ಇ-ಜ್ಞಾನ

– ಟಿ.ಜಿ.ಶ್ರೀನಿದಿ

ಟೆಕ್ ಸುದಿ

ಹೊಸ ಮೊಬೈಲ್ ಫೋನುಗಳಲ್ಲಿ ನೂರೆಂಟು ಸೌಲಭ್ಯಗಳಿರುವುದು ಹಳೆಯ ವಿಷಯ. ಪೇಪರ್ ಓದಿದ ಮೇಲೆ ಅದನ್ನು ಮಡಚಿ ಎತ್ತಿಡುವಂತೆ ಮೊಬೈಲ್ ಫೋನನ್ನೂ ಮಡಚಿಡುವ ಸೌಲಭ್ಯ ಸದ್ಯದಲ್ಲೇ ಬರಲಿದೆಯಂತೆ. ಹೀಗೆ ಮಡಚಬಹುದಾದ (ಫೋಲ್ಡಬಲ್) ಫೋನಿನ ವಿನ್ಯಾಸವೊಂದನ್ನು ಮೊಬೈಲ್ ಫೋನ್ ನಿರ್ಮಾತೃ ಸಂಸ್ಥೆ ಸ್ಯಾಮ್‍ಸಂಗ್ ಪ್ರದರ್ಶಿಸಿದೆ. ಟ್ಯಾಬ್ಲೆಟ್ ಗಾತ್ರದ ಸಾಧನವೊಂದನ್ನು ಎರಡು ಬಾರಿ ಮಡಚಿ ಮೊಬೈಲ್ ಫೋನಿನ ಗಾತ್ರಕ್ಕೆ ಬದಲಿಸುವುದು ಈ ವಿನ್ಯಾಸದ ಹೆಗ್ಗಳಿಕೆ. ಬಹಳ ಸಮಯದಿಂದ ಸುದ್ದಿಮಾಡುತ್ತಿದ್ದ ಈ ಪರಿಕಲ್ಪನೆ ಮಾರುಕಟ್ಟೆ ಪ್ರವೇಶಿಸುವ ಸಮಯ ಇದೀಗ ಸನ್ನಿಹಿತವಾಗಿದೆ ಎನ್ನಲಾಗಿದ್ದು, ಮಡಚಿ ಇಡಬಹುದಾದ ಮೊಬೈಲುಗಳು ಬರುವ ವರ್ಷದ ಮೊದಲ ಭಾಗದಲ್ಲೇ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ

ಆಪ್-ತ ಮಿತ್ರ

ಮೊಬೈಲ್ ಫೋನುಗಳಲ್ಲಿ ಕಡತಗಳನ್ನು ಉಳಿಸಿಡಲು ಸ್ಥಳಾವಕಾಶ ಎಷ್ಟಿದ್ದರೂ ಸಾಲುವುದಿಲ್ಲ. ಹೊಸ ಕಡತಗಳು, ಆಪ್‍ಗಳು ನಮ್ಮ ಫೋನಿನಲ್ಲಿ ಸೇರುತ್ತಾ ಹೋದಂತೆ ಅವನ್ನೆಲ್ಲ ಸರಿಯಾಗಿ ನಿಭಾಯಿಸುವುದು, ಬೇಡದ್ದನ್ನು ಆಗಿಂದಾಗ್ಗೆ ಅಳಿಸಿಹಾಕುವುದು ತಲೆನೋವಾಗಿ ಪರಿಣಮಿಸುತ್ತದೆ. ಈ ಸಮಸ್ಯೆಗೆ ಸುಲಭ ಪರಿಹಾರ ನೀಡುವುದು ಗೂಗಲ್‍ನ ‘ಫೈಲ್ಸ್’ ಆಪ್. ದೊಡ್ಡ ಕಡತಗಳನ್ನು, ಬಳಸದ ಆಪ್‍ಗಳನ್ನು, ನಿಷ್ಪ್ರಯೋಜಕ ಮಾಹಿತಿಯನ್ನು ಗುರುತಿಸಿ ಅಳಿಸಲು ಇದು ನೆರವಾಗುತ್ತದೆ. ಒಂದೇ ಕಡತದ ಒಂದಕ್ಕಿಂತ ಹೆಚ್ಚು ಪ್ರತಿಗಳು ನಮ್ಮ ಫೋನಿನಲ್ಲಿದ್ದರೆ (ಉದಾ: ಒಂದೇ ವಾಟ್ಸಾಪ್ ಫಾರ್‍ವರ್ಡ್ ಬೇರೆಬೇರೆಯವರಿಂದ ಬಂದಿದ್ದು) ಈ ಆಪ್ ಸಹಾಯದಿಂದ ಅದನ್ನೂ ಗುರುತಿಸಿ ಅಳಿಸುವುದು ಸಾಧ್ಯ. ಕಡತಗಳನ್ನು ಇತರರೊಡನೆ ಕ್ಷಿಪ್ರವಾಗಿ ಹಂಚಿಕೊಳ್ಳುವ ಸೌಲಭ್ಯವೂ ಇದರಲ್ಲಿದೆ.

ಪ್ಲೇಸ್ಟೋರ್ ಕೊಂಡಿ:  tinyurl.com/filesbygoogle

ಜಾಲಜಗತ್ತು

ವಿದ್ಯುನ್ಮಾನ ರೂಪದಲ್ಲಿ ದೊರಕುವ ಪುಸ್ತಕಗಳನ್ನು ‘ಇ-ಪುಸ್ತಕ’ಗಳೆಂದು ಗುರುತಿಸುವುದು ನಮಗೆ ಗೊತ್ತು. 1971ರಿಂದ ಇಲ್ಲಿಯವರೆಗೆ ಓದುಗರಿಗೆ ಇಂತಹ ಅದೆಷ್ಟೋ ಇ-ಪುಸ್ತಕಗಳನ್ನು ಉಚಿತವಾಗಿ ಒದಗಿಸುತ್ತ ಬಂದಿರುವ ತಾಣವೇ ಪ್ರಾಜೆಕ್ಟ್ ಗುಟನ್‍ಬರ್ಗ್. ಈ ತಾಣವನ್ನು ಪ್ರಾರಂಭಿಸಿದ್ದು ಇ-ಬುಕ್ ಪಿತಾಮಹನೆಂದೇ ಹೆಸರಾದ ಮೈಕಲ್ ಹಾರ್ಟ್ ಎಂಬ ವ್ಯಕ್ತಿ. ಸಾವಿರಾರು ಸ್ವಯಂಸೇವಕರ ನೆರವಿನಿಂದ ಕೆಲಸಮಾಡುತ್ತಿರುವ ಈ ಯೋಜನೆ ವಿಶ್ವದ ಹಲವಾರು ಭಾಷೆಗಳ ಐವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ಓದುಗರಿಗೆ ಉಚಿತವಾಗಿ ಒದಗಿಸಿದೆ. ಈ ಪುಸ್ತಕಗಳನ್ನು ಇಪಬ್, ಟೆಕ್ಸ್ಟ್, ಎಚ್‍ಟಿಎಂಎಲ್ ಮುಂತಾದ ಅನೇಕ ರೂಪಗಳಲ್ಲಿ ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಕಿಂಡಲ್ ರೀಡರ್ ಇದ್ದರೆ ಅದರಲ್ಲೂ ಓದಬಹುದು. ಈ ತಾಣದಲ್ಲಿ ಆಡಿಯೋ ಬುಕ್‍ಗಳೂ ಲಭ್ಯವಿವೆ. ಕನ್ನಡ ಪುಸ್ತಕಗಳು ಇಲ್ಲ.

ಜಾಲತಾಣದ ಕೊಂಡಿ:  gutenberg.org

ಟೆಕ್ ಪದ

ಸಾಮಾನ್ಯ ಛಾಯಾಚಿತ್ರವೂ ಅಲ್ಲದ, ಪೂರ್ಣ ವೀಡಿಯೋ ಕೂಡ ಅಲ್ಲದ ಚಿತ್ರಸರಣಿಗಳ ಕಡತ ವಾಟ್ಸ್‍ಆಪ್-ಫೇಸ್‍ಬುಕ್‍ಗಳಲ್ಲಿ ಕಾಣಿಸಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂತಹ ಕಡತಗಳನ್ನು ‘ಜಿಫ್’ ಎಂದು ಗುರುತಿಸಲಾಗುತ್ತದೆ. ಚಿತ್ರ ಕಡತಗಳಲ್ಲಿ (ಇಮೇಜ್ ಫೈಲ್) ಎರಡು ಆಯಾಮದ ಸಾಮಾನ್ಯ ಚಿತ್ರಗಳಷ್ಟೇ ಅಲ್ಲದೆ ಸಣ್ಣ ಅನಿಮೇಶನ್ ಪ್ರಸಂಗಗಳನ್ನೂ ಉಳಿಸಿಡಲು ನೆರವಾಗುವ ಈ ವಿಧಾನದ (ಫೈಲ್ ಫಾಮ್ರ್ಯಾಟ್) ಪೂರ್ಣ ಹೆಸರು ‘ಗ್ರಾಫಿಕ್ಸ್ ಇಂಟರ್‍ಚೇಂಜ್ ಫಾಮ್ರ್ಯಾಟ್’ ಎಂದು. ಅಂತರಜಾಲ ಸಂಪರ್ಕಗಳು ಬಹಳ ನಿಧಾನವಾಗಿದ್ದ ಕಾಲದಲ್ಲಿ ಬೇಗನೆ ಲೋಡ್ ಆಗುವ ಬಣ್ಣದ ಚಿತ್ರಗಳನ್ನು ಪರಿಚಯಿಸಿದ್ದು, ವೀಡಿಯೋ ಇಲ್ಲದೆಯೂ ಅನಿಮೇಶನ್ ಸೇರಿಸುವುದನ್ನು ಸಾಧ್ಯವಾಗಿಸಿದ್ದು ಜಿಫ್‍ನ ಹೆಗ್ಗಳಿಕೆ. ಸಮಾಜಜಾಲಗಳಲ್ಲಿ ಇವು ಇಂದಿಗೂ ತಮ್ಮ ಜನಪ್ರಿಯತೆ ಉಳಿಸಿಕೊಂಡಿವೆ.

ಹಿಂದಿನ ಸಮಾಚಾರ

ಕಂಪ್ಯೂಟರ್ ಬಳಕೆದಾರರೆಲ್ಲರ ಅಚ್ಚುಮೆಚ್ಚಿನ ಸಂಗಾತಿ ಮೌಸ್. ಅದಿಲ್ಲದೆ ಕಂಪ್ಯೂಟರ್ ಬಳಸುವುದನ್ನು ನಮ್ಮಲ್ಲಿ ಅನೇಕರಿಗೆ ಕಲ್ಪಿಸಿಕೊಳ್ಳುವುದೂ ಕಷ್ಟವೇ. ಕಂಪ್ಯೂಟರ್ ಸಾಧನಗಳ ಪೈಕಿ ಮೌಸ್ ಗಳಿಸಿಕೊಂಡಿರುವ ಜನಪ್ರಿಯತೆ ಅಂಥ ದ್ದು. ಈ ವಿಶಿಷ್ಟ ಸಾಧನದ ಪರಿಚಯವಾಗಿ ಇದೇ ಡಿಸೆಂಬರ್ 9ಕ್ಕೆ ಐವತ್ತು ವರ್ಷ ಪೂರ್ತಿಯಾಗುತ್ತದೆ. ಈ ಸಾಧನವನ್ನು ಮೊದಲು ವಿನ್ಯಾಸಗೊಳಿಸಿದ ಶ್ರೇಯ ಡಗ್ಲಸ್ ಎಂಗೆಲ್‍ಬರ್ಟ್ ಎಂಬ ತಂತ್ರಜ್ಞರಿಗೆ ಸಲ್ಲುತ್ತದೆ. ಆ ವಿನ್ಯಾಸವನ್ನು ಬಳಸಿ ಮರದಿಂದ ತಯಾರಿಸಿದ ಮೌಸನ್ನು ಅವರು 1968ರ ಡಿಸೆಂಬರ್ 9ರಂದು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಮೊತ್ತಮೊದಲ ಬಾರಿಗೆ ಪ್ರದರ್ಶಿಸಿದ್ದರು. ಸಾಮಾನ್ಯ ಬಳಕೆದಾರರ ಕೈಗೂ ಮೌಸ್ ದೊರಕಿದ್ದು 1980ರ ದಶಕದಲ್ಲಿ, ಆಪಲ್ ಸಂಸ್ಥೆಯ ಕಂಪ್ಯೂಟರುಗಳ ಮೂಲಕ.

ಟೆಕ್ ಸಲಹೆ

ಬೇರೊಬ್ಬರ ಮೂಬೈಲ್ ಸಮಪರ್ಕವನು ದುರ್ಬಳಕೆ ಮಾಡಿಕೊಂಡು ಅವರ ಖಾತೆಯಿಂದ ಹಣ ಲಪಟಾಯಿಸುವ ಹಗರಣ ಈಚೆಗೆ ನಮ್ಮ ದೇಶದಲ್ಲಿ ಹೆಚ್ಚುತ್ತಿದೆ. ಗ್ರಾಹಕರಿಗೆ ವಂಚಿಸಿ ಅವರ ಖಾತೆಯನ್ನು ತಮ್ಮಲಿರುವ ಸಿಮ್ ಗೆ ಜೋಡಿಸಿಕೊಳ್ಳುವ ವಂಚಕರು ನೆಟಬ್ಯಾಂಕಿಂಗ್ ಸೇರಿದಂತೆ ಗ್ರಾಹಕರ ಖಾತೆಗಳನ್ನು ದುರುಪ ಯೋಗಪಡಿಸಿಕೊಳುತಾರೆ ‘ ಸಿಮ್’ ಸ್ಟಾಪಿಂಗ್ ಎಂದು ಗುರುತಿಸಲಾಗುವ ಇಂತಹ ಹಗರಣಗಳಿಂದ ಪಾರಾಗಲು ನಾವು ಎಚ್ಚರಿಕೆಯಿಂದಿರಬೇಕಾದ್ದು ಅಗತ್ಯ ಅಪರಿಚಿತರು ಕರೆಮಾಡಿ ನಿರ್ದಿಷ್ಟ ಸಂಖ್ಯೆಗೆ ಮೆಸೇಜ್ ಕಳ್ಳಿಸುವಂತ್ತೆಲ್ಲ ಹೇಳಿದರೆ ಅದನ್ನು ಸಾರಾಸಗಟಾಗಿ ಉಪೇಕ್ಷಿಸುವುದು ಒಳ್ಳೆಯದು. ಮೊಬೈಲ್ ಸಂಸ್ಥೆ ಬ್ಯಾಂಕು ಇತ್ಯಾದಿಗಳ ಹೆಸರಿನಲ್ಲಿ ಬರುವ ಯಾವುದೇ ಕರೆ ಸಂದೇಹಾಸ್ಪದ್ ಎನಿಸಿದರೆ ಆ ಸಂಸ್ಥೆಯ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಿ ಸ್ಪಷ್ಟಿಕರಣ ಪಡೆದುಕೊಳ್ಳಬಹುದು.

Leave a Reply

Your email address will not be published.