ಇಸ್ರೇಲ್ ಚುನಾವಣೆಯಲ್ಲಿ ಹಿಂದೇಟು ಕಂಡ ನೆತನ್ಯಾಹು

2021 ರ ಮಾರ್ಚ್ ಅಂತ್ಯದಲ್ಲಿ ಇಸ್ರೇಲಿನ ಸಂಸತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಬರಲಾರಂಭಿಸಿದ್ದು ಹಾಲಿ ಪ್ರಧಾನಮಂತ್ರಿ ಬೆನ್ಯಾಮಿನ್ ನೆತನ್ಯಾಹುರವರಿಗೆ ಹಿನ್ನಡೆಯಾದಂತೆ ಕಾಣುತ್ತಿದೆ. 120 ಸದಸ್ಯರ ಇಸ್ರೇಲಿ ಸಂಸತ್ ‘ನೆಸ್ಸೆಟ್’ಗೆ ನಡೆದ ಚುನಾವಣೆಯಲ್ಲಿ ನೆತನ್ಯಾಹು ಅವರ ಬಲಪಂಥೀಯ ಲಿಕುಡ್ ಪಕ್ಷ ಮತ್ತದರ ಬೆಂಬಲದ ಒಕ್ಕೂಟಕ್ಕೆ 52 ಸ್ಥಾನಗಳು ಮಾತ್ರ ದೊರಕಿವೆ. ನೆತನ್ಯಾಹು ವಿರೋಧಿಸಿ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದ ಒಕ್ಕೂಟಕ್ಕೆ 57 ಸ್ಥಾನಗಳು ಸಿಕ್ಕಿವೆ. ಯಾವ ಒಕ್ಕೂಟಕ್ಕೂ ಬಹುಮತ ಸಿಗದಿರುವ ಈ ಸನ್ನಿವೇಶದಲ್ಲಿ ನೆತನ್ಯಾಹು ವಿರೋಧಿ ‘ಯಾಮಿನ್’ ಪಕ್ಷಕ್ಕೆ 7 ಸ್ಥಾನ ಹಾಗೂ ಅರಬ್ ಇಸ್ಲಾಮಿಕ್ ಪಕ್ಷ ‘ರಾಮ್’ಗೆ 4 ಸ್ಥಾನಗಳು ದೊರಕಿವೆ. ಈ ಎರಡೂ ಪಕ್ಷಗಳು ನೆತನ್ಯಾಹುರವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಒಪ್ಪುವ ಸಾಧ್ಯತೆ ಕಡಿಮೆಯಿದೆ.

ಆದಾಗ್ಯೂ ನೆತನ್ಯಾಹುರವರ ರಾಜಕೀಯ ಜೀವನ ಮುಗಿದಂತೇನೂ ಅಲ್ಲ. ಇದೇ ಸಂಸತ್ತಿನಲ್ಲಿ ವಿರೋಧಿ ಒಕ್ಕೂಟದ ಪಕ್ಷಗಳು ಬಹಳ ದಿನ ಒಂದುಗೂಡಿರುವ ಸಾಧ್ಯತೆ ಕಡಿಮೆಯಿದೆ. ಒಂದೆರೆಡು ಬಲಪಂಥೀಯ ವಿಚಾರಧಾರೆಯ ಪಕ್ಷಗಳು ಮತ್ತೊಮ್ಮೆ ನೆತನ್ಯಾಹು ಬೆಂಬಲಿಸಬಹುದು. ಇದಕ್ಕೆ ಪರ್ಯಾಯವಾಗಿ ಯಾವುದೇ ಪಕ್ಷ-ಒಕ್ಕೂಟ ಬಹುಮತ ಸಾಬೀತುಪಡಿಸುವುದಕ್ಕೆ ವಿಫಲವಾಗಿ ವರ್ಷಾಂತ್ಯದ ಹೊತ್ತಿಗೆ ಮತ್ತೊಮ್ಮೆ ಚುನಾವಣೆ ನಡೆಯಬಹುದು.

ಇಸ್ರೇಲಿ ಸಂವಿಧಾನದಂತೆ ಅಧ್ಯಕ್ಷ ರಿವ್‍ಲಿನ್‍ರವರು ಅತ್ಯಧಿಕ ಸ್ಥಾನ ಗಳಿಸಿದ ಪಕ್ಷವನ್ನು ಸರ್ಕಾರ ರಚನೆಗೆ ಕರೆಯಬಹುದು. ಇಲ್ಲವೆ ಬಹುಮತ ಸಾಬೀತುಪಡಿಸುವ ಯಾವುದಾದರೂ ಒಕ್ಕೂಟವನ್ನು ಸರ್ಕಾರ ರಚನೆಗೆ ಕರೆಯಬಹುದು. ಸರ್ಕಾರ ರಚನೆಯ ಈ ಪ್ರಕ್ರಿಯೆ ಏಪ್ರಿಲ್ ತಿಂಗಳಿನ ಅಂತ್ಯದಷ್ಟತ್ತಿಗೆ ಫಲ ನೀಡಬಹುದೆಂದು ಎಣಿಸಲಾಗಿದೆ.

ಮುಂದುವರಿದ ರಾಷ್ಟ್ರಗಳಲ್ಲಿಯೇ ಲಸಿಕೆ ರಾಷ್ಟ್ರವಾದ

ಲಸಿಕೆ ರಾಷ್ಟ್ರವಾದ ಅಥವಾ ವ್ಯಾಕ್ಸಿನ್ ನ್ಯಾಶನಲಿಸಮ್‍ನ ಕುರೂಪಿ ಮುಖ ಮುಂದುವರೆದ ಐರೋಪ್ಯ ರಾಷ್ಟ್ರಗಳಲ್ಲಿಯೇ ಕಂಡುಬಂದಿದೆ. ಐರೋಪ್ಯ ಒಕ್ಕೂಟ ಮತ್ತು ಯುನೈಟೆಡ್ ಕಿಂಗ್‍ಡಮ್ ನಡುವಿನ ಈ ವಾದ-ಅಪವಾದಗಳ ಯುದ್ಧದಲ್ಲಿ ಆಕ್ಸ್‍ಫರ್ಡ್ – ಅಸ್ಟ್ರಾಜೆನಿಕಾ ಕಂಪನಿಯ ಲಸಿಕೆ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಂತಾಗಿದೆ.

ಅಸ್ಟ್ರಾ ಜೆನಿಕಾ ಕಂಪನಿಯ ಲಸಿಕೆ ಉತ್ಪಾದಕ ಲ್ಯಾಬೊರೇಟರಿಗಳು ಯೂರೋಪಿನ ನೆದರ್‍ಲ್ಯಾಂಡ್ ಮತ್ತು ಬೆಲ್ಜಿಯಮ್‍ನಲ್ಲಿವೆ. ಇಲ್ಲಿ ತಯಾರಾದ ಲಸಿಕೆಗಳನ್ನು ಯುಕೆ ಖರೀದಿ ಮಾಡಿದೆ. ಆದರೆ ಯೂರೋಪಿನಲ್ಲಿ ಲಸಿಕೆ ಕೊರತೆಯಿದೆಯೆಂದು ಹೇಳಿ ಐರೋಪ್ಯ ಒಕ್ಕೂಟ ಯೂರೋಪಿನಿಂದ ಯುಕೆಗೆ ಲಸಿಕೆ ರಫ್ತನ್ನು ತಡೆಹಿಡಿದಿದೆ. ಇದು ಯುಕೆಯ ಕೆಂಗಣ್ಣಿಗೆ ಕಾರಣವಾಗಿದೆ. ಐರೋಪ್ಯ ಒಕ್ಕೂಟದಂತೆ ಈಗಾಗಲೇ ಯುಕೆಯ ಶೇಕಡಾ 50 ರಷ್ಟು ಜನರಿಗೆ ಲಸಿಕೆ ನೀಡಲಾಗಿದ್ದರೆ ಯೂರೋಪಿನ ಕೇವಲ ಶೇಕಡಾ 10 ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಇದಾಗ್ಯೂ ಯುಕೆ ಎಲ್ಲಾ ಲಸಿಕೆಯ ಸರಕು ತನಗೇ ಬೇಕೆಂದು ವಾದ ಮಾಡುತ್ತಿದೆಯೆಂದು ಒಕ್ಕೂಟ ಆರೋಪ ಮಾಡಿದೆ.

ಈ ಮಧ್ಯದಲ್ಲಿ ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಬಡರಾಷ್ಟ್ರಗಳಿಗೆ ಯಾವುದೇ ಲಸಿಕೆ ಲಭ್ಯವಾಗಿಲ್ಲ. ಈ ರಾಷ್ಟ್ರಗಳ ವೈದ್ಯಕೀಯ ಸಿಬ್ಬಂದಿಗೂ ಇದುವರೆಗೆ ಲಸಿಕೆ ಪೂರೈಕೆಯಾಗಿಲ್ಲ. ಕೊವ್ಯಾಕ್ಸ್ ಎಂಬ ಸಂಘಟನೆ ವಿಶ್ವದೆಲ್ಲೆಡೆ ಏಕಸಮಾನವಾಗಿ ಲಸಿಕೆ ಪೂರೈಸಲು ವ್ಯವಸ್ಥೆ ಮಾಡಬಯಸಿದರೂ ಇದು ಸದ್ಯಕ್ಕೆ ಒಣ ಆದರ್ಶವಾಗಿಯೇ ಉಳಿಯುವ ಸಾಧ್ಯತೆಯಾಗಿ ಕಾಣಬರುತ್ತಿದೆ.

ಚೀನಾದ ಮೇಲೆ ಮುಸ್ಲಿಮ್ ನರಮೇಧದ ಆರೋಪ

ಅಮೆರಿಕದ ಹೊಸ ವಿದೇಶಾಂಗ ಸಚಿವ ಬ್ಲಿಂಕೆನ್ ಅವರು ಚೀನಾದ ಮೇಲೆ ಮುಸ್ಲಿಮರ ನರಮೇಧ ನಡೆಸುತ್ತಿರುವ ಗಂಭೀರ ಆರೋಪ ಮಾಡಿದ್ದಾರೆ. ಪಶ್ಚಿಮ ಕ್ಸಿನ್‍ಜಿಯಾನ್ ಪ್ರಾಂತ್ಯದಲ್ಲಿನ ಸುಮಾರು ಹತ್ತು ಲಕ್ಷ ಮುಸ್ಲಿಮ್ ಉಯ್‍ಘುರ್ ನಾಗರಿಕರನ್ನು ಬಹುತೇಕ ಬಂಧನದಲ್ಲಿರಿಸಿ ಚಿತ್ರಹಿಂಸೆ ಮಾಡಲಾಗುತ್ತಿದೆಯೆಂದೂ ಆರೋಪ ಮಾಡಲಾಗಿದೆ. ನೂರಾರು ಸಂಖ್ಯೆಯಲ್ಲಿ ಹೊಸ ಕಾರಾಗೃಹಗಳನ್ನು ತೆರೆದು ತರಬೇತಿ ಮತ್ತು ಶಿಕ್ಷಣದ ಹೆಸರಿನಲ್ಲಿ ಉಯ್‍ಘುರ್ ಮುಸ್ಲಿಮರನ್ನು ಬಂಧಿಸಲಾಗಿದೆಯೆಂದು ಹೇಳಲಾಗಿದೆ.

ಮಧ್ಯ ಏಷ್ಯಾದ ತುರ್ಕ್‍ಮೇನಿಸ್ತಾನದ ಗಡಿಯಲ್ಲಿರುವ ಈ ಚೀನಾ ಪ್ರಾಂತ್ಯ 20ನೇ ಶತಮಾನದ ಮೊದಲ ದಶಕಗಳಲ್ಲಿ ಸ್ವಾತಂತ್ರ್ಯ ಹೊಂದಿತ್ತು. 1949 ರಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷ ಕ್ಸಿನ್‍ಜಿಯಾನ್ ಪ್ರಾಂತ್ಯವನ್ನು ವಶಪಡಿಸಿಕೊಂಡಿತ್ತು. ಟಿಬೆಟ್‍ನಂತೆ ಈ ಪ್ರಾಂತ್ಯಕ್ಕೂ ‘ಅಟೊನೊಮಸ್’ ಸ್ಥಾನಮಾನ ನೀಡಿದ್ದೇನೆಂದು ಹೇಳಿಕೊಂಡಿರುವ ಚೀನಾ ನಿಜವಾಗಿ ಅಲ್ಲಿನ ನಾಗರಿಕರನ್ನು ಖೈದಿಗಳಂತೆ ಕಂಡಿದೆ. ಕೇವಲ ಹತ್ತಿ ಹೊಲಗಳಲ್ಲಿ ದುಡಿಯಲು ಬಳಸಿಕೊಳ್ಳಲಾಗುತ್ತಿರುವ ಈ ಉಯ್‍ಘುರ್ ಜನರ ಮೇಲೆ ಚೀನಾದ ಬಹುಸಂಖ್ಯಾತ ‘ಹಾನ್’ ಜನಾಂಗೀಯರು ದಬ್ಬಾಳಿಕೆ ಮಾಡುತ್ತಿದ್ದಾರೆ. ಉಯ್‍ಘುರ್ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಹಾಗೂ ಇವರ ಜನಸಂಖ್ಯೆಯನ್ನು ನಿಯಂತ್ರಿಸುವ ಕೆಲಸವನ್ನು ಕೂಡಾ ಮಾಡಲಾಗುತ್ತಿದೆಯೆಂದು ಆಪಾದಿಸಲಾಗಿದೆ. ಈ ಕ್ಸಿನ್‍ಜಿಯಾನ್ ಪ್ರಾಂತ್ಯಕ್ಕೆ ಹೊರಗಿನಿಂದ ಯಾರೂ ಹೋಗದಂತೆ ತಡೆಹಿಡಿಯಲಾಗಿದೆ. ಈ ಆರೋಪಗಳನ್ನು ಅಲ್ಲಗಳೆದಿರುವ ಚೀನಾ ತಾನು ಕೇವಲ ಮುಸ್ಲಿಮ್ ಉಗ್ರವಾದಿಗಳ ವಿರುದ್ಧ ಹಾಗೂ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದೆ.

ಸೂಯೆಜ್ ಕಾಲುವೆಯಲ್ಲೊಂದು ಅವಘಡ

ಮಾರ್ಚ್ 23ರಂದು ಬೆಳಿಗ್ಗೆ ಈಜಿಪ್ಟಿನ ಸೂಯೆಜ್ ಕಾಲುವೆಯಲ್ಲಿನ ಯಾತಾಯಾತ ಅಚಾನಕ್ಕಾಗಿ ನಿಲ್ಲಬೇಕಾಯಿತು. 193 ಕಿಲೋಮೀಟರ್ ದೂರದ ಸೂಯೆಜ್ ಕಾಲುವೆ ಯೂರೋಪಿನ ಮೆಡಿಟರೇನಿಯನ್ ಸಮುದ್ರ ಮತ್ತು ಏಷ್ಯಾ-ಆಫ್ರಿಕಾ ಮಧ್ಯದ ಕೆಂಪು ಸಮುದ್ರವನ್ನು ಸಂಪರ್ಕಿಸುತ್ತದೆ. ಶತಮಾನದಷ್ಟು ಹಳೆಯದಾದ ಈ ಕಾಲುವೆಯಲ್ಲಿ 2,24,000 ಟನ್‍ಗಳ ಭಾರದ ‘ಎವರ್ ಗಿವನ್’ ಸರಕು ಹಡಗೊಂದು ಅಕ್ಷರಶಃ ಸಿಕ್ಕಿಹಾಕಿಕೊಂಡಿದೆ. ಬಲವಾಗಿ ಬೀಸುತ್ತಿದ್ದ ಮರುಭೂಮಿಯ ಗಾಳಿಗೆ ಹಡಗು ಅಡ್ಡಡ್ಡಲಾಗಿ ಚಲಿಸಿ ಮರಳಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಇದರಿಂದ ಏಷ್ಯಾ-ಯೂರೋಪಿನ ಮಧ್ಯೆ ಸಮುದ್ರ ಸಂಚಾರ ಹಾಗೂ ಸರಕು ಯಾತಾಯಾತ ನಿಂತಿದೆ.

ಕಾಲುವೆಯ ಎರಡೂ ಕಡೆ ಹಡಗುಗಳ ಸಾಲೇ ನಿಂತಿದ್ದು ಇದನ್ನು ಸುಗಮ ಸಂಚಾರಕ್ಕೆ ಅಣಿಗೊಳಿಸಲು ವಾರಗಳೇ ಬೇಕಾಗಬಹುದೆಂದು ಎಣಿಸಲಾಗಿದೆ. ಈ ಮಧ್ಯೆ ಹಲವಾರು ಹಡಗು ಸರಕು ಸಾರಿಗೆ ಕಂಪನಿಗಳು ಆಫ್ರಿಕಾ ದಕ್ಷಿಣದ ಭೂ ಅಂಚಿನ ಕೇಪ್ ಆಫ್ ಗುಡ್‍ಹೋಪ್ ಮೂಲಕ ತಮ್ಮ ಸಾರಿಗೆಯ ದಾರಿಯನ್ನು ತಾತ್ಕಾಲಿಕವಾಗಿ ಬದಲಾಯಿಸಿಕೊಂಡಿವೆ.

Leave a Reply

Your email address will not be published.