ಇದು ಬರೀ ರುದ್ರಭೂಮಿ ಅಲ್ಲೋ ಅಣ್ಣಾ…!

ಮನುಷ್ಯನ ಬದುಕಿನ ಅಂತಿಮ ಧಾಮವಾಗಿರುವ ರುದ್ರಭೂಮಿಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಹಾರೂಗೇರಿ ಯುವಕರು ಕೈಗೊಂಡಿರುವ ಕಾರ್ಯ ಮಾದರಿಯಂತಿದೆ!

-ಕಲ್ಲೇಶ್ ಕುಂಬಾರ್

ಶಿವನ ವಾಸಸ್ಥಾನ ಎನ್ನುವ ರುದ್ರಭೂಮಿಯ ಬಗ್ಗೆ ಅದೇಕೇನೋ ಎಲ್ಲರಿಗೂ ಒಂದು ರೀತಿಯ ಅಸಡ್ಡೆ. ಲೌಕಿಕ ಬದುಕಿನ ಬಗ್ಗೆ ಅತಿಯಾದ ವ್ಯಾಮೋಹವನ್ನು ಹೊಂದಿರುವ ಮನುಷ್ಯ, ತನ್ನ ಅಂತಿಮ ಧಾಮ ರುದ್ರಭೂಮಿಯೇ ಆಗಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲಾಗದ ಆತನ ಮನಸ್ಥಿತಿಯೇ ಇದಕ್ಕೆ ಕಾರಣವಾಗಿರಲೂಬಹುದು. ಹೀಗಾಗಿಯೇ ಈ ನಾಡಿನ ಬಹುತೇಕ ಊರುಗಳಲ್ಲಿನ ರುದ್ರಭೂಮಿಗಳ ಸ್ಥಿತಿ ದಯನೀಯವಾಗಿದೆ ಎನ್ನಬಹುದು. ಒಂದು ರೀತಿಯಲ್ಲಿ ಊರಾಚೆ ಜನರ ಸುಳಿದಾಟವೇ ಇಲ್ಲದೇ ರಣರಣ ಎಂದು ಭಣಗುಡುವ ಸ್ಥಳಗಳಲ್ಲಿರುವ ರುದ್ರಭೂಮಿಗಳು ಜನರು ಬೆಳಗಿನ ಜಾವ ತಮ್ಮ ನಿತ್ಯಕರ್ಮಗಳನ್ನು ಪೂರೈಸಿಕೊಳ್ಳುವ ಸ್ಥಳಗಳಾಗಿವೆ. ಹಾಗೆಯೇ, ಒತ್ತೊತ್ತಾಗಿ ಬೆಳೆದು ನಿಂತಿರುವ ಗಿಡಗಂಟಿಗಳಿಂದಲೂ, ಅಲ್ಲಿ ವಾಸಿಸುವ ಹಾವು- ಚೇಳುಗಳಂಥ ವಿಷ ಜಂತುಗಳು ಮತ್ತು ಸದಾ ಜೀಂಯ್ ಗುಟ್ಟುವ ಹುಳ ಹುಪ್ಪಡಿಗಳಿಂದಾಗಿ ರುದ್ರಭೂಮಿಗಳ ವಾತಾವರಣ ಭಯ ಹುಟ್ಟಿಸುವಂತಿರುತ್ತದೆ. ಜನರ ಸುಳಿದಾಟವೇ ಇಲ್ಲದ ಇಂಥ ರುದ್ರಭೂಮಿಗಳು ನಿತ್ಯ ಕುಡುಕರ, ಪುಂಡು ಪೋಕರಿಗಳ ಮತ್ತು ಜೂಜುಕೋರರ ಅನೈತಿಕ ಚಟುವಟಿಕೆಗಳ ತಾಣಗಳಾಗಿ ಮಾರ್ಪಟ್ಟಿರುವುದು ದುರಂತ!

ಆದರೆ, ಈ ಮಾತಿಗೆ ವ್ಯತಿರಿಕ್ತವಾಗಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಲಿಂಗಾಯತ ಸಮಾಜದ ಯುವಕರು ತಮಗೆ ಸಂಬಂಧಿಸಿದ ರುದ್ರಭೂಮಿಯನ್ನು ಒಂದು ಸುಂದರವಾದ ನಂದನವನವನ್ನಾಗಿಸಿದ್ದಾರೆ. ಆ ಮೂಲಕ ನೋಡುಗರ ಮನದಲ್ಲಿ ರುದ್ರಭೂಮಿಯ ಬಗ್ಗೆ ಪವಿತ್ರಭಾವ ಮೂಡುವಂತೆ ಮಾಡಿದ್ದಾರೆ. “ಇಲ್ಲಿದೆ ನಮ್ಮ ಮನೆ; ಅಲ್ಲಿರುವುದು ನಾವು ಬರೀ ಸುಮ್ಮನೆ’ ಎಂಬ ಮಾತಿನಲ್ಲಿ ಅಚಲವಾದ ನಂಬಿಕೆಯನ್ನಿಟ್ಟು ಕ್ರಿಯಾಶೀಲವಾದ ಈ ಯುವಕರ ತಂಡ, ತಮ್ಮ ಸಮುದಾಯದಿಂದಲೇ ನಿರ್ಲಕ್ಷ್ಯಕ್ಕೊಳಪಟ್ಟಿದ್ದ; ಆಗೆಲ್ಲ ಕೇವಲ ಹೆಣ ಹೂಳುವುದಕ್ಕಾಗಿ ಮೀಸಲಿಟ್ಟಿರುವ ಜಾಗೆ ಎಂದಷ್ಟೇ ಎನಿಸಿಕೊಂಡಿದ್ದ ರುದ್ರಭೂಮಿಯನ್ನು ಪವಿತ್ರವಾದ ಪ್ರೇಕ್ಷಣೀಯ ಸ್ಥಳವಾಗಿ ರೂಪುಗೊಳಿಸಿದೆ! ನಾನಾ ಥರದ ಹೂ ಬಳ್ಳಿಗಳಿಂದ, ಚೆಂದನೆಯ ಅಲಂಕಾರಿಕ ಪುಟ್ಟ ಪುಟ್ಟ ಗಿಡಗಳಿಂದ ಹಾಗೂ ನೆರಳು ಕೊಂಡುವಂಥ ಮರಗಳಿಂದ ತುಂಬಿಕೊಂಡು ಹಚ್ಚ ಹಸುರಾಗಿ ಕಂಗೊಳಿಸುತ್ತಿದೆ. ರುದ್ರಭೂಮಿಯ ತುಂಬ ಹರಡಿಕೊಂಡಿರುವ ಈ ಪರಿಯ ಹಸಿರು ಮತ್ತು ತಂಪನೆಯ ನೆರಳಿನ ಹಿಂದೆ ನಿರಂತರವಾದ ಮತ್ತು ಅಗಾಧವಾದ ಯುವಕರ ಶ್ರಮ ಅಡಗಿದೆ ಎಂಬುದು ಸುಳ್ಳಲ್ಲ.

ಲಾಕ್‍ಡೌನ್ ಸಮಯದಲ್ಲಿನ ಬಿಡುವಿನ ದಿನಗಳನ್ನು ಸದುಪಯೋಗ ಪಡಿಸಿಕೊಂಡ ಈ ಯುವಕರು, ಮುಳ್ಳು ಕಂಟಿಗಳು ಬೆಳೆದು ಹಾಳು ಕೊಂಪೆಯಂತಾಗಿದ್ದ ತಮ್ಮ ಸಮಾಜದ ರುದ್ರಭೂಮಿಯನ್ನು ಸುಂದರವಾದ ತಾಣವನ್ನಾಗಿಸಬೇಕೆಂದು ತಮ್ಮೊಳಗೇ ನಿರ್ಧರಿಸಿಕೊಂಡರು. ಆ ನಿರ್ಧಾರದಿಂದಾಗಿ ಲಿಂಗಾಯತ ಸಮಾಜ ಬಂಧುಗಳು ಮನೆಗೊಬ್ಬರಂತೆ ಪ್ರತೀ ರವಿವಾರ ಬೆಳಗಿನ ಆರು ಘಂಟೆಯಿಂದ ಮಧ್ಯಾಹ್ನ ಹನ್ನೆರಡು ಘಂಟೆಯವರೆಗೆ ರುದ್ರಭೂಮಿಯಲ್ಲಿ ಸೇರಿ ಸ್ವಚ್ಛತಾ ಕಾರ್ಯವನ್ನು ಮಾಡತೊಡಗಿದರು.

ಮೊದಲು ಎಲ್ಲೆಂದರಲ್ಲಿ ಬೆಳೆದು ನಿಂತಿದ್ದ ಮುಳ್ಳು ಕಂಟಿಗಳನ್ನೆಲ್ಲ ಕಡಿದು ಹಾಕಿ ನೆಲವನ್ನು ಸಮತಟ್ಟಾಗಿಸಿಕೊಂಡರು.  ನಂತರ ಹೂಗಿಡಗಳನ್ನು ಹಚ್ಚಿ ನೀರು ಹಾಕಿ ಪೋಷಿಸಿದರು; ಸರಿಯಾದ ಆರೈಕೆಯಿಂದಾಗಿ ಕೆಲವೇ ದಿನಗಳಲ್ಲಿ ಚಿಗುರಿ ಹೂವುಗಳನ್ನು ಬಿಡತೊಡಗಿದವು. ಆಗ ರುದ್ರಭೂಮಿಗೆ ಒಂದು ಕಳೆ ಬಂದಿತು. ಮೊದಮೊದಲು ಈ ಕೆಲಸಕ್ಕೆ ಸರಿಯಾದ ರೀತಿಯ ಸ್ಪಂದನೆ ಸಿಗದಿದ್ದರೂ ಕ್ರಮೇಣವಾಗಿ ಯುವಕರ ಪ್ರತಿಫಲಾಪೇಕ್ಷೆಯಿಲ್ಲದ ಸಮಾಜಮುಖಿಯಾದ ಈ ಕಾರ್ಯ ಹಿರಿಯರ ಗಮನ ಸೆಳೆಯಿತು. ಇದರಿಂದ ಉತ್ತೇಜಿತರಾಗಿ ತಮ್ಮೊಳಗೇ ‘ಲಿಂಗಾಯತ ಬಂಧುಗಳು’ ಎಂಬ ವಾಟ್ಸಾಪ್ ಗ್ರುಪ್ ಮಾಡಿಕೊಂಡು ಪ್ರತೀ ವಾರ ಮನೆಗೊಬ್ಬರಂತೆ ಕಡ್ಡಾಯವಾಗಿ ರುದ್ರಭೂಮಿಯ ಸ್ವಚ್ಛತಾ ಕಾರ್ಯಕ್ಕೆ ಬರಲೇಬೇಕು ಎಂಬ ಸಂದೇಶವನ್ನು ಕಳಿಸತೊಡಗಿದರು. ಆಗ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರಕಿತು. ಅದರ ಫಲವಾಗಿ ಸಮಾಜದ ಎಲ್ಲ ಯುವಕರು ರುದ್ರಭೂಮಿಯ ಸುಧಾರಣೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹೀಗಾಗಿ ಕೆಲವೇ ದಿನಗಳಲ್ಲಿ ರುದ್ರಭೂಮಿಯು ಸುಂದರವಾದ ಹೂದೋಟದಂತೆ ಕಂಗೊಳಿಸತೊಡಗಿತು.

ಇದರೊಂದಿಗೆ ಸಮಾಜದ ಕೆಲವೊಂದಿಷ್ಟು ಜನರು ಸುಧಾರಣಾ ಕಾರ್ಯಕ್ಕೆ ನಾನಾ ವಿಧದಲ್ಲಿ ಸಹಾಯ ಮಾಡತೊಡಗಿದರು. ಒಬ್ಬರು ರುದ್ರಭೂಮಿಯ ಕಂಪೌಂಡ್‍ಗೆ ಸುಣ್ಣಬಣ್ಣ ಬಳಿಯುವ ಖರ್ಚು ನೋಡಿಕೊಂಡರೆ, ಮತ್ತೊಬ್ಬರು ವಿದ್ಯುತ್ ಸಂಪರ್ಕ ಕೊಡುವುದರ ಖರ್ಚು ನೋಡಿಕೊಂಡರು. ಮತ್ತೆ ಇನ್ನಷ್ಟು ಜನ ಇದೇ ಥರದ ಬೇರೆ ಬೇರೆ ಕೆಲಸಗಳ ಖರ್ಚಿನ ಜವಾಬ್ದಾರಿ ವಹಿಸಿಕೊಂಡರು. ಇದರಿಂದಾಗಿ ಇಂದು ಲಿಂಗಾಯತ ಸಮಾಜ ಬಂಧುಗಳ ರುದ್ರಭೂಮಿಯ ಚಿತ್ರಣವೇ ಬದಲಾಗಿ ಹೋಗಿದೆ. ಇದು ರುದ್ರಭೂಮಿಯೋ ಅಥವಾ ದೇವಾಲಯದ ಪ್ರಾಂಗಣವೋ ಎಂದು ಅಚ್ಚರಿಪಡುವಂತಾಗಿದೆ!

ಈಗಾಗಲೇ ಇರುವ ರುದ್ರಭೂಮಿಯ ಒಟ್ಟು ಜಾಗೆಯಲ್ಲಿ ಅರ್ಧದಷ್ಟು ಸ್ಥಳವನ್ನು ಶವಸಂಸ್ಕಾರಕ್ಕೆ ಮೀಸಲಿಟ್ಟರೆ, ಇನ್ನುಳಿದ ಅರ್ಧದಷ್ಟು ಜಾಗೆಯಲ್ಲಿ ನಾನಾ ಥರದ ಹೂವಿನ ಗಿಡಗಳನ್ನು, ಅಲಂಕಾರಿಕ ಗಿಡಗಳನ್ನು ಬೆಳೆಸಿದ್ದಾರೆ. ಸ್ಮಶಾನದ ಆವರಣದ ಒಳಗೋಡೆಯ ಮೇಲೆ ಕಲಾವಿದರಿಂದ ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನಗಳನ್ನು ಬರೆಯಿಸಿದ್ದಾರೆ. ಜೊತೆಗೆ, ಆವರಣದೊಳಗೆ ಒಂದು ಕಡೆ ಎತ್ತರದ ಶಿವನ ಮೂರ್ತಿಯನ್ನು ನಿರ್ಮಿಸಿದ್ದಾರೆ. ನುರಿತ ಕಲಾವಿದರಿಂದ ರಚಿಸಲ್ಪಟ್ಟ ಈ ಶಿವನ ಮೂರ್ತಿಯು ಈಗ ಊರ ಜನರ ಆಕರ್ಷಣೆಯ ಕೇಂದ್ರವಾಗಿದೆ. ಅಲ್ಲದೇ, ‘ಮುಕ್ತಿಧಾಮ’ ಎಂಬ ಕಟ್ಟಡವನ್ನು ನಿರ್ಮಿಸಿದ್ದು ಶವಸಂಸ್ಕಾರಕ್ಕೆಂದು ಬರುವ ಜನರು ಇದನ್ನು ಬಳಸಬಹುದಾಗಿದೆ. ಹಾಗೆಯೇ ರುದ್ರಭೂಮಿಯಲ್ಲಿ ಕೊಳವೆಬಾವಿಯನ್ನು ತೋಡಿಸಿ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆಯನ್ನೂ ಸಹ ಮಾಡಿದ್ದಾರೆ. ಹೀಗೆ ಈ ಎಲ್ಲ ಸೌಕರ್ಯಗಳನ್ನು ಹೊಂದಿರುವ ರುದ್ರಭೂಮಿಯು ಇದೀಗ ಆಕರ್ಷಣೀಯ ಕೇಂದ್ರವಾಗಿಬಿಟ್ಟಿದೆ.

ಹೀಗೆ, ಈ ರುದ್ರಭೂಮಿಯ ಬಗ್ಗೆ ಇಷ್ಟು ಹೇಳಿದ ಮಾತ್ರಕ್ಕೆ ಮುಗಿಯುವುದಿಲ್ಲ. ಹಬ್ಬ ಹರಿದಿನಗಳಂಥ ವಿಶೇಷ ಸಂದರ್ಭಗಳಲ್ಲಿ ಇಡಿಯಾಗಿ ರುದ್ರಭೂಮಿಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸುತ್ತಾರೆ. ಹಾಗೆಯೇ, ಪ್ರವೇಶ ದ್ವಾರದ ಮುಂದೆ ರಂಗವಲ್ಲಿ ಹಾಕಿ, ಬಾಳೆಕಂಬ, ತಳಿರುತೋರಣ ಕಟ್ಟುತ್ತಾರೆ. ಜೊತೆಗೆ ರುದ್ರಭೂಮಿಯಲ್ಲಿರುವ ಶಿವನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆಗ ಸಮಾಜದ ಬಂಧುಗಳೆಲ್ಲ ರುದ್ರಭೂಮಿಯಲ್ಲಿ ಸೇರಿ ಸಂಭ್ರಮಿಸುತ್ತಾರೆ. ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ ನಡೆದದ್ದು ಉಲ್ಲೇಖನಿಯ. ಅಲ್ಲದೇ ಶಿವರಾತ್ರಿಯ ಸಂದರ್ಭದಲ್ಲೂ ಶಿವನ ಪೂಜೆ, ಭಜನೆ ಕಾರ್ಯಕ್ರಮಗಳು ನಡೆದಿವೆ.

ಇದೆಲ್ಲವೂ ಸಾಧ್ಯವಾದದ್ದು ಮಾತ್ರ ಸಮಾಜದ ಯುವಕರ ಇಚ್ಛಾಶಕ್ತಿಯಿಂದಲೇ. ತಮ್ಮ ಹೊಲ ಮನೆಗಳ ಕೆಲಸಗಳನ್ನು ನಿರ್ವಹಿಸುವಷ್ಟೇ ಜವಾಬ್ದಾರಿಯಿಂದ ಈ ಯುವಕರು ರುದ್ರಭೂಮಿಯ ಸುಧಾರಣಾ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮರಣವನ್ನೂ ಸಹ ಸಂಭ್ರಮಿಸಬೇಕು ಎಂಬ ಮನೋಸ್ಥಿತಿಯ ಈ ಯುವಕರ ಕಾರ್ಯದ ಬಗ್ಗೆ ಶ್ಲಾಘನೀಯ ಮಾತುಗಳು ಕೇಳಿ ಬರುತ್ತಿವೆ. ಈ ನಿಸ್ವಾರ್ಥ ಸೇವೆಯ ಸಾರಥ್ಯವನ್ನು ವಹಿಸಿರುವ ಯುವಕರ ತಂಡದ ಮುಖಂಡರಂತಿರುವ ಪರಗೌಡ ಪಾಟೀಲ, ಕಾಂತು ಬಾಡಗಿ, ರವಿ ಕಬ್ಬೂರ, ಸುರೇಶ್ ಸಾರವಾಡ, ದಾಸ್ಯಾಳ, ವಿಶ್ವನಾಥ್ ಅರಬಳ್ಳಿ, ಸಂತೋಷ್ ಟರ್ಕಿ ಅಲ್ಲದೇ ಇನ್ನಷ್ಟು ಯುವಕರು ಯಾರೇ ಬರಲಿ, ಅಥವಾ ಬಾರದಿರಲಿ… ಎನ್ನುವಂತೆ ಇವರಂತೂ ರುದ್ರಭೂಮಿಯ ಸುಧಾರಣಾ ಚಟುವಟಿಕೆಯಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ.

ಇದು ಇಷ್ಟಕ್ಕೆ ನಿಲ್ಲುವ ಕ್ರಿಯೆ ಆಗಬಾರದು. ಎಲ್ಲಾ ಊರುಗಳಲ್ಲಿ ಇಂಥ ಕೆಲಸಕ್ಕೆ ಹೆಗಲು ಕೊಡುವ ಸಹೃದಯರ ಅವಶ್ಯಕತೆ ಇದೆ. ಸರಕಾರ ಮಾಡಬೇಕಾದ ಇಂಥ ಮಹತ್ತರವಾದ ಕಾರ್ಯವನ್ನು ಯುವಕರು ಮಾಡುತ್ತಿದ್ದಾರೆ ಎಂಬುದು ಸಾಮಾನ್ಯದ ಮಾತಂತೂ ಅಲ್ಲವೇ ಅಲ್ಲ. ಮನುಷ್ಯನ ಬದುಕಿನ ಅಂತಿಮ ಧಾಮವಾಗಿರುವ ರುದ್ರಭೂಮಿಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಈ ಯುವಕರು ಕೈಗೊಂಡಿರುವ ಕಾರ್ಯ ಮಾದರಿಯಂತಿದೆ!

Leave a Reply

Your email address will not be published.