ಇ-ಜ್ಞಾನ

ಟೆಕ್ ಸುದ್ದಿ

ದೂರದಲ್ಲಿರುವ ವಸ್ತುಗಳ (ಉದಾ: ವಿಮಾನ) ಪ್ರತಿಫಲನ ಸಾಮಥ್ರ್ಯ ಬಳಸಿಕೊಂಡು ಅವು ಇರುವ ಸ್ಥಾನ, ದೂರ, ಚಲನೆಯ ದಿಕ್ಕುಗಳನ್ನೆಲ್ಲ ಪತ್ತೆಮಾಡುವ ರೇಡಾರ್‍ಗಳ ಹೆಸರನ್ನು ನಾವು ಕೇಳಿರುತ್ತೇವೆ. ಗೂಗಲ್ ಸಂಸ್ಥೆ ಇತ್ತೀಚೆಗೆ ಪರಿಚಯಿಸಿದ ‘ಪಿಕ್ಸೆಲ್ 4′ ಮಾದರಿಯ ಮೊಬೈಲುಗಳ ಜೊತೆಗೆ ಈ ತಂತ್ರಜ್ಞಾನ ಮೊಬೈಲ್ ಫೋನುಗಳಿಗೂ ಬಂದಿದೆ. ಆ ಫೋನಿನ ಮೋಶನ್ ಸೆನ್ಸರ್ ಸಾಧನದಲ್ಲಿ ರೇಡಾರ್ ತಂತ್ರಜ್ಞಾನವನ್ನು ಬಳಸಲಾಗಿದೆಯಂತೆ. ರೇಡಾರ್ ತಂತ್ರಜ್ಞಾನದ ಬಳಕೆಯ ಮೇಲೆ ನಮ್ಮಲ್ಲಿ ನಿರ್ಬಂಧಗಳಿರುವುದರಿಂದ ಈ ಮೊಬೈಲ್ ಫೋನು ಭಾರತದಲ್ಲಿ ದೊರಕುವುದಿಲ್ಲ.

ಟೆಕ್ ಪದ

ಡಿಜಿಟಲ್ ಕ್ಯಾಮೆರಾಗಳ ಬಗ್ಗೆ ಮಾತನಾಡುವಾಗ ‘ಪಿಕ್ಸೆಲ್’ ಎಂಬ ಹೆಸರು ಪದೆಪದೇ ಕೇಳಸಿಗುತ್ತದೆ. ಈ ಹೆಸರು ‘ಪಿಕ್ಚರ್ ಎಲಿಮೆಂಟ್’ ಎನ್ನುವುದರ ಹ್ರಸ್ವರೂಪ. ಡಿಜಿಟಲ್ ಛಾಯಾಚಿತ್ರವೊಂದರ ಅತಿ ಸಣ್ಣ ಘಟಕ ಇದು. ಬೇರೆಬೇರೆ ಬಣ್ಣದ ಪಿಕ್ಸೆಲ್‍ಗಳು ಒಟ್ಟಾಗಿ ನಮ್ಮೆದುರು ಡಿಜಿಟಲ್ ಛಾಯಾಚಿತ್ರದ ಅನುಭವವನ್ನು ಕಟ್ಟಿಕೊಡುತ್ತವೆ. ಯಾವುದೇ ಛಾಯಾಚಿತ್ರದಲ್ಲಿ ಪಿಕ್ಸೆಲ್‍ಗಳ ಸಂಖ್ಯೆ ಹೆಚ್ಚಿದ್ದಷ್ಟೂ ಗುಣಮಟ್ಟಕ್ಕೆ ಹಾನಿಯಾಗದಂತೆ ಅದನ್ನು ಹಿಗ್ಗಿಸುವುದು, ದೊಡ್ಡ ಗಾತ್ರದಲ್ಲಿ ಮುದ್ರಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಕ್ಯಾಮೆರಾದ ಪಿಕ್ಸೆಲ್ ಸಾಮಥ್ರ್ಯ ಪ್ರತಿನಿಧಿಸುವ ಮೆಗಾಪಿಕ್ಸೆಲ್ ಎಂಬ ಏಕಮಾನ, ಹತ್ತು ಲಕ್ಷ ಪಿಕ್ಸೆಲ್‍ಗಳಿಗೆ ಸಮನಾದದ್ದು.

ಮೊಬೈಲ್ ಜಗತ್ತು

ಮೊಬೈಲ್ ತಂತ್ರಜ್ಞಾನ ಬೆಳೆದಂತೆ ಅದರಲ್ಲಿನ ಕ್ಯಾಮೆರಾ ತಾಂತ್ರಿಕತೆಯೂ ಗಮನಾರ್ಹವಾಗಿ ಬೆಳೆಯುತ್ತಿರುವುದು ನಮಗೆ ಗೊತ್ತು. ಛಾಯಾಚಿತ್ರದ ಗಾತ್ರವನ್ನು ಸೂಚಿಸುವ ಮೆಗಾಪಿಕ್ಸೆಲ್ ಸಾಮಥ್ರ್ಯವಂತೂ ಇಂದಿನ ಕ್ಯಾಮೆರಾಗಳಲ್ಲಿ ದಿನೇದಿನೇ ಹೆಚ್ಚುತ್ತಿದೆ. ಬಹುಕಾಲ 10-12 ಮೆಗಾಪಿಕ್ಸೆಲ್‍ಗಳ ಆಸುಪಾಸಿನಲ್ಲೇ ಇದ್ದ ಮೊಬೈಲ್ ಕ್ಯಾಮೆರಾ ಸಾಮಥ್ರ್ಯ 48 ಮೆಗಾಪಿಕ್ಸೆಲ್ ಮಟ್ಟ ತಲುಪಿ ಈಗಾಗಲೇ ಸ್ವಲ್ಪ ಸಮಯ ಆಗಿದೆ. 64 ಮೆಗಾಪಿಕ್ಸೆಲ್ ಸಾಮಥ್ರ್ಯದ ಕ್ಯಾಮೆರಾ ಇರುವ ಫೋನುಗಳು ಈಗಾಗಲೇ ಘೋಷಣೆಯಾಗಿದ್ದು, 100ಕ್ಕೂ ಹೆಚ್ಚು ಮೆಗಾಪಿಕ್ಸೆಲ್ ಸಾಮಥ್ರ್ಯದ ಕ್ಯಾಮೆರಾ ಫೋನುಗಳು ಮುಂದೆ ಮಾರುಕಟ್ಟೆಗೆ ಬರಲಿವೆಯಂತೆ.

ಫೇಸ್‍ಬುಕ್ ಬಳಗ

ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆ ಬಹಳ ಶ್ರೀಮಂತವಾದದ್ದು. ಇಂದಿಗೂ ಉಳಿದುಬಂದಿರುವ ಹಲವು ದೇವಸ್ಥಾನ ಹಾಗೂ ಸ್ಮಾರಕಗಳು ನಮಗೆ ಈ ಪರಂಪರೆಯನ್ನು ಪರಿಣಾಮಕಾರಿಯಾಗಿ ಪರಿಚಯಿಸುತ್ತವೆ. ಈ ಕುರಿತು ಹೆಚ್ಚು ತಿಳಿದುಕೊಳ್ಳುವ ಹಾಗೂ ಸಮಾನ ಆಸಕ್ತರೊಡನೆ ಚರ್ಚಿಸುವ ಅವಕಾಶವನ್ನು ‘ಏನ್‍ಶಿಯೆಂಟ್ ಟೆಂಪಲ್ಸ್ ಆಂಡ್ ಮಾನ್ಯುಮೆಂಟ್ಸ್ ಆಫ್ ಕರ್ನಾಟಕ’ ಎಂಬ ಫೇಸ್‍ಬುಕ್ ಗುಂಪು ನಮಗೆ ನೀಡುತ್ತಿದೆ. ಈಗಾಗಲೇ ಸುಮಾರು ಹತ್ತು ಸಾವಿರ ಸದಸ್ಯರಿರುವ ಈ ಗುಂಪಿನಲ್ಲಿ ನಾವು ಹಲವು ಪ್ರಾಚೀನ ದೇವಸ್ಥಾನ ಹಾಗೂ ಸ್ಮಾರಕಗಳ ಪರಿಚಯ ಮಾಡಿಕೊಳ್ಳಬಹುದು, ಛಾಯಾಚಿತ್ರ ಹಾಗೂ ಬರಹಗಳ ಮೂಲಕ ಅವುಗಳ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಬಹುದು.
ಹೆಚ್ಚಿನ ವಿವರಗಳಿಗೆ: tinyurl.com/fbtemples

ಜಾಲಜಗತ್ತು

ವಿದ್ಯುನ್ಮಾನ ಪುಸ್ತಕ, ಅಂದರೆ ಇ-ಬುಕ್‍ಗಳು, ಇದೀಗ ಬಹಳ ಜನಪ್ರಿಯವಾಗಿವೆ. ಆದರೆ ಇಂಗ್ಲಿಷಿನಲ್ಲಿ ಸಿಗುವಷ್ಟು ಸುಲಭವಾಗಿ, ಅಷ್ಟು ಹೆಚ್ಚಿನ ಪ್ರಮಾಣದಲ್ಲಿ ಕನ್ನಡದ ಇ-ಪುಸ್ತಕಗಳು ಇತ್ತೀಚಿನವರೆಗೂ ಸಿಗುತ್ತಿರಲಿಲ್ಲ. ಈಗ, ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಕನ್ನಡದ ಇ-ಪುಸ್ತಕಗಳ ಪ್ರಕಟಣೆ ಶುರುವಾದ ನಂತರ ಈ ಪರಿಸ್ಥಿತಿ ನಿಧಾನಕ್ಕೆ ಬದಲಾಗುತ್ತಿದೆ. ಕನ್ನಡ ಸಾರಸ್ವತ ಲೋಕದ ಅಗ್ರಗಣ್ಯರಲ್ಲೊಬ್ಬರಾದ ಡಿ.ವಿ.ಗುಂಡಪ್ಪನವರ ಅನೇಕ ಕೃತಿಗಳು ಇದೀಗ ಇ-ಪುಸ್ತಕ ರೂಪದಲ್ಲಿ ದೊರಕುವಂತಾಗಿರುವುದು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ. ಶ್ರೀರಂಗಪಟ್ಟಣದ ಶ್ರೀರಂಗ ಡಿಜಿಟಲ್ ಸಾಫ್ಟ್‍ವೇರ್ ಟೆಕ್ನಾಲಜೀಸ್ ಸಂಸ್ಥೆ ಈ ಕೃತಿಗಳನ್ನು ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿದೆ.
ಜಾಲತಾಣದ ಕೊಂಡಿ: sriranga.digital/dvg

ಹಿಂದಿನ ಸಮಾಚಾರ

ಕ್ಯಾಮೆರಾದೊಳಗೆ ಫಿಲಂ ರೋಲನ್ನು ಹಾಕಿ, ನಿರ್ದಿಷ್ಟ ಸಂಖ್ಯೆಯ ಫೋಟೋಗಳನ್ನು ಕ್ಲಿಕ್ಕಿಸಿದ ಮೇಲೆ ಅದನ್ನು ಡೆವೆಲಪ್ ಮಾಡಿಸಬೇಕಾಗಿದ್ದು ಹಿಂದಿನ ಕಾಲದ ಪರಿಸ್ಥಿತಿಯಾಗಿತ್ತು. ಆ ಕಾಲದಲ್ಲೂ ಥಟ್ಟನೆ ಫೋಟೋ ಪಡೆಯುವುದನ್ನು ಸಾಧ್ಯವಾಗಿಸಿದ್ದು ಪೋಲರಾಯ್ಡ್ ಕ್ಯಾಮೆರಾದ ಹೆಗ್ಗಳಿಕೆ. ಫೋಟೋ ಕ್ಲಿಕ್ಕಿಸಿದ ಒಂದು ನಿಮಿಷದೊಳಗೆ ಅದರ ಮುದ್ರಿತ ಪ್ರತಿಯನ್ನು ಕ್ಯಾಮೆರಾದಿಂದಲೇ ಪಡೆಯುವುದನ್ನು ಸಾಧ್ಯವಾಗಿಸಿದ ಮೊತ್ತಮೊದಲ ಪೋಲರಾಯ್ಡ್ ಕ್ಯಾಮೆರಾ ಮಾರುಕಟ್ಟೆಗೆ ಬಂದಿದ್ದು 1948ರ ನವೆಂಬರ್ 28ರಂದು. ಈ ಕ್ಯಾಮೆರಾ ರೂಪಿಸಿದ್ದು ಎಡ್ವಿನ್ ಲ್ಯಾಂಡ್ ಎಂಬ ತಂತ್ರಜ್ಞನ ಸಾಧನೆ.

Leave a Reply

Your email address will not be published.