಿತ್ಯದ ಭಾವವನ್ನು, ಇಂಗ್ಲಿಷ್ ಭಾಷೆಯಲ್ಲಿ ನಿಭಾಯಿಸುವುದು ಸ್ವಲ್ಪ ಆಭಾಸವೇ ಸರಿ! ಆದರೆ, ಅನೇಕ ಕುಟುಂಬಗಳಲ್ಲಿ ಮಾತಾ-ಪಿತೃಗಳು ಮಕ್ಕಳನ್ನು ನಮ್ಮ ಭಾಷೆಯಲ್ಲಷ್ಟೇ ಅಲ್ಲ, ಕಲೆ-ಸಾಹಿತ್ಯಗಳಲ್ಲೂ ಮುಂದುವರೆಸಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ.

ಅಮೆರಿಕನ್ನಡಿಗ ಲೇಖಕರು ನಮ್ಮ ಕನ್ನಡನಾಡಿನ ಪತ್ರಿಕೆ ಮತ್ತು ಮಾಸಿಕಗಳಲ್ಲಿ ಲೇಖನ, ಅಂಕಣಗಳನ್ನು ಬರೆಯುತ್ತಾರೆ. ಹೊರನಾಡ ಕನ್ನಡ ಲೇಖಕರಿಗೆ, ಕರ್ನಾಟಕದಲ್ಲಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುತ್ತಲಿದ್ದಾರೆ ಎನ್ನುವುದು ಬಹಳ ಪ್ರೋತ್ಸಾಹಕರ ವಿಷಯ. ನನ್ನ ಮಟ್ಟಿಗೆ, ಹೊರನಾಡ ಕನ್ನಡ ಲೇಖಕರು ತಮ್ಮ ವೃತ್ತಿಪರ ಮತ್ತು ಇಲ್ಲಿನ ಜೀವನ ಅನುಭವಗಳಿಂದ ಕೂಡಿದ ಸಾಹಿತ್ಯವನ್ನು ರಚಿಸಿ, ನಮ್ಮ ಕನ್ನಡ ಸಾಹಿತ್ಯವನ್ನು ಸಂಪನ್ನಗೊಳಿಸುತ್ತಿರುವುದರಲ್ಲಿ ಸಂದೇಹವೇ ಇಲ್ಲ.

ಹಾಗಾಗಿ ಅನಿವಾಸಿ ಕನ್ನಡಿಗರು ಮತ್ತು ಅವರ ಕೌಶಲ್ಯಗಳು, ನಮ್ಮ ನಾಡಿಗೆ ಮತ್ತು ಜನತೆಗೆ ಪ್ರಸ್ತುತವೆಂದು ನನ್ನ ಅಭಿಪ್ರಾಯ. ಹಲವು ಕರ್ನಾಟಕ ಲೇಖಕರು, ಇತ್ತೀಚೆಗೆ ಹೊರನಾಡ ಕನ್ನಡಿಗರ ಪ್ರಸ್ತುತತೆಯನ್ನು ಪ್ರಶ್ನಿಸಿ ಬರೆದ ಲೇಖನ ಓದಿದಾಗ ಸ್ವಲ್ಪ ಗಾಬರಿ ಯಾಯಿತು. ದೇಶ ಬಿಟ್ಟರೂ ಸರಿ, ತಮ್ಮ ಕನ್ನಡತನವನ್ನು ಬಿಡದೆ, ಈ ವಿದೇಶಿ ಪರಿಸರದಲ್ಲಿ ನಮ್ಮತನವನ್ನು ಭದ್ರವಾಗಿ ಹಿಡಿದಿಟ್ಟು, ನಮ್ಮ ಕಲೆ, ಭಾಷೆ ಮತ್ತು ಸಂಸ್ಕೃತಿಗಳನ್ನು ಮುಂದುವರೆಸುವ ಪ್ರಯತ್ನವನ್ನು ಶ್ಲಾಘಿಸದೆ, ಅವರ ಪ್ರಸ್ತುತತೆಯನ್ನು ಪ್ರಶ್ನಿಸಿ ಬರೆದ ಲೇಖನ ಓದಿ ಬಹಳ ನಿರಾಸೆಯೆನಿಸಿತು. ಆ ಲೇಖಕರ ಪ್ರಕಾರ, ಹೊರನಾಡ ಕನ್ನಡಿಗರು ಕೇವಲ ಉದ್ಯೋಗ ಕಲ್ಪಿಸಿದರೆ ಮಾತ್ರ ಒಳನಾಡ ಕನ್ನಡಿಗರಿಗೆ ಪ್ರಸ್ತುತರಾಗುತ್ತಾರೆ. ನಿಜ ಹೊರನಾಡಿನ ಯಶಸ್ವಿ ಉದ್ಯಮಿಗಳು ಈ ಕಾರ್ಯ ನೆರವೇರಿಸಿದರೆ ತಪ್ಪೇನಿಲ್ಲ. ಆದರೆ ಇಂದು ಕರ್ನಾಟಕದಲ್ಲಿ ಈಗಾಗಲೇ ದೊಡ್ಡ ಉದ್ಯಮಗಳು ನಮ್ಮವರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿವೆ. ನಮ್ಮ ಸರ್ಕಾರದ ಜವಾಬ್ದಾರಿ ಇಲ್ಲಿ ಹೆಚ್ಚು ಪ್ರಸ್ತುತವಲ್ಲವೇ? ಸರ್ಕಾರ ಹೊರನಾಡ ಕನ್ನಡ ಉದ್ಯಮಿಗಳೊಂದಿಗೆ ಇಂತಹ ಸಹಭಾಗಿತ್ವವನ್ನು ನಡೆಸಿ, ಒಳನಾಡ ಕನ್ನಡಿಗರಿಗೆ ಉದ್ಯೋಗವಕಾಶ ಕಲ್ಪಿಸಿದರೆ ಅದೊಂದು ಒಳ್ಳೆಯ ಪ್ರಯತ್ನ. ಆದರೆ ಅದನ್ನು ಮಾಡಲಾಗದ ಹೊರನಾಡ ಕನ್ನಡಿಗರು ಅಪ್ರಸ್ತುತರು ಎನ್ನುವ ಹೇಳಿಕೆ ಸ್ವಲ್ಪ ಬಾಲಿಶವಾದದ್ದು.

ಹೊರನಾಡ ಕನ್ನಡ ಸಂಸ್ಥೆಗಳು ಕರ್ನಾಟಕದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ, ಮತ್ತಿತರ ಸೇವಾಕಾರ್ಯಗಳಿಗೆ ದಾನ-ದತ್ತಿಗಳನ್ನು ನೀಡುವ ಸತ್ಕಾರ್ಯವನ್ನು ನಡೆಸುತ್ತಿದ್ದಾರೆ ಎನ್ನುವುದನ್ನು ಮರೆಯಬಾರದು. ಒಂದು ಪೀಳಿಗೆಯಿಂದ, ಮುಂದಿನ ಪೀಳಿಗೆಗೆ ಈ ರೀತಿಯ ಸಂಬಂಧ ಸಡಿಲವಾಗಬಹುದು ಎನ್ನುವ ಸಂಗತಿಯೂ ಸತ್ಯವಾದದ್ದೆ. ಆದರೆ ಹಾಗಾಗಬಾರದು ಎನ್ನುವ ಉದ್ದೇಶದಿಂದಲೇ, ಹೊರನಾಡ ಕನ್ನಡ ಸಂಘಗಳು ಆದಷ್ಟೂ ಶ್ರಮವಹಿಸಿ ನಮ್ಮ ಸಂಸ್ಕೃತಿಯನ್ನು ತಮ್ಮ ಮಕ್ಕಳಲ್ಲಿ ಜೀವಂತ ವಾಗಿಡಲು ಪ್ರಯತ್ನಿಸುತ್ತಿರುವುದು. ಇಂತಹ ಪ್ರಯತ್ನವನ್ನು ಪ್ರೋತ್ಸಾಹಿಸಿ, ಅದಕ್ಕೆ ತಮ್ಮ ಬೆಂಬಲ ನೀಡದೆ, ಅವರ ಪ್ರಸ್ತುತತೆಯನ್ನು ಪ್ರಶ್ನಿಸುವುದು ದುಃಖಕರ ಸಂಗತಿ.

ಇಂದು ಬೆಂಗಳೂರಿನಂತಹ ಮಹಾನಗರದ ಕನ್ನಡಿಗರಲ್ಲೇ ನಮ್ಮ ಭಾಷೆ ಮತ್ತು ನಮ್ಮತನಗಳು ಮಾಯವಾಗುತ್ತಿವೆ ಎಂದು ಇಲ್ಲಿನ ಸಮಾರಂಭಗಳಿಗೆ ಬರುವ ಖ್ಯಾತ ಕನ್ನಡ ಸಾಹಿತಿಗಳು ತಮ್ಮ ಸಂಶಯ ಮತ್ತು ನಿರಾಶಾಭಾವನೆಯನ್ನು ವ್ಯಕ್ತಪಡಿಸಿರುವುದನ್ನು ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ್ದೇನೆ. ಜೊತೆಗೆ ಇಲ್ಲಿ ನಡೆಯುತ್ತಿರುವ ಕನ್ನಡ-ಕಲಿ ಕಾರ್ಯಕ್ರಮಗಳು, ಬಹುಶಃ ನಮ್ಮ ಭಾಷೆಯನ್ನು ಜೀವಂತವಾಗಿಡಲು ಉಳಿದಿರುವ ಒಂದು ಅಶಾಕಿರಣ ಎಂದು ಇತ್ತೀಚೆಗೆ ಖ್ಯಾತಲೇಖಕರು ಬರೆದ ಅಂಕಣವೊಂದರಲ್ಲಿ ಓದಿದ ನೆನಪು. ಇಂತಹ ಪರಿಸ್ಥಿತಿಯಲ್ಲಿ, ಹೊರನಾಡ ಕನ್ನಡಿಗರ ಪ್ರಯತ್ನ ಮತ್ತು ಅಭಿಮಾನಗಳನ್ನು ಪ್ರಶ್ನಿಸುವುದು ಸರಿಯೇ? ನಮ್ಮ ಭಾಷೆ ತನ್ನ ಉಳಿವಿಗಾಗಿ ನಡೆಸುತ್ತಿರುವ ಹೋರಾಟದಲ್ಲಿ, ತಮ್ಮ ಪ್ರಯತ್ನವನ್ನೂ ನಡೆಸುತ್ತಿರುವ ಹೊರನಾಡ ಕನ್ನಡಿಗರು, ಇಂದು ಎಂದಿಗಿಂತಲು ಹೆಚ್ಚು ಪ್ರಸ್ತುತರು ಎನ್ನುವುದು ನನ್ನ ಭಾವನೆ. ವಿದೇಶಿ ನೆಲ ಮತ್ತು ಪರಿಸರದಲ್ಲಿದ್ದುಕೊಂಡು, ನಮ್ಮತನವನ್ನು ಉಳಿಸಿ ಮುನ್ನಡೆಸಲು ಹೊರನಾಡ ಕನ್ನಡಿಗರು ಪಡುತ್ತಿರುವ ಪ್ರಯತ್ನ ಮತ್ತು ನಡೆಸುತ್ತಿರುವ ಕಾರ್ಯಗಳು ಒಂದು ರೀತಿಯಲ್ಲಿ ಭಗೀರಥ ಪ್ರಯತ್ನವೇ ಸರಿ. ಇಲ್ಲಿನ ಭಾಷೆ ಮತ್ತು ಸಂಸ್ಕೃತಿಗಳ ಪ್ರಭಾವದ ಮಧ್ಯೆ ಸಿಲುಕುವ ನಮ್ಮ ಮಕ್ಕಳು, ತಮ್ಮ ನಡೆ-ನುಡಿ ಮತ್ತು ಅಸ್ತಿತ್ವಗಳನ್ನು ಉಳಿಸಿ ಮುಂದುವರೆದು, ಅದನ್ನು ಮುಂದಿನ ಪೀಳಿಗೆಗೆ ಮುನ್ನಡೆಸುವುದು ನಿಜಕ್ಕೂ ಕಷ್ಟಸಾಧ್ಯವಾದ ಕಾರ್ಯ.

ಇತ್ತೀಚೆಗೆ ನ್ಯೂ ಜರ್ಸಿಯಲ್ಲಿ ನಡೆದ ನಮ್ಮವರ ಸಾಂಸ್ಕೃ ತಿಕ ಸಮಾರಂಭವೊಂದರಲ್ಲಿ, ಸಲೀಸಾಗಿ 3 ಗಂಟೆಗಳ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿಯನ್ನು ನಡೆಸಿಕೊಟ್ಟ ನಮ್ಮ ಕನ್ನಡ ಬಾಲಕನ ಪ್ರತಿಭೆ ಮತ್ತು ಪರಿಶ್ರಮಗಳನ್ನು ಕಂಡು ನಾವು ಬೆರಗಾದೆವು. ಅದಕ್ಕೆ ಅವನ ತಂದೆ-ತಾಯಿಯರು ಪಟ್ಟಿರುವ ಕಷ್ಟ, ಕೊಟ್ಟಿರುವ ಪ್ರೋತ್ಸಾಹ ಮತ್ತು ತರಬೇತಿಗಳನ್ನೂ ಕೊಂಡಾಡಿದೆವು. ಅಮೆರಿಕೆಯಲ್ಲಿ ಹುಟ್ಟಿ, ಬೆಳೆದ ನಮ್ಮ ಹುಡುಗ ಇಂತಹ ಸಾಧನೆ ಮಾಡಿದ್ದಾನೆಂದರೆ, ಅನಿವಾಸಿ ಕನ್ನಡಿಗರಲ್ಲಿ ನಮ್ಮತನವನ್ನು ಉಳಿಸಿ ಬೆಳೆಸುವ ಛಲವಿದೆ ಎಂದಾಯ್ತಲ್ಲ! ಆದ್ದ ರಿಂದ ಹೊರನಾಡ ಕನ್ನಡಿಗರ ಪ್ರಸ್ತುತತೆಯನ್ನು ಪ್ರಶ್ನಿಸದೆ, ಅವರ ಪ್ರಯತ್ನದಲ್ಲಿ ಕೈಗೂಡಿಸಿ ನಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ಕೇವಲ ನಮ್ಮ ತಾಯ್ನೆಲದಲ್ಲೇ ಅಲ್ಲಾ, ಹೊರನಾಡಿನಲ್ಲೂ ಉಳಿಸುವ ಪ್ರಗತಿಯ ಪಥದಲ್ಲಿ ನಮ್ಮ ಒಳನಾಡ ಕನ್ನಡ ಸಮುದಾಯ ಮತ್ತು ಸರ್ಕಾರ ಸಾಗುವುದೆಂದು ಆಶಿಸುತ್ತೇನೆ.

ಉದ್ಯಮಶೀಲತೆಯನ್ನು ಒಳನಾಡ ಕನ್ನಡಿಗರಲ್ಲಿ ಬೆಳೆಸಲು, ಹೊರನಾಡ ಕನ್ನಡಿಗರ ಆರ್ಥಿಕ ಸಂಪನ್ನತೆ ಮತ್ತು ಸೃಜನಶೀಲತೆಗಳ ಸದುಪಯೋಗ ಪಡೆದುಕೊಳ್ಳುವ ಉತ್ತಮ ಮಾರ್ಗಗಳನ್ನು ನಮ್ಮ ಸರ್ಕಾರ ಹುಡುಕಬೇಕು. ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆಯಾಗಲು ಸಾಧ್ಯ. ನಮ್ಮ ಸರ್ಕಾರಿ ಅಧಿಕಾರಿಗಳು, ಹೊರನಾಡ ಕನ್ನಡ ಸಂಘಗಳ ಸಮಾರಂಭಗಳು ಕೇವಲ ತಮ್ಮ ಮತ್ತು ಕುಟುಂಬದವರ ಐಷಾರಾಮಿ ವಿದೇಶಿ ಯಾತ್ರೆಗೆ ಒಂದು ಅವಕಾಶವೆಂದು ಬಗೆಯದೆ, ಆ ಸಮ್ಮೇಳನಗಳಲ್ಲಿ ಒಳನಾಡಿನ ಕನ್ನಡಿಗರ ಹಿತಾಸಕ್ತಿಗಳನ್ನು, ಅನಿವಾಸಿ ಕನ್ನಡಿಗರೊಂದಿಗೆ ಬೆಸೆಯುವಂತಹ ಯೋಜನೆಗಳನ್ನು ಹುಟ್ಟುಹಾಕುವ ಸುವರ್ಣಾವಕಾಶಗಳೆಂದು ತಿಳಿದು ಸದುಪಯೋ ಗಪಡೆಸಿಕೊಳ್ಳಬೇಕು. ಇದರಿಂದ ಹೊರನಾಡ ಕನ್ನಡಿಗರ ಪ್ರಯತ್ನ ಮತ್ತು ಶ್ರಮಗಳಿಗೂ ಒಂದು ಸಾರ್ಥಕತೆ ದೊರೆಯಲು ಸಾಧ್ಯ.

*ಲೇಖಕಿ ಹುಟ್ಟಿ, ಬೆಳೆದು ವಿದ್ಯಾಭ್ಯಾಸ ಮಾಡಿದ್ದು ಮೈಸೂರಿ ನಲ್ಲಿ. ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ. ಉಪನ್ಯಾಸಕಿಯಾಗಿ ಮೈಸೂರು, ಧಾರವಾಡದಲ್ಲಿ ಸೇವೆ. ಕನ್ನಡ ಸಾಹಿತ್ಯ, ಕರ್ನಾಟಕ ಸಂಗೀತ, ಗಮಕವಾಚನದಲ್ಲಿ ಆಸಕ್ತಿ. 1996ರಲ್ಲಿ ಇಂಗ್ಲೆಂಡಿಗೆ ವಲಸೆ; 2016ರಿಂದ, ಅಮೆರಿಕೆಯ ಪೆನ್ಸಿಲ್ವೇನಿಯಾ ರಾಜ್ಯದ ಪೆನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ವಿಭಾಗದ ತಳಿಶಾಸ್ತ್ರ ಪ್ರಯೋಗಾಲಯದಲ್ಲಿ ವಿಜ್ಞಾನಿ.

Leave a Reply

Your email address will not be published.