ಇಂದಿನ ನ್ಯಾಯಾಂಗ ವ್ಯವಸ್ಥೆ ಸ್ವರೂಪಗಳು, ‘ಭಿನ್ನ’ ರೂಪಗಳು!

ಕೆಲವು ಮುಖ್ಯ ನ್ಯಾಯಾಧೀಶರನ್ನು ಕುರಿತು ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ್ ಮಾಡಿದ ಟ್ವೀಟ್ ಮತ್ತು ಸರ್ವೋಚ್ಚ ನ್ಯಾಯಾಲಯದ ಪೀಠ ಅವರ ವಿರುದ್ಧ ಹೂಡಿರುವ ನ್ಯಾಯಾಲಯ ನಿಂದನೆ ಮೊಕದ್ದಮೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಡಾ.ವೆಂಕಟಾಚಲ ಹೆಗಡೆ

ನಮ್ಮ ದೇಶದ ಆಗುಹೋಗುಗಳ ಎಲ್ಲ ನಿಯಂತ್ರಣ ಸಂವಿಧಾನದ ಪರಿಧಿಯಲ್ಲೆ ಆಗಬೇಕೆಂಬುದನ್ನು ನಾವೆಲ್ಲ ಒಪ್ಪಿಕೊಳ್ಳುತ್ತೇವೆ. ಅದಕ್ಕಾಗಿ ನಾವು ಎಪ್ಪತ್ತು ವಸಂತಗಳ ಹಿಂದೆ ಅತ್ಯಂತ ವಿವರವಾದ ಮತ್ತು ಎಲ್ಲವನ್ನು ಒಳಗೊಳ್ಳುವಂತಿರುವ ಸಂವಿಧಾನವನ್ನು ಸಾಕಷ್ಟು ವಿಚಾರ ವಿನಿಮಯಗಳ ನಂತರ ಆರಿಸಿಕೊಂಡಿದ್ದೇವೆ. ನಮ್ಮ ಸರಕಾರ ಹೇಗಿರಬೇಕು ಮತ್ತು ಅದು ಹೇಗೆ ತನ್ನ ಪ್ರಜೆಗಳನ್ನು ನಡೆಸಿಕೊಳ್ಳಬೇಕು ಎಂಬುದೆಲ್ಲವನ್ನು ನಮ್ಮ ಸಂವಿಧಾನದ ಪರಿಧಿಯಲ್ಲಿಯೇ ನಾವು ಕಂಡುಕೊಳ್ಳುತ್ತೇವೆ. ಅಷ್ಟೇ ಅಲ್ಲ. ಸಂವಿಧಾನ ತನ್ನ ಒಡಲೊಳಕ್ಕೆ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳನ್ನು ಸೃಜಿಸಿದ್ದಲ್ಲದೆ ಅವುಗಳೆಲ್ಲರ ಕಾರ್ಯವೈಖರಿಯ ದೆಸೆಯಿಂದಾಗಿ ಸಾಮಾನ್ಯ ಪ್ರಜೆಗಳ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳಿಗೆ ಯಾವ ರೀತಿಯಲ್ಲೂ ಧಕ್ಕೆ ಬರದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿಯನ್ನು ಹೊಂದಿದೆ.

ಆದರೆ, ಸಂವಿಧಾನವೆಂಬುದು ಬರಿ ಕಾನೂನು ಕಟ್ಟಳೆಗಳ ಶಬ್ದ ಜಾಲವಲ್ಲ. ಅದಕ್ಕೆ ಅದರದ್ದೆ ಆದ ಜೀವಂತಿಕೆಯಿದೆ ಮತ್ತು ಅದು ದೇಶದ ಬೆಳವಣಿಗೆಯ ಕಾಲಚಕ್ರದಲ್ಲಿ ತನ್ನನ್ನು ಸದಾ ಪರಿಷ್ಕರಿಸಿಕೊಳ್ಳುತ್ತಿರುತ್ತೆ ಎಂಬುದು ಹಲವು ವಿದ್ವಾಂಸರ ಅಭಿಮತ. ಈ ‘ಜೀವಂತ ಸಂವಿಧಾನ’ ಎಂಬುದನ್ನು ಅರಿತುಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಊರ್ಜಿತಗೊಳಿಸುವ ಜವಾಬ್ದಾರಿಯನ್ನು ನಾವು ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳಲ್ಲಿ ಕುಳಿತವರ ಮಡಿಲಲ್ಲಿ ಇರಿಸಿದ್ದೇವೆ. ಅದನ್ನು ಅರಿತುಕೊಂಡು ಸಂವಿಧಾನದ ಆಶಯಗಳನ್ನು ಪಾಲಿಸಿಕೊಂಡು ಹೋಗುವ ಜವಾಬ್ದಾರಿ ದೇಶದ ಚುಕ್ಕಾಣಿ ಹಿಡಿದವರದ್ದು. ಈ ಮೂರು ಅಂಗಗಳಲ್ಲಿ ಒಬ್ಬರು ತಪ್ಪಿದರೂ ಅವರನ್ನು ಸರಿಪಡಿಸುವ, ಅವರಿಗೆ ಬುದ್ಧಿಹೇಳುವ ಕೆಲಸವನ್ನು ಇನ್ನೊಂದು ಅಂಗ ಮಾಡಬೇಕಾದ ತಂತ್ರ ಸಂವಿಧಾನದ ಪರಿಧಿಯೊಳಗೆ ಅಡಕವಾಗಿದೆ.

ಈ ಬಗೆಯ ಜವಾಬ್ದಾರಿ ಎಲ್ಲರಿಗಿಂತ ಮಿಗಿಲಾಗಿ ಸಂವಿಧಾನದ ಆಶಯದಲ್ಲಿ ನ್ಯಾಯಾಂಗದ ಮೇಲಿದೆ. ಶಾಸಕಾಂಗ ಮತ್ತು ಕಾರ್ಯಾಂಗಳು ಕೆಲಬಾರಿ ತಮ್ಮ ಅಪರಿಮಿತ ಸತ್ತೆಯ ಬಲದಿಂದಾಗಿ ಸಾಮಾನ್ಯ ಪ್ರಜೆಯ ಹಕ್ಕುಗಳನ್ನು ಮೊಟಕುಗೊಳಿಸುವತ್ತ ಮುಖಮಾಡುವ ಸಂದರ್ಭದಲ್ಲಿ ಇದಕ್ಕೆಲ್ಲ ಕಡಿವಾಣ ಹಾಕುವ ಗುರುತರ ಜವಾಬ್ದಾರಿ ಸಂವಿಧಾನದ ಪ್ರಕಾರ ನ್ಯಾಯಾಂಗದ ಮೇಲಿದೆ. ಅದರೆ, ಇತ್ತೀಚಿನ ದೇಶದ ಅತ್ಯಂತ ದಾರುಣ ಮತ್ತು ಸಂಕಷ್ಟದ ದಿನಗಳಲ್ಲಿ ನ್ಯಾಯಾಂಗ ಈ ಬಗೆಯ ತನ್ನ ಸಂವಿಧಾನಾತ್ಮಕ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಿದೆಯೆ ಇಲ್ಲವೇ ಎಂಬುದರ ಬಗ್ಗೆ ಹಲವಾರು ಪ್ರಶ್ನೆಗಳು ಏಳುತ್ತಿವೆ.

ಈ ಬಗೆಯ ಪ್ರಶ್ನೆಗಳು ನ್ಯಾಯಾಂಗದ ಕುರಿತಾಗಿ ಉದ್ಭವವಾಗುತ್ತಿರುವುದು ಇದೇ ಮೊದಲಬಾರಿಯೇನು ಅಲ್ಲ. ಹಿಂದೆ ಹಲವು ಬಾರಿ, ಮುಖ್ಯವಾಗಿ ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ, ಇದೇ ಬಗೆಯ ಸವಾಲುಗಳು ನ್ಯಾಯಾಂಗದ ಎದುರು ಇದ್ದವು. ಆ ಕಾಲದಲ್ಲಿ ನ್ಯಾಯಾಂಗ ತನ್ನ ಸಾಂವಿಧಾನಿಕ ಜವಾಬ್ದಾರಿಯಲ್ಲಿ ಎಡವಿದ್ದನ್ನು ನಾವೆಲ್ಲ ಮನಗಂಡಿದ್ದೇವೆ. ನ್ಯಾಯಾಂಗದ ಈ ಚರಿತ್ರೆಯಲ್ಲಿ ಎ.ಡಿ.ಎಮ್ ಜಬಲಪುರದಂತಹ ಕೇಸುಗಳನ್ನು ಕಪ್ಪುಚುಕ್ಕೆಗಳೆಂದು ಗುರುತಿಸಲಾಗುತ್ತದೆ.

1971ರಲ್ಲಿ ಕೇಶವಾನಂದ ಭಾರತಿಯಂತಹ ಮೊಕದ್ದಮೆಗಳಲ್ಲಿ ನ್ಯಾಯಾಂಗ ಸಂವಿಧಾನದ ‘ಮೂಲಭೂತ ಆಶಯ’ಗಳನ್ನು ನಿಖರವಾಗಿ ಗುರುತಿಸಿ ಶಾಸಕಾಂಗವಿರಲಿ, ಕಾರ್ಯಾಂಗವಿರಲಿ ಇವರಾರಿಗೂ ಈ ಆಶಯಗಳಿಗೆ ಧಕ್ಕೆ ಬರುವಂತಹ ನಿರ್ಣಯವನ್ನು ತೆಗೆದುಕೊಳ್ಳುವಂತಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ನೀಡಿ ತನ್ನ ಹಿರಿಮೆಯನ್ನು ಮೆರೆದಿತ್ತು. ಈ ನಿರ್ಣಯ ಬಂದ ನಾಲ್ಕಾರು ವರ್ಷಗಳಲ್ಲೆ ನ್ಯಾಯಾಂಗ ತನ್ನ ಈ ಹಿರಿಮೆಯನ್ನು ಮರೆತು ಸಾಮಾನ್ಯ ಪ್ರಜೆಯ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿ ಕಾರ್ಯಾಂಗದ ಕೆಲಸಗಳಿಗೆ ಕುಮ್ಮಕ್ಕು ಕೊಡುವಂತಹ ಕೆಲಸವನ್ನು ಮೇಲೆ ಹೇಳಿದ ಎ.ಡಿ.ಎಮ್ ಜಬಲಪುರದಂತಹ ಕೇಸುಗಳಲ್ಲಿ ಮಾಡಿದ್ದು ಯಾವ ಕಾರಣಕ್ಕಾಗಿ ಎಂಬುದರ ಬಗ್ಗೆ ಸಂವಿಧಾನದ ಚರಿತ್ರೆಕಾರರ ಮಧ್ಯೆ ಇನ್ನೂ ಚರ್ಚೆ ನಡೆಯುತ್ತಲೆ ಇದೆ.

ನ್ಯಾಯಾಂಗದ ಉತ್ತುಂಗ ಶಿಖರವಾದ ಸರ್ವೋಚ್ಚ ನ್ಯಾಯಾಲಯಕ್ಕೆ ಸಂವಿಧಾನವನ್ನು ಎಲ್ಲ ಬಗೆಯಲ್ಲೂ ಸಂರಕ್ಷಿಸುವ ದೊಡ್ಡ ಹೊಣೆಯಿದೆ. ಈ ಹೊಣೆಗಾರಿಕೆಯನ್ನು ನಿಭಾಯಿಸಲು ಅದು ಯಾರಿಗೂ, ಯಾವುದಕ್ಕೂ ಕಾಯಬೇಕಾದಂತಹ, ಅಥವಾ ಯಾರಿಗೂ ಮಣೆ ಹಾಕಬೇಕಾದಂತಹ ಅಗತ್ಯವೇ ಇಲ್ಲ. ಈ ಕಾರಣಕ್ಕಾಗಿಯೇ ನಮ್ಮ ಸಂವಿಧಾನದ ಶಿಲ್ಪಿಗಳು ಅದರೊಳಗೆ ಅನುಚ್ಚೇದ 32 ಮತ್ತು 226ನ್ನು ಕಡೆದಿಟ್ಟಿದ್ದಾರೆ. ಈ ಅನುಚ್ಚೇದಗಳ ಪ್ರಕಾರ ಸಂವಿಧಾನದಲ್ಲಿ ಪಡಿಮೂಡಿಸಲ್ಪಟ್ಟ ಯಾವುದೆ ಮೂಲಭೂತ ಹಕ್ಕುಗಳಿಗೆ ಧಕ್ಕೆ ಆದಾಗ ನಮ್ಮಂತಹ ಸಾಮಾನ್ಯ ಪ್ರಜೆಗಳು ನೇರವಾಗಿ ಸರ್ವೋಚ್ಚ (ಮತ್ತು ಉಚ್ಚ) ನ್ಯಾಯಾಲಯದ ಬಾಗಿಲನ್ನು ತಟ್ಟಬಹುದಾಗಿದೆ. ಆದರೆ, ನಾವು ತಟ್ಟಲೆಂದು ಹೊರಟ ಈ ನ್ಯಾಯಾಂಗದ ಬಾಗಿಲುಗಳು ಸರಿಯಾದ ಕ್ಷಣಗಳಲ್ಲಿ ಎಲ್ಲರಿಗೂ ತೆರೆಯಬಲ್ಲವೆ ಎಂಬ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡಿದೆ.

ಕಳೆದ ಎರಡು ತಿಂಗಳ ಹಿಂದೆ ನಿವೃತ್ತಿ ಹೊಂದುವ ವೇಳೆಯಲ್ಲಿ ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಂಡ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ದೀಪಕ ಗುಪ್ತಾ ಅವರ ಪ್ರಕಾರ ಸಾಮಾನ್ಯ ಪ್ರಜೆಗಳಿಗೆ ಈ ನ್ಯಾಯಾಂಗದ ಉತ್ತುಂಗ ಶಿಖರ ಬರಿ ಮರೀಚಿಕೆಯಷ್ಟೇ. ಅವರ ಪ್ರಕಾರ ಹಣವಂತರು, ರಾಜಕೀಯವಾಗಿ ಬಲಿಷ್ಠರು ಇಂತಹವರಿಗೆ ಇದರ ಬಾಗಿಲು ಬೇಗ ತೆರೆಯುತ್ತದೆ. ಈ ಕುರಿತಾಗಿ ನಾವೆಲ್ಲ (ಅಂದರೆ ನ್ಯಾಯಮೂರ್ತಿಗಳೆಲ್ಲ) ಅಂತಃಕರಣಪೂರಕವಾಗಿ ಪರಾಮರ್ಶಿಸಿಕೊಳ್ಳುವ ಅಗತ್ಯವಿದೆಯೆಂಬುದನ್ನು ಅವರು ಹೇಳಿದ್ದು ಈಗಿನ ಪರಿಸ್ಥಿತಿಯಲ್ಲಿ ಕಾಕತಾಳೀಯವಾಗಿರಲಿಲ್ಲ.

ಅವರು ಮತ್ತು ಇನ್ನೂ ಹಲವರು (ನ್ಯಾ. ಮದನ ಲೋಕುರ, ಹಿರಿಯ ನ್ಯಾಯವಾದಿ ಫಾಲಿ ನಾರಿಮನ್) ಈ ಮಾತುಗಳನ್ನು ಆಡುತ್ತಿರುವ ವೇಳೆಯಲ್ಲೆ ನಮ್ಮ ದೇಶದ ತುಂಬಾ ಬಡ ವಲಸೆ ಕಾರ್ಮಿಕರು ಲಾಕ್ ಡೌನ್ ದೆಸೆಯಿಂದಾಗಿ ತಮ್ಮ ಇಡೀ ಅಸ್ತಿತ್ವದ ಅಸ್ಥಿರತೆಯಿಂದಾಗಿ ತತ್ತರಿಸುತ್ತ ತಮ್ಮ ತಮ್ಮ ದೂರದ ಊರುಗಳತ್ತ ನಡೆಯುತ್ತ ಸಾಗುವ ಚಿತ್ರಗಳು ನ್ಯಾಯಾಂಗದ ಉತ್ತಂಗ ಶಿಖರವನ್ನು ತಲುಪಲು ಕೆಲ ಕಾಲವೇ ಬೇಕಾಯಿತು.

ಕಾರ್ಯಾಂಗದ ಕಾರ್ಯವೈಖರಿಯನ್ನು ಸಂವಿಧಾನದ ಮತ್ತು ಕಾನೂನಿನ ಒರೆಗೆ ಹಚ್ಚುವ ಕೆಲಸದಲ್ಲಿ ಆದ ವಿಳಂಬದಿಂದಾಗಿ ಲಕ್ಷಾಂತರ ಕಾರ್ಮಿಕರು ಪಟ್ಟ ಬವಣೆಗೆ ಯಾರ ಮೇಲೆ ಹೊಣೆಗಾರಿಕೆಯನ್ನು ಏರಿಸಬೇಕು ಎಂಬುದರ ಬಗ್ಗೆ ನಿಖರವಾದ ಉತ್ತರಗಳು ಇನ್ನುವರೆಗೂ ಸಿಕ್ಕಿಲ್ಲ. ಕಣ್ಣಿಗೆ ಪಟ್ಟಿ ಹಚ್ಚಿಕೊಂಡು ಕುಳಿತಂತಿದ್ದ ಸರ್ವೋಚ್ಚ ನ್ಯಾಯಾಲಯದ ಈ ಪರಿಗೆ ವಿರುದ್ಧವಾಗಿ ದೇಶದ ಸುಮಾರು 12 ಉಚ್ಚ ನ್ಯಾಯಾಲಯಗಳು (ಮುಖ್ಯವಾಗಿ ಕರ್ನಾಟಕ ಮತ್ತು ತಮಿಳು ನಾಡು ಸೇರಿದಂತೆ) ಕಾರ್ಯಾಂಗದ ಈ ಬಗೆಯ ಕಾರ್ಯವೈಖರಿಯನ್ನು ಪ್ರಶ್ನಿಸಿ ನೀಡಿದ ತ್ವರಿತ ನಿರ್ಧಾರಗಳು ಮತ್ತು ಅವರ ಅನಿಸಿಕೆಗಳು ಈ ಬಡ ವಲಸೆ ಕಾರ್ಮಿಕ ಜನಸಮುದಾಯಕ್ಕೆ ಸ್ವಲ್ಪವಾದರೂ ಮುದ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬೇಕು.

ನಂತರದಲ್ಲಿ ತನ್ನ ಹೊಣೆಗಾರಿಕೆಯನ್ನು ಮನಗಂಡು ಸರ್ವೋಚ್ಚ ನ್ಯಾಯಾಲಯ ಕಾರ್ಯಾಂಗವನ್ನು ಈ ಕುರಿತಾಗಿ ತರಾಟೆಗೆ ತೆಗೆದುಕೊಂಡದ್ದು ಸ್ವಾಗತಾರ್ಹವಾದರೂ ಅದರಿಂದ ಯಾವ ಹೆಚ್ಚಿನ ಪ್ರಯೋಜನವೇನೂ ಆಗಲಿಲ್ಲ.

ಯಾವ ವೇಳೆಯಲ್ಲಿ ಮತ್ತು ಯಾವ ಕಾಲದಲ್ಲಿ ನ್ಯಾಯಾಂಗ ತನ್ನ ಸಂವಿಧಾನದ ಮತ್ತು ಕಾನೂನಿನ ಅಭಯ ಹಸ್ತವನ್ನು ಸತ್ತೆಯ (ಅದರಲ್ಲೂ ಪ್ರಮುಖವಾಗಿ ಕಾರ್ಯಾಂಗದ) ಅದಮ್ಯ ಶಕ್ತಿಯ ವಿರುದ್ಧ ಎತ್ತುತ್ತದೆಯೆಂಬುದು ಮುಖ್ಯ. ಏನು ಮಾಡದೆ ಸುಮ್ಮನಿದ್ದು, ನಂತರದಲ್ಲಿ ಸ್ವಲ್ಪ ಜೋರಾಗಿ ಕೂಗು ಹಾಕಿದಂತೆ ಮಾಡಿದರೆ ಸಂವಿಧಾನದ ಮೂಲಭೂತ ಆಶಯಗಳನ್ನು ಉಳಿಸಿಕೊಂಡಂತಾಗುವುದಿಲ್ಲ. ಬೆಳವಣಿಗೆ ಹೊಂದುತ್ತಿರುವ ಸನ್ನಿವೇಶಗಳಲ್ಲಿ ಸರಿಯಾದ ವೇಳೆಯಲ್ಲಿ ಮತ್ತು ಕ್ರಮಗಳಲ್ಲಿ ನ್ಯಾಯಾಂಗದ ಪ್ರವೇಶಿಸುವಿಕೆ ಯಾವಾಗಲೂ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ನಾವು ಮರೆಯಬಾರದು.

ಈ ಎಲ್ಲವನ್ನು ಗಮನದಲ್ಲಿರಿಸಿಕೊಂಡು ಜೂನ್ ತಿಂಗಳ ಕೊನೆಯ ವಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಕೆಲ ಮುಖ್ಯ ನ್ಯಾಯಾಧೀಶರನ್ನು ಕುರಿತಾಗಿ ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ್ ಅವರು ಮಾಡಿದ ಟ್ವೀಟ್ ಪ್ರಶ್ನಿಸಿ ಅವರನ್ನು ನ್ಯಾಯಾಲಯ ನಿಂದನೆಯ ಆರೋಪದ ಮೇಲೆ ಸರ್ವೋಚ್ಚ ನ್ಯಾಯಾಲಯದ ಪೀಠ ಮೊಕದ್ದಮೆ ಪ್ರಾರಂಭಿಸಿತು. ಇದು ಮೇಲೆ ಹೇಳಿದ ಎಲ್ಲ ವಿಚಾರಗಳನ್ನು ಮತ್ತು ವಿವರಗಳನ್ನು ಸಾಂದರ್ಭಿಕವಾದ ಚರ್ಚೆಗೆ ನ್ಯಾಯಲಯವನ್ನೆ ಒಳಪಡಿಸುತ್ತದೆ. ಎರಡು ಟ್ವೀಟ್‌ಗಳಲ್ಲಿ ಅವರು ಸರ್ವೋಚ್ಚ ನ್ಯಾಯಾಲಯದ ಕಳೆದ ಕೆಲ ವರ್ಷಗಳ ನಾಲ್ಕು ಮುಖ್ಯ ನ್ಯಾಯಾಧೀಶರುಗಳ ಕಾರ್ಯವೈಖರಿಯ ಕುರಿತಾಗಿ ಮತ್ತು ಈಗಿನ ಮುಖ್ಯ ನ್ಯಾಯಧೀಶರು ಅತ್ಯಂತ ದುಬಾರಿ ಬೆಲೆಯ ಮೋಟರ ಸೈಕಲ್ ಮೇಲೆ ಕುಳಿತ ಚಿತ್ರದ ಕುರಿತಾಗಿ ಅವರು ಮಾಡಿದ ಎರಡು ಟಿಪ್ಪಣಿಗಳನ್ನು 1971ರ ನ್ಯಾಯಾಲಯ ನಿಂದನೆಯ ಕಾನೂನಿಗೆ ಒಳಪಡಿಸಿದೆ.

ಈಗಾಗಲೆ ಪ್ರಶಾಂತ ಭೂಷಣ್ ಅವರನ್ನು ತಪ್ಪಿತಸ್ಥರೆಂದು ನ್ಯಾಯಾಲಯ 108 ಪುಟಗಳ ತೀರ್ಪನ್ನು ಆಗಸ್ಟ್ 14 ರಂದು ನೀಡಿದೆ. ಆದರೆ, ಈ ವಿಚಾರಗಳೆಲ್ಲದರ ಕುರಿತಾಗಿ ಸಾಕಷ್ಟು ವಾದವಿವಾದಗಳು ಹುಟ್ಟಿಕೊಂಡಿವೆ. ನ್ಯಾಯನಿಂದನೆ ಕಾನೂನು ಕ್ರಿಮಿನಲ್ ಮೊಕದ್ದಮೆಯ ರೂಪದ್ದು. ಹೀಗಾಗಿ ಪ್ರಶಾಂತ ಭೂಷಣ್ ಅವರಿಗೆ ಈ ನ್ಯಾಯಾಲಯ ನಿಂದನೆಯ ಕಾನೂನಿನ ರೀತ್ಯಾ ಯಾವ ಬಗೆಯ ಶಿಕ್ಷೆ ನೀಡಬೇಕೆಂಬುದರ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಇನ್ನೂ ತನ್ನ ನಿರ್ಧಾರವನ್ನು ಪ್ರಕಟಪಡಿಸಿಲ್ಲ.

ದೇಶದ ಉನ್ನತ ಕಾನೂನಿನ ಅಧಿಕಾರಿ ಅಟೊರ್ನಿ ಜನರಲ್ ಕೆ.ಕೆ.ವೇಣುಗೋಪಾಲರ ಪ್ರಕಾರ (ಮತ್ತು ಹಿರಿಯ ನ್ಯಾಯವಾದಿಗಳಾದ ಸೊಲಿ ಸೊರಾಬ್ಜಿ ಮತ್ತಿತರರ ಪ್ರಕಾರ) ಇದನ್ನು ನ್ಯಾಯಾಲಯ ನಿಂದನೆಯೆಂದು ಪರಿಗಣಿಸುವುದು ಉಚಿತವಲ್ಲ. ಅವರು ನ್ಯಾಯಾಲಕ್ಕೇ ತಮ್ಮ ವಿಚಾರಗಳನ್ನು ತಿಳಿಸಿದ್ದಾರೆ. ಪ್ರಶಾಂತ ಭೂಷಣರವರು “ಇದು ನನ್ನ ಆಳವಾದ ನಂಬಿಕೆಯಿಂದ ಬಂದ ಅಭಿಪ್ರಾಯ ಮತ್ತು ಇದಕ್ಕೆ ತಪ್ಪೊಪ್ಪಿಗೆಯ ಮಾತೇ ಇಲ್ಲ. ಯಾವುದೆ ಶಿಕ್ಷೆಗೆ ನಾನು ಸಿದ್ಧ” ಎಂಬ ಮಾತನ್ನು ಆಡಿದ್ದಾರೆ.

ಅವರಿಗೆ ಎಚ್ಚರಿಕೆ ನೀಡಿ ಈ ವಿಚಾರವನ್ನು ಮುಗಿಸುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಅಟೊರ್ನಿ ಜನರಲ್ ವೇಣುಗೋಪಾಲ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನ್ಯಾಯಾಲಯ ನಿಂದನೆಯ ಕಾನೂನಿನ್ವಯ ಅಟೊರ್ನಿ ಜನರಲ್ ಅವರ ಈ ಅಭಿಪ್ರಾಯಗಳ ಅನುಸಾರವೇ ನ್ಯಾಯಾಲಯ ತನ್ನ ತೀರ್ಪನ್ನು ನೀಡಬೇಕೆಂದಿದೆ. ಆದರೆ, ನ್ಯಾಯಾಲಯದ ನ್ಯಾಯಮೂರ್ತಿ ಅರುಣ ಮಿಶ್ರ ಅವರ ಪೀಠ ಇದನ್ನು ಇಲ್ಲಿಯ ತನಕ ಒಪ್ಪಿಕೊಂಡಿಲ್ಲ. ಈಗ ಈ ಪೀಠ ಪ್ರಶಾಂತ ಭೂಷಣರವರಿಗೆ ನೀಡಬೇಕಾದ ಶಿಕ್ಷೆಯ ನಿರ್ಣಯವನ್ನು ಕಾಯ್ದಿರಿಸಿದೆ.

ಅಂತೂ ಈ ಎಲ್ಲ ಕಾನೂನಿನ ಗೊಂದಲಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಸಿಲುಕಿಕೊಂಡಿದ್ದರೆ, ಹಲವು ಹಿರಿಯ ನ್ಯಾಯವಾದಿಗಳು ಮತ್ತು ನ್ಯಾಯಮೂರ್ತಿಗಳಿಂದ ಈ ಬಗೆಯ ‘ನಿಂದನೆ’ ಗಳನ್ನು ಸರ್ವೋಚ್ಚ ನ್ಯಾಯಾಲಯ ತನ್ನ ಉದರದಲ್ಲಿ ಹಾಕಿಕೊಂಡು ಅರಗಿಸಿಕೊಂಡುಬಿಡಬೇಕು ಎಂಬ ವಾದಗಳೂ ಬರುತ್ತಿವೆ. ಸದ್ಯದಲ್ಲಿ ಈ ಎಲ್ಲ ವಿಚಾರಗಳು ಒಟ್ಟಾರೆ ಪ್ರಸ್ತುತ ವಿದ್ಯಮಾನಗಳಿಗೆ ಕನ್ನಡಿ ಹಿಡಿದಂತಿವೆ.

ಮೇಲೆ ಹೇಳಿದಂತೆ, ನಮ್ಮ ಸಂವಿಧಾನವೇ ರೂಪಿಸಿದ (ಮತ್ತು ಕಾನೂನಿನ ಚೌಕಟ್ಟಿನಿಂದ ರೂಪುಗೊಂಡ) ಹಲವಾರು ಸಂಸ್ಥೆಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಹೊರತಾಗಿ ಇನ್ನೂ ಹಲವಾರು ಇತರ ಸಂಸ್ಥೆಗಳೂ ಇವೆ. ಚುನಾವಣಾ ಆಯೋಗ, ಲೆಕ್ಕಪತ್ರಗಳ ಪರಿಶೀಲನಾ ಆಯೋಗ (ಸಿ.ಎ.ಜಿ), ಕೇಂದ್ರ ಅನ್ವೇಷಣಾ ಬ್ಯುರೊ (ಸಿ.ಬಿ.ಐ), ತೆರಿಗೆ ಮತ್ತು ಹಣಕಾಸು ಮಂತ್ರಾಲಯದ ಅಡಿಯಲ್ಲಿ ಬರುವ ಹಲವಾರು ಏಜನ್ಸಿಗಳು ಸರಕಾರದ ಏಜಂಟರಂತೆ ಕೆಲಸ ಮಾಡುತ್ತಿವೆಯೆಂಬ ಅರೋಪವನ್ನು ವಿರೋಧ ಪಕ್ಷಗಳು ನಿರಂತರವಾಗಿ ಮಾಡುತ್ತಿವೆ. ಇವೆಲ್ಲವೂ ಈಗಿನ (ಮೊದಲಿನ) ದೇಶದ ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆ ಏಳುತ್ತಿದೆ.

ಕೆಲ ದಿನಗಳ ಹಿಂದೆ ನಡೆದ ಈ ಎಲ್ಲ ಘಟನಾವಳಿಗಳು ಈಗಾಗಲೇ ಒಂದು ಬಗೆಯಲ್ಲಿ ನ್ಯಾಯಾಂಗದ ಚರಿತ್ರೆಯ ಭಾಗವಾಗಿ ಹೋದಂತೆ ತೋರುತ್ತಿದೆ. ದೇಶದ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಎಲ್ಲವೂ ನಮ್ಮ ಸಂವಿಧಾನದ ಪರಿಧಿಯೊಳಗೆ ಅತ್ಯಂತ ಸಹಜ ರೀತಿಯಲ್ಲಿ ನಡೆಯುತ್ತಿರುವಂತೆ ತೋರುತ್ತಿದೆ.

ಸುಮಾರು ಒಂದು ವರ್ಷದ ಹಿಂದೆ ನಮ್ಮ ಶಾಸಕಾಂಗದ ಕಾಶ್ಮೀರ ಕುರಿತಾದ ಸಂವಿಧಾನದ ಅನುಚ್ಚೇದ 370ನ್ನು ಅನೂರ್ಜಿತಗೊಳಿಸುವ ನಿರ್ಧಾರವಿರಬಹುದು, ನಾಗರಿಕತಾ ತಿದ್ದುಪಡಿ ಕುರಿತಾದ ಕಾನೂನೇ ಇರಬಹುದು, ರಾಫಲ್ ಖರೀದಿಸುವ ಕುರಿತಾದ ಕಾನೂನು ಮತ್ತು ಆಡಳಿತಾತ್ಮಕ ವಿಚಾರಗಳ ಗಲಿಬಿಲಿಗಳೆ ಇರಬಹುದು, ರೈತರ ಉತ್ಪನ್ನಗಳನ್ನು ಸರಕಾರಿ ನಿಯಂತ್ರಣದ ಮಾರುಕಟ್ಟೆಯ ಹೊರಗೆ ಖಾಸಗಿಯವರು ಖರೀದಿಸುವ ಕುರಿತಾದ ಕಾನೂನು ಬದಲಾವಣೆಯಿರಬಹುದು, ಮತ್ತು ಕೊನೆಯಲ್ಲಿ ಪರಿಸರ ಕಾನೂನಿಗೆ ಕುರಿತಂತೆ ತರಬೇಕೆಂದಿರುವ ಕೆಲ ಬದಲಾವಣೆಗಳಿರಬಹುದು -ಈ ಎಲ್ಲವೂ ಮತ್ತು ಇನ್ನೂ ಹತ್ತು ಹಲವಾರು ಈ ಬಗೆಯ ನಿರ್ಧಾರಗಳನ್ನು ಸಂವಿಧಾನದ ಮತ್ತು ಕಾನೂನಿನ ಚೌಕಟ್ಟಿನೊಳಕ್ಕೆ ಇರಿಸಿಕೊಂಡು ಅವುಗಳನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಸತ್ತೆಯಲ್ಲಿರುವ ಸರಕಾರ ಸಹಜವಾಗಿಯೆ ಮಾಡುತ್ತಿದೆ.

ಇದಲ್ಲದೆ ಮೇಲಿನ ಕೆಲ ಶಾಸಕಾಂಗದ ನಿರ್ಧಾರಗಳಿಗೆ ನ್ಯಾಯಾಂಗದ ಒಪ್ಪಿಗೆಯ ಮುದ್ರೆ ಈಗಾಗಲೆ ದೊರೆತಿದೆ. ಆದರೆ, ಕಳೆದ ಒಂದು ವರ್ಷದಲ್ಲಿ ಶಾಸಕಾಂಗ ತೆಗೆದುಕೊಂಡ ಹಲವಾರು ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಇನ್ನೂ ಸರ್ವೋಚ್ಚ ನ್ಯಾಯಾಲಯ ಸಂವಿಧಾನದ ಕಲ್ಲಿಗೆ ಒರೆ ಹಚ್ಚಿ ನೋಡುವ ಕೆಲಸವನ್ನು ಮಾಡುವ ಬಗ್ಗೆ ಯಾವುದೆ ತರಾತುರಿಯನ್ನು ಯಾಕೆ ತೋರಿಸುತ್ತಿಲ್ಲವೆಂಬುದು ಹಲವಾರು ರಾಜಕೀಯ ಮತ್ತು ಕಾನೂನು ಪಂಡಿತರ ಆತಂಕಕ್ಕೆ ಕಾರಣವಾಗಿದೆ.

ಈ ಎಲ್ಲದರ ಮಧ್ಯೆ ನಾವು ಅನುಭವಿಸುತ್ತಿರುವ ಕೊವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ಉದ್ಭವಿಸಿದ ಎಲ್ಲ ಸಮಸ್ಯೆಗಳನ್ನು ದೇಶದ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮದೇ ಆದ ರೀತಿಯಲ್ಲಿ ಎದುರಿಸುತ್ತಿವೆ. ಈ ಎಲ್ಲ ಜಟಿಲ ನಿರ್ಧಾರಗಳಿಂದ ನಿರ್ಮಾಣವಾದ ಘಟನಾಕ್ರಮಗಳ ಪ್ರವಾಹದಲ್ಲಿ ದೇಶದ ಸಾಮಾನ್ಯ  ಪ್ರಜೆಗೆ ತನ್ನ ದೈನಂದಿನ ಅಸ್ತಿತ್ವದ ಕುರಿತಾಗಿ ಯಾವ ಬಗೆಯ ಅರಿವಿರಬೇಕು ಎಂಬುದರ ಬಗ್ಗೆ ನಾವು ವಿವೇಚಿಸಬೇಕಾಗಿದೆ. ಇನ್ನೂ ಮುಖ್ಯವಾಗಿ, ಈ ಜನಸಾಮಾನ್ಯನ ಸಂವಿಧಾನಾತ್ಮಕವಾದ ಮೂಲಭೂತ ಹಕ್ಕುಬಾಧ್ಯತೆಗಳಿಗೆ ಧಕ್ಕೆ ಬರದಹಾಗೆ ನೋಡಿಕೊಳ್ಳುವ ಹೊಣೆ ಯಾರಿಗಿದೆ ಎಂಬುದು ಮುಖ್ಯವಾಗುತ್ತದೆ.

ಸತ್ತೆಯ ಬಲವಿರುವ ಶಾಸಕಾಂಗ ತನಗೆ ಬೇಕಾದ ರೀತಿಯಲ್ಲಿ ನಿರ್ಧಾರವನ್ನು ಕೈಗೊಂಡಾಗ ಅದಕ್ಕೆ ಕಡಿವಾಣ ಹಾಕುವ ಶಕ್ತಿ ನ್ಯಾಯಾಂಗಕ್ಕಿದೆ. ಆದರೆ, ನ್ಯಾಯಾಂಗ ಮತ್ತು ಎಲ್ಲ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳು, ಸರಕಾರ (ಮತ್ತು ಶಾಸಕಾಂಗ) ಹಾಕುತ್ತಿರುವ ಬೇಲಿಯ ಹರವನ್ನು ಸಂವಿಧಾನದ ಪರಿಧಿಯಲ್ಲಿ ಪರೀಕ್ಷಿಸಲು ತ್ವರಿತವಾದ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಅದು ದೇಶದ ಪ್ರಜಾಸತ್ತಾತ್ಮಕ ಆಶಯಗಳಿಗೆ ಧಕ್ಕೆ ಉಂಟು ಮಾಡಿದಂತಾಗುತ್ತದೆ.

ಕಾರ್ಯಾಂಗ ಒಡ್ಡಬಹುದಾದ ಆಮಿಷಗಳಿಗೆ ಪಕ್ಕಾಗುವ ಸಾಧ್ಯತೆಗಳು ಇಲ್ಲದಿಲ್ಲ. ರಾಜ್ಯಸಭೆಗೆ ನಾಮಕರಣ ಮಾಡುವುದಿರಬಹುದು, ರಾಜ್ಯಗಳ ರಾಜ್ಯಪಾಲರಾಗಿ ನೇಮಕಗೊಳ್ಳುವುದಿರಬಹುದು, ರಾಜದೂತರಾಗಿ ಇನ್ನೊಂದು ದೇಶಕ್ಕೆ ತೆರಳುವುದಿರಬಹುದು… ಹೀಗೆ ಹತ್ತುಹಲವಾರು ಆಮಿಷಗಳನ್ನು ಸೃಷ್ಟಿಸುವ ಸಾಧ್ಯತೆಗಳು ಕಾರ್ಯಾಂಗದ ಪರಿಧಿಯಲ್ಲಿವೆ. ಅದಕ್ಕೆ ಪಕ್ಕಾಗದೆ ಸಂವಿಧಾನದ ಮೂಲಭೂತ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಸ್ವಾಯತ್ತತೆಯನ್ನು ಮೆರೆಯುವಂತಹ ಸಾಧ್ಯತೆಗಳನ್ನು ಈ ಎಲ್ಲ ಸಂಸ್ಥೆಗಳನ್ನು ಮುನ್ನೆಡೆಸುವವರಲ್ಲಿ ನಾವು ಕಾಣಬೇಕಾಗಿದೆ.

ಇದನ್ನು ನೆನೆಸಿಕೊಂಡೆ ನಮ್ಮ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹೇಳಿದ ಮಾತುಗಳು ಇಂದಿಗೂ ರಿಂಗುಣಿಸುತ್ತವೆ… “ನಾವು ಎಷ್ಟೇ ಒಳ್ಳೆಯ ಸಂವಿಧಾನವನ್ನೇ ಬರೆಯಬಹುದು. ಆದರೆ ಮುಂಬರುವ ದಿನಗಳಲ್ಲಿ ಅದನ್ನು ಅರಿತುಕೊಂಡು ಅದರ ಆಶಯಗಳನ್ನು ಪರಿಪಾಲಿಸುವವರ ಮೇಲೆ ಅದರ ಯಶಸ್ಸು ನಿಂತಿರುತ್ತದೆ”.

*ಲೇಖಕರು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅಂತರ ರಾಷ್ಟ್ರೀಯ ಕಾನೂನು ವಿಷಯದ ಪ್ರಾಧ್ಯಾಪಕರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು.

Leave a Reply

Your email address will not be published.