ಇರಾನ್ ಬುಡಕ್ಕೆ ಯುದ್ಧದ ಕೊಳ್ಳಿಯಿಟ್ಟ ಅಮೆರಿಕಾ

ಅಮೆರಿಕದ ರಿಪಬ್ಲಿಕನ್ ಪಕ್ಷದಿಂದ ಆಯ್ಕೆಯಾದ ಅಧ್ಯಕ್ಷರಿಗೆ ಯಾವುದಾದರೊಂದು ಯುದ್ಧವನ್ನು ಪ್ರಾರಂಭ ಮಾಡದಿದ್ದರೆ ಊಟ-ನಿದ್ರೆ ಬರದೆಂದು ಕಾಣಿಸುತ್ತದೆ.

ಜಾರ್ಜ್ ಬುಷ್ ಇರಾಖ್ ಮತ್ತು ಆಫ್ಘಾನಿಸ್ತಾನ ಯುದ್ಧಗಳನ್ನು ಪ್ರಾರಂಭ ಮಾಡಿದ್ದರೆ ಇದೀಗ ಡಾನಲ್ಡ್ ಟ್ರಂಪ್ ಇರಾನ್ ಯುದ್ಧವನ್ನು ಪ್ರಾರಂಭಿಸುವ ಹವಣಿಕೆಯಲ್ಲಿದ್ದಾರೆ. ಯುದ್ಧವನ್ನು ಶುರುಮಾಡುವುದೇನೋ ಸುಲಭವಿದ್ದೀತು. ಆದರೆ ಯುದ್ಧಗಳನ್ನು ಅಂತ್ಯಗೊಳಿಸುವುದು ಕಷ್ಟ. ಇರಾಖ್ ಯುದ್ಧವಿನ್ನೂ ಮುಗಿದಂತೆ ಕಾಣುತ್ತಿಲ್ಲ. ಇಸ್ಲಾಮಿಕ್ ಸ್ಟೇಟ್ ಮತ್ತು ಸಿರಿಯಾ ಕಲಹಗಳು ಇನ್ನೂ ಹೊಗೆಯಾಡುತ್ತಲೇ ಇವೆ. ಈಗಲೂ ತಾಲಿಬಾನ್ ಆಫ್ಘಾನಿಸ್ತಾನದ ಅರ್ಧದಷ್ಟನ್ನು ತನ್ನ ವಶದಲ್ಲಿಯೇ ಇರಿಸಿಕೊಂಡಿದೆ. ಲಿಬ್ಯಾದಲ್ಲಿ ಗಡಾಫಿಯನ್ನು ಪದಚ್ಯುತಿ ಮಾಡಿದ ದಿನದಿಂದ ಇಲ್ಲಿಯವರೆಗೂ ಆಂತರಿಕ ಯುದ್ಧ ನಿಂತಿಲ್ಲ. ಸೌದಿ ಅರೇಬಿಯಾ-ಯೆಮೆನ್ ಯುದ್ಧವೂ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಸೂಡಾನ್ ಇನ್ನೂ ಬೆಂಕಿ ಉಗುಳುತ್ತಲೇ ಇದೆ. ಇಸ್ರೇಲ್ ಇಂದಿಗೂ ತನ್ನ ಸುತ್ತ ಯಾರಾದರೊಬ್ಬರನ್ನು ಕೆಣಕುತ್ತಲೇ ಇರುತ್ತಿದೆ. ಇಡೀ ಮಧ್ಯಪ್ರಾಚ್ಯದಲ್ಲಿ ಶಾಂತಿಯೆಂಬುದು ಮರೀಚಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಈಗ ಮತ್ತೊಂದು ಯುದ್ಧ ಬೇಕೆಂದು ಹೊರಟವರಿಗೆ ಏನು ಹೇಳುವುದು..?

ಅಮೆರಿಕ ಮತ್ತು ಇರಾನ್ ಕಲಹಕ್ಕೆ ನಲವತ್ತು ವರ್ಷಗಳ ಇತಿಹಾಸವಿದೆ. 1979 ರಲ್ಲಿ ಅಮೆರಿಕ ಬೆಂಬಲಿತ ಶಾಹ್‍ರವರನ್ನು ಇಸ್ಲಾಮಿಕ್ ಉಗ್ರರು ಪದಚ್ಯುತಗೊಳಿಸಿದ್ದರು. ನಂತರ ಬಂದ ಖೊಮೇನಿ ಹಾಗೂ ರಫ್‍ಸಂಜಾನಿ ಆಡಳಿತಗಳು ತೀವ್ರತಮ ಅಮೆರಿಕ ವಿರೋಧಿ ಚಳವಳಿ ನಡೆಸಿದ್ದವು. ಇರಾನ್‍ನ ಮಿಲಿಟರಿಯು ಅಮೆರಿಕ ಬೆಂಬಲಿತ ಸೌದಿ ಅರೇಬಿಯಾ ಹಾಗೂ ಇಸ್ರೇಲ್ ದೇಶಗಳಿಗೆ ಸವಾಲಾಗಿಯೇ ಬೆಳೆದು ನಿಂತಿತ್ತು.

ಈ ಮಧ್ಯೆ ಇರಾನ್ ತನ್ನ ಶಾಂತಿಯುತ ಅಣುವಿದ್ಯುತ್ ಕಾರ್ಯಕ್ರಮಕ್ಕೆ ನಾಂದಿ ಹಾಡಿತ್ತು. ಈ ಕಾರ್ಯಕ್ರಮ ಯಾವಾಗಲಾದರೂ ಕೂಡಾ ಅಣ್ವಸ್ತ್ರ ಕಾರ್ಯಕ್ರಮವಾಗಿ ಬದಲಾಗಬಹುದು ಎಂದು ಬೆದರಿದ ಅಮೆರಿಕ ಇರಾನ್‍ನ ಮೇಲೆ ವಾಣಿಜ್ಯ ನಿರ್ಭಂಧ ಹೇರಿತ್ತು. ಈ ನಿರ್ಭಂಧದಿಂದ ಸೊರಗಿದ ಇರಾನ್ ಕಡೆಗೂ ಚರ್ಚಾಮೇಜಿಗೆ ಇಳಿದು ಬಂದಿತ್ತು. 2013ರಲ್ಲಿ ಇರಾನ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮೃದುಧೋರಣೆಯ ಹಸನ್ ರೂಹಾನಿಯವರು ಇದಕ್ಕೆ ಮತ್ತಷ್ಟು ಇಂಬು ನೀಡಿದ್ದರು. ಜುಲೈ 2015ರಲ್ಲಿ ‘ಜಂಟಿ ಸಮಗ್ರ ಕಾರ್ಯಯೋಜನೆ’ಯ ಅಡಿಯಲ್ಲಿ ಇರಾನ್ ತನ್ನ ಅಣುವಿದ್ಯುತ್ ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಪರಿಶೀಲನೆಗೆ ಒಳಪಡಿಸಿ ಹಲವಾರು ನಿರ್ಭಂಧಗಳಿಗೆ ಒಪ್ಪಿತ್ತು. ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಓಬಾಮಾರವರ ನೇತೃತ್ವದಲ್ಲಿ ನಡೆದ ಈ ಶಾಂತಿಪ್ರಕ್ರಿಯೆಯನ್ನು ಎಲ್ಲರೂ ಕೊಂಡಾಡಿದ್ದರು.

ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕಾದ ಪ್ರಭಾವ ಕಡಿಮೆ ಮಾಡುತ್ತಿದೆಯೆಂದೋ ಅಥವಾ ಸೌದಿ-ಇಸ್ರೇಲ್ ಓಲೈಸಲೋ ಟ್ರಂಪ್ ಇರಾನ್ ಅಣು ಒಪ್ಪಂದವನ್ನು ಮುರಿಯುವ ನಿರ್ಧಾರಕ್ಕೆ ಬಂದರು. 2108ರ ಮೇನಲ್ಲಿಯೇ ಟ್ರಂಪ್ ಇರಾನ್‍ನೊಂದಿಗಿನ ಅಣು ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿದಿದ್ದರು. ಆದರೆ ಉಳಿದ ರಾಷ್ಟ್ರಗಳಾದ ಇಂಗ್ಲೆಂಡ್, ಫ್ರಾನ್ಸ್, ರಷ್ಯಾ, ಜರ್ಮನಿ ಮತ್ತು ಚೀನಾಗಳು ಹಿಂದೆ ಸರಿಯಲಿಲ್ಲ.

ಆದರೆ 2018 ರಲ್ಲಿ ಅಧಿಕಾರಕ್ಕೆ ಬಂದ ಡಾನಲ್ಡ್ ಟ್ರಂಪ್ ತಮ್ಮ ಚುನಾವಣೆಯುದ್ದಕ್ಕೂ ಇರಾನ್ ಅಣು ಒಪ್ಪಂದವನ್ನು ವಿರೋಧಿಸುತ್ತಲೇ ಬಂದಿದ್ದರು. ಇದು ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕಾದ ಪ್ರಭಾವ ಕಡಿಮೆ ಮಾಡುತ್ತಿದೆಯೆಂದೋ ಅಥವಾ ಸೌದಿ-ಇಸ್ರೇಲ್ ಓಲೈಸಲೋ ಟ್ರಂಪ್ ಇರಾನ್ ಅಣು ಒಪ್ಪಂದವನ್ನು ಮುರಿಯುವ ನಿರ್ಧಾರಕ್ಕೆ ಬಂದರು. 2108ರ ಮೇನಲ್ಲಿಯೇ ಟ್ರಂಪ್ ಇರಾನ್‍ನೊಂದಿಗಿನ ಅಣು ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿದಿದ್ದರು. ಆದರೆ ಉಳಿದ ರಾಷ್ಟ್ರಗಳಾದ ಇಂಗ್ಲೆಂಡ್, ಫ್ರಾನ್ಸ್, ರಷ್ಯಾ, ಜರ್ಮನಿ ಮತ್ತು ಚೀನಾಗಳು ಹಿಂದೆ ಸರಿಯಲಿಲ್ಲ. ಅದರಂತೆ ಇರಾನ್ ಕೂಡಾ ಒಪ್ಪಂದದ ಆಣತಿಯಂತೆಯೇ ಪಾರದರ್ಶಕವಾಗಿ ನಡೆದುಕೊಂಡಿತ್ತು. ಆದರೆ ಈ ಒಪ್ಪಂದದ ಬಗ್ಗೆ ಅಮೆರಿಕಕ್ಕೆ ಮೂರು ಆಕ್ಷೇಪಗಳಿದ್ದವು.

  • ಇರಾನ್‍ನ ಅಣುವಿದ್ಯುತ್ ಕಾರ್ಯಕ್ರಮವು ಕೇವಲ ಶಾಂತಿಯುತ ಉದ್ದೇಶಕ್ಕಾಗಿ ನಡೆದಿದೆಯೆಂದು ಅಮೆರಿಕ ನಂಬಲಿಲ್ಲ. ಇರಾನ್‍ನಲ್ಲಿ ಹಲವಾರು ಮರೆಮಾಚಿದ ಅಣು ಸಿಡಿತಲೆಗಳಿವೆಯೆಂದೇ ಅಮೆರಿಕ ನಂಬಿತ್ತು.
  • ಇರಾನ್‍ನ ಕ್ಷಿಪಣಿ ಕಾರ್ಯಕ್ರಮವು ಅಮೆರಿಕದ ನಿದ್ದೆ ಕೆಡಿಸಿತ್ತು. ಈ ಕ್ಷಿಪಣಿಗಳನ್ನು ಸೌದಿ ಹಾಗೂ ಇಸ್ರೇಲ್ ಮೇಲೆ ಬಳಸಬಹುದು ಹಾಗೂ ಯಾವಾಗಲಾದರೂ ಈ ಕ್ಷಿಪಣಿಗಳನ್ನು ಅಣ್ವಸ್ತ್ರಗಳನ್ನು ಪ್ರಯೋಗಿಸಲು ಬಳಸಬಹುದು ಎಂಬ ಶಂಕೆ ಅಮೆರಿಕದ ನೆಮ್ಮದಿ ಕೆಡಿಸಿತ್ತು.
  • ಕೊಲ್ಲಿರಾಷ್ಟ್ರಗಳಲ್ಲಿ ತನ್ನ ಸಂಘಟನೆಗಳ ಮೂಲಕ ಇರಾನ್ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದೆಯೆಂದು ಅಮೆರಿಕ ಆಪಾದಿಸಿತ್ತು. ಹೆಜ್‍ಬೊಲ್ಲಾಹ್, ಹಮಸ್, ಅನ್ಸರ್ ಅಲ್ಲಾ, ಇರಾಖ್‍ನಲ್ಲಿ ಮತ್ತು ಸಿರಿಯಾದಲ್ಲಿ ಶಿಯಾ ಮಿಲಿಶಿಯಾಗಳು ಇರಾನ್‍ನ ಅಣತಿಯಂತೆ ನಡೆದುಕೊಳ್ಳುತ್ತಿವೆಯೆಂದು ಅಮೆರಿಕ ಆಪಾದಿಸಿತ್ತು.

ಈ ಎಲ್ಲ ಕಾರಣಗಳಿಗಾಗಿ ಅಮೆರಿಕ ಏಕಪಕ್ಷೀಯವಾಗಿ 2015 ಜುಲೈನಲ್ಲಿ ಸಹಿಹಾಕಿದ ಒಪ್ಪಂದದಿಂದ ಹಿಂದೆಗೆದಿತ್ತು. ನಂತರದಲ್ಲಿ ಇರಾನ್‍ನ ಮೇಲೆ ಆರ್ಥಿಕ ದಿಗ್ಭಂದನವನ್ನು ಮತ್ತೆ ಹೇರಿತ್ತು. ಇದರಂತೆ ಇರಾನ್‍ನಿಂದ ಬೇರಾವುದೇ ದೇಶಗಳು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುವಂತಿಲ್ಲ. ಇರಾನ್‍ನ ಜೊತೆಗೆ ಬೇರಾವುದೇ ವಹಿವಾಟು ಮಾಡುವಂತಿಲ್ಲ. ಭಾರತ ಕೂಡಾ ಇರಾನ್‍ನಿಂದ ತನ್ನ ಕಚ್ಚಾತೈಲ ಆಮದನ್ನು ನಿಲ್ಲಿಸಲೇಬೇಕಾದ ಒತ್ತಡಕ್ಕೆ ಒಳಗಾಗಿತ್ತು. ಒಂದು ವರ್ಷದ ಮಟ್ಟಿಗೆ ಇದನ್ನು ಮುಂದೂಡಲಾಯಿತಾದರೂ ಈಗ ಈ ಆಮದನ್ನು ನಿಲ್ಲಿಸಲಾಗಿದೆ. ಇದರ ಜೊತೆಗೆ ಇರಾನ್‍ನ ಚಾಬಹಾರ್ ಬಂದರು ಅಭಿವೃದ್ಧಿಯ ಕಾರ್ಯಕ್ರಮವೂ ಹಿಂದೇಟು ಪಡೆಯಿತು. ಆಫ್ಘಾನಿಸ್ತಾನಕ್ಕೆ ಸಮುದ್ರ ತಟದಿಂದ ಬಂದರು ಸೌಲಭ್ಯ ಹಾಗೂ ಭೂಸಂಪರ್ಕ ನೀಡುವ ಈ ಯೋಜನೆಗೂ ಕಲ್ಲು ಬಿದ್ದಿತ್ತು.

ಅಮೆರಿಕದ ಡ್ರೋನ್ ಒಂದನ್ನು ಇರಾನ್ ಹೊಡೆದುರುಳಿಸುವುದರೊಂದಿಗೆ ಇದೀಗ ಈ ಕಲಹ ಪರಾಕಾಷ್ಟೆಯ ಸನಿಹ ಬಂದು ನಿಂತಿದೆ. ಯಾವ ಕ್ಷಣದ ಯಾವ ಘಟನೆಯಾದರೂ ಈ ಯುದ್ಧಕ್ಕೆ ಬೆಂಕಿ ಗೀರುವ ಕಾರಣವಾಗಬಹುದು. ಈ ಯುದ್ಧವು ಕೇವಲ ಇರಾನ್‍ನ ಗಡಿಗಷ್ಟೇ ಸೀಮಿತವಾಗಿರುವುದಿಲ್ಲ. ಬದಲಿಗೆ ಇಡೀ ಕೊಲ್ಲಿ ರಾಷ್ಟ್ರಗಳಿಗೆ ಹಾಗೂ ಇರಾನ್‍ನ ಪ್ರಭಾವವಿರುವ ಶಿಯಾ ಸಮುದಾಯದ ಎಲ್ಲ ಕ್ಷೇತ್ರಗಳಿಗೂ ಈ ಯುದ್ಧ ಹರಡಬಲ್ಲುದು. ಹಾಗೇನಾದರೂ ಆದರೆ ಈ ಯುದ್ಧ ಭಾರತದ ಬಾಗಿಲಿಗೆ ಬಂದು ನಿಲ್ಲುವುದಷ್ಟೇ ಅಲ್ಲದೆ ಭಾರತದ ರಾಜತಾಂತ್ರಿಕ ಪರಿಣತಿಗೆ ಪರೀಕ್ಷೆಯನ್ನೂ ಒಡ್ಡಬಲ್ಲುದು.

Leave a Reply

Your email address will not be published.