ಇನ್ನಾದರೂ ಪ್ರಗತಿಯತ್ತ ಹೆಜ್ಜೆ ಹಾಕೋಣ…

ಈ ಊರ ಜನ ಹೆಚ್ಚು ಮಾತನಾಡುವವರಲ್ಲ, ಮೌನಿಗಳು. ಸಹನೆ ಉಳ್ಳವರು. ಆದರೆ ಒಮ್ಮೆ ತುಟಿ ಬಿಚ್ಚಿದರೆ ಸಾಕು ಬೈಗುಳ ಸಮೇತ ಮುತ್ತಿನಂಥ ಮಾತಿನ ಮಳೆ ಸುರಿಸುತ್ತಾರೆ. ಇವರದು ಸ್ಪಷ್ಟ, ನೇರ, ದಿಟ್ಟ ಮಾತು. ಈ ಮಾತು ಎಷ್ಟು ಸ್ಪಷ್ಟ ಎಂದರೆ ಒಂದು ಹೊಡೆತ ಎರಡು ತುಂಡಿನಂತೆ ಖಡಾಖಂಡಿತ, ನಿರ್ಭೀತ!

ನನ್ನೂರು ಧಾರವಾಡ… ನನ್ನದು ಎಂದರೆ ಭಾವನಾತ್ಮಕವಾಗಿ ನನಗೆ ಸಂಬಂಧಿಸಿದ ಊರು! ನಾನು ಕಂಡಂತೆ ಕಳೆದ ಏಳು ದಶಕಗಳಲ್ಲಿ ಇಲ್ಲಿ ಆಮೆಗತಿಯಲ್ಲಿ ಪರಿವರ್ತನೆಗಳಾಗಿವೆ. ಇವೆಲ್ಲವೂ ಕೇವಲ ಭೌತಿಕ ಪರಿವರ್ತನೆಗಳು ಎಂದು ನನ್ನ ಅಭಿಪ್ರಾಯ. ದಟ್ಟಾದ ಹಸಿರು ಕಾಡಿನ ನಡುವೆ ಅಲ್ಲೊಂದು ಇಲ್ಲೊಂದು ಇಣುಕುವ ಹಂಚಿನ ಚಪ್ಪರಗಳು ಕಣ್ಣಿಗೆ ಬೀಳುತ್ತಿದ್ದವು. ಅಂದು ನಾವು ಕಾಡಿನ ಸಾಮ್ರಾಜ್ಯದಲ್ಲಿ ಸುಖವಾಗಿದ್ದ ಪ್ರಜೆಗಳಾಗಿದ್ದೆವು. ಈಗ ಅಲ್ಲೊಂದು ಇಲ್ಲೊಂದು ಮರ ಹಿಂಡನಗಲಿದ ಆನೆಯಂತೆ ಕಂಗೆಟ್ಟು ನಿಂತಿದೆ!

ಸರಕಾರಿ ಅಧಿಕಾರಿಗಳು ಇಲ್ಲಿ ಬರಲು ಅಂಜುತ್ತಿದ್ದರಂತೆ. ಕಾರಣ ಇಲ್ಲಿ ಹುಲಿಗಳು ಅಡ್ಡಾಡುತ್ತವೆ ಎನ್ನುತ್ತಿದ್ದರು. ಆ ಕಾಡೆಲ್ಲ ನಾಶವಾಗಿದೆ. ನಿಸರ್ಗದ ಪ್ರತಿನಿಧಿಯಂತೆ ಪಪ್ಪಾಯಿ ಗಿಡದಲ್ಲೋ, ನುಗ್ಗೆಯ ಗಿಡದಲ್ಲೋ ಅಂಜುತ್ತ ಕುಳಿತ ಮಂಗಗಳನ್ನು ಬಿಟ್ಟರೆ ಇಲ್ಲಿ ಯಾವ ಕಾಡು ಪ್ರಾಣಿಗಳು ಕಾಣುವುದಿಲ್ಲ. ಈ ಊರಲ್ಲಿ ಹನ್ನೆರಡು ಕೆರೆಗಳು ಇದ್ದವೆಂದು ಅಜ್ಜಿ ಹೇಳುತ್ತಿದ್ದಳು. ಅವೆಲ್ಲ ಈಗ ದಂತ ಕಥೆ. ಕೆರೆಗಳಿದ್ದಲ್ಲಿ ಬಡಾವಣೆಗಳು ಕೈಕಾಲು ಚಾಚಿ ಹಬ್ಬಿಕೊಂಡಿವೆ. ನೀರಿಗೆ, ವಿದ್ಯುತ್ತಿಗೆ ಪರದಾಡುವ ಜನರೇ ನಮ್ಮ ಸುತ್ತಲಿದ್ದಾರೆ.

ನಮ್ಮೂರ ಬೇಂದ್ರೆ, ಕಣವಿ, ಬೆಟಗೇರಿ ಕೃಷ್ಣಶರ್ಮ ಮೊದಲಾದವರು ಕವಿಗಳಾದದ್ದು ಈ ಕಾಡ ತಾಯಿಯ ಮಡಿಲಲ್ಲೇ. ‘ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳಾ ಹಾಡು’ ಎಂದು ಬೇಂದ್ರೆಯವರು ಉದ್ಗರಿಸಿದರೆ ‘ಬೇಲಿಯ ಮೇಲೆ ನೀಲಿಯ ಹೂವು’ ಎಂದು ಪೃಕೃತಿ ಸೌಂದರ್ಯವನ್ನು ಹೊಗಳಿ ಹಾಡಿದ ಕವಿ ಕಣವಿಯವರು. ಈ ಊರಿನ ಮನೆಮನೆಗಳಲ್ಲಿ ದಶಕಗಳ ಹಿಂದೆ ಹಿಂದೂಸ್ತಾನಿ ಸಂಗೀತದ ಧ್ವನಿ ಬೈಗು ಬೆಳಗಿನಲ್ಲಿ ಹೊರಹೊಮ್ಮುತ್ತಿತ್ತು. ಆದರೆ ಈಗ ಟಿವಿ, ಮೊಬೈಲ್‍ಗಳ ಅಬ್ಬರದಲ್ಲಿ ಆ ಸುಮಧುರ ಸಂಗೀತವು ಮಾಯವಾಗಿದೆ.

ಧಾರವಾಡದ ವರ್ಣನೆಯನ್ನು ಕಿರುದಾಗಿ ಪರಿಚಯಿಸಲು ಕೆಲವು ದೃಶ್ಯಗಳನ್ನು ನೆನಪಿಸುತ್ತೇನೆ. ಊರ ತುಂಬ ಶಾಲೆಗಳು, ಕಾಲೇಜುಗಳು ಮತ್ತು ಟ್ಯೂಷನ್ ಕ್ಲಾಸುಗಳು… ಇಲ್ಲೆಲ್ಲಾ ತುಂಬಿಕೊಂಡ ವಿದ್ಯಾರ್ಥಿಗಳ ಕಲರವ. ದಾರಿ ದಾರಿಗಳಲ್ಲಿ ಮಾರ್ಕೆಟ್ ಮಾಲ್‍ಗಳಲ್ಲಿ ಓಡಾಡುವ ತರುಣ ತರುಣಿಯರ ಕೇಕೆ. ಊರ ಹೊರಗೆ ದಿನಬೆಳಗು ಊರುಗೋಲನ್ನು ಊರುತ್ತ ಅಡ್ಡಾಡುವ ಪಿಂಚಣಿದಾರರ ಹರಟೆ. ಕಾಯಿಪಲ್ಲೆ ಮಾರ್ಕೆಟ್‍ಗಳಲ್ಲಿ ತರಕಾರಿಯನ್ನು ಕೊಳ್ಳುತ್ತಿರುವ ನಮ್ಮೂರ ಮಹಿಳೆಯರ ವಾಗ್ವಾದ. ಎಷ್ಟು ಮರೆತರೂ ಮರೆಯಲಾಗದ ಸುಭಾಸ ರೋಡು ನಮ್ಮೂರಿಗೆ ಒಂದು ಚೆಂದದ ಬೈತಲೆ ಮಣಿಸರದಂತಿದ್ದು ಕಲಕಲ ಶಬ್ದದಿಂದ ತುಂಬಿಕೊಂಡಿರುತ್ತದೆ.

ಜುಬಿಲಿ ಸರ್ಕಲ್‍ನಿಂದ ಹೊರಟು ಗಾಂಧಿಚೌಕದವರೆಗೆ ಹತ್ತು ಹಲವು ಸಲ ಕೆಲಸವಿಲ್ಲದೆ ಹರಟುತ್ತ ಓಡಾಡುವ ತರುಣ ತರುಣಿಯರ ನಗೆ ಅಬ್ಬರ! ಇಲ್ಲಿ ಹರಿದಾಡುವ ಜನರ ಸ್ವಭಾವ ಸಂಸ್ಕೃತಿಗಳನ್ನು ಅವರನ್ನು ನೋಡಿಯೇ ನಿರ್ಧರಿಸಬಹುದು. ಬೆಳಗಿನ ಹತ್ತರಿಂದ ರಾತ್ರಿ ಹತ್ತರವರಗಿನ ಅವಧಿಯಲ್ಲಿ ಸಂಚರಿಸುವ ಜನರ ಕೆಲವು ನಿರ್ದಿಷ್ಟ ಗುಂಪುಗಳನ್ನು ಮಾಡಬಹುದು. ಉದಾಹರಣೆಗೆ ಬೆಳಗಿನ 8ರಿಂದ 10ರವರೆಗೆ ರಿಕ್ಷಾಗಳಲ್ಲಿದ್ದ ಮಕ್ಕಳ ಚಿಲಿಪಿಲಿ. ಕಳ್ಳತನದಿಂದ ಪೇಟೆಯಲ್ಲಿ ಅಡ್ಡಾಡುವ ಹುಡುಗ ಹುಡುಗಿಯರು ಸಂಜೆಯ ನಸುಗತ್ತಲಲ್ಲಿ ಅಂದರೆ ಆರರಿಂದ ಎಂಟರವರೆಗೆ ತಮ್ಮ ಕಣ್ಣುಗಳಲ್ಲಿ ಅಥವಾ ಮುಖಭಾವಗಳಲ್ಲಿ ಇಲ್ಲವೆ ಕೈಸನ್ನೆಗಳಲ್ಲಿ ಮಾತನಾಡುತ್ತಿರುತ್ತಾರೆ.

ಕಾಯಿಪಲ್ಲೆಯನ್ನೋ ತಂದು ಮಾರಲಿಕ್ಕೆ ಕೂಡ್ರುವ ಸಮಯ ನಾಲ್ಕರಿಂದ ಎಂಟರವರೆಗೆ. ತಮ್ಮೂರಿನ ಬಸ್ಸನ್ನು ಹತ್ತುವುದಕ್ಕೂ ಮೊದಲು ಅವರು ಕಾಮತ ಹೊಟೇಲಿನ ದೋಸೆಯನ್ನೋ, ಪುರಿಯನ್ನೋ ತಿನ್ನಲು ಮರೆಯಲಾರರು.

ಆಫೀಸು ಕೆಲಸದ ನಂತರ ಟೂ ವ್ಹೀಲರ್‍ನಲ್ಲಿ ಹೆಂಡತಿ ಮಕ್ಕಳೊಂದಿಗೆ ಹೊರಟ ಸವಾರಿ ಸುಪರ್ ಮಾರ್ಕೆಟ್‍ನ ತಗ್ಗಿಗೆ ಧಾವಿಸುವ ಸಮಯವು ಎಳರಿಂದ ಎಂಟರವರೆಗೆ. ಇನ್ನು ಸುತ್ತಲಿನ ಹಳ್ಳಿಗಳಿಂದ ಬರುವ ಹೆಣ್ಣುಮಕ್ಕಳು ಕಾಳನ್ನೋ, ಕಾಯಿಪಲ್ಲೆಯನ್ನೋ ತಂದು ಮಾರಲಿಕ್ಕೆ ಕೂಡ್ರುವ ಸಮಯ ನಾಲ್ಕರಿಂದ ಎಂಟರವರೆಗೆ. ತಮ್ಮೂರಿನ ಬಸ್ಸನ್ನು ಹತ್ತುವುದಕ್ಕೂ ಮೊದಲು ಅವರು ಕಾಮತ ಹೊಟೇಲಿನ ದೋಸೆಯನ್ನೋ, ಪುರಿಯನ್ನೋ ತಿನ್ನಲು ಮರೆಯಲಾರರು.

ಧಾರವಾಡಕ್ಕೆ ವಿದ್ಯಾನಗರಿಯೆಂಬ ಹೆಸರೂ ಇದೆ. ಏಕೆಂದರೆ ಇಲ್ಲಿ ಮೂರು ವಿಶ್ವವಿದ್ಯಾಲಯಗಳಿವೆ; ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಮತ್ತು ಕಾನೂನು ವಿಶ್ವವಿದ್ಯಾಲಯ. ಇತ್ತಿತ್ತಲಾಗಿ ಐಐಟಿ ಮತ್ತು ಹೈಕೋರ್ಟು ಬಂದ ಮೇಲಂತೂ ಊರಿನ ನಸೀಬ ತೆರೆದಿದೆ! ಹತ್ತು ಹಲವು ಪದವಿ ಕಾಲೇಜುಗಳು, ಬೀದಿಗೊಂದೊಂದು ಪದವಿಪೂರ್ವ ಕಾಲೇಜು, ನೋಡಿದಲ್ಲೆಲ್ಲ ಕಣ್ಣಿಗೆ ಬೀಳುವ ಕನ್ನಡ ಶಾಲೆಗಳ ಮಧ್ಯದಲ್ಲಿ ಮೆರೆದಾಡುವ ಆಂಗ್ಲ ಮಾಧ್ಯಮದ ಶಾಲೆಗಳೂ ಇವೆ. ಅಲ್ಲದೆ ಶಿಕ್ಷಕರ ಟ್ರೇನಿಂಗ್ ಕಾಲೇಜುಗಳು ಮತ್ತು ಸ್ಪರ್ಧಾತ್ಮಕ ಶಿಕ್ಷಣಕ್ಕಾಗಿ ಇದ್ದ ವಿದ್ಯಾಸಂಸ್ಥೆಗಳು. ಇವಲ್ಲಕ್ಕಿಂತಲೂ ಮಿಗಿಲಾಗಿ ಜಯಭೇರಿಯ ಪತಾಕೆಯನ್ನು ಹಾರಿಸುತ್ತ ಬೀಗಿ ನಿಂತ ನೂರಾರು ಟ್ಯೂಷನ್ ಕ್ಲಾಸುಗಳು! ವಿಷಾದವೆಂದರೆ ಮಕ್ಕಳ ವೈಚಾರಿಕ ಶಕ್ತಿಯನ್ನೇ ಕೊಲ್ಲುತ್ತಿರುವ ಈ ಟ್ಯೂಷನ್ ದಂಧೆಗೆ ಹಣ ತೆತ್ತು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿರುವ ಈ ಊರಿನ ಪಾಲಕರ ಯೋಚನೆಗಳನ್ನು ಎಷ್ಟು ಧಿಕ್ಕರಿಸಿದರೂ ಸಾಲದು ಎಂದು ನನಗನ್ನಿಸುತ್ತಿದೆ.

ಈ ಸಾಂಸ್ಕೃತಿಕ ನಗರಿಯ ಹೃದಯಭಾಗದಲ್ಲಿ ಕಳೆದ 120 ವರ್ಷಗಳಿಂದ ಕ್ರಿಯಾಶೀಲವಾಗಿರುವ ಸಂಸ್ಥೆ ಎಂದರೆ ಕರ್ನಾಟಕ ವಿದ್ಯಾವರ್ಧಕ ಸಂಘ. ವರ್ಷದ 365 ದಿನವೂ ದತ್ತಿ ಹೆಸರಿನಲ್ಲಿ ಕಾರ್ಯಕ್ರಮಗಳ ಸರಣಿ ನಡೆದೇ ಇರುತ್ತದೆ. ಸಾಹಿತ್ಯದ್ದಾಗಿದ್ದರೆ ಸಭಾಭವನದಲ್ಲಿ ನಾಲ್ಕು ನೆರೆತ ಕೂದಲಿನ ಜನ ಕಾಣಿಸುತ್ತಾರೆ. ನೃತ್ಯ ಸಂಗೀತ ನಾಟಕಗಳಿದ್ದರೆ ಕಣ್ಣುತುಂಬುವ ಸಂಖ್ಯೆಯಲ್ಲಿ ಪ್ರೇಕ್ಷಕರಿರುತ್ತಾರೆ. ಸೃಜನಾದಲ್ಲಿ, ಆಲೂರು ವೆಂಕಟರಾವ ಸಭಾಭವನದಲ್ಲಿ ಕೆಲವು ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತವೆ. ಇಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬರವೇ ಇಲ್ಲ. ಆದರೆ ವಿಷಾದನೀಯ ಸಂಗತಿ ಎಂದರೆ ನಮ್ಮ ತರುಣ ಪೀಳಿಗೆಯ ಜನರು ಈ ಕಾರ್ಯಕ್ರಮಗಳಲ್ಲಿ ಕಣ್ಣಿಗೆ ಬೀಳುವುದೇ ಇಲ್ಲ!

ಧಾರವಾಡಕ್ಕೆ ಒಂದು ಇತಿಹಾಸವಿದೆ ಎನ್ನಲಿಕ್ಕೆ ಸಾಕ್ಷಿಯಾಗಿ ನಿಂತ ಜಿಲ್ಲಾಸ್ಪತ್ರೆಯ ಸಮೀಪದಲ್ಲಿದ್ದ ಅಳಿದ ಕೋಟೆಯ ಒಂದು ಬೃಹತ್ ಬಾಗಿಲು, ಛತ್ರಪತಿ ಶಿವಾಜಿ ಮಹಾರಾಜರು ಸ್ಥಾಪಿಸಿದರೆನ್ನಲಾದ ದುರ್ಗಾದೇವಿಯ ಮಂದಿರ, 500 ವರ್ಷಗಳ ಹಿಂದೆ ಶೃಂಗೇರಿ ಮಠದವರು ಕಟ್ಟಿಸಿದ ಐದಂಸ್ತಿನ ಸುಂದರವಾದ ಸಂಸ್ಕತ ಪಾಠಶಾಲೆ, ಒಂದುನೂರು ವರ್ಷಗಳ ಹಿಂದೆ ಆನಿಬೆಸೆಂಟ್‍ರವರು ಸ್ಥಾಪಿಸಿದ ಥಿಯೊಸೊಫಿಕಲ್ ಸೊಸೈಟಿಯ ತತ್ವಾನ್ವೇಷಣ ಮಂದಿರ, 125 ವರ್ಷಗಳ ಹಿಂದೆ ಡೆಪ್ಯೂಟಿ ಚನ್ನಬಸಪ್ಪನವರು ಪ್ರಾರಂಭಿಸಿದ ಗಂಡುಮಕ್ಕಳ ಸರಕಾರಿ ಟ್ರೇನಿಂಗ್ ಕಾಲೇಜು, ಕಿತ್ತೂರ ರಾಣಿ ಚನ್ನಮ್ಮ ಕೊಲೆ ಮಾಡಿದ ಧಾರವಾಡದ ಜಿಲ್ಲಾ ಕಲೆಕ್ಟರ್ ಥ್ಯಾಕರೆ ಸಾಹೇಬರ ಸ್ಮಾರಕ, ಇಲ್ಲಿಯ ರೈಲ್ವೆಸ್ಟೇಷನ್‍ನಲ್ಲಿ ಕೆಲ ಸಮಯ ಕಳೆದ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರರ ಸ್ಮಾರಕ -ಇವೆಲ್ಲವೂ ನಮ್ಮ ಹಿರಿಯರು ಕೈಗಿಟ್ಟು ಹೋದ ಅಮೌಲ್ಯ ಸಂಪತ್ತು. ಆದರೆ ಇವುಗಳ ಬಗೆಗಿನ ಧಾರವಾಡಿಗರ ನಿರ್ಲಕ್ಷ್ಯವು ಮಾತ್ರ ಢಾಳಾಗಿ ಕಾಣಿಸುತ್ತದೆ.

ಧಾರವಾಡವನ್ನು ಪ್ರಪಂಚದ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದು ಇಲ್ಲಿಯ ಬಾಬುಸಿಂಗ ಠಾಕೂರರ ಪೇಡಾ, ನವಲೂರಿನ ಪೇರಲೆಹಣ್ಣು ಮತ್ತು ಕಲಮಿ ಮಾವಿನಹಣ್ಣು! ಈ ಊರಲ್ಲಿ ಸಂಖ್ಯೆ ಮೀರಿ ಕಾಲೇಜುಗಳನ್ನು ಕಟ್ಟಿ ವಿದ್ಯಾರ್ಥಿಗಳಿಂದ ಡೊನೇಷನ್ ಕಿತ್ತುಕೊಳ್ಳುವುದರ ಬದಲಾಗಿ ಪೇರಲೆ ಮಾವಿನ ಹಣ್ಣಿನ ಬೃಹತ್ ತೋಟಗಳನ್ನು ಬೆಳೆಸಿ ರಾಷ್ಟ್ರದಾದ್ಯಂತ, ಪ್ರಪಂಚದಾದ್ಯಂತ ರಫ್ತು ಮಾಡುವ ಒಂದು ವಾಣಿಜ್ಯ ಘಟಕದ ಸ್ಥಾಪನೆಯಾಗಬೇಕಿತ್ತು. ಈ ಕುರಿತು ಇಲ್ಲಿಯ ಶ್ರೀಮಂತರಾಗಲಿ, ಉದ್ದಿಮೆದಾರರಾಗಲಿ ಮತ್ತು ಈ ಭಾಗದ ಉಸ್ತುವಾರಿ ಸಚಿವರಾಗಲಿ ಎಂದಿಗೂ ಯೋಚಿಸದೇ ಇದ್ದುದು ಈ ಊರಿನ ದೌರ್ಭಾಗ್ಯವೆನ್ನಬಹುದು!

ನಮ್ಮೂರ ಜಾತ್ರೆಗಳನ್ನು ನೆನಪಿಸಿಕೊಳ್ಳಲೇಬೇಕು. ಪ್ರತಿವರ್ಷ ಫೆಬ್ರುವರಿಯಲ್ಲಿ ಮುರುಘರಾಜೇಂದ್ರ ಮಹಾಸ್ವಾಮಿಗಳ ಸ್ಮರಣಾರ್ಥ ಬೃಹತ್ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ಸಾಹಿತ್ಯ, ಸಂಗೀತಗಳ ಸಮಾರಾಧನೆ ನಡೆಯುತ್ತದೆ. ರಾಷ್ಟ್ರಮಟ್ಟದ ಹೆಸರಾಂತ ವಿದ್ವಾಂಸರನ್ನು, ಕಲಾವಿದರನ್ನು ಆಮಂತ್ರಿಸಲಾಗುತ್ತದೆ. ಪ್ರತಿವರ್ಷ ದಸರೆಯ ಹತ್ತು ದಿನ ನಡೆಯುವ ಜಾತ್ರೆ ಎಂದರೆ ರವಿವಾರ ಪೇಟೆಯಲ್ಲಿಯ ಲಕ್ಷ್ಮೀನಾರಾಯಣ ದೇವರ ಜಾತ್ರೆ. ಸಂಗಮರವರಿ ಕಲ್ಲಿನಲ್ಲಿ ಕೆತ್ತಿದ ಲಕ್ಷ್ಮಿನಾರಾಯಣ ದೇವರ ವಿಗ್ರಹಗಳು ಅತ್ಯಂತ ಕಲಾತ್ಮಕವಾಗಿಯೂ, ಸುಂದರವಾಗಿಯೂ ಕಂಗೊಳಿಸುತ್ತವೆ. ಹತ್ತು ದಿನಗಳ ಪರ್ವ ಕಾಲದಲ್ಲಿ ಈ ಮೂರ್ತಿಗಳಿಗೆ ವಿವಿಧ ವೇಷಭೂಷಣಗಳನ್ನು ತೊಡಿಸಿ ಅಲಂಕರಿಸಿದ್ದನ್ನು ನಿಂತು ನೋಡಬೇಕು.

ಒಂದು ಗಳಿಗೆಯೂ ನಿಲ್ಲದೆ ಒಂದು ಗಂಟೆ ಕಾಲ ನಿರರರ್ಗಳವಾಗಿ ಸುರಿದು ಶಾಂತವಾದದ್ದು ಇದೀಗ ಎರೆದುಕೊಂಡು ಮಲಗಿದ ಹಸುಳೆಯನ್ನು ನೆನಪಿಸುತ್ತಿತ್ತು. ಈ ಮಳೆಯು ಧಾರವಾಡಿಗರ ಸ್ವಭಾವವನ್ನು ಹೋಲುತ್ತದೆಂದು ನನಗೆನ್ನಿಸುತ್ತದೆ.

ನಮ್ಮೂರ ಹೆಣ್ಣುಮಕ್ಕಳಿಗೆ ಭಕ್ತಿಗಿಂತ ಗೃಹೋಪಯೋಗಿ ಸಾಮಾನುಗಳ ವ್ಯಾಪಾರವೇ ಮುಖ್ಯವಾಗುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಮೂರನೆಯ ಜಾತ್ರೆ ಎಂದರೆ ಅದು ಉಳವಿಯ ಚನ್ನಬಸವೇಶ್ವರ ಜಾತ್ರೆ. ಇದು ಶ್ರಾವಣಮಾಸದ ನಾಲ್ಕು ಸೋಮವಾರ ನಡೆಯುತ್ತದೆ. ಶಹರಿಗರಿಗಿಂತ ಗ್ರಾಮೀಣ ಜನರೇ ಭಕ್ತಿಯಿಂದ ಗುಂಪು ಗುಂಪಾಗಿ ಭಜನೆ ಮಾಡುತ್ತ ತಮ್ಮೂರಿನಿಂದ ಇಲ್ಲಿಗೆ ಪಾದಯಾತ್ರೆ ಕೈಕೊಳ್ಳುತ್ತಾರೆ. ಈ ಜಾತ್ರೆಯ ಅವಿಸ್ಮರಣೀಯ ಚಿತ್ರವನ್ನು ಕವಿ ಬೇಂದ್ರೆಯವರ ‘ಸಣ್ ಸೋಮವಾರ’ ಕವಿತೆಯಲ್ಲಿ ನೋಡಿ ಆನಂದ ಪಡಬಹುದು.

ಈ ವರ್ಷ ಮಾನ್ಸೂನ್ ಮಳೆಗಾಗಿ ಕಾಯ್ದು ಕಾಯ್ದು ಜೂನ್ ತಿಂಗಳ ಕೊನೆಯ ಶುಕ್ರವಾರದಂದು ರಾತ್ರಿ 8ರಿಂದ 9ರವರೆಗೆ ಅಕಸ್ಮಾತ್ತಾಗಿ ಧನ್ ಧನ್ ಸುರಿದ ಮಳೆಯು ಅತೀವ ಸಂತಸ ತಂದಿತ್ತು. ಒಂದು ಗಳಿಗೆಯೂ ನಿಲ್ಲದೆ ಒಂದು ಗಂಟೆ ಕಾಲ ನಿರರರ್ಗಳವಾಗಿ ಸುರಿದು ಶಾಂತವಾದದ್ದು ಇದೀಗ ಎರೆದುಕೊಂಡು ಮಲಗಿದ ಹಸುಳೆಯನ್ನು ನೆನಪಿಸುತ್ತಿತ್ತು. ಈ ಮಳೆಯು ಧಾರವಾಡಿಗರ ಸ್ವಭಾವವನ್ನು ಹೋಲುತ್ತದೆಂದು ನನಗೆನ್ನಿಸುತ್ತದೆ. ಈ ಊರ ಜನ ಹೆಚ್ಚು ಮಾತನಾಡುವವರಲ್ಲ, ಮೌನಿಗಳು. ಸಹನೆ ಉಳ್ಳವರು. ಆದರೆ ಒಮ್ಮೆ ತುಟಿ ಬಿಚ್ಚಿದರೆ ಸಾಕು ಬೈಗುಳ ಸಮೇತ ಮುತ್ತಿನಂಥ ಮಾತಿನ ಮಳೆ ಸುರಿಸುತ್ತಾರೆ.

ಇವರದು ಸ್ಪಷ್ಟ, ನೇರ, ದಿಟ್ಟ ಮಾತು. ಈ ಮಾತು ಎಷ್ಟು ಸ್ಪಷ್ಟ ಎಂದರೆ ಒಂದು ಹೊಡೆತ ಎರಡು ತುಂಡಿನಂತೆ ಖಡಾಖಂಡಿತ, ನಿರ್ಭೀತ!
ಧಾರವಾಡದ ಜನ ಯಾವ ದೃಷ್ಟಿಯಿಂದಲೂ ಪ್ರಗತಿಯತ್ತ ಹೆಜ್ಜೆ ಇಡುತ್ತಿಲ್ಲ! ಇದಕ್ಕೆ ಕಾರಣ ಇವರ ಆಲಸ್ಯ ಮತ್ತು ತಲೆತಲಾಂತರಗಳಿಂದ ಹಿಡಿದಿಟ್ಟುಕೊಂಡ ಸಂಪ್ರದಾಯಗಳಿಗೆ ಜೋತು ಬಿದ್ದದ್ದು. ಇವರಿಗೆ ಬೇಕು ಅವೇ ಅವೇ ಹಳೆಯ ದಾರಿ, ಅವರೇ ಹಳೆಯ ಗೆಳೆಯರು. ಇಡೀ ಸಂಜೆ ಊರಿನ ಕೂಟು ಕೂಟಿಗೆ ನಿಂತು ಹರಟೆ ಹೊಡೆಯುತ್ತ ನಕ್ಕು ರಾತ್ರಿ ಮನೆಸೇರಿದರೆಂದರೆ ಮುಗಿಯಿತು ಹೊರಗಿನ ಜಗತ್ತಿನ ಗೊಡವೆಯೇ ಬೇಕಿಲ್ಲ. ದಾಪುಗಾಲಿಡುತ್ತ ಪ್ರಗತಿ ಪಥಗಳಲ್ಲಿ ಸ್ಪರ್ಧೆಗಿಳಿದ ಬೇರೆ ನಗರಗಳೊಂದಿಗೆ ಧಾರವಾಡವನ್ನು ತುಲನೆ ಮಾಡಿದಾಗ ನಮ್ಮೂರು ಯಾವಾಗಲೂ ಬಹಳ ಹಿಂದೆ ಹಿಂದೆಯೇ. ಕಾಲಕ್ಕೆ ತಕ್ಕಂತೆ ಕುಣಿಯಲೇಬೇಕಲ್ಲ? ಈಗ ಪ್ರಗತಿಯತ್ತ ಹೆಜ್ಜೆ ಹಾಕಲೇಬೇಕಲ್ಲ?

*ಲೇಖಕರು ಹುಟ್ಟಿದ್ದು ಕೊಲ್ಲಾಪುರ; ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಮಾಡಿ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು.

Leave a Reply

Your email address will not be published.