ಇ-ಜ್ಞಾನ

ವಿಜ್ಞಾನ-ತಂತ್ರಜ್ಞಾನ ಜಗತ್ತಿನಲ್ಲಿ ಪ್ರತಿದಿನವೂ ಹೊಸತನದ ಹಬ್ಬ. ವರ್ಷದ ಹನ್ನೆರಡೂ ತಿಂಗಳು ಇಲ್ಲಿ ಏನಾದರೂ ನಡೆಯುತ್ತಲೇ ಇರುತ್ತದೆ. ಈ ತಿಂಗಳು ಇಲ್ಲೇನು ನಡೆಯುತ್ತಿದೆ, ಹಿಂದೆ ಇದೇ ಸಮಯದಲ್ಲಿ ಏನೆಲ್ಲ ನಡೆದಿತ್ತು? ಅದನ್ನೆಲ್ಲ ನಿಮಗೆ ಸಂಕ್ಷಿಪ್ತವಾಗಿ ಪರಿಚಯಿಸುವ ಪ್ರಯತ್ನ, ಈ ಅಂಕಣದಲ್ಲಿ ಈ ತಿಂಗಳಿನಿಂದ ಪ್ರಾರಂಭವಾಗುತ್ತಿದೆ.

20ನೇ ವರ್ಷಕ್ಕೆ ವಿಕಿಪೀಡಿಯ

ಸರ್ಚ್ ಇಂಜಿನ್ನುಗಳಲ್ಲಿ ಯಾವ ವಿಷಯದ ಬಗ್ಗೆ ಮಾಹಿತಿ ಹುಡುಕಲು ಹೊರಟರೂ ವಿಕಿಪೀಡಿಯದ ಪುಟಗಳು ನಮ್ಮ ಕಣ್ಣಿಗೆ ಬೀಳುತ್ತವೆ. ತನ್ನನ್ನು ಒಂದು ಸ್ವತಂತ್ರ (‘ಫ್ರೀ’) ವಿಶ್ವಕೋಶವೆಂದು ಕರೆದುಕೊಳ್ಳುವ ಈ ತಾಣ ಇದೇ ಜನೆವರಿ 15ಕ್ಕೆ ತನ್ನ ಇಪ್ಪತ್ತನೇ ವರ್ಷಕ್ಕೆ ಕಾಲಿಡುತ್ತಿದೆ.

ಯಾರು ಬೇಕಾದರೂ ತಮ್ಮ ಆಸಕ್ತಿಯ ವಿಷಯಗಳ ಬಗ್ಗೆ ಮಾಹಿತಿ ಸೇರಿಸಲು ಅನುವು ಮಾಡಿಕೊಡುವುದು ವಿಕಿಪೀಡಿಯದ ವೈಶಿಷ್ಟ್ಯ. ಮಾಹಿತಿ ಸೇರಿಸುವುದಷ್ಟೇ ಅಲ್ಲ, ಬೇರೆಯವರು ಸೇರಿಸಿದ ಮಾಹಿತಿ ತಪ್ಪು ಅಥವಾ ಅಪೂರ್ಣ ಎನ್ನಿಸಿದರೆ ಅದನ್ನು ಸರಿಪಡಿಸುವ ಅವಕಾಶವೂ ಇದೆ.

ಜಿಮ್ಮಿ ವೇಲ್ಸ್ ಹಾಗೂ ಲ್ಯಾರಿ ಸ್ಯಾಂಗರ್ ಎನ್ನುವವರು ರೂಪಿಸಿದ ಈ ತಾಣ ಇದೀಗ ವಿಕಿಮೀಡಿಯ ಫೌಂಡೇಶನ್ ಎಂಬ ಸ್ವಯಂಸೇವಾ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತದೆ. ಪ್ರಪಂಚದ 300ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುವುದು, ಒಟ್ಟು ಐದು ಕೋಟಿಗೂ ಹೆಚ್ಚು ಬರಹಗಳ ಸಂಗ್ರಹವಿರುವುದು ಇದರ ಹೆಗ್ಗಳಿಕೆ.

ಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ ವಿಕಿಪೀಡಿಯದ ಕನ್ನಡ ಹಾಗೂ ತುಳು ಆವೃತ್ತಿಗಳೂ ಇವೆ. ಮಾಹಿತಿಪೂರ್ಣವಾದ, ವಿಶ್ವಕೋಶ ಶೈಲಿಯ ಬರಹಗಳನ್ನು ಸೇರಿಸುವ ಮೂಲಕ ನಾವು ಈ ತಾಣಗಳ ಬೆಳವಣಿಗೆಗೆ ಸಹಾಯ ಮಾಡಬಹುದು. ಕತೆ, ಕವನ, ವೈಯಕ್ತಿಕ ಅಭಿಪ್ರಾಯ ಮುಂತಾದವನ್ನು ವಿಕಿಪೀಡಿಯದಲ್ಲಿ ಹಾಕುವಂತಿಲ್ಲ.
ಹೆಚ್ಚಿನ ಮಾಹಿತಿಗೆ: kn.wikipedia.org(ಕನ್ನಡ) tcy.wikipedia.org(ತುಳು)

ಶಿಕ್ಷಣಕ್ಕಾಗಿ ಒಂದು ದಿನ

ಪ್ರತಿವರ್ಷ ಜನೆವರಿ 24ನೇ ದಿನಾಂಕವನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಶಿಕ್ಷಣ ದಿವಸವನ್ನಾಗಿ International Day of Education)ಆಚರಿಸುತ್ತದೆ. ಶಾಂತಿ ಹಾಗೂ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರವನ್ನು ಗುರುತಿಸಿ ಗೌರವಿಸುವುದು ಈ ಜಾಗತಿಕ ದಿನಾಚರಣೆಯ ಉದ್ದೇಶ.

ಶಿಕ್ಷಣ ಮತ್ತು ಅದರಿಂದ ಲಭಿಸುವ ಕಲಿಕೆಯನ್ನು ನವೀಕರಿಸಬಹುದಾದ ಸಂಪನ್ಮೂಲಗಳಲ್ಲೇ ಅತ್ಯಮೂಲ್ಯವೆಂದು ಗುರುತಿಸುವುದು, ಸಮಾಜದ ಒಳಿತಿಗಾಗಿ ಹಾಗೂ ಮೂಲಭೂತ ಹಕ್ಕಿನ ರೂಪದಲ್ಲಿ ಶಿಕ್ಷಣದ ಮಹತ್ವವನ್ನು ಮತ್ತೆ ಒತ್ತಿಹೇಳುವುದು ಈ ವರ್ಷದ ಆಚರಣೆಯ ವಿಷಯ.

ಸಾಂಪ್ರದಾಯಿಕ ರೂಪದಲ್ಲಿ ಮಾತ್ರವಲ್ಲ, ಹೊಸಬಗೆಯ ಶಿಕ್ಷಣದ ಬಗೆಗೂ ಇದೀಗ ಆಸಕ್ತಿ ಮೂಡುತ್ತಿದೆ. ಈ ಆಸಕ್ತಿಯ ಪರಿಣಾಮವಾಗಿ ಶಿಕ್ಷಣಸಂಸ್ಥೆಗಳ ವ್ಯಾಪ್ತಿಯಿಂದ ಹೊರಗಿರುವ ಆಸಕ್ತರಿಗೂ ಶಿಕ್ಷಣ ನೀಡುವ ವಿಧಾನಗಳು ರೂಪುಗೊಳ್ಳುತ್ತಿವೆ. ಶಿಕ್ಷಣ ನೀಡುವ ಮಾಧ್ಯಮವನ್ನಾಗಿ ವಿಶ್ವವ್ಯಾಪಿ ಜಾಲವನ್ನು ಬಳಸಿಕೊಳ್ಳುವುದು ಇಂತಹ ಪ್ರಯತ್ನಗಳ ಭಾಗವೇ!

ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರುವುದು ಹಳೆಯ ಪರಿಕಲ್ಪನೆ. ಉದ್ಯೋಗಕ್ಕೆ ಸೇರಿದ ನಂತರವೂ ಕಲಿಯುತ್ತಲೇ ಇರಬೇಕಾದ್ದು ಇಂದಿನ ಅಗತ್ಯ. ಉದ್ಯೋಗಿಗಳಿಗೆ ಅಗತ್ಯ ಕೌಶಲಗಳನ್ನು ಮತ್ತೆ ಕಲಿಸುವ ಮತ್ತು ಬೇಕಾದ ಕಡೆ ಉನ್ನತೀಕರಿಸುವ (reskill and upskill) ಉದ್ದೇಶದಿಂದ ಭಾರತೀಯ ಐಟಿ ಉದ್ದಿಮೆಯ ಪ್ರಾತಿನಿಧಿಕ ಒಕ್ಕೂಟ ನ್ಯಾಸ್ ಕಾಮ್ ‘ಫ್ಯೂಚರ್ ಸ್ಕಿಲ್ಸ್’ ಎಂಬ ಕಾರ್ಯಕ್ರಮವನ್ನು ರೂಪಿಸಿದೆ.
ಹೆಚ್ಚಿನ ಮಾಹಿತಿಗೆ: en.unesco.org/commemorations/educationday, futureskills.nasscom.in

ಕನ್ನಡಕ್ಕೂ ಬಂದ ಕೋರಾ

ನಾವೆಲ್ಲ ವಿಶ್ವವ್ಯಾಪಿ ಜಾಲದಲ್ಲಿ ಹೆಚ್ಚಾಗಿ ಬಳಸುವುದು ಸಮಾಜ ಜಾಲಗಳನ್ನು (ಸೋಶಿಯಲ್ ನೆಟ್‍ವರ್ಕ್). ಫೋಟೋ-ವೀಡಿಯೊ ಹಂಚಿಕೊಳ್ಳಲು, ನಮ್ಮ ಅನಿಸಿಕೆಗಳನ್ನು-ಚಟುವಟಿಕೆಗಳನ್ನು ಪ್ರಕಟಿಸಲು ನಾವು ಈ ತಾಣಗಳನ್ನು ಬಳಸುತ್ತೇವೆ. ಆ ದೃಷ್ಟಿಯಿಂದ ಈ ತಾಣಗಳನ್ನೆಲ್ಲ ಸಾರ್ವತ್ರಿಕ ಉದ್ದೇಶದವು (ಜನರಲ್ ಪರ್ಪಸ್).

ಇಂತಹ ತಾಣಗಳ ಜೊತೆಯಲ್ಲಿ ನಿರ್ದಿಷ್ಟ ಉದ್ದೇಶದ ತಾಣಗಳೂ ಬೇಕಲ್ಲ, ಅಂತಹ ತಾಣಗಳಲ್ಲಿ ಕೋರಾ (Quora) ಒಂದು. ನಮ್ಮ ಪ್ರಶ್ನೆಗಳನ್ನು ಸಮುದಾಯದ ಮುಂದೆ ಕೇಳಲು, ಅವಕ್ಕೆ ಉತ್ತರ ಪಡೆದುಕೊಳ್ಳಲು, ಸಮುದಾಯದ ಪ್ರಶ್ನೆಗಳನ್ನೂ ಉತ್ತರಿಸಲು ಈ ತಾಣ ನಮಗೆ ಸಹಾಯ ಮಾಡುತ್ತದೆ.
“ಜಗತ್ತಿನ ಜ್ಞಾನವನ್ನು ಹಂಚಿಕೊಳ್ಳುವುದು ಮತ್ತು ಬೆಳೆಸುವುದು” ಕೋರಾ ತಾಣದ ಉದ್ದೇಶ. ವಿವಿಧ ವಿಷಯಗಳ ಬಗ್ಗೆ ತಿಳಿದುಕೊಂಡಿರುವ ಹಾಗೂ ಆ ಮಾಹಿತಿಯ ಅಗತ್ಯವಿರುವ ಬಳಕೆದಾರರನ್ನು ಒಟ್ಟಿಗೆ ತರುವ ಕೆಲಸ ತನ್ನದು ಎಂದು ಈ ತಾಣ ಹೇಳಿಕೊಳ್ಳುತ್ತದೆ.

ಫೇಸ್‍ಬುಕ್‍ನ ಮಾಜಿ ಮುಖ್ಯ ತಾಂತ್ರಿಕ ಅಧಿಕಾರಿ ಆಡಮ್ ಡಿ’ಏಂಜೆಲೋ 2009ರಲ್ಲಿ ಪ್ರಾರಂಭಿಸಿದ ಈ ತಾಣವನ್ನು ಪ್ರತಿ ತಿಂಗಳೂ ಸುಮಾರು ಮೂರು ಕೋಟಿ ಬಳಕೆದಾರರು ಜಗತ್ತಿನ ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಬಳಸುತ್ತಿದ್ದಾರಂತೆ. ಈ ತಾಣದ ಕನ್ನಡ ಆವೃತ್ತಿ ಇತ್ತೀಚೆಗಷ್ಟೇ ಪ್ರಾರಂಭವಾಗಿದೆ. ಜಾಲತಾಣ ಅಥವಾ ಮೊಬೈಲ್ ಆಪ್ ಮೂಲಕ ಇದನ್ನು ಬಳಸುವುದು ಸಾಧ್ಯ.
ಹೆಚ್ಚಿನ ಮಾಹಿತಿಗೆ: kn.quora.com

Leave a Reply

Your email address will not be published.