ಟೆಕ್ ಸುದ್ದಿ
ಮೊಬೈಲಿನಲ್ಲಿರಲಿ, ಕಂಪ್ಯೂಟರಿನಲ್ಲಿರಲಿ, ಯಾವುದೇ ಜಾಲತಾಣ -ಅಂದರೆ ವೆಬ್ಸೈಟ್- ಅನ್ನು ತೆರೆಯಲು ಬ್ರೌಸರ್ ತಂತ್ರಾಂಶ ಬೇಕೇಬೇಕು. ಒಂದು ಕಾಲದಲ್ಲಿ ಕಂಪ್ಯೂಟರ್ ಬಳಕೆದಾರರು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದ ಬ್ರೌಸರ್ ಮೈಕ್ರೋಸಾಫ್ಟ್ ಸಂಸ್ಥೆಯ ಇಂಟರ್ನೆಟ್ ಎಕ್ಸ್ಪ್ಲೋರರ್. 2003ರ ವೇಳೆಗೆ ಪ್ರಪಂಚದ ಬ್ರೌಸರ್ ಮಾರುಕಟ್ಟೆಯ ಶೇ.95 ಪಾಲು ಇಂಟರ್ನೆಟ್ ಎಕ್ಸ್ಪ್ಲೋರರ್ ಹಿಡಿತದಲ್ಲಿತ್ತು. ಆನಂತರ ಗೂಗಲ್ ಕ್ರೋಮ್ ಹಾಗೂ ಮೊಜಿಲ್ಲಾ ಫೈರ್ಫಾಕ್ಸ್ನಂತಹ ಹೊಸ ತಂತ್ರಾಂಶಗಳ ಎದುರು ಹಿನ್ನೆಡೆ ಕಂಡ ಈ ಬ್ರೌಸರ್ಗೆ ಬೆಂಬಲ ನೀಡುವುದನ್ನು ನಾಲ್ಕು ವರ್ಷಗಳ ಹಿಂದೆ ನಿಲ್ಲಿಸಲಾಗಿತ್ತು. ಇದನ್ನು ಇನ್ನೂ ಬಳಸುತ್ತಿರುವ ಗ್ರಾಹಕರಿಗೆ ಬಳಕೆ ನಿಲ್ಲಿಸುವಂತೆ ಮೈಕ್ರೋಸಾಫ್ಟ್ ಸಂಸ್ಥೆ ಇದೀಗ ಸಲಹೆ ನೀಡಿದೆ.
ಟೆಕ್ ಪದ
ಅಂತರಜಾಲದಲ್ಲಿ ಅಪಾರ ಸಂಖ್ಯೆಯ ಜಾಲತಾಣಗಳಿರುವುದು ನಮಗೆಲ್ಲ ಗೊತ್ತು. ಇಷ್ಟೊಂದು ತಾಣಗಳ ಪೈಕಿ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಗುರುತಿಸಲು ಅವುಗಳ ಹೆಸರು ನೆರವಾಗುತ್ತದೆ. ಜಾಲತಾಣಗಳನ್ನು ಗುರುತಿಸುವ ಈ ವಿಶಿಷ್ಟ ಹೆಸರನ್ನು ಡೊಮೈನ್ ನೇಮ್ ಎನ್ನಲಾಗುತ್ತದೆ. ಇಜ್ಞಾನ ಜಾಲತಾಣದ ವಿಳಾಸವಾದ ‘ಇಜ್ಞಾನ.ಕಾಂ’ ಎನ್ನುವುದು ಡೊಮೈನ್ ನೇಮ್ಗೊಂದು ಉದಾಹರಣೆ. ಯಾವುದೇ ಡೊಮೈನ್ ನೇಮ್ ಅನ್ನು ಏಕಕಾಲದಲ್ಲಿ ಒಂದು ಜಾಲತಾಣ ಮಾತ್ರ ಬಳಸುವುದು ಸಾಧ್ಯ (ಅಂದರೆ, ಇಡೀ ಅಂತರಜಾಲದಲ್ಲಿ ಒಂದೇ ಒಂದು ejnana.com ಮಾತ್ರವೇ ಇರಬಹುದು). ಪ್ರಪಂಚದ ಮೊತ್ತಮೊದಲ ನೋಂದಾಯಿತ ಡೊಮೈನ್ ನೇಮ್ ಎಂಬ ಹೆಗ್ಗಳಿಕೆ symbolics.com ಎಂಬ ವಿಳಾಸದ್ದು. ಈ ವಿಳಾಸವನ್ನು 1985ರ ಮಾರ್ಚ್ 15ರಂದು ನೋಂದಾಯಿಸಿಕೊಳ್ಳಲಾಗಿತ್ತು.
ಆಪ್-ತ ಮಿತ್ರ
ಜಾಗತಿಕ ಮಟ್ಟದಲ್ಲಿ ಸಂವಹನದ ಭಾಷೆಯಾಗಿ ಸ್ಥಾನ ಪಡೆದುಕೊಂಡಿರುವುದು ಇಂಗ್ಲಿಷ್ ಭಾಷೆ. ಉನ್ನತ ಶಿಕ್ಷಣ, ಉದ್ಯೋಗಾವಕಾಶ, ಪ್ರವಾಸ ಮುಂತಾದ ಯಾವುದೋ ಒಂದು ಕಾರಣಕ್ಕಾಗಿ ಇಂಗ್ಲಿಷ್ ಕಲಿಯಬೇಕಾದ ಸನ್ನಿವೇಶ ನಮಗೆ ಎದುರಾಗುವುದು ಇದೀಗ ಬಹಳ ಸಾಮಾನ್ಯವಾಗಿಬಿಟ್ಟಿದೆ. ಮಾಹಿತಿ ತಂತ್ರಜ್ಞಾನದ ಹಲವು ಸವಲತ್ತುಗಳು ಇಂತಹ ಸನ್ನಿವೇಶದಲ್ಲಿ ನಮಗೆ ನೆರವಾಗಬಲ್ಲವು. ಇಂತಹ ಸವಲತ್ತುಗಳಲ್ಲೊಂದು ‘ಹಲೋ ಇಂಗ್ಲಿಷ್’ ಎನ್ನುವ ಮೊಬೈಲ್ ಆಪ್. ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳ ಮೂಲಕ ಇಂಗ್ಲಿಷ್ ಕಲಿಕೆಯನ್ನು ಇದು ಸಾಧ್ಯವಾಗಿಸುತ್ತದೆ. ಕಲಿಕೆಯನ್ನು ಹಲವು ಹಂತಗಳಾಗಿ ವಿಭಜಿಸಿರುವುದು, ರಸಪ್ರಶ್ನೆಯಂತಹ ಚಟುವಟಿಕೆಗಳ ಮೂಲಕ ಏಕತಾನತೆಯನ್ನು ತಪ್ಪಿಸಿರುವುದು ಈ ಆಪ್ನ ಹೆಗ್ಗಳಿಕೆ.
ಪ್ಲೇಸ್ಟೋರ್ ಕೊಂಡಿ:tinyurl.com/EngLearnApp
ಜಾಲಜಗತ್ತು
ನಾವು ನೋಡುವ ಜಾಲತಾಣಗಳೆಲ್ಲ ಇರುವುದು ವಿಶ್ವವ್ಯಾಪಿ ಜಾಲ, ಅಂದರೆ ವರ್ಲ್ಡ್ ವೈಡ್ ವೆಬ್ನಲ್ಲಿ. ಈ ವ್ಯವಸ್ಥೆಯನ್ನು ರೂಪಿಸಿದ್ದು ಟಿಮ್ ಬರ್ನರ್ಸ್-ಲೀ ಎಂಬ ವಿಜ್ಞಾನಿ. ಪ್ರಪಂಚದ ಮೊತ್ತಮೊದಲ ಜಾಲತಾಣವನ್ನು ರೂಪಿಸಿದ್ದೂ ಅವರೇ. ಸ್ವಿಟ್ಸರ್ಲೆಂಡಿನ ಯೂರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಲ್ಯಾಬೊರೇಟರಿಯಲ್ಲಿ (ಸರ್ನ್) ಕೆಲಸಮಾಡುತ್ತಿದ್ದ ಸಂದರ್ಭದಲ್ಲಿ ಅವರು ಈ ಜಾಲತಾಣವನ್ನು ರೂಪಿಸಿದರು. ಅಂದಿನ ಮಾಹಿತಿಯನ್ನೆಲ್ಲ ಕಾದಿಟ್ಟುಕೊಂಡು ಈ ತಾಣದಲ್ಲಿ ಪ್ರಕಟಿಸಲಾಗಿದೆ. ತೊಂಬತ್ತರ ದಶಕದಲ್ಲಿ ರೂಪುಗೊಂಡ ತಾಣ ಹೇಗಿತ್ತು ಎಂದು ತಿಳಿಯುವ ಜೊತೆಗೆ ವಿಶ್ವವ್ಯಾಪಿ ಜಾಲದ ಹುಟ್ಟು-ಬೆಳವಣಿಗೆಯ ಬಗೆಗೂ ಇಲ್ಲಿ ಮಾಹಿತಿ ಪಡೆದುಕೊಳ್ಳಬಹುದು.
ಜಾಲತಾಣದ ಕೊಂಡಿ:info.cern.ch
ಟೆಕ್ ಸಲಹೆ
ಕಂಪ್ಯೂಟರ್ ಪ್ರಪಂಚದಲ್ಲಿನ ನಮ್ಮ ಚಟುವಟಿಕೆಗಳನ್ನೆಲ್ಲ ಸುರಕ್ಷಿತವಾಗಿಡುವ ಬೀಗ ಏನಾದರೂ ಇದ್ದರೆ ಪಾಸ್ವರ್ಡನ್ನು ಆ ಬೀಗದ ಕೀಲಿಕೈ ಎಂದೇ ಕರೆಯಬಹುದು. ಹೀಗಾಗಿಯೇ ನಾವು ಯಾವಾಗಲೂ ಸೂಕ್ತವಾದ, ಬೇರೆಯವರು ಸುಲಭವಾಗಿ ಊಹಿಸಲಾಗದ ಪಾಸ್ವರ್ಡುಗಳನ್ನು ಆರಿಸಿಕೊಳ್ಳಬೇಕು. ಒಂದೇ ಪಾಸ್ವರ್ಡನ್ನು ಬೇರೆಬೇರೆ ತಾಣಗಳಲ್ಲಿ ಬಳಸದಿರುವುದು ಒಳಿತು. ನಿಮ್ಮ ಪಾಸ್ವರ್ಡ್ ತಿಳಿಯಬಯಸುವ ಖದೀಮರಿಂದ ಪಾರಾಗಬೇಕೆಂದರೆ ಅಕ್ಷರ, ಅಂಕಿ ಹಾಗೂ ವಿಶೇಷ ಚಿಹ್ನೆಗಳ ಅರ್ಥರಹಿತ ಜೋಡಣೆಯನ್ನು ಪಾಸ್ವರ್ಡ್ ಆಗಿ ಬಳಸುವುದು ಕೂಡ ಒಳ್ಳೆಯದು. ಪಾಸ್ವರ್ಡುಗಳನ್ನು ಬರೆದಿಡುವುದಾಗಲೀ ಇತರರೊಡನೆ ಹಂಚಿಕೊಳ್ಳುವುದಾಗಲೀ ಖಂಡಿತಾ ಒಳ್ಳೆಯ ಯೋಚನೆಯಲ್ಲ.
ಹಿಂದಿನ ಸಮಾಚಾರ
ಆಧುನಿಕ ಜಗತ್ತನ್ನು ಬಹುವಾಗಿ ಪ್ರಭಾವಿಸಿರುವುದು ಸಂವಹನ ತಂತ್ರಜ್ಞಾನದ ಹೆಗ್ಗಳಿಕೆ. ಅತ್ಯಂತ ವಿಸ್ತಾರವಾಗಿ ಬೆಳೆದಿರುವ ಈ ತಂತ್ರಜ್ಞಾನದ ಆಧಾರಸ್ತಂಭಗಳಲ್ಲಿ ಪ್ರಮುಖ ಹೆಸರು ದೂರವಾಣಿ, ಅಂದರೆ ಟೆಲಿಫೋನ್ನದು. ದೂರವಾಣಿಯನ್ನು ಮೊತ್ತಮೊದಲ ಬಾರಿಗೆ ಪ್ರಾಯೋಗಿಕವಾಗಿ ಬಳಸಲಾಗಿದ್ದು 1876ರ ಮಾರ್ಚ್ 10ರಂದು. ಆ ದಿನ ಖ್ಯಾತ ವಿಜ್ಞಾನಿ ಅಲೆಗ್ಸಾಂಡರ್ ಗ್ರಹಾಂ ಬೆಲ್ ತನ್ನ ಸಹಾಯಕ ಥಾಮಸ್ ವಾಟ್ಸನ್ಗೆ ಮಾಡಿದ ಕರೆಯನ್ನು ಪ್ರಪಂಚದ ಮೊತ್ತಮೊದಲ ದೂರವಾಣಿ ಕರೆ ಎಂದು ಗುರುತಿಸಲಾಗುತ್ತದೆ. ಈ ಕರೆಯಲ್ಲಿ ಮಾತನಾಡಿದ ಇದೇ ಇಬ್ಬರು ವ್ಯಕ್ತಿಗಳು ಮುಂದೆ 1915ರಲ್ಲಿ ಪ್ರಪಂಚದ ಮೊತ್ತಮೊದಲ ಖಂಡಾಂತರ (ಟ್ರಾನ್ಸ್ ಕಾಂಟಿನೆಂಟಲ್) ದೂರವಾಣಿ ಕರೆಯಲ್ಲೂ ಪಾಲ್ಗೊಂಡಿದ್ದು ವಿಶೇಷ.