ಇ-ಜ್ಞಾನ

ಟೆಕ್ ಸುದ್ದಿ
ವಾಹನ ಚಲಾಯಿಸುವಾಗ ಮೊಬೈಲ್ ಬಳಸುವ ಅನೇಕರನ್ನು ನಾವು ನೋಡಿದ್ದೇವೆ. ಈ ಅಭ್ಯಾಸದಿಂದಾಗಿ ಅನೇಕ ಅಪಘಾತಗಳಾಗುವುದೂ ಉಂಟು. ಚಾಲಕರು ಮೊಬೈಲ್ ಬಳಸುವುದನ್ನು ತಡೆಯಲು ತಂತ್ರಜ್ಞಾನದ ಸಹಾಯ ಪಡೆದುಕೊಳ್ಳುವ ಹಲವು ಪ್ರಯತ್ನಗಳು ವಿಶ್ವದೆಲ್ಲೆಡೆ ನಡೆಯುತ್ತಿವೆ. ಚಲಿಸುತ್ತಿರುವ ವಾಹನದಲ್ಲಿ ಮೊಬೈಲ್ ಬಳಕೆಯಾಗುತ್ತಿದ್ದರೆ ಅದನ್ನು ಪತ್ತೆಮಾಡುವ ವ್ಯವಸ್ಥೆಯೊಂದನ್ನು ಯುನೈಟೆಡ್‍ ಕಿಂಗ್‍ಡಂನ ಪೊಲೀಸರು ಪರಿಚಯಿಸಿದ್ದಾರೆ. ವಾಹನದಲ್ಲಿನ ಮೊಬೈಲ್ ಸಂಕೇತಗಳನ್ನು ಹೊರಗಿನಿಂದಲೇ ವಿಶ್ಲೇಷಿಸುವ ಮೂಲಕ ಇದು ಮೊಬೈಲ್ ಬಳಕೆಯನ್ನು ಪತ್ತೆಮಾಡಲಿದೆಯಂತೆ. ಸದ್ಯ ಈ ವ್ಯವಸ್ಥೆ ಎಚ್ಚರಿಕೆಯ ಸಂದೇಶವನ್ನು ಮಾತ್ರ ಪ್ರದರ್ಶಿಸಲಿದ್ದು, ಮುಂದೆ ಅಪರಾಧಿ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೂ ನೆರವಾಗುವ ನಿರೀಕ್ಷೆಯಿದೆ.

 

ಟೆಕ್ ಪದ
ಏನನ್ನಾದರೂ ಖರೀದಿಸಿದಾಗ ಹಣ ಪಾವತಿಸಲು ಅಂಗಡಿಯ ಯಂತ್ರದಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡುಗಳನ್ನು ಸ್ವೈಪ್ ಮಾಡುವುದು ಸಾಮಾನ್ಯ ಅಭ್ಯಾಸ. ಹೊಸ ತಲೆಮಾರಿನ ಕೆಲ ಕಾರ್ಡುಗಳನ್ನು ಹೀಗೆ ಉಜ್ಜುವ ಅಗತ್ಯವೇ ಇಲ್ಲ; ಯಂತ್ರದ ಬಳಿ ಹಿಡಿದರೆ ಸಾಕು, ಅವು ಕೆಲಸ ಮಾಡುತ್ತವೆ. ಸ್ಪರ್ಶರಹಿತ (ಕಾಂಟ್ಯಾಕ್ಟ್ ಲೆಸ್) ಎಂಬ ವಿಶೇಷಣದ ಈ ಕಾರ್ಡುಗಳು ನಿಯರ್ ಫೀಲ್ಡ್‍ ಕಮ್ಯೂನಿಕೇಶನ್ (ಎನ್‍ಎಫ್‍ಸಿ) ತಂತ್ರಜ್ಞಾನವನ್ನು ಬಳಸುತ್ತವೆ. ಪರಸ್ಪರ ಸಮೀಪದಲ್ಲಿರುವ ಎರಡು ಸಾಧನಗಳ ನಡುವೆ ಮಾಹಿತಿ ವಿನಿಮಯವನ್ನು ಸಾಧ್ಯವಾಗಿಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ. ಇಂದಿನ ಬಹುತೇಕ ಮೊಬೈಲ್ ಫೋನುಗಳಲ್ಲಿ ಈ ತಂತ್ರಜ್ಞಾನವನ್ನು ಬಳಸುವ ಸೌಲಭ್ಯ ಇರುತ್ತದೆ. ಈ ಸೌಲಭ್ಯದ ನೆರವಿನಿಂದ ಮೊಬೈಲ್ ಫೋನನ್ನೇ ಕ್ರೆಡಿಟ್-ಡೆಬಿಟ್ ಕಾರ್ಡುಗಳಂತೆ ಬಳಸುವ ಪ್ರಯೋಗವೂ ನಡೆದಿದೆ.

ಆಪ್-ತ ಮಿತ್ರ
ನಿತ್ಯವೂ ನಮ್ಮ ಗಮನಕ್ಕೆ ಬರುವ, ನಮ್ಮ ಕೆಲಸಗಳಲ್ಲಿ ಬೇಕಾಗುವ ಎಲ್ಲ ಮಾಹಿತಿ ಹಾಗೂ ವಿವರಗಳನ್ನು ನೆನಪಿಟ್ಟುಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಕಚೇರಿಯಲ್ಲಿ ಮುಂದಿನವಾರ ಏನು ಕೆಲಸವಿದೆ ಎನ್ನುವುದರಿಂದ ಪ್ರಾರಂಭಿಸಿ, ಇವತ್ತು ಮನೆಗೆ ಬರುವಾಗ ಏನೆಲ್ಲ ದಿನಸಿ ತರಬೇಕು ಎನ್ನುವುದರವರೆಗೆ ನಾವು ನೆನಪಿಟ್ಟುಕೊಳ್ಳಬೇಕಾದ ವಿಷಯಗಳನ್ನು ಮೊಬೈಲಿನಲ್ಲಿ ಬರೆದಿಟ್ಟುಕೊಳ್ಳಲು ನೋಟ್‍ಪುಸ್ತಕದಂತೆ ಕೆಲಸಮಾಡುವ ಹಲವು ಆಪ್‍ಗಳಿವೆ. ಇಂತಹ ಆಪ್‍ಗಳಲ್ಲಿ ‘ಗೂಗಲ್‍ಕೀಪ್’ ಕೂಡಒಂದು. ನಮಗೆ ಬೇಕಾದ ಮಾಹಿತಿಯನ್ನು ಬೇಕಾದಾಗ ಮತ್ತೆ ನೆನಪಿಸುವ (ರಿಮೈಂಡರ್) ಹಾಗೂ ಬೇರೆಯವರೊಡನೆ ಹಂಚಿಕೊಳ್ಳುವಂತಹ (ಶೇರ್) ಸವಲತ್ತುಗಳೂ ಈ ಆಪ್‍ನಲ್ಲಿವೆ. ಇದನ್ನು ಕಂಪ್ಯೂಟರಿನಲ್ಲೂ ಬಳಸುವುದು ಸಾಧ್ಯ.

ಹೆಚ್ಚಿನ ವಿವರಗಳಿಗೆ: keep.google.com

ಜಾಲಜಗತ್ತು
ಕನ್ನಡದ ಹೆಸರಾಂತ ವಿದ್ವಾಂಸರ ಸಾಲಿನಲ್ಲಿ ಪ್ರೊ.ಎ.ಆರ್.ಕೃಷ್ಣ ಶಾಸ್ತ್ರಿಗಳು ಪ್ರಮುಖರು. ಸೆಂಟ್ರಲ್‍ ಕಾಲೇಜಿನ ಕರ್ಣಾಟಕ ಸಂಘ, ಪ್ರಬುದ್ಧ ಕರ್ನಾಟಕ ಪತ್ರಿಕೆ, ಮೈಸೂರು ವಿವಿ-ಕಸಾಪ ನಿಘಂಟುಗಳು ಸೇರಿದಂತೆ ಕನ್ನಡದ ಹಲವು ಗಣನೀಯ ಸಾಧನೆಗಳ ಹಿಂದೆಅವರ ಶ್ರಮವನ್ನು ಗುರುತಿಸಬಹುದು. ತಮ್ಮ ಸಾಹಿತ್ಯ ಕೃಷಿಯಿಂದ ಹೊಸಗನ್ನಡದ ಸಾಹಿತ್ಯಕ್ಷೇತ್ರವನ್ನು ವಿಸ್ತರಿಸಿದ ಕೃಷ್ಣಶಾಸ್ತ್ರಿಗಳನ್ನು ಕುರಿತ ವಿಶಿಷ್ಟ ಜಾಲತಾಣವೊಂದು ಇದೀಗ ರೂಪುಗೊಂಡಿದೆ. ಅವರ ಜೀವನ-ಸಾಧನೆಗಳ ಕುರಿತು ಮಾಹಿತಿ ಪಡೆದುಕೊಳ್ಳುವುದಷ್ಟೇ ಅಲ್ಲದೆಅವರು ರಚಿಸಿದ ವಚನ ಭಾರತ, ನಿರ್ಮಲ ಭಾರತೀ, ಕಥಾಮೃತ, ಸಂಸ್ಕೃತ ನಾಟಕ ಮುಂತಾದ ಹಲವಾರು ಕೃತಿಗಳನ್ನೂ ಈ ತಾಣದಲ್ಲಿ ಉಚಿತವಾಗಿ ಓದಬಹುದು. ಕೃಷ್ಣಶಾಸ್ತ್ರಿಗಳನ್ನು ಪರಿಚಯಿಸುವ ಒಂದು ಕಿರುಚಿತ್ರವೂ ಇಲ್ಲಿದೆ.

ಜಾಲತಾಣದ ಕೊಂಡಿ: ark.sirinudi.org

ಟೆಕ್ ಸಲಹೆ
ದುರುದ್ದೇಶಪೂರಿತ ಆಪ್‍ಗಳನ್ನು ನಮ್ಮ ಮೊಬೈಲಿಗೆ ಡೌನ್‍ಲೋಡ್ ಮಾಡಿಕೊಳ್ಳುವಂತೆ ಮನವೊಲಿಸಿ, ಆನಂತರ ಆ ಆಪ್ ಸಹಾಯದಿಂದ ನಮ್ಮ ಖಾಸಗಿ ಮಾಹಿತಿಯನ್ನು ಕದಿಯಲು ಪ್ರಯತ್ನಿಸುವುದು ಇದೀಗ ಡಿಜಿಟಲ್‍ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಪ್ರಯತ್ನಗಳಲ್ಲೊಂದು. ಇಂತಹ ಪ್ರಯತ್ನಗಳನ್ನು ವಿಫಲಗೊಳಿಸಬೇಕೆಂದರೆ ನಾವು ಅಪರಿಚಿತ ಆಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಾರದು ಹಾಗೂ ನಮ್ಮ ಯಾವುದೇ ವೈಯಕ್ತಿಕ ವಿವರವನ್ನು ಇತರರ ಜೊತೆ ಹಂಚಿಕೊಳ್ಳಬಾರದು. ನಮಗೆ ಬೇಕಾಗುವ ಆಪ್‍ಗಳನ್ನು ಬಳಸುವಾಗಲೂ ಅಷ್ಟೇ, ಅದನ್ನು ಅಧಿಕೃತ ಆಪ್ ಸ್ಟೋರಿನಿಂದ ಮಾತ್ರ ಡೌನ್‍ಲೋಡ್ ಮಾಡಬೇಕು ಮತ್ತು ಅದು ಯಾವೆಲ್ಲ ಅನುಮತಿಗಳನ್ನು (ಪರ್ಮಿಶನ್) ಕೇಳುತ್ತಿದೆ ಎಂದು ಹುಷಾರಾಗಿ ಗಮನಿಸಿಕೊಳ್ಳಬೇಕು. ಯಾವುದೇ ಆಪ್‍ನ ಉದ್ದೇಶ ಸ್ಪಷ್ಟವಿಲ್ಲದಿದ್ದರೆ ಅದನ್ನು ಡೌನ್‍ಲೋಡ್ ಮಾಡದಿರುವುದೇ ಒಳಿತು!

ಹಿಂದಿನ ಸಮಾಚಾರ
ನಮ್ಮೆಲ್ಲರ ಬದುಕಿನಲ್ಲಿ ಬೆಳಕಿನ ಪಾತ್ರ ಬಲು ಮಹತ್ವದ್ದು. ಸಸ್ಯಗಳು ಆಹಾರ ತಯಾರಿಸುವುದರಿಂದ ಪ್ರಾರಂಭಿಸಿ ನಮ್ಮ ವ್ಯವಹಾರಗಳನ್ನು ಅಬಾಧಿತವಾಗಿ ನಡೆಸುವವರೆಗೆ ಪ್ರತಿಯೊಂದಕ್ಕೂ ಬೆಳಕು ಅತ್ಯಗತ್ಯ. ತಂತ್ರಜ್ಞಾನ ಜಗತ್ತಿನಲ್ಲೂ ಬೆಳಕಿಗೆ ಮಹತ್ವದ ಪಾತ್ರವಿದೆ. ಈ ಕ್ಷೇತ್ರದಲ್ಲಿ ಬೆಳಕಿನ ಉಪಯೋಗಗಳಿಗೆ ಲೇಸರ್‍ಒಂದು ಒಳ್ಳೆಯ ಉದಾಹರಣೆ. ಉತ್ತಮ ಗುಣಮಟ್ಟದ ಮುದ್ರಣವಿರಲಿ, ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಶಸ್ತ್ರಚಿಕಿತ್ಸೆಯೇ ಇರಲಿ, ಬಹಳಷ್ಟು ಉದ್ದೇಶಗಳಿಗೆ ಲೇಸರ್ ಬಳಕೆ ಇದೀಗ ಸಾಮಾನ್ಯವಾಗಿದೆ. ಈ ತಂತ್ರಜ್ಞಾನವನ್ನು ಅಮೆರಿಕಾದ ವಿಜ್ಞಾನಿ ಥಿಯೊಡೋರ್ ಮೈಮನ್ ಮೊತ್ತಮೊದಲ ಬಾರಿಗೆ ಪ್ರದರ್ಶಿಸಿದ್ದು 1960ರ ಮೇ 16ರಂದು. ಈ ವಿಶಿಷ್ಟ ಸಾಧನೆಯ ಸ್ಮರಣಾರ್ಥ ಪ್ರತಿವರ್ಷವೂ ಆ ದಿನವನ್ನು’ಅಂತಾರಾಷ್ಟ್ರೀಯ ಬೆಳಕಿನ ದಿನ’ ಎಂದು ಆಚರಿಸಲಾಗುತ್ತಿದೆ.

Leave a Reply

Your email address will not be published.