ಇ-ಜ್ಞಾನ

ಟೆಕ್ ಸುದ್ದಿ

ತಂತ್ರಾಂಶಗಳನ್ನು ನಮ್ಮ ಕಂಪ್ಯೂಟರಿನಲ್ಲಿ ಇನ್‍ಸ್ಟಾಲ್ ಮಾಡಿಕೊಳ್ಳುವ ಬದಲು ಅಂತರಜಾಲದ ಮೂಲಕವೇ ಬಳಸುವ ಕ್ಲೌಡ್ ಕಂಪ್ಯೂಟಿಂಗ್ ಪರಿಕಲ್ಪನೆ ಸಾಕಷ್ಟು ಹಳೆಯದು. ಇದನ್ನು ಮನರಂಜನೆಗೂ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಕಂಪ್ಯೂಟರ್ ಗೇಮ್‍ಗಳನ್ನು ಕ್ಲೌಡ್ ಮೂಲಕ ಲಭ್ಯವಾಗಿಸುವ, ಯಾವುದೇ ಕಂಪ್ಯೂಟರ್ ಅಥವಾ ಮೊಬೈಲ್ ಬಳಸಿ ಅವನ್ನು ಸುಲಲಿತವಾಗಿ ಬಳಸುವಂತೆ ಮಾಡುವ ಇಂತಹ ಪ್ರಯತ್ನಗಳ ಜೊತೆಗೆ ಗೂಗಲ್ ಕೂಡ ಕೈಜೋಡಿಸಿರುವುದು ವಿಶೇಷ. ‘ಸ್ಟೇಡಿಯಾ’ ಎಂಬ ಹೆಸರಿನ ಹೊಸ ಗೇಮ್ ಸ್ಟ್ರೀಮಿಂಗ್ ಸೇವೆಯನ್ನು ಅದು ಈಗಷ್ಟೇ ಪರಿಚಯಿಸಿದೆ.

ಟೆಕ್ ಪದ

ಸಾಫ್ಟ್‍ವೇರ್‍ನಿಂದ (ತಂತ್ರಾಂಶ) ಎಷ್ಟು ಉಪಯೋಗವಿದೆಯೋ ಅಷ್ಟೇ ಪ್ರಮಾಣದ ತೊಂದರೆಯೂ ಆಗಬಲ್ಲದು. ಒಳ್ಳೆಯ ಉದ್ದೇಶಕ್ಕೆ ತಂತ್ರಾಂಶಗಳಿರುವಂತೆ ಕೆಟ್ಟ ಕೆಲಸಗಳಿಗಾಗಿಯೂ ತಂತ್ರಾಂಶಗಳು ರೂಪುಗೊಂಡಿರುವುದು ಇದಕ್ಕೆ ಕಾರಣ. ಇಂತಹ ತಂತ್ರಾಂಶಗಳನ್ನು ಮಾಲ್‍ವೇರ್‍ಗಳೆಂದು ಕರೆಯುತ್ತಾರೆ. ಇದು malicious software ಎನ್ನುವುದರ ಹ್ರಸ್ವರೂಪ. ಮಾಲ್‍ವೇರ್ ಅನ್ನು ನಾವು ಕನ್ನಡದಲ್ಲಿ ಕುತಂತ್ರಾಂಶ ಎಂದು ಕರೆಯಬಹುದು. ನಾವು ಆಗಿಂದಾಗ್ಗೆ ಕೇಳುವ ಹೆಸರುಗಳಾದ ವೈರಸ್, ಟ್ರೋಜನ್, ಸ್ಪೈವೇರ್, ಆಡ್‍ವೇರ್ ಮುಂತಾದವೆಲ್ಲ ಕುತಂತ್ರಾಂಶಗಳದೇ ಉದಾಹರಣೆಗಳು.

ಮೊಬೈಲ್ ಜಗತ್ತು

ಸ್ಮಾರ್ಟ್‍ಫೋನಿನಲ್ಲಿರುವ ಆಪ್‍ಗಳು ತಮ್ಮ ಕೆಲಸ ಮಾಡಲು ನಮ್ಮ ಫೋನಿನ ಹಲವು ಸವಲತ್ತುಗಳನ್ನು ಬಳಸಿಕೊಳ್ಳುತ್ತವೆ: ಕ್ಯಾಮೆರಾ ಉಪಯೋಗಿಸುವುದು, ಕಡತಗಳನ್ನು ತೆರೆಯುವುದು, ಮೆಸೇಜುಗಳನ್ನು ಓದುವುದು – ಹೀಗೆ. ಇಂತಹ ಪ್ರತಿಯೊಂದು ಕೆಲಸಕ್ಕೂ ಅವು ನಮ್ಮ ಅನುಮತಿ (ಪರ್ಮಿಶನ್) ಪಡೆದುಕೊಳ್ಳುವುದನ್ನು ಮೊಬೈಲಿನ ಕಾರ್ಯಾಚರಣ ವ್ಯವಸ್ಥೆ ಕಡ್ಡಾಯಗೊಳಿಸಿರುತ್ತದೆ. ಯಾವುದೇ ಆಪ್ ಇನ್‍ಸ್ಟಾಲ್ ಮಾಡಿಕೊಳ್ಳುವಾಗ ಅದು ಇಂತಹ ಯಾವೆಲ್ಲ ಕೆಲಸಕ್ಕೆ ಅನುಮತಿ ಕೇಳುತ್ತಿದೆ ಎಂದು ಗಮನಿಸಿ, ಅಗತ್ಯವಾದುದಕ್ಕೆ ಮಾತ್ರ ಅನುಮತಿ ನೀಡುವುದು ಅಪೇಕ್ಷಣೀಯ.

ಫೇಸ್‍ಬುಕ್ ಬಳಗ

ಪುಸ್ತಕ ಓದುವವರು ಕಡಿಮೆಯಾಗುತ್ತಿದ್ದಾರೆ ಎನ್ನುವ ಮಾತುಗಳ ನಡುವೆ ಓದಿನ ಹವ್ಯಾಸವನ್ನು ಪ್ರೋತ್ಸಾಹಿಸುವ ಕೆಲಸಗಳೂ ನಡೆಯುತ್ತಿರುವುದು ಖುಷಿಯ ಸಂಗತಿ. ‘ನಾನೊಬ್ಬ ಪುಸ್ತಕ ಪ್ರೇಮಿ’ ಎನ್ನುವ ಫೇಸ್ ಬುಕ್ ಗುಂಪು ಇಂತಹ ಕೆಲಸಕ್ಕೊಂದು ಉತ್ತಮ ವೇದಿಕೆ ಒದಗಿಸಿದೆ. ಸದಸ್ಯರು ಓದಿದ ಕೃತಿಗಳ ಪರಿಚಯ-ವಿಮರ್ಶೆ ಮಾತ್ರವಲ್ಲದೆ ಹೊಸ ಪುಸ್ತಕಗಳ ಬಗ್ಗೆ ಮಾಹಿತಿ, ಪುಸ್ತಕ ಲೋಕದ ಹೊಸ ಸುದ್ದಿ ಮುಂತಾದವನ್ನೂ ನಾವು ಈ ಬಳಗದಲ್ಲಿ ಪಡೆಯಬಹುದು. ಇಲ್ಲಿ ಈಗಾಗಲೇ 14 ಸಾವಿರಕ್ಕೂ ಹೆಚ್ಚು ಸದಸ್ಯರಿರುವುದು ಗಮನಾರ್ಹ.
ಹೆಚ್ಚಿನ ವಿವರಗಳಿಗೆ: facebook.com/groups/nanobbapustakapremi

ಜಾಲಜಗತ್ತು

ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡದ ಬಳಕೆ ಈಗ ಬಹುಪಾಲು ಯುನಿಕೋಡ್ ಮೂಲಕವೇ ಆಗುತ್ತಿದೆಯಾದರೂ ಹಿಂದಿನ ಆಸ್ಕಿ (ASCII) ಮಾನಕದಲ್ಲಿ ಉಳಿಸಿಟ್ಟ ಪಠ್ಯ (ಉದಾ: ಹಿಂದೆ ನುಡಿ-ಬರಹ ತಂತ್ರಾಂಶಗಳಲ್ಲಿ ರೂಪಿಸಿದ್ದು) ಇನ್ನೂ ಅಲ್ಲಲ್ಲಿ ಉಳಿದುಕೊಂಡಿದೆ. ಮುದ್ರಣದ ಅನುಕೂಲಕ್ಕೆಂದೋ ಅಂತರಜಾಲದಲ್ಲಿ ಹಂಚಿಕೊಳ್ಳಲೆಂದೋ ನಮ್ಮ ಪಠ್ಯವನ್ನು ಒಂದರಿಂದ ಇನ್ನೊಂದು ಮಾನಕಕ್ಕೆ ಬದಲಿಸಿಕೊಳ್ಳಲು ‘ಸಂಕ’ ತಂತ್ರಾಂಶ ಸಹಾಯಮಾಡುತ್ತದೆ. ಪ್ರತ್ಯೇಕ ತಂತ್ರಾಂಶ ಇನ್‍ಸ್ಟಾಲ್ ಮಾಡಬೇಕಾದ ಅಗತ್ಯವಿಲ್ಲದೆ ಇದನ್ನು ಜಾಲತಾಣದ ಮೂಲಕವೇ ಬಳಸುವುದು ಸಾಧ್ಯ. ಜಾಲತಾಣದ ಕೊಂಡಿ: aravindavk.in/sank

ಹಿಂದಿನ ಸಮಾಚಾರ

ಭೌತಿಕ ಪುಸ್ತಕಗಳಿಗಿರುವಷ್ಟೇ ಜನಪ್ರಿಯತೆಯನ್ನು ವಿದ್ಯುನ್ಮಾನ ಪುಸ್ತಕಗಳೂ (ಇ-ಬುಕ್) ಪಡೆದುಕೊಳ್ಳುತ್ತಿರುವುದು ನಮಗೆ ಗೊತ್ತು. ಇಂತಹ ಇ-ಪುಸ್ತಕಗಳನ್ನು ದೊಡ್ಡ ಸಂಖ್ಯೆಯಲ್ಲಿ ಒದಗಿಸುವ ಗ್ರಂಥಾಲಯಗಳೂ (ಡಿಜಿಟಲ್ ಲೈಬ್ರರಿ) ಈಗ ಅಸ್ತಿತ್ವದಲ್ಲಿವೆ. ಇಂತಹ ಗ್ರಂಥಾಲಯಗಳ ಪೈಕಿ ಮೊತ್ತಮೊದಲನೆಯದು ಎಂದು ಹೆಸರಾಗಿರುವ ‘ಪ್ರಾಜೆಕ್ಟ್ ಗುಟನ್‍ಬರ್ಗ್’ ಪ್ರಾರಂಭವಾಗಿ ಇದೇ ಡಿಸೆಂಬರ್ 1ಕ್ಕೆ 48 ವರ್ಷ. ಅಮೆರಿಕಾದ ಇಲಿನಾಯ್ಸ್ ವಿಶ್ವವಿದ್ಯಾನಿಲಯದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದ ಮೈಕಲ್ ಹಾರ್ಟ್ ಎಂಬ ತಂತ್ರಜ್ಞನನ್ನು ಇ-ಪುಸ್ತಕಗಳ ಪಿತಾಮಹನೆಂದು ಗುರುತಿಸಲಾಗುತ್ತದೆ.

Leave a Reply

Your email address will not be published.