ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಶೂನ್ಯ ಸಾಧನೆ!

-ಡಾ.ಜ್ಯೋತಿ

ನಮ್ಮ ಪಠ್ಯಕ್ರಮ ವಿದ್ಯಾರ್ಥಿಗಳನ್ನು ಹಂತ ಹಂತವಾಗಿ ಸಂಶೋಧನೆಗೆ ಸೆಳೆಯುವುದರಲ್ಲಿ ವಿಫಲವಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಉನ್ನತ ಶಿಕ್ಷಣದ ಪಠ್ಯಕ್ರಮಗಳನ್ನು ಮೂರು ಸಂಬಂಧಿತ ಕೊಂಡಿಗಳಂತೆ ಅಣಿಗೊಳಿಸುತ್ತಾರೆ; ಸ್ನಾತಕ ಶಿಕ್ಷಣದ ಪಠ್ಯಕ್ರಮ, ವಿದ್ಯಾರ್ಥಿಯನ್ನು ಸ್ನಾತಕೋತ್ತರ ಮಟ್ಟಕ್ಕೆ ರೆಡಿಯಾಗಿಸುತ್ತದೆ. ಸ್ನಾತಕೋತ್ತರ ವಿದ್ಯಾರ್ಥಿ ಸಂಶೋಧನಾ ಪ್ರವೃತ್ತಿ ಮೈಗೂಡಿಸಿಕೊಂಡು ತನ್ನ ಸಂಶೋಧನಾ ಪ್ರಶ್ನೆಯೊಂದಿಗೆ ಶೋಧಕ್ಕೆ ಸಿದ್ಧನಾಗಿರುತ್ತಾನೆ. ಈ ನಿಟ್ಟಿನಲ್ಲಿ, ನಮ್ಮ ಶಿಕ್ಷಣ ವ್ಯವಸ್ಥೆ ಬಹಳ ಹಿಂದುಳಿದಿದೆ.

ಒಂದು ವಿಷಯವಂತೂ ಸ್ಪಷ್ಟ. ಸಂಶೋಧನೆಯೆನ್ನುವ ಒಂದು ವ್ಯವಸ್ಥಿತ ಅಧ್ಯಯನ, ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗವೇನಲ್ಲ. ಕನ್ನಡವೂ ಸೇರಿದಂತೆ, ದೇಶದ ಇತಿಹಾಸ ಮತ್ತು ಸಾಹಿತ್ಯವನ್ನು ಸಮಗ್ರವಾಗಿ ಸಂಶೋಧಿಸಿ, ಅದಕ್ಕೊಂದು ಚೌಕಟ್ಟನ್ನು ಒದಗಿಸಿದ ಶ್ರೇಯಸ್ಸು ಬ್ರಿಟಿಷರಿಗೆ ಸಲ್ಲಬೇಕು. ಬ್ರಿಟಿಷರ ನಂತರ, ದೇಶದ ಸಂಶೋಧನಾ ಕೇಂದ್ರಬಿಂದುಗಳೆಂದು ಗುರುತಿಸಲ್ಪಟ್ಟ ನಮ್ಮ ವಿಶ್ವವಿದ್ಯಾಲಯಗಳತ್ತ ದೃಷ್ಟಿಹಾಯಿಸಿದರೆ, ಅಂತಹ ಸ್ಫೂರ್ತಿ ಸಿಗಲಾರದು. ಆದರೆ, ಇತಿಹಾಸದ ಆಳಕ್ಕಿಳಿದರೆ, ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳು ಜ್ಞಾನಕೇಂದ್ರಗಳಾಗಿ, ವಿದೇಶಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸಿರುವುದಕ್ಕೆ ಪುರಾವೆಗಳಿವೆ. ದುರಾದೃಷ್ಟವಶಾತ್, ಈ ಜ್ಞಾನಪರಂಪರೆ ಕಾರಣಾಂತರಗಳಿಂದ ಮುಂದುವರಿಯಲಿಲ್ಲ. ಈ ನಿಟ್ಟಿನಲ್ಲಿ, ನಾವು ಸಂಶೋಧನೆಯ ಆಯಾಮಗಳನ್ನು ಪಾಶ್ಚಾತ್ಯ ವಿಶ್ವವಿದ್ಯಾಲಯಗಳಿಂದ ತಿಳಿದುಕೊಳ್ಳುವ ಅಗತ್ಯವಿದೆ.

ಸೂಕ್ಷ್ಮವಾಗಿ ಗಮನಿಸಿದರೆ, ಪಾಶ್ಚಾತ್ಯರದ್ದು ಮೂಲತಃ ಸಾಹಸ ಮತ್ತು ಸಂಶೋಧನಾ ಪ್ರವೃತ್ತಿ. ಇದಕ್ಕೆ ಭೌಗೋಲಿಕ ಕಾರಣವೂ ಇರಬಹುದು. ಯಾಕೆಂದರೆ, ಮನುಷ್ಯನಿಗೆ ತಾನಿರುವ ಪರಿಸರ ಸಂಪದ್ಭರಿತವಾಗಿದ್ದರೆ, ಸ್ವಾಭಾವಿಕವಾಗಿ ಹುಡುಕಾಟದ ಪ್ರವೃತ್ತಿ ಕಡಿಮೆಯಾಗಿ ಇರುವುದರಲ್ಲಿ ಸಂತೃಪ್ತಿ ಹೊಂದಿ, ಹೆಚ್ಚಾಗಿ ಆಧ್ಯಾತ್ಮದತ್ತ ಮೊರೆಹೋಗುತ್ತಾನೆ. ಇದನ್ನು, ನಮ್ಮ ನೆಲದ ಇತಿಹಾಸದಲ್ಲಿ ಸಮೃದ್ಧವಾಗಿ ಕಾಣಬಹುದು. ಅದೇ ರೀತಿ, ಎಲ್ಲಿ ಜೀವನೋಪಾಯ ಕಷ್ಟಸಾಧ್ಯವೋ, ಅಲ್ಲಿ ಮನುಷ್ಯ ಹೊಸ ನೆಲೆಯನ್ನರಸುತ್ತಾ ಸಂಚಾರಿಯಾಗುತ್ತಾನೆ. ಇದರಿಂದಾಗಿಯೇ, ಕೊಲಂಬಸ್, ವಾಸ್ಕೋಡಿಗಾಮರಿಂದ ಹಿಡಿದು ಅನೇಕ ಪಾಶ್ಚಾತ್ಯರು ಪ್ರಪಂಚ ಪರ್ಯಟನೆ ಮಾಡಿ, ವಸಾಹತುಗಳನ್ನು ಸೃಷ್ಟಿಸಿ ಶತಮಾನಗಳವರೆಗೆ ಅಧಿಕಾರ ಚಲಾಯಿಸಿದ್ದು. ಈ ರೀತಿ, ಜನಸಮೂಹವೇ ಸಾಹಸಿ ಮತ್ತು ಶೋಧಕ ಪ್ರವೃತ್ತಿ ಹೊಂದಿರುವುದು ನಮ್ಮಲ್ಲಿ ಅಪರೂಪ. ಆದ್ದರಿಂದ, ನಾವು ಸಂಶೋಧನೆಯ ಪರಿಕಲ್ಪನೆಯನ್ನು ವಿಸ್ತøತವಾಗಿ ಸಿದ್ಧಪಡಿಸಿರುವ ಪಾಶ್ಚಿಮಾತ್ಯ ಮಾದರಿಗಳಿಂದ ಅರ್ಥಮಾಡಿಕೊಳ್ಳುವುದು ಶ್ರೇಯಸ್ಕರ.

ಈ ದೆಸೆಯಲ್ಲಿ, ಪಾಶ್ಚಾತ್ಯ ಮಾದರಿಯೊಂದಿಗೆ ಹೋಲಿಸಿ, ನಮ್ಮ ದೇಶದ ವಿಶ್ವವಿದ್ಯಾಲಯಗಳ ಸಂಶೋಧನಾ ಪ್ರವೃತ್ತಿಯನ್ನು ಪರಿಶೀಲಿಸಿದರೆ, ಹಲವಾರು ಸಮಸ್ಯೆಗಳು ಗಮನಕ್ಕೆ ಬರುತ್ತವೆ. ಮೊದಲನೆಯದಾಗಿ, ಸಂಶೋಧಕರಲ್ಲಿ ಈ ಮಹಾನ್ ಕಾರ್ಯದ ಗಂಭೀರತೆಯ ಕೊರತೆ ಎದ್ದು ಕಾಣುತ್ತದೆ. ಎರಡನೆಯದಾಗಿ, ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಪೂರಕವಾದ ವಾತಾವರಣವಿಲ್ಲ. ಮೂರನೆಯದಾಗಿ, ಉನ್ನತ ಶಿಕ್ಷಣದ ನಮ್ಮ ಪಠ್ಯಕ್ರಮಗಳು ಹಂತ ಹಂತವಾಗಿ ವಿದ್ಯಾರ್ಥಿಗಳನ್ನು ಸಂಶೋಧನೆಗೆ ಸೆಳೆಯುವುದರಲ್ಲಿ ವಿಫಲವಾಗಿದೆ. ನಾಲ್ಕನೆಯದಾಗಿ, ಸಂಶೋಧನೆಯೆನ್ನುವುದು ಅರೆಕಾಲಿಕ ಕೆಲಸವಲ್ಲ; ಆದರೆ, ನಮ್ಮ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಪ್ರಮಾಣದ ಸಂಶೋಧನೆ ಅರೆಕಾಲಿಕವಾಗಿಯೇ ನಡೆಯುತ್ತದೆ. ಐದನೆಯದಾಗಿ, ಸಂಶೋಧನೆಯೆನ್ನುವುದು ಫಾಸ್ಟ್ ಫುಡ್ ಡೆಲಿವರಿಯಲ್ಲ. ಅದಕ್ಕೆ ಸಾಕಷ್ಟು ಪೂರ್ವಸಿದ್ಧತೆ ಬೇಕು. ಆದರೆ, ಸಂಶೋಧಕ, ತನ್ನ ಸಂಶೋಧನಾ ಅವಧಿಯಲ್ಲಿ ಕೂಡ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದನ್ನು ಕಾಣುವುದು ಅಪರೂಪ. ಆರನೆಯದಾಗಿ, ನಮ್ಮ ವಿಶ್ವವಿದ್ಯಾಲಯಗಳಲ್ಲಿ ಈವರೆಗೆ ವಿವಿಧ ಜ್ಞಾನಶಿಸ್ತುಗಳಲ್ಲಿ ನಡೆದ ಸಮಗ್ರ ಸಂಶೋಧನೆಗಳ ವಿವರ ಅಥವಾ ಶೀರ್ಷಿಕೆಯಾಗಲಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಏಳನೆಯದಾಗಿ, ಸಂಶೋಧನೆಯಲ್ಲಿ ಮುಖ್ಯವಾಗಿರುವುದು ಸಂಶೋಧನಾ ಪ್ರಶ್ನೆ. ಇದು ಸಂಶೋಧಕನಿಗೆ ಕಾಡಿರಬೇಕೇ ಹೊರತು ಮಾರ್ಗದರ್ಶಕನಿಗಲ್ಲ. ಎಂಟನೆಯದಾಗಿ, ಪ್ರಸ್ತುತವಿರುವಂತೆ ವೃತ್ತಿಯಲ್ಲಿ ಸೇರಿಕೊಳ್ಳಲು ಅಥವಾ ಮುಂಬಡ್ತಿ ಪಡೆಯಲು ಸಂಶೋಧನೆ ಕಡ್ಡಾಯ ಮಾನದಂಡವಾದರೆ, ಸಂಶೋಧನೆಯ ಗಂಭೀರತೆ ನಾಶವಾಗುತ್ತದೆ. ಕೊನೆಯದಾಗಿ, ಸಂಶೋಧನಾ ಗ್ರಂಥಗಳ ಪ್ರಕಟಣೆಯ ಮೂಲಕ ಹೊಸ ಆವಿಷ್ಕಾರವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಬಹಳ ವಿರಳ.

ಈ ಮೇಲಿನ ಪ್ರಶ್ನೆಗಳಿಗೆ ಸಂಶೋಧಕನ ದೃಷ್ಟಿಕೋನದಿಂದ ಉತ್ತರ ಹುಡುಕಲು ಪ್ರಯತ್ನಿಸಿದರೆ, ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ಅದೇನೆಂದರೆ, ಸಂಶೋಧಕನಾದವನು ತನ್ನ ಹಿಡಿತದಲ್ಲಿಲ್ಲದ ಸಮಸ್ಯೆಗಳ ಕುರಿತು ಹೆಚ್ಚು ಸಮಯ ವ್ಯರ್ಥ ಮಾಡಿಕೊಳ್ಳದೆ, ಇರುವ ವ್ಯವಸ್ಥೆಯ ಈ ಪರಿಮಿತಿಯೊಳಗೆ ಮಹತ್ವದ್ದನ್ನು ಸಾಧಿಸುವುದರತ್ತ ಗಮನ ಹರಿಸುವುದು ಹಿತ.

ಪ್ರಮುಖವಾಗಿ, ಈ ಮಹಾನ್ ಕಾರ್ಯದ ಗಂಭೀರತೆಯ ಕೊರತೆ ಸಂಶೋಧಕರಲ್ಲಿ ಎದ್ದು ಕಾಣುತ್ತದೆ. ಯಾಕೆಂದರೆ, ಸಂಶೋಧನೆಯೆನ್ನುವುದು ತಪಸ್ಸಿನಂತೆ; ಫಲ ದೊರೆಯುವವರೆಗೆ ತನು, ಮನ ಮೀಸಲಿಡಬೇಕಾಗುತ್ತದೆ. ಒಂದು ಸಂಶೋಧನಾ ಪ್ರಶ್ನೆ ಕೈಗೆತ್ತಿಕೊಂಡ ದಿನದಿಂದ ಅದಕ್ಕೊಂದು ಸೂಕ್ತ ಹೊಸ ವ್ಯಾಖ್ಯಾನ ಗೋಚರವಾಗುವವರೆಗೆ, ಆ ಪ್ರಶ್ನೆ ಸಂಶೋಧಕನಿಗೆ ಸದಾ ಕಾಡುತ್ತಿರಬೇಕು. ಇದಕ್ಕಾಗಿ ಅವನು ಕೆಲವು ವೈಯಕ್ತಿಕ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಉದಾಹರಣೆಗೆ, ಸಾಮಾಜಿಕ ಜಾಲತಾಣ, ಟಿವಿ, ಮೊಬೈಲ್, ಒಣ ಹರಟೆ ಇತ್ಯಾದಿಗಳಿಂದ ಸಾಧ್ಯವಾದಷ್ಟು ದೂರವಿದ್ದು ತನ್ನ ಅತ್ಯಮೂಲ್ಯ ಸಮಯವನ್ನು ಸಂಶೋಧನೆಗೆ ಮೀಸಲಿಡಬೇಕಾಗುತ್ತದೆ.

ಪ್ರಧಾನವಾಗಿ, ನಮ್ಮ ಪಠ್ಯಕ್ರಮಗಳು ವಿದ್ಯಾರ್ಥಿಗಳನ್ನು ಹಂತ ಹಂತವಾಗಿ ಸಂಶೋಧನೆಗೆ ಸೆಳೆಯುವುದರಲ್ಲಿ ವಿಫಲವಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಉನ್ನತ ಶಿಕ್ಷಣದ ಪಠ್ಯಕ್ರಮಗಳನ್ನು ಮೂರು ಸಂಬಂಧಿತ ಕೊಂಡಿಗಳಂತೆ (ಸ್ನಾತಕ, ಸ್ನಾತಕೋತ್ತರ ಮತ್ತು ಸಂಶೋಧನೆ) ಅಣಿಗೊಳಿಸುತ್ತಾರೆ. ಅಂದರೆ, ಸ್ನಾತಕ ಶಿಕ್ಷಣದ ಪಠ್ಯಕ್ರಮ, ವಿದ್ಯಾರ್ಥಿಯನ್ನು ಸ್ನಾತಕೋತ್ತರ ಮಟ್ಟಕ್ಕೆ ರೆಡಿಯಾಗಿಸುತ್ತದೆ. ಮುಂದುವರಿದಂತೆ, ಸ್ನಾತಕೋತ್ತರ ವಿದ್ಯಾರ್ಥಿ ಸಂಶೋಧನಾ ಪ್ರವೃತ್ತಿ ಮೈಗೂಡಿಸಿಕೊಂಡು ತನ್ನ ಸಂಶೋಧನಾ ಪ್ರಶ್ನೆಯೊಂದಿಗೆ ಶೋಧಕ್ಕೆ ಸಿದ್ಧನಾಗಿರುತ್ತಾನೆ. ಈ ನಿಟ್ಟಿನಲ್ಲಿ, ನಮ್ಮ ಶಿಕ್ಷಣ ವ್ಯವಸ್ಥೆ ಬಹಳ ಹಿಂದುಳಿದಿದೆ. ಆದರೆ, ಸಮಾಧಾನದ ವಿಷಯವೆಂದರೆ, ಈ ಕೊರತೆಯನ್ನು ಹೋಗಲಾಡಿಸುವ ಆಶಯ ಹೊಸ ಶಿಕ್ಷಣ ನೀತಿಯಲ್ಲಿದೆ.  

ಸಂಶೋಧನೆಯೆನ್ನುವುದು ಅರೆಕಾಲಿಕ ಕೆಲಸವಲ್ಲ, ಆದರೆ, ನಮ್ಮ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಸಂಶೋಧನೆ ಅರೆಕಾಲಿಕವಾಗಿಯೇ ನಡೆಯುತ್ತದೆ. ಕೆಲಸ ಮಾಡಿಕೊಂಡು ಸಂಶೋಧನೆ ಮಾಡಲಿಚ್ಚಿಸುವವರ ಹಿತಕ್ಕಾಗಿ, ಈ ಅನುಕೂಲ ಮಾಡಿಕೊಡಲಾಗಿದೆ. ಇದಕ್ಕೆ ಮುಖ್ಯ ಕಾರಣ, ಪಿ.ಹೆಚ್.ಡಿಗೂ ಮತ್ತು ಮುಂಬಡ್ತಿಗೂ ಜೋಡಣೆ ಮಾಡಿರುವುದು. ಇದರಿಂದಾಗಿ, ಸಂಶೋಧನೆ ಪ್ರಕ್ರಿಯೆಯ ಗಂಭೀರತೆಯೇ ನಾಶವಾಗಿ, ಸಾರ್ವಜನಿಕ ವಲಯದಲ್ಲಿ ಇದೊಂದು ಕೇವಲ ಡಿಗ್ರಿ ಪಡೆಯುವ ಸಾಧಾರಣ ಚಟುವಟಿಕೆಯೆಂಬ ಅಭಿಪ್ರಾಯವಿದೆ.

ಪ್ರಸ್ತುತ ನಮ್ಮ ವ್ಯವಸ್ಥೆಯಲ್ಲಿರುವಂತೆ, ವೃತ್ತಿಯಲ್ಲಿ ಸೇರಿಕೊಳ್ಳಲು ಅಥವಾ ಮುಂಬಡ್ತಿ ಪಡೆಯಲು ಸಂಶೋಧನೆ ಕಡ್ಡಾಯ ಮಾನದಂಡ ಮಾಡಿರುವುದು ಸರಿಯಲ್ಲ. ಯಾಕೆಂದರೆ, ಸಂಶೋಧನೆ ಸ್ವಪ್ರೇರಣೆಯಿಂದ ನಡೆಯಬೇಕಾದ ಕಾರ್ಯ. ಇದೊಂದು, ಬಾಹ್ಯ ಒತ್ತಡ, ಆರ್ಥಿಕ ಲಾಭ ಅಥವಾ ಪದೋನ್ನತಿಗಾಗಿ ಮಾಡುವಂತಹ ಯಾಂತ್ರಿಕ ಕೆಲಸವಲ್ಲ. ಈ ಬಾಹ್ಯ ಲಾಭಗಳೇ ಸಂಶೋಧನೆಯ ಮುನ್ನುಡಿಯಾಗಬಾರದು, ಮುಗಿದ ಮೇಲೆ ಸಿಗುವ ಮರ್ಯಾದೆಯೇನಿದ್ದರೂ ಬೋನಸ್ ಇದ್ದ ಹಾಗೆ, ಹೊರತು, ಅದಕ್ಕಾಗಿಯೇ ಸಂಶೋಧನೆಯಲ್ಲ. 

ನಮ್ಮ ಸಮಕಾಲೀನ `ಸಂಶೋಧಕರು’ ಬಹಳ ಹಗುರವಾಗಿ, ‘ಸಂಶೋಧನೆಯೆಂದರೆ ಮಹಾಪ್ರಬಂಧ ಸಲ್ಲಿಸುವ ಸಮಯದಲ್ಲಷ್ಟೇ ಚಟುವಟಿಕೆಯಿಂದಿರಬೇಕಾದ ಕೆಲಸ’ ಅನ್ನುವವರಿದ್ದಾರೆ. ಇವರ ಪ್ರಕಾರ ಸಂಶೋಧÀನೆಯೆಂದರೆ ಇಷ್ಟೇ- ವಿಷಯಾಧಾರಿತ ಸಾಹಿತ್ಯ ವಿಮರ್ಶೆಗೆ ಹೆಚ್ಚಿನ ಗಮನ ಹರಿಸಿ, ಒಂದಷ್ಟು ಮೂಲಗಳಿಂದ ವಿಷಯ ಸಂಗ್ರಹ ಮಾಡಿ, ವಿಶ್ಲೇಷಿಸಿ, ಎಂ.ಎಲ್.ಎ. ಮಾರ್ಗಸೂಚಿಯನ್ನು ಚಾಚು ತಪ್ಪದೆ ಪಾಲಿಸಿ, ಮಹಾಪ್ರಬಂಧ ಬರೆದು ವಿಶ್ವವಿದ್ಯಾಲಯದಿಂದ ಡಿಗ್ರಿ ಪಡೆಯುವುದು.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಈವರೆಗೆ ವಿವಿಧ ಜ್ಞಾನಶಿಸ್ತುಗಳಲ್ಲಿ ನಡೆದ ಸಂಶೋಧನೆಗಳ ವಿವರ ಅಥವಾ ಶೀರ್ಷಿಕೆ ಸಂಶೋಧಕರಿಗೆ ಲಭ್ಯವಿಲ್ಲ. ಈ ಕೊರತೆಯಿಂದಾಗಿ, ಒಂದು ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯ ಕುರಿತು ಉಳಿದ ವಿಶ್ವವಿದ್ಯಾಲಯಗಳಲ್ಲಿ ಮಾಹಿತಿ ಇರುವುದಿಲ್ಲ. ಇದರಿಂದಾಗಿ, ಅರಿವಿಲ್ಲದೆ (ಕೆಲವೊಮ್ಮೆ ಅರಿವಿದ್ದೂ ಕೂಡ) ಒಂದೇ ಶೀರ್ಷಿಕೆಯ ಮೇಲೆ ಎಷ್ಟೋ ಮಹಾಪ್ರಬಂಧಗಳು ಮಂಡನೆಯಾಗಿ ಡಿಗ್ರಿ ಪಡೆದಿರುವ ಉದಾಹರಣೆಗಳಿವೆ. ಇದನ್ನು ಕೊನೆಗಾಣಿಸುವ ಸಲುವಾಗಿ, ಯುಜಿಸಿ, ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಲ್ಲಿಸಲಾದ ಮಹಾಪ್ರಬಂಧಗಳನ್ನು ಕ್ರೋಡೀಕರಿಸಿ ಸಂಶೋಧಕರ ಅವಲೋಕನಕ್ಕೆ ಲಭ್ಯಗೊಳಿಸಿದಲ್ಲಿ, ತಂತಮ್ಮ ಅಧ್ಯಯನ ಕ್ಷೇತ್ರದಲ್ಲಿ ಎಷ್ಟು ಕೆಲಸ ಆಗಿದೆ ಮತ್ತು ಹೊಸತಾಗಿ ಏನನ್ನು ಮಾಡಬಹುದೆನ್ನುದನ್ನು ನಿರ್ಧರಿಸಲು ಸಹಾಯವಾತ್ತದೆ. ಜೊತೆಗೆ, ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.

ನಮ್ಮ ಸಂಶೋಧನೆಯ ಅರಿವಿನ ಮುಖ್ಯ ಸಮಸ್ಯೆಯೆಂದರೆ, ಸಂಶೋಧನೆಯಲ್ಲಿ ಹೊಸದರ ಹುಡುಕಾಟ ಇರಬೇಕೆನ್ನುವ ಜ್ಞಾನದ ಕೊರತೆ. ಇದೊಂದು ವಿಶೇಷ ಡಿಗ್ರಿ ಮತ್ತು ಹೆಸರಿನ ಹಿಂದೆ `ಡಾ’ ಅಂಟಿಸುವ ಸಾಮಾನ್ಯ ಚಟುವಟಿಕೆಯೆನ್ನುವ ಅಜ್ಞಾನ. ಅದೇನೇ ಇದ್ದರೂ, ಉತ್ತಮ ಸಂಶೋಧನೆಯೆನ್ನುವುದು, ವಿಶ್ವವಿದ್ಯಾಲಯಗಳ ಸಂಶೋಧನಾ ವೇಳಾಪಟ್ಟಿ ಮತ್ತು ಮಾರ್ಗಸೂಚಿ ಆರಂಭವಾಗುವ ಮೊದಲೇ ಸಂಶೋಧಕನ ಮನಸ್ಸಿನಲ್ಲಿ ಪ್ರಶ್ನೆಯ ರೂಪದಲ್ಲಿ ಶುರುವಾಗಿರುತ್ತದೆ. ಮಾರ್ಗದರ್ಶಕ, ಸಂಶೋಧಕನ ಗೊಂದಲಗಳನ್ನಷ್ಟೇ ಪರಿಹರಿಸುತ್ತಾನೆ. ಬದಲಾಗಿ, ಮಾರ್ಗದರ್ಶಕರೇ ಸಂಶೋಧನಾ ಶೀರ್ಷಿಕೆ ಅಥವಾ ಪ್ರಶ್ನೆಯನ್ನು ಉಡುಗೊರೆಯಾಗಿ ಕೊಡುವುದಲ್ಲ. ಆದರೆ ವಾಸ್ತವದಲ್ಲಿ, ಕೆಲವೊಮ್ಮೆ ಸಂಶೋಧನೆಯ ಪ್ರಶ್ನೆ ಕಾಡಿರುವುದು ಮಾರ್ಗದರ್ಶಕನಿಗೆ ಹೊರತು ಸಂಶೋಧಕನಿಗಲ್ಲ. ಇದರ ಫಲವಾಗಿ, ಮಾರ್ಗದರ್ಶಕರ ಛಾಯೆಯೇ ಮಹಾಪ್ರಬಂಧದಲ್ಲಿ ಎದ್ದುಕಾಣುತ್ತದೆ.

ಕೊನೆಯದಾಗಿ, ಸಂಶೋಧನಾ ಗ್ರಂಥಗಳ ಪ್ರಕಟಣೆಯ ಮೂಲಕ ತಮ್ಮ ಹೊಸ ಆವಿಷ್ಕಾರವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಬಹಳ ವಿರಳ. ಇದಕ್ಕೆ ಕಾರಣಗಳು ಹಲವಾರು. ಮುಖ್ಯವಾದುದು, ಸಂಶೋಧಕನಲ್ಲಿ ಮಹತ್ವಾಕಾಂಕ್ಷೆಯ ಕೊರತೆ. ತಾನು ಸಾಧಿಸಿರುವುದು ಒಂದು ವಿಶೇಷ ಹೊಸ ಅರಿವು ಮತ್ತು ಇದನ್ನು ಸಮಾಜದೊಂದಿಗೆ ಹಂಚಿಕೊಳ್ಳಬೇಕೆನ್ನುವ ತುಡಿತ ಸಂಶೋಧಕನಿಗೆ ಕಾಡಿದಾಗಲಷ್ಟೇ ಇದು ಸಾಧ್ಯ. ಆದರೆ, ನಮ್ಮಲ್ಲಿ ಹೆಚ್ಚಿನವರಿಗೆ ತಮ್ಮ ಮಹಾಪ್ರಬಂಧ ಸಾರ್ವಜನಿಕವಾಗಿ ಹಂಚಿಕೊಳ್ಳಲೂ ಅಂಜಿಕೆಯಿದೆ. ಅವರಿಗೆ ಕೃತಿಚೌರ್ಯ, ಟೀಕೆಟಿಪ್ಪಣಿ ಬಗ್ಗೆ ಅಳುಕು. ಹಾಗಾಗಿ, ನಮ್ಮ ಮಹಾಪ್ರಬಂಧಗಳು ತಂತಮ್ಮ ವಿಶ್ವವಿದ್ಯಾಲಯಗಳ ಗ್ರಂಥಾಲಯದ ಕಪಾಟಿನೊಳಗೆ ದೂಳು ಹಿಡಿದು ಚಿರನಿದ್ರೆ ಮಾಡುತ್ತಿವೆ. ಅದರಲ್ಲಿ ಏನಿದೆಯೆಂದು ಬಹುಶಃ ಬರೆದಿರುವವನಿಗೂ ಮರೆತು ಹೋಗಿರಬಹುದು.

ಈ ಹಿನ್ನೆಲೆಯಲ್ಲಿ, ನಾನು ಮಾಡಿರುವ ಸಂಶೋಧನೆಯ ಕುರಿತು ಒಂದಿಷ್ಟು ವಿಚಾರ ಹಂಚಿಕೆ. ಪಿ.ಹೆಚ್.ಡಿ ಮಹಾಪ್ರಬಂಧಕ್ಕಾಗಿ ನಾನು ಮಾಡಿದ ಅಧ್ಯಯನದ ಭಾಗವಾಗಿ, ರಾಜ್ಯದ ವಿಶ್ವವಿದ್ಯಾಲಯಗಳ ಆಂಗ್ಲ ಭಾಷಾ ವಿಭಾಗಗಳಿಗೆ, (ಆಯಾಯ ವಿಭಾಗಗಳು ಆರಂಭವಾದಂದಿನಿಂದ 2018ರವರೆಗೆ) ಸಲ್ಲಿಸಲಾದ ಮಹಾ ಪ್ರಬಂಧಗಳಲ್ಲಿ ಎಷ್ಟು ಪುಸ್ತಕರೂಪದಲ್ಲಿ ಪ್ರಕಟವಾಗಿದೆಯೆನ್ನುವ ಅಂಶ ಪರಿಶೀಲಿಸಿದಾಗ, ಒಟ್ಟು 440ರಲ್ಲಿ ಕೇವಲ 30 ಮಹಾ ಪ್ರಬಂಧಗಳು ಪ್ರಕಟವಾಗಿವೆಯೆನ್ನುವ ವಿಚಾರ ಗಮನಕ್ಕೆ ಬಂತು. ಅಂದರೆ, ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಇನ್ನೂ ಈ ಮಹತ್ವಾಕಾಂಕ್ಷೆ ಜಾಗೃತವಾಗಿಲ್ಲ ಎನ್ನುವುದು ಸ್ಪಷ್ಟ.

ಗಮನಿಸಿದ ಇನ್ನೊಂದು ವಿಶೇಷ ಅಂಶವೆಂದರೆ ಇಲ್ಲಿಯವರೆಗೆ, ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳ ಆಂಗ್ಲ ಭಾಷಾ ವಿಭಾಗಗಳಲ್ಲಿ ಸ್ಥಳೀಯ, ಪ್ರಾದೇಶಿಕ ಅಥವಾ ದೇಶಿಯ ಸಾಹಿತ್ಯ ಅಥವಾ ಸಾಮಾಜಿಕ ಸಮಸ್ಯೆಗಳ ಕುರಿತು ಸಂಶೋಧನೆ ನಡೆದಿರುವುದು ನಗಣ್ಯ ಎಂಬುದು. ಮುಂದಿನ ದಿನಗಳಲ್ಲಿಯಾದರೂ ಆಂಗ್ಲಭಾಷಾ ವಿಭಾಗಗಳು ಸಾಕಷ್ಟು ವೈವಿಧ್ಯದ ವಿಷಯಗಳ ಮೇಲೆ, ಹೊಸ ವ್ಯಾಖ್ಯಾನ ಹೊಸೆಯುತ್ತಾ, ಹೆಚ್ಚಿನ ಅಂತರ್ ಶಿಸ್ತಿನ ಸಂಶೋಧನೆ ಮಾಡುತ್ತಾ ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ತರುವಂತಹ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿ ಎನ್ನುವುದು ನನ್ನ ಆಶಯ. 

*ಲೇಖಕರು ತುಮಕೂರು ವಿಶ್ವವಿದ್ಯಾನಿಲಯದ ಆಂಗ್ಲ ಭಾಷಾ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

 

Leave a Reply

Your email address will not be published.