ಇಲ್ಲಿ ಜಾತಿ ಧರ್ಮಗಳೇ ಸಾಂಕ್ರಾಮಿಕ ರೋಗಗಳು!

ಸಂಸ್ಕಾರ ಕಾದಂಬರಿಯಲ್ಲಿ ಬ್ರಾಹ್ಮಣ ಸಂಪ್ರದಾಯಗಳನ್ನು ಒರೆಗೆ ಹಚ್ಚುವ ಉದ್ದೇಶವೇ ಪ್ರಮುಖವಾಗುತ್ತದೆ. ಕೊಳೆತ ಶವದ ದುರ್ನಾತ, ಸತ್ತ ಇಲಿಗಳ ಮೂಲಕ ಹಬ್ಬುವ ಪ್ಲೇಗ್ ರೋಗ, ಅಗ್ರಹಾರದ ಮನೆಗಳ ಮೇಲೆ ಬಂದು ಕೂರುವ ರಣಹದ್ದುಗಳು, ಜಾಗಟಿಗಳನ್ನು ಬಾರಿಸಿ ಹದ್ದುಗಳನ್ನು ಓಡಿಸುವ ಬ್ರಾಹ್ಮಣರು ಮೊದಲಾದ ನಿರೂಪಣೆಗಳು ಕೇವಲ ಪ್ರಾಸಂಗಿಕವಾಗಿವೆ. ಆದರೆ ಧರ್ಮದ ಪ್ರಶ್ನೆ ಬಹುಮುಖ್ಯವಾಗುತ್ತದೆ.

ಕನ್ನಡ ಸಾಹಿತ್ಯ ಚರಿತ್ರೆಯನ್ನೊಮ್ಮೆ ತಿರಿವಿದರೆ ಯಾರಿಗಾದರೂ ಕನಿಷ್ಠಮಟ್ಟದ ಅಂದಾಜು ಬರುತ್ತದೆ. ಅದೇನೆಂದರೆ ಕನ್ನಡ ಸಾಹಿತ್ಯ ಇದುವರೆಗೂ ನಿರ್ವಹಿಸಿಕೊಂಡು ಬಂದ ವಸ್ತುವಿಷಯ ಏನೆಂಬುದು. ಸಾಹಿತ್ಯದ ಪಠ್ಯಗಳನ್ನು ಓದುವ ಇಲ್ಲವೇ ನಿರ್ವಚಿಸುವ ವಿಧಾನಕ್ಕೂ ಮತ್ತು ಸಮೂಹಗಳು ಎದುರಿಸುವ ಬಿಕ್ಕಟ್ಟುಗಳ ನಡುವೆ ಒಂದು ಹೊಂದಾಣಿಕೆ ಇರುತ್ತದೆ. ಯಾವ ಬಿಕ್ಕಟ್ಟು ಅಥವಾ ನೆಲೆಗಳು ನಮ್ಮನ್ನು ಯಾವಾಗಲೂ ಬಾಧಿಸುತ್ತವೋ, ಆ ನೆಲೆಗಳಿಗೆ ಪೂರಕವಾಗಿಯೇ ನಾವು ಸಾಹಿತ್ಯ ಕೃತಿಗಳನ್ನು ನೋಡುವ ಪರಿಪಾಠವನ್ನು ಬೆಳೆಸಿಕೊಂಡಿರುತ್ತೇವೆ. ಇಲ್ಲವಾದಲ್ಲಿ, ಆಯಾ ಸಾಹಿತ್ಯ ಪಠ್ಯದಲ್ಲಿ ಎದುರಾಗುವ ವಿದ್ಯಮಾನ, ಬಿಕ್ಕಟ್ಟು ಹಾಗೂ ನಿಲುವುಗಳನ್ನು ನಮ್ಮ ಸಮುದಾಯಗಳಲ್ಲಿಟ್ಟು ನೋಡುವ ಪ್ರಯತ್ನವನ್ನು ಮಾಡುತ್ತೇವೆ.

ಇವೆರಡೂ ವಿಧಾನಕ್ಕೆ ಹೊರತಾದ ಮಾದರಿಯೊಂದು ಇರಲು ಸಾಧ್ಯವಿದೆ. ಆದರೆ ಆ ಮಾದರಿಯನ್ನು ಅನುಸರಿಸುವವರ ಸಂಖ್ಯೆ ಅತ್ಯಂತ ಕಡಿಮೆ. ಆ ಬಗೆಯ ಓದನ್ನು ಪರ್ಯಾಯವೆಂದೋ ಇಲ್ಲವೇ ಭಿನ್ನವೆಂದೋ ಬಣ್ಣಿಸಿ ಕೈತೊಳೆದುಕೊಳ್ಳುತ್ತೇವೆ. ಇರಲಿ ಸಾಹಿತ್ಯ ಓದಿನ ಬಗೆ ಇಂತಹದೇ ಎಂದು ಖಚಿತವಾಗಿ ಹೇಳುವುದು ಅಸಾಧ್ಯವೇ ಸರಿ. ಏಕೆಂದರೆ ಓದುಗನ ದೃಷ್ಟಿಕೋನ ಮತ್ತು ಸಾಮಾಜಿಕ ನಿಲುವುಗಳ ಆಧಾರದ ಮೇಲೆ, ಆಯಾ ಕೃತಿಯ ಆಶಯ, ಆದ್ಯತೆ ಹಾಗೂ ಪರಿಣಾಮಗಳು ಪ್ರಕಟಗೊಳ್ಳುತ್ತವೆ.

ಸಾಹಿತ್ಯ ಕೃತಿಯೊಂದು ಕೇವಲ ಒಂದು ನಿರ್ದಿಷ್ಟ ವಿಷಯವನ್ನು ಮಾತ್ರ ನಿರ್ವಹಿಸುತ್ತದೆ ಎನ್ನುವ ಅಭಿಪ್ರಾಯಕ್ಕೆ ಅವಕಾಶವೇ ಇರದು. ಬದುಕಿನ ಸಂಕೀರ್ಣತೆಯಷ್ಟೇ ಸಾಹಿತ್ಯ ಕೃತಿಯೂ ಸಂಕೀರ್ಣವಾಗಿರುತ್ತದೆ. ಓದಿನ ಪ್ರಕ್ರಿಯೆಯಲ್ಲಿ ಯಾವುದನ್ನು ಯಾವುದು ಪ್ರಭಾವಿಸುತ್ತದೆ ಎನ್ನುವ ಪ್ರಶ್ನೆ ಬೇರೆ. ಆದರೆ ಕಾಲ ದೇಶದ ತುರ್ತುಗಳು ಈ ಓದಿನ ಧಾಟಿ ಮತ್ತು ಲಯಗಳನ್ನು ರೂಪಿಸುತ್ತವೆ ಎಂಬುದನ್ನೂ ನಾವು ಒಪ್ಪಲೇಬೇಕು.

ದಿಟ ಹಾಡಿಗೆ ಪೂರಕವಾಗಿ ಶ್ರುತಿ ಸೇರಿಸುವುದು ಒಂದು ಬಗೆಯಾದರೆ, ಶ್ರುತಿಗೇನೆ ಹಾಡನ್ನು ರೂಪಿಸುವ ಬಗೆ ಮತ್ತೊಂದಾಗಿರುತ್ತದೆ. ಅಂದರೆ ಸಾಹಿತ್ಯದ ಮೂಲಕ ಸಮಾಜವನ್ನು ಬಿಡಿಸಿ ನೋಡುವ ಇಲ್ಲವೇ ಸಮಾಜದ ಮೂಲಕ ಸಾಹಿತ್ಯವನ್ನು ಓದುವ ಮಾದರಿಗಳನ್ನು ವಿವರಿಸುವುದಕ್ಕೆ ಈ ಮಾತನ್ನು ಹೇಳಿದೆ. ಕನ್ನಡ ಸಾಹಿತ್ಯದ ಒಟ್ಟು ಚಲನೆ ಧರ್ಮ, ಜಾತಿ ಹಾಗೂ ಲೈಂಗಿಕತೆ ಕುರಿತಾಗಿದೆ. ಪಂಪನಾದಿಯಾಗಿ ಇವತ್ತಿನವರೆಗೂ ಈ ಮೂರು ಸಂಕಥನಗಳನ್ನು ಹೊರತುಪಡಿಸಿದ ಸಾಹಿತ್ಯಕ ನಿರೂಪಣೆಗಳನ್ನು ನೋಡಲು ಸಾಧ್ಯವಿಲ್ಲ. ಹೌದು ಇವುಗಳ ಜೊತೆಗೆ ಹಲವು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿದ್ಯಮಾನಗಳೂ ಇರುತ್ತವೆ. ಆದ್ಯತೆಯ ಪ್ರಶ್ನೆಯಿರುವುದು ಮಾತ್ರ ಧರ್ಮ, ಜಾತಿ ಮತ್ತು ಲೈಂಗಿಕತೆಗಳಿಗೆ ಮಾತ್ರ ಸೀಮಿತ.

ಕನ್ನಡ ಸಾಹಿತ್ಯ ಲೋಕ ಸಾಂಕ್ರಾಮಿಕ ರೋಗಗಳನ್ನು ಹೇಗೆ ಕಂಡಿದೆ? ಎಂಬೀ ಪ್ರಶ್ನೆಗೆ ಪ್ರತಿಕ್ರಿಯಿಸುವ ಮೊದಲೇ ಇಷ್ಟೊಂದು ಮಾತುಗಳನ್ನು ಹೇಳಲು ಕಾರಣವೇನೆಂದರೆ, ಸಾಂಕ್ರಾಮಿಕ ರೋಗಗಳನ್ನೇ ಪ್ರಧಾನ ವಸ್ತುವನ್ನಾಗಿಟ್ಟುಕೊಂಡು  ಕನ್ನಡದಲ್ಲಿ ಕೃತಿಗಳು ರಚನೆಯಾಗಿಲ್ಲ (ನನ್ನ ತಿಳಿವಳಿಕೆ ಪ್ರಕಾರ). ಆದರೆ ಇಂತಹ ರೋಗಗಳ ಪ್ರಾಸಂಗಿಕ ಉಲ್ಲೇಖಗಳು ಸಾಕಷ್ಟು ಕೃತಿಗಳಲ್ಲಿ ಬರುತ್ತವೆ. ಅಂದರೆ ಈ ಸಾಂಕ್ರಾಮಿಕ ರೋಗಗಳನ್ನೇ ಪ್ರಧಾನ ಆಶಯವನ್ನಾಗಿ ನಿರೂಪಿಸುವ ಬದಲಾಗಿ ಆಯಾ ಕೃತಿಯೊಳಗೆಯೇ ಅಂತಹದೊಂದು ಸನ್ನಿವೇಶ ವಿಕಾಸಗೊಂಡಾಗ ಪ್ಲೇಗು, ಕಾಲರಾ, ಶಿಡುಬು ಮುಂತಾದ ಬೇನೆಗಳನ್ನು ಕುರಿತು ಸಂವೇದನೆಗಳು ರೂಪುಗೊಂಡಿವೆ. ಈ ಸಾಂಕ್ರಾಮಿಕ ರೋಗಗಳನ್ನು ಒಂದು ಅಖಂಡ ಸಂವೇದನೆಯನ್ನಾಗಿ ಚಿತ್ರಿಸಿದ ಸಾಹಿತ್ಯ ಕೃತಿಗಳು ಕನ್ನಡದಲ್ಲಿಲ್ಲ.

ಆದರೆ ಇವುಗಳ ಪರಿಣಾಮದಿಂದ ಏರ್ಪಟ್ಟಿರುವ ಬಿಕ್ಕಟ್ಟುಗಳನ್ನು ಕುರಿತ ನಿರೂಪಣೆಗಳನ್ನು ನಾವು ಸಂಸ್ಕಾರ, ಗೃಹಭಂಗ ಮತ್ತು ಗ್ರಾಮಾಯಣ ಕೃತಿಗಳಲ್ಲಿ ನೋಡುತ್ತೇವೆ. ಈ ಸಾಂಕ್ರಾಮಿಕ ರೋಗಗಳ ನಂತರ ಸಮೂಹಗಳ ಸ್ಥಿತಿ ಏನಾಗುತ್ತದೆ. ಸಮೂಹಗಳ ನಡೆ ನುಡಿಯಲ್ಲಿ ಏನು ಪರಿವರ್ತನೆಗಳು ಆಗುತ್ತವೆ, ಬದುಕನ್ನು ಪರಿಭಾವಿಸುವ ಕ್ರಮಗಳಲ್ಲಿ ಉಂಟಾಗುವ ಪಲ್ಲಟಗಳು ಎಂತಹವು ಎಂಬೆಲ್ಲ ಚರ್ಚೆಗಳಿಗೆ ಇಲ್ಲಿ ಅವಕಾಶವಿದೆ.

ನಮ್ಮ ನೋವುಗಳನ್ನು (ಸಫರಿಂಗ್ಸ್) ಎರಡು ನೆಲೆಯಲ್ಲಿ ನಾವು ಸಾಹಿತ್ಯಕ ಸಂವೇದನೆಯನ್ನಾಗಿ ಅಭಿವ್ಯಕ್ತಿಸುತ್ತೇವೆ. ಒಂದನ್ನು ವ್ಯಕ್ತಿಗತ ನೆಲೆಯಲ್ಲಿ ಮತ್ತೊಂದನ್ನು ಸಾಮೂಹಿಕ ನೆಲೆಯಲ್ಲಿ. ಯಾವುದು ಸಾಮೂಹಿಕ ನರಳಾಟವಾಗುತ್ತದೆಯೋ, ಅದು ನಮ್ಮನ್ನು ನಿರಂತರ ಬಾಧಿಸುವ ನೋವು ಆಗುತ್ತದೆ. ಅದಕ್ಕಾಗಿಯೇ ಇರಬೇಕು ಗಂಗಾಧರ ಚಿತ್ತಾಲರು ರೋಗವನ್ನು ಕುರಿತು ತಮ್ಮ ಕಾವ್ಯಗಳಲ್ಲಿ ತೀವ್ರವಾಗಿ ಅಭಿವ್ಯಕ್ತಿಸಿದಂತೆ, ಕನ್ನಡದಲ್ಲಿ ಬೇರೆ ಕವಿಗಳು ಇದನ್ನು ಅಭಿವ್ಯಕ್ತಿಸಿಲ್ಲ. ಅಂದರೆ ಇದೊಂದು ಪ್ರಧಾನ ವಸ್ತುವಾಗಿ ಬಿಂಬಿತವಾಗಿಲ್ಲ. ಆದರೆ ಹಸಿವು, ಬಡತನ, ಅಸ್ಪöÈಶ್ಯತೆ, ಲೈಂಗಿಕತೆ, ಜಾತಿ, ಪುರುಷ ಪ್ರಾಧಾನ್ಯ ಮತ್ತು ಧರ್ಮಗಳನ್ನು ಕುರಿತು ಸಾಮೂಹಿಕವಾಗಿ ಅಭಿವ್ಯಕ್ತಿಸಲಾಗಿದೆ.

ಇದನ್ನು ಕೇವಲ ನರಬಲಿ, ತುತ್ತಿನಚೀಲ ಹಾಗೂ ಕಲ್ಕಿಯಂತಹ ಕವಿತೆಗಳಲ್ಲಿ ಮಾತ್ರ ಕಾಣುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಇದೊಂದು ಆಂದೋಲನವೇ ಆಗಿ ರೂಪುಗೊಂಡಿದೆ. ಈ ಮಾತನ್ನೇ ರೋಗಗಳಿಗೆ ಕುರಿತು ಹೇಳಲು ಆಗುವುದಿಲ್ಲ. ರೋಗದ ಉಲ್ಲೇಖಗಳು ಅಪಾರವಾಗಿವೆ. ಆದರೆ ಎಲ್ಲ ಕಾಲಕ್ಕೂ ಕಾಡುವ ಸಂವೇದನೆಯಾಗಿಲ್ಲ. ಸಂಸ್ಕಾರ ಕಾದಂಬರಿಯಲ್ಲಿಯೇ ಉಲ್ಲೇಖಗೊಂಡಿರುವ, ಪ್ರಾಣೇಶಾಚಾರ್ಯ ಅವರ ಹೆಂಡತಿ ಭಾಗೀರತಿಯವರು ಹುಟ್ಟಿನಿಂದಲೂ ರೋಗಿಯಾಗಿದ್ದರು. ಪ್ರಾಣೇಶಾಚಾರ್ಯ ಅವರ ತ್ಯಾಗದ ಹಿರಿಮೆಯನ್ನು ಮೆರೆಯುವುದಕ್ಕೆ ಈ ಪಾತ್ರವನ್ನು ರೂಪಿಸಲಾಗಿದೆ ಹೊರತು ಆ ಹೆಣ್ಣುಮಗಳ ನರಳಾಟವನ್ನು ಪ್ರತಿನಿಧಿಸುವುದಕ್ಕಲ್ಲ.

ಪ್ರಾಕೃತಿಕ ವಿಕೋಪಗಳು ಹಾಗೂ ಸಾಂಕ್ರಾಮಿಕ ರೋಗಗಳನ್ನೇ ಕಥಾವಸ್ತುವನ್ನಾಗಿಸಿಕೊಂಡ ಸಾಹಿತ್ಯ ನಿರೂಪಣೆಗಳು ಕನ್ನಡದಲ್ಲಿ ಬಂದಿಲ್ಲವೆಂದರೆ, ಕನ್ನಡ ಸಾಹಿತ್ಯದಲ್ಲಿ ಸಾಂಕ್ರಾಮಿಕ ರೋಗಗಳು ಒಂದು ತೀವ್ರವಾದ ಸಂವೇದನೆಯಾಗಿ ರೂಪುಗೊಂಡಿಲ್ಲ ಎಂದು ಹೇಳಬಹುದು. ಇಲ್ಲವೇ ನಮ್ಮ ಸಮೂಹಗಳು ನಿತ್ಯ ಅನುಭವಿಸುವ ತಲ್ಲಣಗಳ ಮುಂದೆ ಈ ರೋಗಗಳು ತೀವ್ರ ಸಂವೇದನೆಗಳಾಗದೇ ಹೋಗಿರಬಹುದು. ಉದಾ.ಗೆ ಸಂಸ್ಕಾರ ಕಾದಂಬರಿಯಲ್ಲಿ ಬ್ರಾಹ್ಮಣ ಸಂಪ್ರದಾಯಗಳನ್ನು ಒರೆಗೆ ಹಚ್ಚುವ ಉದ್ದೇಶವೇ ಪ್ರಮುಖವಾಗುತ್ತದೆ. ಕೊಳೆತ ಶವದ ದುರ್ನಾತ, ಸತ್ತ ಇಲಿಗಳ ಮೂಲಕ ಹಬ್ಬುವ ಪ್ಲೇಗ್ ರೋಗ, ಅಗ್ರಹಾರದ ಮನೆಗಳ ಮೇಲೆ ಬಂದು ಕೂರುವ ರಣಹದ್ದುಗಳು, ಜಾಗಟಿಗಳನ್ನು ಬಾರಿಸಿ ಹದ್ದುಗಳನ್ನು ಓಡಿಸುವ ಬ್ರಾಹ್ಮಣರು ಮೊದಲಾದ ನಿರೂಪಣೆಗಳು ಕೇವಲ ಪ್ರಾಸಂಗಿಕವಾಗಿವೆ. ಆದರೆ ಧರ್ಮದ ಪ್ರಶ್ನೆ ಬಹುಮುಖ್ಯವಾಗುತ್ತದೆ.

ಜಾತಿ, ಧರ್ಮಗಳು ಕಾಡಿದಷ್ಟು ಬಹುಶಃ ಈ ಸಾಂಕ್ರಾಮಿಕ ರೋಗಗಳು ಕಾಡಿರಲಾರವು. ಯಾವ ತಲ್ಲಣಗಳನ್ನು ನಮ್ಮ ಸಮೂಹಗಳು ತೀವ್ರವಾಗಿ ಅನುಭವಿಸಿರುತ್ತವೋ ಅಂತಹ ಅನುಭವಗಳು ಮಾತ್ರ ಸಾಹಿತ್ಯಕ ತೀವ್ರ ಸಂವೇದನೆಗಳಾಗುತ್ತವೆ. ಸಾಂಕ್ರಾಮಿಕ ರೋಗವೆಂಬುದು ಅದೃಶ್ಯ ಶತ್ರು ಮತ್ತು ಸಮೂಹ ನಾಶಿಕವೂ ಹೌದು. ಆದರೆ ಜಾತಿ, ಧರ್ಮಗಳ ಮೂಲಕ ಅನುಭವಿಸಿದ ಭಯಾನಕತೆಯನ್ನು ಇಂತಹ ರೋಗಗಳ ಸನ್ನಿವೇಶದಲ್ಲಿ ಕಾಣಲಾಗಿಲ್ಲ. ಅಂದರೆ ದೇವರು, ರಾಕ್ಷಸು, ಧರ್ಮ, ಜಾತಿಗಳ ಬಗೆಗೆ ಕಲ್ಪಿಸಿಕೊಂಡಷ್ಟು ಭಯಾನಕತೆಯನ್ನು ರೋಗಗಳ ಬಗೆಗೆ ಕಲ್ಪಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.

ಇಂತಹ ಸಾಂಕ್ರಾಮಿಕ ರೋಗಗಳು ಹಬ್ಬಿದಾಗ ಕೂಡ ದೇವತೆಗಳ ಕೋಪ-ಶಾಪದಿಂದ ಬಂದಂತಹವು ಎನ್ನುವ ಮೌಢ್ಯವನ್ನು ಮೆರೆಯುತ್ತೇವೆ. ಉದಾ.ಗೆ ಗ್ರಾಮಾಯಣ ಕಾದಂಬರಿಯಲ್ಲಿ ಕಾಲರಾ ರೋಗವನ್ನು ಕುರಿತ ನಿಲುವುಗಳನ್ನು ನೋಡಬಹುದು. ವಾಡೆಯ ಹಳೆ ಜೋಳವನ್ನು ಸೇವಿಸಿದ ಕಾರಣ ಕಾಲರಾ ರೋಗ ಶುರುವಾಯಿತು, ಪರಿಣಾಮವಾಗಿ ದಲಿತ ಕೇರಿಗಳಲ್ಲಿ ಸಾಲುಸಾಲು ಸಾವುಗಳು ಪರಿಣಮಿಸಿದವು. ಇದು ಕ್ರಮೇಣ ಇಡೀ ಊರಿಗೆ ಹಬ್ಬಿಕೊಂಡಿತು. ಜಾತಿಭೇದಗಳಿಲ್ಲದೆ ಸಾವುಗಳು ಸಂಭವಿಸಿದವು. ಆರಂಭದಲ್ಲಿ ವಾಡೆಯ ಹಳೇ ಜೋಳದ ನೆವ ಪ್ರಧಾನವಾಗಿತ್ತು. ದಿಟ ಈ ಕಾಲರಾ ರೋಗಿಗೆ ಇದನ್ನು ಮೀರಿದ ಕಾರಣಗಳು ಕಾದಂಬರಿಯಲ್ಲಿ ಸಿಗುವುದಿಲ್ಲ. ಆದರೆ ಈ `ಕಾಲರಾವನ್ನು ಹೋಗಲಾಡಿಸಲು ಎಲ್ಲ ದೇವರುಗಳಿಗೆ ನೀರು ಹಾಕಿಸಿ, ಕುರಿ ಕಡಿದು ದೇವಿಯ ಕ್ರೋಧವನ್ನು ಶಾಂತಗೊಳಿಸುವುದು ಅಗತ್ಯವೆಂದು ಅದಕ್ಕಾಗಿ ಅಂಬಲಿಗೆ ಜೋಳ ಎತ್ತುವ ಕೆಲಸದಲ್ಲಿ  ಬಾಪೂ ಸಾಹೇಬನ ಹುಲಿಬ್ಯಾಟಿ ಹಳಬರ ಮುಖ್ಯಸ್ಥ ದಳವಾಯಿ, ತಿಪ್ಪ, ಹಾಗೂ ಅವರ ಸಂಗಡಿಗರು ನಿರತರಾಗಿದ್ದರು’ (ಪುಟ:173).

ಇಂದಿಗೂ ಇಂತಹ ಕ್ರಮಗಳನ್ನು ಅನುಸರಿಸುವುದನ್ನು ನೋಡಬಹುದು. ಈ ಕ್ರಮದಲ್ಲಿ ಜನರ ಬಗೆಗಿನ ಕಾಳಜಿಗಿಂತ ತಮ್ಮ ಪ್ರತಿಷ್ಠೆ ಮತ್ತು ಪ್ರಚಾರದ ಗೀಳು ಮುಖ್ಯವಾಗುತ್ತದೆ. ಇಂತಹ ನಿಲುವುಗಳನ್ನೇ ಒಗ್ಗಟ್ಟಿನ ಪ್ರಶ್ನೆಗಳನ್ನಾಗಿ ಮಾರ್ಪಡಿಸಲಾಗುತ್ತದೆ. ಗ್ರಾಮಾಯಣ ಕಾದಂಬರಿಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ನೋಡಿದರೆ ಈ ಮಾತು ನಿಚ್ಚಳವಾಗುತ್ತದೆ. `ಉತ್ಸವವೇ ಇರಲಿ, ಯುದ್ಧವೇ ಇರಲಿ, ಪಿಡುಗೇ ಇರಲಿ ಒಂದು ಸಾರ್ವಜನಿಕ ಕಾರಣ ಜನರಲ್ಲಿ ಅದ್ಭುತ ಕಾರ್ಯಶಕ್ತಿಯನ್ನುಂಟು ಮಾಡುತ್ತದೆ’ (ಪುಟ:175). ಈ ಮಾತು ಇವತ್ತಿಗೂ ದಿಟ. ಇದು ಕೇವಲ ಆಯಾ ಹೊತ್ತಿನ ಕ್ರೆöÊಸಿಸನ್ನು ನಿಭಾಯಿಸುವುದಕ್ಕೆ ಪೂರಕವಾಗಿರುತ್ತದೆ ಹೊರತು ಸಮೂಹಗಳಲ್ಲಿ ಒಂದು ನಿರಂತರ ಬದಲಾವಣೆಗೆ ಕಾರಣವಾಗುವುದಿಲ್ಲ.

ಈಗ ಕೊರೋನಾ ವೈರಾಣುವಿನ ಹಾವಳಿಯಿಂದ ನಮ್ಮೆಲ್ಲರ ಮನಪರಿವರ್ತನೆಯಾಗುತ್ತದೆ ಎಂಬ ಅಭಿಪ್ರಾಯಗಳು ಗಟ್ಟಿಯಾಗಿ ಬರುತ್ತಿವೆ. ಇದಕ್ಕೆ ಗ್ರಾಮಾಯಣ ಕಾದಂಬರಿಯ ಒಂದು ನಿದರ್ಶನವನ್ನು ನೋಡೋಣ. ‘ಕಾಲರಾ ರೋಗದಿಂದ ಸತ್ತಿದ್ದ ಹೊಲಗೇರಿಯಾ ಬಾಳ್ಯಾನನ್ನು ಗೌಡರೇ ಮೊದಲು ನೋಡಿದರು ಅಂದಿನಿಂದ ಅವರ ನಡವಳಿಕೆಯೇ ಬದಲಾಗಿತ್ತು. ಪಾದಳ್ಳಿಯ ಇಡೀ ಜೀವನ ಕ್ರಮವೇ ಬದಲಾಗಬೇಕೆಂದು ದೈವಸಂಕಲ್ಪವಿರಬೇಕು’ (ಪುಟ:178).

ಹೌದು ಇವತ್ತು ಕೂಡ ಕೊರೋನಾ ಬಂದಿರುವುದು ನಮ್ಮ ಬದುಕಿನ ದಿಕ್ಕುದೆಸೆಯನ್ನು ಬದಲಾಯಿಸುವುದಕ್ಕೆ ಎಂದು ಹೇಳುತ್ತಿದ್ದೇವೆ. ಪರಿಣಾಮವಾಗಿ ನಮ್ಮ ಬದುಕಿನ ಲಯಗಳನ್ನು ಬದಲಾಯಿಸುವ ಅರಿವಿನ ಪಲ್ಲಟ ನಮ್ಮೊಳಗೆಯೇ ಏರ್ಪಡುತ್ತದೆ ಎನ್ನುವುದು ಎಷ್ಟು ವಾಸ್ತವ? ಏಕೆಂದರೆ ಇದೇ ಗ್ರಾಮಾಯಣ ಕಾದಂಬರಿಯಲ್ಲಿ `ಪಾದಳ್ಳಿಯ ಇಡೀ ಜೀವನ ಕ್ರಮವೇ ಬದಲಾಗಬೇಕೆಂದು ದೈವಸಂಕಲ್ಪವಿರಬೇಕು’ ಎಂಬ ನಂಬಿಕೆಯೇ ಬುಡಮೇಲಾದ ನಿದರ್ಶನವಿದೆ. `ಊರಿಗೇ ಕೋಟಿಯಾಗಿ ಕಾಯುತಿದ್ದ ಗೌಡರು ಇಲ್ಲದಂತಾಗಿದ್ದರು, ಕೆಲವು ಜನರೊಡನೆ ಕೆಲವು ಸಮಸ್ಯೆಗಳೂ ಸತ್ತುಹೋಗಿದ್ದವು ನಿಜ. ಆದರೆ ಈ ಪ್ರಳದಲ್ಲಿಯೇ ಕೆಲ ಹೊಸ ಸಮಸ್ಯೆಗಳೂ ಹುಟ್ಟಿಕೊಂಡಿದ್ದವು. ಇನ್ನೂ ಅವುಗಳ ವಿಚಾರಕ್ಕಾಗಿ ಮತ್ತೆ ಬದುಕಿನ ನಿರಂತರವಾದ ಕಲಹ ಪ್ರಾರಂಭವಾಗಬೇಕಾಗಿತ್ತು’ (ಪುಟ187). ಈಗ ನಾವೂ ಕೂಡ ಹೊಸ ಬದುಕಿನ ನಿರಂತರತೆಗೆ ಕಾಯಬೇಕಿದೆ.

*ಲೇಖಕರು ಮೂಲತಃ ಬಾಗಲಕೋಟೆ ಜಿಲ್ಲೆಯ ಹಳದೂರು ಗ್ರಾಮದವರು. ಪ್ರಸ್ತುತ ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಭಾಷಾಶಾಸ್ತ್ರದ ಸಹ ಪ್ರಾಧ್ಯಾಪಕರು; ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ 95 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

Leave a Reply

Your email address will not be published.