ಇ-ಜ್ಞಾನ

ಟೆಕ್ ಸುದ್ದಿ
3ಜಿ, 4ಜಿ ಮುಂತಾದ ಹೊಸ ತಲೆಮಾರುಗಳು ಬಂದಂತೆಲ್ಲ ಮೊಬೈಲ್ ಜಗತ್ತಿನಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿರುವುದನ್ನು ನಾವು ನೋಡಿದ್ದೇವೆ. ಇನ್ನೇನು ಬರಲಿರುವ 5ಜಿ ಹಿಂದಿನ ತಲೆಮಾರುಗಳಿಗಿಂತ ಹೆಚ್ಚಿನ ಬದಲಾವಣೆಗಳನ್ನು ತರಲಿದೆ ಎನ್ನಲಾಗಿದೆ. ಮೊಬೈಲ್ ಫೋನುಗಳಿಗೆ ಹೆಚ್ಚಿನ ವೇಗದ ಸಂಪರ್ಕವನ್ನು ನೀಡುವ ಜೊತೆಗೆ ಈ ತಂತ್ರಜ್ಞಾನ ವಸ್ತುಗಳ ಅಂತರಜಾಲದ (ಐಓಟಿ) ಮೂಲಕ ಅಂತರಜಾಲದ ಸಂಪರ್ಕಕ್ಕೆ ಬರುವ ಅಸಂಖ್ಯ ಸಣ್ಣ-ದೊಡ್ಡ ಸಾಧನಗಳಿಗೂ ಅತಿವೇಗದ, ಅಡಚಣೆಯಿಲ್ಲದ ಸಂಪರ್ಕ ಒದಗಿಸಲಿದೆ. ಈ ತಂತ್ರಜ್ಞಾನದ ಅನುಕೂಲಗಳು ಎಲ್ಲರಿಗೂ ಸಿಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಮೊಬೈಲ್ ಸೇವಾ ಸಂಸ್ಥೆಗಳಿಗೆ 5ಜಿ ತರಂಗಾಂತರಗಳನ್ನು ಒದಗಿಸಿಕೊಡುವ ಹರಾಜು ಪ್ರಕ್ರಿಯೆ ಇಷ್ಟರಲ್ಲೇ ಆರಂಭವಾಗುವ ನಿರೀಕ್ಷೆಯಿದೆ.

ಟೆಕ್ ಪದ

ಐಟಿ ಲೋಕದಲ್ಲಿ ಎಲ್ಲೆಲ್ಲೂ ದತ್ತಾಂಶದ್ದೇ (ಡೇಟಾ) ಭರಾಟೆ. ಗ್ರಾಹಕರ ಚಟುವಟಿಕೆ, ತಮ್ಮ ಉತ್ಪನ್ನಗಳ ಮಾರಾಟ, ವ್ಯಾಪಾರದಲ್ಲಿನ ಲಾಭ-ನಷ್ಟ ಸೇರಿದಂತೆ ಹಲವಾರು ಬಗೆಯ ದತ್ತಾಂಶಗಳನ್ನು ಸಂಸ್ಥೆಗಳು ಸಂಗ್ರಹಿಸಿ ವಿಶ್ಲೇಷಿಸುವುದು ಹಾಗೂ ಆ ವಿಶ್ಲೇಷಣೆಯನ್ನು ತಮ್ಮ ವ್ಯಾಪಾರ ವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವುದು ಈಗ ಸಾಮಾನ್ಯವಾಗಿದೆ. ಈ ಒಟ್ಟಾರೆ ಪ್ರಕ್ರಿಯೆಯನ್ನು ‘ಅನಲಿಟಿಕ್ಸ್’ ಎಂದು ಕರೆಯುತ್ತಾರೆ. ದತ್ತಾಂಶ ಸಂಗ್ರಹಿಸಲು ಹಾಗೂ ಅದನ್ನು ವರದಿ ಅಥವಾ ಚಿತ್ರಗಳ ರೂಪದಲ್ಲಿ ಪ್ರಸ್ತುತಪಡಿಸಲು ಮಾತ್ರವೇ ಅಲ್ಲ, ಸ್ವಯಂಚಾಲಿತವಾಗಿ ವಿಶ್ಲೇಷಿಸುವುದಕ್ಕೂ ಕಂಪ್ಯೂಟರಿನ ಸಹಾಯ ಪಡೆದುಕೊಳ್ಳುವ ಪರಿಪಾಠ ಇದೀಗ ಚಾಲ್ತಿಗೆ ಬರುತ್ತಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಹಳ ಉಪಯುಕ್ತವಾಗಲಿದೆ ಎನ್ನಲಾಗುವ ಈ ಪರಿಕಲ್ಪನೆಗೆ ‘ಆಗ್‍ಮೆಂಟೆಡ್ ಅನಲಿಟಿಕ್ಸ್’ (ಆಗ್‍ಮೆಂಟೆಡ್ = ಅಧಿಕಗೊಳಿಸಿದ) ಎಂದು ಹೆಸರಿಡಲಾಗಿದೆ.

ಆಪ್-ತ ಮಿತ್ರ

ಮೊಬೈಲ್ ಬಿಟ್ಟು ಪುಸ್ತಕ ಹಿಡಿಯುವುದು ಕಷ್ಟ ಎನ್ನುವವರಿಗಾಗಿ ವಿದ್ಯುನ್ಮಾನ ಪುಸ್ತಕಗಳು (ಇ-ಬುಕ್) ಲಭ್ಯವಿರುವುದು ನಮಗೆಲ್ಲ ಗೊತ್ತೇ ಇದೆ. ಅದನ್ನೂ ಓದಲು ಕಷ್ಟ ಎನ್ನುವವರಿಗಾಗಿ ಬಂದಿರುವ ಕೇಳು ಪುಸ್ತಕಗಳು (ಆಡಿಯೋ ಬುಕ್) ನಿಧಾನಕ್ಕೆ ಜನಪ್ರಿಯತೆ ಗಳಿಸಿಕೊಳ್ಳುತ್ತಿವೆ. ಬಿಡುವಿನ ವೇಳೆಯಲ್ಲಿ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಕೇಳಬಹುದಾದ ಇಂತಹ ಪುಸ್ತಕಗಳನ್ನು ಕನ್ನಡದಲ್ಲೂ ನೀಡುವ ಹೊಸ ಪ್ರಯತ್ನವೇ ‘ಆಲಿಸಿರಿ’ ಎನ್ನುವ ಮೊಬೈಲ್ ಆಪ್. ಲಭ್ಯವಿರುವ ಪುಸ್ತಕಗಳ ಪೈಕಿ ನಮಗೆ ಬೇಕಾದ್ದನ್ನು ಜಾಲತಾಣದಲ್ಲಿ ಕೊಂಡ ನಂತರ ಆಪ್ ಬಳಸಿ ಕೇಳುವುದು ಸಾಧ್ಯ. ಅನುಪಮಾ ನಿರಂಜನ, ಟಿ.ಪಿ.ಕೈಲಾಸಂ, ಶ್ರೀನಿವಾಸ ವೈದ್ಯ, ಡಾ.ಕೆ. ಎನ್.ಗಣೇಶಯ್ಯ ಸೇರಿದಂತೆ ಹಲವು ಖ್ಯಾತನಾಮರ ಒಂದಷ್ಟು ಕೃತಿಗಳು ಇಲ್ಲಿ ಲಭ್ಯವಿವೆ. ಪ್ಲೇಸ್ಟೋರ್ ಕೊಂಡಿ: tinyurl.com/aalisiri

ಜಾಲಜಗತ್ತು

ವಿಶ್ವವ್ಯಾಪಿ ಜಾಲದಲ್ಲಿ ಯಾವುದೇ ಮಾಹಿತಿ ಬೇಕಾದರೂ ಗೂಗಲ್ ಮೊರೆಹೋಗುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ. ಬೇಕಾದ ವಿಷಯದ ಬಗ್ಗೆ ಕೆಲವು ಪದಗಳನ್ನು ಟೈಪ್ ಮಾಡಿದರೆ ಆಯಿತು, ಗೂಗಲ್ ಅದರ ಬಗ್ಗೆ ಮಾಹಿತಿ ಹುಡುಕಿಕೊಡುತ್ತದೆ. ನಮಗೆ ಯಾರೋ ಕಳಿಸಿದ ಚಿತ್ರದ ಬಗ್ಗೆ ಮಾಹಿತಿ ಹುಡುಕಬೇಕಾದರೆ? ಗೂಗಲ್‍ನಲ್ಲಿ ಅದೂ ಸಾಧ್ಯ. ‘ಗೂಗಲ್ ಇಮೇಜಸ್’ ತಾಣಕ್ಕೆ ಹೋಗಿ ನಮ್ಮಲ್ಲಿರುವ ಚಿತ್ರವನ್ನು ಅದಕ್ಕೆ ಊಡಿಸಿದರೆ ಆಯಿತು, ಆ ಚಿತ್ರದ ಬಗ್ಗೆ ಅಂತರಜಾಲದಲ್ಲಿ ಇರಬಹು ದಾದ ಮಾಹಿತಿಯನ್ನು ಅದು ನಮಗೆ ಹುಡುಕಿಕೊಡುತ್ತದೆ. ಸುಳ್ಳು ಮಾಹಿತಿಯೊಡನೆ ಫಾರ್‍ವರ್ಡ್ ಮಾಡಲಾಗುವ ಚಿತ್ರಗಳ ಮೂಲ ತಿಳಿದು ಕೊಳ್ಳಲು ಮತ್ತು ಆ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸಲು ಇದೊಂದು ಉತ್ತಮ ಮಾರ್ಗ.

ಜಾಲತಾಣದ ಕೊಂಡಿ: images.google.com

ಟೆಕ್ ಸಲಹೆ

ನಮ್ಮ ಮೊಬೈಲಿನಲ್ಲಿ ಹತ್ತಾರು ಮೊಬೈಲ್ ಆಪ್‍ಗಳಿರುವುದು ಸಾಮಾನ್ಯ. ಈ ಪೈಕಿ ಕೆಲವನ್ನು ಯಾವಾಗಲೋ ಇನ್‍ಸ್ಟಾಲ್ ಮಾಡಿಕೊಂಡು ಮರೆತಿರುವ ಸಾಧ್ಯತೆಯೂ ಇರುತ್ತದೆ. ಈ ಆಪ್‍ಗಳಿಗೆ ನಾವು ಏನೆಲ್ಲ ಅನುಮತಿ (ಪರ್ಮಿಶನ್) ಕೊಟ್ಟಿದ್ದೇವೆ ಎಂದು ಗಮನಿಸುವುದು, ಅಗತ್ಯವಿಲ್ಲ ಎನಿಸಿದರೆ ಆ ಅನುಮತಿಗಳನ್ನು ಹಿಂದಕ್ಕೆ ಪಡೆಯುವುದು ಒಳ್ಳೆಯದು. ಹೀಗೆ ಮಾಡಲು ನಿಮ್ಮ ಆಂಡ್ರಾಯ್ಡ್ ಫೋನಿನ ಸೆಟಿಂಗ್ಸ್‍ಗೆ ಹೋಗಿ ‘ಆಪ್ ಪರ್ಮಿಶನ್ಸ್’ ಎಂದು ಹುಡುಕಬಹುದು. ಆಗ ಸಿಗುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಮ್ಮ ಫೋನಿನಲ್ಲಿರುವ ಯಾವೆಲ್ಲ ಆಪ್‍ಗಳಿಗೆ ಏನೆಲ್ಲ ಅನುಮತಿ ಕೊಟ್ಟಿದ್ದೇವೆ ಎನ್ನುವುದನ್ನು ಒಂದೇ ಕಡೆ ನೋಡುವುದು ಸಾಧ್ಯವಾಗುತ್ತದೆ. ಅನಗತ್ಯ ಎನಿಸಿದ ಅನುಮತಿಗಳನ್ನು ಇಲ್ಲಿಯೇ ಹಿಂಪಡೆಯುವುದು ಕೂಡ ಸಾಧ್ಯ.

ಹಿಂದಿನ ಸಮಾಚಾರ

ಎಲ್ಲಿ ಬೇಕಾದರೂ ದೂರವಾಣಿ ಬಳಸುವುದನ್ನು ಮೊಬೈಲ್ ಫೋನ್ ಸಾಧ್ಯವಾಗಿಸಿದಂತೆ ಎಲ್ಲಿ ಬೇಕಾದರೂ ಹಾಡು ಕೇಳುವುದನ್ನು ಸಾಧ್ಯವಾಗಿಸಿದ್ದು ವಾಕ್‍ಮನ್‍ನ ಹೆಗ್ಗಳಿಕೆ. ದೊಡ್ಡದೊಡ್ಡ ಟೇಪ್ ರೆಕಾರ್ಡರುಗಳಲ್ಲಿ ಮಾತ್ರವೇ ಕೇಳಬೇಕಿದ್ದ ಆಡಿಯೋ ಕ್ಯಾಸೆಟ್ಟುಗಳನ್ನು ಪುಟ್ಟ ಗಾತ್ರದ ಯಂತ್ರದಲ್ಲೇ ಕೇಳುವುದನ್ನು ಮತ್ತು ಆ ಯಂತ್ರವನ್ನು ಬೇಕಾದ ಕಡೆಗೆ ಕೊಂಡೊಯ್ಯುವುದನ್ನು ಸೋನಿ ಸಂಸ್ಥೆಯ ಈ ಪರಿಕಲ್ಪನೆ ಸಾಧ್ಯವಾಗಿಸಿತು. ಮುಂದೆ ಬಂದ ಡಿಸ್ಕ್ ಮನ್ ಹಾಗೂ ಪುಟಾಣಿ ಎಂಪಿ3 ಪ್ಲೇಯರುಗಳಿಗೆ, ಐಪಾಡ್‍ನಂತಹ ಸಾಧನಗಳಿಗೆ ಪ್ರೇರಣೆಯಾಗಿದ್ದೂ  ಇದೇ ವಾಕ್‍ಮನ್. ಸೋನಿ ವಾಕ್‍ಮನ್‍ನ ಮೊದಲ ಮಾದರಿ ಮಾರುಕಟ್ಟೆಗೆ ಬಂದದ್ದು ನಲವತ್ತು ವರ್ಷಗಳ ಹಿಂದೆ, 1979ರ ಜುಲೈ 1ರಂದು. ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದ ವಾಕ್‍ಮನ್ ಹೆಸರಿಗೆ ಆಕ್ಸ್ ಫರ್ಡ್ ನಿಘಂಟಿನಲ್ಲೂ ಜಾಗಸಿಕ್ಕಿದೆ.

Leave a Reply

Your email address will not be published.