ಇನ್ನೊಂದು ತಬರನ ಪ್ರಸಂಗ

ಇದು ಹಿರಿಯ ಪತ್ರಕರ್ತರೊಬ್ಬರ ಸ್ವಾನುಭವದ ವರದಿ!

ಕಳೆದ ಒಂದೂವರೆ ವರ್ಷದಿಂದ ಕಂದಾಯ ಇಲಾಖೆಯ ಕಚೇರಿಗಳಿಗೆ ಅಲೆಯುತ್ತಿರುವ ನಾನು ನನ್ನ ಅನುಭವಗಳನ್ನು ಈ ಲೇಖನದಲ್ಲಿ ಹಂಚಿಕೊಂಡಿದ್ದೇನೆ. ಇದು ನಿಮ್ಮೆಲ್ಲರ ಅನುಭವವೂ ಆಗಿರಲು ಸಾಧ್ಯ!

– ಪ್ರೇಮಕುಮಾರ್ ಹರಿಯಬ್ಬೆ

ಭೂ ದಾಖಲೆಗಳಲ್ಲಿನ ಲೋಪಗಳನ್ನು ಸರಿಪಡಿಸಿಕೊಡಲು ವಿಳಂಬ ಮಾಡಿದರೆಂದು ಕೋಪಗೊಂಡ ವ್ಯಕ್ತಿಯೊಬ್ಬ ತಹಸೀಲ್ದಾರರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ. ತಹಸೀಲ್ದಾರರನ್ನು ರಕ್ಷಿಸಲು ಹೋದ ಅವರ ಕಾರು ಚಾಲಕನೂ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾನೆ. ಬೆಂಕಿ ಹಚ್ಚಿದ ವ್ಯಕ್ತಿಗೂ ಸುಟ್ಟ ಗಾಯಗಳಾಗಿವೆ. ಈ ಪ್ರಕರಣ ವ್ಯಕ್ತಿಯೊಬ್ಬನ ದುಡುಕಿನ ವರ್ತನೆ ಎಂದು ತಳ್ಳಿ ಹಾಕುವಂತಿಲ್ಲ. ಪ್ರಾಣ ಕಳೆದುಕೊಂಡ ತಹಸೀಲ್ದಾರ್ ವಿಜಯಾ ರೆಡ್ಡಿ ಅವರು ಮಾಡಿದ ತಪ್ಪಾದರೂ ಏನು? ವಿಳಂಬಕ್ಕೆ ಅವರೊಬ್ಬರೇ ಹೊಣೆಯೇ? ಬೇರೆ ಕಾರಣಗಳಿದ್ದುವೇ? ಅವರು ಬಲಿ ಪಶು ಆದರೇ? ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ.

ಇದು ತೆಲಂಗಾಣ ರಾಜ್ಯದಲ್ಲಿ ನಡೆದ ಘಟನೆ. ನಮ್ಮ ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಇಲ್ಲ ಎಂದು ಯಾರೂ ಭಾವಿಸಬಾರದು. ಯಾರಾದರೂ ಹಾಗೆ ಹೇಳಿದರೆ ಅವರಿಗೆ ನಮ್ಮ ಸರ್ಕಾರಿ ಕಚೇರಿಗಳ ಪರಿಚಯ ಇಲ್ಲ ಎಂದೇ ಹೇಳಬೇಕಾದೀತು. ನಮ್ಮ ರಾಜ್ಯದಲ್ಲೂ ಸಣ್ಣ ಪುಟ್ಟ ಕೆಲಸಗಳಿಗಾಗಿ ಜನರು ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆದಾಡುವಂತಹ ಪರಿಸ್ಥಿತಿ ಇದೆ. ಲಂಚ ಕೊಡದೆ ಕೆಲಸ ಆಗುವುದಿಲ್ಲ. ಲಂಚ ಕೊಟ್ಟರೂ ಅಲೆದಾಟ ತಪ್ಪಿದ್ದಲ್ಲ ಎನ್ನುವುದು ಲಕ್ಷಾಂತರ ಜನರ ಅನುಭವಕ್ಕೆ ಬಂದಿದೆ.

ರಾಜಕೀಯ ಪ್ರಭಾವ ಮತ್ತು ಹಣ ಇದ್ದವರು ಹಾಗೂ ಪತ್ರಿಕೆ, ಟಿವಿ ಅವರಿಗೆ ಹೇಳುತ್ತೇವೆ ಎಂದು ದಬಾಯಿಸುವವರ ಕೆಲಸಗಳು ಸಲೀಸಾಗಿ ಆಗಿಬಿಡುತ್ತವೆ. ಹಣ, ರಾಜಕೀಯ ಬೆಂಬಲ ಇಲ್ಲದವರು, ಏನು ಮಾಡಬೇಕು ಎನ್ನುವುದು ಗೊತ್ತಾಗದ ಬಡವರು ಮತ್ತು ನಿರಕ್ಷರಿಗಳ ಪಾಡು ಹೇಳತೀರದು. ಕೆಲವು ಕಚೇರಿಗಳಲ್ಲಿ ಕೆಳ ಹಂತದ ನೌಕರರು ಸ್ವಲ್ಪಮಟ್ಟಿಗೆ ಉದಾರ ಮನಸ್ಸಿನವರಾಗಿರುತ್ತಾರೆ. ಸಣ್ಣ ಮೊತ್ತದ ಹಣ ಸಿಕ್ಕರೆ ಸಾಕು ಎಂಬ ಮನಸ್ಥಿತಿ ಬೆಳೆಸಿಕೊಂಡಿರುತ್ತಾರೆ. ಆದರೆ ಅಂಥ ಕಡೆ ಅಧಿಕಾರಿಗಳು ಜಾತಿಯ ಅಹಂಕಾರ ಬೆಳೆಸಿಕೊಂಡಿರುತ್ತಾರೆ. ಕೆಲವರು ರಾಜಕಾರಣಿಗಳ ಕೆಲಸ ಮಾಡಿಕೊಟ್ಟು ಅವರ ವಿಶ್ವಾಸಗಳಿಸಿ ಜನ ಸಾಮಾನ್ಯರ ಬಗ್ಗೆ ಅಸಡ್ಡೆಯ ಮನೋಭಾವ ಬೆಳೆಸಿಕೊಂಡಿರುತ್ತಾರೆ. ಇನ್ನು ಕೆಲವರು ಜನರ ಕೆಲಸ ಮಾಡೋಣ ಎಂಬ ಮನಸ್ಥಿತಿಯಲ್ಲಿದ್ದರೂ ಕೆಟ್ಟ ವ್ಯವಸ್ಥೆಯಿಂದಾಗಿ ಅಸಹಾಯಕರಾಗಿ ಉಳಿದುಬಿಡುತ್ತಾರೆ.

ಮಧ್ಯವರ್ತಿಗಳು ಮತ್ತು ರಾಜಕಾರಣಿಗಳು ಅಧಿಕಾರಿಗಳ ಬೆಂಬಲದಿಂದ ಸರ್ಕಾರಿ ಭೂಮಿ ಕಬಳಿಸಿದ, ಅಧಿಕಾರಿಗಳೇ ಸರ್ವರ್‍ಗಳನ್ನು ಹ್ಯಾಕ್‍ಮಾಡಿ ನಿವೇಶನಗಳನ್ನು ಮಾರಾಟ ಮಾಡಿದ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಂಡ, ವರ್ಗಾವಣೆ ಮಾಡಿಸಿಕೊಂಡ, ಸರ್ಕಾರದ ಹಣವನ್ನು ಸ್ವಂತ ಬ್ಯಾಂಕ್‍ಖಾತೆಗಳಲ್ಲಿ ಇರಿಸಿಕೊಂಡ ಹತ್ತಾರು ಬಗೆಯ ಅವ್ಯವಹಾರಗಳು ಈಗ ಎಗ್ಗಿಲ್ಲದೆ ನಡೆಯುತ್ತಿವೆ. ಆಗಾಗ ಅವು ಬೆಳಕಿಗೂ ಬರುತ್ತವೆ. ಇಂತಹ ಪ್ರಕರಣಗಳ ವಿಚಾರಣೆ ನಡೆದರೂ ಯಾರ ತಪ್ಪೂ ಸಾಬೀತಾಗುವುದಿಲ್ಲ, ಶಿಕ್ಷೆಯೂ ಆಗುವುದಿಲ್ಲ. ನಮ್ಮ ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ಇಂಥ ಪರಿಸ್ಥಿತಿ ಇದೆ. ಅಲ್ಲೊಂದು ಇಲ್ಲೊಂದು ಅಪವಾದ ಇರಬಹುದು.

ಕಳೆದ ಒಂದೂವರೆ ವರ್ಷದಿಂದ ನಾನು ಕಂದಾಯ ಇಲಾಖೆಯ ಕಚೇರಿಗಳಿಗೆ ಅಲೆಯುತ್ತಿದ್ದೇನೆ. ನನ್ನ ಅನುಭವಗಳನ್ನು ಈ ಲೇಖನದಲ್ಲಿ ಓದುಗರೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ.

ಬ್ರಿಟಿಷರ ಆಡಳಿತ ಕಾಲದಲ್ಲಿ ನನ್ನ ಹಿರಿಯರು ಖರೀದಿಸಿದ್ದ ಭೂಮಿ. ನನ್ನ ಒಬ್ಬ ದೊಡ್ಡಪ್ಪನವರ ಪಾಲಿಗೆ ಬಂದ 38 ಗುಂಟೆ ಭೂಮಿಯೊಂದಿಗೆ ನಮ್ಮ ಭೂಮಿ ಜಂಟಿ ಖಾತೆಯಲ್ಲಿದೆ.

ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಧರ್ಮಪುರ ಅಮಾನಿತಲಾವ್ ಗ್ರಾಮದಲ್ಲಿ ನನ್ನ ಕುಟುಂಬಕ್ಕೆ ಪಿತ್ರಾರ್ಜಿತವಾಗಿ ಬಂದ 1.03 ಎಕರೆ ಭೂಮಿ ಇದೆ. ಇದು ಕೆರೆ ಆಶ್ರಯದ ಫಲವತ್ತಾದ ಭೂಮಿ. ಬ್ರಿಟಿಷರ ಆಡಳಿತ ಕಾಲದಲ್ಲಿ ನನ್ನ ಹಿರಿಯರು ಖರೀದಿಸಿದ್ದ ಭೂಮಿ. ನನ್ನ ಒಬ್ಬ ದೊಡ್ಡಪ್ಪನವರ ಪಾಲಿಗೆ ಬಂದ 38 ಗುಂಟೆ ಭೂಮಿಯೊಂದಿಗೆ ನಮ್ಮ ಭೂಮಿ ಜಂಟಿ ಖಾತೆಯಲ್ಲಿದೆ. ನನ್ನ ತಂದೆ ಮತ್ತು ದೊಡ್ಡಪ್ಪ ಮೃತರಾಗಿದ್ದರಿಂದ 1982ರವರೆಗೆ ಪಹಣಿಯಲ್ಲಿ ನಮ್ಮ ದೊಡ್ಡಮ್ಮನ ಹೆಸರಿತ್ತು. ನಂತರದ ವರ್ಷಗಳಲ್ಲಿ ಪಹಣಿಯಲ್ಲಿ ನನ್ನ ತಂದೆಯವರ ಹೆಸರು ಬಿಟ್ಟು ಹೋಯಿತು.

1982ರ ನಂತರ ಕೆರೆಗೆ ನೀರು ಬಾರದೆ ಭೂಮಿ ಬೀಳು ಬಿದ್ದಿದೆ. ಅದರಲ್ಲಿ ನಲವತ್ತು ವರ್ಷಗಳ ಜಾಲಿ ಬೆಳೆದಿದೆ. ಪಹಣಿಯಲ್ಲಿ ನನ್ನ ತಂದೆಯವರ ಹೆಸರು ಬಿಟ್ಟುಹೋಗಿರುವುದರ ದುರ್ಲಾಭ ಪಡೆದು ನನ್ನ ದೊಡ್ಡಮ್ಮನ ಮಗಳೊಬ್ಬಳು ಎರಡೂ ಎಕರೆ ಭೂಮಿ ತನ್ನದೆಂದು ಹಿರಿಯೂರು ತಹಸೀಲ್ದಾರ್‍ಗೆ ಅರ್ಜಿ ಸಲ್ಲಿಸಿ ಪವತಿ ಖಾತೆ ಮಾಡಿಸಿಕೊಂಡು ಮಾರಾಟ ಮಾಡಿದ್ದಾರೆ.

1982ರಲ್ಲಿ ಪಹಣಿ ಬರೆಯುವ ಕಂದಾಯ ಇಲಾಖೆಯ ನೌಕರನೊಬ್ಬ ಮಾಡಿದ ತಪ್ಪಿನಿಂದ ಮತ್ತು ಹಿರಿಯೂರು ತಹಸೀಲ್ದಾರ್ ಕಚೇರಿ ಮತ್ತು ಧರ್ಮಪುರ ನಾಡ ಕಚೇರಿಗಳ ಕೆಲ ಕಂದಾಯ ನೌಕರರು ಶಾಮೀಲಾಗಿದ್ದರಿಂದ ನನ್ನ ಭೂಮಿ ಕಬಳಿಕೆ ಆಗಿದೆ. ಪವತಿ ಖಾತೆಗೆ ಅರ್ಜಿ ಹಾಕಿದವರಿಗೆ ಎರಡು ಎಕರೆ ಭೂಮಿಯ ಹಕ್ಕು ಇದೆಯೇ. ಹಕ್ಕು ಯಾರಿಂದ, ಯಾವಾಗ ಬಂತು ಎಂಬುದನ್ನು ಪರಿಶೀಲಿಸುವ ಕನಿಷ್ಠ ಪ್ರಯತ್ನವನ್ನೂ ಕಂದಾಯ ಇಲಾಖೆ ಸಿಬ್ಬಂದಿ ಮಾಡಿಲ್ಲ. ಖಾತೆ ಮಾಡಿಕೊಡುವ ಮುನ್ನ ಸ್ಥಳ ಪರಿಶೀಲನೆ ಮಾಡಿದ ಗ್ರಾಮ ಲೆಕ್ಕಾಧಿಕಾರಿ ಮತ್ತು ರೆವಿನ್ಯೂ ಇನ್ಸ್‍ಪೆಕ್ಟರ್ ಈ ಭೂಮಿಯಲ್ಲಿ ಸಾಗುವಳಿ ನಡೆಯುತ್ತಿದೆ ಎಂದು ಮಹಜರು ಮಾಡಿ ಷರಾ ಬರೆದಿದ್ದಾರೆ! ಭೂ ನೋಂದಣಿ ಮಾಡಿಕೊಟ್ಟ ಸಬ್‍ರಿಜಿಸ್ಟ್ರಾರ್‍ಸಹ ಭೂಮಿ ಹಕ್ಕು ದೃಢಪಡಿಸುವ ದಾಖಲೆಗಳನ್ನು ನೋಡಿಲ್ಲ.

ಸಾಮಾನ್ಯವಾಗಿ ಎಲ್ಲ ಭೂ ತಕರಾರುಗಳು ಆರಂಭವಾಗುವುದು ಕಂದಾಯ ಇಲಾಖೆ ನೌಕರರ ಕುಮ್ಮಕ್ಕಿನಿಂದ. ತಕರಾರು ನ್ಯಾಯಾಲಯಗಳ ಮುಂದೆ ಹೋದಾಗ ಈ ನೌಕರರ ತಪ್ಪು ಬೆಳಕಿಗೆ ಬಂದರೂ ಅವರಿಗೆ ಶಿಕ್ಷೆ ಆಗುವುದಿಲ್ಲ.

2ನೇ ಹಿಯರಿಂಗ್‍ನಲ್ಲೇ ತಹಸೀಲ್ದಾರ್ ಅವರು ಭೂ ನೋಂದಣಿ ರದ್ದು ಮಾಡುವ ಅಧಿಕಾರ ತಮಗಿಲ್ಲ. ನೀವು ಸಿವಿಲ್‍ಕೋರ್ಟ್‍ಗೆ ಹೋಗಿ ಈ ವಿವಾದ ಬಗೆಹರಿಸಿಕೊಳ್ಳಿ. ದಾವೆ ಹೂಡಿದ ಮೇಲೆ ಈ ಕೋರ್ಟಿಗೆ ಮಾಹಿತಿ ನೀಡುವಂತೆ ಸೂಚಿಸಿದರು. ಆದರೆ ಅವರು ನನ್ನ ಬಳಿ ಇರುವ ದಾಖಲೆಗಳನ್ನು ನೋಡಲು ನಿರಾಕರಿಸಿದರು.

ನನ್ನ ಭೂಮಿಯನ್ನು ಮಾರಾಟ ಮಾಡಿ ರಿಜಿಸ್ಟರ್ ಮಾಡಿಕೊಟ್ಟದ್ದು ಮೂರ್ನಾಲ್ಕು ದಿನಗಳಲ್ಲಿ ನನಗೆ ಗೊತ್ತಾಯಿತು. ನಮ್ಮ ಮನೆತನದ ಆಸ್ತಿಗಳ ರಿಜಿಸ್ಟರ್ ಆದ ಪಾಲುಪತ್ರ ಮತ್ತು 1982ರವರೆಗಿನ ಪಹಣಿ ಇತ್ಯಾದಿ ದಾಖಲೆಗಳನ್ನು ಇಟ್ಟುಕೊಂಡು 2018ರ ಮಾರ್ಚ್20ರಂದು ನಾನು ಹಿರಿಯೂರು ತಹಸೀಲ್ದಾರ್ ಅವರಿಗೆ ತಕರಾರು ಅರ್ಜಿ ಸಲ್ಲಿಸಿದೆ. ತಹಸೀಲ್ದಾರ್ ಕೋರ್ಟಿನಲ್ಲಿ ಅರ್ಜಿಯ ವಿಚಾರಣೆ ನಡೆಯಿತು. 2ನೇ ಹಿಯರಿಂಗ್‍ನಲ್ಲೇ ತಹಸೀಲ್ದಾರ್ ಅವರು ಭೂ ನೋಂದಣಿ ರದ್ದು ಮಾಡುವ ಅಧಿಕಾರ ತಮಗಿಲ್ಲ. ನೀವು ಸಿವಿಲ್‍ಕೋರ್ಟ್‍ಗೆ ಹೋಗಿ ಈ ವಿವಾದ ಬಗೆಹರಿಸಿಕೊಳ್ಳಿ. ದಾವೆ ಹೂಡಿದ ಮೇಲೆ ಈ ಕೋರ್ಟಿಗೆ ಮಾಹಿತಿ ನೀಡುವಂತೆ ಸೂಚಿಸಿದರು. ಆದರೆ ಅವರು ನನ್ನ ಬಳಿ ಇರುವ ದಾಖಲೆಗಳನ್ನು ನೋಡಲು ನಿರಾಕರಿಸಿದರು.

2019ರ ಮೇ ತಿಂಗಳಲ್ಲಿ ಹಿರಿಯೂರು ಸಿವಿಲ್ ಕೋರ್ಟಿನಲ್ಲಿ ನಾನು ದಾವೆ ಹೂಡಿದೆ. ಸಿವಿಲ್ ಕೋರ್ಟಿನ ತೀರ್ಪು ಬರುವವರೆಗೆ ಭೂಮಿ ಖರೀದಿಸಿರುವ ವ್ಯಕ್ತಿಗೆ ಖಾತೆ ಮಾಡಿಕೊಡದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ಮಾಡುವಂತೆ ತಹಸೀಲ್ದಾರ್ ಕೋರ್ಟಿನಲ್ಲಿ ಮನವಿ ಮಾಡಿಕೊಂಡೆ. ಆದರೆ ತಹಸೀಲ್ದಾರ್ ಅವರು ಆನಂತರವೂ ನನ್ನ ಪ್ರಕರಣವನ್ನು ಮುಕ್ತಾಯಗೊಳಿಸಲಿಲ್ಲ.

ಈ ಮಧ್ಯೆ ಸರ್ಕಾರ ಬದಲಾಯಿತು. ತಹಸೀಲ್ದಾರ್ ವರ್ಗಾವಣೆ ಆಯಿತು. ಅವರ ಜಾಗಕ್ಕೆ ಬಂದ ಹೊಸ ತಹಸೀಲ್ದಾರ್ 2019ರ ಸೆಪ್ಟಂಬರ್ 24ರಂದು ವಿಚಾರಣೆಗೆ ಕರೆದರು. ನನ್ನ ಬಳಿ ಇರುವ ದಾಖಲೆಗಳನ್ನು ನೋಡುವಂತೆ ಅವರಲ್ಲಿಯೂ ವಿನಂತಿಸಿಕೊಂಡೆ. ಈ ಪ್ರಕರಣ ಸಿವಿಲ್ ನ್ಯಾಯಾಲಯದ ಮುಂದಿದೆ. ವಿವಾದದಲ್ಲಿರುವ ಭೂಮಿಯನ್ನು ಖರೀದಿಸಿರುವ ವ್ಯಕ್ತಿಗೆ ಖಾತೆ ಮಾಡಿಕೊಡದಂತೆ ವಾದಿಸಿದೆ. ಆದರೆ ತಹಸೀಲ್ದಾರ್ ಖಾತೆ ಮಾಡಿಕೊಡುವ ನಿರ್ಧಾರವನ್ನು ಪ್ರಕಟಿಸಿಯೇ ಬಿಟ್ಟರು! ಅಕ್ಟೋಬರ್ 11ರಂದು ಲಿಖಿತ ಆದೇಶವನ್ನೂ ಹೊರಡಿಸಿದರು.

ಒಂದು ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಅದರ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ತಹಸೀಲ್ದಾರ್‍ಗೆ ಇಲ್ಲ. ಇಲ್ಲದ ಅಧಿಕಾರವನ್ನು ಅವರು ಚಲಾಯಿಸಿದ್ದರು! ಈ ಇಬ್ಬರು ತಹಸೀಲ್ದಾರ್‍ಗಳು ದಾಖಲೆಗಳನ್ನು ನೋಡಲು ಯಾಕೆ ಹಿಂಜರಿದರು ಎಂಬುದಕ್ಕೆ ಕಾರಣ ಊಹಿಸಬಲ್ಲೆ. ಆದರೆ ಅದನ್ನು ಬಹಿರಂಗವಾಗಿ ಹೇಳಲಾರೆ. ಏಕೆಂದರೆ ಅದಕ್ಕೆ ನನ್ನ ಬಳಿ ಪುರಾವೆಗಳಿಲ್ಲ!

ಈ ಮೂರು ವಿಚಾರಣೆಗಳ ಅಗತ್ಯವೇ ಇರಲಿಲ್ಲ. ಆದರೂ ವಿಚಾರಣೆ ನಡೆಸಿದ್ದಾದರೂ ಏಕೆ? ಈ ಪ್ರಶ್ನೆಗಳಿಗೆ ಉತ್ತರ ಯಾರು ಹೇಳುತ್ತಾರೆ?

ಹದಿನೆಂಟು ತಿಂಗಳ ಅವಧಿಯಲ್ಲಿ ಆರು ಸಲ ನನ್ನನ್ನು ವಿಚಾರಣೆಗೆ ಕರೆದರು. ನಾಲ್ಕು ಸಲ ನಾನು ಬೆಂಗಳೂರಿನಿಂದ ಹಿರಿಯೂರಿಗೆ ಹೋಗಿ ಹಾಜರಾದೆ. ಇನ್ನೆರಡು ಸಲ ನನ್ನ ವಕೀಲರು ಹಾಜರಾದರು. ಸಿವಿಲ್ ಕೋರ್ಟಿಗೆ ಹೋದ ಮೇಲೂ ಮೂರು ಸಲ ಮೂಲ ಅರ್ಜಿಯ ವಿಚಾರಣೆ ನಡೆಯಿತು. ಈ ಮೂರು ವಿಚಾರಣೆಗಳ ಅಗತ್ಯವೇ ಇರಲಿಲ್ಲ. ಆದರೂ ವಿಚಾರಣೆ ನಡೆಸಿದ್ದಾದರೂ ಏಕೆ? ಈ ಪ್ರಶ್ನೆಗಳಿಗೆ ಉತ್ತರ ಯಾರು ಹೇಳುತ್ತಾರೆ? ಹದಿನೆಂಟು ತಿಂಗಳು ನನಗೆ ಬೇಕಾದ ದಾಖಲೆಗಳಿಗಾಗಿ, ವಿಚಾರಣೆಗಾಗಿ ಅಲೆದು ಬೇಸತ್ತಿದ್ದ ನಾನು ಕೊನೆಯ ಪ್ರಯತ್ನವೆಂದು ಚಿತ್ರದುರ್ಗದ ಅಸಿಸ್ಟೆಂಟ್ ಕಮೀಷನರ್ ಅವರಿಗೆ ಮೇಲ್ಮನವಿ ಸಲ್ಲಿಸಿದೆ. ಅವರನ್ನು ಖುದ್ದು ಭೇಟಿಯಾದೆ. ಸಿವಿಲ್ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿರುವಾಗ ತಹಸೀಲ್ದಾರ್ ಆದೇಶ ಮಾಡಿದ್ದಾರೆ. ಹಾಗೆ ಮಾಡುವ ಅಧಿಕಾರ ಅವರಿಗೆ ಇಲ್ಲ. ನನ್ನಲ್ಲಿರುವ ದಾಖಲೆಗಳನ್ನು ನೋಡಿ ನೀವೇ ತೀರ್ಮಾನಿಸಿ ಎಂದು ಮನವಿ ಮಾಡಿಕೊಂಡೆ. ಅವರಿಗೆ ನನ್ನ ಪರಿಸ್ಥಿತಿ ಅರ್ಥವಾಯಿತು. ತಹಸೀಲ್ದಾರ್ ಆದೇಶಕ್ಕೆ ತಡೆಯಾಜ್ಞೆ ನೀಡಿದರು. ಈಗ ಚೆಂಡು ಅವರ ಕೋರ್ಟಿನ ಅಂಗಳದಲ್ಲಿದೆ.

ಮೂವತ್ತೆಂಟು ವರ್ಷಗಳ ಕಾಲ ಪತ್ರಕರ್ತನಾಗಿ ಕೆಲಸ ಮಾಡಿದ ಅನುಭವ ನನ್ನದು. ಇಬ್ಬರು ತಹಸೀಲ್ದಾರ್‍ಗಳ ಎದುರು ನಿಂತು ನಾನು ಪತ್ರಕರ್ತ ನನ್ನ ಕೆಲಸ ಮಾಡಿ ಕೊಡಿ ಎಂದು ಕೇಳಲಿಲ್ಲ. ಹದಿನೆಂಟು ತಿಂಗಳ ಅವಧಿಯಲ್ಲಿ ಹಿರಿಯೂರು ತಾಲ್ಲೂಕು ಕಚೇರಿ ಮತ್ತು ಧರ್ಮಪುರ ನಾಡ ಕಚೇರಿಗಳಿಗೆ ಹಲವು ಸಲ ಎಡತಾಕಿದ್ದೇನೆ. ಅಧಿಕಾರಿಗಳ, ನೌಕರರ ಭಾಷೆ ಮತ್ತು ನಡವಳಿಕೆ ಅರ್ಥ ಆಗದೆ ಪೇಚಾಡಿದ್ದೇನೆ. ಮನಸ್ಸಿಗೆ ಕಿರಿಕಿರಿ ಆಗಿದೆ.

ಈ ಅಲೆದಾಟಗಳ ಸಂದರ್ಭದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ತಬರ ನೆನಪಾಗಿದ್ದಾನೆ. ಒಂದು ರೀತಿಯಲ್ಲಿ ನಾನೂ ತಬರನೇ ಆದೆ. ನನ್ನಂತಹ ಲಕ್ಷಾಂತರ ತಬರರು ನಿತ್ಯ ಸರ್ಕಾರಿಗಳಿಗೆ ಅಲೆಯುವುದು ಈಗಲೂ ನೆನಪಾಗುತ್ತದೆ. ಅಂಥವರಲ್ಲಿ ಒಬ್ಬಿಬ್ಬರು ಹತಾಶರಾಗಿ ಮನಸ್ಸಿನ ಸ್ಥಿಮಿತ ಕಳೆದುಕೊಂಡರೆ ಏನಾಗಬಹುದು?

ರಾಜಕೀಯ ಪ್ರಭಾವ ಮತ್ತು ಹಣ ಇದ್ದವರು ಹಾಗೂ ಪತ್ರಿಕೆ, ಟಿವಿ ಅವರಿಗೆ ಹೇಳುತ್ತೇವೆ ಎಂದು ದಬಾಯಿಸುವವರ ಕೆಲಸಗಳು ಸಲೀಸಾಗಿ ಆಗಿಬಿಡುತ್ತವೆ.

One Response to " ಇನ್ನೊಂದು ತಬರನ ಪ್ರಸಂಗ

- ಪ್ರೇಮಕುಮಾರ್ ಹರಿಯಬ್ಬೆ

"

Leave a Reply

Your email address will not be published.