ಇ-ಜ್ಞಾನ

ಟೆಕ್ ಸುದ್ದಿ

ಸ್ಮಾರ್ಟ್‍ ಫೋನುಗಳಲ್ಲಿ ಬಳಕೆಯಾಗುವ ಕಾರ್ಯಾಚರಣ ವ್ಯವಸ್ಥೆಗಳ (ಆಪರೇಟಿಂಗ್ ಸಿಸ್ಟಂ, ಓಎಸ್) ಪೈಕಿ ಬಹಳ ಜನಪ್ರಿಯವಾಗಿರುವುದು ಆಂಡ್ರಾಯ್ಡ್ ನ ಹೆಗ್ಗಳಿಕೆ. ಗೂಗಲ್ ಸಂಸ್ಥೆ ನಿರ್ವಹಿಸುವ ಈ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿ – ಆಂಡ್ರಾಯ್ಡ್ ಕ್ಯೂ – ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಇಂಗ್ಲಿಷಿನ ಅಕಾರಾದಿ ಕ್ರಮವನ್ನುಅನುಸರಿಸುವ ಆಂಡ್ರಾಯ್ಡ್ ಆವೃತ್ತಿಗಳನ್ನು ಸಿಹಿತಿಂಡಿಗಳ ಹೆಸರಿನಿಂದ ಗುರುತಿಸುವುದು (ನೌಗಾಟ್, ಓರಿಯೋ, ಪೈ, ಹೀಗೆ) ಗೂಗಲ್‍ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಪ್ರತಿಯೊಂದು ಹೊಸ ಆವೃತ್ತಿ ಘೋಷಣೆಯಾದಾಗಲೂ ಅದಕ್ಕೆ ಯಾವ ತಿಂಡಿಯ ಹೆಸರು ಸಿಗಬಹುದು ಎನ್ನುವ ಪ್ರಶ್ನೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ. ‘ಕ್ಯೂ’ ಅಕ್ಷರದಿಂದ ಶುರುವಾಗುವ ತಿಂಡಿಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲದ ಕಾರಣ ಈ ಬಾರಿ ಈ ಕುತೂಹಲ ಇನ್ನಷ್ಟು ಜಾಸ್ತಿಯಾಗಿದೆ.

ಟೆಕ್ ಪದ
ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲಿ ದತ್ತಾಂಶಕ್ಕೆ (ಡೇಟಾ) ಎಲ್ಲಿಲ್ಲದ ಮಹತ್ವ. ತಮ್ಮ ವಹಿವಾಟಿನ ಬಗ್ಗೆ, ಗ್ರಾಹಕರ ಬಗ್ಗೆ, ಲಾಭನಷ್ಟಗಳ ಬಗ್ಗೆ ಎಲ್ಲ ಸಂಸ್ಥೆಗಳೂ ದತ್ತಾಂಶವನ್ನು ಸಂಗ್ರಹಿಸುತ್ತಿರುತ್ತವೆ. ಹೀಗೆ ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಿಸಿ, ಅದರಿಂದ ದೊರಕುವ ಮಾಹಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದು ಅವುಗಳ ಉದ್ದೇಶ. ತನ್ನ ಎಲ್ಲ ಉದ್ಯೋಗಿಗಳಿಗೂ ದತ್ತಾಂಶದ ಮಹತ್ವ ತಿಳಿದಿರಬೇಕು ಎಂದು ಈ ಸಂಸ್ಥೆಗಳು ಅಪೇಕ್ಷಿಸುತ್ತವೆ. ದತ್ತಾಂಶ ಎಲ್ಲಿಂದ ಬರುತ್ತದೆ, ಅದರ ಮಹತ್ವ ಏನು, ಅದನ್ನು ಹೇಗೆ ಸಂಸ್ಕರಿಸಲಾಗುತ್ತದೆ, ಸಂಸ್ಕರಿಸಿದ ನಂತರ ದೊರಕುವ ಮಾಹಿತಿಯನ್ನು ಬಳಸಿಕೊಳ್ಳುವುದು ಹೇಗೆ -ಇಂತಹ ವಿಷಯಗಳನ್ನೆಲ್ಲ ಉದ್ಯೋಗಿಗಳು ಇದೀಗ ತಿಳಿದಿರಲೇಬೇಕು. ಓದಲು ಬರೆಯಲು ಗೊತ್ತಿರುವುದಕ್ಕೆ ಸಾಕ್ಷರತೆ ಎನ್ನುವಂತೆ, ದತ್ತಾಂಶದ ಬಗೆಗೆ ತಿಳಿದಿರುವುದಕ್ಕೆ ‘ದತ್ತಾಂಶ ಸಾಕ್ಷರತೆ’ (ಡೇಟಾ ಲಿಟೆರಸಿ) ಎಂಬ ಹೊಸ ಹೆಸರನ್ನೇ ನೀಡಲಾಗಿದೆ.

ಟೆಕ್ ಸಲಹೆ

ಅಂತರಜಾಲ ಸಂಪರ್ಕ ಬಳಸಿಕೊಂಡು ನಮ್ಮ ಹಲವಾರು ಕೆಲಸಗಳನ್ನು ಮಾಡಿಕೊಳ್ಳುವುದು ಸಾಮಾನ್ಯಅಭ್ಯಾಸ. ಇದಕ್ಕಾಗಿ ಬಹಳಷ್ಟು ಸಾರಿ ಮೊಬೈಲ್‍ ಜಾಲವನ್ನೇ ಬಳಸಿದರೂ ಬೇರೆ ದೇಶಕ್ಕೆ ಹೋದಾಗ, ಮೊಬೈಲ್ ಸಂಕೇತ ಸರಿಯಾಗಿ ಸಿಗದ (ಉದಾ: ರೈಲು ನಿಲ್ದಾಣ) ಜಾಗಗಳಲ್ಲಿದ್ದಾಗ ಸಾರ್ವಜನಿಕ ವೈ-ಫೈ ಹಾಟ್‍ಸ್ಪಾಟ್‍ಗಳು ನಮ್ಮ ನೆರವಿಗೆ ಬರುತ್ತವೆ. ಇವು ಉಪಯುಕ್ತ ಎನ್ನುವುದೇನೋ ನಿಜ. ಆದರೆ ಇಂತಹ ಸಂಪರ್ಕಗಳನ್ನು ಯಾರು ಬೇಕಾದರೂ ಉಪಯೋಗಿಸಬಹುದಾದ್ದರಿಂದ ಅಲ್ಲಿ ಕುತಂತ್ರಿಗಳು ನಮ್ಮ ಮಾಹಿತಿಯನ್ನು ಕದಿಯಲು ಪ್ರಯತ್ನಿಸುವ ಸಾಧ್ಯತೆ ಖಂಡಿತಾ ಇರುತ್ತದೆ. ಹಾಗಾಗಿ ಸಾರ್ವಜನಿಕ ವೈ-ಫೈ ಬಳಸುವಾಗ ಹಣಕಾಸು ವ್ಯವಹಾರ, ಖಾಸಗಿ ಮಾಹಿತಿಯ ರವಾನೆ ಮುಂತಾದವನ್ನು ಮಾಡದಿರುವುದು ಒಳ್ಳೆಯದು. ಕೆಲಸ ಮುಗಿದ ತಕ್ಷಣ ಇಂತಹ ಸಂಪರ್ಕಗಳನ್ನು ಕಡಿತಗೊಳಿಸುವುದು ಕೂಡ ಉತ್ತಮ ಅಭ್ಯಾಸ.

ಆಪ್-ತ ಮಿತ್ರ
ಮಾಹಿತಿ ಮಹಾಪೂರದ ಈ ದಿನಗಳಲ್ಲಿ ನಮ್ಮ ಸಂಪರ್ಕಕ್ಕೆ ಬರುವ ಮಾಹಿತಿಯನ್ನು ಸಮರ್ಪಕವಾಗಿ ನಿಭಾಯಿಸುವುದು ಬಹಳ ಕಷ್ಟ. ಇತರ ಅನೇಕ ಉದ್ದೇಶಗಳಂತೆ ಇಲ್ಲೂ ಮೊಬೈಲ್ ಆಪ್‍ಗಳ ಸಹಾಯ ಪಡೆದುಕೊಳ್ಳುವುದು ಸಾಧ್ಯ. ವಿವಿಧ ಜಾಲತಾಣಗಳಲ್ಲಿ ನಾವು ನೋಡುವ, ಮತ್ತೊಮ್ಮೆ ಬೇಕಾಗಬಹುದು ಅನ್ನಿಸುವ ಮಾಹಿತಿಯನ್ನು ಉಳಿಸಿಟ್ಟುಕೊಂಡು ಬೇಕಾದಾಗ ಬಳಸಲು ‘ಪಾಕೆಟ್’ ಆಪ್‍ಅನ್ನು ಬಳಸಬಹುದು. ಮೊಬೈಲಿನಲ್ಲಿ, ಕಂಪ್ಯೂಟರಿನಲ್ಲಿ ನಾವು ನೋಡುವ ವೆಬ್ ಪುಟಗಳನ್ನು ಈ ಆಪ್‍ಗೆ ಸೇರಿಸಿಟ್ಟುಕೊಂಡರೆ ಸಾಕು, ಆಮೇಲೆ ಯಾವ ಸಾಧನದಿಂದ ಯಾವಾಗ ಬೇಕಾದರೂ ಆ ಮಾಹಿತಿಯನ್ನು ತೆರೆದು ಓದುವುದು ಸಾಧ್ಯ. ನಾವು ಬಳಸಲು ಇಚ್ಛಿಸುವ ಸಾಧನಕ್ಕೆ ನಮ್ಮ ಮಾಹಿತಿ ಒಮ್ಮೆ ಸೇರಿತೆಂದರೆ ಆಮೇಲೆ ಅಂತರಜಾಲ ಸಂಪರ್ಕ ಇಲ್ಲದಿದ್ದಾಗಲೂ ಅದನ್ನು ಓದಿಕೊಳ್ಳಬಹುದು.
ಹೆಚ್ಚಿನ ವಿವರಗಳಿಗೆ: getpocket.com

ಜಾಲಜಗತ್ತು
ನಮ್ಮ ಧ್ವನಿಯನ್ನು ಪಠ್ಯರೂಪಕ್ಕೆ ಪರಿವರ್ತಿಸುವುದು ‘ಸ್ಪೀಚ್ ಟುಟೆಕ್ಸ್ಟ್’ ತಂತ್ರಜ್ಞಾನದ ಕೆಲಸ. ಕನ್ನಡವೂ ಸೇರಿದಂತೆ ಪ್ರಪಂಚದ ಹಲವು ಭಾಷೆಗಳಲ್ಲಿ ಈ ತಂತ್ರಜ್ಞಾನ ಲಭ್ಯವಿದೆ. ಈಗಾಗಲೇ ಬಂದಿರುವ ಆಪ್‍ಗಳ ಮೂಲಕ ಈ ತಂತ್ರಜ್ಞಾನವನ್ನು ಮೊಬೈಲಿನಲ್ಲಿ ಬಳಸುವುದು ಸಾಧ್ಯವಾಗಿದೆ. ಮೊಬೈಲಿನ ಬದಲು ಕಂಪ್ಯೂಟರಿನಲ್ಲಿ ಈ ತಂತ್ರಜ್ಞಾನ ಬಳಸಬೇಕು ಎನ್ನುವವರಿಗೆ ‘ಡಿಕ್ಟೇಶನ್’ ಜಾಲತಾಣ ನೆರವಾಗಬಲ್ಲದು. ಅಂತರಜಾಲ ಸಂಪರ್ಕ, ಮೈಕ್ರೋಫೋನ್ ಸೌಲಭ್ಯ ಹಾಗೂ ಗೂಗಲ್‍ಕ್ರೋಮ್ ಬ್ರೌಸರ್‍ ಇರುವ ಯಾವುದೇ ಕಂಪ್ಯೂಟರಿನಲ್ಲಿ ಈ ತಾಣವನ್ನು ತೆರೆದರೆ ಸಾಕು, ಅದು ನಮ್ಮ ಮಾತುಗಳನ್ನು ಗ್ರಹಿಸಿ ಪಠ್ಯರೂಪಕ್ಕೆ ಬದಲಿಸಿಕೊಡುತ್ತದೆ (ನಮ್ಮ ಭಾಷೆ ಯಾವುದು ಎನ್ನುವುದನ್ನು ಮುಂಚಿತವಾಗಿಯೇ ಆರಿಸಿಕೊಳ್ಳಬೇಕು). ಈ ತಾಣದ ಸೌಲಭ್ಯಗಳನ್ನು ಬಳಸಲು ಬೇಕಾದ ಸಹಾಯ ಕೂಡ ಇದೇ ಜಾಲತಾಣದಲ್ಲಿದೆ.
ಜಾಲತಾಣದ ಕೊಂಡಿ: dictation.io/speech

ಹಿಂದಿನ ಸಮಾಚಾರ
ಸೂಪರ್ ಮಾರ್ಕೆಟ್ಟಿನಲ್ಲಿ ನಾವು ಕೊಂಡ ವಸ್ತುವಿನ ಮೇಲಿರುವಕಪ್ಪು ಗೆರೆಗಳ ಸಂಕೇತವೊಂದನ್ನು ಸ್ಕ್ಯಾನ್ ಮಾಡಿದಾಗ ಅದರ ಹೆಸರು ಮತ್ತು ಬೆಲೆ ಕಂಪ್ಯೂಟರಿನಲ್ಲಿ ಪ್ರತ್ಯಕ್ಷವಾಗುವುದನ್ನು ನಾವು ನೋಡಿದ್ದೇವೆ. ಆ ಸಂಕೇತದ ಹೆಸರೇ ಬಾರ್‍ಕೋಡ್. ಇದನ್ನು ಯೂನಿವರ್ಸಲ್ ಪ್ರಾಡಕ್ಟ್ ಕೋಡ್ (ಯುಪಿಸಿ) ಎಂದೂ ಕರೆಯಲಾಗುತ್ತದೆ. ಯಾವ ವಸ್ತುವಿನ ಮೇಲಿದೆಯೋ ಅದನ್ನು ಕುರಿತ ಏನಾದರೊಂದು ಮಾಹಿತಿಯನ್ನು (ಉದಾ: ಬಿಸ್ಕತ್ ಪೊಟ್ಟಣದ ಬೆಲೆ) ಈ ಸಂಕೇತ ಸೂಚಿಸುತ್ತದೆ. ಈ ಮಾಹಿತಿಯನ್ನು ಹುದುಗಿಸಿಡಲು -ಸ್ಕ್ಯಾನರ್ ಸಹಾಯದಿಂದ ಓದಲು ಕಪ್ಪು ಗೆರೆಗಳ ಗಾತ್ರ ಹಾಗೂ ಅವುಗಳ ನಡುವಿನ ಅಂತರವನ್ನು ಬಳಸಿಕೊಳ್ಳಲಾಗುತ್ತದೆ. ಮೊತ್ತಮೊದಲ ಬಾರಿ ಅಂಗಡಿಯೊಂದರಲ್ಲಿ ಯುಪಿಸಿ ಬಳಕೆಯಾದದ್ದು ಅಮೆರಿಕಾದ ಟ್ರಾಯ್ ನಗರದಲ್ಲಿ, 1974ರ ಜೂನ್ 26ರಂದು.

Leave a Reply

Your email address will not be published.