ಉತ್ತರ ಭಾರತೀಯರ ರಾಜಕೀಯ ಸಂಚು

ಉತ್ತರ ಭಾರತೀಯರ ರಾಜಕೀಯ ಸಂಚು

ಸಂಪಾದಕೀಯ ಲೇಖನ ‘ನಿರ್ಗಮನದ ಸಿದ್ಧತೆ’ ಓದಿದೆ. ತುಂಬಾ ಚೆನ್ನಾಗಿತ್ತು. ಅಲ್ಲದೆ ‘ಭಾರತೀಯರನ್ನು ಒಗ್ಗೂಡಿಸಬಲ್ಲದೇ ಹಿಂದಿ?’ ಎಂಬ ಲೇಖನವನ್ನೂ ಓದಿದೆ. ನಿಜಕ್ಕೂ ಅದು ಅಸಾಧ್ಯ. ಈವರಗೆ ತ್ರಿಭಾಷಾ ಸೂತ್ರದನ್ವಯ ದಕ್ಷಿಣ ಭಾರತದ ಐದೂ ರಾಜ್ಯಗಳಲ್ಲಿ ಹಿಂದಿಯನ್ನು ಹೇರಲಾಗುತ್ತಿದೆ. ಇದರಿಂದಾಗಿ ಈ ರಾಜ್ಯಗಳ ಸಣ್ಣಪುಟ್ಟ ಮಕ್ಕಳೂ ಎಳೆಯ ವಯಸ್ಸಿನಲ್ಲೇ ಎರಡು ಅಪರಿಚಿತ ಭಾಷೆಗಳನ್ನು ಕಲಿಯಬೇಕಿದೆ. ಇಂಗ್ಲಿಷ್, ಹಿಂದಿ ಕಲಿಯುವ ಭರದಲ್ಲಿ ಸಹಜವಾಗಿಯೇ ಗಣಿತ ವಿಜ್ಞಾನದಂತಹ ವಿಷಯಗಳನ್ನು ಅಲಕ್ಷಿಸುತ್ತಾರೆ. ಹೀಗೆ ತಮ್ಮ ಶೈಕ್ಷಣಿಕ ಪ್ರಗತಿಯಲ್ಲಿ ಹಿಂದೆ ಉಳಿಯುವಂತಾಗುತ್ತಿದೆ. ಇದು ಮಗುವಿನ ಶಾಲಾ ಸಮಸ್ಯೆ, ತ್ರಿಭಾಷಾ ಸೂತ್ರದ ಸಮಸ್ಯೆ.

ಈ ತ್ರಿಭಾಷಾ ಸೂತ್ರ ಉತ್ತರ ಭಾರತದ ಐದು ರಾಜ್ಯಗಳಲ್ಲಿ ಇಲ್ಲವೇ ಇಲ್ಲವಲ್ಲ! ಅಲ್ಲಿನ ಐದೂ ರಾಜ್ಯಗಳಲ್ಲಿ ಹಿಂದಿಯೇ ರಾಜ್ಯಭಾಷೆ ಆಗಿರೋದರಿಂದ ಸಹಜವಾಗಿಯೇ ದ್ವಿಭಾಷಾ ಸೂತ್ರ ಕಾರ್ಯಗತವಾಗುತ್ತಿದೆ. ಇದರ ಲಾಭ ಹೇಗಿದೆಯೆಂದರೆ ಈ ಐದೂ ರಾಜ್ಯಗಳ ಮಕ್ಕಳು ಇಂಗ್ಲಿಷ್ ಅಷ್ಟೇ ಕಲಿತು, ಶೈಕ್ಷಣಿಕ ಪ್ರಗತಿ ಸಾಧಿಸಿ ಐ.ಎ.ಎಸ್. ಅಧಿಕಾರಿಗಳಾಗಿ ಬರುತ್ತಿದ್ದಾರೆ. ನಮ್ಮ ಬಳ್ಳಾರಿ ಜಿಲ್ಲೆಗೆ ಬಂದ ಗೌರಿ ತ್ರಿವೇದಿ, ಅಜಯ್ ಕುಮಾರ್ ಶೇಠ್, ರಾಜಕುಮಾರ ಖತ್ರಿ… ಹೀಗೆ ಅನೇಕ ಅಧಿಕಾರಿಗಳನ್ನು ಹೆಸರಿಸಬಹುದು. ನಮ್ಮ ಹೆಮ್ಮೆಯ ಚಿರಂಜೀವಿ ಸಿಂಗ್ ಕೂಡಾ ಉತ್ತರ ಭಾರತದವರೇ ಅಲ್ಲವೇ. ಆದರೆ, ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಐ.ಎ.ಎಸ್. ಅಧಿಕಾರಿಗಳಾಗಿ ಹೋದವರ ಪಟ್ಟಿಯ ಸಂಖ್ಯೆ ತೀರಾ ಕಡಿಮೆ. ಯಾಕೆಂದರೆ ಪ್ರಾಥಮಿಕ ಶಾಲಾ ಹಂತದಿಂದಲೇ ಹಿಂದಿ ಹೇರಿಕೆಯಿಂದಾದ ‘ಕುಂಠಿತ ಶೈಕ್ಷಣಿಕ ಪ್ರಗತಿ’ ಎನ್ನದೇ ವಿಧಿಯಿಲ್ಲ. ಈ ಮರ್ಮವನ್ನು ದಕ್ಷಿಣ ಭಾರತೀಯರು ಅರಿಯಬೇಕಿದೆ.

ಐದು ರಾಜ್ಯಗಳಲ್ಲಿ ದ್ವಿಭಾಷಾ ಸೂತ್ರ, ಇನ್ನುಳಿದ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರದ ಅನ್ಯಾಯವಿದು. ಉತ್ತರ ಭಾರತದ ಐದು ರಾಜ್ಯಗಳಲ್ಲದೆ ಉಳಿದ ರಾಜ್ಯಗಳಲ್ಲೂ ಹಿಂದಿ ಪ್ರಾದೇಶಿಕ ಭಾಷೆಯೂ ಹೌದು. ಹೀಗಾಗಿ ಹಿಂದಿ ಅವರಿಗೆ ಅಪರಿಚಿತ ಭಾಷೆ ಅಲ್ಲ. ಆದರೆ ನಮಗೆ ಅದು ನಿಜಕ್ಕೂ ಅಪರಿಚಿತ ಭಾಷೆ ತಾನೆ? ಎರಡು ಅಪರಿಚಿತ ಭಾಷಾ ಕಲಿಕೆಯ ಶಿಕ್ಷೆ ನಮಗೇಕೆ? ಇದರ ಹಿಂದೆ ‘ಹಿಂದಿ ಭಾಷಿಕ ರಾಜಕೀಯ ವಂಚನೆ’ ಇದೆಯಲ್ಲವೇ? ಕರ್ನಾಟಕವೂ ಸೇರಿದಂತೆ ನಮ್ಮ ದಕ್ಷಿಣ ಭಾರತೀಯರು ಅರ್ಥಮಾಡಿಕೊಳ್ಳಬೇಕಿರುವ ಉತ್ತರ ಭಾರತೀಯರ ರಾಜಕೀಯ ಸಂಚು ಇದಲ್ಲವೇ?

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ.

ಹೊಸ ಚಿಂತನೆ

ಸಮಾಜಮುಖಿ ಅಕ್ಟೋಬರ್ ತಿಂಗಳ ಸಂಚಿಕೆಯಲ್ಲಿ ‘ಸಂವಾದವೆಂದರೆ ಬೀದಿಜಗಳವಲ್ಲ’ ಎಂಬ ನನ್ನ ಲೇಖನವನ್ನು ಪ್ರಕಟಿಸಿದ್ದಕ್ಕಾಗಿ ತಮಗೆ ಪ್ರೀತಿಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಪ್ರತೀ ತಿಂಗಳು ಅನೇಕ ಹೊಸ ವಿಚಾರಗಳನ್ನು ಹೊತ್ತು ತರುತ್ತಿರುವ ತಮ್ಮ ಪತ್ರಿಕೆ, ಸಮಾಜದಲ್ಲಿ ಹೊಸ ಚಿಂತನೆಯನ್ನು ಹುಟ್ಟುಹಾಕುವಲ್ಲಿ ಖಂಡಿತ ಯಶಸ್ವಿಯಾಗಬಲ್ಲದು ಎಂಬುದು ನನ್ನ ಅನಿಸಿಕೆ. ತಮಗೂ ತಮ್ಮ ಪತ್ರಿಕೆಗೂ ಶುಭವಾಗಲಿ.

-ಡಾ.ದಿನೇಶ್ ನಾಯಕ್, ಮಂಗಳೂರು.


ವಿನೂತನ ಸಂಕಲ್ಪ

‘ಚಿಂತನಶೀಲ ಸಮಾಜಮುಖಿ’ ಮಾಸಪತ್ರಿಕೆಯು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದ ಸಹಯೋಗದೊಂದಿಗೆ 16.09.2019 ರಂದು ಶಿರಸಿಯ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನ ಮತ್ತು ಅತಿಥಿ ಕಲಾವಿದರು ಆಡಿದ ‘ಶ್ರೀ ಕೃಷ್ಣಾರ್ಜುನ’ ಎಂಬ ಯಕ್ಷಗಾನ ಪ್ರಸಂಗವು ಅದ್ಭುತವಾಗಿ ಮೂಡಿಬಂತು. ಭಾಗವತ ಕೇಶವ ಹೆಗಡೆ ಕೊಳಗಿ ಅವರ ಕಂಚಿನ ಕಂಠ, ಅನಂತ ಪಾಠಕ್‍ರ ಮದ್ದಲೆಯ ಪೆಟ್ಟು, ಯುವ ಚೆಂಡೆಗಾರ ಆದಿತ್ಯ ಅವರ ಚೆಂಡೆಯ ಝೇಂಕಾರ, ಅಂದಿನ ಪ್ರಸಂಗಕ್ಕೆ ಶೋಭೆ ಕೊಟ್ಟಿತ್ತು. ಮುಮ್ಮೇಳದ ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಅದರಲ್ಲೂ ಸುಭದ್ರೆಯಾಗಿ ಯುವಕಲಾವಿದೆ ನಾಗಶ್ರೀ ಪ್ರೌಢವಾಗಿ ಅಭಿನಯಿಸಿದರು. ಅಭಿಮನ್ಯು ಪಾತ್ರದಲ್ಲಿ ಪೋರಿ ತುಳಸಿ ಹೆಗಡೆಯ ಅಭಿನಯ ಮನೋಜ್ಞವಾಗಿತ್ತು. ಪ್ರಸಂಗದಲ್ಲಿ ಕರುಣ, ವೀರ, ಹಾಸ್ಯ ಎಲ್ಲಾ ರಸಗಳು ಮಿಳಿತವಾಗಿದ್ದವು.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದ ಸಹಯೋಗದೊಂದಿಗೆ ಸಮಾಜಮುಖಿಯ ಕರ್ನಾಟಕದ ಶ್ರೀಮಂತ ಜಾನಪದ ಕಲೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸಂಕಲ್ಪವೇ ವಿನೂತನವಾದುದು. ನಾಲ್ಕು ತಿಂಗಳಿಗೊಮ್ಮೆ ಜಾನಪದ ಗಾಯನ, ಗೊಂಬೆ ಆಟ, ಚಿತ್ರಕಲಾ ಪ್ರದರ್ಶನ ಮುಂತಾದವುಗಳನ್ನು ಜನರಿಗೆ ತಲುಪಿಸುವ ಸಮಾಜಮುಖಿಯ ನಿರ್ಧಾರ ಸ್ತುತ್ಯಾರ್ಹವಾದುದು. ಜಾನಪದ ಕಲೆಗಳು ನಮ್ಮ ನಾಡಿನಲ್ಲಿ ಅತ್ಯುಚ್ಚವಾಗಿದ್ದ ಕಾಲವೊಂದಿತ್ತು. ಆದರೆ ಈಗ ಈ ಕಲೆಗಳು ವಿನಾಶದ ಅಂಚಿನಲ್ಲಿವೆ. ಸಮಾಜಮುಖಿಯ ಈ ಪ್ರಯತ್ನಕ್ಕೆ ಅಭಿನಂದನೆ.

-ಪಾ.ಚಂದ್ರಶೇಖರ ಚಡಗ, ಬೆಂಗಳೂರು.


ಕ್ಷಕಿರಣ ಬೀರಲಿ

‘ಸಮಾಜಮುಖಿ’ ಸಕಾಲಕ್ಕೆ ತಲುಪುತ್ತಿದೆ. ತಮಗೆ ಧನ್ಯವಾದಗಳು. ಇನ್ನು ಮುಂದೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರ್ಗಿಯಲ್ಲಿ ನಡೆಯಿಸಲಾಗುವುದೆಂದು ಧಾರವಾಡ ಸಮ್ಮೇಳನದಲ್ಲಿ ಘೋಷಿಸಲಾಗಿದೆ. ಈ ನಿಮಿತ್ತ ಹೈದರಾಬಾದ್ ಕರ್ನಾಟಕದ ಪ್ರಾಚೀನ ಕನ್ನಡ ಸಾಹಿತ್ಯ- ಸದ್ಯದ ಸ್ಥಿತಿ, ಭವಿಷ್ಯದ ಕುರಿತು ‘ಸಮಾಜಮುಖಿ’ ಪತ್ರಿಕೆ ಆಳವಾದ, ಸಮಗ್ರವಾದ ಹೊಸತನದ ಒಂದು ಕ್ಷಕಿರಣ ಬೀರಲಿ.

-ಡಾ.ಜಿ.ವಿ.ವಿಸಾಜಿ, ಭಾಲ್ಕಿ.


ನಮ್ಮ ಮನೆಯಲ್ಲಿ ನಾವೇ ನೆಂಟರು!

ನಾವು ಭಾರತೀಯರು, ವಿಶಾಲ ಹೃದಯದವರು. ಹೇಳುವುದಕ್ಕೆ ಬಹಳ ಚಂದದ ಮಾತು. ವಾಸ್ತವದಲ್ಲಿ ಇದರರ್ಥ ಬೇರೆಯೇ ಇದೆ. ನಾವು ಭಾರತೀಯ ಪ್ರಜೆಗಳು ಹಿಂದಿ ಏರಿಕೆ ಸರ್ಕಾರದಿಂದಲೇ ಆಗುತ್ತಿದೆ ಎಂದು ಒತ್ತಿಒತ್ತಿ ಹೇಳಿಹೇಳಿ ಬಹುಶಃ ತೊಂಬತ್ತು ಪಟ್ಟು ಅದೇ ಸತ್ಯವಾಗಿಬಿಟ್ಟಿದೆ. ಹಲವಾರು ವೈಶಿಷ್ಟ್ಯಗಳಿಂದ ಕೂಡಿರುವ ನಮ್ಮ ದೇಶ ಅಷ್ಟೇ ವೈಶಿಷ್ಟ್ಯಗಳಿಂದ ಕೂಡಿದ ಬೆಂಕಿಯಲ್ಲಿ ಬೇಯುತ್ತಿದೆ ಎನ್ನುವುದು ಅಷ್ಟೇ ಸತ್ಯ. ಜಾತಿ, ಮತ, ರಾಜ್ಯ, ಜಿಲ್ಲೆ, ತಾಲ್ಲೂಕು, ಊರು, ದೇವರು, ಮೈ ಬಣ್ಣ, ಊಟ ಹೀಗೆ ಇನ್ನು ಏನೆಲ್ಲಾ ವೈವಿಧ್ಯಮಯ ವಿಷಯಗಳು ಬೇಕು; ಅಷ್ಟೇ ಅದ್ಭುತ ಬೆಂಕಿ ಕಿಡಿಗಳು ಇದರಲ್ಲಿ ಅಡಗಿವೆ ಎಂದರೆ ಸುಳ್ಳಲ್ಲ.

ಹಿಂದಿ ನಮ್ಮ ರಾಷ್ಟ್ರೀಯ ಭಾಷೆ. ಎಲ್ಲರೂ ಅದನ್ನ ಕಲಿಯೋದು ಒಳ್ಳೆಯದೇ. ಹಾಗಂತ ಮಾತೃಭಾಷೆಯನ್ನ ಮರೆಯಿರಿ ಎಂದು ಎಲ್ಲಿ ಹೇಳಿದರೋ ನಾ ಕಾಣೆ. ಬಹುಪಾಲು ಜನ ಎಲ್ಲಿ ಹೋದರೂ ಆಯಾ ನೆಲದ ಭಾಷೆ ಕಲಿತು ಮಾತನಾಡಿ ಗೌರವವನ್ನು ತುಂಬಿತುಂಬಿ ಕೊಡುತ್ತಾರೆ. ಆದರೆ, ನಮ್ಮ ನೆಲದಲ್ಲಿದ್ದು, ನಮ್ಮ ಜಲ ಕುಡಿದು ಜೀವನ ನಡೆಸುತ್ತಿರುವ ಅದೆಷ್ಟೋ ಜನ ನಮ್ಮ ಭಾಷೆಗೆ ಕಿಂಚಿತ್ತೂ ಗೌರವ ಕೊಡುತ್ತಿಲ್ಲ.

ನಾವಿನ್ನೂ ಕನ್ನಡ ಕಲಿತು ಮಾತನಾಡಿ ಎಂದು ಹೇಳುವ ಧೈರ್ಯ ಮಾಡಿಲ್ಲ. ಅದೆಂದು ಆಗುವುದೋ ನಾ ಕಾಣೆ. ಹೊರಗಿನಿಂದ ಬಂದವರು, ಅವರ ಭಾಷೆಯನ್ನು ನಮ್ಮ ಮೇಲೆ ಹೇರುತ್ತಿದ್ದಾರೋ ಅಥವಾ ನಾವೇ ಅವರ ಭಾಷೆಯನ್ನ ನಮ್ಮ ಮೇಲೆ ಎಳೆದುಕೊಳ್ಳುತ್ತಿದ್ದೇವೋ! ಒಟ್ಟಿನಲ್ಲಿ, ಅವರ ಭಾಷೆ ಕಲಿತು, ನಮ್ಮ ಭಾಷೆ ಬಿಟ್ಟಿದ್ದೇವೆ. ಜ್ಞಾನಕ್ಕಾಗಿ, ಹೊಟ್ಟೆಪಾಡಿಗಾಗಿ ಎಲ್ಲವನ್ನು ಕಲಿಯೋದು ಒಳ್ಳೆಯದೇ. ಹಾಗಂತ, ಮಾತೃಭಾಷೆ ಮರೆತರೆ, ನಮ್ಮ ಮುಂದಿನ ಪೀಳಿಗೆಯವರು ತಮ್ಮದೇ ಮನೆಯಲ್ಲಿ, ತಾವೇ ನೆಂಟರು ಆಗಿಬಿಟ್ಟಾರು ಎನ್ನುವುದೇ ಭಯ.

-ರೂಪಾ ಮಂಜಪ್ಪ ನರಸಾಪುರ, ಬೆಂಗಳೂರು.

ಭಾರತಕ್ಕೂ ಬರಲಿ ‘ಸೈಲೆಂಟ್ ಬುಕ್ ಕ್ಲಬ್’

ಕಾದಂಬಿನಿಯವರ ‘ಸೈಲೆಂಟ್ ಬುಕ್ ಕ್ಲಬ್’ ಎಂಬ ಚಿಕ್ಕ ಮತ್ತು ಚೊಕ್ಕ ಲೇಖನ ಅರ್ಥಗರ್ಭಿತವಾಗಿದೆ ಮತ್ತು ವಿಚಾರ ಪ್ರಚೋದಕವಾಗಿದೆ. ಈ ಪರಿಕಲ್ಪನೆ ಭಾರತೀಯರಿಗೆ ಹೊಸದು. ಅಷ್ಟ ಏಕೆ, ‘ಸೈಲೆಂಟ್’ ಮತ್ತು ‘ಬುಕ್’ ಕೂಡ ಕೆಲವರಿಗೆ ಹೊಸದೇ. ಆದರೆ ‘ಕ್ಲಬ್’ ಚಿರಪರಿಚಿತವಾದ ಪದ. ಟಿವಿ ಮತ್ತು ಸ್ಮಾರ್ಟ್ ಫೋನ್‍ಗಳು ವಕ್ಕರಿಸಿದ ಮೇಲೆ, ಭಾರತಿಯರಲ್ಲಿ ಓದುವ ಗೀಳು ಕಡಿಮೆಯಾಯಿತು ಎಂದು ಕೆಲವರ ಅಂಬೋಣ. ಆದರೆ ನಮಗೆ ಓದು ‘ಗೀಳಿ’ನ ಮಟ್ಟದಲ್ಲಿ ಯಾವತ್ತೂ ಇರಲೇ ಇಲ್ಲ ಎಂಬುದೇ ಸತ್ಯ. ನಮ್ಮ ಓದು ಉದ್ಯೋಗ ಮತ್ತು ಪರೀಕ್ಷೆ ಪಾಸು ಮಾಡಲೇ ವಿನಾ ಮನೋರಂಜನೆಗಾಗಲೀ, ಜ್ಞಾನಾರ್ಜನೆಗಾಗಲೀ ಅಲ್ಲ.

ಇವತ್ತು ಬೆಂಗಳೂರಿನಲ್ಲಿ ಅಲ್ಲಲ್ಲಿ ‘ಅಧ್ಯಯನ ಕೇಂದ್ರಗಳು ತಲೆ ಎತ್ತಿವೆ. ಅಲ್ಲಿ ನಿಶ್ಶಬ್ದವಾಗಿ ಓದುತ್ತಿರುವ ಯುವಕ-ಯುವತಿಯರನ್ನು ನೋಡಬಹುದು. ಅವರೆಲ್ಲ ಕೆ.ಎ.ಎಸ್., ಐ.ಎ.ಎಸ್ ಮುಂತಾದ ಉದ್ಯೋಗ ಪಡೆಯಲು, ಪರೀಕ್ಷೆಗಾಗಿ ತಯಾರಿ ನಡೆಸುತ್ತಾರೆಯೇ ವಿನಾ, ‘ಓದಿನ ಸುಖ’ಕ್ಕಾಗಿ ಓದುವುದಿಲ್ಲ. ಕೆಲವು ಗ್ರಂಥಾಲಯಗಳಲ್ಲಿ ವಯಸ್ಕರು ದಿನಪತ್ರಿಕೆಗಳನ್ನು ಮತ್ತು ನಿಯತಕಾಲಿಕೆಗಳನ್ನು ಓದುತ್ತಿರುತ್ತಾರೆ. ಅವರ ಉದ್ದೇಶ ‘ಟೈಂ ಪಾಸ್’ ಆಗಿರುತ್ತದೆಯೇ ಹೊರತು ಓದಿನ ಸುಖವಾಗಲೀ, ಜ್ಞಾನಾರ್ಜನೆಯಾಗಲೀ ಅಲ್ಲ.

‘ಸೈಲೆಂಟ್ ಬುಕ್ ಕ್ಲಬ್’ನಲ್ಲಿ ಓದುವುದು ಎಷ್ಟು ಮುಖ್ಯವೋ, ಓದಿನ ಮೊದಲು ಮತ್ತು ಓದಿನ ನಂತರವೂ ಓದುಗರ ಜೊತೆ ವಿಚಾರ-ವಿನಿಮಯ ಮಾಡಿಕೊಳ್ಳುವುದು ಅಷ್ಟೇ ಮುಖ್ಯ. ನಿಜಕ್ಕೂ ಇದೊಂದು ಸಾರ್ಥಕ ಪರಿಕಲ್ಪನೆ. ಪಾಶ್ಚಾತ್ಯ ದೇಶಗಳಲ್ಲಿ ಪ್ರಾರಂಭವಾದ ಈ ಪರಿಕಲ್ಪನೆ ಭಾರತಕ್ಕೂ ಬಂದರೆ ಎಷ್ಟು ಚೆನ್ನ ಎನಿಸುತ್ತದೆ. ಆದರೆ ಇದು ಪೂರ್ಣ ಪ್ರಮಾಣದಲ್ಲಿ ಬರುವುದು ಸಂದೇಹ. ಭಾರತಕ್ಕೆ ಬರುವುದೆಲ್ಲ- ಯಾವ ಆಹಾರ ಪದ್ಧತಿ ಅಲ್ಲಿನ ಜನರ ಆರೋಗ್ಯಕ್ಕೆ ಮಾರಕ ಎಂದು ಸಿದ್ಧವಾದ ಮೇಲೆ ತಿರಸ್ಕತವಾಗುತ್ತದೋ ಅಂಥ ಆಹಾರ ಪದ್ಧತಿ, ಯಾವ ಕೃಷಿ ಪದ್ಧತಿಯಲ್ಲಿ ಬೆಳೆದ ಆಹಾರ ಜೀವನಾಶಕವದು ಸಿದ್ಧವಾಗುತ್ತದೋ, ಅಂಥ ಕೃಷಿ ಪದ್ಧತಿ ಮಾತ್ರ. ಆದರೂ ‘ಸೈಲೆಂಟ್ ಬುಕ್ ಕ್ಲಬ್’ ಭಾರತಕ್ಕೆ ಬೇಗ ಬರಲೆಂದು ಆಶಿಸೋಣ.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು. 

Leave a Reply

Your email address will not be published.