ಇದು ನಿಜವಾದ ಹಕೀಕತ್ತು

ರೈತ ಹೋರಾಟ ಇಂದು ನಿನ್ನೆಯದಲ್ಲ; ಹತ್ತನೇ ಶತಮಾನದಲ್ಲೇ ರೈತರ ಬಂಡಾಯ ದಾಖಲಾಗಿದೆ. ಇಷ್ಟು ದೀರ್ಘಕಾಲವೂ ಹೋರಾಟದಿಂದ ನ್ಯಾಯ ಪಡೆಯದ ವರ್ಗವೆಂದರೆ ಅದು ರೈತ ವರ್ಗವೇ ಆಗಿದೆ.

ಗುಂಡುಸೂಜಿ, ಚಪ್ಪಲಿಯಿಂದ ಹಿಡಿದು ವಿಮಾನದವರೆಗೆ ಅದನ್ನು ತಯಾರು ಮಾಡಿದ ಕಾರ್ಖಾನೆಯ ಮಾಲೀಕರಿಗೆ ಅದರ ಬೆಲೆ ನಿಗದಿ ಮಾಡುವ ಹಕ್ಕು ಅಧಿಕಾರವಿದೆ. ಆದರೆ ಜೋಳ, ನವಣೆ ಬೆಳೆದುಕೊಡುವ ರೈತನಿಗೆ ಮಾತ್ರ ಅದರ ಬೆಲೆ ನಿಗದಿಮಾಡುವ ಹಕ್ಕು ಅಧಿಕಾರ ಏಕೆ ಇಲ್ಲ? ಇದು ಕಳೆದ ಐವತ್ತು ವರ್ಷಗಳಿಂದ ರೈತ ಹೋರಾಟಗಾರರು ಕೇಳುತ್ತಿರುವ ಪ್ರಶ್ನೆ. ಅಂದರೆ ಈ ಪ್ರಶ್ನೆ ನಮ್ಮನ್ನು ಆಳುವ ರಾಜಕಾರಣಿಗಳ ಕಿವಿಗೆ ಬಿದ್ದಿಲ್ಲವೇ ಅಥವಾ ಅವರಿಗೆ ಅರ್ಥವಾಗಿಲ್ಲವೇ? ಈ ಪ್ರಶ್ನೆಗಳೇ ಧ್ವನಿಸುತ್ತಿವೆ ರೈತ ಚಳವಳಿಯ ಪ್ರಸ್ತುತತೆಯನ್ನು. ಹತ್ತು ಸಾವಿರ ವರ್ಷಗಳ ಬೇಸಾಯದ ಇತಿಹಾಸದಲ್ಲಿ ರೈತರ ಆತ್ಮಹತ್ಯೆಗಳು ಶುರುವಾಗಿ ಇಪ್ಪತ್ತೆರಡು ವರ್ಷವಾಗುತ್ತಿವೆ. ಈ ಇಪ್ಪತ್ತೆರಡು ವರ್ಷಗಳಲ್ಲಿ ಹತ್ತು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅನೇಕ ವರದಿಗಳು ಹೇಳುತ್ತಿವೆ. ದಿನ ಬೆಳಗಾದರೆ ಸಾಕು ದಿನಪತ್ರಿಕೆಗಳಲ್ಲಿ ರೈತರ ಆತ್ಮಹತ್ಯೆ ವರದಿಗಳು ಪ್ರಕಟವಾಗುತ್ತಲೇ ಇವೆ. ಸರಕಾರಗಳು ಸಾಲಮನ್ನಾ ಮಾಡಿದರೂ ಈ ಆತ್ಮಹತ್ಯೆಗಳು ನಿಲ್ಲುತಿಲ್ಲ! ಸರ್ಕಾರ, ಸಮಾಜ ಅಸಹಾಯಕತೆಯಿಂದ ರೈತರ ಆತ್ಮಹತ್ಯೆಯನ್ನು ನೋಡುತ್ತಲೇ ಇದೆ. ಸಮಸ್ಯೆ ಮಾತ್ರ ಬಗೆಹರಿಯುವ ಯಾವ ಸೂಚನೆಯೂ ಸಿಗುತ್ತಿಲ್ಲ. ರೈತ ಸಂಘಗಳ ಹೋರಾಟ ಮುಂದುವರಿದೇ ಇದೆ.

ಮೊದಲೇ ಹೇಳಿದ ಹಾಗೆ ರೈತ ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡುವ ಹಕ್ಕು ಎಲ್ಲಿಯವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ರೈತರ ಹೋರಾಟ ಅನಿವಾರ್ಯವಾಗಿದೆ. ಇತ್ತೀಚೆಗೆ ಸರ್ಕಾರವೇ ನೇಮಕ ಮಾಡಿದ ಡಾ.ಸ್ವಾಮಿನಾಥನ್ ವರದಿ ಕೂಡ ಕೃಷಿ ಉತ್ಪಾದನಾ ವೆಚ್ಚದ ಮೇಲೆ ಶೇಕಡಾ ಐವತ್ತು ಸೇರಿಸಿ ಬೆಲೆ ನಿಗದಿ ಮಾಡಬೇಕೆಂದು ಹೇಳಿದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಅಂದರೆ ಅದರ ಅರ್ಥವೇನು? ರೈತರನ್ನು ಉಳಿಸಿಕೊಳ್ಳಲು ಸರ್ಕಾರಕ್ಕೂ ಕೂಡ ಮನಸ್ಸಿಲ್ಲ ಅಂತ ತಾನೆ?! ಇದು ರೈತರ ಪಾಲಿಗೆ ದಾರುಣ ಸಂಗತಿಯಲ್ಲವೇ?

ರೈತರು ಎದುರಿಸುತ್ತಿರುವ ಬಿಕ್ಕಟ್ಟಿಗೆ ಜಾಗತೀಕರಣ ಕಾರಣವೆಂದು ಹೇಳಲಾಗದು! ಜಾಗತೀಕರಣದಿಂದ ರೈತರ ಆತ್ಮಹತ್ಯೆಯ ಸಂಖ್ಯೆ ಹೆಚ್ಚಾಗಿರುವುದು ನಿಜ. ಆದರೆ ಅದಕ್ಕೂ ಮುನ್ನ ರೈತರ ಆತ್ಮಹತ್ಯೆಗಳಾಗಿವೆ.

ರೈತರು ಎದುರಿಸುತ್ತಿರುವ ಬಿಕ್ಕಟ್ಟಿಗೆ ಜಾಗತೀಕರಣ ಕಾರಣವೆಂದು ಹೇಳಲಾಗದು! ಜಾಗತೀಕರಣದಿಂದ ರೈತರ ಆತ್ಮಹತ್ಯೆಯ ಸಂಖ್ಯೆ ಹೆಚ್ಚಾಗಿರುವುದು ನಿಜ. ಆದರೆ ಅದಕ್ಕೂ ಮುನ್ನ ರೈತರ ಆತ್ಮಹತ್ಯೆಗಳಾಗಿವೆ.‘ಭೂತಯ್ಯನ ಮಗ ಅಯ್ಯ’ ಎಂಬ ಸಿನಿಮಾವೇ ರೈತ ಸಾಲ ತೀರಿಸಲಾಗದ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ಸಂಗತಿಯನ್ನು ಬಿಚ್ಚಿಡುತ್ತದೆ. ಗೊರೂರರ ಈ ಕಥೆ ರಚನೆಯಾಗಿ, ಸಿನಿಮಾ ಆಗಿ ಐವತ್ತು ವರ್ಷವಾಗುತ್ತಿದೆ. ಆಗ ಜಾಗತೀಕರಣವೇನು ಇರಲಿಲ್ಲ! ಆದರೆ ರೈತ ಸಾಲ ತೀರಿಸಲಾಗದ ಸಂಕಟ-ಅವಮಾನದಿಂದಾಗಿ ಇಂದು ಇಡೀ ಕುಟುಂಬವೇ ಆತ್ಮಹತ್ಯೆಗೆ ತುತ್ತಾಗುತ್ತಿದೆ. ರೈತರೆಂದರೆ ಬರಿ ಆಹಾರ ಧಾನ್ಯ ಬೆಳೆದುಕೊಡುವ ಉತ್ಪಾದಕರಲ್ಲ; ಅವರಿಗೊಂದು ಸಂಸ್ಕೃತಿಯಿದೆ, ನ್ಯಾಯವಿದೆ, ಮಾನವೀಯ ಮೌಲ್ಯಗಳಿವೆ. ನಮ್ಮ ಜಾನಪದ ಸಾಹಿತ್ಯ ಮತ್ತು ಕತೆಗಳಲ್ಲಿ ಅದನ್ನೆಲ್ಲ ಕಾಣಬಹುದು. ಅಷ್ಟೇ ಅಲ್ಲದೇ ನಮ್ಮ ಹೆಸರಾಂತ ಕಥೆ-ಕಾದಂಬರಿಕಾರರಲ್ಲಿ ರೈತ ಸಂಸ್ಕೃತಿಯ ಮಾನವೀಯ ತುಡಿತಗಳನ್ನು ಕಾಣಬಹುದು. ಆದರೆ ಎಂದಿನಿಂದಲೂ ದುರಾಶೆಯ ಬಂಡವಾಳಶಾಹಿ ಪರ ವಾಲುವ ಪ್ರಭುತ್ವಕ್ಕೆ ರೈತರಿಗೆ ನ್ಯಾಯ ನೀಡುವ ಬಗ್ಗೆ ಯೋಚನೆಯೇ ಇಲ್ಲ! ಇದು ನಿಜವಾದ ಹಕೀಕತ್ತು.

‘ರೈತರೇ ಮಾನವ ನಾಗರಿಕತೆಯ ಸ್ಥಾಪಕರು’ ಎನ್ನುತ್ತಾನೆ ಚಿಂತಕ ಡೇನಿಯಲ್. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಒಂದು ಶಾಸನ (ಹತ್ತನೇ ಶತಮಾನ) ಕೂಡ ರೈತರ ಬಂಡಾಯವನ್ನು ದಾಖಲಿಸಿದೆ. ಅಂದರೆ ಅದರರ್ಥ ರೈತ ಹೋರಾಟವೂ ಕೂಡ ಇಂದು ನಿನ್ನೆಯದಲ್ಲ! ಇಷ್ಟು ದೀರ್ಘಕಾಲವೂ ಹೋರಾಟದಿಂದ ನ್ಯಾಯ ಪಡೆಯದ ವರ್ಗವೆಂದರೆ ಅದು ರೈತ ವರ್ಗವೇ ಆಗಿದೆ. ವ್ಯಾಪಾರಿಗಳು, ನೌಕರರು ಹೋರಾಡಿ ನ್ಯಾಯ ಪಡೆಯುತ್ತಾರೆ. ವಕೀಲರು ವೈದ್ಯರು ಗೌರವಪೂರ್ವಕವಾಗಿಯೇ ವೇತನ ಪಡೆಯುತ್ತಿದ್ದು ಈಚೆಗೆ ಸುಲಿಗೆಗೂ ಇಳಿದಿದ್ದಾರೆ! ಆದರೆ ರೈತ? ನ್ಯಾಯ ಪಡೆಯಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಆತ್ಮಹತ್ಯೆ ರೈತರಿಗೆ ನ್ಯಾಯ ದೊರಕಿಸಿಕೊಡುತ್ತಿಲ್ಲ: ಹೀಗಾಗಿ ರೈತರ ಹೋರಾಟ ಅನಿವಾರ್ಯವೇ ಆಗಿದೆ.

ರೈತ ಹೋರಾಟಗಾರರಿಗೂ ಕೂಡ ಈ ತರಹದ ಅರಿವಿನ ಕೊರತೆಯಿಂದಾಗಿ ಕೆಲವು ತಪ್ಪುಗಳಾಗುತ್ತವೆ; ಆದರೆ ಹಾಗಂತ ರೈತ ಹೋರಾಟವನ್ನು ಯಾರೂ ತಳ್ಳಿ ಹಾಕುವಂತಿಲ್ಲ.

ಯಾವ ಮಾನವೀಯ ಸಮಾಜವೂ ರೈತರ ಆತ್ಮಹತ್ಯೆಯನ್ನು ಕಡೆಗನಿಸಬಾರದು. ಹಾಗೆ ಕಡೆಗನಿಸಿದ್ದರಿಂದಲೇ ಇಂದಿನ ಸಮಾಜ ಯಾರಿಗೆ ಯಾರು ಸಂಬಂಧವೇ ಇಲ್ಲದಂಥ ಕ್ರೂರ, ಅಮಾಯಕ-ಅನಾಥ ಭಾವದಿಂದ ನರಳುತ್ತಿದೆ! ಟಿವಿ ಮತ್ತು ಮೊಬೈಲ್‍ಗಳು ಬರಿದೇ ಬಂಡವಾಳಿಗರ ಹತಾರುಗಳಷ್ಟೆ. ಆದರೆ ಅದರಾಚೆಗೆ ರೈತ ನಿರಶನದ ಸ್ಪಷ್ಟ ಸಂಬಂಧಗಳಿವೆ. ಅವುಗಳನ್ನು ಕಂಡುಕೊಳ್ಳುವ, ಅರ್ಥೈಸುವ, ಪರಿಹರಿಸುವ ಯತ್ನಗಳಾಗುತ್ತಿಲ್ಲ. ರೈತ ಹೋರಾಟಗಾರರಿಗೂ ಕೂಡ ಈ ತರಹದ ಅರಿವಿನ ಕೊರತೆಯಿಂದಾಗಿ ಕೆಲವು ತಪ್ಪುಗಳಾಗುತ್ತವೆ; ಆದರೆ ಹಾಗಂತ ರೈತ ಹೋರಾಟವನ್ನು ಯಾರೂ ತಳ್ಳಿ ಹಾಕುವಂತಿಲ್ಲ. ಅದು ಕರುಳಿನ ಕೂಗು ಅಲ್ಲವೇ?…

Leave a Reply

Your email address will not be published.