ಇ-ಜ್ಞಾನ

ಟಿ.ಜಿ.ಶ್ರೀನಿಧಿ

ವ್ಯಾಲೆಂಟೈನ್ ವಿಶೇಷ

ಫೆಬ್ರುವರಿ 14, ವ್ಯಾಲೆಂಟೈನ್ ದಿನ. ಆ ದಿನದ ವೈಶಿಷ್ಟ್ಯ ಇಷ್ಟಕ್ಕೇ ಮುಗಿಯುವುದಿಲ್ಲ ಎನ್ನುವುದು ವಿಶೇಷ. ಏಕೆಂದರೆ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಹಲವು ಪ್ರಮುಖ ಘಟನೆಗಳಿಗೂ ಈ ದಿನ ಸಾಕ್ಷಿಯಾಗಿದೆ.

ಇತಿಹಾಸದ ಪ್ರಪ್ರಥಮ ಸಂಪೂರ್ಣ ಇಲೆಕ್ಟ್ರಾನಿಕ್ ಕಂಪ್ಯೂಟರ್ ಎಂದು ಹೆಸರಾಗಿರುವ ‘ಇನಿಯಾಕ್’ (ಇಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟಿಗ್ರೇಟರ್ ಆಂಡ್ ಕಂಪ್ಯೂಟರ್) ಅನಾವರಣವಾಗಿದ್ದು 1946ರ ಫೆಬ್ರವರಿ 14ರಂದು. ಯಾಂತ್ರಿಕ (ಮೆಕ್ಯಾನಿಕಲ್) ಕಂಪ್ಯೂಟರುಗಳಲ್ಲಿ ಬಳಕೆಯಾಗುತ್ತಿದ್ದ ಗಿಯರ್- ಲಿವರ್ ಇತ್ಯಾದಿಗಳ ಬದಲು ವ್ಯಾಕ್ಯೂಮ್ ಟ್ಯೂಬ್‍ನಂತಹ ವಿದ್ಯುನ್ಮಾನ ಸಾಧನಗಳನ್ನು ಬಳಸಿದ್ದು, ಟೆಕ್ ಜಗತ್ತಿನ ಬೆಳವಣಿಗೆಗೆ ನಾಂದಿಹಾಡಿದ್ದು ಈ ಕಂಪ್ಯೂಟರಿನ ಹೆಚ್ಚುಗಾರಿಕೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಐಬಿಎಂ ಸಂಸ್ಥೆಗೆ ನಾಮಕರಣವಾಗಿದ್ದೂ ಇದೇ ದಿನ. 1911ನೇ ಇಸವಿಯಲ್ಲಿ ಪ್ರಾರಂಭವಾಗಿದ್ದ ‘ಕಂಪ್ಯೂಟಿಂಗ್‍ಟ್ಯಾ ಬ್ಯುಲೇಟಿಂಗ್-ರೆಕಾರ್ಡಿಂಗ್ ಕಂಪನಿ’ಯ ಹೆಸರನ್ನು 1924ರ ಫೆಬ್ರುವರಿ 14ರಂದು ‘ಇಂಟರ್‍ನ್ಯಾಶನಲ್ ಬಿಸಿನೆಸ್ ಮಶಿನ್ಸ್’ ಎಂದು ಬದಲಿಸಲಾಯಿತು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ದೂರವಾಣಿಯ ಕೊಡುಗೆ ಮಹತ್ವದ್ದು. ದೂರವಾಣಿಯ ಆವಿಷ್ಕಾರದ ಪೇಟೆಂಟ್‍ಗಾಗಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ಹಾಗೂ ಎಲಿಶಾ ಗ್ರೇ ಎಂಬ ಇಬ್ಬರು ವ್ಯಕ್ತಿಗಳು ಒಂದೇ ದಿನ ಅರ್ಜಿ ಸಲ್ಲಿಸಿದ ವಿಲಕ್ಷಣ ಘಟನೆ ನಡೆದದ್ದೂ ಫೆಬ್ರವರಿ 14ರಂದೇ. 1876ರಲ್ಲಿ ಈ ಅರ್ಜಿ ಸಲ್ಲಿಸಿದ ಇವರಿಬ್ಬರ ಪೈಕಿ ದೂರವಾಣಿಯನ್ನು ಮೊದಲು ಆವಿಷ್ಕರಿಸಿದ್ದು ಯಾರು ಎನ್ನುವುದು ಇಂದಿಗೂ ಚರ್ಚಾರ್ಹ ವಿಷಯ.

ಜಿಪಿಎಸ್‍ಗೆ ಸ್ವದೇಶಿ ಪರ್ಯಾಯ

ಅಪರಿಚಿತ ಸ್ಥಳಗಳಿಗೆ ಪ್ರಯಾಣಿಸುವಾಗ, ಇದ್ದ ಜಾಗಕ್ಕೆ ಟ್ಯಾಕ್ಸಿ ಕರೆಸುವಾಗ, ಊಟ ತಿಂಡಿಯ ಹೋಮ್ ಡೆಲಿವರಿ ಬೇಕಾದಾಗ ಮೊಬೈಲಿನಲ್ಲಿರುವ ಭೂಪಟ, ಅಂದರೆ ಮ್ಯಾಪ್ ಸೌಲಭ್ಯವನ್ನು ಬಳಸಿಕೊಳ್ಳುವುದು ನಮಗೆಲ್ಲ ಚೆನ್ನಾಗಿ ಅಭ್ಯಾಸವಾಗಿದೆ. ಬಹಳ ಜನಪ್ರಿಯವಾಗಿರುವ ‘ಗೂಗಲ್ ಮ್ಯಾಪ್ಸ್’ ಸೇರಿದಂತೆ ಈ ಸೌಲಭ್ಯ ನೀಡುವ ಬಹುತೇಕ ವ್ಯವಸ್ಥೆಗಳು ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (ಜಿಪಿಎಸ್) ತಂತ್ರಜ್ಞಾನವನ್ನು ಬಳಸುತ್ತವೆ.

ನಮ್ಮ ಮೊಬೈಲ್ ಫೋನ್ ಇರುವ ಜಾಗವನ್ನು ಅದರಲ್ಲಿರುವ ಜಿಪಿಎಸ್ ರಿಸೀವರ್ ಮೂಲಕ ನಿಖರವಾಗಿ ಗುರುತಿಸಿ ಆ ಮೂಲಕ ವಿಭಿನ್ನ ಸೌಲಭ್ಯಗಳನ್ನು ಪಡೆದುಕೊಳ್ಳಲು ನೆರವಾಗುವುದು ಈ ತಂತ್ರಜ್ಞಾನದ ಹೆಚ್ಚುಗಾರಿಕೆ. ಈ ಕೆಲಸಕ್ಕಾಗಿ ಉಪಗ್ರಹಗಳ ಒಂದು ಜಾಲವೇ ಬಳಕೆಯಾಗುತ್ತದೆ. ಈ ಉಪಗ್ರಹಗಳು ಬಿತ್ತರಿಸುವ ಸಂಕೇತವನ್ನು ಪಡೆದುಕೊಳ್ಳುವ ಜಿಪಿಎಸ್ ರಿಸೀವರ್‍ಗಳು ತಾವೆಲ್ಲಿದ್ದೇವೆ ಎಂದು ಕಂಡುಕೊಳ್ಳುತ್ತವೆ.

ಪ್ರಸ್ತುತ ಈ ಸೌಲಭ್ಯ ಒದಗಿಸಲಿಕ್ಕಾಗಿ ಕೆಲಸಮಾಡುತ್ತಿರುವ ಉಪಗ್ರಹಗಳನ್ನು ಅಮೆರಿಕಾ ಸರಕಾರ ನಿರ್ವಹಿಸುತ್ತದೆ. ಹೀಗಾಗಿ ಜಿಪಿಎಸ್ ಬಳಕೆದಾರರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅಮೆರಿಕಾದ ಮೇಲೆಯೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಈ ಅವಲಂಬನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಚೀನಾ, ರಷ್ಯಾ ಮಾತ್ರವಲ್ಲದೆ ನಮ್ಮ ದೇಶದಲ್ಲೂ ಕೆಲಸ ನಡೆದಿರುವುದು ವಿಶೇಷ.

ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ (IRNSS) ಎಂಬ ಹೆಸರಿನ ನಮ್ಮದೇ ಉಪಗ್ರಹ ಜಾಲವನ್ನು ಬಳಸಿಕೊಂಡು ಜಿಪಿಎಸ್‍ಗೆ ಪರ್ಯಾಯ ವ್ಯವಸ್ಥೆ ರೂಪಿಸಲಾಗಿದೆ. ನ್ಯಾವಿಗೇಶನ್ ವಿತ್ ಇಂಡಿಯನ್ ಕಾನ್ಸ್‍ಟಲೇಶನ್ (ನಾವಿಕ್) ಎಂಬ ಹೆಸರಿನ ಈ ತಂತ್ರಜ್ಞಾನ ಬಳಸುವ ಮೊಬೈಲ್
ಪ್ರಾಸೆಸರ್‍ಗಳನ್ನು ಕ್ವಾಲ್‍ಕಾಮ್ ಸಂಸ್ಥೆ ಇತ್ತೀಚೆಗಷ್ಠೆ ಪರಿಚಯಿಸಿದೆ. ಜಿಪಿಎಸ್ ಬದಲು ನಾವಿಕ್ ಬಳಸುವ ಮೊಬೈಲುಗಳು ಇಷ್ಟರಲ್ಲೇ ಮಾರುಕಟ್ಟೆಗೆ ಬರಲಿವೆ ಎನ್ನುವುದು ಸದ್ಯದ ನಿರೀಕ್ಷೆ.

ಹ್ಯಾಪಿ ಬರ್ತ್‍ಡೇ ಫೇಸ್‍ಬುಕ್!

ಸಮಾಜಜಾಲ, ಅಂದರೆ ಸೋಶಿಯಲ್ ನೆಟ್‍ವರ್ಕ್ ಎಂದತಕ್ಷಣ ನಮಗೆ ನೆನಪಾಗುವ ಹೆಸರು ಫೇಸ್‍ಬುಕ್‍ನದು. ಈ ತಾಣದ ಜನಪ್ರಿಯತೆ ಎಷ್ಟು ಅಗಾಧವೆಂದರೆ 2.45 ಬಿಲಿಯನ್ ಬಳಕೆದಾರರು ಅದನ್ನು ಉಪಯೋಗಿಸುತ್ತಿದ್ದಾರೆ. ಈ ಸಂಖ್ಯೆ ಚೀನಾ ಮತ್ತು ಭಾರತದ ಜನಸಂಖ್ಯೆಗಳ ಒಟ್ಟು ಮೊತ್ತಕ್ಕಿಂತ ಸ್ವಲ್ಪವೇ ಕಡಿಮೆ, ಅಷ್ಠೆ!

ಈ ತಾಣ ಶುರುವಾಗಿದ್ದು 2004ರ ಫೆಬ್ರುವರಿ 4ರಂದು. ಆಗ ಹಾರ್ವರ್ಡ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಮಾರ್ಕ್ ಜುಕರ್‍ಬರ್ಗ್, ತನ್ನ ಗೆಳೆಯರಾದ ಎಡ್ವರ್ಡೋ ಸವೆರಿನ್, ಆಂಡ್ರ್ಯೂ ಮೆಕ್‍ಕಲ್ಲಮ್, ಡಸ್ಟಿನ್ ಮಾಸ್ಕೋವಿಟ್ಸ್ ಮತ್ತು ಕ್ರಿಸ್ ಹ್ಯೂಸ್ ಜೊತೆಗೂಡಿ ಪ್ರಾರಂಭಿಸಿದ ಈ ತಾಣದ ಹೆಸರು ಮೊದಲಿಗೆ ‘ದ ಫೇಸ್‍ಬುಕ್’ ಎಂದಿತ್ತು.

ಬಳಕೆದಾರರ ನಡುವೆ ಬಹಳ ಜನಪ್ರಿಯತೆ ಗಳಿಸಿಕೊಂಡಿರುವ ಫೇಸ್‍ಬುಕ್, ಪ್ರಾರಂಭದಿಂದಲೂ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಬಂದಿದೆ. ಬೇರೆ ವಿಷಯಗಳೆಲ್ಲ ಹಾಗಿರಲಿ, ಫೇಸ್‍ಬುಕ್ ಪರಿಕಲ್ಪನೆಯೇ ಇತರರಿಂದ ಕದ್ದಿದ್ದು ಎಂಬ ಆರೋಪ ಕೂಡ ಜುಕರ್‍ಬರ್ಗ್ ವಿರುದ್ಧ ಕೇಳಿಬಂದಿತ್ತು.

ಇನ್‍ಸ್ಟಾಗ್ರಾಮ್, ವಾಟ್ಸ್‍ಆಪ್‍ಮಾತ್ರವಲ್ಲದೆ ವರ್ಚುಯಲ್ ರಿಯಾಲಿಟಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಆಕ್ಯುಲಸ್ ಸಂಸ್ಥೆ ಕೂಡ ಫೇಸ್‍ಬುಕ್‍ನ ಒಡೆತನದಲ್ಲಿದೆ. ಬಿಟ್‍ಕಾಯಿನ್‍ನಂತೆ ತನ್ನದೇ ಆದ ‘ಲಿಬ್ರಾ’ ಎಂಬ ವರ್ಚುಯಲ್ ಕರೆನ್ಸಿ ರೂಪಿಸುವುದಾಗಿ ಹೇಳಿಕೊಂಡಿದ್ದ ಫೇಸ್‍ಬುಕ್‍ನ ಯೋಜನೆ ಪಾಲುದಾರರ ಹಿಂಜರಿಕೆಯಿಂದಾಗಿ ಸದ್ಯ ಅತಂತ್ರವಾಗಿದೆ. ಕಡಿಮೆ ಅವಧಿಯಲ್ಲೇ ಅಪಾರ ಜನಪ್ರಿಯತೆಗಳಿಸಿಕೊಂಡಿರುವ ಟಿಕ್‍ಟಾಕ್ ಆ್ಯಪ್ ಜೊತೆ ಪರಿಣಾಮಕಾರಿಯಾಗಿ ಸ್ಪರ್ಧಿಸುವುದು ಅದರ ಸದ್ಯದ ಚಿಂತೆ ಇದ್ದಂತಿದೆ. 

Leave a Reply

Your email address will not be published.