ಇಂದು ಸಂತೃಪ್ತ, ನಾಳೆ ಗೊತ್ತಿಲ್ಲ!

ಭೋವಿ ರಾಘವೇಂದ್ರ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಜಂಗಮರಹಟ್ಟಿಯವ. ಬದುಕನ್ನು ಅರಸಿಕೊಂಡು ತಂದೆ ರಾಮಾಂಜನೇಯ ತಾಯಿ ಅಂಬಮ್ಮನೊಂದಿಗೆ ಗಂಗಾವತಿಗೆ ಗುಳೆ ಬಂದವನು. ಮಿನಿಲಾರಿಯನ್ನು ಖರೀದಿ ಮಾಡಿ ಅದರಲ್ಲಿ ಒಂದು ಅಚ್ಚುಕಟ್ಟಾದ ಎಗ್‍ ಐಟಂ ಪ್ರಧಾನವಾದ ಫಾಸ್ಟ್ ಫುಡ್ ಸೆಂಟರ್ ಆರಂಭಿಸಿದ್ದಾನೆ.

ಗಂಗಾವತಿಯ ಬಸ್‍ನಿಲ್ದಾಣದ ಪಕ್ಕದಲ್ಲಿರುವ ನಗರಸಭೆಯ ಗೋಡೆಗೆ ಹೊಂದಿಕೊಂಡಂತೆ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಯುವಕನೊಬ್ಬ ಕೈ-ಕಾಲಿಗೆ ಒಂದಿಷ್ಟೂ ಬಿಡುವಿಲ್ಲದೆ ಎಗ್‍ರೈಸ್, ಎಗ್‍ಚಪಾತಿ, ಎಗ್‍ಬಾತ್, ಎಗ್‍ಬಿರಿಯಾನಿ, ಆಮ್ಲೇಟ್ ಹಾಕುತ್ತಿದ್ದರೆ ಘಮಘಮಿಸುವ ಎಗ್ ಲೋಕದ ಮಾಂತ್ರಿಕನ ಕಡೆ ಜನ ನಾಲಿಗೆ ಚಪ್ಪರಿಸುತ್ತಲೇ ಮುಗಿಬೀಳುತ್ತಾರೆ. ಬದುಕಿನ ತೆರೆದ ಪುಟದಂತೆ ಈ ಯುವಕ ಕಣ್ತುಂಬ ಆತ್ಮವಿಶ್ವಾಸ, ಕೈತುಂಬ ರುಚಿಕಟ್ಟಾದ ಅಡುಗೆ ಮಾಡುತ್ತ ಬಂದವರಿಗೆ ಅಣ್ಣ-ಅಪ್ಪ ಎಂದು ಪ್ರೀತಿಯಿಂದ ಮಾತಾಡಿಸುತ್ತಾ ಗಿರಾಕಿಗಳನ್ನು ಬರಸೆಳೆಯುವಲ್ಲಿ ನಿರತನಾಗಿರುತ್ತಾನೆ. ಸಾಮಾನ್ಯ ಜನರಿಂದ ಹಿಡಿದು ರಾಜಕಾರಣಿಗಳವರೆಗೂ ಈತನ ಎಗ್‍ರೈಸ್, ಎಗ್‍ಚಪಾತಿಯ ಗ್ರಾಹಕರಿದ್ದಾರೆ; ಯಾವ ಭಿಡೆಯಿಲ್ಲದೆಯೇ ಬೀದಿಯಲ್ಲಿ ನಿಂತು ತಿನ್ನುವುದೊಂದು ವಿಶೇಷ. ತನ್ನ ಜೀವನದ ಆತ್ಮ ಸಂಗಾತಿಯಂತಿರುವ ಮಿನಿಲಾರಿಯೊಂದನ್ನು ಒಪ್ಪವಾಗಿ ಅಂಗಡಿಯಂತೆ ಮಾಡಿಕೊಂಡು ಅದಕ್ಕೆ ಝಗಮಗಿಸುವ ಲೈಟುಗಳನ್ನು ಹಾಕಿ ನಿಂತನೆಂದರೆ ಎಗ್‍ಲೋಕದ ವಿಭಿನ್ನ ರುಚಿಗೆ ಜನರ ನಾಲಿಗೆಯೂ ತೆರೆದುಕೊಳ್ಳುತ್ತದೆ. ಈ ಯುವಕನೇ ರಾಘವೇಂದ್ರ ಭೋವಿ. ಈತನ ಆತ್ಮಸಂಗಾತಿಯೇ ಎಸ್.ಆರ್.ಫಾಸ್ಟ್‍ಫುಡ್ ಸೆಂಟರ್. ರಾಘವೇಂದ್ರನ ಎರಡನೇ ಹೆಂಡತಿಯಂತಿರುವ ಎಸ್.ಆರ್.ಫಾಸ್ಟ್‍ಫುಡ್ ಸೆಂಟರ್ ಎಂಬ ಮಿನಿಲಾರಿ ಸದಾ ಸಂಚಾರಿ.

ಭೋವಿ ರಾಘವೇಂದ್ರ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಜಂಗಮರಹಟ್ಟಿಯವ. ಬದುಕನ್ನು ಅರಸಿಕೊಂಡು ತಂದೆ ರಾಮಾಂಜನೇಯ ತಾಯಿ ಅಂಬಮ್ಮನೊಂದಿಗೆ ಗಂಗಾವತಿಗೆ ಗುಳೆ ಬಂದವನು. 1995-96ರ ಸಂದರ್ಭದಲ್ಲಿ ಗಂಗಾವತಿಯ ಪ್ರಸಿದ್ಧ ದೇಗುಲ ವಾನಭದ್ರೇಶ್ವರ ಬಯಲು ತಾಣದಲ್ಲಿ ಚೈನಾಗೇಟ್ ಎಂಬ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ರಾಮಾಂಜನೇಯ ಚೈನಾಗೇಟ್ ಸಿನಿಮಾ ಸಮುದಾಯದವರನ್ನು ಕಾಯುವ ಸೆಕ್ಯೂರಿಟಿಗಾರ್ಡ್ ಆಗಿ 1500 ರೂ. ಸಂಬಳ ಪಡೆಯುತ್ತಿದ್ದ. ಶೂಟಿಂಗ್ ಪೂರ್ಣವಾದ ಮೇಲೆ ರಾಘವೇಂದ್ರನ ಅಪ್ಪ ತಳ್ಳುಬಂಡಿಯಲ್ಲಿ ಇಡ್ಲಿ-ವಡಾ ಮಾರುತ್ತಾ ಬೀದಿಬೀದಿಯಲ್ಲಿ ಸಂಚಾರಿ ಆಗಿದ್ದಾಗ ಹುಡುಗ ರಾಘವೇಂದ್ರ ಜತೆಯಾಗಿದ್ದ.

ಯುವಕ ಒಂದು ಬಂಡಿಯಲ್ಲಿ ರುಚಿಕಟ್ಟಾದ ಕುಷ್ಕ ಮಾರಲು ಮುಂದಾದ. ವ್ಯಾಪಾರ ಚೆನ್ನಾಗಿಯೇ ಆಯಿತು. ದಿನಕ್ಕೆ 500ರೂ. ಉಳಿತಾಯವಾಯಿತು. ಬಂದ ಹಣವನ್ನು ಚೀಟಿ ಮತ್ತು ಪಿಗ್ಮಿಗಳಲ್ಲಿ ತೊಡಗಿಸಿದ.

ತಳ್ಳುಬಂಡಿಯಿಂದ ಬಂದ ಹಣದಲ್ಲಿಯೇ ರಾಮಾಂಜನೇಯ ನಾಲ್ಕುಜನ ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳನ್ನು ಸಲಹುವುದು ಕಡುಕಷ್ಟವಾಯಿತು. ಆಗ ಬಳ್ಳಾರಿಯ ಜಿಂದಲ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಾನೆ. ಮನೆಯ ಜವಾಬ್ದಾರಿಯು ರಾಘವೇಂದ್ರನ ಹೆಗಲಿಗೆ ಬಂತು. ಆಗ ಯುವಕ ಒಂದು ಬಂಡಿಯಲ್ಲಿ ರುಚಿಕಟ್ಟಾದ ಕುಷ್ಕ ಮಾರಲು ಮುಂದಾದ. ವ್ಯಾಪಾರ ಚೆನ್ನಾಗಿಯೇ ಆಯಿತು. ದಿನಕ್ಕೆ 500ರೂ. ಉಳಿತಾಯವಾಯಿತು. ಬಂದ ಹಣವನ್ನು ಚೀಟಿ ಮತ್ತು ಪಿಗ್ಮಿಗಳಲ್ಲಿ ತೊಡಗಿಸಿದ. ಮುಂದೆ ವಿಜಯಾ ಬ್ಯಾಂಕಿನಲ್ಲಿ ರೂ.3,60,000 ಸಾಲ ಪಡೆದು ಒಂದು ಮಿನಿಲಾರಿಯನ್ನು ಖರೀದಿಮಾಡಿ ಅದರಲ್ಲಿ ಒಂದು ಅಚ್ಚುಕಟ್ಟಾದ ಎಗ್‍ಐಟಂ ಪ್ರಧಾನವಾದ ಫಾಸ್ಟ್‍ಫುಡ್ ಸೆಂಟರ್ ಆರಂಭಿಸಿದ್ದಾನೆ. ಈ ಬ್ಯಾಂಕ್ ಸಾಲದೊಂದಿಗೆ ಮುದ್ರಾ ಯೋಜನೆಯಲ್ಲಿ 50,000 ರೂ. ಸಾಲ ಪಡೆದುಕೊಂಡಿದ್ದಾನೆ.

ಪ್ರತಿದಿನ 8 ಕೆ.ಜಿ. ಅಕ್ಕಿ, 400 ಮೊಟ್ಟೆ, 100 ಚಪಾತಿ ಖರ್ಚಾಗುತ್ತವೆ. ದಿನವೂ ರೂ.3000-3500 ಬಂಡವಾಳ ಹಾಕುತ್ತಾನೆ. 5000 ರೂಪಾಯಿ ವ್ಯಾಪಾರವಾಗುತ್ತದೆ. ತಿಂಗಳಿಗೆ ಇಪ್ಪತ್ತು ದಿನ ಮಾತ್ರ ಈತನ ಫಾಸ್ಟ್‍ಫುಡ್ ಸೆಂಟರ್ ಕೆಲಸಮಾಡುತ್ತದೆ. ಇಪ್ಪತ್ತು ದಿನಕ್ಕೆ ರೂ.40,000 ಆದಾಯ ಬರುತ್ತದೆ. ಇದರಲ್ಲಿ ರೂ.5000 ಮನೆಬಾಡಿಗೆ, ರೂ.5,000 ಲೋನ್‍ಗೆ ಹೋಗುತ್ತದೆ. ತಮ್ಮ ಮದುವೆಯ ಸಾಲ 5 ಲಕ್ಷ ರೂಪಾಯಿಯಾಗಿದೆ. ಅದನ್ನು ತಿಂಗಳ ಕಂತಿನಲ್ಲಿ ತೀರಿಸಬೇಕು.

ನಾಲ್ಕು ಜನ ಅಕ್ಕಂದಿರ ಆರೋಗ್ಯದ ಜವಾಬ್ದಾರಿಯೂ ಈತನ ಮೇಲಿದೆ. ಹಾಗಾಗಿ ಬರುವ ಯಾವ ಆದಾಯವೂ ದೊಡ್ಡಮಟ್ಟದಲ್ಲಿ ಉಳಿತಾಯವಾಗುವುದಿಲ್ಲ. ದೈನಂದಿನ ಬಂಡವಾಳ ಹೂಡಿಕೆಗೆ ಶ್ರೀಮಂತ ವ್ಯಾಪಾರಿಗಳಿಂದ ಕೈಸಾಲ ಪಡೆಯುತ್ತಾನೆ. ವ್ಯಾಪಾರದಿಂದ ಬಂದ ಹಣದಿಂದ ಬಡ್ಡಿ ಸಮೇತ ಮುಟ್ಟಿಸಬೇಕು. ಬಡವರ ಬಂಧು ಯೋಜನೆಯಲ್ಲಿ 2000 ರೂ. ಸಾಲ ಪಡೆದಿದ್ದಾನೆ. ಹೆಂಡತಿ ಮಂಜುಳಾ ಎಸ್.ಎಸ್.ಎಲ್.ಸಿ. ಓದಿದ್ದಾಳೆ. ಫಾಸ್ಟ್‍ಫುಡ್‍ಗೆ ಬೇಕಾದ ಅನ್ನ, ಚಪಾತಿ, ಸಾಂಬಾರು, ಚಟ್ನಿಯನ್ನು ಮನೆಯಲ್ಲಿ ಬಿಡುವಿಲ್ಲದೆಯೇ ದುಡಿದು ಮಾಡಿಕೊಳ್ಳುತ್ತಾಳೆ. ಮಂಜುಳಾ ಅವರ ತಾಯಿಯಿಲ್ಲ. ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಅಳಿಯ ರಾಘುನದೇ.

ಮುಂದೆ ಏನಾಗುತ್ತದೋ ಗೊತ್ತಿಲ್ಲ ಎಂಬ ಕೊರಗೂ ಇದೆ ಆತನಿಗೆ. ರಾತ್ರಿ ವೇಳೆಯಲ್ಲಿ ಕುಡಿದು ಬರುವ ಕೆಲವರು ಚೆನ್ನಾಗಿ ತಿಂದು ಹಣಕೊಡದೇ ಹೋಗುತ್ತಾರಂತೆ. ಒಮ್ಮೆ ಪ್ರಭಾವಿಯೊಬ್ಬ ಅಂಗಡಿ ಮುಚ್ಚಿದ ಮೇಲೆ ಊಟ ಕೇಳಿದ್ದಾನೆ. ಕಾಲಿಯಾಗಿದೆಯೆಂದದ್ದಕ್ಕೆ ಮೂಳೆ ಮುರಿಯುವಂತೆ ಬಡಿಸಿಕೊಂಡಿದ್ದಾನೆ ರಾಘವೇಂದ್ರ. ಬೀದಿ ಬದಿಯಲ್ಲಿ ಇಂತಹ ಹಲವು ಘಟನೆಗಳು ಇವನಿಗೆ ಆಗಾಗ್ಗೆ ಇರುತ್ತವೆ.

ಕೇವಲ 9ನೇ ತರಗತಿ ಓದಿರುವ ರಾಘು ಜೀವನದ ಏಳು-ಬೀಳಿನಲ್ಲಿ ನಲುಗಿ ಬದುಕಿನೋಪಾಯಕ್ಕೆ ಫಾಸ್ಟ್‍ಫುಡ್ ಸೆಂಟರ್ ಮಾಡಿಕೊಂಡು ಅದರ ಕಷ್ಟ-ನಷ್ಟದಲ್ಲಿಯೇ 20*30 ರ ಒಂದು ಸೈಟ್‍ನ್ನು ಖರೀದಿಸಿದ್ದಾನೆ. ಸ್ವಂತ ಊರಲ್ಲಿ 5 ಎಕರೆ ಜಮೀನಿದೆ. ಜಮೀನಿನಲ್ಲಿ ಅಪ್ಪನ ಕಾಲದಿಂದ ಒಂದು ಜೋಪಡಿಯಿದೆ. ಈಗ ರಾಘವೇಂದ್ರ ಭೋವಿ ಸ್ವಾಭಿಮಾನದಿಂದ ಫಾಸ್ಟ್‍ಫುಡ್ ಸೆಂಟರ್ ನಡೆಸುತ್ತಿದ್ದಾನೆ. ಒಳ್ಳೆಯ ಲಾಭವಂತೂ ಸದ್ಯಕ್ಕಿದೆ. ಮುಂದೆ ಏನಾಗುತ್ತದೋ ಗೊತ್ತಿಲ್ಲ ಎಂಬ ಕೊರಗೂ ಇದೆ ಆತನಿಗೆ. ರಾತ್ರಿ ವೇಳೆಯಲ್ಲಿ ಕುಡಿದು ಬರುವ ಕೆಲವರು ಚೆನ್ನಾಗಿ ತಿಂದು ಹಣಕೊಡದೇ ಹೋಗುತ್ತಾರಂತೆ. ಒಮ್ಮೆ ಪ್ರಭಾವಿಯೊಬ್ಬ ಅಂಗಡಿ ಮುಚ್ಚಿದ ಮೇಲೆ ಊಟ ಕೇಳಿದ್ದಾನೆ. ಕಾಲಿಯಾಗಿದೆಯೆಂದದ್ದಕ್ಕೆ ಮೂಳೆ ಮುರಿಯುವಂತೆ ಬಡಿಸಿಕೊಂಡಿದ್ದಾನೆ ರಾಘವೇಂದ್ರ. ಬೀದಿ ಬದಿಯಲ್ಲಿ ಇಂತಹ ಹಲವು ಘಟನೆಗಳು ಇವನಿಗೆ ಆಗಾಗ್ಗೆ ಇರುತ್ತವೆ.

ಪುಟ್ಟ ಮಗು ಮನ್ವಿತ್ ಭೋವಿ, ಸ್ವಾಭಿಮಾನದ ಹೆಂಡತಿ ಮಂಜುಳಾ ಅವರೊಂದಿಗೆ ಎಲ್ಲ ಕುಟುಂಬ ಸದಸ್ಯರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾನೆ, ಯೋಗಕ್ಷೇಮ ನೋಡಿಕೊಳ್ಳುತ್ತಾನೆ. ರಾಘವೇಂದ್ರನ ತಂದೆ ರಾಮಾಂಜನೇಯ ಕಳೆದ ಐದು ವರ್ಷಗಳಿಂದ ನಾಪತ್ತೆಯಾಗಿ ಹೋದದ್ದು ಅವನಿಗೆ ದಿನವೂ ಕಾಡುವ ನೋವು. ದಿನ ಬೆಳಗಾದರೆ ಅಪ್ಪನ ತಳ್ಳುಬಂಡಿಯ ಜತೆ ಹೋಗುತ್ತಿದ್ದ ರಾಘವೇಂದ್ರನಿಗೆ ಇದು ತಾಳಲಾರದ ದುಃಖ. ಯಾರನ್ನೂ ದ್ವೇಷದಿಂದ ನೋಡದ ಈ ಯುವಕ ರಾಘವೇಂದ್ರ ಮನೆಯಲ್ಲಿ ಟಿ.ವಿ, ಕಂಪ್ಯೂಟರ್ ಮತ್ತು ಮನೆಗೆ ಬೇಕಾದ ಅಗತ್ಯ ಸೌಲಭ್ಯಗಳಿಟ್ಟುಕೊಂಡು ನಾಳಿನ ಬದುಕಿನ ಬಗ್ಗೆ ಯಾವ ಭರವಸೆಯೂ ಇಲ್ಲದೇ ಇಂದಿನ ಸುಖವೇ ನಂಬಿ ನಡೆಯುತ್ತಿದ್ದಾನೆ.

Leave a Reply

Your email address will not be published.