ಉತ್ಕೃಷ್ಟತೆ ನಮ್ಮ ಸಂಸ್ಕೃತಿಯ ಭಾಗವಾಗದಿದ್ದಾಗ…

ಶಿಸ್ತು, ಪ್ರಾಮಾಣಿಕತೆ, ಕ್ಷಮತೆ ಹಾಗೂ ಉತ್ಕೃಷ್ಟತೆ ನಮ್ಮಲ್ಲಿ ವಿರಳವಾಗಿರುವ ಗುಣಗಳು. ನಮ್ಮ ಸಂಸ್ಕೃತಿಯಲ್ಲಿ ಅವು ಹಾಸುಹೊಕ್ಕಾಗದಿರುವುದೇ ನಮ್ಮ ಇಂದಿನ (ದು)ಸ್ಥಿತಿಗೆ ಕಾರಣ.

– ಎಂ.ಕೆ.ಆನಂದರಾಜೇ ಅರಸ್

ಎರಡು ದಶಕಗಳ ಹಿಂದಿನ ಮಾತು. ಮುಂಬೈನಲ್ಲಿ ಉದ್ಯೋಗದಲ್ಲಿದ್ದೆ. ನಾನು ಉದ್ಯೋಗದಲ್ಲಿದ್ದ ಸಂಸ್ಥೆಯ ಎಂ.ಡಿ. ನನ್ನನ್ನು ಇನ್ನೊಂದು ಸಂಸ್ಥೆಯ ಎಂ.ಡಿ.ಗೆ ಪರಿಚಯಿಸಬೇಕಿತ್ತು. ಆ ಸಂಸ್ಥೆಗೆ ನಮ್ಮ ಸಂಸ್ಥೆಯ ಸೇವೆಗಳನ್ನು ನೀಡಲು ನನ್ನನ್ನು ನಿಯೋಜಿಸಿದ್ದರು. ನಮ್ಮ ಎಂ.ಡಿ. ನನ್ನನ್ನು ಪರಿಚಯಿಸುತ್ತ, ‘ಆನಂದ ಈಸ್ ಎ ವೆರಿ ನೈಸ್ ಪರ್ಸನ್’ ಎಂದರು. ಆ ಸಂಸ್ಥೆಯ ಎಂ.ಡಿ. ನನ್ನ ಕಡೆ ಒಮ್ಮೆ ನೋಡಿ ‘ಐ ಡೋಂಟ್ ಕೇರ್ ವೆದರ್ ಹಿ ಈಸ್ ನೈಸ್ ಆರ್ ನಾಟ್. ಐ ವಾಂಟ್ ಸಮ್‍ಒನ್ ಹೂ ಕೆನ್ ಡೆಲಿವರ್,’ ಎಂದರು. ಅವರ ನಿಷ್ಟೂರ ಮಾತುಗಳಲ್ಲಿ ಕಠೋರ ಸತ್ಯವಿತ್ತು. ಅರ್ಹತೆಗೆ ಅವರು ಹಾಕಿದ್ದ ಮಾನದಂಡ ಸರಳವಾಗಿತ್ತು.

ರಾಹುಲ್ ಗಾಂಧಿ ಈಸ್ ಎ ನೈಸ್ ಮ್ಯಾನ್. ಓಕೆ, ಹೂ ಕೇರ್ಸ್? ನಮ್ಮ ಜನರಿಗೆ, ರಾಜಕಾರಣಿಗಳಿಗೆ ಜ್ಞಾನೋದಯವಾಗಲು ಇನ್ನೂ ಎಷ್ಟು ಶತಮಾನಗಳು ಬೇಕು?

ನಾವು ಭಾರತೀಯರು ಶಾಂತಿಪ್ರಿಯರು, ಒಳ್ಳೆಯ ಜನ, ಇತರ ಧರ್ಮಗಳನ್ನು ಸಹಿಸಿಕೊಳ್ಳುತ್ತೇವೆ. ಓಕೆ, ಹೂ ಕೇರ್ಸ್? ನಮ್ಮದು ಪುರಾತನ ಸಂಸ್ಕೃತಿ ಹಾಗೂ ಶ್ರೀಮಂತ ಪರಂಪರೆ ಹೊಂದಿದ್ದೇವೆ. ಓಕೆ. ಹೂ ಕೇರ್ಸ್? ನಾವು ಜಗತ್ತಿನ ಅತ್ಯಂತ ಭ್ರಷ್ಟ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ. ನಮ್ಮ ನಗರ ಪ್ರದೇಶಗಳು ಅತ್ಯಂತ ಕೊಳಕಾಗಿವೆ. ನಮ್ಮಲ್ಲಿ ಉಳ್ಳವರು-ಇಲ್ಲದವರ ನಡುವಿರುವ ಅಂತರ ಜಗತ್ತಿನಲ್ಲೇ ಅತೀ ಹೆಚ್ಚು. ನಮ್ಮಲ್ಲಿ ಇನ್ನೂ ಅಸ್ಪೃಶ್ಯತೆಯಿದೆ. ಜಗತ್ತಿನ ಕ್ಷಯರೋಗಿಗಳಲ್ಲಿ ನಾಲ್ಕನೇ ಒಂದು ಭಾಗ ಭಾರತದಲ್ಲಿದ್ದಾರೆ. ಆಲಸ್ಯ ನಮ್ಮ ಚಿಹ್ನೆ. ಅಶಿಸ್ತು ನಮ್ಮ ಹೆಗ್ಗುರುತು. ನಮ್ಮ ಕಾನೂನು ವ್ಯವಸ್ಥೆ ದುರ್ಬಲವಾಗಿದೆ. ನಮ್ಮ ಪೊಲೀಸರ ಕರ್ತವ್ಯ ಪಾಲನೆಯಲ್ಲಿ ಲೋಪಗಳೆ ಹೆಚ್ಚು. ನಮ್ಮ ರಾಜಕಾರಣಿಗಳು ನೀತಿ-ಸಿದ್ಧಾಂತ ಇಲ್ಲದವರಾಗಿದ್ದಾರೆ.

ನಮ್ಮ ಜಿಡಿಪಿ ನಮಗಿಂತ ಐದಾರು ಕೋಟಿಯಷ್ಟು ಮಾತ್ರವೇ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದ ಆರನೇ ಒಂದು ಭಾಗದಷ್ಟಿದೆ ಹಾಗೂ ಕೇವಲ 30 ಕೋಟಿ ಜನಸಂಖ್ಯೆ ಹೊಂದಿರುವ ಅಮೇರಿಕಾದ ಎಂಟನೇ ಒಂದು ಭಾಗದಷ್ಟಿದೆ. ನಮ್ಮ ಸರಾಸರಿ ತಲಾ ಆದಾಯ ಇನ್ನೊಂದೆರಡು ವರ್ಷಗಳಲ್ಲಿ ಬಾಂಗ್ಲಾದೇಶಕ್ಕಿಂತ ಕಡಿಮೆಯಾಗಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಜಗತ್ತಿನಲ್ಲಿ ನಾವು ಅತ್ಯಂತ ತಳಮಟ್ಟದಲ್ಲಿದ್ದೇವೆ. ನಮ್ಮ ಸಂಸ್ಕೃತಿಯ ಹಿರಿಮೆಯ ಬಗ್ಗೆ ಮಾತನಾಡುವವರು, ವರ್ತಮಾನವನ್ನು ವಿಶ್ಲೇಷಿಸಿಕೊಳ್ಳಬೇಕು.   

ಸಾಮರ್ಥ್ಯ, ಪ್ರತಿಭೆ, ಶಿಸ್ತು, ಕ್ರಿಯಾಶೀಲತೆ, ಪ್ರಾಮಾಣಿಕತೆ, ಮೌಲ್ಯ ಹಾಗೂ ಸ್ಪರ್ಧಾತ್ಮಕತೆಗೆ ಮಣೆ ಹಾಕಬೇಕಾದ ಅನಿವಾರ್ಯತೆಯಿದ್ದು, ಅದು ಇಂದೇ ಆಗಬೇಕಾಗಿದೆ. ನಮ್ಮ ಸಂಸ್ಕೃತಿಯ ಅವಲಕ್ಷಣಗಳನ್ನು ಸುಧಾರಿಸಲು ಸಾವಿರ-ಎರಡು ಸಾವಿರ ವರ್ಷಗಳಷ್ಟು ಸಮಯ ನಮ್ಮಲ್ಲಿಲ್ಲ. ಶ್ರೇಷ್ಠ ಆರ್ಥಿಕ ತಜ್ಞ ಜಾನ್ ಮೇಯ್ನರ್ಡ್ ಕೇಯ್ನ್ಸ್ ಹೇಳಿದಂತೆ ದೀರ್ಘಾವಧಿಯಲ್ಲಿ ನಾವೆಲ್ಲ ಸತ್ತಿರುತ್ತೇವೆ.  ಸರ್ಕಾರ ‘ಸ್ವಚ್ಛ ಭಾರತ’ ಘೋಷಣೆ ಮಾಡಿ ಭಾರತ ಸ್ವಚ್ಛವಾಗದಿದ್ದರೆ ಯಾರು ಕಾರಣ? ಉತ್ತರದಾಯಿತ್ವ ಯಾರದು? ಪ್ರಧಾನಿಗಳು ‘ಭಾರತದಲ್ಲಿ ತಯಾರಿಸಿ’ ಎಂದರು. ‘ಭಾರತದಲ್ಲಿ ತಯಾರಿಸಿ’ ಆಂದೋಲನ ಯಶಸ್ವಿಯಾಗದಿದ್ದರೆ ಯಾರು ಕಾರಣ? ತಯಾರಿಸುವುದಿರಲಿ, ಜೋಡಣೆಯಲ್ಲೂ ಏಷಿಯಾದ ಸಣ್ಣಪುಟ್ಟ ದೇಶಗಳನ್ನು ಮೀರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಉತ್ತರದಾಯಿತ್ವವನ್ನು ನಿಗದಿಪಡಿಸದಿದ್ದಲ್ಲಿ, ನಮ್ಮ ದೇಶದಲ್ಲಿ ಒಂದು ಹುಲ್ಲುಗಡ್ಡಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ.

ಆ್ಯಪಲ್ ಕಂಪೆನಿಯ ಉತ್ಪನ್ನಗಳನ್ನು ಚೀನಾದ ಪಕ್ಕ ಚುಕ್ಕೆಯಂತಿರುವ ಸಣ್ಣ ದೇಶ ಥೈವಾನ್‍ನ ಫಾಕ್ಸ್‍ಕಾನ್ ಸಂಸ್ಥೆ ತಯಾರಿಸುತ್ತದೆ. ಅಷ್ಟೇ ಏಕೆ, ಈ ಸಂಸ್ಥೆ ಪ್ರಪಂಚದ ಒಟ್ಟು ಎಲೆಕ್ಟ್ರಾನಿಕ್ ಉತ್ಪನ್ನಗಳ ಶೇಕಡ 40ರಷ್ಟನ್ನು ತಯಾರಿಸುತ್ತದೆ. ನಮ್ಮ ದೇಶದ ಕಂಪನಿಯೊಂದಕ್ಕೆ ಇಂತಹದ್ದೊಂದು ಅಂತಾರಾಷ್ಟ್ರಿಯ ಗುತ್ತಿಗೆ ತೆಗೆದುಕೊಳ್ಳಲು ಏಕೆ ಸಾಧ್ಯವಿಲ್ಲ? ನಮ್ಮ ಜನ ಲಾಯಕ್ಕಿಲ್ಲವೇ? ನಮ್ಮ ಔದ್ಯೋಗಿಕ ವಾತಾವರಣ ಸೂಕ್ತವಾಗಿಲ್ಲವೇ? ಅಧಿಕಾರಶಾಹಿ ಧೋರಣೆಯೇ? ನಮ್ಮಲ್ಲಿನ ವೆಚ್ಚದ ಕ್ಷಮತೆಯೇ?

ಚೈನಾ ಹಾಗೂ ಏಷಿಯಾದ ಇತರ ಕೆಲವು ರಾಷ್ಟ್ರಗಳೊಡನೆ ನಾವು ಸ್ಪರ್ಧಾತ್ಮಕತೆಯಲ್ಲಿ ಮೈಲಿಗಳಷ್ಟು ಹಿಂದಿದ್ದೇವೆ. ಭಾರತದ ಹಲವಾರು ಸಿದ್ಧ ಉಡುಪು ತಯಾರಕರು ಹೆಚ್ಚಿನ ಗುಣಮಟ್ಟದ ಎಂಬ್ರಾಯ್ಡರಿ ಬೇಕಿದ್ದರೆ ಚೈನಾದಲ್ಲಿ ಮಾಡಿಸುತ್ತಾರೆ. ನಾವು ಧರಿಸುವÀ ನೈಕಿ, ಪ್ಯೂಮಾದಂತಹ ಉತ್ಕೃಷ್ಟ ಗುಣಮಟ್ಟದ ಪಾದರಕ್ಷೆಗಳು ವಿಯಟ್ನಾಮ್ ಹಾಗೂ ಇಂಡೋನೇಷಿಯಾದಂತಹ ಪುಟ್ಟ ದೇಶಗಳಲ್ಲಿ ತಯಾರಾಗುತ್ತವೆ (ಆ ಪಾದರಕ್ಷೆಗಳ ಗುಣಮಟ್ಟವನ್ನು ಬಾಯ್ತುಂಬ ಹೊಗಳುತ್ತಾ ಧರಿಸಿ ಓಡಾಡುತ್ತೇವೆ). ನಮ್ಮಲ್ಲಿನ ಸಾವಿರಾರು ಕೈಗಾರಿಕೆಗಳಿಗೆ ಬೇಕಾದ ಅಸಂಖ್ಯಾತ ಬಿಡಿಭಾಗಗಳಿಗಾಗಿ ನಾವು ಚೈನಾದ ಮೇಲೆ ಅವಲಂಬಿತವಾಗಿದ್ದೇವೆ. ಇದಕ್ಕೆ ಏನೋ ಚೈನಾದಲ್ಲಿ ಕರೋನಾ ವೈರಸ್ ಹರಡುತ್ತಿದ್ದರೆ ಭಾರತದ ಕೈಗಾರಿಕೆಗಳಿಗೆ ‘ಲಾಕ್‍ಔಟ್’ ಜ್ವರ ಬರುತ್ತಿದೆ.

ಸ್ವಾವಲಂಬನೆಯಲ್ಲಿ ಎಡವಿದ್ದೇವೆ ಅಲ್ಲವೇ? ಹಾಗಾದರೆ ಇದಕ್ಕೆ ಉತ್ತರದಾಯಿತ್ವ ಯಾರದು? ಈ ದೇಶದ ಪ್ರತಿಯೊಬ್ಬ ಪ್ರಜೆಗೂ, ರಾಜಕಾರಣಿಗೂ, ಉದ್ಯೋಗಿಗೂ ಉತ್ತರದಾಯಿತ್ವ ವಹಿಸುವವರೆಗೂ ನಿರೀಕ್ಷಿತ ಮಟ್ಟದಲ್ಲಿ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಪ್ರಧಾನ ಮಂತ್ರಿಗಳು 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಜಿಡಿಪಿ ಸಾಧಿಸುವ ಗುರಿ ಇಟ್ಟಿದ್ದಾರೆ. 5 ಬೇಡ, 4.5 ಟ್ರಿಲಿಯನ್ ಡಾಲರ್ ಮುಟ್ಟಲಿ, ಆಗ ಮೋದಿಗೆ ದೊಡ್ಡ ನಮಸ್ಕಾರ ಹಾಕುತ್ತೇನೆ. ಡೆಲಿವರ್ ಮೋದಿ! ಡೆಲಿವರ್. ಬರಿ ಮಾತನಾಡಬೇಡಿ.

ಐಕ್ಯೂ ಪಾತ್ರ

ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿಯವರು ನಮ್ಮ ಸಂಸ್ಕೃತಿ ನಮ್ಮಲ್ಲಿ ಅರ್ಹತೆ, ಪ್ರಾಮಾಣಿಕತೆ ಹಾಗೂ ಸ್ಪರ್ಧಾತ್ಮಕ ಗುಣ ಬೆಳೆಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ. ನಮ್ಮ ಸಂಸ್ಕೃತಿ ಇದಕ್ಕೆ ಹೇಗೆ ಕಾರಣವಾಗುತ್ತದೆ? ಈ ಅವಲಕ್ಷಣಗಳು ನಮ್ಮಲ್ಲಿ ಯಾವಾಗ ಮನೆ ಮಾಡಿದವು? ಇದನ್ನೆಲ್ಲಾ ಒಂದೇ ಮುಷ್ಟಿಯಲ್ಲಿಟ್ಟು ವ್ಯಾಖ್ಯೆ ಮಾಡಲು ಸಾಧ್ಯವೇ? ಕೇವಲ ಮೂರು ಶತಮಾನಗಳ ಹಿಂದಷ್ಟೇ ನಮ್ಮ ದೇಶದ ಜಿಡಿಪಿ ಪ್ರಪಂಚದ ಸುಮಾರು ಶೇಕಡ 25ರಷ್ಟಿತ್ತು. ನಾಡಿನ ಪ್ರಜೆಗಳು ಶ್ರಮಜೀವಿಗಳೂ, ಕಾರ್ಯಕ್ಷಮತೆಯುಳ್ಳವರು, ನಿಪುಣರು ಆಗಿಲ್ಲದಿದ್ದರೆ, ದೇಶದ ಜಿಡಿಪಿ ಅಷ್ಟೊಂದು ಪ್ರಮಾಣದಲ್ಲಿ ಇರಲು ಸಾಧ್ಯವೇ? ಇದೊಂದು ವಾದವಷ್ಟೇ. ಕೂಲಂಕಷವಾಗಿ ವಿಶ್ಲೇಷಿಸಬೇಕು.

ಕೈಗಾರಿಕಾ ಕ್ರಾಂತಿಯ ನಂತರ ಜಗತ್ತಿನ ಆರ್ಥಿಕ ಸಮತೋಲನ ಬದಲಾಯಿತು. ಕೈಗಾರಿಕಾ ಕ್ರಾಂತಿಯ ಮುಂಚೂಣಿಯಲ್ಲಿದ್ದ ರಾಷ್ಟ್ರಗಳು 19 ಹಾಗೂ 20ನೇ ಶತಮಾನಗಳಲ್ಲಿ ಬಲಿಷ್ಠ ರಾಷ್ಟ್ರವಾಗಿ ಬೆಳೆದವು. ಕಳೆದ ಎರಡು ಶತಮಾನಗಳಲ್ಲಿ ಜಗತ್ತಿನಾದ್ಯಂತ ಆಗಿರುವ ಬದಲಾವಣೆ ಗಮನಿಸಿದರೆ ವಿಜ್ಞಾನವೇ ಯಂತ್ರವಾಗಿ ಆರ್ಥಿಕತೆ ಎಂಬ ಬಂಡಿಯನ್ನು ಮುಂದಕ್ಕೆಳೆಯುತ್ತಿದೆ ಎಂಬುದನ್ನು ಅರಿಯಬಹುದು. ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಪ್ರಬಲವಾಗಿರುವ ರಾಷ್ಟ್ರಗಳು ಆರ್ಥಿಕತೆಯಲ್ಲೂ ಮೇಲುಗೈ ಸಾಧಿಸಿವೆ. ಗುಡಿ ಕೈಗಾರಿಕೆಯಲ್ಲಿ ಪ್ರಬಲವಾಗಿದ್ದ ಭಾರತ ಕೈಗಾರಿಕಾ ಕ್ರಾಂತಿಯೆಂಬ ಬಸ್ ಅನ್ನು ಮಿಸ್ ಮಾಡಿಕೊಂಡಿದ್ದೇ ಭಾರತದ ಹಿನ್ನೆಡೆಗೆ ಕಾರಣವಾಯಿತು ಎಂದು ವಾದಿಸುವವರಿದ್ದಾರೆ.

ಗೂಗಲ್, ಫೇಸ್ ಬುಕ್ ಹಾಗೂ ಆ್ಯಪಲ್ ಈ ಮೂರು ಕಂಪನಿಗಳ ವಹಿವಾಟು ಭಾರತದ ಇಡೀ ಜಿಡಿಪಿಯ ಸುಮಾರು ನಾಲ್ಕನೇ ಒಂದು ಭಾಗದಷ್ಟಿದೆ. ಒಂದು ಸಮಯದಲ್ಲಿ ಅಮೆರಿಕಾದ ಪ್ರೋರ್ಡ್, ಜನರಲ್ ಮೋಟಾರ್ಸ್ ಹಾಗೂ ಕ್ರೈಸ್ಲರ್ ಕಂಪನಿಗಳ ಒಟ್ಟು ವಹಿವಾಟು ಭಾರತದ ಜಿಡಿಪಿಗೆ ಸಮನಾಗಿತ್ತು.

ಈ ವ್ಯತ್ಯಾಸಕ್ಕೆ ನಮ್ಮ ವರ್ಣ-ವ್ಯವಸ್ಥೆ, ಜಾತಿ ವ್ಯವಸ್ಥೆ ಹಾಗೂ ಸಾಮಾಜಿಕ ಅಸಮಾನತೆ ಕಾರಣವಲ್ಲವೇ? ದೇಶದಲ್ಲಿ ಸಹಸ್ರಾರು ವರ್ಷಗಳಿಂದ ವರ್ಣ ವ್ಯವಸ್ಥೆಯನ್ನು ಅನುಸರಿಸಿಕೊಂಡು ಬಂದಿದ್ದೇವೆ.

ನಮ್ಮ ಅಪ್ರಾಮಾಣಿಕತೆ, ಅನರ್ಹತೆ ಹಾಗೂ ಅದಕ್ಷತೆಗೆ ನಮ್ಮ ಬುದ್ಧಿಮತ್ತೆಯ ಪ್ರಮಾಣ (ಐಕ್ಯೂ) ಕಾರಣವೇ? ಹಾಂಗ್‍ಕಾಂಗ್ (105), ಸಿಂಗಪೂರ್ (107), ಚೈನಾ (105) ಹಾಗೂ ದಕ್ಷಿಣ ಕೊರಿಯಾ (104) ದೇಶಗಳ ಬುದ್ಧಿಮತ್ತೆಯ ಪ್ರಮಾಣ 100ರ ಮೇಲಿದ್ದರೆ, ಭಾರತೀಯರ (82) ಸರಾಸರಿ ಬುದ್ಧಿಮತ್ತೆಯ ಪ್ರಮಾಣ 80ರ ಆಸುಪಾಸಿನಲ್ಲಿದೆ. ಅಂದರೆ ಚೈನಾ ಹಾಗೂ ದಕ್ಷಿಣ ಕೊರಿಯಾದ ಜನರ ಸರಾಸರಿ ಬುದ್ಧಿಮತ್ತೆ ಪ್ರಮಾಣ ನಮ್ಮ ದೇಶದ ಜನರಿಗಿಂತ ಶೇಕಡಾ ಸುಮಾರು 28ರಷ್ಟು ಹೆಚ್ಚಿದೆ.

ಈ ಬುದ್ಧಿಮತ್ತೆಯ ಪ್ರಮಾಣವನ್ನು ನಿರ್ಧರಿಸುವ ಅಂಶಗಳೇನು? ವಂಶೀಯತೆ, ಪೌಷ್ಟಿಕತೆ, ಪರಿಸರ, ರೋಗಗಳು, ಮಾಲಿನ್ಯ ಇತ್ಯಾದಿ ಅಂಶಗಳು ಪ್ರಭಾವ ಬೀರುತ್ತವೆ. ಭಾರತದ ಸರಾಸರಿ ಬದ್ಧಿಮತ್ತೆ ಪ್ರಮಾಣ ಶೇಕಡ 82 ಇದ್ದರೆ ಅಮೆರಿಕಾದಲ್ಲಿರುವ ಭಾರತೀಯರ ಬುದ್ಧಿಮತ್ತೆಯ ಪ್ರಮಾಣ 110-115ರ ಆಸುಪಾಸಿನಲ್ಲಿದೆ. ಅಮೆರಿಕಾದಲ್ಲಿರುವ ಸುಮಾರು 20 ಲಕ್ಷ ಹಿಂದೂಗಳ ಪೈಕಿ ಶೇಕಡ 67% ಮೇಲ್ಜಾತಿಗೆ ಸೇರಿದವರಾಗಿದ್ದಾರೆ.

ಭಾರತೀಯ ಮೂಲದ ಅನುಕ್ಷಾ ದೀಕ್ಷಿತ್ ಪೂರ್ವ ಲಂಡನ್ ವಿಶ್ವವಿದ್ಯಾಲಯ ನಡೆಸಿದ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ 162 ಬುದ್ಧಿಮತ್ತೆ ಪ್ರಮಾಣ ಪಡೆದಿದ್ದಾಳೆ. ಈ ಪ್ರಮಾಣ ಪ್ರಸಿದ್ಧ ವಿಜ್ಞಾನಿ ಸ್ಟೀಫನ್ ಹಾಕಿಂಗ್‍ಗಿಂತ 2 ಪಾಯಿಂಟ್‍ಗಳು ಹೆಚ್ಚಿವೆ. ಭಾರತದಲ್ಲಿ ಮೇಲ್ಜಾತಿಯವರ ಬುದ್ಧಿಮತ್ತೆಯ ಪ್ರಮಾಣ ಇತರೆ ಜಾತಿ-ವರ್ಗಗಳ ಜನರಿಗೆ ಹೋಲಿಸಿದರೆ ಹೆಚ್ಚಾಗಿದೆ. ಈ ವ್ಯತ್ಯಾಸಕ್ಕೆ ನಮ್ಮ ವರ್ಣ-ವ್ಯವಸ್ಥೆ, ಜಾತಿ ವ್ಯವಸ್ಥೆ ಹಾಗೂ ಸಾಮಾಜಿಕ ಅಸಮಾನತೆ ಕಾರಣವಲ್ಲವೇ? ದೇಶದಲ್ಲಿ ಸಹಸ್ರಾರು ವರ್ಷಗಳಿಂದ ವರ್ಣ ವ್ಯವಸ್ಥೆಯನ್ನು ಅನುಸರಿಸಿಕೊಂಡು ಬಂದಿದ್ದೇವೆ. ಹಿಂದೂ ಧರ್ಮ ಅಂತರ್ಗತವಾದದ್ದು ಎಂದು ವಾದಿಸುವವರು ಈ ಅಂಶವನ್ನು ಗಮನಿಸಬೇಕು. ಎಲ್ಲಿ ಸರ್ವೋದಯವಿರುತ್ತದೋ ಅಲ್ಲಿ ಮಾತ್ರ ಅಂತರ್ಗತವೂ, ಅಂತರ್ಗತ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಬುದ್ಧಿಮತ್ತೆಯ ಪ್ರಮಾಣ ದೇಶದ ಅಭಿವೃದ್ಧಿಯ ಮೇಲೆ ನಿಸ್ಸಂದೇಹವಾಗಿ ಪ್ರಭಾವ ಬೀರುತ್ತದೆ.

ಬುದ್ಧಿಮತ್ತೆಯ ಪ್ರಮಾಣವನ್ನು ಆಧರಿಸಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬಾರದೆಂದು ವಾದಿಸುವವರೂ ಇದ್ದಾರೆ. “ಎಲ್ಲರೂ ಮೇಧಾವಿಗಳೇ. ಒಂದು ಮೀನಿನ ಸಾಮರ್ಥ್ಯವನ್ನು ಅದರ ಮರ ಹತ್ತುವ ಕೌಶಲ್ಯದ ಮೇಲೆ ಅಳೆದರೆ, ಅದು ಜೀವನಪೂರ್ತಿ ತಾನು ಮೂರ್ಖನೆಂದು ನಂಬಿಕೊಂಡು ಜೀವನ ಕಳೆಯುತ್ತದೆ,” ಎಂದು ಐನ್‍ಸ್ಟೀನ್ ಹೇಳಿಲ್ಲವೆ ಎಂದು ಹೇಳುವವರಿದ್ದಾರೆ. ಆದರೆ ಬುದ್ಧಿಮತ್ತೆಯ ಪ್ರಮಾಣದ ಪ್ರಾಮುಖ್ಯವನ್ನು ಸಮುದಾಯ ಮಟ್ಟದಲ್ಲಿ ಬದಿಗಿಡಲು ಸಾಧ್ಯವಿಲ್ಲ.

ಇಸ್ರೇಲ್ ಸೈನಿಕರಲ್ಲಿ ನಡೆಸಿದ ಅಧ್ಯಯನವೊಂದು ಬುದ್ಧಿಮತ್ತೆ ಪ್ರಮಾಣ ಹೆಚ್ಚಿರುವವರಲ್ಲಿ ಹೆಚ್ಚು ಪ್ರಾಮಾಣಿಕತೆಯಿದೆ ಎಂದು ಹೇಳುತ್ತದೆ. ನನಗೆ ಈ ವಾದದಲ್ಲಿ ಹುರುಳಿದೆ ಎನ್ನಿಸುತ್ತದೆ.

ಅಯ್ಯೋ ಬಿಡಿ, ನಮ್ಮ ಬುದ್ಧಿಮತ್ತೆ ಅಷ್ಟರಲ್ಲೇ ಅಂದು ಸುಮ್ಮನಾಗೋಣ. ಪ್ರಾಮಾಣಿಕತೆಗೂ ಬುದ್ಧಿಮತ್ತೆಗೂ ಏನಾದರೂ ಸಂಬಂಧವಿದೆಯೇ? ಕೆಲವು ಸಂಶೋಧಕರು ಬುದ್ಧಿಮತ್ತೆ ಹಾಗೂ ನೈತಿಕ ಪ್ರಜ್ಞೆಗೂ ಪ್ರಾಸಂಗಿಕ ಸಂಬಂಧವಿದೆಯೆಂದು ಹಾಗೂ ಬುದ್ಧಿಮತ್ತೆ ಹೆಚ್ಚಾದಷ್ಟು ನೈತಿಕ ಪ್ರಜ್ಞೆ ಹೆಚ್ಚಾಗುವುದೆಂದು ವಾದಿಸಿದ್ದಾರೆ. ಇಸ್ರೇಲ್ ಸೈನಿಕರಲ್ಲಿ ನಡೆಸಿದ ಅಧ್ಯಯನವೊಂದು ಬುದ್ಧಿಮತ್ತೆ ಪ್ರಮಾಣ ಹೆಚ್ಚಿರುವವರಲ್ಲಿ ಹೆಚ್ಚು ಪ್ರಾಮಾಣಿಕತೆಯಿದೆ ಎಂದು ಹೇಳುತ್ತದೆ. ನನಗೆ ಈ ವಾದದಲ್ಲಿ ಹುರುಳಿದೆ ಎನ್ನಿಸುತ್ತದೆ.

ಬುದ್ಧಿಮತ್ತೆಯ ಪ್ರಮಾಣ ಅತೀ ಹೆಚ್ಚಿರುವವರಲ್ಲೂ ಅಪ್ರಾಮಾಣಿಕರಿದ್ದಾರೆ. ಬುದ್ಧಿಮತ್ತೆ ಹೆಚ್ಚಿದ್ದು ಬಾಹ್ಯಪ್ರವೃತ್ತರಾಗಿರುವವರು ಅಪ್ರ್ರಾಮಾಣಿಕರಾಗಿರುತ್ತಾರೆಂದು ಕೆಲವು ಅಧ್ಯಯನಗಳು ತಿಳಿಸುತ್ತವೆ. ಏನೇ ಅಧ್ಯಯನಗಳಿರಲಿ, ಭಾರತದಲ್ಲಿ ಬುದ್ಧಿಮತ್ತೆಯ ಪ್ರಮಾಣ ಕಡಿಮೆಯಿದ್ದು, ನಮ್ಮಲ್ಲಿ ಭ್ರಷ್ಟರು, ಅಪ್ರಾಮಾಣಿಕರು, ಆಲಸಿಗಳು ಹೆಚ್ಚಿರುವುದರಿಂದ ಬದ್ಧಿಮತ್ತೆಯ ಪ್ರಮಾಣಕ್ಕೂ ಅಪ್ರ್ರಾಮಾಣಿಕತೆಗೂ ಸಕಾರಾತ್ಮಕ ಸಂಬಂಧವಿದೆಯೆಂದು ನಾವು ಮೇಲ್ನೋಟಕ್ಕೆ ವಾದಿಸಬಹುದು. ಅಥವಾ ನಮ್ಮಲ್ಲಿ ಬುದ್ಧಿಮತ್ತೆಯ ಪ್ರಮಾಣ ಹೆಚ್ಚಿರುವವರಲ್ಲೇ ಅಪ್ರ್ರಾಮಾಣಿಕತೆ ಹಾಗೂ ಭ್ರಷ್ಟತೆ ಹೆಚ್ಚಿದೆ ಎಂಬ ವಾದವನ್ನು ಪರಿಗಣಿಸಿ ಅದನ್ನೂ ಒರೆಗೆ ಹಚ್ಚಿ ಪರೀಕ್ಷಿಸಬಹುದು. 

ಅವಲಕ್ಷಣದ ಮುಖಗಳು

ಬಡತನ, ಅಶಿಸ್ತು, ಆಲಸ್ಯ, ಮೌಢ್ಯ, ಅಪ್ರ್ರಾಮಾಣಿಕತೆ ಎಲ್ಲವೂ ನಮ್ಮ ಶ್ರೀಮಂತ ಪರಂಪರೆ ಹಾಗೂ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ. ಯು.ಎನ್. ಪ್ರಕಟಿಸಿರುವ ಮಾನವ ಅಭಿವೃದ್ಧಿಯ ಸೂಚ್ಯಂಕದಲ್ಲಿ ನಮಗೆ 130ನೇ ಸ್ಥಾನವಿದೆ. ಸರ್ಕಾರಿ ನೌಕರರಾಗಿ ತಿಂಗಳಿಗೆ ಸರಿಯಾಗಿ ಸಂಬಳ ಎಣಿಸುತ್ತಾ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡದ ಲಕ್ಷೋಪಲಕ್ಷ ಸರ್ಕಾರಿ ನೌಕರರು, ಜೀವನ ಹಾಗೂ ಯೋಗಕ್ಷೇಮಕ್ಕೆ ಅಗತ್ಯ ಸಂಬಳ ಬಂದರೂ ಭ್ರಷ್ಟಾಚಾರಕ್ಕೆ ಮುಂದಾಗುವ ಸರ್ಕಾರಿ ನೌಕರರು, ಭ್ರಷ್ಟ ಹಾಗೂ ನಿರುಪಯುಕ್ತ ರಾಜಕಾರಣಿಗಳು, ನಾಗರಿಕ ಜವಾಬ್ದಾರಿಯನ್ನೇ ಅರಿಯದ (ಅ)ನಾಗರಿಕರು, ಆಲಸಿಗಳು, ತೆರಿಗೆ ಕದಿಯುವ ಎಲ್ಲಾ ಆದಾಯ ಗಳಿಕೆದಾರರೂ ಈ ಸಂಸ್ಕೃತಿಯ ಅವಲಕ್ಷಣದ ವಿವಿಧ ಮುಖಗಳಾಗಿದ್ದಾರೆ ಹಾಗೂ ದೇಶದ ಈ ಸ್ಥಿತಿಗೆ ಕಾರಣರಾಗಿದ್ದಾರೆ.

ಜನ ತಾವಾಗಿಯೇ ಅರಿತಾಗ ಬದಲಾವಣೆ ಸಹಜವಾಗುತ್ತದೆ. ಇಲ್ಲದಿದ್ದಲ್ಲಿ, ಕಾನೂನು ಕಠಿಣವಾಗಬೇಕು. ಉತ್ತರದಾಯಿತ್ವ ಹಾಗೂ ಕಾರ್ಯಕ್ಷಮತೆಯ ಆಧಾರದ ಮೇಲೆ ಪ್ರತಿ ಉದ್ಯೋಗಿಯ ಹಾಗೂ ರಾಜಕಾರಣಿಯ ಭವಿಷ್ಯ ನಿರ್ಧಾರವಾಗುವಂತೆ ಮಾಡಿದಾಗ ಬದಲಾವಣೆ ತರಲು ಸಾಧ್ಯವಿದೆ.

ಉತ್ಕೃಷ್ಟತೆ ಸಂಸ್ಕೃತಿಯ ಭಾಗವಾಗದಿದ್ದಾಗ…

ದೇಶದ ವಿವಿಧ ಕ್ಷೇತ್ರಗಳನ್ನು ಅವಲೋಕಿಸಿದಾಗ ಉತ್ಕೃಷ್ಟತೆ ಎಂಬ ಕಲ್ಪನೆಯೇ ನಮ್ಮಲ್ಲಿ ಇಲ್ಲವೇನೋ ಅನ್ನಿಸುತ್ತದೆ. ನಾವು ಮಾಡುವ ಕೆಲಸವನ್ನು ಅತ್ಯುತ್ತಮವಾಗಿ ಮಾಡಿದರೆ ಅದರಿಂದ ಉತ್ಕೃಷ್ಟತೆ ಸಾಧಿಸಬಹುದು. ಇಂತಹದೊಂದು ಕಲ್ಪನೆ ನಮ್ಮ ಸಂಸ್ಕೃತಿಯ ಪ್ರಮುಖ ಭಾಗವಾಗಿಲ್ಲ ಎಂದು ಹೇಳಲು ಉದಾಹರಣೆಗಳಿವೆ. ಇತ್ತೀಚಿನ ದಿನಗಳಲ್ಲಿ ದೇಶದ ಹಲವಾರು ಕೈಗಾರಿಕೆಗಳು, ವಿಶ್ವವಿದ್ಯಾಲಯಗಳು, ಮಹಾವಿದ್ಯಾಲಯಗಳು ಉತ್ಕೃಷ್ಟತೆ ಕೇಂದ್ರಗಳನ್ನು ಸ್ಥಾಪಿಸಿ ಉತ್ಕೃಷ್ಟತೆಯೆಂಬ ಕಲ್ಪನೆಯ ಬೆನ್ನೇರಿದ್ದರೂ ಅವುಗಳ ಸಾಧನೆ ಅಷ್ಟಕ್ಕಷ್ಟೇ. ಅಂತಾರಾಷ್ಟ್ರೀಯ ಸಮೀಕ್ಷೆಗಳ ಪ್ರಕಾರ ಪ್ರಪಂಚದ ಮೊದಲ ನೂರು ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದು ವಿಶ್ವವಿದ್ಯಾಲಯವೂ ಇಲ್ಲ. ಕೆಲವೊಂದು ಬೆರಳೆಣಿಕೆಯಷ್ಟು ಶೈಕ್ಷಣಿಕ ಕೇಂದ್ರಗಳು ಮಾತ್ರ ಭೇಷ್ ಎನ್ನಬಹುದಾದ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿವೆ. ಬಹುತೇಕ ಉನ್ನತ ಶೈಕ್ಷಣಿಕ ಕೇಂದ್ರಗಳು ಸರಾಸರಿ ಮಟ್ಟಕ್ಕಿಂತ ಮೇಲೇರಲು ಸಾಧ್ಯವಾಗಿಲ್ಲ.

19ನೇ ಶತಮಾನದ ಮೊದಲ ಭಾಗದವರೆಗೂ ಇಡೀ ಪ್ರಪಂಚದ ಕಡೆಗೆ ಬೆನ್ನು ತಿರುಗಿಸಿ ಪ್ರತ್ಯೇಕೀಕರಣವನ್ನು ಬಯಸಿದ್ದ ಜಪಾನ್, ನಂತರದ ದಶಕಗಳಲ್ಲಿ ಜಗತ್ತಿಗೆ ತನ್ನ ಬಾಗಿಲುಗಳನ್ನು ತೆರೆದು ಎಲ್ಲರೂ ಬೆರಗಾಗುವಂತೆ ಪ್ರಗತಿ ಸಾಧಿಸಿತು. ಕೈಗಾರೀಕರಣವನ್ನು ವೇಗವಾಗಿ ಸಾಧಿಸಿದ ಜಪಾನ್ ಹಲವಾರು ಕೈಗಾರಿಕಾ ವಲಯಗಳಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಿ ಯು.ಎಸ್.ಎ. ಹಾಗೂ ಇತರೆ ಯೂರೋಪಿಯನ್ ರಾಷ್ಟ್ರಗಳಿಗೆ ವಾಣಿಜ್ಯದಲ್ಲಿ ತೀವ್ರ ಪೈಪೆಟಿ ನೀಡಿ ಇಂದು ಪ್ರಪಂಚದ ಬಹು ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ.

ಶ್ರೇಷ್ಠತೆ ಅರಸುತ್ತಾ ಜಪಾನ್‍ನ ಕಾರ್ಖಾನೆಗಳಲ್ಲಿ, ಮುಖ್ಯವಾಗಿ ಆಟೋಮೊಬೈಲ್ ಕಾರ್ಖಾನೆಗಳಲ್ಲಿ, ಹುಟ್ಟಿದ ಹಲವಾರು ಗುಣಮಟ್ಟ ವೃದ್ಧಿಸುವ, ಉತ್ಕೃಷ್ಟತೆ ಸಾಧಿಸುವ ನಿಯಮಗಳನ್ನು ಇಂದು ಜಗತ್ತಿನಾದ್ಯಂತ ಅನುಸರಿಸುತ್ತಿದ್ದಾರೆ. ಉದಾಹರಣೆಗೆ, ಕೈಜೆನ್ ಎನ್ನುವ ಗುಣಮಟ್ಟ ನಿರ್ವಹಣೆ ನಿಯಮದಲ್ಲಿ ವಿವಿಧ ಕ್ಷೇತ್ರಗಳ ಉದ್ಯೋಗಿಗಳ ತಂಡ ನಿರ್ದಿಷ್ಟ ಕಾರ್ಯವಿಧಾನವನ್ನು ಸುಧಾರಿಸಲು ಹಾಗೂ ತ್ಯಾಜ್ಯವನ್ನು ಕಡಿಮೆಗೊಳಿಸಲು ಒಂದು ವಾರದ ಅವಧಿಯ ಯೋಜನೆಯ ಮೇಲೆ ಕೆಲಸ ಮಾಡುತ್ತಾರೆ. ನಂತರ ಕಾರ್ಯವಿಧಾನದ ವಿಶ್ಲೇಷಣೆ ಮಾಡಿ, ಉತ್ಪನ್ನದ ಗುಣಮಟ್ಟದ ಹಾಗೂ ಕಾರ್ಯವಿಧಾನದ ಸುಧಾರಣೆಗೆ ಕ್ರಮ ತೆಗೆದುಕೊಳ್ಳುತ್ತಾರೆ.

ಅಂಕಿ-ಅಂಶಗಳು ಮಾತನಾಡುತ್ತವೆ. ಜಪಾನ್ ದೇಶದ ಜನಸಂಖ್ಯೆ ಸುಮಾರು 13 ಕೋಟಿ, ನಮ್ಮ ಜನಸಂಖ್ಯೆ ಸುಮಾರು 130 ಕೋಟಿ. ಆದರೆ ಜಪಾನ್ ದೇಶದ ಜಿಡಿಪಿ ನಮ್ಮ ದೇಶಕ್ಕಿಂತ ಹೆಚ್ಚಿದೆ.

ಇಂತಹ ಗುಣಮಟ್ಟದ ನಿರ್ವಹಣೆ ನಿಯಮಗಳ ಹುಟ್ಟಿಗೆ ಕಾರಣ ಉತ್ಕೃಷ್ಟತೆ ಅಲ್ಲಿನ ಜನರ ಸಂಸ್ಕೃತಿಯ ಭಾಗವಾಗಿದೆ. ಅಲ್ಲಿನ ಜನರು ಶ್ರಮಜೀವಿಗಳಾಗಿದ್ದು, ತಾವು ಮಾಡುವ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಲು ಅತ್ಯಂತ ಶ್ರದ್ಧೆಯಿಂದ ಪ್ರಯತ್ನಿಸುತ್ತಾರೆ. ಅಲ್ಲಿನ ಕುಟುಂಬಗಳು ತಮ್ಮ ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡಲು ಯೋಗ್ಯವೆನಿಸುವ ಕೌಶಲ್ಯವನ್ನು ಗಳಿಸಿಕೊಳ್ಳಲು ತಮ್ಮ ಜೀವನವನ್ನೇ ಅರ್ಪಿಸಿಕೊಳ್ಳುತ್ತಾರೆ. ಜಪಾನ್ ದೇಶದ ಯಶಸ್ಸಿನ ಹಿಂದೆ ಅಲ್ಲಿಯ ಜನ ಶ್ರಮಜೀವಿಗಳಾಗಿರುವುದು ಕಾರಣವಾಗಿದೆ.

ಯಾವುದಾದರೂ ಮದುವೆಯ ಊಟದ್ದೋ ಅಥವಾ ನಿಶ್ಚಿತಾರ್ಥದ ನಿಮ್ಮ ಅನುಭವವನ್ನು ನೆನೆಸಿಕೊಳ್ಳಿ. ನಾವು ಊಟದ ಹಾಲ್‍ಗೆ ನುಗ್ಗುವ ರೀತಿ, ಇನ್ನೊಬ್ಬರು ಊಟ ಮುಗಿಸುವುದಕ್ಕೂ ಮುನ್ನವೇ ಅವರ ಬೆನ್ನ ಹಿಂದೆ ನಿಂತುಕೊಳ್ಳುವ ರೀತಿ, ಗಬಗಬನೆ ಊಟ ಮಾಡುವ ಪರಿ, ಬೇಡದ್ದನ್ನು ಹಾಕಿಸಿಕೊಂಡು ಎಲೆಯಲ್ಲೇ ಬಿಟ್ಟು ನಡೆದು ಹೋಗುವ ರೀತಿ… ಇದು ಯಾವುದೇ ಶಿಸ್ತಿಲ್ಲದೆ, ಸಂಪನ್ಮೂಲಗಳಿಗೆ ಬೆಲೆ ನೀಡದ ನಮ್ಮ ಸಂಸ್ಕೃತಿ.

ಇದು ನಮ್ಮ ದೇಶವನ್ನು ತೆಗಳುವ ಪ್ರಯತ್ನವಲ್ಲ. ಹೀಗೆ ಬರೆಯುವಾಗ ನಾನು ಈ ದೇಶದ ಒಂದು ಭಾಗವೆಂಬುದನ್ನು ಮರೆಯುತ್ತಿಲ್ಲ. ಅಂಕಿ-ಅಂಶಗಳು ಮಾತನಾಡುತ್ತವೆ. ಜಪಾನ್ ದೇಶದ ಜನಸಂಖ್ಯೆ ಸುಮಾರು 13 ಕೋಟಿ, ನಮ್ಮ ಜನಸಂಖ್ಯೆ ಸುಮಾರು 130 ಕೋಟಿ. ಆದರೆ ಜಪಾನ್ ದೇಶದ ಜಿಡಿಪಿ ನಮ್ಮ ದೇಶಕ್ಕಿಂತ ಹೆಚ್ಚಿದೆ. ನಮ್ಮ ಜನಸಂಖ್ಯೆಯ ಹತ್ತನೇ ಒಂದು ಭಾಗ ಜನಸಂಖ್ಯೆ ಹೊಂದಿರುವ ಜಪಾನ್ ನಮಗಿಂತ ದೊಡ್ಡ ಆರ್ಥಿಕತೆಯಾಗಲು ಆ ದೇಶದ ಜನರ ಶ್ರಮ, ಶಿಸ್ತು ಹಾಗೂ ಶ್ರೇಷ್ಠತೆಗೆ ಅವರಿಗಿರುವ ಬದ್ಧತೆ ಕಾರಣವಾಗಿದೆ.

ವಿಜ್ಞಾನ ಸಾಧನೆಗಿರುವ ತೊಡಕುಗಳು

ವೈಜ್ಞಾನಿಕ ಸಾಧನೆಗೆ ಶಿಸ್ತು, ಸಂಯಮ, ಶ್ರದ್ಧೆ ಹಾಗೂ ಆಕಾಂಕ್ಷೆಯ ಅಗತ್ಯವಿದೆ. ಸಂಶೋಧನೆ ವಿಜ್ಞಾನಕ್ಕೆ ತಳಹದಿ ನೀಡುತ್ತದೆ. ಭಾರತÀ ಕೆಲವು ಅತ್ಯುನ್ನತ ವಿಜ್ಞಾನಿಗಳಿಗೆ ಜನ್ಮ ನೀಡಿದ್ದರೂ ಅವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ನಾವು ಶ್ರೇಷ್ಠ ವಿಜ್ಞಾನಿಗಳನ್ನು ನಿರಂತರವಾಗಿ ಬೆಳೆಸಲು ಸಾಧ್ಯವಾಗಿಲ್ಲ. ಇದಕ್ಕೆ ನಮ್ಮ ಸಂಸ್ಕೃತಿ, ನಂಬಿಕೆ-ಮೌಲ್ಯಗಳು ಕಾರಣವಾಗಿರಬಹುದು. ಏಷಿಯಾದ ಸಮಾಜಗಳಲ್ಲಿ ಸಾಮುದಾಯಿಕತೆಗೆ ಹೆಚ್ಚು ಪ್ರಾಮುಖ್ಯವಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ವೈಯಕ್ತಿಕ ಬೆಳವಣಿಗೆ ಹಾಗೂ ಹೆಬ್ಬಯಕೆಗಳಿಗೆ ಪ್ರಾಶಸ್ತ್ಯ ನೀಡುತ್ತಾರೆ. ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯಿದ್ದರೆ ಮಾತ್ರ ಒಬ್ಬ ವ್ಯಕ್ತಿ ಏನನ್ನಾದರೂ ಸಾಧಿಸಲು ಸಾಧ್ಯವಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳಾಗಿವೆ. ಎರಡನೇ ಮಹಾಯುದ್ಧದಲ್ಲಿ ಸಂಪೂರ್ಣವಾಗಿ ತತ್ತರಿಸಿಹೋಗಿದ್ದ ಜರ್ಮನಿ ಹಾಗೂ ಜಪಾನ್ ದೇಶಗಳು ಚೇತರಿಸಿಕೊಂಡು ಈಗ ಮತ್ತೆ ಬಲಶಾಲಿ ರಾಷ್ಟ್ರಗಳಾಗಿವೆ.

ನಮ್ಮನ್ನು ಆಳಿದ ವಿದೇಶಿಯರು ನಮ್ಮ ಸಂಪನ್ಮೂಲಗಳನ್ನೂ ಲೂಟಿ ಮಾಡಿದರು, ನಮ್ಮ ಶಕ್ತಿ ಕುಗ್ಗಿಸಿದರು ಹಾಗೂ ನಮ್ಮ ವೈಜ್ಞಾನಿಕ ಪರಂಪರೆಯನ್ನು ಹೊಸಕಿ ಹಾಕಿದರು ಎಂಬ ವಾದಗಳಿವೆ. ಒಂದು ದೇಶ ನಿರಂತರವಾಗಿ ವಸಾಹತುಶಾಹಿ ಆಳ್ವಿಕೆಗೆ ಒಳಪಟ್ಟಾಗ ಅಲ್ಲಿಯ ಜನರ ಚೈತನ್ಯ, ಆವಿಷ್ಕಾರ ಮನೋಭಾವ ದುರ್ಬಲವಾಗುವುದೆಂಬ ಅಭಿಪ್ರಾಯಗಳಿವೆ. ಆದರೆ ಬ್ರಿಟಿಷರ ಅವಧಿಯಲ್ಲಿ ಭಾರತದಲ್ಲಿ ಅಸಂಖ್ಯಾತ ಶಾಲೆಗಳು, ಕಾಲೇಜುಗಳು ಆರಂಭವಾದವು. ಓದು-ಕಲಿಕೆಗೆ ಅಡ್ಡಿಯಿರಲಿಲ್ಲ. ಸಾವಿರಾರು ಭಾರತೀಯರು ವಿದೇಶಗಳಿಗೆ ಹೋಗಿ ಅಲ್ಲಿ ಜ್ಞಾನಾರ್ಜನೆಯನ್ನು ಮಾಡಿ ಹಿಂತಿರುಗಿ ತಮ್ಮ ಕಲಿಕೆಯನ್ನು ಇತರರಿಗೂ ಹಂಚಿಕೊಂಡರು. ಭಾರತಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳಾಗಿವೆ. ಎರಡನೇ ಮಹಾಯುದ್ಧದಲ್ಲಿ ಸಂಪೂರ್ಣವಾಗಿ ತತ್ತರಿಸಿಹೋಗಿದ್ದ ಜರ್ಮನಿ ಹಾಗೂ ಜಪಾನ್ ದೇಶಗಳು ಚೇತರಿಸಿಕೊಂಡು ಈಗ ಮತ್ತೆ ಬಲಶಾಲಿ ರಾಷ್ಟ್ರಗಳಾಗಿವೆ. ನಮಗೆ ಚೇತರಿಸಿಕೊಳ್ಳಲು ಎಷ್ಟು ವರ್ಷ ಬೇಕಾಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ನಮ್ಮಲ್ಲಿರುವ ಕಂದಾಚಾರಗಳು, ಮೌಢ್ಯ, ದುರ್ಬಲ ಮನೋಸ್ಥಿತಿ, ಪ್ರೋತ್ಸಾಹದ ಅಭಾವ, ವೈಜ್ಞಾನಿಕ ಮನೋಭಾವವಿಲ್ಲದಿರುವುದು ನಮ್ಮ ವೈಜ್ಞಾನಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಸುದ್ದಿ ಮಾಧ್ಯಮಗಳಲ್ಲಿ ಒತ್ತಡಕ್ಕೊಳಗಾಗಿರುವ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳಿಗಾಗಿ ಕೆಲವು ದೇವಸ್ಥಾನಗಳು ಶಾರದ ಅನುಗ್ರಹ ಪೂಜಾ, ಗಣಪತಿ ಹೋಮ, ದಕ್ಷಿಣ ಮೂರ್ತಿ ಪೂಜೆ, ಇತ್ಯಾದಿ ಆಚರಣೆಗಳನ್ನು ಮಾಡುತ್ತಿರುವುದಾಗಿ ಓದಿದಾಗ ಈ ದೇಶ ವೈಜ್ಞಾನಿಕವಾಗಿ ಎಂದಾದರೂ ಮುಂದವರೆಯುವುದೇ ಎಂಬ ಪ್ರಶ್ನೆ ಉಂಟಾಯಿತು. ಇಂತಹದೊಂದು ಬೆಳವಣಿಗೆಯೇ ನಮ್ಮ

ಸ್ವಾಭಿಮಾನ ಹಾಗೂ ಸಾಮರ್ಥ್ಯವನ್ನು ಅಣಕಿಸುವಂತಹದ್ದು. ಇತ್ತೀಚೆಗೆ ಮಾಧ್ಯಮಗಳು, ಮುಖ್ಯವಾಗಿ ಸುದ್ದಿವಾಹಿನಿಗಳು, ಜನರ ವೈಜ್ಞಾನಿಕ ಮನೋಭಾವದ ಬೆಳವಣಿಗೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿವೆ.

ಇದರ ಬಗ್ಗೆ ಯೋಚಿಸಿದಾಗ ಬರಹಗಾರ್ತಿ ಆಯ್ನ್ ರ್ಯಾಂಡ್ ಅವರ ‘ಮಾನವನ ಅಹಂ ಪ್ರಗತಿಯ ಮೂಲಸ್ಥಾನ’ ಎಂಬ ಪದಗಳು ಕಿವಿಯಲ್ಲಿ ಗುನುಗುನಿಸುತ್ತವೆ. ಅಮೆರಿಕಾದಂತಹ ರಾಷ್ಟ್ರಗಳು ವಿಕಾಸವಾಗಲು ವೈಯಕ್ತಿಕ ಸಾಮರ್ಥ್ಯ-ಅಹಂಗಳ ಮಿಶ್ರಣವೇ ಕಾರಣವಾಯಿತು. ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಬೇಕಾದರೆ ನಾವು ವೈಯಕ್ತಿಕ ಸಾಮರ್ಥ್ಯವನ್ನು, ಬುದ್ಧಿಮತ್ತೆಯನ್ನು ಬೆಳೆಸಿಕೊಳ್ಳಬೇಕು. ಶಿಸ್ತು, ಪ್ರಾಮಾಣಿಕತೆ, ಹೆಬ್ಬಯಕೆ, ಉತ್ಕೃಷ್ಟತೆ, ವೈಜ್ಞಾನಿಕ ಮನೋಭಾವ ಹಾಗೂ ಕ್ಷಮತೆ ನಮ್ಮ ಮೂಲ ಗುಣಗಳಾಗಬೇಕು.

Leave a Reply

Your email address will not be published.