ಇಂದಿನ ವೈದ್ಯಕೀಯ ರಂಗ ಸೇವೆಯೋ? ಸುಲಿಗೆಯೋ?

ಜೂನ್ ಸಂಚಿಕೆಯ ಮುಖ್ಯಚರ್ಚೆ

ಪಾರಂಪಾರಿಕವಾಗಿ ವೈದ್ಯಕೀಯ ಸೇವೆಯನ್ನು ಅತ್ಯಂತ ಗೌರವದಿಂದ ನೋಡುತ್ತಾ ವೈದ್ಯರನ್ನು ದೇವರ ದೂತರೆಂದೇ ಕಂಡಿದ್ದೇವೆ. ಇದಕ್ಕೆ ತಕ್ಕಂತೆ ನಮ್ಮೆಲ್ಲರ ನಡುವೆ ನಿರಪೇಕ್ಷೆಯಿಂದ ಸೇವೆ ಮಾಡುತ್ತಾ ಬಂದಿರುವ ಹಲವಾರು ನಿಷ್ಕಳಂಕ ವೈದ್ಯರ ಕಥೆಗಳು ಇಂದಿಗೂ ಜನಜನಿತವಾಗಿವೆ. ಇಂತಹ ನೂರಾರು ವೈದ್ಯರು ನಮ್ಮೊಡನಿದ್ದಾರೆ.

ಆದರೆ ಅತ್ಯಂತ ವ್ಯಾಪಕವಾಗಿ ವಾಣಿಜ್ಯೀಕರಣಗೊಂಡಿರುವ ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಸೇವೆಗೆ ಕಿಮ್ಮತ್ತಿಲ್ಲದಂತೆ, ಕರುಣೆಗೆ ಕವಡೆ ಕಾಸಿಲ್ಲದಂತೆ ಹಾಗೂ ಜೀವಕ್ಕೆ ಎಳ್ಳಷ್ಟೂ ದಯೆಯಿಲ್ಲದಂತೆ ಆಗಿದೆ. ಎಗ್ಗಿಲ್ಲದ ಲಾಭಕೋರತನದಲ್ಲಿ ಅಮಾಯಕ ಜನರನ್ನು ಅಕ್ಷರಶಃ ಸುಲಿಗೆ ಮಾಡಲಾಗುತ್ತಿದೆ. ಬೇಕಿಲ್ಲದ ದುಬಾರಿ ಪರೀಕ್ಷೆಗಳಿಗೆ ಒಡ್ಡಿ ಬೇಡದ ಚಿಕಿತ್ಸೆ ಹಾಗೂ ಔಷಧಿಗಳನ್ನು ರೋಗಿಯ ಗಂಟಲಿನೊಳಗೆ ತುರುಕಲಾಗುತ್ತಿದೆ. ಕಾರ್ಪೊರೇಟ್ ಚಿಕಿತ್ಸಾ ಕೇಂದ್ರಗಳು ಹಾಗೂ ಔಷಧಿ ಕಂಪನಿಗಳ ದಾಸ್ಯತ್ವ ಪಡೆದಿರುವ ನಿರ್ದಯಿ ವೈದ್ಯರು ‘ಯಾವುದಾದರೂ’ ರೀತಿಯಲ್ಲಿ ಹಣ ಗಳಿಸುವುದೇ ತಮ್ಮ ಉದ್ಯಮದ ಗುರಿಯೆಂದು ರೋಗಿಗಳ ಬೇಟೆಯಾಡುತ್ತಿದ್ದಾರೆ.

ಅದಕ್ಷತೆಯ ಚರಮಸ್ಥಿತಿಯಲ್ಲಿರುವ ಸರ್ಕಾರಗಳು ವೈದ್ಯಕೀಯ ಸೇವೆಗಳನ್ನು ಖಾಸಗಿ ವಲಯಕ್ಕೆ ಬಿಟ್ಟುಕೊಡುವ ಜೊತೆಗೆ ಯಾವುದೇ ನಿಯಂತ್ರಣ ಮಾಡುವ ಉದ್ದೇಶವನ್ನು ಮರೆತಿವೆ. ಈ ಆತಂಕಕಾರಿ ಬೆಳವಣಿಗೆಯ ಬಗ್ಗೆ ಸಮಾಜಮುಖಿ ಮನಸ್ಸುಳ್ಳ ಹಲವು ವೈದ್ಯರು-ಪರಿಣತರು ಇಂದಿನ ವೈದ್ಯಕೀಯ ಕ್ಷೇತ್ರದ ನಿಜರೂಪವನ್ನು ಅನಾವರಣ ಮಾಡಲಿದ್ದಾರೆ. ಜೂನ್ ಮುಖ್ಯಚರ್ಚೆಯ ಈ ವಿಷಯಕ್ಕೆ ಸಂಬಂಧಿಸಿದಂತೆ ಓದುಗರು ಮುಕ್ತವಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ಸಜ್ಜಾಗಿದೆ. ಮೇ 18ರೊಳಗೆ ನಿಮ್ಮ ಬರಹ ಕಳುಹಿಸಿ ಚರ್ಚೆಯಲ್ಲಿ ಭಾಗವಹಿಸಿ.

ಸಂಪಾದಕರು, ‘ಸಮಾಜಮುಖಿ’ ಮಾಸಪತ್ರಿಕೆ

ನಂ.111, 4ನೇ ಮಹಡಿ, ಕೃಷ್ಣಪ್ಪ ಕಾಂಪೌಂಡ್, ಲಾಲ್‍ಬಾಗ್ ರಸ್ತೆ,

ಬೆಂಗಳೂರು-560027, ಮೊ: 9606934018. samajamukhi2017@gmail.com

Leave a Reply

Your email address will not be published.