ಉದ್ಯಮಿಗಳ ಹಿತಕಾಯುವ ಸರ್ಕಾರಕ್ಕೆ ರೈತರ ಏಳಿಗೆ ಬೇಕಿಲ್ಲ!

ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯುದ್ಧವೀರ್ ಸಿಂಗ್ ಅವರು ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರೈತಮಹಾಪಂಚಾಯತ್ ಸಮಾವೇಶಕ್ಕೆ ಆಗಮಿಸಿದ್ದರು. ಆಗ ಪತ್ರಕರ್ತ ಎನ್.ರವಿಕುಮಾರ್ ಸಮಾಜಮುಖಿಗಾಗಿ ನಡೆಸಿದ ಅವರ ವಿಶೇಷ ಸಂದರ್ಶನ ಇಲ್ಲಿದೆ.

-ಎನ್.ರವಿಕುಮಾರ್

ಕರ್ನಾಟಕದ ಪ್ರವಾಸದಲ್ಲಿರುವ ನಿಮಗೆ ರಾಜ್ಯದಲ್ಲಿನ ರೈತರ ಸ್ಥಿತಿಗತಿ ಮತ್ತು ಇಲ್ಲಿನ ಸರ್ಕಾರದ ಆಡಳಿತದ ಬಗ್ಗೆ ಅರಿವಿಗೆ ಬಂದ ಸಂಗತಿಗಳೇನು?

ಇಡೀ ದೇಶದಲ್ಲಿ ರೈತರ ಸಮಸ್ಯೆ ಒಂದೇ ತೆರನಾಗಿವೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದ್ದು ಒಕ್ಕೂಟ ಸರ್ಕಾರದ ಆದೇಶಗಳನ್ನೆ ಪಾಲನೆ ಮಾಡುತ್ತಾ ರೈತರ ಬದುಕನ್ನು, ಕೃಷಿ ಸಂಸ್ಕøತಿಯನ್ನು ನಾಶಮಾಡುವ ಕೆಲಸ ರಾಜ್ಯದಲ್ಲೂ ನಡೆದಿದೆ. ಒಕ್ಕೂಟ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಹೊರಟಿರುವ ರಾಜ್ಯದ ಬಿಜೆಪಿ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರಿಂದ ಭೂಮಿ ಕಸಿಯುವ ಷಡ್ಯಂತ್ರ ರಚಿಸಿದೆ. ಇದು ಶ್ರೀಮಂತರಿಗೆ, ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ನಿರ್ಧಾರವಾಗಿದೆ. ಇವೆಲ್ಲವನೂ ವಿರೋಧಿಸುವುದು ನಮ್ಮ ಅಜೆಂಡಾ ಆಗಿದೆ. ಕರ್ನಾಟಕದಲ್ಲೂ ರೈತರ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ. ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ಆಂದೋಲನ ಮಾದರಿಯಲ್ಲೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಗಡಿಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ.

ದೇಶಾದ್ಯಂತ ರೈತ ಚಳವಳಿ ವಿಸ್ತಾರಗೊಳ್ಳುತ್ತಿರುವಾಗ ಇದನ್ನು ಹತ್ತಿಕ್ಕಲು ಧರ್ಮ, ರಾಷ್ಟ್ರೀಯವಾದದಂತಹ ಭಾವನಾತ್ಮಕ ಸಂಗತಿಗಳನ್ನು ಆಡಳಿತರೂಢ ಬಿಜೆಪಿ ಬಳಸುತ್ತಿರುವುದು ನಿಮಗೆ ಸವಾಲು ಎನಿಸುತ್ತಿಲ್ಲವೇ? ಇದನ್ನು ಹೇಗೆ ಎದುರಿಸುವಿರಿ?

ಅಂತಹ ಎಲ್ಲಾ ಪ್ರಯತ್ನಗಳು ಫಲ ಕೊಡುವುದಿಲ್ಲ ಎಂಬುದು ಸಾಬೀತಾಗಿದೆ. ಚಳವಳಿ ಆರಂಭವಾದ ದಿನಗಳಲ್ಲಿ ಇಂತಹ ಪ್ರಯತ್ನಗಳನ್ನು ಬಿಜೆಪಿ ನಡೆಸಿತು. ಹರಿಯಾಣ, ಪಂಜಾಬ್‍ಗಳಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಚಳವಳಿಯನ್ನು ಒಡೆಯುವ ಪ್ರಯತ್ನದಲ್ಲಿ ಅವರು (ಬಿಜೆಪಿ) ಸಫಲರಾಗಲಿಲ್ಲ. ಧರ್ಮ ಮತ್ತು ರಾಮಮಂದಿರ ಎಂಬ ಭಾವನಾತ್ಮಕ ಸಂಗತಿಗಳ ಮೂಲಕ ಜನರನ್ನು ಮೋಸಗೊಳಿಸುವುದು ಅವರ ಅಜೆಂಡಾ. ಆದರೆ ಇದು ಎಲ್ಲಾ ಕಾಲಕ್ಕೂ ನಡೆಯುವುದಿಲ್ಲ ಎಂಬುದು ಈಗ ಸಾಬೀತಾಗಿದೆ.

ಕರ್ನಾಟಕದಲ್ಲಿ ಇಷ್ಟೊಂದು ರಾಮಮಂದಿರಗಳು ಇರಬೇಕಾದರೆ ದೂರದಲ್ಲಿರುವ ಅಯೋಧ್ಯೆಯ ರಾಮಮಂದಿರಕ್ಕೆ ಏಕೆ ಹೋಗಬೇಕು? ರಾಮ ಇರಬೇಕಾದುದ್ದು ಮಂದಿರದಲ್ಲಿ ಅಲ್ಲ. ಬದಲಾಗಿ ಪ್ರತಿಯೊಬ್ಬರ ಹೃದಯಲ್ಲಿ ರಾಮನಿರಬೇಕು. ರಾಮ ಇರುವುದಾದರೆ ನಮ್ಮೊಳಗೆ ಇರಬೇಕು. ಅಲ್ಲಿ ಇಲ್ಲ ಎಂದರೆ, ಮತ್ತೆಲ್ಲೂ ಇರಲಾರ. ಆದರೆ, ಜನಸಾಮಾನ್ಯರ ಮುಗ್ಧತೆಯನ್ನೇ ಬಳಸಿಕೊಂಡು ಅವರನ್ನು ರಾಮನ ಹೆಸರಿನಲ್ಲಿ ಮರುಳು ಮಾಡಿ ರಾಜಕೀಯ ಲಾಭ ಪಡೆಯುವ ಕೆಲಸ ನಡೆದಿದೆ. ಇದು ಸರಿಯಲ್ಲ. ರೈತರಿಗೆ ಯಾವ ಧರ್ಮವೂ ಇಲ್ಲ, ಯಾವ ಧರ್ಮಗ್ರಂಥವೂ ಇಲ್ಲ. ನಮಗೆ ನಮ್ಮ ಕಾಯಕವೇ ಧರ್ಮ, ದೇವರು, ಧರ್ಮಗ್ರಂಥ. ದೇವರು ನಮ್ಮೊಂದಿಗೆ ಸದಾ ಇರುತ್ತಾನೆ. ನಮ್ಮ ಕಾಯಕದಲ್ಲಿ, ನಮ್ಮ ಬೆವರಿನಲ್ಲಿ, ಉಣ್ಣುವ ಅನ್ನದಲ್ಲಿ ದೇವರನ್ನು ಕಾಣುವವರು ನಾವು. ನಮ್ಮ ಹೊಲಗದ್ದೆಯಲ್ಲಿ, ನಮ್ಮ ದನಕರು, ಜಾನುವಾರುಗಳಲ್ಲಿ, ಪ್ರತಿ ಕಾಳು ದವಸ ಧಾನ್ಯದಲ್ಲೂ ರಾಮನನ್ನು ಕಾಣುವವರು. ನಾವು ಕೋಮುವಾದಿಗಳೂ ಅಲ್ಲ; ಕೋಮುವಾದದಿಂದ ಚಳವಳಿಯನ್ನು ಒಡೆಯುವ ಕುತಂತ್ರಗಳು ನಡೆಯುವುದಿಲ್ಲ. ಚಳವಳಿ ಬಲಿಷ್ಟವಾಗಿ ಎಲ್ಲರನ್ನೂ ಒಳಗೊಂಡು ಮುನ್ನಡೆಯುತ್ತಿದೆ.

ಒಕ್ಕೂಟ ಸರ್ಕಾರ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಗಳ ಮೂಲ ಉದ್ದೇಶವನ್ನು ನೀವು ಹೇಗೆ ಅರ್ಥೈಸುತ್ತೀರಿ?

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ದೇಶದ ಹಿತಕ್ಕಾಗಿ ತರಬಹುದಾದ ಯಾವುದೆ ಕಾಯ್ದೆ ವಿಚಾರಗಳನ್ನು ಸಂಸತ್ತಿನಲ್ಲಿ ಚರ್ಚೆ ನಡೆಸಿ ಸಮ್ಮತದ ತೀರ್ಮಾನ ಕೈಗೊಳ್ಳುವುದು ಪ್ರಜಾಪ್ರಭುತ್ವದ ಪರಂಪರೆ. ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಅವಕಾಶವೂ ಇದೆ. ಅದು ವಿಶೇಷ ಸಂದರ್ಭದಲ್ಲಿ ಮಾತ್ರ. ಆದರೆ ದೇಶದಲ್ಲಿ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರುವಂತಹ ತುರ್ತು ಸಂದರ್ಭವಾದರೂ ಏನಿತ್ತು? ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಆರು ತಿಂಗಳ ಮುಂಚೆಯೇ ಈ ದೇಶದ ಅದಾನಿಯಂತಹ ಬಂಡವಾಳಶಾಹಿಗಳು ಆಹಾರಧಾನ್ಯಗಳನ್ನು ಸಂಗ್ರಹಿಸಿಡಲು ದೊಡ್ಡ ದೊಡ್ಡ ಗೋದಾಮುಗಳನ್ನು ಕಟ್ಟಿಸಿದ್ದರು. ಇದರ ಉದ್ದೇಶವೇನು? ಮೂರು ಕೃಷಿ ತಿದ್ದುಪಡಿ ಕಾಯ್ದೆಗಳಲ್ಲಿ ರೈತರಿಗೆ ಸಹಾಯವಾಗುವಂತಹ ಯಾವ ಅಂಶವಿದೆ ಹೇಳಿ? ಕನಿಷ್ಠ ಬೆಂಬಲ ಬೆಲೆಯನ್ನು ಕಾಯ್ದೆ ಯಾಗಿ ಯಾಕೆ ರೂಪಿಸುತ್ತಿಲ್ಲ? ಇಂತಹ ಪ್ರಶ್ನೆಗಳಿಗೆ ಸರ್ಕಾರದಲ್ಲಿ ಉತ್ತರವಿಲ್ಲ.

ಕಳೆದ ಮೂರು ವರ್ಷಗಳಲ್ಲಿ ಉದ್ಯಮಿಗಳ 230 ಲಕ್ಷ ಕೋ.ರೂ. ಸಾಲವನ್ನು ಮನ್ನಾ ಮಾಡಲಾಗಿದೆ. ಕಳೆದ 11 ತಿಂಗಳಲ್ಲಿ 150 ಕೋ.ರೂಗಳನ್ನು ಮತ್ತು ಕೇವಲ 10 ಉದ್ಯಮಿಗಳ 61 ಸಾವಿರ ಕೋ.ರೂ ಸಾಲವನ್ನು ಮನ್ನಾ ಮಾಡಲಾಗಿದೆ ಈ ಮೊತ್ತವನ್ನು ಇಡೀ ಕರ್ನಾಟಕದ ರೈತರ ಸಾಲಮನ್ನಾಗೆ ಬಳಸಬಹುದಿತ್ತು. ಹಾಗಾದರೆ ಈ ಸಾಲ ಮನ್ನಾ ಮಾಡಿಕೊಂಡಿರುವ ಉದ್ಯಮಿಗಳು ಯಾರು, ಅವರಿಗೂ ಸರ್ಕಾರದಲ್ಲಿರುವವರಿಗೂ ಏನು ಸಂಬಂಧ? 

ಅಂದರೆ ದೇಶದಲ್ಲಿ ಒಂದು ಚುನಾಯಿತ ಸರ್ಕಾರವನ್ನು ಕಾರ್ಪೋರೇಟ್ಗಳು ನಡೆಸುತ್ತಿದ್ದಾರೆಯೇ?

ಖಂಡಿತ. ದೇಶದಲ್ಲಿ ಇಂದು ಇರುವುದು ರಾಜಕಾರಣವಲ್ಲ. ವ್ಯಾಪಾರ ನಡಯುತ್ತಿದೆ. ಈ ಸರ್ಕಾರಕ್ಕೆ, ದೇಶದ ಜನಸಾಮಾನ್ಯರ ಹಿತಕ್ಕಿಂತ ಕೇವಲ ಹತ್ತು ಮಂದಿ ತಮ್ಮ ಪರಮಾಪ್ತ ಕಾಪೆರ್Çರೇಟ್ ಕುಳಗಳ ಸಂಪತ್ತು ವೃದ್ಧಿಯೇ ಮುಖ್ಯವಾಗಿದೆ. ಈ ಎಲ್ಲಾ ಉದ್ಯಮಿಗಳು ಗುಜರಾತಿನವರೇ ಆಗಿದ್ದಾರೆ ಎನ್ನುವುದು ಮುಖ್ಯ. ಜನಸಾಮಾನ್ಯರ ಬದುಕನ್ನು ನಾಶ ಮಾಡಿ ಗುಜರಾತ್ ಗ್ಯಾಂಗ್‍ನ್ನು ಕೊಬ್ಬಿಸುವುದೇ ತನ್ನ ಪರಮ ಕರ್ತವ್ಯ ಎಂದು ಈ ಸರ್ಕಾರ ಭಾವಿಸಿದೆ. ಹಾಗೇ ನಡೆದುಕೊಳ್ಳುತ್ತಿದೆ ಕೂಡ. ಬ್ಯಾಂಕುಗಳು ಜನಸಾಮಾನ್ಯರಿಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ಈ ಹಿಂದೆ ಬ್ಯಾಂಕ್ ರಾಷ್ಟ್ರೀಕರಣ ಮಾಡಲಾಗಿತ್ತು. ಆದರೆ, ಈಗ ಸರ್ಕಾರ, ಜನಸಾಮಾನ್ಯರಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ದೂರ ಮಾಡಿ, ಖಾಸಗೀಕರಣ ಮೂಲಕ ತಮ್ಮ ಆಪ್ತ ಉದ್ಯಮಿಗಳ ಖಾಸಗೀ ಸ್ವತ್ತು ಮಾಡುತ್ತಿದೆ.

ಕಾಪೆರ್Çರೇಟ್ ಕುಳಗಳು ರಾಜಕೀಯ ಪಕ್ಷಗಳ ಮೂಲಕ ಚುನಾವಣೆಯಲ್ಲಿ ಹಣ ಹೂಡುತ್ತಿವೆ ಮತ್ತು ಆರಿಸಿಬಂದ ರಾಜಕೀಯ ಪಕ್ಷದ ಮೂಲಕ ತಮ್ಮ ಉದ್ಯಮ ಸಾಮ್ರಾಜ್ಯ ವಿಸ್ತರಣೆಗೆ ಬೇಕಾದ ಕೆಲಸಗಳನ್ನಷ್ಟೇ ಮಾಡಿಸಿಕೊಳ್ಳುತ್ತಿವೆ. ಕಳೆದ ಚುನಾವಣೆಯಲ್ಲಿ 50 ಸಾವಿರ ಕೋಟಿ ಹಣವನ್ನು ಹೀಗೆ ಹೂಡಿಕೆ ಮಾಡಲಾಗಿತ್ತು. ಈಗ ಆ ಹೂಡಿಕೆಗೆ ಪ್ರತಿಫಲ ಪಡೆಯುತ್ತಿದ್ದಾರೆ. ಹಾಗಾಗಿ ದೇಶದಲ್ಲಿ ಇರುವುದು ವ್ಯವಹಾರ, ಉದ್ಯಮ ನಿರ್ವಹಣೆಯ ವ್ಯವಸ್ಥೆಯೇ ವಿನಾ, ಜನರ ಹಿತ ಕಾಯುವ ಆಡಳಿತವಲ್ಲ. ಈ ದೇಶದ ವ್ಯವಸ್ಥೆಯನ್ನು ಕೆಲವು ಉದ್ಯಮಿಗಳು ಮಾತ್ರವೆ ನಿಯಂತ್ರಿಸುತ್ತಿದ್ದಾರೆ.

ಸರ್ಕಾರ ಬೇಡಿಕೆಗಳನ್ನು ಒಪ್ಪದೇ ಇದ್ದರೆ ಹೋರಾಟದ ಮುಂದಿನ ಹೆಜ್ಜೆ…?

ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ. ರೈತ ಹೋರಾಟ ಎಂಬುದು ಈಗ ರೈತರಿಗೆ ಸೀಮಿತವಾಗಿ ಉಳಿದಿಲ್ಲ. ಅದು ಈ ದೇಶದ ಕಾಪೆರ್Çರೇಟ್ ಪರ ವ್ಯವಸ್ಥೆಯಿಂದ ನೊಂದಿರುವ, ಆತಂಕಿತರಾಗಿರುವ ಎಲ್ಲಾ ಜನಸಾಮಾನ್ಯರ ಜನಾಂದೋಲ ವಾಗಿ ಬದಲಾಗಿದೆ. ನಮ್ಮ ಹೋರಾಟ ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧವಲ್ಲ; ಜನಸಾಮಾನ್ಯರ ಬದುಕನ್ನು ನಾಶ ಮಾಡುತ್ತಿರುವ ಮತ್ತು ಅದೇ ಹೊತ್ತಿಗೆ ಕೆಲವೇ ಮಂದಿ ಕಾಪೆರ್Çರೇಟ್ ಕುಳಗಳ ದೇಶದ ಸಮಗ್ರ ಸಂಪತ್ತಿನ ಲೂಟಿಗೆ ಮಣೆ ಹಾಕುತ್ತಿರುವ ಇಡೀ ಭ್ರಷ್ಟ ವ್ಯವಸ್ಥೆಯ ವಿರುದ್ಧದ ಹೋರಾಟವಿದು.  

ಈ ಹೋರಾಟ ಇದೀಗ ದೇಶವ್ಯಾಪಿ ಜನಾಂದೋಲನವಾಗಿ ಬದಲಾಗಿದ್ದು, ತಾನೇತಾನಾಗಿ ಮುಂದುವರೆಯಲಿದೆ. ವ್ಯವಸ್ಥೆಯ ಬದಲಾವಣೆಗೆ ನಾಂದಿ ಹಾಡಲಿದೆ. ಆ ಬದಲಾವಣೆ ತತಕ್ಷಣಕ್ಕೇ ಆಗದೇ ಹೋದರು, ಎಂದಿದ್ದರೂ ಅದು ಆಗಿಯೇ ಆಗುತ್ತದೆ. ಬಹಳ ಮುಖ್ಯವಾಗಿ ನಾವು ರಾಜಕಾರಣಿಗಳಲ್ಲ, ರಾಜಕಾರಣಕ್ಕಾಗಿ ಇದನ್ನು ಮಾಡುತ್ತಿಲ್ಲ. ಮತಕ್ಕಾಗಿ ಮಾಡುತ್ತಿಲ್ಲ. ದೇಶದ ರೈತರಿಗೆ, ಜನಸಾಮಾನ್ಯರಿಗೆ ಮತ್ತು ಮುಖ್ಯವಾಗಿ ದೇಶದ ಭವಿಷ್ಯಕ್ಕಾಗಿ ಈ ಹೋರಾಟ. ಇದು ಜನರಿಗೆ ಅರ್ಥವಾಗಿದೆ. ಹಾಗಾಗಿ ನಾವು ಬಯಸಿದ ಬದಲಾವಣೆ ಖಂಡಿತವಾಗಿಯೂ ಬರಲಿದೆ ಎಂಬ ವಿಶ್ವಾಸವಿದೆ. ಶತಮಾನಗಳ ಕಾಲದಿಂದಲೂ ಹೋರಾಡುತ್ತಲೇ ಬಂದ ರೈತರು ನಾವು, ನಮಗೆ ಈ ಎಲ್ಲದರ ಅರಿವಿದೆ. ರೈತ ಹೋರಾಟಗಾರರಾಗಿ ನಮಗೆ ಅವಸರವೇನಿಲ್ಲ. ನಾವು ಭೂಮಿಯನ್ನು ಉತ್ತಿ-ಬಿತ್ತಿ, ಮೊಳಕೆಯಿಂದ ಫಸಲಿನವರೆಗೆ ಜತನ ಮಾಡಿ, ಒಕ್ಕಲು ಮಾಡುವ ಸಹನೆ ಮತ್ತು ಸೈರಣೆ ಉಳ್ಳವರು. ಹಾಗಾಗಿ ನಾವು ಅಂದುಕೊಂಡಿದ್ದನ್ನು ಸಾಧಿಸಲು ನಮಗೆ ಕಾಲಮಿತಿಯ ಪರಿವೆ ಇಲ್ಲ.  ಅಂತಿಮವಾಗಿ ಜನರ ಹೋರಾಟವೇ ಎಲ್ಲವನ್ನು ನಿರ್ಧರಿಸಲಿದೆ.

ಬಾಕ್ಸ್

ಸುದ್ದಿ ಮಾಧ್ಯಮಗಳ ಧೋರಣೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮಾಧ್ಯಮಗಳಲ್ಲಿ ಕೂಡ ಹೊರಗಿನ ಸಮಾಜದಂತೆಯೇ ಬೇರೆ ಬೇರೆ ರೀತಿಯ ಜನಗಳಿದ್ದಾರೆ. ಬಹಳಷ್ಟು ಜನ ಹೋರಾಟದ ಪರ ಇದ್ದಾರೆ. ಕೆಲವರು ವ್ಯತಿರಿಕ್ತವಾಗಿಯೂ ಇದ್ದಾರೆ. ಕೆಲವೊಮ್ಮೆ ವರದಿಗಾರರಾಗಿ ಅವರಿಗೆ ವಾಸ್ತವಾಂಶಗಳನ್ನು ಹೇಳುವ ಕಾಳಜಿ ಇದ್ದರೂ, ಮಾಧ್ಯಮಗಳನ್ನು ನಿಯಂತ್ರಿಸುವ ಮಾಲೀಕರ ಮರ್ಜಿಗೆ ಬಿದ್ದು ಹೇಳಲಾರದ ಅಸಹಾಯಕತನವೂ ಇದೆ. ಅವರಿಗೂ ಹೊಟ್ಟೆಪಾಡಿನ ಪ್ರಶ್ನೆ. ಏಕೆಂದರೆ ಇಂದು ದೇಶದ ಬಹುತೇಕ ದೊಡ್ಡ ಮಾಧ್ಯಮಗಳು ಬೃಹತ್ ಕಾಪೆರ್Çರೇಟ್ ಕಂಪನಿಗಳ ಕೈವಶವಾಗಿವೆ. ಹಾಗಾಗಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ನಮ್ಮ ಹೋರಾಟದ ಬಗ್ಗೆ ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು. ಸುದ್ದಿಮಾಧ್ಯಮಗಳನ್ನು ಅದರಲ್ಲೂ ಸೋಷಿಯಲ್ ಮೀಡಿಯಾಗಳನ್ನು ನಿಯಂತ್ರಿಸಲು ಕಾನೂನುಗಳನ್ನು ಮುಂದಿನ ದಿನಗಳಲ್ಲಿ ಅವರು (ಒಕ್ಕೂಟ ಸರ್ಕಾರ) ತರಲಿದ್ದಾರೆ.

Leave a Reply

Your email address will not be published.