ಇ-ಜ್ಞಾನ

ಟೆಕ್ ಸುದ್ದಿ

ಮೊಬೈಲ್ ಡೇಟಾ ಬಳಕೆಯಲ್ಲಿ ಮುಂಚೂಣಿಯಲ್ಲಿರುವುದಷ್ಟೇ ಅಲ್ಲ, ಅತ್ಯಂತ ಕಡಿಮೆ ದರದಲ್ಲಿ ಮೊಬೈಲ್ ಡೇಟಾ ಒದಗಿಸುವಲ್ಲೂ ನಮ್ಮ ದೇಶ ಮೊದಲ ಸ್ಥಾನ ಪಡೆದುಕೊಂಡಿದೆ. ಪ್ರತಿ ಜಿಬಿ ಡೇಟಾ ಸರಾಸರಿ ಬೆಲೆ ಜಾಗತಿಕವಾಗಿ ಆರುನೂರು ರೂಪಾಯಿಗಳಷ್ಟಿದ್ದರೆ ನಮ್ಮ ದೇಶದಲ್ಲಿ ಅದು ಇಪ್ಪತ್ತು ರೂಪಾಯಿಗಿಂತ ಕಡಿಮೆಯಿದೆ ಎಂದು ಈತ್ತೀಚೆಗೆ ಪ್ರಕಟವಾದ ಸಮೀಕ್ಷೆಯೊಂದು ತಿಳಿಸಿದೆ. ವಿಶ್ವದಾದ್ಯಂತ 230 ದೇಶಗಳಲ್ಲಿನ ಆರು ಸಾವಿರಕ್ಕೂ ಹೆಚ್ಚು ಮೊಬೈಲ್ ಡೇಟಾ ಪ್ಲಾನುಗಳನ್ನು ಹೋಲಿಸುವ ಮೂಲಕ ಈ ಪಟ್ಟಿಯನ್ನು ತಯಾರಿಸಲಾಗಿದೆಯಂತೆ. ಅಂದಹಾಗೆ ಅತಿಹೆಚ್ಚು ಸ್ಮಾರ್ಟ್‍ಫೋನ್ ಬಳಕೆದಾರರಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.

ಟೆಕ್ ಪದ

ಟೀವಿ, ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್, ಸ್ಮಾರ್ಟ್‍ವಾಚ್ -ಹೀಗೆ ಅನೇಕ ಬಗೆಯ ಪರದೆಗಳನ್ನು ನಾವು ಪ್ರತಿದಿನವೂ ನೋಡುತ್ತಿರುತ್ತೇವೆ. ನೋಡುವುದಷ್ಟೇ ಅಲ್ಲ, ನಮ್ಮ ದಿನದ ಸಾಕಷ್ಟು ಸಮಯವನ್ನೂ ಅವುಗಳ ಮುಂದೆ ಕಳೆಯುತ್ತೇವೆ. ಇಂತಹ ಯಾವುದೇ ಪರದೆಯ ಮುಂದೆ ನಾವು ಕಳೆಯುವ ಸಮಯವೇ ‘ಸ್ಕ್ರೀನ್ ಟೈಮ್’. ಈಚಿನ ದಿನಗಳಲ್ಲಿ ಈ ಅವಧಿ ಗಮನಾರ್ಹವಾಗಿ ಜಾಸ್ತಿಯಾಗುತ್ತಿದೆ. ಇಂತಹ ಪರದೆಗಳನ್ನು ದೀರ್ಘಕಾಲ ನೋಡುವುದು ಹಲವು ಮಾನಸಿಕ ಹಾಗೂ ದೈಹಿಕ ತೊಂದರೆಗಳಿಗೆ ಕಾರಣವಾಗಬಲ್ಲದು. ಆದುದರಿಂದಲೇ ನಮ್ಮ ದಿನದಲ್ಲಿ ಸ್ಕ್ರೀನ್ ಟೈಮ್ ಸಾಧ್ಯವಾದಷ್ಟೂ ಕಡಿಮೆಯಿರಬೇಕು ಎಂಬ ಅಭಿಪ್ರಾಯ ಇದೀಗ ವ್ಯಾಪಕವಾಗಿ ಕೇಳಸಿಗುತ್ತಿದೆ.

ಆಪ್-ತ ಮಿತ್ರ

ಮೊಬೈಲ್ ಫೋನ್ ಬಳಸುವ ಮಕ್ಕಳು ತಮ್ಮ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾರೆ ಎನ್ನುವುದು ಸಾಮಾನ್ಯ ದೂರು. ಈತ್ತೀಚೆಗೆ ಗೂಗಲ್ ಸಂಸ್ಥೆ ಪರಿಚಯಿಸಿದ ‘ಬೋಲೋ’, ಈ ದೂರನ್ನು ದೂರಮಾಡಲು ಪ್ರಯತ್ನಿಸುವ ಆಪ್‍ಗಳಿಗೊಂದು ಉದಾಹರಣೆ. ಧ್ವನಿ ಗುರುತಿಸುವಿಕೆ (ಸ್ಪೀಚ್ ರೆಕಗ್ನಿಶನ್) ತಂತ್ರಜ್ಞಾನ ಬಳಸಿ ಮಕ್ಕಳಿಗೆ ಓದುವುದನ್ನು ಅಭ್ಯಾಸಮಾಡಿಸುವ ವಿಶಿಷ್ಟ ಆಪ್ ಇದು. ಕತೆಗಳನ್ನು ಓದಲು ಕೊಟ್ಟು, ಅವನ್ನು ಮಕ್ಕಳು ಸರಿಯಾಗಿ ಓದಿದರೆ ಹೊಗಳುವ -ತಪ್ಪುಮಾಡಿದಾಗ ತಿದ್ದಿಕೊಳ್ಳಲು ಸಹಾಯ ಮಾಡುವ ವ್ಯವಸ್ಥೆ ಇದರಲ್ಲಿದೆ. ಇನ್ನೂ ಅಭಿವೃದ್ಧಿಯಲ್ಲಿರುವ ಈ ಆಪ್‍ನಲ್ಲಿ ಸದ್ಯ ಇಂಗ್ಲಿಷ್ ಹಾಗೂ ಹಿಂದಿ ಕತೆಗಳು ಮಾತ್ರವೇ ಇವೆ. ಮುಂದೆ ಇದು ಇತರ ಭಾಷೆಗಳಲ್ಲೂ ದೊರಕುವ ನಿರೀಕ್ಷೆ ಇದೆ.
ಹೆಚ್ಚಿನ ವಿವರಗಳಿಗೆ: bolo.withgoogle.com

ಜಾಲಜಗತ್ತು

ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವುದು ಒಳ್ಳೆಯದು, ನಿಜ. ಅವರಿಗೆ ಕತೆಗಳನ್ನು ಹೇಳುವುದು ಈ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಬಹಳ ಪ್ರಮುಖವಾದ ಹೆಜ್ಜೆ. ಕತೆ ಹೇಳಲು ಬಿಡುವಿಲ್ಲದಿದ್ದವರು ಮಕ್ಕಳಿಗೆ ಮೊಬೈಲ್ ಕೊಟ್ಟುಬಿಡುತ್ತಾರಲ್ಲ, ಈಗ ಮಕ್ಕಳು ಆ ಮೊಬೈಲಿನಲ್ಲೇ ಕತೆಗಳನ್ನು ಕೇಳಬಹುದು. ‘ಕೇಳಿರೊಂದು ಕಥೆಯ’ ಎಂಬ ಹೆಸರಿನ ಜಾಲತಾಣದಲ್ಲಿ ಕನ್ನಡದ ಹಲವಾರು ಮಕ್ಕಳ ಕತೆಗಳನ್ನು ಧ್ವನಿರೂಪದಲ್ಲಿ (ಪಾಡ್‍ಕಾಸ್ಟ್) ಪ್ರಕಟಿಸಲಾಗಿದೆ. ಜಾಲತಾಣದಲ್ಲಿ ಮಾತ್ರವೇ ಅಲ್ಲದೆ ಈ ಕತೆಗಳು ಗೂಗಲ್ ಪಾಡ್‍ಕಾಸ್ಟ್ಸ್ ಹಾಗೂ ಆಪಲ್ ಪಾಡ್‍ಕಾಸ್ಟ್ಸ್‍ನಂತಹ ವ್ಯವಸ್ಥೆಗಳಲ್ಲೂ ಲಭ್ಯವಿರುವುದು ವಿಶೇಷ. ಕತೆಗಳನ್ನು ಡೌನ್‍ಲೋಡ್ ಮಾಡಿಟ್ಟುಕೊಂಡು ಅಂತರಜಾಲ ಸಂಪರ್ಕವಿಲ್ಲದಾಗಲೂ ಕೇಳುವುದು ಸಾಧ್ಯ.
ಜಾಲತಾಣದ ಕೊಂಡಿ:kelirondukatheya.org

ಹಿಂದಿನ ಸಮಾಚಾರ

ನಾವೆಲ್ಲ ಮೊಬೈಲ್ ಫೋನುಗಳನ್ನು ವ್ಯಾಪಕವಾಗಿ ಬಳಸಲು ಶುರುಮಾಡಿದ್ದು, ಬಹುಶಃ, ಈ ಶತಮಾನದ ಪ್ರಾರಂಭದಲ್ಲಿ. ಆದರೆ ಆ ವೇಳೆಗಾಗಲೇ ಮೊಬೈಲ್ ಆವಿಷ್ಕಾರವಾಗಿ ಬಹಳ ಸಮಯವಾಗಿತ್ತು. ‘ಪ್ರಪಂಚದ ಮೊತ್ತಮೊದಲ ಮೊಬೈಲ್ ಕರೆ’ಯೆಂದು ಹೆಸರಾಗಿರುವ ಸಂಭಾಷಣೆ ನಡೆದದ್ದು 1973ನೇ ಇಸವಿಯಲ್ಲಿ. ಆ ವರ್ಷದ ಏಪ್ರಿಲ್ 3ರಂದು ಅಮೆರಿಕಾದ ನ್ಯೂಯಾರ್ಕ್‍ನಲ್ಲಿ ಮೋಟರೋಲಾ ಸಂಸ್ಥೆಯ ಮಾರ್ಟಿನ್ ಕೂಪರ್ ತನ್ನ ಪ್ರತಿಸ್ಪರ್ಧಿ ಸಂಸ್ಥೆಯ ಜೋಯೆಲ್ ಎಂಗೆಲ್ ಎಂಬಾತನ ಜೊತೆ ಮೊಬೈಲಿನಲ್ಲಿ ಮಾತನಾಡಿದರು. ಮೊಬೈಲ್ ಫೋನ್ ಪಿತಾಮಹ ಎಂದೇ ಹೆಸರಾಗಿರುವ ಮಾರ್ಟಿನ್ ಅಂದು ಮಾತನಾಡಲು ಬಳಸಿದ್ದ ಮೊಬೈಲು ಸುಮಾರು ಮುಕ್ಕಾಲು ಕೇಜಿ ತೂಕವಿತ್ತು!

ಹೊಸ ಗ್ಯಾಜೆಟ್
ಮೊಬೈಲ್ ಫೋನ್ ಬಹೂಪಯೋಗಿ ಸಾಧನ, ನಿಜ. ಆದರೆ ಓದು ಮತ್ತಿತರ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಬಹುದೆನ್ನುವ ಕಾರಣಕ್ಕೆ ಅದನ್ನು ಮಕ್ಕಳಿಗೆ ಕೊಡಲು ಕೆಲ ಪೋಷಕರು ಇಷ್ಟಪಡುವುದಿಲ್ಲ. ಆ ಕಾಳಜಿಗೆ ಉತ್ತರರೂಪವಾಗಿ ನಮ್ಮದೇ ದೇಶದ ಸಂಸ್ಥೆಯೊಂದು ‘ಓಜಾಯ್ ಎ1’ ಎಂಬ ಸ್ಮಾರ್ಟ್ ವಾಚ್-ಫೋನನ್ನು ಪರಿಚಯಿಸಿದೆ. ಮಕ್ಕಳ ಸುರಕ್ಷತೆ ಹಾಗೂ ಸಂವಹನದ ದೃಷ್ಟಿಯಿಂದ ಉಪಯುಕ್ತವಾದ ದೂರವಾಣಿ ಕರೆ, ಮೆಸೇಜಿಂಗ್, ಜಿಪಿಎಸ್, ಕ್ಯಾಮೆರಾ ಮುಂತಾದ ಸೌಲಭ್ಯಗಳೆಲ್ಲ ಇದರಲ್ಲಿವೆ. ಮಕ್ಕಳ ಚಟುವಟಿಕೆ ಗಮನಿಸುವುದು, ಅನಗತ್ಯ ಬಳಕೆ ನಿರ್ಬಂಧಿಸುವುದನ್ನೆಲ್ಲ ಪೋಷಕರ ಮೊಬೈಲಿನಿಂದಲೇ ಮಾಡಬಹುದು. 4ಜಿ ಸಿಮ್ ಬಳಸುವ ಈ ಕೈಗಡಿಯಾರ ರೂ.9999ಕ್ಕೆ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯ.

Leave a Reply

Your email address will not be published.