ಈಗ ಕಂಡಿರುವುದು ಹಿಮಗುಡ್ಡೆಯ ತುದಿ ಮಾತ್ರ!

ಒಬ್ಬ ವರದಿಗಾರ ಭ್ರಷ್ಟನಾಗುವುದನ್ನು ಪತ್ತೆ ಮಾಡುವುದು ಸುಲಭ. ಪತ್ರಿಕೆಯ ಅಥವಾ ವಾಹಿನಿಯ ಮಾಲೀಕರೇ ಅಕ್ರಮ ಮಾರ್ಗದಿಂದ ಹಣ ಮಾಡಲು ಹೊರಟರೆ ಅದನ್ನು ಪತ್ರಿಕೋದ್ಯಮ ಎನ್ನಬಹುದೇ? ಮಾಧ್ಯಮವನ್ನು ಬಳಸಿಕೊಂಡು, ಪೆನ್ನನ್ನು ಮಾರಿಕೊಂಡು ಯಾರೆಲ್ಲ ನಮ್ಮ ಕಣ್ಣ ಮುಂದೆಯೇ ಏನೆಲ್ಲ ಆದರು, ವಿಧಾನಸೌಧದ ಗದ್ದುಗೆಗಳಲ್ಲಿ ಕುಳಿತರು!

ಗ ಬೆಳಕಿಗೆ ಬಂದಿರುವುದು ಹಿಮಗುಡ್ಡೆಯ ಒಂದು ತುದಿ ಮಾತ್ರ. ಅದೃಷ್ಟ ಸರಿ ಇರಲಿಲ್ಲವೋ ಅಥವಾ ಆಸೆ ಪಟ್ಟಿದ್ದು ಹೆಚ್ಚಾಯಿತೋ ಒಂದು ಬಲಿ ಬಿತ್ತು. ಬಿದ್ದ ಬಲಿ ಚಿಕ್ಕದೇನೂ ಅಲ್ಲ; ದೊಡ್ಡ ಮಿಕವೇ ಸಿಕ್ಕಿ ಬಿದ್ದಿದೆ. ಈ ಪ್ರಕರಣದ ‘ಸಂತ್ರಸ್ತ’ರು ಪ್ರಭಾವಿಯಾಗಿರದೇ ಇದ್ದಿದ್ದರೆ, ಅವರಿಗೆ ಸರ್ಕಾರದಲ್ಲಿ ದೊಡ್ಡವರ ಪರಿಚಯ ಇಲ್ಲದೇ ಇದ್ದಿದ್ದರೆ ಇದೆಲ್ಲ ಬಯಲಿಗೆ ಬರುತ್ತಿರಲಿಲ್ಲ. ಅವರು ಇನ್ನೂ ಎಷ್ಟು ಹಣ ಕಳೆದುಕೊಳ್ಳುತ್ತಿದ್ದರೋ ಏನೋ? ಹೀಗೆ ಎಷ್ಟು ಮಂದಿ ಹಣ ಕಳೆದುಕೊಂಡಿದ್ದಾರೋ ಯಾರಿಗೆ ಗೊತ್ತು? ಮಾಧ್ಯಮದಲ್ಲಿ ಇರುವವರು ಪ್ರಭಾವಿಗಳು. ಅವರಿಗೆ ಒಂದಲ್ಲ ಒಂದು ಕಡೆ ಸಂಪರ್ಕ ಇರುತ್ತದೆ. ಒಂದೋ ಅವರು ಬೆದರಿಸುತ್ತಾರೆ. ಇಲ್ಲವೇ ಕಾಲು ಹಿಡಿಯುತ್ತಾರೆ.

ಡಾ.ರಮಣರಾವ್ ಅವರು ಪ್ರಖ್ಯಾತ ವೈದ್ಯರು. ವರನಟ ರಾಜ್‍ಕುಮಾರ್ ಅವರಿಗೆ ಚಿಕಿತ್ಸೆ ನೀಡಿದವರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೂ ಆಪ್ತರು. ಅವರಿಗೆ ಸಂಬಂಧಿಸಿದ್ದು ಎನ್ನಲಾದ ಒಂದು ಸಿ.ಡಿ, ಟೀವಿ ವಾಹಿನಿಯವರ ಕೈಗೆ ಸಿಕ್ಕಿ ಅದನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್‍ಮಾಡಲು ಹೋದ ಒಬ್ಬ ಪತ್ರಕರ್ತ ಈಗ ಸಿಕ್ಕಿ ಬಿದ್ದಿದ್ದಾನೆ. ಅವರನ್ನು ತಮ್ಮ ಸಂಸ್ಥೆಯಿಂದ ವಜಾ ಮಾಡಿದ್ದೇವೆ ಎಂದು ಪಬ್ಲಿಕ್ ಟೀವಿಯ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಪ್ರಕಟಿಸಿರುವುದರಿಂದ ಆ ವರದಿಗಾರ ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಂಬುದು ಈಗ ಖಚಿತವಾದಂತೆ ಆಗಿದೆ. ಆತ ಬೆಂಗಳೂರಿನ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಗಳಲ್ಲಿಯೂ ಕೆಲಸ ಮಾಡಿದ ಮೂವತ್ತರ ಹರೆಯದ ಯುವಕ. ಅವನ ಜೊತೆಗೆ ಷಾಮೀಲು ಆಗಿದ್ದಾನೆ ಎನ್ನಲಾದ ಇನ್ನೊಬ್ಬ ಯುವಕನ ವಯಸ್ಸೂ ಹೆಚ್ಚೂ ಕಡಿಮೆ ಅಷ್ಟೇ.

ಮೂವತ್ತರ ಹರೆಯ ಎಂದರೆ ತಲೆಯೆಲ್ಲ ಆದರ್ಶಗಳು ತುಂಬಿ ತುಳುಕಬೇಕಾದ, ಈ ಜಗತ್ತಿನ ಎಲ್ಲ ಕೇಡುಗಳ ಬಗೆಗೆ ತೀವ್ರ ವ್ಯಾಕುಲತೆ ಇರಬೇಕಾದ ವಯಸ್ಸು ಎಂಬ ಕಾರಣಕ್ಕಾಗಿ ಅದನ್ನು ಉಲ್ಲೇಖಿಸುತ್ತಿರುವೆ. ಅವರು ಕೆಲಸ ಮಾಡುತ್ತಿದ್ದುದು ಮಾಧ್ಯಮದಲ್ಲಿ. ಮಾಧ್ಯಮದ ಮುಖ್ಯ ಉದ್ದೇಶವೂ ಜಗತ್ತಿನ ಎಲ್ಲ ಕೇಡಿನ ವಿರುದ್ಧ ಹೋರಾಡುವುದು. ರಾಜಕಾರಣಿಗಳ, ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲು ಮಾಡಿ ಆಡಳಿತದಲ್ಲಿ ಜನಪರತೆಯನ್ನು ತರಲು ಮಾಧ್ಯಮ ಹಾತೊರೆಯುತ್ತ ಇರುತ್ತದೆ. ಅದಕ್ಕಾಗಿಯೇ ಎ.ಸಿ.ಬಿ.ಯವರು (ಹಿಂದೆ ಲೋಕಾಯುಕ್ತದವರು) ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿದಾಗ ‘ತಿಮಿಂಗಲುಗಳು ಎ.ಸಿ.ಬಿ ಬಲೆಗೆ’ ಎಂದು ಢಾಳ ಶೀರ್ಷಿಕೆ ಕೊಟ್ಟು ಸುದ್ದಿ ಪ್ರಕಟಿಸುತ್ತಾರೆ. ತಿಮಿಂಗಲು ಎಂದು ಭ್ರಷ್ಟರನ್ನು ಕರೆಯುವಲ್ಲಿ ಒಂದು ಸಂದೇಶ ಇದೆ.

ಆದರೆ ಮಾಧ್ಯಮದಲ್ಲಿ ಇದ್ದವರೇ ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದರೆ ಅದು ಸುದ್ದಿಯೇ ಆಗುವುದಿಲ್ಲ. ಪಬ್ಲಿಕ್ ಟೀವಿಯ ಈ ವರದಿಗಾರ ಸಿಕ್ಕಿಬಿದ್ದ ಮರುದಿನ ಎರಡು ಪತ್ರಿಕೆಗಳಲ್ಲಿ ಮಾತ್ರ ವರದಿ ಬಂತು. ಒಂದು ಪತ್ರಿಕೆಯಲ್ಲಿ ಮಾತ್ರ ಆತ ಕೆಲಸ ಮಾಡುವ ಸಂಸ್ಥೆಯ ಹೆಸರು ಬಂತು. ‘ಎಷ್ಟೇ ಆಗಲಿ, ನಮ್ಮವರು ಮಾಡಿದ ಭ್ರಷ್ಟಾಚಾರವಲ್ಲವೇ’ ಎಂದು ಮಾಧ್ಯಮದಲ್ಲಿ ಇದ್ದವರು ಮುಚ್ಚಿ ಹಾಕುತ್ತಾರೆ. ಮಾಧ್ಯಮದವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ (ಕ್ಯಾಕರಿಸಿ ಉಗಿದ) ನಂತರವೇ ಪತ್ರಿಕೆಯವರೂ ಎಚ್ಚೆತ್ತುಕೊಂಡು ಮರುದಿನ ಸುದ್ದಿ ಪ್ರಕಟಿಸಿದರು; ಪಬ್ಲಿಕ್ ಟೀವಿ ಅವನನ್ನು ವಜಾ ಮಾಡಿತು. ನೆಟ್ಟಿಗರು ಉಗಿಯದೇ ಇದ್ದರೆ ಎಲ್ಲವೂ ಗಪ್ ಚಿಪ್‍ಆಗಿ ಮುಗಿಯುತ್ತಿತ್ತು ಎಂದು ಅಂದುಕೊಳ್ಳಲು ಈಗ ಅವಕಾಶವಿದೆ.

ಭ್ರಷ್ಟತೆಗೆ ಇವೂ ಕಾರಣ!
ಮಾಧ್ಯಮದಲ್ಲಿ ಭ್ರಷ್ಟಾಚಾರ ಹೆಚ್ಚಿರುವುದಕ್ಕೆ ಅನೇಕ ಕಾರಣಗಳು ಇವೆ: ಒಂದನೇ ಕಾರಣ ಇಡೀ ಸಮಾಜವೇ ಈಗ ಭ್ರಷ್ಟವಾಗಿದೆ. ಹಣ ಎಲ್ಲರನ್ನೂ ಆಳುತ್ತಿದೆ. ಮಾಧ್ಯಮದವರಿಗೂ ಬೇಗ ಹಣ ಮಾಡುವ, ಸುಖ ಪಡುವ ಕಾತರ. ಅದಕ್ಕಿಂತ ದೊಡ್ಡ ಕಾರಣ ಅವರು ಕೆಲಸ ಮಾಡುವ ಸಂಸ್ಥೆಗಳು ಸರಿಯಾಗಿ ವೇತನ ಕೊಡುವುದಿಲ್ಲ. ಈ ಟೀವಿ ವಾಹಿನಿಗಳು ಯಾವಾಗ ಆರಂಭವಾಗುತ್ತವೆ, ಯಾವಾಗ ಮುಚ್ಚುತ್ತವೆ ಎಂಬ ಖಾತ್ರಿಯೇ ಇಲ್ಲ. ಆರಂಭವಾಗುವಾಗ ಅನೇಕ ವರದಿಗಾರರನ್ನು ನೇಮಕ ಮಾಡಿಕೊಳ್ಳುವ ಇಂಥ ವಾಹಿನಿಗಳು ಮೂರು ತಿಂಗಳು, ನಾಲ್ಕು ತಿಂಗಳು ವೇತನ ಕೊಡದೇ ಇದ್ದರೆ ಜೀವನದ ರಥ ಎಳೆಯಲು ಅವರಿಗೆ ಬೇರೆ ದಾರಿ ಯಾವುದು? ಆತ ಭ್ರಷ್ಟ ಹಾದಿ ತುಳಿದರೆ ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವ ಕನಿಷ್ಠ ನೈತಿಕತೆಯೂ ಸಂಸ್ಥೆಗೆ ಇರುವುದಿಲ್ಲ.

ಯಾವುದೇ ಒಂದು ಸಂಸ್ಥೆಗೆ ಆದರ್ಶಗಳ, ಮೌಲ್ಯಗಳ ಬುನಾದಿ ಇರಬೇಕಾಗುತ್ತದೆ. ಹೀಗೆ ಬಂದು ಹಾಗೆ ಹೋಗುವ ಸಂಸ್ಥೆಗಳನ್ನು ಯಾರೋ ಕೆಲವರು ವ್ಯಕ್ತಿಗಳು ನಡೆಸುತ್ತ ಇರುತ್ತಾರೆ. ಅವರಿಗೆ ಒಂದು ಸಾಂಸ್ಥಿಕ ಹೊಣೆಗಾರಿಕೆ ಇರುವುದಿಲ್ಲ. ಜನಶ್ರೀ ಟೀವಿ ವಾಹಿನಿಯ ಸಿಇಒ ಒಬ್ಬರು ನೇರವಾಗಿ 12 ಕೋಟಿ ರೂಪಾಯಿ ಲಂಚ ಕೇಳಿ ಸಿಕ್ಕಿಬಿದ್ದ ವರದಿಯನ್ನು ನಾವು ಓದಿದ್ದೇವೆ. ಟೀವಿ ವಾಹಿನಿಗಳ ಸುದ್ದಿ ಪ್ರಸಾರಕ್ಕೆ ಕೆಲವರು ಮತ್ತೆ ಮತ್ತೆ ನಿಷೇಧಾದೇಶ (injunction) ತರುವುದಕ್ಕೆ ಕಾರಣ ಅವರ ಮಾನಹಾನಿಯಾಗುವಂಥ ಒಂದು ಸುದ್ದಿ ವಾಹಿನಿಯವರಿಗೆ ಸಿಕ್ಕಿರುತ್ತದೆ. ಮತ್ತು ಅದನ್ನು ಪ್ರಸಾರ ಮಾಡದೇ ಇರಲು ಅವರು ಹಣದ ಬೇಡಿಕೆ ಇಟ್ಟಿರುತ್ತಾರೆ. ಈಗ ಒಂದು ಟೀವಿ ವಾಹಿನಿ ನಡೆಸುವ ಚಿನ್ನದ ವ್ಯಾಪಾರಿಯೇ ಹಿಂದೆ ಇಂಥ ನಿಷೇಧಾದೇಶ ತಂದಿದ್ದರು! ವಾಹಿನಿಯವರು ತಮಗೆ ಸಿಕ್ಕ ಇಂಥ ಸುದ್ದಿಯನ್ನು ಇತರ ವಾಹಿನಿಯವರ ಜೊತೆಗೂ ಹಂಚಿಕೊಂಡು ಎಲ್ಲರೂ ಸೇರಿ ಸೀಳುನಾಯಿಗಳ ಹಾಗೆ ಆ ವ್ಯಕ್ತಿಯ ಬೇಟೆಗೆ ಹೊರಡುತ್ತಾರೆ. ಡಾ.ರಮಣರಾವ್ ಅವರ ವಿಚಾರದಲ್ಲಿಯೂ ಹೀಗೆಯೇ ಆದುದು ಆಕಸ್ಮಿಕವಲ್ಲ. ಸುದ್ದಿ ಹಂಚಿಕೊಳ್ಳುವುದನ್ನು ಮಾಧ್ಯಮ ಸಂಸ್ಥೆಗಳು ಒಪ್ಪುವುದಿಲ್ಲ. ಅದನ್ನು ಇಟ್ಟುಕೊಂಡು ದುಡ್ಡು ಮಾಡುವುದಂತೂ ಪರಮ ನೀಚತನ.

ಕೆಳಗಿನ ಹಂತದಲ್ಲಿ ನಡೆಯುವ ಇದೆಲ್ಲ ಮೇಲಿನವರಿಗೆ ಗೊತ್ತಿರುವುದಿಲ್ಲ ಎಂದು ಅಂದುಕೊಳ್ಳುವುದು ಅಮಾಯಕತೆ ಆಗುತ್ತದೆ. ಏಕೆಂದರೆ ಮೇಲುಮಟ್ಟದಲ್ಲಿ ಇದ್ದವರ ಕರಾಮತ್ತುಗಳು ಕೆಳ ಹಂತದ ಕೆಲಸಗಾರರಿಗೆ ಗೊತ್ತಿರುವುದಿಲ್ಲವೇ? ಅನೇಕ ಸಾರಿ ಕೆಳ ಹಂತದ ಸಿಬ್ಬಂದಿಯ ಸಹಾಯದಿಂದಲೇ ಮೇಲಿನವರು ಕೋಟಿಗಳನ್ನು ಎಣಿಸುತ್ತ ಇರುತ್ತಾರೆ. ಅವರು ಕೋಟಿ ಎಣಿಸಿ ಹಾಯಾಗಿ ಇರುವಾಗ ಹಾಗೂ ಟೀವಿಗಳಲ್ಲಿ ಕುಳಿತು ನಿತ್ಯವೂ ಭಗವದ್ಗೀತೆಯ ಪಾಠ ಮಾಡುತ್ತ ಇರುವಾಗ ಕೆಳಗಿನವರು ಪನಿವಾರ ತಿನ್ನುತ್ತ ಇರಲು ಆಗುತ್ತದೆಯೇ? ಯಾವ ಭ್ರಷ್ಟಾಚಾರವೂ ಕೇವಲ ಕೆಳಗಿನ ಹಂತದಲ್ಲಿ ಮಾತ್ರ ನಡೆಯುತ್ತದೆ ಎಂದರೆ ನಾನು ನಂಬುವುದಿಲ್ಲ. ಸರ್ಕಾರದ ಭ್ರಷ್ಟಾಚಾರದ ರೀತಿಯ ಬಗೆಗೆ ಮಾತ್ರ ನಾನು ಮಾತನಾಡುತ್ತಿರುವೆ. ಟೀವಿಯ ಅನುಭವ ನನಗೆ ಇಲ್ಲ. ಇದು ಹಿಮಗುಡ್ಡೆಯ ತುದಿ ಎಂದು ಮಾತ್ರ ನಾನು ಆರಂಭದಲ್ಲಿ ಏಕೆ ಹೇಳಿದೆ ಎಂದರೆ ಇದು ಮಾಧ್ಯಮದಲ್ಲಿ ಇರುವ ಭ್ರಷ್ಟತೆಯ ಒಂದು ಮುಖ ಮಾತ್ರ. ಇದು ನೇರವಾಗಿ ಬ್ಲ್ಯಾಕ್‍ಮೇಲ್. ಮಾನಕ್ಕೆ ಅಂಜುವವರು ಇರುವವರೆಗೆ, ಅಥವಾ ಮನುಷ್ಯ ಸಹಜವಾದ ತಪ್ಪುಗಳನ್ನು ಮಾಡಿ ಸಿಕ್ಕಿ ಹಾಕಿಕೊಳ್ಳುವವರು ಇರುವವರೆಗೆ ಇಂಥ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

ಮಾಧ್ಯಮ, ಒಂದು ಸಂಸ್ಥೆಯಾಗಿ, ಇದಕ್ಕಿಂತ ದೊಡ್ಡ ಭ್ರಷ್ಟಾಚಾರದಲ್ಲಿ ತೊಡಗಿದೆ. ಜಾಹೀರಾತಿಗೆ ಸುದ್ದಿಯ ಅವಕುಂಠನ ಹಾಕಿ ಸಂಸ್ಥೆಗಳು ಹಣ ಮಾಡುತ್ತಿವೆ. ಅದಕ್ಕೆ ‘ಕಾಸಿಗಾಗಿ ಸುದ್ದಿ’ ಎಂಬ ಹೆಸರು ಇದೆ. ಪಿ.ಸಾಯಿನಾಥ್, ಪರಂಜೊಯ್ ಠಾಕುರ್ತಾ ಅವರಂಥ ಒಬ್ಬಿಬ್ಬರು ಹಿರಿಯ ಪತ್ರಕರ್ತರು ಇದರ ವಿರುದ್ಧ ಧ್ವನಿ ಎತ್ತಿದರು. ಆದರೆ, ಅದು ತಾರ್ಕಿಕ ಕೊನೆ ಕಾಣಲಿಲ್ಲ. ಈಗ ಲೋಕಸಭೆಗೆ ಚುನಾವಣೆ ನಡೆಯುತ್ತಿದೆ. ಟೀವಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಬರುವ ಯಾವ ಸುದ್ದಿ ಕಾಸು ತೆಗೆದುಕೊಂಡು ಬರೆದುದು ಯಾವುದು ‘ಶುದ್ಧ ಸುದ್ದಿ’ ಎಂದು ಪತ್ತೆ ಮಾಡುವುದು ಬಹಳ ಕಷ್ಟ. ಟೀವಿಗಳ ಒಡೆಯರು ತಮಗೆ ಬೇಕಾದ ಒಂದು ರಾಜಕೀಯ ಪಕ್ಷದ ಪರವಾಗಿ ಸುದ್ದಿ ಪ್ರಕಟಿಸಲು, ಆ ಪಕ್ಷದ ನಾಯಕರ ಭಾಷಣಗಳನ್ನು ನೇರ ಪ್ರಸಾರ ಮಾಡಲು, ‘ಪ್ಯಾಕೇಜು’ಗಳನ್ನು ಮಾಡಿಕೊಳ್ಳುವುದು ಕೂಡ ಹೊಸದಲ್ಲ. ಒಬ್ಬ ವರದಿಗಾರ ಭ್ರಷ್ಟನಾಗುವುದನ್ನು ಪತ್ತೆ ಮಾಡುವುದು ಸುಲಭ. ಪತ್ರಿಕೆಯ ಅಥವಾ ವಾಹಿನಿಯ ಮಾಲೀಕರೇ ಅಕ್ರಮ ಮಾರ್ಗದಿಂದ ಹಣ ಮಾಡಲು ಹೊರಟರೆ ಅದನ್ನು ಪತ್ರಿಕೋದ್ಯಮ ಎನ್ನಬಹುದೇ? ಇದೆಲ್ಲ ಬಹಳ ಸೂಕ್ಷ್ಮ ಸಂಗತಿ. ಮಾಧ್ಯಮವನ್ನು ಬಳಸಿಕೊಂಡು, ಪೆನ್ನನ್ನು ಮಾರಿಕೊಂಡು ಯಾರೆಲ್ಲ ನಮ್ಮ ಕಣ್ಣ ಮುಂದೆಯೇ ಏನೆಲ್ಲ ಆದರು, ವಿಧಾನಸೌಧದ ಗದ್ದುಗೆಗಳಲ್ಲಿ ಕುಳಿತರು ಎಂದು ನಾವು ನೋಡಿದ್ದೇವೆ.

ಮಾಧ್ಯಮ ಇಂಥ ಅನೇಕ ಕಾರಣಗಳಿಗಾಗಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಅದು ನೇತ್ಯಾತ್ಮಕವಾಗಿದೆ, ಅದು ರೋಚಕತೆಯ ಬೆನ್ನು ಹತ್ತಿದೆ; ಅದು ಬೇರೆಯವರಿಗೆ ಆಚಾರ ಹೇಳುತ್ತಿದೆ ಮತ್ತು ತಾನು ಬದನೆಕಾಯಿ ತಿನ್ನುತ್ತಿದೆ. ದುರಂತ ಏನು ಎಂದರೆ ಯಾರೋ ಒಬ್ಬಿಬ್ಬರು ಸಿಕ್ಕಿ ಬೀಳುತ್ತಾರೆ. ಅಲ್ಲಿಯೂ ದೊಡ್ಡವರು ಇಡೀ ಬೆಣ್ಣೆ ನುಂಗಿ ಚಿಕ್ಕವರ ಬಾಯಿಗೆ ಅದನ್ನು ಒರೆಸಿರಬಹುದು. ಆಂಬಿಡೆಂಟ್ ಚೀಟಿ ವ್ಯವಹಾರದ ಹಗರಣದಲ್ಲಿ ವಾಹಿನಿಗಳವರು ಅಕ್ಷರಶಃ ಕೋಟಿಗಟ್ಟಲೆ ಹಣ ಮಾಡಿಕೊಂಡರು. ಏನಾಯಿತು? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂದು ಕೇಳುವುದು ಕೂಡ ಈಗ ತಮಾಷೆಯ ಹಾಗೆ ಕಾಣುತ್ತದೆ. ಏಕೆಂದರೆ ಅದು ಹಳಸಲು ಮಾತು.

ಎಲ್ಲ ವೃತ್ತಿಗಳಿಗೆ ಇರುವ ಹಾಗೆಯೇ ಮಾಧ್ಯಮದಲ್ಲಿ ಕೆಲಸ ಮಾಡುವವರೂ ಪ್ರಾಮಾಣಿಕರಾಗಿ ಇರಬೇಕು, ಅವರಿಗೆ ವೃತ್ತಿಯ ಬಗೆಗೆ ಬದ್ಧತೆ ಇರಬೇಕು, ನಿಷ್ಪಕ್ಷಪಾತವಾಗಿ ವರದಿ ಮಾಡಬೇಕು ಎಂಬ ಧ್ಯೇಯಕ್ಕೆ ಅವರು ಕಂಕಣಬದ್ಧರಾಗಿ ಇರಬೇಕು. ನಮಗೆ ಸಂವಿಧಾನದಲ್ಲಿ ಸಿಕ್ಕ ವಾಕ್ ಸ್ವಾತಂತ್ರ್ಯವನ್ನು ಹೀಗೆಲ್ಲ ಜನರ ಮಾನಹರಣ ಮಾಡಲು, ಅಕ್ರಮವಾಗಿ ದುಡ್ಡು ಮಾಡಲು ಬಳಸಿಕೊಳ್ಳಬಾರದು ಎಂಬ ನೀತಿ ಸಂಹಿತೆಯನ್ನು ಅವರು ನಿತ್ಯ ಪಾಲಿಸಬೇಕು. ಈ ವೃತ್ತಿ ಇರುವುದು ಜನರ ಕಷ್ಟಗಳ ನಿವಾರಣೆಗೆ ಎಂದು ಅವರಿಗೆ ಗೊತ್ತಿರಬೇಕು. ಇದನ್ನೆಲ್ಲ ಅವರಿಗೆ ಶಾಲೆ-ಕಾಲೇಜುಗಳಲ್ಲಿ ಕಲಿಸಿರಬೇಕು. ಹಾಗೂ ಇದೆಲ್ಲ ಮಾಧ್ಯಮ ಸಂಸ್ಥೆಗಳ ಆಡಳಿತ ವರ್ಗಕ್ಕೆ ಮೊದಲು ಗೊತ್ತಿರಬೇಕು. ಮಾಲೀಕರಿಗೆ ಬೇಡದ ಮೌಲ್ಯಗಳನ್ನು ಕೆಲಸಗಾರರು ಏಕೆ ಪಾಲಿಸುತ್ತಾರೆ?

* ಲೇಖಕರು ಪ್ರಜಾವಾಣಿಯ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕರು. ನಾಲ್ಕನೇ ಆಯಾಮ (ಆರು ಸಂಪುಟಗಳು), ಹೆಜ್ಜೆ ಮೂಡಿಸಿದ ಹಾದಿ, ಚೌಕಟ್ಟಿನಾಚೆ, ಅವಲೋಕನ, ಆರಂಭ, ಪತ್ರಿಕಾ ಭಾಷೆ, ರಿಪೋರ್ಟಿಂಗ್, ಮಾಧ್ಯಮ ಮಾರ್ಗ ಮತ್ತು ಸುರಂಗದ ಕತ್ತಲೆ… ಅವರ ಪ್ರಕಟಿತ ಕೃತಿಗಳು.

Leave a Reply

Your email address will not be published.