ಇಂದಿನ ಅಸಂಬದ್ಧ ಪ್ರಲಾಪಗಳು ನಾಳಿನ ‘ಕ್ರಾಂತಿಕಾರಿ’ ವಿಚಾರಗಳೇ?

ದಶಕಗಳ ಹಿಂದೆ ಯಾರಾದರೂ ಪರೀಕ್ಷೆಯೊಂದರಲ್ಲಿ ಪುಸ್ತಕವಿರಲಿ, ಯಾವುದಾದರೊಂದು ಹಾಳೆಯನ್ನು ತೆಗೆದುಕೊಂಡು ಹೋಗಿದ್ದರೆ ಅವರು ಪರೀಕ್ಷೆಯಿಂದಲೇ ಡಿಬಾರ್ ಆಗುತ್ತಿದ್ದರು. ಅದೇ ದಶಕದಲ್ಲಿ ಯಾರಾದರೂ ಸಲಿಂಗಕಾಮಿಗÀಳು ಪರಸ್ಪರ ವಿವಾಹದ ಬಗ್ಗೆ ಮಾತನಾಡಿದ್ದರೆ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಲಾಗುತಿತ್ತು. ನಿಮಗೆ ನಿಜಜೀವನದ ಉದಾಹರಣೆಯೊಂದನ್ನು ಹೇಳುವುದಾದರೆ, 1940ರ ದಶಕದಲ್ಲಿ ಜರ್ಮನ್ ನಾಜಿಗಳ ಗುಪ್ತ ಸಂಕೇತ ಭಾಷೆಯನ್ನು ಭೇದಿಸಿದ ಮತ್ತು ನಂತರದ ವರ್ಷಗಳಲ್ಲಿ ಕಂಪ್ಯೂಟರ್ ಆವಿಷ್ಕಾರಕ್ಕೆ ಕಾರಣವಾದ ಬ್ರಿಟನ್ನಿನ ಅಲೆನ್ ಟ್ಯೂರಿನ್ ಎಂಬ ವಿಜ್ಞಾನಿಯನ್ನು ಸಲಿಂಗಕಾಮಿಯೆಂದು 1950ರ ದಶಕದಲ್ಲಿ ಕೆಮಿಕಲ್ ಮದ್ದು ನೀಡಿ ಷಂಡನಾಗಿಸಲಾಗಿತ್ತು. ಇದು ಕೇವಲ 60 ವರ್ಷಗಳ ಹಿಂದಿನ ಮಾತು.

ಇಂದು ಗಾಂಧಿಗಿಂತ ಸುಭಾಷ್ ಬೋಸ್ ನಮ್ಮ ಹೀರೋ ಆಗಿದ್ದಾರೆ. ಹಿಂದಿನ ಸಮಾಜವಾದಿ ಆಲೋಚನೆಗಳು ಇಂದು ಅಪಥ್ಯವಾಗಿವೆ. ಅಂದಿನ ದಿನಗಳಲ್ಲಿ ವಿಲನ್‍ಗಳಾಗಿದ್ದ ಬಂಡವಾಳಶಾಹಿ ಮತ್ತು ಜಾಗತೀಕರಣಗಳು ಇಂದು ದಮನಿತ ಸಮಾಜಗಳ ಬಿಡುಗಡೆಯ ಸಾಧನಗಳಾಗಿವೆ. ಅಂದು ಆಹಾರವೆಂದು ನಾವು ಕರೆದ ಪದಾರ್ಥಗಳನ್ನು ಇಂದು ವಿಷವೆಂದು ವಿಜ್ಞಾನ ಪುರಾವೆಸಹಿತ ತೋರಿಸುತ್ತಿದೆ. ಅದೇ ಕಾಲದಲ್ಲಿ ನಾವು ಬಡವರ ಅಥವಾ ನಿರ್ಗತಿಕರ ಆಹಾರವೆಂದು ಏನನ್ನು ಕಾಣುತ್ತಿದ್ದೆವೋ, ಅದೇ ಆಹಾರ-ಧಾನ್ಯದಿನಸಿ-ಸೊಪ್ಪುಗಳನ್ನು ಇಂದು ಮಿರಕಲ್ (ಚಮತ್ಕಾರಿಕ) ಆಹಾರವೆಂದು ನಾವು ಬಳಸುತ್ತಿದ್ದೇವೆ.

ಯಾರಿಗೆ ಗೊತ್ತು! ಇಂದಿನ ಸೆಲ್ ಫೋನ್‍ಗಳನ್ನು ಅಥವಾ ಸಮೂಹ ಮಾಧ್ಯಮಗಳನ್ನು ಮುಂದೊಂದು ದಿನ ನಾವು ಸಮಾಜ ವಿರೋಧಿಯೆಂದೋ ಅಸಾಂಸ್ಕøತಿಕವೆಂದೋ ಹೇಳಬಹುದು. ಇಂದಿನ ಸಾಮಾಜಿಕ ಮತ್ತು ಕೌಟುಂಬಿಕ ರಿವಾಜುಗಳನ್ನು ಮುಂದಿನ ದಿನಗಳಲ್ಲಿ ನಾವು ಪ್ರತಿಗಾಮಿಯೆಂದು ಹೇಳಬಹುದು. ಸರ್ಕಾರಗಳನ್ನು ಮತ್ತು ಆಡಳಿತಶಾಹಿಯನ್ನು ಸಾರಾಸಗಟಾಗಿ ಪ್ರಗತಿ ವಿರೋಧಿಗಳೆಂದು ಒಪ್ಪಿಕೊಳ್ಳಬಹುದು. ನ್ಯಾಯ ಬೇಕೆಂದಾಗ ನ್ಯಾಯಾಲಯಗಳ ಮೆಟ್ಟಿಲು ಹತ್ತುವುದಿಲ್ಲವೆಂದು ಪ್ರತಿಜ್ಞೆ ಮಾಡಬಹುದು. ಇಲ್ಲವೇ, ಎಲ್ಲಾ ಸುದ್ದಿ ಮಾಧ್ಯಮಗಳು ಆಳುವವರ ಮುಖವಾಣಿಗಳೆಂದು ಅರಿತು ನಮ್ಮನ್ನು ತಲುಪುವ ಸುದ್ದಿ-ಮಾಹಿತಿಗಳನ್ನು ಪ್ರಾಯೋಜಿತ ಜಾಹೀರಾತುಗಳೆಂದೇ ಓದಬಹುದು.

ಸಾರ್ವಜನಿಕ ಸತ್ಯಗಳೆಂದೂ ಸಾರ್ವಕಾಲಿಕವಲ್ಲ. ಇಂದಿನ ಭಯೋತ್ಪಾದಕ ನಾಳಿನ ಸ್ವಾತಂತ್ರ್ಯ ಸೇನಾನಿ. ಇಂದಿನ ನಾಯಕ ನಾಳಿನ ಖಳನಾಯಕ. ವರ್ತಮಾನ ಇತಿಹಾಸವನ್ನು ತಿರುಚಲು ಯತ್ನಿಸಿದರೆ ಇತಿಹಾಸ ವರ್ತಮಾನವನ್ನು ಬದಲಿಸಲು ಯತ್ನಿಸುತ್ತಿದೆ. ಸತ್ಯ ಅಸತ್ಯಗಳ ಸಾಂದರ್ಭಿಕತೆಯನ್ನು ಮತ್ತು ನೋಡುವ ಕಣ್ಣಿನ ಮಿತಿಯನ್ನು ಅರಿತರೆ ನಾವು ಇದುವರೆಗೆ ಕಂಡ ಉತ್ತರಗಳನ್ನು ಮತ್ತೆ ಪ್ರಶ್ನೆ ಮಾಡುವ ವಿವೇಕ ನಮಗೆ ಬರಬಹುದು. ಪ್ರಶ್ನೆ ಮಾಡಿದಷ್ಟೂ ಉತ್ತರದ ಖಚಿತತೆ ಮತ್ತು ನಿಖರತೆ ಸುಧಾರಣೆಗೊಳ್ಳಬಲ್ಲುದು. ಈ ಸಂಚಿಕೆಯ ಉದ್ದೇಶವೂ ಇದೇ ಆಗಿದೆ.

Leave a Reply

Your email address will not be published.