ಇದು ಕಾಂಗ್ರೆಸ್ಸಿನವರೇ ಮಾಡಿದ ಕಾಯ್ದೆ!

-ಗೋ.ಮಧುಸೂದನ್

ಸಂದರ್ಶನ: ಜಯಾತನಯ

ದೇಶದೆಲ್ಲೆಡೆ ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ನೀವು ಹೇಗೆ ಗ್ರಹಿಸುತ್ತೀರಿ..?

ಸಿಎಎ ಬಗ್ಗೆ ಏನೂ ಗೊತ್ತಿಲ್ಲದವರು ಮಾತಾಡುತ್ತಿದ್ದಾರೆ, ಸಿಎಎ ಬಗ್ಗೆ ಗೊತ್ತಿರುವವರು ಒಂದಷ್ಟು ಜನ ದಾರಿ ತಪ್ಪಿಸುತ್ತಿದ್ದಾರೆ. ಇವರು ರಾಜಕೀಯ ಕಾರಣಗಳಿಗಾಗಿ ದಾರಿ ತಪ್ಪಿಸುತ್ತಿದ್ದಾರೆ. 1955ರಲ್ಲಿ ಕಾಂಗ್ರೆಸ್ ನವರೇ ಜಾರಿಗೆ ತಂದಂತಹ ಕಾಯ್ದೆ ಇದು. ಕಾಂಗ್ರೆಸ್ ನವರು 12 ವರ್ಷಕ್ಕೆ ಅಂತ ಮಾಡಿದ್ದರು, ನಾವು ಆರು ವರ್ಷಕ್ಕೆ ಇಳಿಸಿದ್ದೇವೆ ಅಷ್ಠೆ. ಅದನ್ನು ಬಿಟ್ಟರೆ ಬೇರೆ ಏನೂ ಇಲ್ಲ.

ಆವಾಗಲೂ ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಂತಹ ಮುಸ್ಲಿಮೇೀತರ ಹಿಂದೂ ಮತ್ತು ಇತರೆ ಧರ್ಮದವರಿಗಾಗಿ ತಂದ ಕಾಯ್ದೆ ಆಗಿತ್ತು. ಆದ್ದರಿಂದ ಇದು ಆಗ ತಂದಂತಹ ಕಾಯ್ದೆಯೆಂಬುದು ಸ್ಪಷ್ಟವಾಗಿದೆ; ಜನರನ್ನು ದಾರಿ ತಪ್ಪಿಸುವಂತಹ ಕೆಲಸ ಆಗಬಾರದು. ಈ ಮೂರೂ ದೇಶಗಳು ಇಸ್ಲಾಂ ದೇಶಗಳಾಗಿರುವ ಕಾರಣಕ್ಕಾಗಿ, ಆ ದೇಶಗಳಲ್ಲಿ ಹಿಂದೂಗಳಾಗಿ ಜೀವನ ಸಾಗಿಸಲು ಸಾಧ್ಯವಾಗದ ಕಾರಣಕ್ಕಾಗಿ ಅವರು ತಮ್ಮ ಧರ್ಮವನ್ನು ಉಳಿಸಿಕೊಳ್ಳುವುದಕ್ಕಾಗಿ, ತಮ್ಮ ಹೆಣ್ಣು ಮಕ್ಕಳ ಮಾನವನ್ನು ಉಳಿಸಿಕೊಳ್ಳುವುದಕ್ಕಾಗಿ ಅನಿವಾರ್ಯವಾಗಿ ಈ ಮೂರು ದೇಶಗಳನ್ನು ಬಿಟ್ಟು ಭಾರತಕ್ಕೆ ಇಂದು ನಿರಾಶ್ರಿತರಾಗಿ ಬರುತ್ತಿದ್ದಾರೆ. ಅಂತಹವರಿಗೆ ಭಾರತದಲ್ಲಿ ಪೌರತ್ವವನ್ನು ಕೊಡಬೇಕು, ಅವರಿಗೆ ಅನುಕೂಲಗಳನ್ನು ಮಾಡಿಕೊಡಬೇಕು ಎನ್ನುವ ಕಾರಣಕ್ಕಾಗಿ
ಪೌರತ್ವ ಕೊಡುವ ಅವಧಿಯನ್ನು 12 ವರ್ಷದಿಂದ 6 ವರ್ಷಕ್ಕೆ ಇಳಿಸುವ ಕೆಲಸವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ.

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ ನಿರಾಶ್ರಿತರಿಗೆ ಹಿಂದಿನ ಕಾನೂನಿನ ಪ್ರಕಾರವೇ ಪೌರತ್ವ ನೀಡಬಹುದಿತ್ತಲ್ಲವೇ..? ಸಿಎಎ ಅಗತ್ಯವೇನಿತ್ತು..?

ಇದುವರೆಗೆ ಇದ್ದ ಕಾಯ್ದೆಯ ಪ್ರಕಾರ ಆ ದೇಶಗಳಿಂದ ಬಂದಂತಹ ನಿರಾಶ್ರಿತರು ಪೌರತ್ವಕ್ಕಾಗಿ 12 ವರ್ಷ ಕಾಯಬೇಕಿತ್ತು. ಅದನ್ನು ಸ್ವಲ್ಪ
ಸಡಿಲಿಸಿ 6 ವರ್ಷಕ್ಕೆ ಮಾಡಿದ್ದೇವೆ.

ಸಿಎಎ ಚರ್ಚೆಯನ್ನು ಎನ್.ಆರ್.ಸಿ. ಚರ್ಚೆಯಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿದೆಯೇ..? ಇವೆರಡೂ ಒಂದಕ್ಕೊಂದು ಪೂರಕವಲ್ಲವೇ..?

ಸಿಎಎ ಬೇರೆ, ಎನ್.ಆರ್.ಸಿ. ಬೇರೆ. ಎನ್.ಆರ್.ಸಿ.ಯನ್ನು ರಾಜೀವ್ ಗಾಂಧಿಯವರ ಆಡಳಿತಾವಧಿಯಲ್ಲಿ ಜಾರಿಗೆ ತಂದಿದ್ದರು. ನಮ್ಮ ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂನಲ್ಲಿ ಮತ್ತು ಉತ್ತರ ಪ್ರದೇಶಕ್ಕೆ ಬಾಂಗ್ಲಾದೇಶದಿಂದ ಬಹಳ ದೊಡ್ಡ ಸಂಖ್ಯೆಯಲ್ಲಿ ವಲಸಿಗರು ಬರಲು ಆರಂಭಿಸಿದರು. ಇದೇ ಅಸ್ಸಾಂ ಚಳವಳಿಗೆ ಮೂಲ ಕಾರಣವಾಗಿತ್ತು. ಈ ಕಾರಣದಿಂದ ನಮ್ಮ ದೇಶದ ಪ್ರಜೆಗಳು ಮಾತ್ರ ನಮ್ಮ ದೇಶದಲ್ಲಿ ಇರಬೇಕು, ಹೊರಗಿನವರನ್ನೆಲ್ಲಾ ವಾಪಸ್ ಕಳಿಸಬೇಕೆಂಬ ಕಾರಣಕ್ಕೆ ಎನ್.ಆರ್.ಸಿ. ತಂದಿದ್ದರು. ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತದೆ. ಆ ಸಂದರ್ಭದಲ್ಲಿ ಈ ಎಲ್ಲಾ ವಿಷಯಗಳನ್ನು ಪರಿಶೀಲಿಸಬೇಕು. ಆ ಮೂಲಕ ದೇಶದ ನಾಗರಿಕರಿಗೆ ಒಂದು ಪ್ರಜಾಸಂಖ್ಯೆಯನ್ನು ಕೊಡಬೇಕು. ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಪೌರತ್ವ ಕಾನೂನಿದೆ, ಈ ದೇಶದಲ್ಲಿಲ್ಲ. ಈ ಕಾರಣದಿಂದ ಪ್ರತಿಯೊಬ್ಬ ಪ್ರಜೆಗೂ ಪೌರತ್ವದ ಗುರುತಿನ ಚೀಟಿ ಕೊಡಬೇಕೆಂದು ಎಲ್ಲರೂ ಕಂಡಂತಹ ಕನಸಾಗಿತ್ತು. ಅದನ್ನು ನಮ್ಮ ಸರ್ಕಾರ ಮಾಡಲು ಹೊರಟಿದೆ.

ಎನ್.ಆರ್.ಸಿ.ಯಂತಹ ಟೈಮ್‍ಬಾಂಬೊಂದನ್ನು ಕೆಳಹಂತದ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಕೊಡಲು ಸಾಧ್ಯವಿದೆಯೇ..? ಇದರಿಂದ ದೇಶದಲ್ಲಿ ಉಂಟಾಗುವ ಅರಾಜಕತೆಯ ಅರಿವಿದೆಯೇ..?

ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯುವ ರೀತಿಯಲ್ಲೇ ಈಗಲೂ ಜನಗಣತಿ ನಡೆಯುತ್ತದೆ. ಈ ಜನಗಣತಿ ನಡೆಯಲು ಏಕೆ ತಲೆ ಕೆಡಿಸಿಕೊಳ್ಳಬೇಕು. ಇದರಿಂದ ಯಾವುದೇ ಅರಾಜಕತೆಯೂ ಇರುವುದಿಲ್ಲ. ಕಾಂಗ್ರೆಸ್ ನವರು ಸೃಷ್ಟಿ ಮಾಡಲು ಹೊರಟಿದ್ದಾರೆ ಅಷ್ಠೆ. ಇದರಲ್ಲಿ ಅವರು ಸಫಲರಾಗುವುದಿಲ್ಲ.

ಸಿಎಎ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಸ್ಪಷ್ಟ ಕಾರ್ಯಸೂಚಿಯಲ್ಲವೇ..?

ಸಿಎಎ ಜಾರಿಗೆ ತಂದು ಮುಸ್ಲಿಂರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲಾಗುತ್ತದೆ ಎಂದು ಕೇವಲ ಗುಲ್ಲೆಬ್ಬಿಸುತ್ತಿದ್ದಾರೆ. ಈ ದೇಶದ ಮುಸ್ಲಿಂರಿರಲಿ, ಹಿಂದೂಗಳಿರಲಿ ಯಾವುದೇ ಧರ್ಮಕ್ಕೆ ಸೇರಿದವರಿರಲಿ ಯಾರಿಗೂ ಸಂಬಂಧಪಟ್ಟ ಕಾಯ್ದೆ ಅಲ್ಲವೇ ಅಲ್ಲ. ಯಾರು ಹೊರ ದೇಶಗಳಿಂದ ವಲಸೆ ಬಂದಿರುತ್ತಾರೋ ಅಂತಹವರನ್ನು ವಾಪಸ್ ಕಳಿಸಬೇಕೆಂದು ಈ ಕಾಯ್ದೆಯನ್ನು ತರಲಾಗುತ್ತಿದೆ. ಈ ದೇಶಕ್ಕೆ ಯಾರು ನುಸುಳಿ ಬಂದಿದ್ದಾರೆ, ಯಾರು ಅನಧಿಕೃತವಾಗಿ ಬಂದಿದ್ದಾರೋ ಅಂತಹವರನ್ನು ನಮ್ಮ ದೇಶದಲ್ಲಿ ಉಳಿಸಿಕೊಳ್ಳಬೇಕಾ?

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಿಂದ ಬಹಳ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂರು ಬಂದಿದ್ದಾರೆ. ಬರ್ಮಾದಿಂದ ಬಹಳ ದೊಡ್ಡ ಸಂಖ್ಯೆಯ ರೋಹಿಂಗ್ಯಾಗಳು ಬಂದಿದ್ದಾರೆ. ಹೀಗೆ ಬಂದಿರುವವರೆಲ್ಲಾ ಮುಸಲ್ಮಾನರಾಗಿದ್ದು, ಅವರನ್ನೆಲ್ಲಾ ಈ ದೇಶದಲ್ಲಿ ಉಳಿಸಿಕೊಳ್ಳಬೇಕಾ? ಇವರನ್ನೆಲ್ಲಾ ಇಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದವರು ಹೇಳುತ್ತಿದ್ದಾರೆ. ಆದರೆ, ಅವರನ್ನು ವಾಪಸ್ ಕಳಿಸಬೇಕೆಂದು ಬಿಜೆಪಿ ಹೇಳುತ್ತಿದೆ. ಹೀಗಾಗಿ ಭಾರತ ಒಂದು ಧರ್ಮಛತ್ರವಲ್ಲ. ಮುಸ್ಲಿಂರ ಉದ್ದೇಶವೇನೆಂದರೆ ನಮ್ಮ ದೇಶಕ್ಕೆ ಬಂದು ತಮ್ಮ ಜನಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಬೇಕು, ಇಲ್ಲಿ ಅಧಿಕಾರ ನಡೆಸಬೇಕೆಂಬುದಾಗಿದೆ. ಪ್ರಜಾಪ್ರಭುತ್ವದಲ್ಲಿ ಅವರ ಸಂಖ್ಯೆ ಜಾಸ್ತಿಯಾದರೆ ಅವರ ಜಾತಿಯವರೇ ಎಂಎಲ್‍ಎಗಳಾಗುತ್ತಾರೆ, ಎಂಪಿಗಳಾಗುತ್ತಾರೆ, ಅವರದೇ ಸರ್ಕಾರ ಬರುತ್ತದೆ. ಸರ್ಕಾರ ಅವರದೇ ಆಯಿತು ಎಂದರೆ ಹಿಂದೂಗಳನ್ನೆಲ್ಲಾ ಇಲ್ಲಿಂದ ಒದ್ದು ಓಡಿಸಬಹುದು ಎಂಬುದು ಅವರ ಪ್ರಯತ್ನ.

ಸಿಎಎಯಿಂದ ದೇಶವು 47ರ ವಿಭಜನೆಯ ಕರಾಳಸ್ವಪ್ನವನ್ನು ಹಿಂದಿಕ್ಕಿ ಮುನ್ನುಗ್ಗುವ ಆಶಯಗಳಿಗೆ ಧಕ್ಕೆಯಾಗಿಲ್ಲವೇ..?

ಇದರಲ್ಲಿ ಯಾವುದೇ ಆಶಯಗಳಿಗೆ ಧಕ್ಕೆ ಆಗುತ್ತಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಆರ್.ಎಸ್. ಎಸ್. ಒಂದು ಸಣ್ಣ ಸಂಸ್ಥೆಯಾಗಿತ್ತು. 1925ರಲ್ಲಿ ಹುಟ್ಟಿದ್ದ ಸಂಸ್ಥೆಯದು. ಆ ಸಂದರ್ಭದಲ್ಲಿ ನಾವು ನಗಣ್ಯವಾಗಿದ್ದೆವು. ಅಂದು ಇಡೀ ದೇಶದಲ್ಲಿ ರಾಜಕಾರಣ ಮಾಡುತ್ತಿದ್ದುದು ಕಾಂಗ್ರೆಸ್ ಪಕ್ಷ. ಒಂದು ಕಡೆ ಕಾಂಗ್ರೆಸ್ ಪಕ್ಷ ಮತ್ತೊಂದು ಕಡೆ ಮುಸ್ಲಿಂ ಲೀಗ್ ಆಡಳಿತ ನಡೆಸುತ್ತಿದ್ದವು. ಅವರು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು ತಾವು ಅಧಿಕಾರ ಪಡೆದುಕೊಳ್ಳಬೇಕೆಂಬ ಕಾರಣಕ್ಕಾಗಿ ಮುಸಲ್ಮಾನರು ಮತ್ತು ಹಿಂದೂಗಳು ಈ ದೇಶವನ್ನು ಹಂಚಿಕೊಳ್ಳೋಣ ಎಂದು ಮುಸಲ್ಮಾನರ ಸಂಖ್ಯೆ ಎಲ್ಲಿ ಹೆಚ್ಚಿದೆಯೋ ಅದನ್ನು ಪಾಕಿಸ್ತಾನ ಎಂದು ಮಾಡಿದರು, ಮುಸಲ್ಮಾನರು ಕಡಿಮೆ ಇರುವ ಭಾಗವನ್ನು ಭಾರತ ಎಂದು ಮಾಡಿದರು. ಧರ್ಮದ ಆಧಾರದ ಮೇಲೆ ದೇಶವನ್ನು ಒಡೆದಂತಹ ಪಾಪದ ಕೆಲಸವನ್ನು ಮಾಡಿದವರು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್.

ಪಾಕಿಸ್ತಾನ ಸ್ಥಾಪನೆಯಾದಾಗಲೇ ಜಿನ್ನಾ ಒಂದು ಮಾತನ್ನು ಹೇಳಿದ್ದರು: ‘ಹಸ್ ಹಸ್ ಕೆ ಲೀಯೆ ಹೇ ಪಾಕಿಸ್ತಾನ್, ಲಡಥೇ ಲಿಯೇಂಗೆ ಹಿಂದೂಸ್ತಾನ್’. ಅಂದರೆ ನಮಗೆ ಪಾಕಿಸ್ತಾನ ಪುಕ್ಕಟೆ ಸಿಕ್ಕಿದೆ, ಯುದ್ಧ ಮಾಡಿ ಹಿಂದೂಸ್ತಾನವನ್ನೂ ಪಾಕಿಸ್ತಾನವನ್ನಾಗಿ ಮಾಡುತ್ತೇವೆ ಎಂದು. ಅದಕ್ಕೋಸ್ಕರ ಅಂದಿನಿಂದ, ‘ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದೊಳಗೆ ನಮ್ಮ ಜನರನ್ನು ನುಗ್ಗಿಸೋಣ. ಎಲ್ಲೆಲ್ಲಿ ನಮ್ಮ ಬಹುಮತ ಜಾಸ್ತಿಯಾಗುತ್ತೋ ಆ ಜಾಗವನ್ನು ನಮಗೆ ಬೇಕು ಎಂಬ ಒತ್ತಾಯ ಮಾಡಬಹುದು. ಈ ಮೂಲಕ ಹಿಂದೂಗಳನ್ನು ಪಕ್ಕಕ್ಕೆ ಸರಿಸೋಣ, ನಮ್ಮ ಸಂಖ್ಯೆಯನ್ನು ಜಾಸ್ತಿ ಮಾಡುತ್ತಾ ಹೋಗೋಣ, ಭಾರತದ ಭೂಮಿಯನ್ನು ಕಬಳಿಸುತ್ತಾ ಹೋಗೋಣ’ ಎಂಬ ದುರಾಲೋಚನೆ ಮತ್ತು ಹುನ್ನಾರವನ್ನು ಮಾಡುತ್ತಿದ್ದಾರೆ.

ಸಿಎಎ/ಎನ್.ಪಿ.ಆರ್/ಎನ್.ಆರ್.ಸಿ ದೇಶದ ಗಮನವನ್ನು ಆರ್ಥಿಕ ಹಿಂಜರಿತದಿಂದ ಬೇರೆಡೆಗೆ ಸೆಳೆಯುವ ಹುನ್ನಾರವೇ..? ಆರ್ಥಿಕ ಹಿಂಜರಿತದ ಈ ಸಂದರ್ಭದಲ್ಲಿ ಈ ವಿವಾದದ ಅಗತ್ಯವಿತ್ತೇ..?

ಸಿಎಎ 1955ರಲ್ಲಿ ಕಾಂಗ್ರೆಸ್ ನವರು ಮಾಡಿದ ಕಾಯ್ದೆ. ಅದನ್ನು 12 ವರ್ಷಗಳಿಂದ 6 ವರ್ಷಕ್ಕೆ ನಾವು ಇಳಿಸಿದ್ದೇವೆ ಅಷ್ಠೆ. ಇದಕ್ಕೂ ಆರ್ಥಿಕ ಹಿಂಜರಿತಕ್ಕೂ ಏನು ಸಂಬಂಧವಿದೆ? ಪ್ರತಿ ಹತ್ತು ವರ್ಷಕ್ಕೊಮ್ಮೆ ಈ ದೇಶದಲ್ಲಿ ಜನಗಣತಿಯಾಗುತ್ತದೆ. 1950 ರಿಂದ ಈ ಪ್ರಕ್ರಿಯೆ ಆಗುತ್ತಿದೆ. ಈ ಜನಗಣತಿಯನ್ನು ಬಿಜೆಪಿಯವರು ಹೊಸದಾಗಿ ಕಂಡುಹಿಡಿದದ್ದಲ್ಲ. 2010ರಲ್ಲಿ ಎನ್.ಆರ್.ಸಿ. ಮಾಡುತ್ತೇವೆ ಎಂದು ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, ಕಾಂಗ್ರೆಸ್ ಪಕ್ಷ ಮತ್ತು ಸೋನಿಯಾ ಗಾಂಧಿ ಹೇಳಿದ್ದರು. ಅವರು ಹೇಳಿದ್ದನ್ನು ನಾವು ಮಾಡಲು ಹೊರಟಿದ್ದೇವೆ  ಅಷ್ಠೆ. ಹಾಗಾದರೆ ಅವರು (ಕಾಂಗ್ರೆಸ್) ಮಾಡುವುದು ಸರಿ, ನಾವುಮಾಡುವುದು ತಪ್ಪೇ?

ಸಿಎಎ ವಿರೋಧಿಸುತ್ತಿರುವವರೆಲ್ಲಾ ದೇಶದ್ರೋಹಿಗಳೇ..? ಅವರಲ್ಲಿ ದೇಶದ ಬಗ್ಗೆ ನೈಜ ಕಾಳಜಿಯಿರಬಹುದೆಂದು ನಿಮಗೆ ಅನ್ನಿಸುತ್ತದೆಯೇ..?

ದೇಶದ ಕಾನೂನುಗಳನ್ನು ಉಲ್ಲಂಘಿಸುವವರನ್ನು ದೇಶದ್ರೋಹಿಗಳು ಎಂದು ಹೇಳದೇ ಇನ್ನೇನು ಹೇಳಲು ಸಾಧ್ಯ? ಬಾಂಗ್ಲಾದೇಶ, ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರು ಆ ದೇಶಗಳಲ್ಲಿ ಬದುಕಲು ಸಾಧ್ಯವಾಗದೇ ಭಾರತಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಇಂತಹ ಸಂಕಷ್ಟದಲ್ಲಿರುವವರನ್ನು ಬರುವುದು ಬೇಡ ಎನ್ನುವವರನ್ನು ದೇಶದ್ರೋಹಿಗಳು ಎನ್ನದೇ ದೇಶಭಕ್ತರು ಎಂದು ಹೇಳಲು ಆಗುತ್ತದೆಯೇ? ಈ ದೇಶಗಳಿಂದ ಬರುವಂತಹ ಮುಸ್ಲಿಂರ ಮೇಲೆ ತೋರಿಸುವ ಮಮಕಾರವನ್ನು ಇತರೆ ಅಲ್ಪಸಂಖ್ಯಾತರ ಮೇಲೆ ಏಕೆ ತೋರಿಸುತ್ತಿಲ್ಲ. ಇದು ಅವರ ದ್ವಂದ್ವ ನಿಲುವನ್ನು ತೋರಿಸುತ್ತದೆ.

ಮುಕ್ತ ಪ್ರಜಾಪ್ರಭುತ್ವದಲ್ಲಿ ನಾಗರಿಕರಿಂದ ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಳ್ಳುವುದು ಸರಿಯೇ..?

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರು ಕಾಂಗ್ರೆಸ್ ಪಕ್ಷದವರು. ವಿರೋಧ ಪಕ್ಷದವರನ್ನು ಜೈಲಿಗೆ ಕಳುಹಿಸಿದವರು ಇದೇ ಕಾಂಗ್ರೆಸ್ ಪಕ್ಷದವರು. ಗುಂಡು ಹಾರಿಸಿದವರು ಕಾಂಗ್ರೆಸ್ ಪಕ್ಷದವರು. ನಾವು ಯಾರನ್ನೂ ಹತ್ತಿಕ್ಕುತ್ತಿಲ್ಲ, ಪ್ರತಿಭಟನೆಗಳನ್ನು ನಿಲ್ಲಿಸುತ್ತಿಲ್ಲ. ಜನರ ಆಸ್ತಿಪಾಸ್ತಿ ರಕ್ಷಣೆ ಮಾಡಲು ಅಗತ್ಯ ಬಿದ್ದರೆ ಲಾಠಿ ಚಾರ್ಜ್ ಮಾಡುತ್ತೇವೆ. ಮಂಗಳೂರಿನಂತಹ ಪ್ರದೇಶದಲ್ಲಿ ಅನಿವಾರ್ಯವಾಗಿ ಗೋಲಿಬಾರ್ ಮಾಡಬೇಕಾಯಿತು, ಮಾಡಿದ್ದೇವೆ. ಈ ಕೆಲಸವನ್ನು ಕಾಂಗ್ರೆಸ್ ಪಕ್ಷದವರು ಮಾಡಿಲ್ಲವೇ? ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆ ಕಾನೂನಿನ ಪ್ರಕಾರ ತನ್ನ ಕರ್ತವ್ಯ ನಿಭಾಯಿಸುತ್ತದೆ.

Leave a Reply

Your email address will not be published.