ಈ ಸಮುದಾಯ ಬರೀ ಓಟ್ ಬ್ಯಾಂಕ್ ಅಲ್ಲ!

ಡಾ.ಕೆ.ಷರೀಫಾ

ಮುಸ್ಲಿಮರ ನೋವು ತಲ್ಲಣಗಳು ಭಿನ್ನವಾಗಿವೆ. ಮುಸ್ಲಿಮರನ್ನು ಸಾವಿರಾರು ವರ್ಷಗಳ ನಂತರ ಇಂದಿಗೂ ಹೊರಗಿಟ್ಟು ಮಾತನಾಡಲಾಗುತ್ತದೆ. ಮುಸ್ಲಿಮರ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳು ಮುಕ್ತ ವೇದಿಕೆಗಳಲ್ಲಿ ಚರ್ಚೆಯಾಗಬೇಕಿವೆ.

ರಾಜಕೀಯದ ಅಂಚಿಗೆ ದೂಡಲ್ಪಟ್ಟಿರುವ ಮುಸ್ಲಿಂ ಸಮುದಾಯದಲ್ಲಿ ಇಂದಿಗೂ ಸಾಮಾಜಿಕ ಸುಧಾರಣೆಯ ಚರ್ಚೆ ಪ್ರಸ್ತುತ ಮತ್ತು ಅವಶ್ಯವಾಗಿದೆಯೇ?

ರಾಜಕೀಯದ ಅಂಚಿಗೆ ಮಾತ್ರವಲ್ಲ. ಅವರು ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಮತ್ತು ಶೈಕ್ಷಣಿಕವಾಗಿಯೂ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಯಾವುದೇ ಒಂದು ಸಮಾಜ ಎಲ್ಲರೊಂದಿಗೆ ಸಮನಾಗಿ ನಿಲ್ಲಲು ಶಕ್ತವಾಗುವುದಿಲ್ಲವೋ ಅಲ್ಲಿಯವರೆಗೂ ಅವರ ಸುಧಾರಣೆಯ ಕುರಿತು ಚರ್ಚೆಗಳು ಬೇಕಾಗುತ್ತವೆ. ಅವರ ಸುಧಾರಣೆಗೆ ಬೇಕಾದ ಅವಶ್ಯಕ ಚಿಂತನೆ, ಮತ್ತು ಯೋಜನೆಗಳು ಅವಶ್ಯಕವಾಗಿ ಬೇಕಾಗಿವೆ. ಆದರೆ ಅದನ್ನು ಮಾಡುವ ಮನಸ್ಸು ಯಾರಿಗಿದೆ?. ಅವರನ್ನು ಇಂದಿಗೂ ಓಟ್ ಬ್ಯಾಂಕ್ ಆಗಿ ರಾಜಕಾರಣ ಬಳಸಿಕೊಳ್ಳುತ್ತಿಲ್ಲವೆ?

ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ವಿ.ಆರ್.ಕೃಷ್ಣ ಅಯ್ಯರ್ ಹೇಳುವಂತೆಕೋಮುಗಲಭೆಗಳಲ್ಲಿ ಮುಸ್ಲಿಮರು ಗರಿಷ್ಠವಾಗಿ ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ. ಅವರಿಗೆ ನ್ಯಾಯ ಎಂಬುದೇ ಸಿಕ್ಕಿಲ್ಲ. ಪ್ರಗತಿಪರ ಚಿಂತಕರು, ಅಂತಹ ಮನಸ್ಸುಗಳು ಅನೇಕ ಬಾರಿ ಅವರ ಗಾಯಕ್ಕೆ ಮುಲಾಮು ಹಚ್ಚುವ ಕೆಲಸ ಕೂಡ ಮಾಡುತ್ತಿದ್ದಾರೆ. ಆದರೆ ಕೋಮುವಾದಿ ಪ್ರಭುತ್ವಗಳು ಮತ್ತು ಹಿಂದುತ್ವವಾದಿ ಮನಸ್ಸುಗಳು ಅವರಿಗೆ ನೋವುಂಟು ಮಾಡಿರುವುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಅವರನ್ನು ಅಂಚಿನಿಂದ ಮೇಲೆತ್ತಲು ರಾಜಕೀಯಕ್ಕೆ ಮೊದಲು ಇಚ್ಛಾಶಕ್ತಿ ಬೇಕಿದೆ. ನಂತರದಲ್ಲಿ ಅದಕ್ಕೆ ಬೇಕಾದ ಯೋಜನೆಗಳು ಮತ್ತು ಬಡ್ಜೆಟ್ಟುಗಳು ಅವಶ್ಯಕವಾಗಿವೆ. ಹಿಂದೂ ಎಂಬ ಶಬ್ದ ಎಲ್ಲರನ್ನು ಆವರಿಸಿಕೊಂಡು ಮುಸ್ಲಿಮರನ್ನು ಮಾತ್ರ ಪ್ರತ್ಯೇಕಿಸುತ್ತದೆ.

ಮುಸ್ಲಿಮರ ನೋವು ತಲ್ಲಣಗಳು ಭಿನ್ನವಾಗಿವೆ. ಮುಸ್ಲಿಮರನ್ನು ಸಾವಿರಾರು ವರ್ಷಗಳ ನಂತರ ಇಂದಿಗೂ ಹೊರಗಿಟ್ಟು ಮಾತನಾಡಲಾಗುತ್ತದೆ. ಇಸ್ಲಾಮಿನ ಮೂಲಭೂತ ಪ್ರಶ್ನೆಗಳು ನಮಗೆದುರಾಗಿ ಬಂದಾಗ, “ಅದು ಅವರ ಧಾರ್ಮಿಕ ಪ್ರಶ್ನೆ ನಮಗೇಕೆ ಅದರ ಉಸಾಬರಿಎಂದು ಇತರ ಧರ್ಮೀಯರು ಮೌನಿಗಳಾಗುತ್ತಾರೆ. ಮುಸ್ಲಿಮರ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳೇನು? ಎಂಬುದು ಮುಕ್ತ ವೇದಿಕೆಗಳಲ್ಲಿ ಚರ್ಚೆಯಾಗಬೇಕಿದೆ. ಗುಜರಾತಿನ ಮುಸ್ಲಿಮರ ಬರ್ಬರ, ಸಾಮೂಹಿಕ ಹತ್ಯಾಕಾಂಡ, ಬಾಬ್ರಿ ಮಸೀದಿಯ ಧ್ವಂಸದ ನಂತರ ನಡೆದ ಗಲಭೆ, ರಕ್ತಪಾತಗಳಿಂದ ನಾನು ಯಾರು? ನನ್ನನ್ನೇಕೆ ಪ್ರತ್ಯೇಕಿಸಲಾಗುತ್ತಿದೆ? ನನ್ನನ್ನೇಕೆ ಹಿಂಸಿಸಲಾಗುತ್ತಿದೆ? ಎಂಬ ಪ್ರಶ್ನೆ ಅವರ ಕಣ್ಣ ಮುಂದೆ ಧುತ್ತೆಂದು ನಿಲ್ಲುತ್ತದೆ. ಸಾಮಾಜಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ಭೂಮಿಯ ಮೇಲಿನ ಹಕ್ಕು ದಲಿತರಿಗಿಂತ ಕನಿಷ್ಟವಾಗಿದೆ. ಕಾರಣಕ್ಕೂ ಅವರು ತಬ್ಬಲಿ ಗುಂಪಾಗುತ್ತಿದ್ದಾರೆ.

ಮಾನವ ಅಭಿವೃದ್ಧಿಯೆನ್ನುವುದು ಯಾವುದೇ ರೀತಿಯ ಭೌತಿಕ ಸಂಗತಿಗಳಿಂದ ಅಳೆಯಬಹುದಾದರೂ ಸಾಮಾಜಿಕ ಬದುಕಿನ ಭಾಗವಾಗಿರುವ ಮಾನಸಿಕ ಅಂಶಗಳನ್ನು ನಿರ್ಲಕ್ಷಿಸಿ, ಮಾನವ ಅಭಿವೃದ್ಧಿಯನ್ನು ಸಾಧಿಸಲಾಗದು. ತಳ ಸಮುದಾಯದ ಒಬ್ಬ ಶೋಷಿತ ವ್ಯಕ್ತಿ ಅನುಭವಿಸಿದ, ಅನುಭವಿಸುವ ಸೌಲಭ್ಯಗಳನ್ನು ಕಂಡು ಅವನೊಂದಿಗೆ ಬದುಕುವ ಇತರರಿಗೆ ಅಸೂಯೆಯಾಗುತ್ತದೆ. ಆದ್ದರಿಂದ ಅಲ್ಪಸಂಖ್ಯಾತರಲ್ಲಿಯೇ ಇರುವಂತಹ ತಾರತಮ್ಯಗಳೂ ಹಲವಾರು ಬಾರಿ ಅಸಹನೀಯವಾಗುತ್ತವೆ.

ದೇಶದ ಸಂಪತ್ತು ಎಲ್ಲಾ ಜಾತಿ, ಜನ ಸಮುದಾಯಗಳ ಮಧ್ಯೆ ಹಂಚಿಕೆಯಾಗುವ ಸಂಪತ್ತು ಸಮವಾಗಿರಬೇಕು. ಅಲ್ಪಸಂಖ್ಯಾತರ ಅಭಿವೃದ್ಧಿ ಕುರಿತಂತೆ ಜಸ್ಟಿಸ್ ರಾಜೇಂದ್ರ ಸಾಚಾರ್ ವರದಿಯೂ ಇದನ್ನೇ ಹೇಳುತ್ತದೆ. ಇಂದಿಗೂ ಭಾರತದ ದಲಿತರು, ಮುಸ್ಲಿಮರು, ಬುಡಕಟ್ಟು ಸಮುದಾಯಗಳು ಸಂವಿಧಾನ ನೀಡಿರುವ ಹಕ್ಕುಗಳಾದ, ಜೀವನೋಪಾಯ, ಕೆಲಸ, ವಸತಿ, ಶಿಕ್ಷಣ, ಆರೋಗ್ಯ ಮತ್ತು ಆಹಾರಕ್ಕಾಗಿ ಹೋರಾಡಲೇಬೇಕಾದ ಪರಿಸ್ಥಿತಿಯಿದೆ. ಸಂವಿಧಾನದತ್ತ ಹಕ್ಕುಗಳೂ ದಕ್ಕುತ್ತಿಲ್ಲ. ಅದನ್ನು ಗಳಿಸಲು ಅವರು ರಾಜಕೀಯ ಬಲವನ್ನು ಗಳಿಸುವ ಅನಿವಾರ್ಯತೆಯಿದೆ. ಕುರಿತ ಚರ್ಚೆಗಳು ತೀವ್ರತರವಾಗಿ ನಡೆಯಬೇಕಿದೆ. ಅವರ ಅಭಿವೃದ್ಧಿಗಾಗಿ ಪೂರಕ ಯೋಜನೆಗಳನ್ನು ಜಾರಿ ಮಾಡುವ ರಾಜಕೀಯ ಇಚ್ಛಾಶಕ್ತಿಯ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.

ಮುಸ್ಲಿಂ ಸಾಮಾಜಿಕ ಸುಧಾರಣೆ ನಿಂತಿದೆಯೇ? ಉದಾರವಾದಿ ಸುಧಾರಣಾವಾದಿಗಳು ನೇಪಥ್ಯಕ್ಕೆ ಸರಿದಿದ್ದಾರೆಯೇ?

ಮುಸ್ಲಿಂ ಎಂದರೆ ಅವರು ಭಾರತದ ಭಾಗವಾಗಿದ್ದಾರೆ. ಭಾರತದ ಅಭಿವೃದ್ಧಿ ಎಂದರೆ ಒಟ್ಟಾರೆ ದೇಶದಲ್ಲಿ ವಾಸಿಸುವವರೆಲ್ಲರೂ ಬರುತ್ತಾರೆ. ಆದರೆ ಇಂದಿನ ಪ್ರಧಾನಿ ಭಾವಿಸುವಂತೆ ಕಾರ್ಪೋರೇಟ್ ವಲಯ ಮಾತ್ರವಲ್ಲ. ಸರ್ಕಾರದಲ್ಲಿ ಮುಸ್ಲಿಂ ಸುಧಾರಣೆಯ ಕೆಲಸಗಳು ಸ್ಥಗಿತಗೊಂಡಿವೆ ಅಥವಾ ಅಲಕ್ಷಿತವಾಗಿವೆ. ಶ್ರಮಜೀವಿ ವರ್ಗವನ್ನು ಪ್ರೋತ್ಸಾಹಿಸುವುದು ಬಿಟ್ಟು ಅವರನ್ನು ದಮನಿಸುವ, ಬೆದರಿಸುವ, ದೇಶಕ್ಕಾಗಿ ಸಮರ್ಪಿಸಿಕೊಂಡ ಲಕ್ಷಾಂತರ ಮುಸ್ಲಿಮರನ್ನು ಮರೆತು ಅವರು ಭಯೋತ್ಪಾದಕರೆಂಬಂತೆ ಸರ್ಕಾರವೇ ಬಿಂಬಿಸುತ್ತಿರುವುದು ಯಾವ ಪುರುಷಾರ್ಥಕ್ಕೆ?

ಬಡವರು, ಆದಿವಾಸಿಗಳು, ಮಹಿಳೆ, ದಲಿತ ಮತ್ತು ಮುಸ್ಲಿಮರ ಪರ ಮಾತಾಡುವವರನ್ನು, ಸುಧಾರಣಾವಾದಿಗಳನ್ನು, ದೇಶದ್ರೋಹಿಗಳಾಗಿ ಬಿಂಬಿಸುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಜಾಗತೀಕರಣದ ಸಂದರ್ಭದಲ್ಲಿ ಎಲ್ಲವೂ ಬಿಕರಿ ಮಾಲುಗಳಾವೆ. ಹರ್ಬರ್ಟ್ ಆಪ್ತೇಕರ್ ಎಂಬ ರಾಜಕೀಯ ವಿಜ್ಞಾನಿಯು ತನ್ನ ‘‘ದಿ ನೇಚರ್ ಆಫ್ ಡೆಮಾಕ್ರಸಿ, ಫ್ರೀಡಂ ಆ್ಯಂಡ್ ರೆವುಲ್ಯೂಷನ್’’ ಕೃತಿಯಲ್ಲಿ ಒಂದು ಮಹತ್ವದ ಮಾತನ್ನು ಹೇಳುತ್ತಾನೆ: ‘‘ಬೂಜ್ರ್ವಾ ದೃಷ್ಟಿಕೋನವು ರಾಜಕೀಯವನ್ನು ಉಳ್ಳವರ ನಡುವಿನ ಹೋರಾಟವಾಗಿ ನೋಡುತ್ತಿದೆಯೇ ಹೊರತು ಉಳ್ಳವರು ಮತ್ತು ಬಡವರ ನಡುವಿನ ಹೋರಾಟವನ್ನಾಗಿ ನೋಡುವುದಿಲ್ಲ’’. ಹೇಳಿಕೆ ತುಂಬಾ ಗಮನಾರ್ಹವಾದುದು.

ಜನರು ಜಾತಿಗೊಂದು ಮಠ, ಮಠಕ್ಕೊಬ್ಬ ಗುರುವನ್ನು ಹುಡುಕಿಕೊಂಡರು. ಮೂಲಕ ಇಡೀ ಸಮುದಾಯಗಳು ಮಠಗಳ ಹಿಡಿತಕ್ಕೆ ಬಂದಂತೆ, ಮುಸ್ಲಿಂ ಸಮುದಾಯಗಳು ಮುಲ್ಲಾ ಮೌಲ್ವಿಗಳ ಹಿಡಿತಕ್ಕೆ ಸಿಲುಕಿದವು. ಇಡಿಯಾದ ಸಮುದಾಯವನ್ನು ಹಿಡಿದಿಡಲು ಅವರು ಪ್ರಯತ್ನಿಸಿದರು. ಜನರ ಸುಧಾರಣೆ, ಜಾಗೃತಿಯ ಕಡೆಗೆ ಗಮನ ಕೊಡದೆ, ಸ್ಥಾವರಗಳನ್ನು ನಿರ್ಮಿಸುವುದಕ್ಕೆ ಆದ್ಯತೆ ನೀಡತೊಡಗಿದರು.

ಸಾಮಾಜಿಕ ಸುಧಾರಣೆ ಮತ್ತು ಆಧುನಿಕತೆ ಇಲ್ಲದೇ ಹೋದರೆ ಮುಸ್ಲಿಮ್ ಸಮುದಾಯ ಇನ್ನಷ್ಟು ಅವಗಣನೆಗೆ ಮತ್ತು ಘೆಟ್ಟೋಕರಣಕ್ಕೆ ಒಳಗಾಗುವುದೇ?

ಯಾವುದೇ ಸಮಾಜವಿರಲಿ ಅದರ ಚಲನೆ ಮುಂದಕ್ಕೆ ಇರುತ್ತದೆ. ಹಿಂದಕ್ಕೆ ಚಲಿಸುವುದೆಂದರೆ ಸಮಾಜದ ಸಮುದಾಯದ ಅವನತಿ ಎಂದೇ ಪರಿಗಣಿಸಬೇಕಾಗುತ್ತದೆ. ಕಳೆದ ಅರುವತ್ತು ವರ್ಷಗಳಲ್ಲಿ ರಾಜ್ಯದಲ್ಲಿ ತೀವ್ರತರ ಬದಲಾವಣೆಗಳಾಗುತ್ತಿವೆ. ದುರ್ಬಲ ವರ್ಗ, ಪರಿಶಿಷ್ಟ ಜಾತಿ, ಬುಡಕಟ್ಟು, ಧಾರ್ಮಿಕ ಅಲ್ಪಸಂಖ್ಯಾತರು ಬೌದ್ಧಿಕ ಸಂಪನ್ಮೂಲಗಳ ಮೇಲೆ ತಮ್ಮ ಹಿಡಿತ ಸಾಧಿಸುತ್ತಿದ್ದಾರೆಯೆ? ಧಾರ್ಮಿಕ ಅಲ್ಪಸಂಖ್ಯಾತರಿಗೆ ನ್ಯಾಯ ದೊರಕುತ್ತಿದೆಯೆ? ಅವರ ಸಮಸ್ಯೆಗಳೇನು? ತಲ್ಲಣಗಳೇನು? ಅವರಿಗೆ ಸಾಮಾಜಿಕ ನ್ಯಾಯ ದೊರೆಯುತ್ತಿದೆಯೆ? ಸಾಚಾರ ವರದಿ ಏನನ್ನು ಹೇಳುತ್ತದೆ? ಅಲ್ಪಸಂಖ್ಯಾತರ ವರ್ತಮಾನದ ತಲ್ಲಣಗಳೇನು? ಎಂಬ ಪ್ರಶ್ನೆಗಳು ನಮ್ಮ ಮುಂದಿವೆ. ರಾಷ್ಟ್ರದ ಆರ್ಥಿಕತೆಗೆ ಬೆನ್ನೆಲುಬಾಗಿ ನಿಂತ ಮುಸ್ಲಿಮರನ್ನು ಮತ್ತು ರೈತರನ್ನು, ದಲಿತರನ್ನು ಇನ್ನಿಲ್ಲದಂತೆ ತುಳಿಯಲಾಗುತ್ತಿದೆ. ರಾಜಕೀಯದಲ್ಲಿ, ಆಯೋಗಗಳಲ್ಲಿ, ಸಮಿತಿಗಳಲ್ಲಿ ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ನಗಣ್ಯಗೊಳಿಸಲಾಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ಅವರ ಭಾಗೀದಾರಿಕೆ ಇಲ್ಲದೇ ಹೋದರೆ ಅವರ ಸಮಸ್ಯೆಗಳನ್ನು ಎತ್ತುವವರಾರು?

ಮೊದಲು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವ ನಮ್ಮದಾಗಬೇಕಿದೆ. ದೇಶದ ಶೇ.80ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಜನರಲ್ಲಿ ಶೇಖರಣೆಯಾಗಿದೆ. ಇಂತಹ ಸಂದರ್ಭದಲ್ಲಿ ಜನಾಂಗದ ಅಭಿವೃದ್ಧಿ ಆರ್ಥಿಕ, ಸಾಮಾಜಿಕ ಸುಧಾರಣೆ ಸಾಧ್ಯವಿಲ್ಲ. ಜನಾಂಗ ಇನ್ನಷ್ಟು ಅಂಧಕಾರಕ್ಕೆ ತಳ್ಳಲ್ಪಡುತ್ತಿದ್ದಾರೆ. ಅವರ ಅವಗಣನೆ, ತುಷ್ಟೀಕರಣ, ಮತ್ತು ಜನಾಂಗದವರ ವಿರುದ್ಧ ಅಸಹನೆಯ ವಿಷ ಬೀಜವನ್ನು ಪ್ರಭುತ್ವದಿಂದಲೇ ಬಿತ್ತಲಾಗುತ್ತಿದೆ. ಇದು ಜನಾಂಗಕ್ಕೂ ರಾಷ್ಟ್ರಕ್ಕೂ ಆತಂಕಕಾರಿ ವಿಷಯವಾಗಿದೆ. ಅವರ ಆಹಾರದ ಹಕ್ಕು, ಬದುಕುವ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಕಾನೂನುಗಳನ್ನು ಜಾರಿಮಾಡಿ ಅಭದ್ರತೆಗೆ ದೂಡಿ ಅವರನ್ನು ಜೈಲಿಗೆ ತಳ್ಳಲಾಗುತ್ತಿದೆ. ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಗಳ ಪ್ರಕರಣವೇ ಇದಕ್ಕೆ ಸಾಕ್ಷಿಯಾಗಿದೆ.

ಇದೇ ಸಂದರ್ಭದಲ್ಲಿ ನಾವು ಆಧುನಿಕತೆ ಎಂದರೇನು? ಎಂಬುದರ ಜೊತೆಗೆ ಮುಸ್ಲಿಮರ ಅವಗಣನೆ ಮತ್ತು ತುಷ್ಟೀಕರಣದ ಜೊತೆಗೆ ಅವರಿಗೆ ಸಂಪತ್ತಿನಲ್ಲಿ ಸಮಪಾಲು ಸಿಗುತ್ತಿಲ್ಲವಾಗಿದೆ. ಅಖಲಾಕ್ರವರ ಹತ್ಯೆ ಮಾಡಿದ್ದು ಒಬ್ಬ ಬಿಜೆಪಿ ಶಾಸಕ ಸಂಗೀತ್ ಸೋಮ್ ಸಮರ್ಥಕ ಭೀಡ್. ಎಫ್..ಆರ್. ಆಗಿದ್ದು ಹತ್ಯೆಗೊಳಗಾದವನ ಕುಟುಂಬದ ಸದಸ್ಯರ ಮೇಲೆ. ಗೋರಖಪುರದ ಮಕ್ಕಳಿಗೆ ಆಮ್ಲಜನಕವಿಲ್ಲದಾಗ ಅವರನ್ನು ರಕ್ಷಿಸಲು ಮುಂದಾದವರು ಡಾ.ಕಾಫಿಲ್. ವ್ಯವಸ್ಥೆ ಕಾಫಿಲ್ ಅವರ ಮೇಲೆಯೇ ಮೊಕದ್ದಮೆ ಹೂಡುತ್ತದೆ. ಇದಕ್ಕೆ ಕಾರಣ ಆತ ಮುಸ್ಲಿಂ ಆಗಿರುವುದು.

ಸರ್ಕಾರದಲ್ಲಿ ಮುಸ್ಲಿಂ ಆಗಿರುವುದೆಂದರೆ ಅಪರಾಧವೇ? ದುರಂತವೆಂದರೆ ಪ್ರಜಾಪ್ರಭುತ್ವದ ಪ್ರೇಮಿಗಳಾದ ನಾವು ನಮ್ಮ ರಕ್ಷಣಾ ಸಂಗತಿಗಳ ವರದಿ ಮಾಡುತ್ತಿರುವುದು ಸ್ವತಃ ಇಂತಹ ಹಲವಾರು ಅಪರಾಧದ ಆರೋಪ ಎದುರಿಸುತ್ತಿರುವ ಮತ್ತು ಗಡಿಪಾರಿನ ಶಿಕ್ಷೆ ಅನುಭವಿಸಿದ ಗೃಹಮಂತ್ರಿಗೆ ಎಂಬುದು ವಿಷಾದದ ಸಂಗತಿಯಾಗಿದೆ. ಇವರ ಕೇಸುಗಳ ವಿಚಾರಣೆ ಮಾಡುತ್ತಿದ್ದ ನ್ಯಾಯಮೂರ್ತಿ ಜಸ್ಟೀಸ್ ಲೋಯಾ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಾರೆ ಎಂದರೆ ಇದರರ್ಥವೇನು? ಜನಾಂಗದ ಸುಧಾರಣೆ ಆಧುನಿಕತೆಗಳು ದೂರದ ಮಾತು. ಅವರನ್ನು ಮಾನವರಂತೆ ನಡೆಸಿಕೊಳ್ಳುವುದೂ ದೂರವಾಗುತ್ತಿದೆ. ಅವರಿಗೆ ಅಭಿವೃದ್ಧಿಯ ಫಲ ಸಿಗುತ್ತಿಲ್ಲ. ಬದುಕಿನ ಕಷ್ಟಗಳು ನೀಗುತ್ತಿಲ್ಲ. ಶಿಕ್ಷಣ, ಉದ್ಯೋಗ, ಆರ್ಥಿಕ ಭದ್ರತೆಗಳು ದೊರಕುತ್ತಿಲ್ಲ. ಸದಾ ಕಾಲ ಭಯ ಅಭದ್ರತೆಯಲ್ಲಿಯೇ ಬದುಕುವಂತಾಗಿರುವ ಪರಿಸ್ಥಿತಿ ಬದಲಾಗಬೇಕಾಗಿದೆ.

ಭಾರತೀಯ ಮುಸ್ಲಿಮ್ ಸಮುದಾಯದ ಭವಿಷ್ಯವೇನು? ಸಮುದಾಯಕ್ಕೆ ಸಂವಿಧಾನದತ್ತ ಹಕ್ಕುಸ್ವಾತಂತ್ರ್ಯ ಸಮಾನ ಅವಕಾಶ ಪಡೆಯುವ ದಾರಿಗಳೇನು?

ಭಾರತೀಯರೆಲ್ಲರಿಗೂ ಒಂದು ಕಾನೂನಿದೆ. ಒಂದು ಸಂವಿಧಾನವಿದೆ. ದೇಶದ ಎಲ್ಲ ಜನರ ಹಕ್ಕುಗಳನ್ನು ಡಾ.ಬಾಬಾಸಾಹೇಬ ಅಂಬೇಡ್ಕರ್ರವರು ಸಂವಿಧಾನದ ಎಳೆಗಳಲ್ಲಿ ನೇಯ್ದಿಟ್ಟು ಹೋಗಿದ್ದಾರೆ. ಭಾರತೀಯರೆಲ್ಲರಿಗೂ ಸಂವಿಧಾನದತ್ತ ಹಕ್ಕನ್ನು ಸಂವಿಧಾನ ನೀಡುತ್ತದೆ. ಆದರೆ ಜನರಿಂದ ಆಯ್ಕೆಯಾಗಿ ಹೋಗಿರುವ ಸಂಸದರುಗಳೇ, ಸಂವಿಧಾನದ ಮೇಲೆ ಕೈಯಿಟ್ಟು ಪ್ರಮಾಣವಚನ ಸ್ವೀಕರಿಸಿದ ಸಂಸದರೇ ತಾವು ಸಂವಿಧಾನವನ್ನು ಬದಲು ಮಾಡಲು ಬಂದಿರುವುದಾಗಿ ಸಾರ್ವಜನಿಕ ವೇದಿಕೆಗಳಿಂಲೇ ಹೇಳುತ್ತಿರಬೇಕಾದರೆ, ದೇಶದ ಮುಸ್ಲೀಮರ, ಮಹಿಳೆಯರ ಮತ್ತು ದಲಿತರ ಸ್ಥಿತಿ ಏನಾಗಬೇಡ?

ಸಾಚಾರ್ ವರದಿಯ ಪ್ರಕಾರ ದಲಿತರಿಗಿಂತ ಮುಸ್ಲಿಮರು ಕೂದಲೆಳೆಯಷ್ಟು ಮಾತ್ರ ಮೇಲಿದ್ದಾರೆ. ಅವಕಾಶ ವಂಚಿತ ಜನ ಸಮುದಾಯಗಳನ್ನು ದೇಶದ ಮುಖ್ಯ ಪ್ರವಾಹದೊಂದಿಗೆ ಕೂಡಿಸಲು, ಸಾಚಾರ್ ವರದಿ ಒತ್ತಾಯಿಸುತ್ತದೆ. ಶೇ. 94.9ರಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದಾರೆ. ಶೇ. 60.2ರಷ್ಟು ಭೂಹೀನರಾಗಿದ್ದಾರೆ. ನಗರಗಳಲ್ಲಿ ಶೇ. 54.6ರಷ್ಟು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶೇ. 60.1ರಷ್ಟು ಶಾಲಾ ಶಿಕ್ಷಣ ವಂಚಿತರಾಗಿದ್ದಾರೆ. ಸರ್ಕಾರಿ ಸೇವೆಯಲ್ಲಿ ಕೇವಲ ಶೇ. 4.9ರಷ್ಟು ಮಾತ್ರ ಪ್ರಾತಿನಿಧ್ಯ ಪಡೆದಿದ್ದಾರೆ.

ಯಾವುದೇ ಸಮುದಾಯ ಅವಕಾಶ ವಂಚಿತರಾಗುವುದು ಅಮಾನವೀಯ. ರಾಷ್ಟ್ರದ ಲಭ್ಯ ಸಂಪನ್ಮೂಲಗಳು ಎಲ್ಲರವೂ ಆಗಿವೆ. ಅವು ಜನಸಂಖ್ಯಾ ಪ್ರಮಾಣಕ್ಕನುಗುಣವಾಗಿ ಹಂಚಿಕೆಯಾಗಬೇಕು. ಇದುವೇ ಪ್ರಜಾಪ್ರಭುತ್ವದ ತಾತ್ವಿಕ ಬುನಾದಿ. ಸಮಾಜದ ಎಲ್ಲ ಜನಸಮುದಾಯಗಳಿಗೂ ಅವರ ಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ ಸಿಗಬೇಕಾಗಿದೆ. ಅವರಿಗೆ ಸಮಾನ ಅವಕಾಶಗಳು ದೊರಕಬೇಕಿದೆ. ಇಂದು ರಾಜಕೀಯಕ್ಕೆ ತನ್ನ ಜನರನ್ನು ಜತನದಿಂದ ಕಾಪಾಡುವ ರಾಜಕೀಯ ತಾಯ್ತನ ಬೇಕಿದೆ. ಪೊರೆವ ತಾಯಿ ಕಟುಕಿಯಾದಾಗ ಅನಿವಾರ್ಯವಾಗಿ ಮಕ್ಕಳು ದಂಗೆಯೇಳಬೇಕಾಗುತ್ತದೆ.

*ಲೇಖಕರು ಮೂಲತಃ ಕಲಬುರ್ಗಿಯವರು; ಪ್ರಗತಿಪರ ಚಿಂತಕರು, ಸಾಹಿತಿ, ನಿವೃತ್ತ ಎಪಿಎಂಸಿ ನೌಕರರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Leave a Reply

Your email address will not be published.