ಇತಿಹಾಸ ಸಂಶೋಧನೆಗೆ ಬೇಕಿದೆ ಹೊಸ ದೃಷ್ಟಿಕೋನ

ಸಂಶೋಧನೆಯಲ್ಲಿ ವೈಜ್ಞಾನಿಕ ಸಂಶೋಧನೆ, ಕಲಾತ್ಮಕ ಸಂಶೋಧನೆ, ಮತ್ತು ಐತಿಹಾಸಿಕ ಸಂಶೋಧನೆಗಳೆಂಬ ಮೂರು ಪ್ರಮುಖ ವಿಭಾಗಗಳಿವೆ. ಪ್ರಸ್ತುತ ಲೇಖನ ಐತಿಹಾಸಿಕ ಸಂಶೋಧನೆಗೆ ಸಂಬಂಧಿಸಿದೆ.

ಸಂಶೋಧನೆ ಎಂದರೆ ಹೊಸತೊಂದರ ಕ್ರಮಬದ್ಧ ಹುಡುಕಾಟ ಅಥವಾ ಮುಕ್ತ ಮನಸ್ಸಿನ ಶೋಧನೆ, ಹೊಸ ಸಿದ್ಧಾಂತದ ಅಭಿವೃದ್ಧಿ, ಹೀಗೆ ವಿಭಿನ್ನ ವ್ಯಾಖ್ಯಾನವನ್ನು ಸಂಶೋಧನೆಗೆ ಸಂಬಂಧಿಸಿದಂತೆ ನೀಡಬಹುದು. 19ನೇ ಶತಮಾನದ ದ್ವಿತೀಯಾರ್ಧದಿಂದ ಭಾರತದಲ್ಲಿ ಪ್ರಾರಂಭವಾದ ಈ ವೈಜ್ಞಾನಿಕ ಇತಿಹಾಸ ಸಂಶೋಧನೆ ಅಥವಾ ಅಧ್ಯಯನ ಕ್ರಮ, ಅಲ್ಲಿಂದ ಇಲ್ಲಿಯವರೆಗೂ ಒಂದೇ ದೃಷ್ಟಿಯಲ್ಲಿ ನಡೆದುಬರುತ್ತಿದೆ.

‘ಭಾರತದ ಇತಿಹಾಸ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ಯಾವುದೇ ಕೃತಿಯನ್ನು ನೋಡಿದರೂ ಅಲ್ಲಿ ಕಂಡುಬರುವುದು ಶೇ.80 ರಷ್ಟು ರಾಜಕೀಯ ಇತಿಹಾಸ, ಉಳಿದ ಶೇ.20 ರಷ್ಟು ಸಾಂಸ್ಕೃತಿಕ ಚರಿತ್ರೆ ಇರುತ್ತದೆ. ಈ ದೃಷ್ಟಿಕೋನದ ಪರಂಪರೆ ಭಾರತದ ಸಂಶೋಧನಾ ಚರಿತ್ರೆಯಲ್ಲಿ ಅವಿರತವಾಗಿ ಮುಂದುವರೆಯುತ್ತಿದೆ. ಇದರಿಂದ ಭಾರತದ ಚರಿತ್ರೆಯ ಅದೆಷ್ಟೋ ಅದ್ಭುತ ಸಂಗತಿಗಳು ತೆರೆಯಮರೆಯಲ್ಲಿಯೇ ಇದೆ.

ಶೈಕ್ಷಣಿಕವಾಗಿ ನೋಡಿದಲ್ಲಿ ಪದವಿ ವಿಭಾಗವಿರಲಿ, ವಿಶ್ವವಿದ್ಯಾಲಯವಿರಲಿ ಎಲ್ಲವೂ ಐತಿಹಾಸಿಕ ಸಂಶೋಧನೆಯಲ್ಲಿ ಇಂದಿಗೂ ಇದೇ ಸಾಂಪ್ರದಾಯಿಕ ದೃಷ್ಟಿಯನ್ನು ಪರಿಪಾಲಿಸುತ್ತಿದೆ. ಇದರಿಂದ ಹೊರಗೆ ಬಂದು ನವ್ಯದೃಷ್ಟಿಯ ಕಡೆಗೆ ಯಾರೂ ನೋಡುತ್ತಿಲ್ಲವೆಂಬುದು ವಿಷಾದನೀಯ. ಭಾರತದ ಚರಿತ್ರೆಗೊಂದು ವಸ್ತುನಿಷ್ಠತೆ ಅಥವಾ ಪ್ರಾಮುಖ್ಯ ಬರಬೇಕೆಂದರೆ ಚರಿತ್ರೆಯ ಬರವಣಿಗೆ ಸ್ಥಳೀಯ ಇತಿಹಾಸದ ಅಧ್ಯಯನದಿಂದ ಪ್ರಾರಂಭಗೊಳ್ಳಬೇಕು ಮತ್ತು ರಾಜ, ರಾಣಿ, ಯುದ್ಧ, ಇವುಗಳನ್ನ ಹೊರತುಪಡಿಸಿದ ಹೊಸನೋಟದಿಂದ ಚರಿತ್ರೆಯ ಅಧ್ಯಯನ ಪ್ರಾರಂಭವಾಗಬೇಕು. ಸ್ಥಳೀಯ ಇತಿಹಾಸ ಅಥವಾ ಪ್ರಾದೇಶಿಕ ಇತಿಹಾಸ ಒಂದು ವಿಷಯದ ಅಥವಾ ಸಂಗತಿಯ ತಲಸ್ಪರ್ಶಿ ಆಯಾಮವನ್ನು ತರೆದಿಡುತ್ತದೆ ಮತ್ತು ಒಂದು ಹೊಸದಾದ ಚಿಂತನೆ ಪ್ರಾರಂಭವಾಗುತ್ತದೆ.

ಉದಾಹರಣೆಗೆ ನಮಗೆ ಸ್ವತಂತ್ರ ಸಾಮ್ರಾಜ್ಯದ ರಾಜನೋರ್ವನ ಜೀವನ ಸಾಧನೆ ಗೊತ್ತು, ಅವನಿಗಾಗಿ ಬದುಕನ್ನೇ ಸಮರ್ಪಿಸಿಕೊಂಡ ಸೈನಿಕನ ಬದುಕು ಮತ್ತು ಪರಿಶ್ರಮದ ಅರಿವಿಲ್ಲ! ಸಮಕಾಲೀನ ಸಾಮ್ರಾಜ್ಯಗಳ ರಾಜತಾಂತ್ರಿಕ ಸಂಬಂಧ ಗೊತ್ತು, ತಳಸಮುದಾಯದ ಜೀವನ ದರ್ಶನವಿಲ್ಲ! ಯುದ್ಧಗಳು ಮತ್ತದರ ಪರಿಣಾಮಗಳು ಗೊತ್ತು, ಯುದ್ಧದ ಪದ್ಧತಿ ನಿಯಮಗಳು ಆ ಸಂದರ್ಭದ ಸೂಕ್ಷ್ಮ ಸಂಗತಿಗಳ ಬಗ್ಗೆ ತಿಳಿದಿಲ್ಲ! ವಾಸ್ತುಶಿಲ್ಪ ಗೊತ್ತು, ಅದರ ನಿರ್ಮಾಣದ ತಂತ್ರಜ್ಞಾನ ಗೊತ್ತಿಲ್ಲ! ಹೀಗೆ ಹೇಳುತ್ತ ಹೊರಟರೆ ಅದೆಷ್ಟೋ ಸಂಗತಿಗಳಿವೆ.

ಶೈಕ್ಷಣಿಕವಾಗಿಯೂ ಇತಿಹಾಸ ಬೋಧನೆಯಲ್ಲಿ ನಾವಿನ್ನೂ ಹಿಂದೇ ಇದ್ದೇವೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತ ಇತಿಹಾಸದ ವಿದ್ಯಾರ್ಥಿ ವಾಸ್ತುಶಿಲ್ಪದ ಪಾಠವನ್ನು ಹೇಗೆತಾನೇ ಅರ್ಥೈಸಿಕೊಳ್ಳಬಲ್ಲ, ಹೇಗೆತಾನೇ ಆನಂದಿಸಬಲ್ಲ!? ಅದೇ ಅವರನ್ನು ಕಂದು ಸುಂದರ ವಾಸ್ತುಶಿಲ್ಪದ ದೇವಾಲಯಕ್ಕೇ ಕರೆದೊಯ್ದು ಇದು ಕಕ್ಷಾಸನ, ಇದು ಅಧಿಷ್ಠಾನ, ಇದು ಅಂತರಾಳ ಎಂದು ವಿವರಿಸಿ ಪ್ರಾಯೋಗಿಕ ಪಾಠ ನಡೆದಲ್ಲಿ ಖಂಡಿತವಾಗಿ ಪರಿಣಾಮ ಬೇರೆಯದೇ ಇರುತ್ತದೆ.

ಚರಿತ್ರೆಯ ಸೂಕ್ಷ್ಮಗಳನ್ನು ಸರಿಯಾಗಿ ತಿಳಿಯದಿದ್ದರೆ ದುರಂತಗಳು ಹೇಗೆ ಸಂಭವಿಸುತ್ತದೆ ಎಂಬುದಕ್ಕೆ ಒಂದು ನಿದರ್ಶನ ಕೊಡಬಹುದು. ಕೆಲವು ವರ್ಷಗಳ ಹಿಂದೆ ಅಮೆರಿಕದಿಂದ ಭಾರತಕ್ಕೆ ಬಂದಿದ್ದ ಅಲ್ಲಿನ ಸಂಶೋಧಕರು ಭಾರತದ ಅದ್ಭುತವಾದ ಶಿಲಾ ಸ್ಮಾರಕಗಳನ್ನ ನೋಡಿ ‘ಇವೆಲ್ಲ ಮಾನವ ನಿರ್ಮಿತವಲ್ಲ ಬದಲಾಗಿ ಅನ್ಯಗ್ರಹ ಜೀವಿಗಳು ಇದನ್ನ ನಿರ್ಮಿಸಿದ್ದಾರೆ’ ಎಂದಿದ್ದರು! ಇದನ್ನು ನಾವು ಅವರ ಮೂರ್ಖತನವೆಂದು ಹೇಳಲಾಗದು. ಮೇಲ್ನೋಟಕ್ಕೆ ಇದು ಬಾಲಿಶ ಎನಿಸಿದರೂ ಇದು ಭಾರತೀಯ ಶಿಲ್ಪಿಗಳ ಶ್ರಮ, ಪ್ರತಿಭೆ ಮತ್ತು ಸಾಧನೆಗಳನ್ನು ಹೊಗಳಲಿಚ್ಚಿಸದ ಅವರ ಧೋರಣೆಗೆ ಹಿಡಿದ ಕೈಗನ್ನಡಿ. ಅಷ್ಟೇ ಅಲ್ಲದೇ ನಮ್ಮ ಪ್ರಾಚೀನ ಶಿಲ್ಪಗಳ ಪರಿಶ್ರಮಕ್ಕಾದ ಅಪಮಾನ. ಇದಕ್ಕೆ ಕಾರಣ ಯಾರು? ನಾವೇ.

ನಾವು ನಮ್ಮ ಪ್ರಾಚೀನ ಶಿಲ್ಪಿಗಳ ಸಾಧನೆಯನ್ನ ವೈಭವೀಕರಿಸಲಿಲ್ಲ, ಬದಲಾಗಿ ಅದನ್ನ ನಿರ್ಮಿಸಿದ ರಾಜನ ಬಗ್ಗೆ ಮಾತ್ರ ಹೊಗಳುತ್ತ ಹೋದೆವು. ಅವನಿಗೆ ಹೊಗಳಿಕೆ ಬರಲು ಕಾರಣನಾದ ಆ ಶಿಲ್ಪಯನ್ನ ಮರೆತೆವು; ವಿಜ್ಞಾನ ಮತ್ತು ಈಗಿನ ರೀತಿಯ ಯಾವುದೇ ತಂತ್ರಜ್ಞಾನ ಇರದ ಆ ಕಾಲದಲ್ಲಿ ಕೈಲಾಸನಾಥ ದೇವಾಲಯದಂತಹ ಏಕಶಿಲಾ ದೇವಾಲಯಗಳನ್ನ ಹೇಗೆ ಸ್ಥಾಪಿಸಿದರು ಎಂದು ಸಂಶೋಧನಾ ದೃಷ್ಟಿಯಿಂದ ಅಧ್ಯಯನ ಮಾಡುವ ಪ್ರಯತ್ನ ಮಾಡಲಿಲ್ಲ. ಭಾರತದ ಪ್ರಾಚೀನ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನಾತ್ಮಕ ಅಧ್ಯಯನ ಪ್ರಾರಂಭವಾದರೆ ನಮ್ಮ ಚರಿತ್ರೆಗೊಂದು ಹೊಸ ಆಯಾಮ ದೊರಕುವುದು; ಜಾಗತಿಕ ಮಟ್ಟದಲ್ಲಿ ನಮ್ಮ ದೇಶಕ್ಕೆ ಪ್ರಾಮುಖ್ಯ ಸಿಗುವುದು.

ಕೇವಲ ತಂತ್ರಜ್ಞಾನ ಮಾತ್ರವಲ್ಲ, ನಮ್ಮ ದೇಶದ ಪ್ರಾಚೀನ ಪರಿಸರದ ಚರಿತ್ರೆ, ಭಾಷೆ, ಸಾಹಿತ್ಯದ ಚರಿತ್ರೆಗಳೂ ಹೊಸತೊಂದರ ಭವ್ಯ ಅನಾವರಣಕ್ಕೆ ಸಾಕ್ಷಿಯಾಗಬಲ್ಲದು. ಭವಿಷ್ಯದಲ್ಲಾದರೂ ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕ ಸಂಶೋಧನಾ ಮಾರ್ಗದ ಜೊತೆ ಒಂದಷ್ಟು ಹೊಸ ಆಲೋಚನೆಗಳಿಗೂ ಇತಿಹಾಸ ಸಂಶೋಧನೆಯಲ್ಲಿ ಅವಕಾಶ ಕಲ್ಪಿಸಿದರೆ…!

*ಲೇಖಕರು ಶಿರಸಿಯವರು, ಇತಿಹಾಸ ಸಂಶೋಧಕರು; ಮಂಗಳೂರಿನ ಕಾಲೇಜೊಂದರ ಪ್ರಾಂಶುಪಾಲರು.

Leave a Reply

Your email address will not be published.