ಈ ಸಹಸ್ರಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ..?

ಕಳೆದ ಒಂದು ದಶಕದಲ್ಲಿ ಬೆಳೆದು ನಿಂತಿರುವ ಈ ಮಾನಸಿಕತೆಯ ಬಗ್ಗೆ ಇದೀಗ ಸಂಶೋಧನೆಗಳು ನಡೆಯುತ್ತಿವೆಯಾದರೂ ಈ ಸಮೂಹಸನ್ನಿಯ ಅಪಾಯಗಳನ್ನು ಅಂಕಿಅಂಶ-ಪುರಾವೆಗಳೊಡನೆ ದಾಖಲಿಸಿದ ಪುಸ್ತಕಗಳ ಕೊರತೆಯಿದೆ. ದಿನೇದಿನೇ ಪೆಡಂಭೂತವಾಗಿ ನಮ್ಮ ಮಕ್ಕಳ ಮಾನಸಿಕತೆಯನ್ನು ಹಾಳುಗೆಡವುತ್ತಿರುವ ಈ ಸಮೂಹ ಮಾಧ್ಯಮ ಸನ್ನಿಯ ಬಗ್ಗೆ ಅಧಿಕಾರಯುತವಾಗಿ ಎಚ್ಚರ ನೀಡಬಲ್ಲ ವಕ್ತಾರರೂ ಬೇಕಾಗಿದ್ದಾರೆ.

ಡಾನಲ್ಡ್ ಟ್ರಂಪ್ ವಿರುದ್ಧ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಂತು ಸೋತ ಅಭ್ಯರ್ಥಿ ಹಿಲರಿ ಕ್ಲಿಂಟನ್‍ರವರು It takes a whole village to bring up a childಎಂದು ಹೇಳಿದ್ದರು. ಈ ಹೇಳಿಕೆ ಮತ್ತು ಸಂಬಂಧಿತ ವಿಷಯ ಅಮೆರಿಕೆಯಲ್ಲಿ ಬಹು ಚರ್ಚಿತವಾಗಿತ್ತು. ಒಂದು ಮಗುವಿನ ಶಿಕ್ಷಣ ಮತ್ತು ಬೆಳವಣಿಗೆಯಲ್ಲಿ ಪೋಷಕರ ಮತ್ತು ಶಾಲೆಯ ಪಾತ್ರ ಮಾತ್ರ ಮುಖ್ಯವಲ್ಲ. ಬದಲಿಗೆ ಮಗುವಿನ ಪರಿಸರದಲ್ಲಿ ನಡೆಯುವ ಎಲ್ಲ ಘಟನೆಗಳು ಹಾಗೂ ಬೆಳವಣಿಗೆಗಳು ಮಗುವಿನ ಮಾನಸಿಕತೆಯನ್ನು ರೂಪಿಸುವಲ್ಲಿ ಗಣನೀಯ ಪಾತ್ರ ವಹಿಸುತ್ತವೆ ಎಂದು ಅರ್ಥೈಸಲಾಗಿತ್ತು.

ಮೇಲಿನ ಮಾತಿನ ಸಾರವು ಪ್ರಪಂಚದ ಎಲ್ಲಾ ದೇಶ-ಸಂಸ್ಕೃತಿಗಳ ಸನ್ನಿವೇಶದಲ್ಲಿ ಹೇಳಲಾಗಿತ್ತು. ಪೋಷಕರ ಪ್ರಭಾವ ಹಾಗೂ ಶಾಲಾ ಶಿಕ್ಷಣದ ಜೊತೆಗೆ ಮಗುವೊಂದು ತನ್ನ ನೆರೆಹೊರೆ-ಹಳ್ಳಿ-ಪಟ್ಟಣಗಳಲ್ಲಿ ನಡೆಯುತ್ತಿದ್ದ ಘಟನಾವಳಿಗಳಿಂದ ದಟ್ಟ ಪ್ರಭಾವಕ್ಕೆ ಒಳಗಾಗುತ್ತಿತ್ತು. ಸ್ಥಳೀಯ ಜನಪದ ಸಂಸ್ಕೃತಿ, ಹರಿಕಥೆ-ಶನಿಮಹಾತ್ಮೆ ನಾಟಕಗಳು, ಹಳ್ಳಿಯ ಜಾತ್ರೆ-ಜಗಳಗಳು, ಪಟ್ಟಣದ ರಾಜಕೀಯ-ಚುನಾವಣೆಗಳು ಮತ್ತು ಆಟ-ಸ್ಪರ್ಧೆಗಳು ಮಗುವೊಂದರ ಬೆಳವಣಿಗೆಗೆ ಪೂರಕವಾಗಿದ್ದವು. ನಮ್ಮ ಮುಂದಿನ ಪೀಳಿಗೆಯ ಪಠ್ಯ ಹಾಗೂ ಪಠ್ಯೇತರ ಶಿಕ್ಷಣಕ್ಕೆ ಸಹಕಾರಿಯಾಗಿದ್ದವು.

ಯಾವುದಾದರೂ ಕೊರತೆ ಕಂಡುಬಂದಲ್ಲಿ ಆ ಕೊರತೆಯನ್ನು ತುಂಬಲು ನಾವು ಕಷ್ಟಪಡಬಹುದಾಗಿತ್ತು. ಮಗುವಿನ ಒಟ್ಟು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಎಲ್ಲಾ ಅಂಶಗಳು ನಮ್ಮ ಎಣಿಕೆ ಹಾಗೂ ಅಂಕೆಯಲ್ಲಿಯೇ ಇದ್ದವು.

ಇಷ್ಟೆಲ್ಲವೂ ಆದರೂ ಮಗುವೊಂದರ ಶಿಕ್ಷಣ ಪರಿಮಿತ ಭೌಗೋಳಿಕ ವಲಯಕ್ಕೆ ಸೀಮಿತವಾಗಿತ್ತು. ಮಗುವಿನ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳು ಹಾಗೂ ಸಂಗತಿಗಳನ್ನು ನಾವು ಎಣಿಸಬಹುದಾಗಿತ್ತು. ಯಾವುದಾದರೂ ಕೊರತೆ ಕಂಡುಬಂದಲ್ಲಿ ಆ ಕೊರತೆಯನ್ನು ತುಂಬಲು ನಾವು ಕಷ್ಟಪಡಬಹುದಾಗಿತ್ತು. ಮಗುವಿನ ಒಟ್ಟು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಎಲ್ಲಾ ಅಂಶಗಳು ನಮ್ಮ ಎಣಿಕೆ ಹಾಗೂ ಅಂಕೆಯಲ್ಲಿಯೇ ಇದ್ದವು.

ನಮ್ಮ ಮನೆಗಳಿಗೆ ರೇಡಿಯೋ ಹಾಗು ಟೆಲಿವಿಶನ್‍ಗಳು ದಾಳಿಯಿಟ್ಟಾಗ ಪೋಷಕವರ್ಗದ ಕಾವಲು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಮಕ್ಕಳು ಯಾವಾಗಲೂ ಟಿವಿಯ ಮುಂದೆ ಕುಳಿತು ಬಾಲಿವುಡ್ ಚಿತ್ರಗಳನ್ನು ಹಾಗೂ ಸಂಗೀತವನ್ನು ನೋಡುತ್ತಿರುವಾಗ ನಮ್ಮ ಬ್ಲಡ್ ಪ್ರೆಶರ್ ಹೆಚ್ಚಾಗುತ್ತಿತ್ತು. ಪರೀಕ್ಷೆಯ ಸಮಯದಲ್ಲಿ ಮಕ್ಕಳು ಓದದೆ ಟಿವಿಯ ಮುಂದೆ ಕುಳಿತು ಸಮಯ ವ್ಯರ್ಥ ಮಾಡುತ್ತಿರುವಾಗ ನಮಗೆ ಕೋಪ ಬರುತ್ತಿತ್ತು. ಆದರೆ ಈ ಯಾವುದೂ ನಂತರದ ವರ್ಷಗಳಲ್ಲಿ ಮೊಬೈಲ್ ಫೋನ್ ಮೂಲಕ ನಮ್ಮ ಮಕ್ಕಳು ಅಂತರ್ಜಾಲ ತಾಣಗಳಲ್ಲಿ ಕಳೆದುಹೋದ ಸಂಗತಿಗೆ ಸಮನಾಗಿಲ್ಲ. ಹಿಂದೆ ನಡೆದ ಯಾವುದೇ ಅನಾಹುತಗಳಿಗೆ ಈ ಅಂತರ್ಜಾಲದ ಹೊಡೆತ ಸಮನಾಗಿಲ್ಲ.

ಕಳೆದ ಒಂದು ದಶಕದಲ್ಲಿ ನಮ್ಮ ಮಕ್ಕಳ ಮೇಲೆ ಪ್ರಭಾವ ಬೀರಬಲ್ಲ ವ್ಯಕ್ತಿಗಳು ಮತ್ತು ಸನ್ನಿವೇಶಗಳಲ್ಲಿ ಸಂಪೂರ್ಣ ಬದಲಾವಣೆಯಾಗಿದೆ. ಪೋಷಕರು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದ್ದ ಪರಿಸರವನ್ನು ನಿಯಂತ್ರಣ ಮಾಡುವ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ. ಈ ಪ್ರಭಾವ-ಪರಿಣಾಮಗಳ ಬದಲಾದ ಚಿತ್ರಣವನ್ನು ಈ ಕೆಳಕಂಡಂತೆ ವಿವರಿಸಬಹುದು.

1. ಈ ಸಹಸ್ರಮಾನದ ಮಕ್ಕಳು ತಮ್ಮ ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳಲ್ಲಿ ತಮ್ಮನ್ನು ತಾವು ವಿಶ್ವಕ್ಕೆ ತೆರೆದುಕೊಂಡಿದ್ದಾರೆ. ಪ್ರಪಂಚದ ಎಲ್ಲಾ ಒಳ್ಳೆಯ ಹಾಗೂ ಕೆಟ್ಟ ಮಾಹಿತಿ-ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದಾರೆ. ಅಂತರ್ಜಾಲದಲ್ಲಿ ಲಭ್ಯವಿರುವ ಎಲ್ಲಾ ಆಡಿಯೊ ಹಾಗೂ ವಿಡಿಯೋ ಲೈಬ್ರೆರಿಗಳಿಗೆ ಮುಕ್ತವಾಗಿ ಪ್ರವೇಶ ಹೊಂದಿದವರಾಗಿದ್ದಾರೆ. ಈ ‘ಮುಕ್ತ ಪರವಾನಗಿ’ ಇದುವರೆಗೆ ನಾವು ಕಾಪಾಡಿಕೊಂಡು ಬಂದಿದ್ದ ಸೀಮಿತ-ನಿಯಂತ್ರಿತ ಪ್ರಭಾವಲಯಕ್ಕೆ ತದ್ವಿರುದ್ಧವಾಗಿದೆ.

ವರ್ಚುಯಲ್ ಸ್ನೇಹ ವಲಯಕ್ಕೆ ವಯಸ್ಸು, ಸಮಯ, ದೇಶ, ಸಂಸ್ಕೃತಿಗಳ ಬಾಧೆಯಿಲ್ಲ. ಸಮಾನ ಹುಚ್ಚಿರುವ ಎಳೆ ಮನಸ್ಸುಗಳು ಬೇರಾವುದೇ ನಿಜಪ್ರಪಂಚದಲ್ಲಿ ವಾಸಿಸುತ್ತಿರುವ ಜನರೊಡನೆ ಮಾನಸಿಕವಾಗಿ ಬಾಂಧವ್ಯ ಬೆಳೆಸಬಹುದು.

2. ಈ ‘ಮುಕ್ತ ಪರವಾನಗಿ’ ಕೇವಲ ಮಕ್ಕಳಿಗಷ್ಟೇ ಅಲ್ಲ, ಎಲ್ಲರಿಗೂ ದಕ್ಕಿದೆಯಲ್ಲಾ ಎಂದು ನೀವು ಪ್ರಶ್ನಿಸಬಹುದು. ಆದರೆ ತಿಳಿವಳಿಕೆ ಹೊಂದಿದ ವಯಸ್ಕನೊಬ್ಬ ಈ ಮುಕ್ತ ಜಗತ್ತನ್ನು ನೋಡುವುದಕ್ಕೂ ಹಾಗೂ ಸುಲಭವಾಗಿ ಪ್ರಭಾವಕ್ಕೆ ಒಳಗಾಗುವ ಹದಿಹರೆಯದ ಪೋರನೊಬ್ಬ ನೋಡುವುದಕ್ಕೂ ಬಹಳ ವ್ಯತ್ಯಾಸಸವಿದೆ. ಯಾವುದು ಸತ್ಯ ಯಾವುದು ಅತಿರೇಕದ ಪ್ರಚಾರ ಎಂಬುದನ್ನು ಅರಿಯದ ಎಳೆಯ ಮನಸ್ಸೊಂದು ಈ ‘ಮುಕ್ತ ಪರವಾನಗಿ’ಯಲ್ಲಿ ದೊರೆಯುವ ಮಾಹಿತಿಗಳನ್ನೇ ನೈಜಸತ್ಯವೆಂದು ನಂಬಬಹುದು. ಬೇರಾವುದೇ ಪ್ರಾಪಂಚಿಕ ಸತ್ಯವನ್ನು ಅರಿಯದ ಹದಿಹರೆಯದ ಹುಡುಗಿಯೊಬ್ಬಳು ಈ ಉತ್ಪ್ರೇಕ್ಷಿತ ಸಮೂಹಸನ್ನಿಗೆ ಮರುಳಾಗಬಹುದು.

3. ಮೊಬೈಲ್‍ಗಳಲ್ಲಿ ತೆರೆದುಕೊಳ್ಳುವ ಪ್ರಪಂಚವು ಸಮೂಹಮಾಧ್ಯಮದ ಪರ್ಯಾಯ ಜಗತ್ತನ್ನು ಸಹಾ ಮಕ್ಕಳ ಮುಂದೆ ತೆರೆದಿದೆ. ಯಾವುದಾದರೊಂದು ಹುಟ್ಟುಹಬ್ಬದ ಸಮಾರಂಭಕ್ಕೆಂದು ನೀವು ಹೋದರೆ ಅಲ್ಲಿ ಮಕ್ಕಳು ಪರಸ್ಪರ ಮಾತು-ಆಟ ಆಡುವುದಕ್ಕಿಂತ ಹೆಚ್ಚಾಗಿ ತಮ್ಮ ತಮ್ಮ ಮೊಬೈಲ್ ಫೋನ್‍ಗಳಲ್ಲಿಯೇ ವ್ಯಸ್ತರಾಗಿರುವುದನ್ನು ಕಂಡು ನಾವು ದಂಗಾಗಿದ್ದೇವೆ. ಸಮೀಪದ ಸ್ನೇಹ ವಲಯಕ್ಕೆ ವ್ಯತಿರಿಕ್ತವಾಗಿ ಡಿಜಿಟಲ್ ಸ್ನೇಹ ವಲಯಕ್ಕೆ ನಮ್ಮ ಮಕ್ಕಳು ಹತ್ತಿರವಾಗಿರುವುದನ್ನು ನೋಡಿ ಚಿಂತಿತರಾಗಿದ್ದೇವೆ. ಈ ವರ್ಚುಯಲ್ ಸ್ನೇಹ ವಲಯಕ್ಕೆ ವಯಸ್ಸು, ಸಮಯ, ದೇಶ, ಸಂಸ್ಕೃತಿಗಳ ಬಾಧೆಯಿಲ್ಲ. ಸಮಾನ ಹುಚ್ಚಿರುವ ಎಳೆ ಮನಸ್ಸುಗಳು ಬೇರಾವುದೇ ನಿಜಪ್ರಪಂಚದಲ್ಲಿ ವಾಸಿಸುತ್ತಿರುವ ಜನರೊಡನೆ ಮಾನಸಿಕವಾಗಿ ಬಾಂಧವ್ಯ ಬೆಳೆಸಬಹುದು. ತಮ್ಮ ಸುತ್ತಮುತ್ತಲ ಪರಿಸರಕ್ಕೆ ಸ್ಪಂದಿಸುವ ಬದಲು ಇನ್ನಾವುದೋ ಆಕರ್ಷಣೆಗೆ ಒಳಗಾಗಬಹುದು. ಈ ವರ್ಚುಯಲ್ ಸ್ನೇಹ ವಲಯದಿಂದ ಕೇವಲ ಕೆಟ್ಟ ಪರಣಾಮವೇ ಆಗುವುದೆಂದು ಹೆಳಲಾಗುವುದಿಲ್ಲ. ಆದರೆ ಕೆಟ್ಟ ಪರಿಣಾಮವೊಂದು ಆದಲ್ಲಿ ಅದರ ತೀವ್ರತೆ ಹಾಗೂ ಚಿಕಿತ್ಸೆರಹಿತ ಸನ್ನಿವೇಶ ನಮ್ಮ ಮಕ್ಕಳಿಗೆ ಹಿಮ್ಮೆಟ್ಟಲಾಗದ ಅನಾಹುತ ಒಡ್ಡಬಹುದು.

4. ಈ ‘ಅನಿಯಂತ್ರಿತ ಪ್ರವೇಶ’ದ ಅಂತರ್ಜಾಲ ಜಗತ್ತಿನ ಮಾಹಿತಿಗಳನ್ನು ಸಂಸ್ಕರಿಸಲು ನಮ್ಮ ಮಕ್ಕಳಿಗೆ ಸಾಧ್ಯವಾಗದೇ ಹೋಗಬಹುದು. ಸೀಮಿತ ಬುದ್ದಿಶಕ್ತಿಯ ವಯಸ್ಸಿನಲ್ಲಿ ಅಗಾಧ ಹೊರೆಯ ಈ ಮಾಹಿತಿ ಪ್ರಪಂಚ ಮನಸ್ಸುಗಳನ್ನು ಖಿನ್ನತೆಗೆ ಅಥವಾ ಸೋಲೊಪ್ಪುವಿಕೆಯ ಭಾವಕ್ಕೆ ದೂಡಬಹುದು. ಎಷ್ಟು ತಿಳಿದರೂ ಸಾಲದು ಮತ್ತು ಎಷ್ಟು ಪ್ರತಿಕ್ರಿಯಿಸಿದರೂ ಅಲ್ಪಮಾತ್ರವೆನ್ನುವ ಈ ಡಿಜಿಟಲ್ ಜಗತ್ತು ಎಳೆಯ ಮನಸ್ಸುಗಳನ್ನು ಹತಾಶತೆಗೆ ದೂಡಬಹುದು.

ಮುಗ್ಧ ಹಾಗೂ ಎಳೆಯ ಮನಸ್ಸುಗಳ ಆರೋಗ್ಯಕರ ವಾತಾವರಣದಲ್ಲಿ ನಡೆಯಬೇಕಾಗಿದ್ದ ಕಲಿಕಾ ಸ್ಪರ್ಧೆಗಳು ಇಂದು ನಾಮೇಲೆ ತಾಮೇಲೆ ಎನ್ನುವ ವರ್ಚುಯಲ್ ಪ್ರಪಂಚದ ವೇದಿಕೆಯಲ್ಲಿ ಆಗುತ್ತಿದೆ.

5. ಇಡೀ ವಿಶ್ವವೇ ತಮ್ಮ ಮುಂದೆ ತೆರೆದಿದೆಯೆನ್ನುವ ಧಾವಂತದಲ್ಲಿ ನಮ್ಮ ಮಕ್ಕಳ ಆಕಾಂಕ್ಷೆ ಹಾಗೂ ಸಾಧ್ಯತೆಗಳ ನಡುವೆ ಏರುಪೇರಾಗಿದೆ. ಶಾಲೆಯ ತಮ್ಮ ಸಹಪಾಠಿಗಳ ಜೊತೆ ನಡೆಯಬೇಕಾಗಿದ್ದ ಸ್ಪರ್ಧೆಯಿಂದು ಜಾಗತಿಕ ಸ್ಪರ್ಧೆಯ ಆಯಾಮ ಪಡೆದಿದೆ. ಕುಟುಂಬದ ಓರಗೆಯವರ ನಡುವೆ ಆಗಬೇಕಿದ್ದ ಪೈಪೋಟಿಯಿಂದು ಸಮೂಹ ಮಾಧ್ಯಮಗಳ ಸ್ಟಾರ್ ಆಕರ್ಷಣೆಗಳ ಜೊತೆಗೆ ಆಗುತ್ತಿದೆ. ಮುಗ್ಧ ಹಾಗೂ ಎಳೆಯ ಮನಸ್ಸುಗಳ ಆರೋಗ್ಯಕರ ವಾತಾವರಣದಲ್ಲಿ ನಡೆಯಬೇಕಾಗಿದ್ದ ಕಲಿಕಾ ಸ್ಪರ್ಧೆಗಳು ಇಂದು ನಾಮೇಲೆ ತಾಮೇಲೆ ಎನ್ನುವ ವರ್ಚುಯಲ್ ಪ್ರಪಂಚದ ವೇದಿಕೆಯಲ್ಲಿ ಆಗುತ್ತಿದೆ. ಈ ಮಟ್ಟದ ಸ್ಪರ್ಧಾತ್ಮಕ ವಾತಾವರಣವು ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೆ ದಟ್ಟ ಪರಿಣಾಮ ಬೀರುತ್ತಿದೆ.

6. ಮಕ್ಕಳು ತಮ್ಮನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುವ ಮಾದರಿಗಳಲ್ಲಿಯೂ ಬದಲಾವಣೆ ಕಂಡುಬಂದಿದೆ. ಮೊದಲಿಗೆ ಕರ್ನಾಟಕದ ಯಾವುದಾದರೊಂದು ಜಿಲ್ಲೆಯೊಂದರಲ್ಲಿ ಓದುತ್ತಿರುವ ಹುಡುಗಿಯೊಬ್ಬಳು ತನ್ನನ್ನು ಶಾಲೆಯ ಹಾಗೂ ಸಂಬಂಧಿಕರ ಮಕ್ಕಳೊಡನೆ ಹೋಲಿಕೆ ಮಾಡಿಕೊಳ್ಳುತ್ತಿದ್ದಳು. ಈ ಹೋಲಿಕೆ ಮಟ್ಟ ಸರಿಸಮಾನವಾಗಿಯೇ ಇರುತ್ತಿತ್ತು. ಆದರೆ ಇಂದು ಸಾಧಾರಣ ಬಣ್ಣ-ಲಕ್ಷಣದ ಭಾರತೀಯ ಹುಡುಗಿಯೊಬ್ಬಳು ತನ್ನನ್ನು ಅಮೆರಿಕಾದ ‘ಯು-ಟ್ಯೂಬ್’ ಸೆನ್ಸೇಶನ್ ಒಬ್ಬಳೊಡನೆ ಹೋಲಿಕೆ ಮಾಡಿಕೊಂಡರೆ ಏನು ಮಾಡುವುದು.? ನಮ್ಮ ಮಕ್ಕಳು ಸೌಂದರ್ಯ ಹಾಗೂ ಮೈಕಟ್ಟಿನಲ್ಲಿ ತಮ್ಮನ್ನು ತಾವು ಜಾಗತಿಕ ಸ್ಪರ್ಧೆಗೆ ಒಡ್ಡಿಕೊಂಡರೆ ಏನಾದೀತು.? ಸಹಜವಾಗಿ ಈ ಮಕ್ಕಳು ತಮ್ಮ ಆತ್ಮಸ್ಥೈರ್ಯವನ್ನು ಹಾಗೂ ಮನೋಬಲವನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗುವ ಹಂತದಲ್ಲಿದ್ದಾರೆ. ಈ ಮಕ್ಕಳಿಗೆ ಯಾರೊಡನೆ ಹೋಲಿಕೆ ಮಾಡಿಕೊಳ್ಳಬೇಕೆಂದು ನಾವು ಹೇಳಿಕೊಡುವ ಹಾಗಿಲ್ಲದಂತಾಗಿದೆ.

7. ಅತ್ಯಂತ ಪ್ರಮುಖವಾಗಿ ನಮ್ಮ ಮಕ್ಕಳು ತಮ್ಮ ಭೌತಿಕ ಹಾಗೂ ವರ್ತಮಾನದ ನಿಜ ಅಸ್ತಿತ್ವವನ್ನು ಮರೆಮಾಚಿ ಅಂತರ್ಜಾಲದ ಪರ್ಯಾಯ ಅಸ್ತಿತ್ವಕ್ಕೆ ಹೆಚ್ಚಿನ ಬೆಲೆ ನೀಡುವಂತಾಗಿದೆ. ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಬಲಿಕೊಟ್ಟು ಸ್ನ್ಯಾಪ್‍ಚಾಟ್ ಹಾಗೂ ಇನ್ಸ್ಟಾಗ್ರಾಮ್‍ಗಳಲ್ಲಿನ ‘ಕೂಲ್ ಕೋಶೆಂಟ್’ಅಂಕಗಳನ್ನು ಹೆಚ್ಚಿಸಿಕೊಳ್ಳುವಲ್ಲಿಗೆ ಗಮನ ಹರಿಸುವಂತಾಗಿದೆ. ಸ್ನೇಹಿತರೆಲ್ಲರೂ ಇದೇ ಪ್ರಭಾವಕ್ಕೆ ಒಳಗಾಗಿ ಸಮೂಹಸನ್ನಿಗೆ ಒಳಗಾದವರಂತೆ ವ್ಯವಹರಿಸುತ್ತಿದ್ದಾಗ ಅದೇ ಗುಂಪಿನ ಮಗುವೊಂದು ಬೇರೆಲ್ಲರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲವಾಗಿದೆ. ಈ ‘ಪಿಯರ್ ಪ್ರಶರ್’ನಲ್ಲಿ ಅಷ್ಟೇನೂ ಗಟ್ಟಿಯಿಲ್ಲದ ಮಕ್ಕಳು ಸೊರಗುತ್ತಿದ್ದಾರೆ. ಮೇಲಾಗಿ ಯಾವುದೇ ಕಾರಣಕ್ಕೆ ತಂದೆ-ತಾಯಂದಿರ ಸಂಪೂರ್ಣ ಗಮನ-ಬೆಂಬಲ ದೊರೆಯದ ಮಕ್ಕಳು ಈ ಅನಾರೋಗ್ಯಕರ ಸ್ಪರ್ಧೆಯಲ್ಲಿ ಬಲಿಪಶುಗಳಾಗುತ್ತಿದ್ದಾರೆ. ಶ್ರೇಷ್ಠ ಸಾಹಿತ್ಯ ಓದಿ ತಮ್ಮ ವ್ಯಕ್ತತ್ವ ಗಟ್ಟಿಯಾಗಿಸಿಕೊಳ್ಳುವ ಬದಲಿಗೆ ಯಾವುದೋ ‘ಯೂ ಟ್ಯೂಬ್’, ‘ಟಿಕ್ ಟಾಕ್’ ಅಥವಾ ‘ಇನ್‍ಸ್ಟಾಗ್ರಾಮ್’ಗಳ ಕ್ಷಣಿಕ ಮನೋರಂಜನೆಗೆ ಮನ ನೀಡುತ್ತಿದ್ದಾರೆ. ‘ಲೈಕ್’ಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಹುನ್ನಾರದಲ್ಲಿ ಹುಚ್ಚು ಮಾತನ್ನಾಡುವ ಹಾಗೂ ಗಮನ ಸೆಳೆಯುವ ಚಾಳಿ ಬೆಳೆಸಿಕೊಳ್ಳುತ್ತಿದ್ದಾರೆ.

ಕಳೆದ ಒಂದು ದಶಕದಲ್ಲಿ ಬೆಳೆದು ನಿಂತಿರುವ ಈ ಮಾನಸಿಕತೆಯ ಬಗ್ಗೆ ಇದೀಗ ಸಂಶೋಧನೆಗಳು ನಡೆಯುತ್ತಿವೆಯಾದರೂ ಈ ಸಮೂಹಸನ್ನಿಯ ಅಪಾಯಗಳನ್ನು ಅಂಕಿಅಂಶ-ಪುರಾವೆಗಳೊಡನೆ ದಾಖಲಿಸಿದ ಪುಸ್ತಕಗಳ ಕೊರತೆಯಿದೆ. ದಿನೇದಿನೇ ಪೆಡಂಭೂತವಾಗಿ ನಮ್ಮ ಮಕ್ಕಳ ಮಾನಸಿಕತೆಯನ್ನು ಹಾಳುಗೆಡವುತ್ತಿರುವ ಈ ಸಮೂಹ ಮಾಧ್ಯಮ ಸನ್ನಿಯ ಬಗ್ಗೆ ಅಧಿಕಾರಯುತವಾಗಿ ಎಚ್ಚರ ನೀಡಬಲ್ಲ ವಕ್ತಾರರೂ ಬೇಕಾಗಿದ್ದಾರೆ. ಇಂತಹಾ ಖಾಯಿಲೆಗಳು ಮೊದಲೆಲ್ಲಾ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಬೆಳೆದು ನಂತರ ನಿಧಾನವಾಗಿ ನಮ್ಮಲ್ಲಿಗೆ ಹರಡುತ್ತಿದ್ದವು. ನಮ್ಮಲ್ಲಿ ಸಾಂಕ್ರಾಮಿಕವಾಗುವ ಮೊದಲೇ ಈ ಖಾಯಿಲೆಗಳಿಗೆ ಔಷಧಿಯೂ ಲಭ್ಯವಿರುತ್ತಿತ್ತು. ಆದರೆ ಅಂತರ್ಜಾಲದ ಯುಗದಲ್ಲಿ ಈ ಮಾನಸಿಕ ಖಾಯಿಲೆ ಪಶ್ಚಿಮ-ಪೂರ್ವಗಳೆರೆಡರಲ್ಲಿಯೂ ಏಕಕಾಲಕ್ಕೆ ಹಬ್ಬುತ್ತಿದೆ. ಹಾಗಾಗಿ ಪಾಶ್ಚಾತ್ಯ ಔಷದಿಗೆ ಕಾಯುವ ಸಮಯವೂ ನಮಗೆ ಇಲ್ಲವಾಗಿದೆ. ಈ ಮಾನಸಿಕತೆಗೆ ಮದ್ದು ಅರೆಯುವ ಕೆಲಸವನ್ನು ನಾವೂ ಶುರು ಮಾಡಬೇಕಿದೆ.

Leave a Reply

Your email address will not be published.