ಇ-ಜ್ಞಾನ

ಟಿ.ಜಿ.ಶ್ರೀನಿಧಿ

ವಿಶ್ವವ್ಯಾಪಿ ಜಾಲಕ್ಕೊಂದು ವಿಶೇಷ ದಿನ

ವಿಶ್ವವ್ಯಾಪಿ ಜಾಲ, ಅಂದರೆ ವಲ್ರ್ಡ್‍ವೈಡ್ ವೆಬ್, ಆಧುನಿಕ ಜಗತ್ತಿನ ಅತ್ಯಂತ ಮಹತ್ವದ ಆವಿಷ್ಕಾರಗಳಲ್ಲೊಂದು. ಅಂತರಜಾಲದ (ಇಂಟರ್‍ನೆಟ್) ಮೂಲೆಮೂಲೆಗಳಲ್ಲಿರುವ ಮಾಹಿತಿಯನ್ನು ಸುಲಭವಾಗಿ ಹುಡುಕಲು ಹಾಗೂ ಪಡೆದುಕೊಳ್ಳಲು ಸಾಧ್ಯವಾಗಿಸಿದ್ದು ಇದೇ ವಿಶ್ವವ್ಯಾಪಿ ಜಾಲ.

ವಿಶ್ವವ್ಯಾಪಿ ಜಾಲದ ಮೂಲ ಪರಿಕಲ್ಪನೆ ಟಿಮ್ ಬರ್ನರ್ಸ್-ಲೀ ಎಂಬ ವಿಜ್ಞಾನಿಯದ್ದು. ಸ್ವಿಟ್ಸರ್ಲೆಂಡಿನ ಸರ್ನ್ ಪ್ರಯೋಗಾಲಯದಲ್ಲಿ ಕೆಲಸಮಾಡುತ್ತಿದ್ದ ಅವಧಿಯಲ್ಲಿ ಅವರು ಈ ಪರಿಕಲ್ಪನೆಯನ್ನು ಒಂದು ಪ್ರಸ್ತಾವನೆಯ ರೂಪದಲ್ಲಿ ಸಲ್ಲಿಸಿದ್ದರು. 1989ನೇ ಇಸವಿಯಲ್ಲಿ ಅವರು ಆ ಪ್ರಸ್ತಾವನೆಯನ್ನು ತಮ್ಮ ಸಂಸ್ಥೆಗೆ ಸಲ್ಲಿಸಿದ ದಿನವಾದ ಮಾರ್ಚ್ 12ನ್ನು ವಿಶ್ವವ್ಯಾಪಿ ಜಾಲದ ಜನ್ಮದಿನವೆಂದು ಆಚರಿಸಲಾಗುತ್ತದೆ.

ಅಂತರಜಾಲ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಹುತೇಕ ಎಲ್ಲ ಆವಿಷ್ಕಾರಗಳಂತೆ ವಿಶ್ವವ್ಯಾಪಿ ಜಾಲದ ಬೆಳವಣಿಗೆ ಕೂಡ ಒಂದು ಸುದೀರ್ಘ ಅವಧಿಯಲ್ಲಿ ನಡೆದ ಘಟನೆ. ಇಂದು ನಿಜ ಅರ್ಥದಲ್ಲಿ ವಿಶ್ವವ್ಯಾಪಿಯಾಗಿರುವ ಈ ಸಾಧನೆಯ ಕಾರಣಕರ್ತರಾದ ಟಿಮ್ ಬರ್ನರ್ಸ್-ಲೀ ಆಗಲಿ, ಅವರ ತಂಡವನ್ನು ಬೆಂಬಲಿಸಿದ ಸರ್ನ್ ಆಗಲಿ ವಿಶ್ವವ್ಯಾಪಿ ಜಾಲದಿಂದ ಯಾವುದೇ ಆರ್ಥಿಕ ಲಾಭವನ್ನು ಬಯಸಲಿಲ್ಲ ಎನ್ನುವುದು ವಿಶೇಷ.

ಡಾಟ್ ಕಾಮ್ ಹುಟ್ಟುಹಬ್ಬ

ವಿಶ್ವವ್ಯಾಪಿ ಜಾಲದಲ್ಲಿ ಬೇರೆಬೇರೆ ಜಾಲತಾಣಗಳಿಗೆ ಭೇಟಿ ನೀಡುವುದು ನಮ್ಮ ಅಭ್ಯಾಸ. ಇಂತಹ ಬಹುತೇಕ ತಾಣಗಳ ವಿಳಾಸಕ್ಕೆ .com ಎಂಬ ಅಂತ್ಯಪ್ರತ್ಯಯ ಅಥವಾ ಸಫಿಕ್ಸ್ ಇರುವುದೂ ನಮಗೆ ಗೊತ್ತು. ಇದು ಎಷ್ಟು ಜನಪ್ರಿಯವೆಂದರೆ ಜಾಲತಾಣಗಳನ್ನು ಡಾಟ್ ಕಾಮ್‍ಗಳೆಂದೇ ಕರೆಯುವ ಅಭ್ಯಾಸ ಕೂಡ ಬೆಳೆದುಬಂದಿದೆ.

ಜಾಲತಾಣಗಳ ಹೆಸರು ಹಾಗೂ ಅಂತ್ಯಪ್ರತ್ಯಯ ಸೇರಿದ ವಿಳಾಸವನ್ನು ಡೊಮೈನ್ ನೇಮ್ ಎಂದು ಕರೆಯುತ್ತಾರೆ. samajamukhi.com, ejnana.com ಇವೆಲ್ಲ ಡೊಮೈನ್ ನೇಮ್‍ನದೇ ಉದಾಹರಣೆಗಳು. ಡೊಮೈನ್ ಸಫಿಕ್ಸ್‍ನಲ್ಲಿ ಹಲವು ವಿಧಗಳಿರುವುದು ಸಾಧ್ಯ. ನಮಗೆ ಚೆನ್ನಾಗಿ ಪರಿಚಯವಿರುವ .com ಮಾತ್ರವೇ ಅಲ್ಲದೆ .net, .org, .edu, .in ಮುಂತಾದ ಡೊಮೈನ್ ಸಫಿಕ್ಸ್‍ಗಳೂ ಸಾಕಷ್ಟು ಜನಪ್ರಿಯ.

ಪ್ರಪಂಚದಲ್ಲೇ ಮೊಟ್ಟಮೊದಲು ನೋಂದಣಿಯಾದ ಡೊಮೈನ್ ನೇಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು symbolics.com. 1985ರ ಮಾರ್ಚ್ 15ರಂದು ನೋಂದಣಿಯಾದ ಈ ವಿಳಾಸಕ್ಕೆ ಇದೀಗ ಮೂವತ್ತೈದರ ಹರೆಯ!

ಜಾಲತಾಣದ ಮಾಹಿತಿ ಯಾವ ಭಾಷೆಯಲ್ಲಾದರೂ ಇರಬಹುದಲ್ಲ, ಹಾಗೆಯೇ ಜಾಲತಾಣದ ವಿಳಾಸವನ್ನೂ ನಮ್ಮ ಭಾಷೆಯಲ್ಲೇ ಬರೆಯುವುದನ್ನು ಇಂಟರ್‍ನ್ಯಾಶನಲೈಸ್ಡ್ ಡೊಮೈನ್ ನೇಮ್ (ಐಡಿಎನ್) ವ್ಯವಸ್ಥೆ ಸಾಧ್ಯವಾಗಿಸಿದೆ. ಈ ವ್ಯವಸ್ಥೆಯ ಅಂಗವಾಗಿ ಡೊಮೈನ್ ನೇಮ್‍ಗಳನ್ನು ಕನ್ನಡದಲ್ಲಿ ಬರೆಯುವುದು ಶೀಘ್ರದಲ್ಲೇ ಸಾಧ್ಯವಾಗುವ ನಿರೀಕ್ಷೆಯಿದೆ.

ಮೊದಲ ಕರೆಯಿಂದ ಮೊದಲ ಟ್ವೀಟ್ ವರೆಗೆ

ದೂರವಾಣಿಯ ಇತಿಹಾಸ ಎಂದತಕ್ಷಣ ನಮಗೆ ನೆನಪಾಗುವ ಹೆಸರು ಅಲೆಗ್ಸಾಂಡರ್ ಗ್ರಹಾಂಬೆಲ್. 1876ರ ಮಾರ್ಚ್ 10ರಂದು ಆತ ದೂರವಾಣಿ ಮೂಲಕ ತನ್ನ ಸಹಾಯಕನನ್ನು ಉದ್ದೇಶಿಸಿ ಹೇಳಿದ “Mr. Watson come here I want you” ಎಂಬ ಮಾತು ಪ್ರಪಂಚದ ಮೊತ್ತಮೊದಲ ದೂರವಾಣಿ ಕರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕರೆ ಸ್ವೀಕರಿಸಿದ ವ್ಯಕ್ತಿ ಥಾಮಸ್ ಆಗಸ್ಟಸ್ ವಾಟ್ಸನ್. ಉತ್ತರ ಅಮೆರಿಕಾದ ಉದ್ದಗಲಕ್ಕೂ ದೂರವಾಣಿ ಸೌಲಭ್ಯ ಒದಗಿಸಿದ ಟ್ರಾನ್ಸ್ ಕಾಂಟಿನೆಂಟಲ್ ದೂರವಾಣಿ ಸೇವೆಯ ಅಧಿಕೃತ ಉದ್ಘಾಟನೆಯ ಸಂದರ್ಭದಲ್ಲೂ ಗ್ರಹಾಂಬೆಲ್ ಹಾಗೂ ವಾಟ್ಸನ್ ಅವರೇ ದೂರವಾಣಿಯಲ್ಲಿ ಮಾತನಾಡಿದ್ದು ವಿಶೇಷ. ಮೊದಲ ಕರೆಯ ಸಂದರ್ಭ ಅಕ್ಕಪಕ್ಕದ ಕೋಣೆಗಳಲ್ಲಿದ್ದ ಅವರು ಈಗ ಪರಸ್ಪರ 5500 ಕಿಮೀ ದೂರದಲ್ಲಿದ್ದರು!

ಮಾಹಿತಿ ಸಂವಹನದ ಮೊದಲ ಹಂತಗಳಲ್ಲಿ ದೂರವಾಣಿ ವಹಿಸಿಕೊಂಡಿದ್ದ ಸ್ಥಾನಕ್ಕೆ ಈಗ ಹೊಸ ಮಾಧ್ಯಮಗಳು ಬಂದಿವೆ. ಅವುಗಳ ಇತಿಹಾಸದಲ್ಲೂ ಮಾರ್ಚ್ ತಿಂಗಳಿಗೆ ಪ್ರಮುಖ ಸ್ಥಾನವಿದೆ. ಸಂಕ್ಷಿಪ್ತ ಸಂದೇಶಗಳ ಕ್ಷಿಪ್ರ ಪ್ರಸಾರಕ್ಕೆ ಹೆಸರಾದ ಟ್ವಿಟ್ಟರ್ ನಲ್ಲಿ ಮೊತ್ತಮೊದಲ ಸಂದೇಶ ಪ್ರಕಟವಾಗಿದ್ದು 2006ರ ಮಾರ್ಚ್ 21ರಂದು. ಟ್ವಿಟ್ಟರ್ ಸ್ಥಾಪಕರಲ್ಲೊಬ್ಬರಾದ ಜಾಕ್ ಡಾರ್ಸಿ ಆ ಸಂದೇಶದಲ್ಲಿ ‘inviting coworkers’ ಎಂದು ಬರೆದಿದ್ದರು.

ಭಾರತದಲ್ಲಿ ಅಂತರಜಾಲ

ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿನ ಅಂತರಜಾಲ ಬಳಕೆದಾರರ ಸಂಖ್ಯೆ 90.7 ಕೋಟಿ ತಲುಪಲಿದೆ ಎಂದು ಸಿಸ್ಕೋ ಸಂಸ್ಥೆಯ ವರದಿ ಅಂದಾಜಿಸಿದೆ. ಈ ಸಂಖ್ಯೆ ದೇಶದ ಜನಸಂಖ್ಯೆಯ ಶೇ.64ರಷ್ಟನ್ನು ಪ್ರತಿನಿಧಿಸಲಿದೆ. ಇದಕ್ಕೂ ಹೆಚ್ಚು, ಅಂದರೆ 96.6 ಕೋಟಿ ಜನ ಆ ವೇಳೆಗೆ ಮೊಬೈಲ್ ಫೋನ್ ಬಳಕೆದಾರರಾಗಿರುವ ನಿರೀಕ್ಷೆ ಇದೆ. 

ಇಷ್ಟೆಲ್ಲ ದೊಡ್ಡ ಸಂಖ್ಯೆಯ ಬಳಕೆದಾರರಲ್ಲಿ ಬಹಳಷ್ಟು ಜನ ತಮ್ಮ ಮಾತೃಭಾಷೆಯಲ್ಲೇ ಅಂತರಜಾಲ-ವಿಶ್ವವ್ಯಾಪಿ ಜಾಲಗಳನ್ನು ಬಳಸಲಿದ್ದಾರೆ. ಗೂಗಲ್ ಸಂಸ್ಥೆ ಈ ಹಿಂದೆ (ಏಪ್ರಿಲ್ 2017) ಪ್ರಕಟಿಸಿದ್ದ ವರದಿಯ ಪ್ರಕಾರ ಭಾರತೀಯ ಭಾಷೆಗಳಲ್ಲಿ ಅಂತರಜಾಲ ಬಳಸುತ್ತಿರುವವರ ಪೈಕಿ ಕನ್ನಡಿಗರು ಮೂರನೇ ಸ್ಥಾನದಲ್ಲಿದ್ದರು. ಆ ಪಟ್ಟಿಯ ಮೊದಲೆರಡು ಸ್ಥಾನಗಳು ತಮಿಳು ಮತ್ತು ಹಿಂದಿ ಭಾಷಿಕರ ಪಾಲಾಗಿದ್ದವು.

Leave a Reply

Your email address will not be published.