ಇತಿಹಾಸದಲ್ಲಿ ಪೂಜಾಸ್ಥಳಗಳ ನಿರ್ಮಾಣ ಧರ್ಮ ಮತ್ತು ರಾಜಕಾರಣ

ಚರಿತ್ರೆ ಹೇಳುವ ಸತ್ಯವೆಂದರೆ ಎಲ್ಲಾ ಧರ್ಮಗಳ ಪೂಜಾಸ್ಥಳಗಳು ಪಾರಮಾರ್ಥಿಕ ಸತ್ಯಗಳ ಪ್ರತೀಕಗಳಾಗುವ ಜೊತೆಗೆ ಅಂದಂದಿನ ರಾಜಕೀಯದ ಭಾಗವೂ ಆಗಿದ್ದವು; ಆಗಿವೆ. ಹೀಗಾಗಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಪ್ರಾಯಶಃ ಎಲ್ಲಾ ದೇಶಗಳಲ್ಲಿ ಪ್ರತಿನಿತ್ಯವೂ ಅವುಗಳ ಬಗ್ಗೆ ವಿವಾದಗಳು ಸಂಘರ್ಷಗಳು ನಡೆಯುತ್ತಿವೆ.

ರಾಜೇಂದ್ರ ಚೆನ್ನಿ

ಮಾರ್ಕಂಡೇಯರು ಹೇಳಿದರು: “ಕೃತಯುಗದಲ್ಲಿ ಈ ಭೂಮಿಯ ಮೇಲೆ ದೇವಸ್ಥಾನವನ್ನು ಕಟ್ಟಲಿಲ್ಲ, ಓ ದೊರೆಯೆ, ಜನರು ದೇವರುಗಳನ್ನು ತಮ್ಮ ಕಣ್ಣೆದುರಿಗೆ ಕಾಣುತ್ತಿದ್ದರು. ತ್ರೇತ ಹಾಗೂ ದ್ವಾಪರ ಯುಗಗಳಲ್ಲಿ, ಜನರು ದೇವರುಗಳನ್ನು ತಮ್ಮ ಕಣ್ಣೆದುರಿಗೇ ನೋಡುತ್ತಿದ್ದರೂ ಜನರು ಪ್ರತಿಮೆಗಳನ್ನು ಮಾಡಿ ವಿಧ್ಯುಕ್ತವಾಗಿ ಪೂಜಿಸುತ್ತಿದ್ದರು. ತ್ರೇತಾಯುಗದಲ್ಲಿ ದೇವರ ಪ್ರತಿಮೆಗಳನ್ನು ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದರು. ದ್ವಾಪರದಲ್ಲಿ ಋಷಿಗಳು ಪ್ರತಿಮೆಗಳನ್ನು ಅರಣ್ಯಗಳಲ್ಲಿ ಮಾಡಿದರು. ಸಿದ್ಧರು ಅವುಗಳನ್ನು ಯಾವಾಗಲೂ ಪೂಜಿಸಿದರು. ಋಷಿಗಳು ದೇವಾಲಯದಲ್ಲಿ ಅವುಗಳನ್ನು ಪ್ರತಿಷ್ಠಾಪಿಸಲು ಸಂತೋಷಿಸಿದರು. ಈ ಕಲಿಯುಗದಲ್ಲಿ ಎಲ್ಲಾ ಜನರು ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡುವ ಕ್ರಿಯೆಯನ್ನು ಮಾಡುತ್ತಾರೆ. ಕೃತ ಯುಗದಲ್ಲಿ ಜ್ಞಾನವು ಶ್ರೇಷ್ಠವಾಗಿತ್ತು; ತ್ರೇತಾಯುಗದಲ್ಲಿ ತಪವು ಶ್ರೇಷ್ಠವಾಗಿತ್ತು. ದ್ವಾಪರದಲ್ಲಿ ಕೂಡ ತಪವೇ ಮುಖ್ಯವಾಗಿತ್ತು. ಆದರೆ ಕಲಿಯುಗದಲ್ಲಿ ನಗರಗಳು ದೇವಸ್ಥಾನಗಳಿಂದ ತುಂಬಿಹೋಗಿವೆ” (ವಿಷ್ಣು ಧರ್ಮೋತ್ತರ ಪುರಾಣ, ಅಧ್ಯಾಯ 3.93, 1-6).

ವಿಷ್ಣು ಧರ್ಮೋತ್ತರ ಪುರಾಣದ ಈ ಸಾಲುಗಳು ನಿರಾಕಾರ ಹಾಗೂ ನಿರ್ಗುಣವಾದ ದೈವತ್ವದ ಜೊತೆಗಿನ ಅನುಭಾವದಿಂದ, ದೈವತ್ವವನ್ನು ಪ್ರತಿಮೆಗಳ ಮೂಲಕ ನೋಡುವ ಬೆಳವಣಿಗೆಯನ್ನು ಒಂದು ರೀತಿಯ ಅವನತಿಯಾಗಿ ಕಾಣುತ್ತದೆ. ಆದರೆ ಚರಿತ್ರೆಯು ಹೇಳುವ ಸತ್ಯವೆಂದರೆ ಮನುಷ್ಯ ಜೀವಿಗಳಿಗೆ ಪರಮಾರ್ಥವನ್ನು ಅಲೌಕಿಕ ಶಕ್ತಿಯಾಗಿ ನೋಡುವುದು ಎಷ್ಟು ಮುಖ್ಯವೋ, ಮೂರ್ತವಾಗಿ ಪ್ರತಿಮೆ ಮತ್ತು ಪೂಜಾ ಸ್ಥಳಗಳ ಮೂಲಕ ಸಾಮಾಜಿಕವಾಗಿ ಆರಾಧಿಸುವುದು ಅಷ್ಟೇ ಮುಖ್ಯವಾಗಿದೆ. ಹೀಗಾಗಿ ಎಲ್ಲಾ ಧರ್ಮಗಳು ಪೂಜಾ ಸ್ಥಳಗಳನ್ನು ಸ್ಥಾಪಿಸಿದ್ದು ಮಾತ್ರವಲ್ಲ ಇವು ಲೌಕಿಕ ಬದುಕಿನ ಸಾಮಾಜಿಕ, ರಾಜಕೀಯ ವಿದ್ಯಮಾನಗಳಲ್ಲಿ ನಿರಂತರವಾಗಿ ಭಾಗವಹಿಸಿದವು. 

ಕೆಲವು ವಿದ್ವಾಂಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಧರ್ಮಗಳನ್ನು ಹುಟ್ಟು ಹಾಕಿದ ಪ್ರವಾದಿಗಳು ಸ್ವತಃ ತಮ್ಮ ಜೀವನದಲ್ಲಿ ಆ ಕಾಲದ ರಾಜಕೀಯದಲ್ಲಿ ಕ್ರಿಯಾಶೀಲರಾಗಿದ್ದರೆಂದೆ ದಾಖಲಿಸುತ್ತಾರೆ. ಉದಾಹರಣೆಗೆ ಜೀಸಸ್ ಕ್ರೈಸ್ಟ್ ರೋಮನ್ ರಾಜಕೀಯ ವ್ಯವಸ್ಥೆಗೆ ಒಬ್ಬ ರಾಜದ್ರೋಹಿಯಾಗಿ ಕಂಡು ಶಿಲುಬೆಯನ್ನು ಏರಬೇಕಾಯಿತು. ಅನೇಕ ದೇವರ ಉಪಾಸನೆ ಹಾಗೂ ಏಕಸೂತ್ರತೆಯೇ ಇಲ್ಲದ ಕಟ್ಟಳೆಗಳನ್ನು ಹೊಂದಿದ್ದ ಬುಡಕಟ್ಟುಗಳನ್ನು ಒಗ್ಗೂಡಿಸಲು ಪ್ರವಾದಿ ಮುಹಮ್ಮದರು ಹೊಸ ಧರ್ಮವನ್ನು ಹುಟ್ಟುಹಾಕಿದಾಗ ನಿರಂತರವಾದ ರಾಜಕೀಯ ಸಂಘರ್ಷವನ್ನು, ಯುದ್ಧಗಳನ್ನು ಎದುರಿಸಬೇಕಾಯಿತು. 

ಮದೀನಾಗೆ ವಲಸೆ ಬಂದ ಮೇಲೆ ಅವರು ಮಸೀದಿಯನ್ನು ಕಟ್ಟಿದ್ದು ಮಾತ್ರವಲ್ಲ, ಕಟ್ಟುವ ಕೆಲಸದಲ್ಲಿ ಸ್ವತಃ ಇತರರೊಂದಿಗೆ ದೈಹಿಕ ಶ್ರಮದಲ್ಲಿ ಪಾಲುಗೊಂಡರೆAದು ನಂಬಲಾಗುತ್ತದೆ. ಅಲ್ಲದೆ ಸ್ಥಾಪನೆಗೊಂಡ ಮೇಲೆ ಮಸೀದಿಯು ಒಂದು ಸಾಮಾಜಿಕ ಕೇಂದ್ರವೂ ಆಗಿತ್ತು. ಹೊಸ ಧರ್ಮದ ಚರ್ಚೆ, ಉಪದೇಶಗಳ ಜೊತೆಗೆ ಸಾಮಾಜಿಕ, ರಾಜಕೀಯ ಚರ್ಚೆಗಳಿಗೂ ಕೇಂದ್ರವಾಗಿತ್ತು. ಪ್ರವಾದಿ ಮುಹಮ್ಮದರ ಅಪೂರ್ವವಾದ ಸರಳತೆ ವಿನಯಗಳ ಪ್ರತೀಕವಾಗಿ ಈ ಮಸೀದಿಯ ರಚನೆಯೂ ಇತ್ತು. ಮುಂದಿನ ಶತಮಾನಗಳಲ್ಲಿ ಇಸ್ಲಾಮ್ ಧರ್ಮದ ಅಪಾರವಾದ ವಿಸ್ತಾರದಲ್ಲಿ ಅನೇಕ ರಾಜಸತ್ತೆಗಳು, ಕ್ಷಾತ್ರ ಕುಲಗಳು ಭಾಗಿಯಾಗಿ ಧರ್ಮ ಹಾಗೂ ರಾಜಕೀಯಗಳು ಬೇರ್ಪಡಿಸಲಾಗದಂತೆ ಒಂದಾದವು. ಅಲ್ಲಿಂದಾಚೆಗೆ ಮಸೀದಿಗಳ ನಿರ್ಮಾಣವು ಪ್ರಬಲ ರಾಜಕೀಯ ಶಕ್ತಿಗಳ ಕಾರ್ಯಸೂಚಿಯಾಗತೊಡಗಿತು. ಚರಿತ್ರೆಯ ದೃಷ್ಟಿಯಿಂದ ಇದು ಅಸಹಜವೂ ಅಲ್ಲ; ಅವನತಿಯೂ ಅಲ್ಲ. ಇದೊಂದು ವಾಸ್ತವ ಮಾತ್ರವಾಗಿದೆ.

‘ಚರ್ಚ್’ ಎನ್ನುವುದಕ್ಕೆ “ಸ್ವಾಮಿಯ ಮನೆ” (House of the Lord) ಎನ್ನುವ ಅರ್ಥವಿದ್ದರೆ congregation ಎನ್ನುವ ಅರ್ಥವೂ ಇದೆ. ಅಂದರೆ ಜನರು ಒಟ್ಟುಗೂಡುವುದು, ಒಂದು ಧಾರ್ಮಿಕ ಸಮುದಾಯ ಎನ್ನುವ ಅರ್ಥ. ಅನೇಕ ವಿದ್ವಾಂಸರ ಪ್ರಕಾರ ಈ ಸಮುದಾಯವು ಏಕಕಾಲಕ್ಕೆ ಧಾರ್ಮಿಕವೂ ರಾಜಕೀಯವೂ ಆಗಿತ್ತು. ಏಕೆಂದರೆ ಹೊಸ ಧರ್ಮವು ಅಸ್ತಿತ್ವದಲ್ಲಿದ್ದ ಸಮಾಜ ಹಾಗೂ ಧರ್ಮಗಳ ಮಧ್ಯೆ ತನ್ನ ಅಸ್ತಿತ್ವವನ್ನು ಹುಡುಕಬೇಕಾಗಿತ್ತು. ಈ ಸಮುದಾಯಗಳು ಮತ್ತು ವ್ಯಕ್ತಿಗಳು ಮೊದಲು ಮನೆಯಲ್ಲಿಯೇ ಆರಾಧನೆ ಮಾಡುತ್ತಿದ್ದು 3ನೇ ಶತಮಾನದ ಹೊತ್ತಿಗೆ ಚರ್ಚುಗಳು ಸಾರ್ವಜನಿಕ ಪೂಜಾ ಸ್ಥಳಗಳಾಗಿ ನಿರ್ಮಾಣವಾಗತೊಡಗಿದವು.

ಸ್ವತಃ ಜೀಸಸ್ ತನ್ನ ಕಾಲದ ರೋಮನ್ ಅಧಿಪತ್ಯ ಮತ್ತು ಯಹೂದಿ ಧಾರ್ಮಿಕ ಕಟ್ಟಳೆಗೊಂದಿಗೆ ಸಂಘರ್ಷವನ್ನು ಹೂಡಿದ್ದ. ಕ್ರಿಶ್ಚಿಯನ್ ಧರ್ಮವು ಸಾಂಸ್ಥಿಕ ಧರ್ಮವಾಗಿ ಬೆಳೆಯತೊಡಗಿದ ಮೇಲೆ ಇಡೀ ಯೂರೋಪ್‌ನಲ್ಲಿ ‘Church and State’ ಎನ್ನುವ ಎರಡು ಅತ್ಯಂತ ಪ್ರಬಲ ಸಂಸ್ಥೆಗಳ ಮಧ್ಯೆ ಅಧಿಕಾರಕ್ಕಾಗಿ ನಿರಂತರ ಸಂಘರ್ಷಗಳು ಹಲವಾರು ಶತಮಾನಗಳವರೆಗೆ ನಡೆದವು. ರೋಮನ್ ಕ್ಯಾಥಲಿಕ್ ಚರ್ಚು ಅತ್ಯಂತ ಶ್ರೀಮಂತ, ಲೌಕಿಕ ಅಧಿಕಾರವೂ ಹೊಂದಿದ ಸಂಸ್ಥೆಯಾಗಿತ್ತು.   

ಈ ಬಗ್ಗೆ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳು ಇವೆಯಾದರೂ, ಭಾರತದಲ್ಲಿ ದೇವಸ್ಥಾನಗಳ ನಿರ್ಮಾಣವು ಪೌರಾಣಿಕ ಹಿಂದೂ ಧರ್ಮಕ್ಕೆ ಹತ್ತಿರದ ಸಂಬಂಧಗಳನ್ನು ಹೊಂದಿದೆ. ಅಂದರೆ ವೇದಾಂತ ಮತ್ತು ಉಪನಿಷತ್ತುಗಳಿಗಿಂತ ಭಿನ್ನವಾಗಿ ಬೆಳೆದ ಹಿಂದೂ ಧರ್ಮವು ಗಟ್ಟಿಯಾಗಿ ಬೇರೂರಲು ದೇವಾಲಯಗಳು ಪ್ರಮುಖ ಸಾಧನಗಳಾಗಿದ್ದವು. 7 ಅಥವಾ 8ನೇ ಶತಮಾನದಿಂದಾಚೆಗೆ ದೇವಾಲಯ ಸಂಸ್ಕೃತಿಯು ಪ್ರಬಲವಾಗಿ ಬೆಳೆಯಿತು ಮತ್ತು ಅಸಂಖ್ಯಾತ ದೇವಾಲಯಗಳ ನಿರ್ಮಾಣವು ನಡೆಯಿತು.  ಈ ದೇವಾಲಯಗಳು ಅಂದಿನ ರಾಜಕೀಯದಲ್ಲಿ ವಹಿಸಿದ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕಾದರೆ ‘ಧಾರ್ಮಿಕ’, ‘ಸೆಕ್ಯೂಲರ್’ ಎನ್ನುವ ನಮ್ಮ ಆಧುನಿಕ ಕನ್ನಡಕಗಳನ್ನು ಆಚೆಗಿಡಬೇಕಾಗುತ್ತದೆ. ಇವು ವಸಾಹತುಶಾಹಿ ಮತ್ತು ಆಧುನಿಕತೆಗಳಿಂದ ಬಂದಿರುವ ಪರಿಕಲ್ಪನೆಗಳು.

ಈ ಕ್ಷೇತ್ರದ ಮಹತ್ವಪೂರ್ಣ ವಿದ್ವಾಂಸರಾದ ಆರ್.ಚಂಪಲಕ್ಷ್ಮೀ ಮತ್ತು ರೋಮಿಲಾ ಥಾಪರ್ ಅವರ ಪ್ರಕಾರ ಅಪಾರವಾದ ದೇಯ ಹಾಗೂ ಮಹಾದಾನಗಳ ಮೂಲಕ ದೊರೆಗಳು ದೇವಾಲಯಗಳ ನಿರ್ಮಾಣಕ್ಕಾಗಿ ಹಾಗೂ ನಿರ್ವಹಣೆಗಾಗಿ ಭೂಮಿ ಮತ್ತು ಧನದ ದೇಣಿಗೆ ನೀಡಿ ಒಂದು ರೀತಿಯಲ್ಲಿ ರಾಜಾಶ್ರಯವನ್ನು ನೀಡುವುದು ಅನಿವಾರ್ಯವಾಗಿತ್ತು. ಏಕೆಂದರೆ ಅದಿಲ್ಲದೆ ರಾಜತ್ವಕ್ಕೆ ಸಾಂಕೇತಿಕ ಅಥವಾ ಸಾಂಸ್ಕೃತಿಕ ಅಧಿಕಾರ ಸಿಕ್ಕುತ್ತಿರಲಿಲ್ಲ. ಅಲ್ಲದೆ ಬಹುಪಾಲು ಎಲ್ಲಾ ದೊರೆಗಳು ಸಮಾಜ ವ್ಯವಸ್ಥೆ ಮತ್ತು ಧಾರ್ಮಿಕ ವ್ಯವಸ್ಥೆಗಾಗಿ (ಅಂದರೆ ವರ್ಣ ಹಾಗೂ ಜಾತಿವ್ಯವಸ್ಥೆ) ಬ್ರಾಹ್ಮಣ ಪುರೋಹಿತ ವರ್ಗವನ್ನೇ ಅವಲಂಬಿಸಿದ್ದರಿಂದ ದೇವಾಲಯಗಳ ನಿರ್ಮಾಣ ಹಾಗೂ ದಾನಗಳಿಂದ ಈ ವರ್ಗದ ಹಿತಾಸಕ್ತಿಯನ್ನು ಕಾಯಬೇಕಾಗಿತ್ತು. 

ದೇವಾಲಯಗಳು ಶ್ರದ್ಧಾ ಕೇಂದ್ರಗಳಾಗಿರುವ ಜೊತೆಗೆ ಅಪಾರ ಸಂಖ್ಯೆಯ ಜನರಿಗೆ ಉದ್ಯೋಗವನ್ನು, ಸುತ್ತಮುತ್ತಲಿನ ವಿವಿಧ ಕಸುಬುಗಳ ಜನರಿಗೆ ಉತ್ಪಾದನೆಯನ್ನು ನೀಡುತ್ತಿದ್ದವು. ಈ ಕಾಲವು ನಗರೀಕರಣದ ಕಾಲವಾಗಿದ್ದರಿಂದ ಪ್ರಬಲವಾಗಿದ್ದ ವ್ಯಾಪಾರಿ ವರ್ಗವೂ ಅಪಾರ ದೇಣಿಗೆಯನ್ನು ನೀಡುವುದರ ಜೊತೆಗೆ ದೇವಾಲಯಗಳ ನಿರ್ವಹಣೆಯಲ್ಲಿ ಭಾಗವಹಿಸುತ್ತಿತ್ತು. ಸರಳವಾಗಿ ಹೇಳುವುದಾದರೆ ದೇವಾಲಯವು ರಾಜಸತ್ತೆ, ಬ್ರಾಹ್ಮಣ ಪುರೋಹಿತಶಾಹಿ ಮತ್ತು ವ್ಯಾಪಾರಿವರ್ಗಗಳ ಪರಸ್ಪರ ಸಂಬAಧಗಳ ಫಲವಾಗಿತ್ತು.  ಆದ್ದರಿಂದ ಇಡೀ ಸಮುದಾಯದ ಕೇಂದ್ರವೂ ಆಗಿತ್ತು. 

ನಿರ್ಗುಣ ಪಂಥದ ಅನುಭಾವಿಗಳು ಹಾಗೂ ವಚನಕಾರರನ್ನು ಬಿಟ್ಟರೆ ಇತರ ಭಕ್ತಿಪಂಥಗಳು, ವಿಶೇಷವಾಗಿ ದಕ್ಷಿಣ ಭಾರತದಲ್ಲಿ ದೇವಾಲಯ ಕೇಂದ್ರಿತವಾಗಿದ್ದವು. ಸಾಮ್ರಾಜ್ಯಗಳ ಕಾಲದಲ್ಲಿ ದೇವಾಲಯ ನಿರ್ಮಾಣವು ಬಹುಮುಖ್ಯ ರಾಜಕೀಯ ಕ್ರಿಯೆಯಾಗಿತ್ತು. ವಿಜಯನಗರದ ದೇವಾಲಯಗಳು, ಅಲ್ಲಿ ಸಿಕ್ಕಿರುವ ಭಿತ್ತಿಗಳು, ಇತರ ಶಾಸನಗಳನ್ನು ನೋಡಿದರೆ ಸಾಮ್ರಾಜ್ಯಗಳ ಲೌಕಿಕ ಅಧಿಕಾರವು ದೇವಾಲಯಗಳನ್ನು ಬಲವಾಗಿ ಅಬಲಂಬಿಸಿದ್ದು ಸ್ಪಷ್ಟವಾಗುತ್ತದೆ. ಪಾರಮಾರ್ಥಿಕ ಧಾರ್ಮಿಕ ಸತ್ಯಗಳನ್ನು ಮೂರ್ತವಾಗಿಸುವ ದೇವಾಲಯಗಳು ಅಧಿಕಾರ ರಾಜಕಾರಣದ ಭಾಗವಾಗಿದ್ದವು.

ಹೀಗಾಗಿಯೇ ರಾಜಕೀಯ ಸಂಘರ್ಷದಿಂದ ಆರಂಭವಾಗುತ್ತಿದ್ದ ಯುದ್ಧಗಳಲ್ಲಿ ದೇವಾಲಯಗಳ ಮೇಲೆ ದಾಳಿಗಳು ನಡೆಯುತ್ತಿದ್ದವು. ದೇವಾಲಯಗಳು ಅಪಾರ ಶ್ರೀಮಂತಿಕೆಯ ಆಗರವಾಗಿದ್ದರಿಂದ ಹಿಂದೂ ಸಾಮ್ರಾಜ್ಯ, ರಾಜ್ಯಗಳಲ್ಲಿ ಕೂಡ ದೇವಾಲಯಗಳ ಮೇಲೆ ದಾಳಿಯಾದವು. ಇಸ್ಲಾಮ್ ಪೂರ್ವದ ಭಾರತದಲ್ಲಿ ಅನೇಕ ದೇವಾಲಯಗಳ ಮೇಲೆ ದೊರೆಗಳು ದಾಳಿ ಮಾಡಿದ್ದರು. ಇವು ರಾಜಕೀಯ ಕ್ರಿಯೆಗಳಾಗಿದ್ದವು; ಧಾರ್ಮಿಕತೆ ಮತಾಂಧತೆಗೆ ಸಂಬಂಧಪಟ್ಟಿರಲಿಲ್ಲ.

ವೈದಿಕ ಹಿಂದು ಧರ್ಮದ ಬೆಳವಣಿಗೆಯ ಅನೇಕ ಶತಮಾನಗಳ ಹಿಂದೆಯೇ ಬೌದ್ಧ ಧರ್ಮವು ವಿಹಾರಗಳನ್ನು, ಚೈತ್ಯಾಲಯ ಹಾಗೂ ಸ್ತೂಪಗಳನ್ನು ನಿರ್ಮಿಸುವ ಕೆಲಸವನ್ನು ಮಾಡಿತ್ತು. ಇವು ಕೂಡ ನಗರೀಕರಣ ಮತ್ತು ವ್ಯಾಪಾರಿ ವರ್ಗಗಳ ಉತ್ಕರ್ಷದ ಬೆಂಬಲದಿಂದ ನಡೆದಿದ್ದವು. ಅಶೋಕನ ಕಾಲದಲ್ಲಿಯಂತೂ ಬೌದ್ಧ ಧರ್ಮಕ್ಕೆ ಸಾಮ್ರಾಜ್ಯದ ಆಶ್ರಯವೇ ದೊರೆತಿತ್ತು. ಕರ್ನಾಟಕದಲ್ಲಿ ಅನೇಕ ರಾಜಸತ್ತೆಗಳ ಆಶ್ರಯ ಪಡೆದಿದ್ದ ಜೈನ ಧರ್ಮದ ಬಸದಿಗಳನ್ನು ರಾಜರು, ಶ್ರೀಮಂತ ವ್ಯಾಪಾರಿಗಳು ಹಾಗೂ ಪ್ರಭಾವಿ ಶ್ರೀಮಂತ ವರ್ಗದವರು ಕಟ್ಟಿಸಿಕೊಟ್ಟರು.

ಲೌಕಿಕ ಸಂಪತ್ತು ಅಧಿಕಾರಗಳನ್ನು ತಿರಸ್ಕರಿಸುವ ಧರ್ಮವು ಅನಿವಾರ್ಯವಾಗಿ ರಾಜಾಶ್ರಯವನ್ನು ಅವಲಂಬಿಸುತ್ತಿತ್ತು. ಇಷ್ಟು ಮಾತ್ರವಲ್ಲ ಮುಂದೆ ಶೈವ ಹಾಗೂ ವೈಷ್ಣವ ಪರಂಪರೆಗಳು ಪ್ರಬಲವಾಗಿ ರಾಜಾಶ್ರಯ ಪಡೆಯತೊಡಗಿದ ಮೇಲೆ ಈ ಧರ್ಮಗಳ ಅನುಯಾಯಿಗಳ ಮಧ್ಯೆ ನಡೆದ ಸಂಘರ್ಷಗಳು ದೇವಾಲಯಗಳ ಆಕ್ರಮಣಗಳಿಗೆ ಕಾರಣವಾದವು. ಅನೇಕ ಶೈವ ಹಾಗೂ ವೈಷ್ಣವ ದೇವಾಲಯಗಳು ಜೈನ ಕೇಂದ್ರಗಳನ್ನು ನಾಶಮಾಡಿ ನಿರ್ಮಿತವಾದವು ಎನ್ನುವುದಕ್ಕೆ ಚರಿತ್ರೆಯ ದಾಖಲೆಗಳಿವೆ. ಹೀಗೆ ಒಂದು ಧರ್ಮದ ಪೂಜಾ ಸ್ಥಳಗಳು ಇನ್ನೊಂದು ಧರ್ಮದ ಪೂಜಾ ಸ್ಥಳಗಳಾಗುವುದು ನಮ್ಮ ಚರಿತ್ರೆಗೆ ಹೊಸದಲ್ಲ. ಇಂಥ ಚಾರಿತ್ರಿಕವಾಗಿ ಸಾಮಾನ್ಯವಾದ ಸಂಗತಿಯು ಸಂಘರ್ಷ ಹಾಗೂ ಕೋಮುಗಲಭೆಗಳಿಗೆ ಆಧುನಿಕ ಜಗತ್ತಿನಲ್ಲಿ ಕಾರಣವಾಗುವುದು ಇಂದಿನ ರಾಜಕೀಯದ ಫಲ. ಅದಕ್ಕೆ ಧರ್ಮದ ಆಧಾರವಿಲ್ಲವೇ ಇಲ್ಲ.

ಒಂದು ರಾಜಕೀಯ ಸಿದ್ಧಾಂತವು ಕಟ್ಟಿಕೊಟ್ಟಿರುವ ಕಥಾನಕವೆಂದರೆ ಹೊರಗಿನಿಂದ ಬಂದ “ಆಕ್ರಮಣಕರರಾದ” ಮುಸ್ಲಿಮ್ ನಾಯಕರು, ದೊರೆಗಳು ಮತಾಂಧರು ಮತ್ತು ದೇವಾಲಯಗಳನ್ನು ವಿನಾಶ ಮಾಡಿ ಮಸೀದಿಗಳನ್ನು ಕಟ್ಟಿದರು ಎನ್ನುವುದಾಗಿದೆ. ಈ ಕಥಾನಕವು ಅರ್ಧಸತ್ಯ ಮಾತ್ರವಾಗಿದೆ. ಈ ಕಥಾನಕದಲ್ಲಿ ಮುಹಮ್ಮದ ಗೋರಿ, ಗಝನಿಗಳು ಇರುತ್ತಾರೆ ಅಕಬರ್ ಇರುವುದಿಲ್ಲ. ಅನೇಕ ದೇವಾಲಯಗಳನ್ನು ನಾಶಪಡಿಸಿದ ಔರಂಗ್‌ಜೇಬ್ ಅಸಂಖ್ಯವಾದ ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆಯನ್ನು ಕೊಟ್ಟ ಎನ್ನುವ ಸಂಗತಿ ಇರುವುದಿಲ್ಲ. ಮೊಘಲ್ ದೊರೆಗಳು ಎಲ್ಲಾ ಮುಖ್ಯ ಭಾರತೀಯ ಮಹಾಕಾವ್ಯಗಳನ್ನು, ಅನೇಕ ಧರ್ಮ ಗ್ರಂಥಗಳನ್ನು ಪರ್ಶಿಯನ್ ಭಾಷೆಗೆ ಅನುವಾದ ಮಾಡಿಸಿದರು, ಅದ್ಭುತವಾದ ಚಿತ್ರಕಲೆಗಳಿಗೆ ಬೆಂಬಲ ನೀಡಿದರು ಎನ್ನುವ ಸಂಗತಿಯಿರುವುದಿಲ್ಲ. 

ಚರಿತ್ರೆ ಹೇಳುವ ಸತ್ಯವೆಂದರೆ ಎಲ್ಲಾ ಧರ್ಮಗಳ ಪೂಜಾ ಸ್ಥಳಗಳು ಪಾರಮಾರ್ಥಿಕ ಸತ್ಯಗಳ ಪ್ರತೀಕಗಳಾಗುವ ಜೊತೆಗೆ ಅಂದAದಿನ ರಾಜಕೀಯದ ಭಾಗವೂ ಆಗಿದ್ದವು; ಆಗಿವೆ. ಹೀಗಾಗಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಪ್ರಾಯಶಃ ಎಲ್ಲಾ ದೇಶಗಳಲ್ಲಿ ಪ್ರತಿನಿತ್ಯವೂ ಅವುಗಳ ಬಗ್ಗೆ ವಿವಾದಗಳು ಸಂಘರ್ಷಗಳು ನಡೆಯುತ್ತಿವೆ.

ಬಾಬ್ರಿ ಮಸೀದಿಯ ನಾಶ ಮತ್ತು ಇತ್ತೀಚೆಗೆ ಅದೇ ಸ್ಥಳದಲ್ಲಿ ರಾಮಮಂದಿರವನ್ನು ಕಟ್ಟುವುದಕ್ಕಾಗಿ ಪ್ರಧಾನಮಂತ್ರಿಗಳು ಭಾಗವಹಿಸಿದ ಭೂಮಿಪೂಜೆಯು ಇಂಥದೇ ಒಂದು ರಾಜಕೀಯ ಕ್ರಿಯೆಯಾಗಿದೆ. ಬಲಪಂಥೀಯ ಚಿಂತಕರು ಮತ್ತು ಬಿ.ಜೆ.ಪಿ. ಪಕ್ಷಗಳು ಹಲವಾರು ವರ್ಷಗಳಿಂದ ಮುಂದಿಟ್ಟಿದ್ದ ಕಾರ್ಯಸೂಚಿಯ ಫಲವಾಗಿದೆ. ರಾಜಕೀಯ ಅಧಿಕಾರದ ಅವಶ್ಯಕತೆಗಳಿಗೆ ನಡೆಸಿದ ರಾಜಕೀಯ ಕ್ರಿಯೆಯಾಗಿದೆ.

ಶ್ರೀರಾಮ, ರಾಮಾಯಣ ಇವು ಭಾರತ ಮಾತ್ರವಲ್ಲ ಇಡೀ ಏಶಿಯಾದ ಸಾಂಸ್ಕೃತಿಕ ಇಮ್ಯಾಜಿನೇಷನ್ ನ ಅವಿಭಾಜ್ಯ ಭಾಗಗಳಾಗಿವೆ. ದಿನನಿತ್ಯ ಜೀವನದಲ್ಲಿ ಹಾಸುಹೊಕ್ಕುಗಳಾಗಿವೆ. ಹೀಗಾಗಿ ಕೋಟ್ಯಂತರ ಜನರು ಈ ಕ್ರಿಯೆಯನ್ನು ಧಾರ್ಮಿಕ ಕ್ರಿಯೆಯೆಂದು ಭಾವಿಸಿದ್ದು ಸಹಜವಾಗಿದೆ. ಅಷ್ಟಕ್ಕೂ ರಾಜಕೀಯವು ಜನರ ಸಾಂಸ್ಕೃತಿಕ-ಧಾರ್ಮಿಕ ನಂಬುಗೆಗಳನ್ನು ಬಳಸಿಕೊಳ್ಳುವುದು ನಿರೀಕ್ಷಿತವೇ ಆಗಿದೆ. ಹೀಗಾಗಿ ರಾಮಮಂದಿರದ ಬಗೆಗಿನ ಜನರ ಭಾವನೆಗಳನ್ನು ಅಲ್ಲಗಳೆಯುವುದು ಹೀಯಾಳಿಸುವುದು ಮೂರ್ಖತನ ಮಾತ್ರವಲ್ಲ ಅದು ಅಚಾರಿತ್ರಿಕವೂ ಕೂಡ. ಅದೇ ಹೊತ್ತಿಗೆ ಅಂತರ್‌ರಾಷ್ಟ್ರೀಯ ಬಂಡವಾಳಶಾಹಿಯ ಪರವಾಗಿರುವ ಪಕ್ಷದ ರಾಜಕೀಯವೊಂದನ್ನು ಧಾರ್ಮಿಕವೆಂದು ಕರೆಯುವುದು ಅಂಥದೇ ಮೂರ್ಖತನ. ಈ ರಾಜಕೀಯವನ್ನು ವಿರೋಧಿಸುವುದು ಅದು ಸಂವಿಧಾನ ವಿರೋಧಿ, ರೈತ ಕಾರ್ಮಿಕ ವಿರೋಧಿ, ಬಂಡವಾಳಶಾಹಿಯ ಕ್ರೂರವಾದ ಸಾಧನವೆನ್ನುವ ಕಾರಣಗಳಿಗಾಗಿಯೇ ಹೊರತು “ಧಾರ್ಮಿಕ” ಕಾರಣಗಳಿಗಾಗಿ ಅಲ್ಲ.

ಕುವೆಂಪು ಅವರು “ರಾಮನಿಗಿಂತ ರಾಮಾಯಣವು ಮುಖ್ಯ” ಎನ್ನುವ ಅದ್ಭುತ ಮಾತನ್ನು ಹೇಳಿದ್ದಾರೆ. ರಾಮಾಯಣ ಮತ್ತು ಮಹಾಭಾರತಗಳು ಜಗತ್ತಿನ ಅತಿ ಶ್ರೇಷ್ಠ ಕಾವ್ಯಗಳು. ಆ ಕಾವ್ಯಗಳಲ್ಲಿ ಧರ್ಮವೂ ಇದೆ; ರಾಜಕೀಯವೂ ಇದೆ; ವಿಸ್ತಾರವಾದ ಸಂಕೀರ್ಣ ಮನುಷ್ಯ ಅನುಭವವೂ ಇದೆ. ಅವು ಮಂದಿರ ನಿರ್ಮಾಣಕ್ಕೆ ಸಮರ್ಥನೆಯಾಗಲಾರವು. ಅಯೋಧ್ಯೆಯ ರಾಮಮಂದಿರವು ಅತ್ಯಂತ ಆಧುನಿಕ ರಾಜಕೀಯದ ಒಂದು ಭಾಗ. ಲೌಕಿಕ ರಾಜಕೀಯದಲ್ಲಿ ಪೂಜಾ ಸ್ಥಳಗಳು ಸಹಭಾಗಿಗಳಾಗುವ ಇನ್ನೊಂದು ಉದಾಹರಣೆ. ಚುನಾವಣೆ, ಮತದಾರರ ಧ್ರುವೀಕರಣ, ಅನಾಧುನಿಕವೂ ಅಪಾಯಕಾರಿಯೂ ಆದ ರಾಷ್ಟ್ರವಾದವನ್ನು ಆಧರಿಸಿರುವ ರಾಜಕೀಯದ ದ್ಯೋತಕವಾಗಿದೆ. ಪಾರಮಾರ್ಥಿಕ ಸತ್ಯವನ್ನು ಹುಡುಕುವ ಧರ್ಮಗಳ ಆ ಇನ್ನೊಂದು ಮುಖಕ್ಕೆ ಸಂಬಂಧವಿಲ್ಲದ ರಾಜಕೀಯವಾಗಿದೆ.

*ಲೇಖಕರು ಕನ್ನಡದ ಪ್ರಮುಖ ವಿಮರ್ಶಕರು, ಕಥೆಗಾರರು. ಹುಟ್ಟೂರು ಧಾರವಾಡ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಈಗ ಶಿವಮೊಗ್ಗೆಯ ಮಾನಸ ಸಂಸ್ಕೃತಿಕ ಅಧ್ಯಯನಗಳ ಕೇಂದ್ರದ ನಿರ್ದೇಶಕರು.

Leave a Reply

Your email address will not be published.