ಇತಿಹಾಸದ ಪುನರ್ ರಚನೆಯಲ್ಲಿ ನೂರು ವರ್ಷ ಪೂರೈಸಿದ ಚೀನಾ ಕಮ್ಯುನಿಸ್ಟ್ ಪಕ್ಷ

ರಾಣಾ ಮಿಟ್ಟರ್

ಅನುವಾದ: ನಾ.ದಿವಾಕರ

ಚೀನಾ ಕಮ್ಯುನಿಸ್ಟ್ ಪಕ್ಷ ನೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪಕ್ಷದ ಇತಿಹಾಸವನ್ನು ಸಾರುವ ಹೊಸ ಮ್ಯೂಸಿಯಂ ಒಂದನ್ನು ಬೀಜಿಂಗ್ನಲ್ಲಿ ತೆರೆಯಲಾಗಿದೆ. ಆನ್ಲೈನ್ನಲ್ಲಿ ಲಭ್ಯವಿರುವ ಚಿತ್ರಗಳ ಪೈಕಿ 1921 ಪಕ್ಷದ ಸಂಸ್ಥಾಪನಾ ದಿನದಂದು ನೆರೆದಿದ್ದ 12 ಯುವಕರ ಕಪ್ಪುಬಿಳುಪಿನ ಭಾವಚಿತ್ರ ಮನಸೆಳೆಯುತ್ತದೆ. ಕಾರ್ಯಕರ್ತರ ಪೈಕಿ ಒಬ್ಬ, ಗ್ರಂಥಾಲಯ ಸಹಾಯಕನಾಗಿದ್ದ ಮಾವೊ ತ್ಸೆ ತುಂಗ್ ಬಹುಶಃ 2021 ಚೀನಾವನ್ನು ಗುರುತಿಸಲೂ ಕಷ್ಟಪಡಬಹುದು. ಒಂದು ಪ್ರಬಲವಾದ, ವಿಶ್ವದಲ್ಲೇ ಅತ್ಯಂತ ದೀರ್ಘ ಕಾಲದಲ್ಲಿರುವ ಕಮ್ಯುನಿಸ್ಟ್ ಪಕ್ಷ ಚೀನಾ ದೇಶವನ್ನು ಇಂದು ಆರ್ಥಿಕ ಅಧಿಪತಿಯನ್ನಾಗಿ ಮಾಡಿದೆ.

ಚೀನಾ ಕಮ್ಯುನಿಸ್ಟ್ ಪಕ್ಷದ ಪ್ರಚಾರ ಮೂಲತಃ ಭವಿಷ್ಯದ ದಿನಗಳನ್ನು ಕುರಿತಾಗಿಯೇ ಇದೆಯಾದರೂ ತನ್ನ ಗತ ಇತಿಹಾಸ ಹೇಳುವುದನ್ನು ಪಕ್ಷ ಇನ್ನೂ ನಿಯಂತ್ರಣದಲ್ಲಿರಿಸಿದೆ. ಚಾರಿತ್ರಿಕ ಅನಿವಾರ್ಯಗಳಿಂದ ಅಧಿಕಾರಕ್ಕೆ ಬಂದ ಚೀನಾ ಕಮ್ಯುನಿಸ್ಟ್ ಪಕ್ಷ ಚೀನಾವನ್ನು ಒಂದು ಶಾಂತಿಯುತ, ಸಂಪದ್ಭರಿತ ದೇಶವನ್ನಾಗಿ ಮಾಡಿದೆ ಎಂದು ವಸ್ತುಸಂಗ್ರಹಾಲಯದ ಆಖ್ಯಾನಗಳು ಸಾರಿ ಹೇಳುತ್ತವೆ. ಇತಿಹಾಸದ ಏರಿಳಿತಗಳು, ಪಕ್ಷದ ಆರಂಭದ ದಿನಗಳಲ್ಲಿನ ಆಡಳಿತ ನೀತಿಯ ವೈಫಲ್ಯಗಳು, ವಿಫಲರಾದ ನಾಯಕರು ಮತ್ತು ಅಧಿಕಾರದಲ್ಲಿದ್ದಾಗ ಅನುಸರಿಸಿದ ಕ್ರೂರ ದಮನಕಾರಿ ಆಡಳಿತ ನೀತಿಗಳು ಇವೆಲ್ಲವನ್ನೂ ನಗಣ್ಯ ಎಂದೇ ಬಿಂಬಿಸಲಾಗಿದೆ. ತನ್ನ ಆಂತರಿಕ ಕಾರ್ಯನಿರ್ವಹಣೆಯಲ್ಲಿ ಎಂದಿಗೂ ಪಾರದರ್ಶಕತೆಯನ್ನು ಹೊಂದಿಲ್ಲದ ಚೀನಾ ಕಮ್ಯುನಿಸ್ಟ್ ಪಕ್ಷ ಇಲ್ಲಿಯೂ ಸಹ ನಿಗೂಢತೆಯನ್ನು ಕಾಪಾಡಿಕೊಂಡಿದೆ.

ಕಳೆದ ನೂರೈವತ್ತು ವರ್ಷಗಳಲ್ಲಿ ಚೀನಾ ಹಲವಾರು ಯುದ್ಧಗಳನ್ನು ಎದುರಿಸಿದ್ದು, ಇದರ ಮೂಲಕವೇ ಪಕ್ಷವು ಭಿನ್ನ ಸಂದೇಶವನ್ನು ನೀಡಲು ಯತ್ನಿಸಿದೆ. ಜಗತ್ತಿಗೆ ಚೀನಾ ದೇಶದ ಬಾಗಿಲನ್ನು ತೆರೆಯಲು ಗ್ರೇಟ್ ಬ್ರಿಟನ್ ನಡೆಸಿದ ಪ್ರಯತ್ನಗಳಲ್ಲಿ, ಎರಡನೆ ಓಪಿಯಂ ಯುದ್ಧದ ಕರಾಳ ಅನುಭವವನ್ನು ಮತ್ತು ಚೀನಾ ಅನುಭವಿಸಿದ ನಷ್ಟವನ್ನು ಭಿನ್ನ ರೀತಿಯಲ್ಲಿ ಬಿಂಬಿಸಲಾಗಿದೆ. ಜಪಾನ್ ವಿರುದ್ಧದ ಯುದ್ಧದಲ್ಲಿ 14 ದಶಲಕ್ಷ ಚೀನೀಯರು ಹತರಾದರೂವಿದೇಶಿ ಆಕ್ರಮಣದ ವಿರುದ್ಧ ಚೀನಾ ನಡೆಸಿದ ದಿಟ್ಟ ಹೋರಾಟಗಳ ಪೈಕಿ ಯುದ್ಧದಲ್ಲಿ ಚೀನಾ ತನ್ನ ಪ್ರಥಮ ದಿಗ್ವಿಜಯವನ್ನು ಸಾಧಿಸಿತ್ತುಎಂದು ಅಧ್ಯಕ್ಷ ಕ್ಷಿ ಜಿನ್ಪಿಂಗ್ ಹೇಳುತ್ತಾರೆ. 2020ರಲ್ಲಿ ಮ್ಯೂನಿಚ್ನಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ವಾಂಗ್ ಯಿ, 1945 ವಿಶ್ವಸಂಸ್ಥೆಯ ಸನ್ನದುವಿಗೆ ಸಹಿ ಮಾಡಿದ ಪ್ರಥಮ ರಾಷ್ಟ್ರ ಚೀನಾ ಆಗಿತ್ತು ಎಂದು ಹೇಳುತ್ತಾರೆ. ಹೀಗೆ ಹೇಳುವ ಮೂಲಕ ಚೀನಾ, ಸಮಕಾಲೀನ ಜಗತ್ತಿನ ವ್ಯವಸ್ಥೆಗೆ ಚೀನಾ ಸಹ ಸಂಸ್ಥಾಪಕ ರಾಷ್ಟ್ರವಾಗಿತ್ತು ಎಂದು ಹೇಳಬಯಸುತ್ತಾರೆ. ಹಾಗಾಗಿ ಚೀನಾ ವಿಶೇಷ ಹಕ್ಕುಗಳಿಗೆ ಅರ್ಹವಾದ ದೇಶ ಎಂದು ಪ್ರತಿಪಾದಿಸುತ್ತಾರೆ.

ಇತಿಹಾಸದ ಗಡಿರೇಖೆಗಳನ್ನೂ ಚೀನಾ ಎಚ್ಚರಿಕೆಯಿಂದ ಗುರುತಿಸಿದೆ. ಚಾರಿತ್ರಿಕ ಶೂನ್ಯವಾದ ಒಂದು ಮಹಾಪರಾಧ ಎಂದು ಬಣ್ಣಿಸುವ ಕಮ್ಯುನಿಸ್ಟ್ ಪಕ್ಷ, ತನ್ನ ಇತಿಹಾಸದ ವಿಮರ್ಶಾತ್ಮಕ ವ್ಯಾಖ್ಯಾನಕ್ಕೆ ಶೂನ್ಯವಾದವನ್ನೇ ಸಂಕೇತವನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳುತ್ತದೆ. 1978 ನಂತರ ಸುಧಾರಣೆಯ ಕ್ರಮಗಳನ್ನು ಮಿತಿಮೀರಿ ಬಣ್ಣಿಸುವ ಪಕ್ಷ, ಸಾಂಸ್ಕøತಿಕ ಕ್ರಾಂತಿಯನ್ನು ಸೀಮಿತವಾಗಿ ಮಾತ್ರವೇ ಉಲ್ಲೇಖಿಸಿದ್ದು, ಮಾವೋ ನಡೆಸಿದ ಮಹಾ ಮುನ್ನಡೆಯಿಂದ ಸೃಷ್ಟಿಯಾದ ಕ್ಷಾಮದ ಬಗ್ಗೆ ತನ್ನ ಪಠ್ಯಕ್ರಮದಲ್ಲಿ ಪ್ರಸ್ತಾಪಿಸಿಯೇ ಇಲ್ಲ.

ಆದರೂ ವಸ್ತುಸಂಗ್ರಹಾಲಯ ಕೇವಲ ಘಟನೆಗಳನ್ನು ಮಾತ್ರ ಬಿಂಬಿಸುವುದಿಲ್ಲ. ಕಮ್ಯುನಿಸ್ಟ್ ಪಕ್ಷದ ಆಳ್ವಿಕೆಯಲ್ಲಿ ಮಾಕ್ರ್ಸ್ವಾದ ಮತ್ತು ಲೆನಿನ್ವಾದ ಇನ್ನೂ ಜೀವಂತವಾಗಿದೆ ಹಾಗೂ ಸಕ್ರಿಯವಾಗಿದೆ ಎಂದು ದೃಢೀಕರಿಸುವ ಪ್ರಯತ್ನವೂ ಇಲ್ಲಿದೆ. 1991 ಸೋವಿಯತ್ ಪತನದ ನಂತರ ಪಶ್ಚಿಮದಲ್ಲಿ ಮಾಕ್ರ್ಸ್ವಾದವನ್ನು ಕುರಿತ ಚರ್ಚೆಗಳು ಶೀತಲ ಸಮರದ ಸುತ್ತ ಕೇಂದ್ರೀಕೃತವಾಗಿತ್ತು. ಇತ್ತೀಚಿನ ದಶಕಗಳಲ್ಲಿ ಚೀನಾ ಮಾಕ್ರ್ಸ್ವಾದದ ಬಗ್ಗೆ ತನ್ನ ಬದ್ಧತೆಯನ್ನು ಬಹಿರಂಗವಾಗಿ ಪ್ರತಿಪಾದಿಸಿಲ್ಲವಾದರೂ, ದಾಸ್ ಕ್ಯಾಪಿಟಲ್ ಕರ್ತೃ ಕಾರ್ಲ್ಮಾಕ್ರ್ಸ್ನನ್ನು ಚೀನಾ ಅಷ್ಟೇ ಗೌರವಿಸುವುದು ರಹಸ್ಯದ ಮಾತೇನಲ್ಲ. 2018ರಲ್ಲಿ ಮಾಕ್ರ್ಸ್ ದ್ವಿಶತಮಾನೋತ್ಸವದ ಸಂದರ್ಭದಲ್ಲಿ, ಚೀನಾ 4.5 ಮೀಟರ್ ಎತ್ತರದ ಮಾಕ್ರ್ಸ್ ಪ್ರತಿಮೆಯನ್ನು ಜರ್ಮನಿಯಲ್ಲಿ ಅವನ ಜನ್ಮಸ್ಥಳ ಟ್ರಯರ್ನಲ್ಲಿ ಸ್ಥಾಪಿಸಿದೆ. ಮಾಕ್ರ್ಸ್ವಾದದ ಬಗ್ಗೆ ಪಕ್ಷದ ಬದ್ಧತೆ ಕೇವಲ ಗತ ಇತಿಹಾಸಕ್ಕೆ ಸೀಮಿತವಾಗಿಲ್ಲ. ಕಳೆದ ವರ್ಷ ನಡೆದ ಪಾಲಿಟ್ಬ್ಯುರೋ ಅಧ್ಯಯನ ಶಿಬಿರದಲ್ಲಿ ಅಧ್ಯಕ್ಷ ಜೀ ಪಿಂಗ್ ಮಾಕ್ರ್ಸ್ವಾದಿ ರಾಜಕೀಯ ಅರ್ಥಶಾಸ್ತ್ರದ ಹೊಸ ಮಾರ್ಗಗಳನ್ನು ಚೀನಾ ಶೋಧಿಸುತ್ತದೆ ಎಂದು ಹೇಳಿದ್ದರು. ಚೀನಾದ ಆರ್ಥಿಕ ಅಭಿವೃದ್ಧಿಯ ಮಾರ್ಗ ಮೂಲತಃ ಬಂಡವಾಳಶಾಹಿ ಸ್ವರೂಪ ಹೊಂದಿದೆ ಎಂದು ಹೇಳುವವರಿಗೆ ಕ್ಷಿ ಜಿನ್ಪಿಂಗ್, ಸಮಾಜವಾದದ ಮೊದಲ ಹಂತ ದೀರ್ಘ ಕಾಲದ್ದಾಗಿರುತ್ತದೆ ಎಂಬ ಡೆಂಗ್ ಜಿಯೋಪಿಂಗ್ ಅವರ ಹೇಳಿಕೆಯನ್ನು ನೆನಪಿಸುತ್ತಾರೆ.

ಕಾರ್ಲ್ಮಾಕ್ರ್ಸ್ ಮತ್ತು ಮಾವೋ ತ್ಸೆ ತುಂಗ್ ಅವರನ್ನು ಉತ್ತೇಜಿಸಿದ ವರ್ಗ ಪ್ರಜ್ಞೆಯನ್ನು ಕುರಿತ ಚರ್ಚೆಗೆ ಮಾಕ್ರ್ಸ್ವಾದದಲ್ಲಿ ಹೆಚ್ಚಿನ ಗಮನ ನೀಡಲಾಗಿಲ್ಲ. ಮಾವೋನ ರಾಜಕೀಯ ಯೋಜನೆಗಳು ಪದದ ಮೂಲ ವ್ಯಾಖ್ಯಾನವನ್ನೇ ಹೆಚ್ಚು ಆಧರಿಸಿತ್ತು. ಆದರೆ 2002ರಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷ ಜಿಯಾಂಗ್ ಜೆಮಿನ್ ಪ್ರತಿಪಾದಿಸಿದ ಹೊಸ ವ್ಯಾಖ್ಯಾನವನ್ನು ಸ್ವೀಕರಿಸಿತ್ತು. ಓರ್ವ ವಾಣಿಜ್ಯೋದ್ಯಮಿಯಾಗಿಯೂ ಪಕ್ಷದಲ್ಲಿ ಉನ್ನತ ಸ್ಥಾನ ಅಲಂಕರಿಸಬಹುದು ಎನ್ನುವುದನ್ನು ಜಿಯಾಂಗ್ ಪ್ರತಿಪಾದಿಸಿದ್ದರು. ಆದಾಗ್ಯೂ, ಚೀನಾದ ಆರ್ಥಿಕ ಪ್ರಗತಿ ಪೂರ್ಣ ಪ್ರಮಾಣದ ತಾಂತ್ರಿಕ ಮತ್ತು ತಂತ್ರಜ್ಞಾನ ಆಧಾರಿತ ವಿದ್ಯಮಾನವಾಗಿರುವ ಹಿನ್ನೆಲೆಯಲ್ಲಿ ಕಮ್ಯುನಿಸ್ಟ್ ಪಕ್ಷವು ತನ್ನನ್ನು ಮಾಕ್ರ್ಸ್ವಾದಿ ಎಂದು ಬಿಂಬಿಸಿಕೊಳ್ಳುವುದು ಸ್ವೀಕಾರಾರ್ಹ ಎನಿಸುವುದಿಲ್ಲ. ಕಮ್ಯುನಿಸ್ಟ್ ಪಕ್ಷದ ನಾಯಕರಿಗೆ ರಾಜಕಾರಣ ಮತ್ತು ರಾಜಕೀಯ ಅರ್ಥಶಾಸ್ತ್ರ ಸದಾ ಮುಖ್ಯ ವಿಚಾರಗಳೇ ಆಗಿವೆ. ನಿಟ್ಟಿನಲ್ಲಿ ಕ್ಷಿ ಜಿನ್ಪಿಂಗ್ ತಮ್ಮ ಹಿಂದಿನ ನಾಯಕರ ಮಾರ್ಗದಿಂದ ಭಿನ್ನವಾಗಿ ತಮ್ಮ ಹಾದಿ ಅನುಸರಿಸಿದ್ದಾರೆ.

ಇತಿಹಾಸದ ಲೆನಿನ್ವಾದದ ಅನುಭವಗಳನ್ನೂ ಕ್ಷಿ ಜಿನ್ಪಿಂಗ್ ಹೆಮ್ಮೆಯಿಂದ ನೆನೆಯುತ್ತಾರೆ. 1940 ಪರಿಷ್ಕರಣ ಆಂದೋಲನಗಳ ಪರಿಣಾಮವಾಗಿ ಪಕ್ಷದ ಸದಸ್ಯರು ಮಾವೋ ಅವರ ಬರಹಗಳನ್ನು ಓದುವುದು ಅನಿವಾರ್ಯವಾಯಿತು. ತನ್ಮೂಲಕ ಸೈದ್ಧಾಂತಿಕವಾಗಿ ಬದ್ಧವಾಗುವುದೂ ಸಾಧ್ಯವಾಯಿತು. ಇಂದು ಕಮ್ಯುನಿಸ್ಟ್ ಪಕ್ಷದ ಯೋಜನೆಯ ಅನುಸಾರ ಪರಿಷ್ಕರಣ ಪ್ರಕ್ರಿಯೆ ಮತ್ತೊಮ್ಮೆ ಗರಿಗೆದರಿದೆ. ವಯಾ ಅನ್ ಆ್ಯಪ್ ( ಆಲಿಬಾಬಾ ವಿನ್ಯಾಸಗೊಳಿಸಿದ ಆಪಲ್ ಸ್ಟೋರ್ನಲ್ಲಿ ಸಿಗುತ್ತದೆ) ಮೂಲಕ ಪಕ್ಷದ ಸದಸ್ಯತ್ವ ಪಡೆಯುವವರಲ್ಲಿ ಜೀಪಿಂಗ್ ಚಿಂತನೆಗಳ ಬಗ್ಗೆ ಇರುವ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ. 2020 ಆಂದೋಲನಗಳು ಒಂದು ರೀತಿಯಲ್ಲಿ 1940 ಆಂದೋಲನದಂತೆಯೇ ಕಾಣುತ್ತದೆ. ಗಣ್ಯ ಸಮುದಾಯಗಳ ತರಬೇತಿ ಮತ್ತು ನಿಷ್ಠೆ ಇವೆರಡನ್ನೂ ಕಮ್ಯುನಿಸ್ಟ್ ಪಕ್ಷ ಪ್ರಧಾನವಾಗಿ ಪರಿಗಣಿಸುತ್ತದೆ. ಪಕ್ಷದ ಸದಸ್ಯರು ನಿಷ್ಠೆಯಿಂದಿದ್ದರೆ, ಜನಸಾಮಾನ್ಯರನ್ನು ಪಕ್ಷಕ್ಕೆ ಕರೆತರುವುದು ಸುಲಭವಾಗುತ್ತದೆ ಎಂದು ಕಮ್ಯುನಿಸ್ಟ್ ಪಕ್ಷ ಭಾವಿಸುತ್ತದೆ. ಭಿನ್ನಾಭಿಪ್ರಾಯವನ್ನು ನಿರ್ದಾಕ್ಷಿಣ್ಯವಾಗಿ ದಮನಿಸುವ ನಿಟ್ಟಿನಲ್ಲಿ ಲೆನಿನ್ವಾದಿ ಪರಂಪರೆಯನ್ನೂ ಗುರುತಿಸಬಹುದು. ಜುಲೈ 1ರಂದು ಚೀನಾ ಕಮ್ಯುನಿಸ್ಟ್ ಪಕ್ಷದ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ, ಹಾಂಕಾಂಗ್ನಲ್ಲಿ ಉಳಿದಿರುವ ಏಕೈಕ ಪ್ರಜಾಪ್ರಭುತ್ವವಾದಿ ಚೀನಾ ಭಾಷಿಕಆ್ಯಪಲ್ಡೈಲಿ ಪತ್ರಿಕೆಯಲ್ಲಿ ಎಷ್ಟೇ ಪ್ರಚೋದನಕಾರಿ ಹೆಡ್ ಲೈನ್ ಸುದ್ದಿಗಳು ಪ್ರಕಟವಾಗಿದ್ದರೂ, ಅಲ್ಲಿ ಪಕ್ಷದ ಜನ್ಮ ದಿನದ ಆಚರಣೆ ಭರದಿಂದಲೇ ಸಾಗಿತ್ತು. ನೂತನ ರಾಷ್ಟ್ರೀಯ ಭದ್ರತಾ ಕಾನೂನು ಜುಲೈ ತಿಂಗಳಲ್ಲಿ ಜಾರಿಯಾಗಿದ್ದು ಇದರ ಅನ್ವಯ ಪತ್ರಿಕೆಯ ಸಂಪಾದಕರನ್ನು ಮತ್ತು ಹಿರಿಯ ಲೇಖಕರನ್ನು ವಿಧ್ವಂಸಕ ಕೃತ್ಯಗಳ ಆರೋಪದ ಮೇಲೆ ಬಂಧಿಸಲಾಗಿದೆ. ಪತ್ರಿಕೆಯ ಪ್ರಜಾಪ್ರಭುತ್ವದ ಪರವಾದ ಬರಹಗಳನ್ನು ಅಳಿಸಿಹಾಕಲಾಗಿದೆ. ಹಾಗೆಯೇ ಪತ್ರಿಕೆಯ 25 ವರ್ಷಗಳ ವಿದ್ಯುನ್ಮಾನ ದಾಖಲೆಗಳನ್ನು ಅಳಿಸಿಹಾಕಲಾಗಿದೆ.

ಚೀನಾದ ಕಮ್ಯುನಿಸ್ಟ್ ಪಕ್ಷ ಸಾಮಾನ್ಯವಾಗಿ ನಿರಾಕರಿಸುತ್ತಲೇ ಬಂದಿರುವ ಮತ್ತೊಂದು ಸಂಪ್ರದಾಯಕ್ಕೆ ಲೆನಿನ್ವಾದಿ ರಾಜಕೀಯ ಧೋರಣೆ ತದ್ವಿರುದ್ಧವಾಗಿ ಕಾಣುತ್ತದೆ. ಕನ್ಫ್ಯೂಸಿಯಸ್ ತತ್ವಗಳ ಚಾರಿತ್ರಿಕ ಪರಂಪರೆಯನ್ನು ಅನುಸರಿಸುವ ಔದಾರ್ಯದ ಸಂಕೇತವಾಗಿ ಕ್ಷಿ ಜಿನ್ಪಿಂಗ್ ತಮ್ಮ ನಾಯಕತ್ವವನ್ನು ಬಿಂಬಿಸಿಕೊಳ್ಳುತ್ತಾರೆ. ಇದು ತಮ್ಮ ಹಿಂದಿನ ನಾಯಕ ಮಾವೋ ತ್ಸೆ ತುಂಗ್ ನೀತಿಗಳಿಗೆ ವ್ಯತಿರಿಕ್ತವಾದ ನಿಲುವು ಆಗಿದೆ. ಮಾವೋ ತ್ಸೆ ತುಂಗ್ ಜೀವನ ಚೀನಾದ ಮೌಲ್ಯಗಳನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಾಗಿತ್ತು. ಮಾವೋ ಆಳ್ವಿಕೆಯಲ್ಲಿ, ಸಾಂಸ್ಕøತಿಕ ಕ್ರಾಂತಿಯ ಆರಂಭದ ದಿನಗಳಲ್ಲಿ, ಕನ್ಫ್ಯೂಸಿಯಸ್ ಜನ್ಮಸ್ಥಳ ಕೂಫು ಕೆಂಪು ಸೈನ್ಯದವರಿಂದ ಧ್ವಂಸವಾಗಿತ್ತು. ಆದರೂ ಮಾವೋ ನಿಧನದ ನಂತರ ಕೆಲವೇ ವರ್ಷಗಳಲ್ಲಿ ಕನ್ಫ್ಯೂಸಿಯಸ್ ಕುರಿತು ಪಕ್ಷದ ದ್ವೇಷಪೂರಿತ ನಿಲುವು ಕ್ಷೀಣಿಸುತ್ತಾ ಬಂದಿತ್ತು. 1983ರಲ್ಲಿ ಮಾವೋನ ಆಪ್ತ ಕಾರ್ಯದರ್ಶಿ ಮತ್ತು ಕಟ್ಟಾ ಸಂಪ್ರದಾಯವಾದಿಯಾಗಿದ್ದ ಹೂ ಕಿಯೋಮು ಬೀಜಿಂಗ್ನಲ್ಲಿ ಕನ್ಫ್ಯೂಸಿಯಸ್ ವಸ್ತುಸಂಗ್ರಹಾಲಯ ಸ್ಥಾಪಿಸಲು ಆಗ್ರಹ ಸಲ್ಲಿಸಿದ್ದರು.

ಕಳೆದ 20 ವರ್ಷಗಳಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷ ಕನ್ಫ್ಯೂಸಿಯಸ್ ಮೌಲ್ಯಗಳನ್ನು ಶ್ಲಾಘಿಸುತ್ತಿರುವುದನ್ನು ಮುಖ್ಯವಾಹಿನಿಯ ಚರ್ಚೆಯಲ್ಲೇ ಗುರುತಿಸಬಹುದು. ಬೀಜಿಂಗ್ ಗೋಡೆಗಳ ಮೇಲೆ ಸಮಾಜವಾದಿ ಮೌಲ್ಯಗಳೇ ಪ್ರಧಾನವಾಗಿ ಕಂಡುಬಂದರೂ, ಸೌಹಾರ್ದತೆ ಮತ್ತು ಸಮಗ್ರತೆ ಎನ್ನುವ ಪದ ಬಳಕೆಯ ಮೂಲಕ ಇದು ಪಾರಂಪರಿಕ ಸ್ಪರ್ಶ ಪಡೆದಿರುವುದನ್ನು ಗಮನಿಸಬಹುದು. ಕನ್ಫ್ಯೂಸಿಯಸ್ ತತ್ವಗಳ ಬಗ್ಗೆ ಚೀನಾ ಕಮ್ಯುನಿಸ್ಟ್ ಪಕ್ಷ ಅಮೂರ್ತ ಸ್ವರೂಪದ ಆಸಕ್ತಿಯನ್ನೇನೂ ತೋರಿಲ್ಲವಾದರೂ, ಕುಟುಂಬದ ಬಗ್ಗೆ ಬದ್ಧತೆ, ಕುಟುಂಬ ವ್ಯವಸ್ಥೆಯ ಶ್ರೇಣೀಕರಣದ ಮಹತ್ವದ ಬಗ್ಗೆ ಆಸಕ್ತಿ ತೋರಿರುವುದನ್ನು ಗಮನಿಸಬಹುದು. ಸಮೃದ್ಧಿಯ ನಡುವೆಯೂ ಅಸಮಾನತೆಯನ್ನು ಎದುರಿಸುತ್ತಿರುವ ಚೀನಾದ ಸಂದರ್ಭದಲ್ಲಿ ಇದು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ. ಕನ್ಫ್ಯೂಸಿಯಸ್ ಮೌಲ್ಯಗಳ ಮೇಲೆ ದಾಳಿ ನಡೆಸುವ ಮೂಲಕ ಮಾವೋ ತನ್ನ ಕ್ರಾಂತಿಗೆ ನೆರವಾಗಿದ್ದರೂ, ಕನ್ಫ್ಯೂಸಿಯಸ್ ಮೌಲ್ಯಗಳನ್ನು ಬೆಂಬಲಿಸುವ ಮೂಲಕ ಕ್ಷಿ ಜಿನ್ಪಿಂಗ್ ಕ್ರಾಂತಿಯನ್ನು ತಡೆಗಟ್ಟಲು ಯತ್ನಿಸುತ್ತಿದ್ದಾರೆ.

ಕಳೆದ ಒಂದು ಶತಮಾನದಲ್ಲಿ ಪಕ್ಷ ಮಾಡಿರುವ ಸಾಧನೆ ವಾಸ್ತವ ಸಂಗತಿ. ವಿಶ್ವದ ಎರಡನೆ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ರೂಪಿಸಿರುವುದು, ತಂತ್ರಜ್ಞಾನದ ಅನ್ವೇಷಣೆ, ಕೃತಕ ಬುದ್ಧಿಮತ್ತೆಯ ಅನ್ವೇಷಣೆ, ಪರಿಸರ ಬದಲಾವಣೆಯ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳು ಇವೆಲ್ಲವೂ ಕಡೆಗಣಿಸಲಾಗದ ಸಾಧನೆಗಳ. ಆದರೆ ಪ್ರಾಮಾಣಿಕ ಪರಾಮರ್ಶೆಯ ಸಂದರ್ಭದಲ್ಲಿ ಪಕ್ಷವು ಇತಿಹಾಸದ ಕೆಲವು ಅಂಶಗಳನ್ನು ಮರೆಯಲೂ ಸಾಧ್ಯವಿಲ್ಲ. 1980 ಆರ್ಥಿಕ ಸುಧಾರಣೆಗಳು ಜಾವೋ ಜಿಯಾಂಗ್ ಪ್ರಭಾವ ಇಲ್ಲದೆಯೇ ಸಾಧ್ಯವಾಗುತ್ತಿರಲಿಲ್ಲ. ಟಿಯಾನಾಮೆನ್ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲಿಸುವ ಮೂಲಕ ಕಮ್ಯುನಿಸ್ಟ್ ನಾಯಕನನ್ನು ಚರಿತ್ರೆಯ ಪುಟಗಳಿಂದ ಅಳಿಸಿಹಾಕಲಾಗಿದೆ. 2 ಕೋಟಿ ಜನರ ಸಾವಿಗೆ ಕಾರಣವಾದ 1958-621 ಮಹಾ ಮುನ್ನಡೆ ಅಂತ್ಯ ಕಂಡಿದ್ದು ಮಾವೋ ನೀತಿಗಳ ವಿರುದ್ಧ ದಿಟ್ಟವಾಗಿ ಮಾತನಾಡಿದ್ದ ಕಮ್ಯುನಿಸ್ಟ್ ನಾಯಕ ಪೆಂಗ್ ಡೆಹಾಯ್ ಪ್ರಯತ್ನಗಳಿಂದ ಆತನನ್ನು ಹೊರಗಿಡಲಾಯಿತು. ಈಗ ಇತಿಹಾಸದ ಮೇಲಿನ ತನ್ನ ನಿಯಂತ್ರಣದ ಮೂಲಕವೇ ಪಕ್ಷವು ತನ್ನ ಪ್ರಚಾರಾಂದೋಲನವನ್ನೂ ಕೈಗೊಂಡಿದೆ. ಆದರೂ ಒಂದಲ್ಲ ಒಂದು ದಿನ ಬಚ್ಚಿಟ್ಟ ಸಂಗ್ರಹಾಗಾರದ ದಾಖಲೆಗಳು ಹೊರಬರುತ್ತವೆ. ಆಗ ರಚನೆಯಾಗುವ ಸಂಕೀರ್ಣ ಇತಿಹಾಸದ ಪುಟಗಳಲ್ಲಿ, ಈಗಿನ ಇತಿಹಾಸದಿಂದ ಕೈಬಿಡಲಾಗಿರುವ ಪಾತ್ರಗಳು ಮತ್ತು ಘಟನೆಗಳು ಉಲ್ಲೇಖವಾಗುತ್ತವೆ. ತನ್ಮೂಲಕ ಚೀನಾ ಕಮ್ಯುನಿಸ್ಟ್ ಪಕ್ಷದ ಮಹತ್ತರ ಸಾಧನೆ ಮತ್ತು ಯಶಸ್ಸನ್ನು ದಾಖಲಿಸುವುದರ ಜೊತೆಗೇ ಪ್ರಮಾದಗಳು, ವೈಫಲ್ಯಗಳು, ವಿರೋಧಾಭಾಸಗಳೂ, ವೈರುಧ್ಯಗಳೂ ದಾಖಲಾಗುತ್ತವೆ. ಈಗ ತನ್ನ ಇತಿಹಾಸವನ್ನು ಶುದ್ಧೀಕರಿಸಿ ವ್ಯಾಖ್ಯಾನಿಸುತ್ತಿರುವ ಚೀನಾ ಕಮ್ಯುನಿಸ್ಟ್ ಪಕ್ಷ ಮುಂದಿನ ಹೊಸ ಅಧ್ಯಾಯಗಳಲ್ಲಿ ಇನ್ನೂ ಕುತೂಹಲಕಾರಿ ಅಂಶಗಳನ್ನು ಕಾಣಲು ಸಾಧ್ಯ.

ಮೂಲ: ಗಾರ್ಡಿಯನ್

*ಲೇಖಕರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು.

Leave a Reply

Your email address will not be published.