ಉದ್ಯೋಗ ಸರಪಳಿ ತುಂಡರಿಸಿದ ಜಿಂದಲ್ ಕಂಪನಿಯ ಕನ್ವೇಯರ್ ಬೆಲ್ಟ್

ಸಂಡೂರು ತಾಲೂಕಿನ ತೋರಣಗಲ್ಲು ಬಳಿ ಬೃಹತ್ ಉಕ್ಕಿನ ಕಾರ್ಖಾನೆ ಸ್ಥಾಪಿಸಿರುವ ಜಿಂದಲ್ ಕಂಪನಿ ಈಗ ಅದಿರು ಸಾಗಾಣಿಕೆಗೆ ಆಧುನಿಕ ಕನ್ವೇಯರ್ ಬೆಲ್ಟ್ ಅಳವಡಿಸಿದೆ. ಇದು ಪರಿಸರಸ್ನೇಹಿ ಕ್ರಮ ಎಂಬುದೇನೋ ಸರಿ. ಆದರೆ ಇದರಿಂದ ಅದಿರು ಸಾಗಾಣಿಕೆ ಅವಲಂಬಿಸಿದ್ದ ಬಹುದೊಡ್ಡ ಕಾರ್ಮಿಕ ವರ್ಗದ ಬದುಕು ಮುರಿದು ಬೀಳುತ್ತದೆ. ಇವರಿಗೆ ಪರ್ಯಾಯ ಉದ್ಯೋಗ, ಬದುಕು, ಪರಿಹಾರ ಕಲ್ಪಿಸುವ ಹೊಣೆ ಯಾರದು?

ಬಳ್ಳಾರಿ ಜಿಲ್ಲೆಯ ಸಂಡೂರು ಸುಂದರವಾದ ಊರು. ಉತ್ತರ ಕರ್ನಾಟಕದ ಬಯಲು ಸೀಮೆಯ ಮಲೆನಾಡು, ಹಸಿರು ಬೆಟ್ಟಗುಡ್ಡಗಳ ತಾಣ, ಉತ್ಕೃಷ್ಠ ಗಿಡಮೂಲಿಕೆಗಳ ಸಸ್ಯಕಾಶಿ. ವಿಶ್ವವಿಖ್ಯಾತ ಖನಿಜ ಸಂಪತ್ತಿನ ಬೆಟ್ಟಗಳ ರಾಶಿ. ಹೊಯ್ಸಳರ ಕಾಲದ ಕುಮಾರಸ್ವಾಮಿ ಗುಡಿ ಇರುವ ಪ್ರದೇಶ, ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ಪ್ರಾಕೃತಿಕ ವಿಸ್ಮಯದ ನೀಲ ಕುರುಂಜಿ ಹೂವು, ಮಾನಸ ಸರೋವರ ಖ್ಯಾತಿಯ ನಾರೀಹಳ್ಳ, ಬೆಟ್ಟದ ಮೇಲಿನ ಬಿದಿರ ಮೆಳೆಗಳು, ಸೂಫಿ ಸಂತ ಬಾಬಾ ಫಕೃದ್ದೀನ ಅಲಿ ಅವರ ನೆಲೆ.

ಹಸಿರು ಸಿರಿಯ ಸಂಡೂರು ತಾಲೂಕಿನ ಬಹುಪಾಲು ಜನರಿಗೆ ಗಣಿ ಮತ್ತು ಉಕ್ಕು ಕಾರ್ಖಾನೆ ಚಟುವಟಿಕೆಗಳೇ ಬದುಕಿನ ಜೀವಾಳ. ಈಗ ಸಂಡೂರಿನ ಕಬ್ಬಿಣದ ಗಣಿಗಳಿಂದ ಜೆ.ಎಸ್. ಡಬ್ಲ್ಯೂ. ಸ್ಟೀಲ್ಸ್ ಕಾರ್ಖಾನೆವರೆಗೆ ಸುಮಾರು 21 ಕಿ.ಮೀ. ಕನ್ವೆಯರ್ ಬೆಲ್ಟ್ ಹಾಕಿ ಅದರ ಮುಖೇನ ಅದಿರು ಸಾಗಿಸುವ ಕೆಲಸ ಆರಂಭಿಸಿದ್ದಾರೆ. ಇದು ನಿಜಕ್ಕೂ ಪರಿಸರಸ್ನೇಹಿ ಮತ್ತು ಸ್ವಾಗತಾರ್ಹ ಯೋಜನೆ. ಈ ಯೋಜನೆಯಿಂದ ಗಣಿಲಾರಿಗಳ ಆರ್ಭಟ, ಪರಿಸರ ಮಾಲಿನ್ಯ, ಇಂಧನ ವ್ಯಯ, ರಸ್ತೆ ಅಪಘಾತಗಳು ಗಮನಾರ್ಹವಾಗಿ ನಿಯಂತ್ರಣಕ್ಕೆ ಬರುತ್ತವೆ. ಆದರೆ ಈ ಯೋಜನೆಗೆ ಇನ್ನೊಂದು ಮುಖವಿದೆ. ಇದು ಲಾರಿಗಳ ಮೂಲಕ ಅದಿರು ಸಾಗಾಣಿಕೆಯನ್ನೇ ನಂಬಿ ಬದುಕುತ್ತಿದ್ದ ದೊಡ್ಡ ಸಂಖ್ಯೆಯ ಜನರ ಜೀವನ ದುಸ್ತರವಾಗಿಸುತ್ತಿದೆ.

ಒಂದು ಅಂದಾಜಿನ ಪ್ರಕಾರ ನಿತ್ಯ ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯ ಲಾರಿಗಳು ಜಿಲ್ಲೆಯ ಪ್ರತಿಷ್ಠಿತ ಕಾರ್ಖಾನೆಗಳಿಗೆ ಅದಿರು ಹೊತ್ತೊಯ್ಯುತ್ತವೆ. ಈಗ ಈ ಸಾಗಾಣಿಕೆ ವಿಧಾನ ನಿಂತರೆ ಇದನ್ನೇ  ನಂಬಿದ್ದ ಸಾವಿರಾರು ಜನರ ಜೀವನಾಧಾರ ಸ್ಥಗಿತಗೊಳ್ಳುತ್ತದೆ. ಇದರ ಪರಿಣಾಮ ಅನುಭವಿಸುವ ಕಾರ್ಮಿಕರ ಚಿಂತಾಕ್ರಾಂತ ಮುಖಗಳನ್ನು ತಾಲೂಕಿನ ಹಳ್ಳಿಹಳ್ಳಿಗಳಲ್ಲಿ ಕಾಣಬಹುದು. ಅವರ ಕಣ್ಣುಗಳಲ್ಲಿ ಭಯಭರಿತ ಭವಿಷ್ಯದ ಚಿಂತೆ ತುಳುಕುತ್ತದೆ. ಈವರೆಗೆ ಅದಿರು ಸಾಗಾಣಿಕೆ ನೆಚ್ಚಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕುಟುಂಬಗಳು ಕೆಲಸ ಕಳೆದುಕೊಂಡು ಬೀದಿ ಪಾಲಾಗುವ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಅದಿರು ಸಾಗಾಣಿಕೆಗೆ ಕನ್ವೇಯರ್ ಬೆಲ್ಟ್ ಉಪಯೋಗಿಸುವುದರಿಂದ ಸಂಡೂರಿನ ಸುತ್ತಾಮುತ್ತ ಟ್ರಾವೆಲ್ ಏಜೆನ್ಸಿಗಳು, ಟ್ಯಾಕ್ಸಿ ಡ್ರೈವರುಗಳು, ಕ್ಲೀನರುಗಳ ಕಾಯಕಕ್ಕೆ ಸಂಚಕಾರ ಬಂದಿದೆ. ಇವರೆಲ್ಲರೂ ಅಸಂಘಟಿತ ಕಾರ್ಮಿಕರಾಗಿದ್ದು, ಯಾವ ಯೂನಿಯನ್ ಇವರ ಬೆಂಬಲಕ್ಕಿಲ್ಲ. ಇದರ ಕಡೆ ಗಮನ ಕೊಡಬೇಕಿದ್ದ ಆಡಳಿತ ಯಂತ್ರ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಅಭಿವೃದ್ಧಿ, ತಂತ್ರಜ್ಞಾನದ ಅಳವಡಿಕೆ ಹೆಸರಿನಲ್ಲಿ ಸ್ವಯಂ ಉದ್ಯೋಗಗಳು ಸದ್ದಿಲ್ಲದೇ ಸಾಯುತ್ತಾ ತಾಲ್ಲೂಕಿನ ಭವಿಷ್ಯ ಮಂಕಾಗುತ್ತಿದೆ.

ಸಂಡೂರು ತಾಲೂಕಿನಾದ್ಯಂತ ಸುಮಾರು ನಾಲ್ಕು ಸಾವಿರ ಮೈನಿಂಗ್ ಲಾರಿಗಳಿವೆ ಎಂಬ ಅಂದಾಜಿದೆ. ಒಂದು ಲಾರಿಗೆ ಇಬ್ಬರು ಡ್ರೈವರ್, ಇಬ್ಬರು ಕ್ಲೀನರ್ ಎಂದರೂ ಅದನ್ನು ನಂಬಿಕೊಂಡು ಜೀವನ ಸಾಗಿಸುವ ಸುಮಾರು 16000 ಕುಟುಂಬಗಳಿವೆ. ಇದರ ಜೊತೆಗೆ ಉಪಕಸುಬುಗಳಾದ ಖಾನಾವಳಿಗಳು, ಪಂಕ್ಚರ್ ಅಂಗಡಿಗಳು, ಟೀ ಅಂಗಡಿಗಳು, ಚಿಲ್ಲರೆ ವ್ಯಾಪಾರಸ್ಥರು, ರಸ್ತೆ ಬದಿಯ ಮೊಬೈಲ್ ಕ್ಯಾಂಟೀನುಗಳು, ಬಿರಿಯಾನಿ ಟೆಂಟುಗಳು, ಆಟೋಮೊಬೈಲ್ಸ್ ಅಂಗಡಿಗಳು, ಲಾರಿ ರಿಪೇರಿ ಮಾಡುವ ಮೆಕಾನಿಕ್ ಗ್ಯಾರೇಜುಗಳು… ಹೀಗೆ ಬಹುದೊಡ್ಡ ಉದ್ಯೋಗದ, ಪರಸ್ಪರ ಅವಲಂಬನೆಯ ಸರಪಳಿಯೊಂದು ತುಂಡಾಗುವ ಭಯಾನಕ ದೃಶ್ಯ ಕಣ್ಮುಂದೆ ಬರುತ್ತದೆ.

ಈ ಉದ್ಯಮವನ್ನು ನಂಬಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ, ಫೈನಾನ್ಸ್ ಕಂಪನಿಗಳಿಂದ ಸಾಲ-ಶೂಲ ಮಾಡಿ ಲಾರಿಗಳನ್ನು ತಂದಂತಹ ಲಾರಿ ಮಾಲೀಕರ ಸ್ಥಿತಿಯಂತು ಹೇಳತೀರದು. ತಾಲ್ಲೂಕಿನ ಬಂಡ್ರಿ, ನರಸಾಪುರ, ತೋರಣಗಲ್ಲು, ಸಂಡೂರು, ತಾರಾನಗರ, ನಾಗಲಾಪುರ, ಬನ್ನಿಹಟ್ಟಿ, ಬಾವಳ್ಳಿ, ಯಶವಂತನಗರ, ವಡ್ಡು… ಹೀಗೆ ಇಡೀ ತಾಲ್ಲೂಕಿನ ಹಳ್ಳಿಗಳಲ್ಲಿರುವ ಪ್ರತಿ ಕುಟುಂಬದಲ್ಲಿ ಒಬ್ಬೊಬ್ಬ ಡ್ರೈವರ್ ಕ್ಲೀನರ್ ಲಾರಿ ಮಾಲೀಕರು ಸಿಕ್ಕೆ ಸಿಗುತ್ತಾರೆ. ಹಿಂದೆ ಭೂಮಿಯನ್ನೇ ನಂಬಿ ಬದುಕುತ್ತಿದ್ದ ರೈತರು ಮತ್ತು ಕೂಲಿ ಕಾರ್ಮಿಕರು ಬೃಹತ್ ಕಾರ್ಖಾನೆಗಳಿಗೆ ಜಮೀನುಗಳನ್ನು ಕೊಟ್ಟು ಅವೇ ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ನೇರವಾಗಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದು ಒಂದು ವರ್ಗ. ನೌಕರಿ ಸಿಗದೆ ವಿವಿಧ ಸ್ವಯಂ ಉದ್ಯೋಗಗಳಲ್ಲಿ ಬದುಕು ಕಟ್ಟಿಕೊಂಡಿರುವವರು ಇನ್ನೊಂದು ವರ್ಗಕ್ಕೆ ಸೇರುತ್ತಾರೆ. ಇವರ ಸಂಖ್ಯೆಯೇ ದೊಡ್ಡದು. ಈಗ ಸಂತ್ರಸ್ತರಾಗುತ್ತಿರುವವರು ಇವರೇ.

ಕಾರ್ಖಾನೆಗಳಿಗೆ, ಅಣೆಕಟ್ಟುಗಳಿಗೆ, ಕಾಲುವೆಗಳಿಗೆ, ರಸ್ತೆಗಳಿಗೆ, ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ, ಉದ್ಯೋಗ ಕೊಡುವ ವ್ಯವಸ್ಥೆ ಇದೆ. ಆದರೆ ಆಧುನಿಕ ತಂತ್ರಜ್ಞಾನದ ಅಳವಡಿಕೆ, ಪರಿಸರಪೂರಕ ಕ್ರಮಗಳಿಂದ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗುವವರನ್ನು ಮಾತ್ರ ನಿರ್ಲಕ್ಷಿ ಸಲಾಗುತ್ತಿದೆ. ಕೆಲವು ಸಂಘಸಂಸ್ಥೆಗಳು ನ್ಯಾಯಾಲಯಕ್ಕೆ ಮೊರೆ ಹೋಗಿ ಗಣಿ ಬಾಧಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಕೋರಿದ್ದರು. ನ್ಯಾಯಾಲಯವು ಗಣಿ ಬಾಧಿತರಿಗಾಗಿಯೇ ವಿಶೇಷ ನಿಧಿ (ಕೆ.ಎಂ.ಇ.ಆರ್.ಸಿ.) ಇಡುವಂತೆ ಸರ್ಕಾರಗಳಿಗೆ ಆದೇಶಿಸಿದೆ. ಅದಿರು ಮಾರಾಟದಲ್ಲಿ ಶೇ. 10% ರಷ್ಟು ಹಣವನ್ನು ಸ್ಥಳೀಯ ಜನರ ಪರ್ಯಾಯ ಉದ್ಯೋಗ ಮತ್ತು ಮೂಲ ಸೌಕರ್ಯಕ್ಕಾಗಿ ಬಳಸಬೇಕೆಂದು ಸೂಚಿಸಲಾಗಿದೆ. ಈಗ ನಡೆಸುವ ಗಣಿಯಿಂದ ಜನರ ಆರೋಗ್ಯದ ಮೇಲಾಗಲೀ, ಅರಣ್ಯದ ಮೇಲಾಗಲೀ, ಶಿಕ್ಷಣದ ಮೇಲಾಗಲೀ, ಉದ್ಯೋಗದ ಮೇಲಾಗಲೀ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮಗಳಾಗದಂತೆ ಗಣಿ ಬಾಧಿತ ಪ್ರದೇಶಗಳನ್ನು ಸರ್ವೇ ಮಾಡಿ ಜನರ ಕಲ್ಯಾಣಕ್ಕಾಗಿ ಹಣ ಬಳಸುವಂತೆ ಹೇಳಲಾಗಿದೆ. ಆದರೆ ಇವೆಲ್ಲಾ ನೀತಿ, ನಿಯಮ, ಆದೇಶಗಳೆಲ್ಲಾ ಕಾಗದದಲ್ಲೇ ಉಳಿದಿವೆ.

ಬಳ್ಳಾರಿ ಜಿಲ್ಲೆ ಈ ಸಲ ಬರ ಪೀಡಿತ ಪ್ರದೇಶಗಳಲ್ಲಿ ಸೇರಿಕೊಂಡಿದೆ. ಅಂತರ್ಜಲದ ಮಟ್ಟ ಸಾವಿರ ಅಡಿಗೆ ಕುಸಿದಿದೆ. ರೈತರ, ಜನಸಾಮಾನ್ಯರ ಸಮಸ್ಯೆಗಳು ಸಂಕೀರ್ಣಗೊಳ್ಳುತ್ತ ಸಾಗಿವೆ. ಇದೆಲ್ಲದರ ಜೊತೆಗೆ ಉದ್ಯೋಗ ಕಳೆದುಕೊಂಡ ಕುಟುಂಬಗಳ ಗೋಳು ಸೇರಿಕೊಂಡಿದೆ.

ತಾಲ್ಲೂಕಿನಲ್ಲಿ ಒಂದು ಸಲ ಉದ್ಯೋಗ ಮೇಳ ಆಯೋಜನೆ ಮಾಡಿದ್ದು ಯಾರಿಗೆ ಉದ್ಯೋಗ ಸಿಕ್ಕಿದೆ ಎಂಬ ಸ್ಪಷ್ಟ ಮಾಹಿತಿ ಕೊಡುವಲ್ಲಿ ಆಡಳಿತ ವಿಫಲವಾಗಿದೆ. ಸರಕಾರ ಸ್ಥಳೀಯ ಕಂಪನಿಗಳ ಜೊತೆಗೂಡಿ ಜಿಲ್ಲೆಯಲ್ಲಿ ಉದ್ಯೋಗ ಮೇಳಗಳನ್ನು ವ್ಯಾಪಕವಾಗಿ ನಡೆಸಿದರೆ ಸ್ಥಳೀಯ ಯುವಜನ ರಿಗೆ ಉದ್ಯೋಗಾವಕಾಶ ಸಿಗುತ್ತದೆ. ತಾಂತ್ರಿಕ ಶಿಕ್ಷಣ ಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯಾದ್ಯಂತ ಸರಕಾರಿ ಕಾಲೇಜುಗಳನ್ನು ಸ್ಥಾಪಿಸಿ ಉಚಿತ ಶಿಕ್ಷಣವನ್ನು ಕೊಡುವ ಬಗ್ಗೆ ಯೋಚಿಸಬೇಕಾಗಿದೆ. ಆಗ ನಮ್ಮ ಜಿಲ್ಲೆಯ ಹಳ್ಳಿಗಾಡು ಪ್ರದೇಶದ ಕಾರ್ಮಿಕ ಕುಟುಂಬಗಳು ಕಿಂಚಿತ್ತಾದರೂ ಉಸಿರಾಡಬಹುದು.

ಸ್ಥಳೀಯ ಚಿಕ್ಕಚಿಕ್ಕ ಮೈನಿಂಗ್ ಲೀಜುದಾರರ ಪರವಾನಿಗೆ 2020ಕ್ಕೆ ಮುಕ್ತಾಯಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಚಿಕ್ಕಪುಟ್ಟವರೆಲ್ಲಾ ಮಾಯವಾಗಿ ಗಣಿಗಳೆಲ್ಲಾ ಬೃಹತ್ ಕಾರ್ಖಾನೆಗಳ ವಶಕ್ಕೆ ಹೋಗುವ ಸಾಧ್ಯತೆ ಮತ್ತು ಅಪಾಯ ಇದೆ. ಹೀಗೇನಾದರೂ ಆದಲ್ಲಿ ಮತ್ತೆ ಅನೇಕ ಕಾರ್ಮಿಕ ಕುಟುಂಬಗಳು ಉದ್ಯೋಗಭದ್ರತೆಯನ್ನು ಕಳೆದುಕೊಂಡು ಬೀದಿ ಪಾಲಾಗಲಿವೆ.

ಕೆಲಸ ಕಳೆದುಕೊಂಡು ಬೀದಿಗೆ ಬರುವ ಈ ಕಾರ್ಮಿಕರ ರಕ್ಷಣೆಗಾಗಿ ಜಿಲ್ಲಾಡಳಿತವಾಗಲೀ, ಸರ್ಕಾರವಾಗಲೀ ಇದುವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲವೆನ್ನುವುದೇ ದುರಂತ.

Leave a Reply

Your email address will not be published.